Advertisement
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ “ಲೋಕದ ಭಾರ”

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ “ಲೋಕದ ಭಾರ”

ಅರೆ! ಎಲ್ಲರೂ ಅವರವರ ಕೆಲಸಗಳಲ್ಲಿಯೇ ಕಳೆದುಹೋಗಿದ್ದಾರೆ ಇಲ್ಲಿ. ಯಾರಿಗೂ ಹೊರಗಡೆ ಏನು ನಡೆಯುತ್ತಿದೆ ಅನ್ನುವುದರ ಪರಿವೇ ಇಲ್ಲ. ಅದರ ಅಗತ್ಯವೇ ಇಲ್ಲ ಅನ್ನುವಷ್ಟೂ ಕ್ಷುಲ್ಲಕ ಸಂಗತಿಗಳೆ ಅವೆಲ್ಲಾ? ರಸ್ತೆಯ ತುಂಬಾ ಬದುಕಿನ ನಿತ್ಯ ವ್ಯಾಪಾರ ಅದೆಷ್ಟು ಸಹಜ ಅನ್ನುವ ರೀತಿಯಲ್ಲಿ ನಡೆಯುತ್ತಿದೆ. ಪಕ್ಕದಲ್ಲಿ ಬಾಂಬ್ ಬಿದ್ದರೂ ನಮ್ಮ ಮನಗೆ ಬಿದ್ದಿಲ್ಲ ತಾನೇ ಅನ್ನುವ ಹಾಗೆ ತಮ್ಮತಮ್ಮ ಕೆಲಸಗಳಲ್ಲಿ ತೊಡಗುತ್ತಾರಂದ್ರೆ? ಯಾರಿಗೂ ತಟ್ಟಿದ ಹಾಗೆ ಕಾಣಲಿಲ್ಲ ತನ್ನ ಹೊರತಾದ ಬೇರೆ ಲೋಕದ ಸದ್ದು. ಒಂದು ಮಗುವಿನ ನೋವಿಗೆ ಕಿವಿಯಾಗದಿರುವಷ್ಟೂ ಕಲ್ಲಾಗಿದೆಯಾ ಈ ಲೋಕದ ಹೃದಯ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ “ಲೋಕದ ಭಾರ” ನಿಮ್ಮ ಓದಿಗೆ

ಯಾವುದೋ ಪುಸ್ತಕದಲ್ಲಿ ಮುಳುಗಿದ್ದವನಿಗೆ ಎಲ್ಲೋ ಕನಸಿನಲ್ಲಿ ಕೇಳಿದ ಹಾಗೆ ಮಗುವಿನ ಅಳು ಕಿವಿಗೆ ಬಂದು ಅಪ್ಪಳಿಸಿದಾಗ ಕನ್ನಡಕ ತೆಗೆದಿಟ್ಟು ಕುಳಿತಲ್ಲಿಯೇ ಕುರ್ಚಿಗೆ ಒರಗಿದೆ. ಎದುರಿನ ಕಿಟಕಿ ತೆರೆದೇ ಇತ್ತು. ಒಮ್ಮೆ ಹೊರಗೆ ಇಣುಕಿದೆ. ಮತ್ತೆ ಕೇಳಬಹುದಾ ಆ ಅಳು ಅಂತ ಕಿವಿಯನ್ನು ಮತ್ತಷ್ಟು ತೆರೆದು ಅಳುವ ದನಿ ಕೇಳಿದ ಕಡೆಗೆ ಕಿವಿಯನ್ನು ಅಟ್ಟಿದೆ.

ಇಲ್ಲ, ಮೊದಲಿನ ನಿಶ್ಯಬ್ದವನ್ನೇ ಹೊದ್ದುಕೊಂಡು ಬೀದಿ ಉದಾಸೀನದಿಂದ ಬಿದ್ದುಕೊಂಡಿತ್ತು. ಹಾಗಾದರೆ ನಿಮಿಷಗಳ ಹಿಂದೆ ನಾನು ಕೇಳಿದ ದನಿ ಯಾವುದು? ಕೇವಲ ನನ್ನ ಊಹೆಯಾ ಅಥವಾ ಓದುತ್ತಿದ್ದ ಕತೆಯ ಪಾತ್ರವೊಂದರ ಒಳಗುದಿಯಾ? ಯಾವುದನ್ನೂ ಆ ಕ್ಷಣಕ್ಕೆ ನಿರ್ಧರಿಸಲಾಗಲಿಲ್ಲ. ಎಷ್ಟೋ ರಾತ್ರಿಗಳಲ್ಲಿ ನನಗೆ ಬೀಳುತ್ತಿದ್ದ ಕನಸುಗಳಲ್ಲಿ ನಾನೇ ಅತ್ತ ಹಾಗೆ ಬೆಚ್ಚಿಬಿದ್ದು ಎಚ್ಚರವಾದ ಮೇಲೂ ಬಹಳ ಹೊತ್ತಿನವರೆಗೂ ಅಳುವೇ ನಿಲ್ಲುತ್ತಿರಲಿಲ್ಲ ಅಂತ ಅಮ್ಮ ಹೇಳುತ್ತಿದ್ದುದು ಯಾಕೋ ನೆನಪಾಯ್ತು. ಅರೇ! ಹಾಗಾದರೆ ಇದು ಕೂಡಾ ನನ್ನೊಳಗಿನ ಕೂಗೆ? ಹಗಲುಗನಸೆ? ಏನೂ ಅರ್ಥವಾಗದೆ ಮತ್ತೆ ಕತೆಯಲ್ಲಿ ಸೇರಿಕೊಂಡೆ.

ಬಹಳ ಹೊತ್ತು ಕಳೆದಿರಲಿಲ್ಲ. ಈ ಸಲ ಮಾತ್ರ ಸ್ಪಷ್ಟವಾಗಿ ಕೇಳಿಸಿತು ಮಗುವಿನ ಅಳು. ಅದು ದೂರದಲ್ಲೆಲ್ಲೋ ಆಗಿರದೆ ಕೆಳಗಿನ ಮನೆಯಿಂದಲೇ ಬರುತ್ತಿತ್ತು. ಇತ್ತೀಚೆಗಷ್ಟೇ ಬಾಡಿಗೆಗೆ ಬಂದ ದಂಪತಿ ಮತ್ತು ಸಣ್ಣ ಮಗು ಇದ್ದ ಮನೆ ಅದು. ಒಂದೇ ಅಪಾರ್ಟ್ಮೆಂಟ್‌ನಲ್ಲಿದ್ದರೂ ನಾವು ಯಾವತ್ತೂ ಮುಖಾಮುಖಿಯಾಗಿರಲಿಲ್ಲ. ಹೆಚ್ಚಿನವರು ಯಾವುದ್ಯಾವುದೋ ಶಿಫ್ಟ್‌ಗಳಲ್ಲಿ ಕೆಲಸಕ್ಕೆ ಹೋಗುತ್ತಾ ಇರುವವರಾದ್ದರಿಂದ ಯಾರು ಯಾವಾಗ ಮನೆಗೆ ಬರ್ತಾರೆ ಯಾರು ಯಾವಾಗ ಮಲಗಿರುತ್ತಾರೆ ಅನ್ನುವುದನ್ನು ಹೇಳುವುದು ಕಷ್ಟ.

ಒಂದೇ ಪ್ಲೋರ್‌ನಲ್ಲಿದ್ದರೂ ಎದುರಿನ ಮನೆಯ ಬಾಗಿಲು ತೆರೆಯುವುದೇ ಅಪರೂಪ, ಇನ್ನು ಭೇಟಿಯಾಗುವುದೆಲ್ಲಿ? ಯಾವತ್ತೋ ಒಮ್ಮೆ ಸಿಕ್ಕಿದರೂ ‘ಇವತ್ತು ಯಾವ ಶಿಫ್ಟ್?’ ಅಂತ ಒಂದು ಔಪಚಾರಿಕ ಮಾತು ವಿನಿಮಯ ಆದರೆ ಅಲ್ಲಿಗೆ ಮುಗಿಯಿತು. ಅಷ್ಟೇ ಮಾತುಕತೆ! ಮತ್ತೆ ಮುಂದೆ ಯಾವತ್ತೋ ಸಿಕ್ಕಿದಾಗಲೂ ಅದೇ ಪ್ರಶ್ನೆ ರಿಪೀಟ್! ಈ ಬದುಕಿನ ಪಾಳಿಗಳು ಹೀಗೆ ಮುಗಿಯುವುದೇ ಇಲ್ಲ. ಎಲ್ಲರೂ ಮಲಗಲು ತಯಾರಾಗುವಾಗ ಬುತ್ತಿ ಚೀಲ ಹಿಡಿದು ನೈಟ್ ಶಿಫ್ಟ್‌ಗೆ ಹೋಗಲು ಕೆಳಗೆಲ್ಲೋ ಬೈಕ್ ಸ್ಟಾರ್ಟ್ ಆದ ಶಬ್ದ ಕೇಳಿಸುತ್ತದೆ.

ಈಗ ಕತೆಯ ಗುಂಗಿನಿಂದ ಪೂರ್ತಿ ಎಚ್ಚರವಾಗಿ ಕಿಟಕಿಯ ಹೊರಗೆ ನೋಡಿದೆ. ಮತ್ತೆಮತ್ತೆ ಮಗು ಅಳುವ ಸದ್ದು ಕೇಳಿಸುತ್ತಲೇ ಇದೆ. ಆ ಅಳುವಿನ ಬೆನ್ನಿಗೇ ಧಡಾರನೇ ಬಾಗಿಲು ಹಾಕಿದ ಸದ್ದು. ದನಿಯೇರಿಸಿ ಮಗುವನ್ನು ಗದರಿಸುತ್ತಿರುವ ಗಡಸು ಧ್ವನಿ. ಹೊರಗಿನ ದನಿಗಳಿಗೆ ತೆರೆದುಕೊಂಡಷ್ಟೂ ಒಂದರ ಮೇಲೊಂದರಂತೆ ಬಿಡುವಿಲ್ಲದೆ ಆ ಅಳು ಕಿವಿಗೆ ಕೇಳಿಸುತ್ತಲೇ ಇದೆ. ಯಾವುದೋ ಪ್ರಪಂಚದಲ್ಲಿ ಇದ್ದವನನ್ನು ಈ ಪ್ರಪಂಚಕ್ಕೆ ಎಳೆದು ತಂದ ಈ ಗಲಾಟೆಯಿಂದಾಗಿ ಮನಸ್ಸು ವಿಚಲಿತವಾಯ್ತು.

ಹೊರಗಿನ ಖಾಲಿ ಸೈಟ್‌ನಲ್ಲಿ ಅರ್ಧ ಕಟ್ಟಿದ ಮನೆ. ಮೇಸ್ತ್ರಿಯೊಬ್ಬ ಅರ್ಧ ಕಟ್ಟಿದ ಗೋಡೆಯ ಮೇಲೆ ಕಲ್ಲಿಟ್ಟು ಅರ್ಧ ಇಂಚು ಹೊರಗೆ ಬಂದಿರುವ ಕಲ್ಲನ್ನು ನೂಲು ಹಿಡಿದು ಕೈಯಲ್ಲೇ ಬಡಿಯುತ್ತಾ ಸರಿ ಮಾಡುತ್ತಿದ್ದಾನೆ. ಬಿಸಿಲಿನ ತಾಪಕ್ಕೆ ತಲೆಯ ಮೇಲೆ ಹುಟ್ಟಿದ ಬೆವರಿನ ಹನಿ ಹಣೆಯ ಮೇಲಿಂದ ಕೆಳಗೆ ಇಳಿಯುತ್ತಿದೆ. ಕಣ್ಣಿಗೆ ತಾಗಿದ್ದೇ ತಡ ಎಡ ತೋಳಿನಿಂದ ಒರೆಸುವ ಪ್ರಯತ್ನ ಮಾಡುತ್ತಾ ಕಲ್ಲು ಈಗ ನೂಲಿನ ನೇರಕ್ಕೆ ಬಂದಿರುವುದನ್ನು ಧೃಡ ಮಾಡುತ್ತಿದ್ದಾನೆ. ಅವನ ಕಿವಿಗೂ ಬಿದ್ದಿರಬಹುದಾ ಈ ಮಗುವಿನ ಅಳುವಿನ ಧ್ವನಿ? ಆದರೆ ನನ್ನ ಈ ಯೋಚನೆಗಳೆಲ್ಲಾ ಅವನಿಗೆ ತಾಕಿಯೇ ಇಲ್ಲ ಅನ್ನುವ ಹಾಗೆ ಈಗ ಮತ್ತೊಂದು ಕಲ್ಲನ್ನು ಇಟ್ಟು ನಡುವೆ ಸಿಮೆಂಟ್ ಗಾರೆ ತುಂಬಿಸುತ್ತಾ ಪಕ್ಕದಲ್ಲಿಟ್ಟ ಮೊಬೈಲ್‌ನಲ್ಲಿ ಪ್ಲೇ ಆಗುತ್ತಿರುವ ಯಾವುದೋ ಹಳೆಯ ಚಿತ್ರಗೀತೆಗೆ ದನಿ ಸೇರಿಸುತ್ತಿದ್ದಾನೆ.

ಸೊಪ್ಪು ತರ್ಕಾರಿ ಬೀಟ್ರೋಟ್ ಟೊಮ್ಯಾಟೋ… ಕೂಗುತ್ತಾ ಗಂಟೆ ಬಡಿಯುತ್ತಾ ರಸ್ತೆಯಲ್ಲಿ ತರಕಾರಿ ಮಾರುವವನು ಯಾವ ಗೇಟ್ ಓಪನ್ ಆಗಿ ಯಾರು ಬರ್ತಿದ್ದಾರೆ ಅಂತ ನೋಡುತ್ತ ಗಾಡಿ ತಳ್ಳುತ್ತಿದ್ದಾನೆ. ಅಲ್ಲಲ್ಲೇ ಅಪ್ರಯತ್ನಪೂರ್ವಕವಾಗಿ ನಿಲ್ಲುತ್ತಿದ್ದಾನೆ. ಆಗಲೇ ಬಾಡುತ್ತಿರುವ ತರತರಹದ ಸೊಪ್ಪುಗಳ ಮೇಲೆ ನೀರನ್ನು ಸಿಂಪಡಿಸುತ್ತಾ ಕೊಳೆತ ತರಕಾರಿಗಳನ್ನು ಬದಿಗೆ ಇಡುತ್ತಾ ಕೊಳ್ಳುವ ಆಸಕ್ತಿ ತೋರುತ್ತಿರುವವರನ್ನು ನೋಡಿ ಪರಿಚಯದ ನಗೆ ಬೀರುತ್ತಿದ್ದಾನೆ. ಅವನ ನಿರಾಳತನ ನೋಡಿದರೆ ಬಹುಶಃ ಅವನ ಗಟ್ಟಿ ಕೂಗಿನ ಮುಂದೆ ಯಾವ ಮಗುವಿನ ಅಳುವಿನ ಕೂಗೂ ಅವನ ಕಿವಿಗೆ ಬೀಳುವುದು ಸಾಧ್ಯವೇ ಇಲ್ಲ ಅನ್ನಿಸಿತು.

ಅರೆ! ಎಲ್ಲರೂ ಅವರವರ ಕೆಲಸಗಳಲ್ಲಿಯೇ ಕಳೆದುಹೋಗಿದ್ದಾರೆ ಇಲ್ಲಿ. ಯಾರಿಗೂ ಹೊರಗಡೆ ಏನು ನಡೆಯುತ್ತಿದೆ ಅನ್ನುವುದರ ಪರಿವೇ ಇಲ್ಲ. ಅದರ ಅಗತ್ಯವೇ ಇಲ್ಲ ಅನ್ನುವಷ್ಟೂ ಕ್ಷುಲ್ಲಕ ಸಂಗತಿಗಳೆ ಅವೆಲ್ಲಾ? ರಸ್ತೆಯ ತುಂಬಾ ಬದುಕಿನ ನಿತ್ಯ ವ್ಯಾಪಾರ ಅದೆಷ್ಟು ಸಹಜ ಅನ್ನುವ ರೀತಿಯಲ್ಲಿ ನಡೆಯುತ್ತಿದೆ. ಪಕ್ಕದಲ್ಲಿ ಬಾಂಬ್ ಬಿದ್ದರೂ ನಮ್ಮ ಮನಗೆ ಬಿದ್ದಿಲ್ಲ ತಾನೇ ಅನ್ನುವ ಹಾಗೆ ತಮ್ಮತಮ್ಮ ಕೆಲಸಗಳಲ್ಲಿ ತೊಡಗುತ್ತಾರಂದ್ರೆ? ಯಾರಿಗೂ ತಟ್ಟಿದ ಹಾಗೆ ಕಾಣಲಿಲ್ಲ ತನ್ನ ಹೊರತಾದ ಬೇರೆ ಲೋಕದ ಸದ್ದು. ಒಂದು ಮಗುವಿನ ನೋವಿಗೆ ಕಿವಿಯಾಗದಿರುವಷ್ಟೂ ಕಲ್ಲಾಗಿದೆಯಾ ಈ ಲೋಕದ ಹೃದಯ? ಜಗದ ಕ್ರೌರ್ಯಕ್ಕೆ ಸ್ಪಂದಿಸಲಾಗದಷ್ಟೂ ಜಡಗಟ್ಟಿ ಹೋಗಿದೆಯಾ ಈ ಜನರ ಸಂವೇದನೆಗಳು? ಯಾಕೋ ಸೋತು ಹೋದ ಹಾಗೆ ಅನ್ನಿಸಿ ಕುರ್ಚಿಯಲ್ಲೇ ಒರಗಿ ಕಣ್ಣುಮುಚ್ಚಿದೆ.

ನನ್ನ ಕಿವಿಗಳಲ್ಲಿ ಮಾತ್ರ ಆ ಅಳು ಅಲೆಅಲೆಯಾಗಿ ಒಮ್ಮೆ ಹೆಚ್ಚಾಗುತ್ತಾ ಮತ್ತೊಮ್ಮೆ ಕ್ಷೀಣವಾಗುತ್ತಾ ಮನಸ್ಸಿನ ತೀರಕ್ಕೆ ಬಡಿಬಡಿದು ಒದ್ದೆಗೊಳಿಸುತ್ತಿತ್ತು. ನನ್ನ ಫ್ರೀಕ್ವೆನ್ಸಿಗೆ ಯಾರೂ ಹೊಂದಿಕೆ ಆಗುತ್ತಿಲ್ಲ ಅನ್ನುವ ದಟ್ಟ ಹತಾಶೆಯ ಭಾವ ಆವರಿಸಿ ಯಾಕೋ ಏಕಾಂಗಿಯಾದೆ ಅನ್ನಿಸಿತು. ನನಗೂ ಯಾಕೆ ಅವರ ಹಾಗೆ ಇರಲು ಆಗುತ್ತಿಲ್ಲ ಎಲ್ಲವೂ ಸರಿಯಾಗಿದೆ ಅಂದುಕೊಂಡು? ಅವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ನಿರಾಳವಾಗಿ ತೊಡಗಿಕೊಂಡಂತೆ ನನಗೂ ಯಾಕೆ ಅರ್ಧಕ್ಕೆ ನಿಲ್ಲಿಸಿದ ಕತೆಯನ್ನು ತೆರೆದು ಓದಲಾಗುತ್ತಿಲ್ಲ? ಲೋಕದ ಭಾರವೆಲ್ಲಾ ಈಗ ನನ್ನ ಹೆಗಲ ಮೇಲೆ ಬಂದು ಕೂತ ಹಾಗೆ ಅನ್ನಿಸಿ ಹೃದಯ ಭಾರವಾಯಿತು. ಇಲ್ಲ ಸಾಧ್ಯವಿಲ್ಲ, ಹೊರಗಿನ ಈ ಸದ್ದುಗಳಿಂದ ಬಿಡುಗಡೆ ಬೇಕು ನನಗೆ ಶಾಂತಿ ಬೇಕು ಅಂತ ಅನ್ನಿಸಿದ್ದೇ ತಡ ಎರಡೂ ಕಿಟಕಿಗಳನ್ನು ರಪರಪನೇ ಮುಚ್ಚಿದೆ. ಕೋಣೆಯ ಒಳಗೆ ನಿಶ್ಯಬ್ದ ಆವರಿಸಿದಂತಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಪುಸ್ತಕ ತೆರೆದು ಕೂತೆ.

ಓದುತ್ತಾ ಓದುತ್ತಾ ಹೋದ ಹಾಗೆ ಕತೆಯ ಪಾತ್ರಗಳೆಲ್ಲಾ ಒಂದೊಂದಾಗಿ ಮಗುವಿನ ರೂಪ ಧರಿಸಿ ಕಣ್ಮುಂದೆಯೇ ಕೂತು ಅಳಲಾರಂಬಿಸಿದವು. ಅಸಹಾಯಕವಾಗಿ ನೆಲದ ಮೇಲೆ ಕೂತು ಎರಡೂ ಕೈಗಳನ್ನು ಚಾಚಿ ಎತ್ತಿಕೋ ಎತ್ತಿಕೋ ಅನ್ನುವ ನೂರಾರು ಪಾತ್ರಗಳು ಏಕಕಾಲದಲ್ಲಿ ಕಾಣಿಸಿಕೊಂಡು ಕಂಗೆಡಿಸಿದವು. ಯಾವುದೋ ಪಾತ್ರದ ಕಣ್ಣ ಹನಿಗಳು ಬಿದ್ದು ಅಕ್ಷರಗಳೇ ಮಂಜು ಮಂಜಾಗಿ ಮತ್ತೆ ಓದುವುದು ಸಾಧ್ಯವೇ ಇಲ್ಲ ಅಂತ ಅನ್ನಿಸಿ ಪುಸ್ತಕವನ್ನು ಮುಚ್ಚಿ ಕೋಣೆಯ ಬಾಗಿಲನ್ನು ದಢಾರನೇ ಮುಚ್ಚಿ ಸರಸರನೇ ಮೆಟ್ಟಿಲಿಳಿಯತೊಡಗಿದೆ. ಹತಾಶೆ ದುಃಖ ಎಲ್ಲವೂ ಒತ್ತರಿಸಿ ಬಂದು ಎಲ್ಲಿಲ್ಲದ ಸಿಟ್ಟಿನಿಂದ ಕೆಳಗಿನ ಮನೆಯ ಬಾಗಿಲು ಬಡಿದೆ.

ಬಾಗಿಲು ತೆರೆದವನಿಗೆ ಬಹುಶಃ ನನ್ನ ಪರಿಚಯ ಸಿಕ್ಕಿ ನಗುವ ಪ್ರಯತ್ನ ಮಾಡಿದವನು ನನ್ನ ಬಿಗಿದ ಮುಖ ನೋಡಿ ಸುಮ್ಮನೆ ನಿಂತ. ನನ್ನ ಸಿಟ್ಟಿನ ಮುಖ ನೋಡಿ ಸ್ವಲ್ಪ ಗಲಿಬಿಲಿಗೊಂಡವನಂತೆ ಏನೋ ಹೇಳಲು ಬಾಯಿ ತೆರೆದವನು ಯಾಕೋ ಮತ್ತೆ ಸುಮ್ಮನಾದ. ಅವನ ಪಕ್ಕದಲ್ಲಿಯೇ ಅತ್ತು ಅತ್ತು ಸುಸ್ತಾದಂತೆ ಇನ್ನೂ ದುಃಖ ಉಮ್ಮಳಿಸಿ ಬರುತ್ತಿರುವ ಹಾಗೆ ನಿಂತುಕೊಂಡಿತ್ತು ನನ್ನನ್ನು ಎಷ್ಟೋ ಹೊತ್ತಿನಿಂದ ಕಾಡಿದ ಆ ಮಗು. ಅದರ ಕೆನ್ನೆಯ ಮೇಲೆ ಮೂಡಿದ್ದ ನಾಲ್ಕು ಬೆರಳಿನ ಅಚ್ಚಿನಿಂದ ಎಳೆಯ ಚರ್ಮವೆಲ್ಲಾ ಕೆಂಪಾಗಿತ್ತು. ಅದನ್ನು ನೋಡಿದ್ದೇ ನನ್ನ ಸಿಟ್ಟು ನೆತ್ತಿಗೇರಿತು. ಇಷ್ಟು ಹೊತ್ತು ಅನುಭವಿಸಿದ ತಳಮಳವೆಲ್ಲಾ ಹೊರಬರಲು ದಾರಿ ಕಾಯುತ್ತಿತ್ತು.

“ಏನ್ರೀ ಆ ತರಹ ಹೊಡಿತಿದ್ದಿರಲ್ವಾ ಆ ಪಾಪದ ಮಗುನಾ? ಮನುಷ್ಯರಾ ನೀವು? ಎಷ್ಟು ಅಳ್ತಾ ಇದೆ ಪಾಪ, ಅದೆಷ್ಟು ನೋವಾಗಿದೆಯೋ ಏನೋ? ಅದರ ಮೇಲೆ ಕೈ ಮಾಡ್ಲಿಕ್ಕೆ ಮನ್ಸಾದರೂ ಹೇಗೆ ಬಂತು? ನಾಚಿಕೆ ಆಗಲ್ವಾ ನಿಮ್ಗೆ?…”, ಅಂತ ಒಂದೇ ಸಮನೆ ದಬಾಯಿಸಿದರೂ ಒಂದೂ ಮಾತಾಡದೇ ಸುಮ್ಮನೇ ನಿಂತ ಅವನು ಮತ್ತು ಅವನ ಮೌನ ಪ್ರತಿಭಟಿಸುವುದನ್ನೇ ಮರೆತ ಲೋಕದ ಪ್ರತಿರೂಪದಂತೆ ಕಂಡಿತು. ಆ ಮೌನ ನನ್ನನ್ನು ಮತ್ತಷ್ಟು ಕೆರಳಿಸಿತು. ಅವನ ಜೊತೆ ಮಾತಾಡುವುದೇ ಅಸಹನೀಯವೆನಿಸಿ ಕೆನ್ನೆಯ ಮೇಲೆ ಒಣಗಿದ ಕಣ್ಣೀರು ಒರೆಸುತ್ತಾ ನಿಂತ ಮಗುವಿನ ಮೇಲೆ ಅಂತಃಕರಣ ಬಹುವಾಗಿ ಉಕ್ಕಿ ಮಗುವನ್ನು ಎತ್ತಿಕೊಳ್ಳಲು ಎರಡೂ ಕೈಗಳನ್ನು ಚಾಚಿದೆ. ಆದರೆ ನನ್ನನ್ನು ಕಂಡು ಹೆದರಿದ ಮಗು ಕಿಟಾರನೇ ಕಿರುಚಿ ಓಡಿ ಹೋಗಿ ತನ್ನ ಅಪ್ಪನನ್ನೇ ಬಾಚಿ ತಬ್ಬಿಕೊಂಡಿತು. ಮಗುವನ್ನು ಎತ್ತಿ ಸಂತೈಸಿದ ಅವನ ಕಣ್ಣುಗಳಲ್ಲಿ ಇದ್ದ ಭಾವ ಯಾವುದು ಅಂತ ಗೊತ್ತಾಗದೇ ಮರಳಿ ಮನೆಯ ಮೆಟ್ಟಿಲನ್ನು ಏರುವಾಗ ಹೊರಗೆ ಅರ್ಧ ಕಟ್ಟಿದ ಗೋಡೆಯ ಮೇಲೆ ಮೇಸ್ತ್ರಿ ಮತ್ತೊಂದು ಕಲ್ಲನ್ನು ಇಟ್ಟು ನೂಲನ್ನು ಇಳಿಬಿಡುತ್ತಿದ್ದ.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

1 Comment

  1. MAJURAJ H N

    ಕತೆಗಾರನ ವಿಷಾದ ಮೌನವೇ
    ಕತೆಯಲೊಂದು ವಿಷಣ್ಣ ವದನದ
    ಒಲುಮೆಯತ್ತ ಬೆರಳ ತೋರಿದೆ !

    ಹೌದು! ನಮಗೆ ಯಾವತ್ತೂ
    ಅಪರಿಚಿತರ ಕಾರುಣ್ಯಕಿಂತ
    ಪರಿಚಿತರ ಕಾಠಿಣ್ಯವೇ ಇಷ್ಟ !

    ಏಕೆಂದರೆ ಲೋಕವೀಗ ಮುಖವಾಡ
    ಗಳ ಹಿಂದಿನ ಅಸಲಿಯತ್ತನ್ನು
    ಹುಡುಕುತ ಬಸವಳಿದಿದೆ ;
    ಇದೇ ಮಿಡಿವ ಕರುಳಿಗೆ ಬೆರಗಾಗಿದೆ !!

    (ನಿಶ್ಯಬ್ದ ಅಲ್ಲ ; ನಿಶ್ಶಬ್ದ )

    ಕವಿ ರವೀಂದ್ರರ ಕತೆ ; ಸಂ-ವೇದನೆ ವಿವರಿತೆ

    ಇಷ್ಟವಾಯಿತು ಗುರುವೇ😍〽️

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ