ಇಲ್ಲಿ ಮೊದಲ ಮಳೆ
ಘಮ್ ಎನ್ನುತ್ತಾವೆ ಇಳೆ
ಅರಳುತ್ತಾವೆ ಮೂಗ ಹೊಳ್ಳೆ
ಅದು ಅಸಿಡ್ನಾ ಸಿಸೇರಿಯನ್ನೋ
ಗರ್ಭಕಟ್ಟಿ ಹಡೆದ ಸುಸೂತ್ರ ಹೆರಿಗೆಯೋ
ಬಿರುಕು ಬಿಟ್ಟ ತೊಡೆ, ಹಿಮ್ಮಡಿಯಿಂದ
ಹಸಿರ ಚಿಗುರು
ಎಲ್ಲಾ ಮಳೆಗೂ ಹೊಳೆ
ಹರಿಯುವ ಕನಸು
ಬೆಳೆ ಬೇಕು ಹುಲುಸು
ನನಸಾಗುತ್ತವೆ ಇಲ್ಲಿ
ಸಂತನಿಗೆ ಬಿದ್ದ ಕೆಟ್ಟ ಕನಸುಗಳು
ಇಲ್ಲೂ ಮಳೆ
ಚಿಟ ಪಟನೆ ಅಲ್ಲಾ
ತಟ ಪಟನೆ ಅಲ್ಲವೇ
ಬರೀ ಉಡಾಯಿಸುವ
ಸಿಡಿ ಮದ್ದುಗಳ ಕೆಂಡದ ಹನಿ
ಅದೇದೆಷ್ಟು
ಸಾಲು ಸಾಲು ಹಸಿರ ಮರೆಸುವ
ರಕ್ತದ ಒರತನಿ
ಮಸೀದಿಯ ಬಾಂಗುಗಳಲ್ಲಿ
ಆಝಾನಿನ ಬದಲು
ಮಕ್ಕಳ ಕಿರುಲು
ಶಿವನೇ
ಇಲ್ಲಿ ತಾಯಿ ಶವದ ತೊಡೆಯಮೇಲೆ
ಮಗುವಿನ ಚಿರನಿದ್ರೆಯ ಗೊಂಬೆ
ಇನ್ನೊಂದು ಮಳೆ
ಕೆಂಡದ ಮಳೆ
ಇಲ್ಲಿ ದಮ್ಮಯ್ಯ ಬೇಡ
ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ