ದೇಹ ‘ಹೆಣ’ವಾದಾಗ
ನಿನ್ನೆ ಪಟಪಟನೆಂದು
ನೀರ ಚಿಲುಮೆ
ಮಾತಾಡುವ ಜೀವ
ಇಂದು ಇಲ್ಲವಾದಾಗ
ಚಿಲುಮೆ ಬಂದ
ದಾರಿಯಲ್ಲೇ ಹಿಂದೆ ಸರಿದಂತೆ
ಮೌನದ ಜಾತ್ರೆಯ
ತೇರು ಅನಾಥ
ಕೂಡಿ ಆಡಿದ ಮಾತು, ನಕ್ಕ,
ದುಃಖಿಸಿದ, ಬೇಸರಿಸಿದ
ಕೋಪಿಸಿದ ಎಲ್ಲಾ
ದಿನಗಳು ಮುಂದೆ ನಿಂತು
ಜಾರಿ ಹೋಗುವ ಹೊತ್ತನ್ನು
ಎಂದೂ ಕಲ್ಪಿಸದಾಗ
ಕಾಣರಿಯದ ಜವಾಬ್ದಾರಿ
ಹೆಗಲೇರಿ ಕುಣಿಯುತ್ತಿತ್ತು
ಉಸಿರು ಅಲ್ಲಿ ನಿಂತಿತ್ತು
ಇಲ್ಲಿ ಇದ್ದೂ ಇಲ್ಲದಂತೆ
ಯಾವ ಕೊಳಲಿನ ರಾಗ
ಸಮಾಧಾನಿಸೀತು ಕಣ್ಣೀರ?
ಚಲನೆಯಿದ್ದ ದೇಹ
ನಿಶ್ಚಲವಾಗುವ……
‘ಹೆಣ’ ಶಬ್ದ ಅಂಟಿಸಿದಾಗ
ಹೃದಯ ಸ್ತಂಭನ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ
