ಬೆಟ್ಟದ ಬಲಬದಿಯ ಕಿರುದಾರಿ ಹಿಡಿದು ಸಾಗಿದರೆ, ಅಲ್ಲೊಂದು ನೆಲ್ಲಿ ಮರ. ಅದರ ಬುಡದಲ್ಲಿ ನಮ್ಮ ನಾಯಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದೆ. ನಾನು ಗಾಬರಿಯಿಂದ ಜೋರಾಗಿ ಅಳತೊಡಗಿದೆ. ಯಾರೋ ರಾತ್ರಿ ಅಲ್ಲಿರುವ ಪೊದೆಯಲ್ಲಿ ನಾಡ ಬಾಂಬು ಇಟ್ಟಿದ್ದಾರೆ! ಮಾಂಸದ ವಾಸನೆಗೆ ಮರುಳಾಗಿ, ಅದು ಆ ಬಾಂಬನ್ನು ಬಯಲಲ್ಲಿ ತಂದಿಟ್ಟುಕೊಂಡು ಇಡಿದಾಗಿ ಕಚ್ಚದೆ, ಮೆಲ್ಲಗೆ ಒಂದು ಮೂಲೆಯನ್ನು ಬಿಡಿಸಿದೆ. ಅದಕ್ಕೇ ಸ್ವಲ್ಪಭಾಗ ಸಿಡಿದು, ಅದರ ಮೇಲ್ದವಡೆ ಸ್ವಲ್ಪ ಸೀಳಿತ್ತು. ಬಾಯೆಲ್ಲ ರಕ್ತ ಸಿಕ್ತ. ಸುತ್ತೆಲ್ಲ ಕೋಳಿಯ ಮಾಂಸದ ದುರ್ವಾಸನೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೈದನೆಯ ಕಂತು
ನಮ್ಮ ಕಾಡಲ್ಲಿ ಆ ಕಾಲದಲ್ಲಿ ಅತಿ ಹೆಚ್ಚಾಗಿ ವಾಸವಾಗಿದ್ದ ಪ್ರಾಣಿಗಳೆಂದರೆ, ಕಾಡು ಹಂದಿಗಳು. ಅಬ್ಬಬ್ಬಾ! ಭತ್ತ, ಕಬ್ಬುಗಳಿಗೆ ಅವುಗಳ ಉಪಟಳವೆಂದರೆ, ಹೇಳ ತೀರದ್ದು. ಅವು ಹಿಂಡಿನಲ್ಲಿ ವಾಸಿಸುವ ಪ್ರಾಣಿಗಳು. ಒಮ್ಮೆ ಗದ್ದೆಗಿಳಿದರೆ, ೧೫-೨೦ ರ ಸಂಖ್ಯೆಯಲ್ಲೇ… ಬೆಳೆದು ನಿಂತ ಪೈರು ಸರ್ವನಾಶವಾಗುವುದು ಶತಃ ಸಿದ್ಧ. ಅದಕ್ಕೇ ಗದ್ದೆಯ ನಡುವೆ ಉದ್ದುದ್ದ ಕಂಭ ನೆಟ್ಟು, ಎತ್ತರದಲ್ಲಿ ಒಂದು ಪುಟ್ಟ ಅಟ್ಟ ಕಟ್ಟಿ, ಅದರ ಮೇಲೊಂದು ಸೋಗೆಯ ಮಾಡು ಮಾಡುತ್ತಿದ್ದರು. ನಮ್ಮ ಗ್ರಾಮೀಣ ಭಾಷೆಯಲ್ಲಿ ಅದನ್ನು “ಮಾಳ” ಎಂದು ಕರೆಯುತ್ತಿದ್ದರು. ರಾತ್ರಿ ಒಬ್ಬರು ಅದರ ಮೇಲೇರಿ, ಕುಳಿತೋ ಮಲಗಿಯೋ ಗದ್ದೆ ಕಾಯುವ ಕೆಲಸ. ಸಂಜೆಯಾದೊಡನೆ ಆ ಮಾಳದ ಕಂಭಕ್ಕೆ ಒಂದು ಉರಿವ ಲಾಟೀನು ಸಿಕ್ಕಿಸುತ್ತಿದ್ದರು. ಮಾಳ ಕಾಯುವವರ ಕೈಲೊಂದು ದೊಡ್ಡ ಟಾರ್ಚ್ ಇರುತ್ತಿತ್ತು. ಅಷ್ಟಷ್ಟು ಹೊತ್ತಿಗೆ ಅದರ ಗುಂಡಿ ಅದುಮಿ, ಇಡೀ ಗದ್ದೆ ಬೈಲಿನ ಮೂಲೆ ಮೂಲೆಗೂ ಬೆಳಕು ಬಿಟ್ಟು ಅವಲೋಕಿಸಿ. “ಹೂಯ್, ಹೂಯ್” ಎಂದು ಹುಯಿಲೆಬ್ಬಿಸಿ ಒಳಬರದಂತೆ ತಡೆಯುತ್ತಿದ್ದರು. ಹಾಗೇ ಆಗಾಗ ಡಬ್ಬಿ ಬಡಿಯುತ್ತಿದ್ದರು. ಅದರ ಸಪ್ಪಳಕ್ಕೆಅವು ಬೆದರುತ್ತಿದ್ದವು. ಆದರೆ, ಅದೆಷ್ಟೋ ಸಾರಿ ಬೆಳಗಿನ ಜಾವದ ನಿದ್ದೆಗೆ ಸೋತು ಕಣ್ಮುಚ್ಚುವ ಅಚಾತುರ್ಯವೂ ಇಲ್ಲದಿರಲಿಲ್ಲ. ಆಗೆಲ್ಲ. ಅವು ಸದ್ದಿಲ್ಲದೇ ನುಸುಳಿ, ಪೈರು ಸತ್ಯಾನಾಶಗೊಳಿಸಿ ಬಿಡುತ್ತಿದ್ದವು. ಹಾಗೇ ಕಬ್ಬಿನ ಗದ್ದೆಗೂ ಅವು ನುಗ್ಗುತ್ತಿದ್ದವು.
ದೀಪಾವಳಿ ಮುಗಿಯುತ್ತಿದ್ದಂತೆಯೆ ಭತ್ತದ ಕಾಳು ಹಾಲ್ದುಂಬಿ ನಿಲ್ಲುವ ವೇಳೆ. ಅದೇ ವೇಳೆಗೆ, ಛಳಿಯ ಆಗಮನ. ದೀರ್ಘ ಇರುಳು ಕೂಡಾ. ಇದೆಲ್ಲ ಹಂದಿಗಳಿಗೆ ವರದಾನ. ಆಗೆಲ್ಲ ಒಂದಿಷ್ಟು ಬೇಟೆಗಾರರು ನಾಡ ಕೋವಿ ಹಿಡಿದು ಹಂದಿಗಳನ್ನು ಬೇಟೆಯಾಡುತ್ತಿದ್ದರು. ಅಂತಹಾ ಒಬ್ಬ ಬೇಟೆಗಾರ ಪ್ರತೀ ವರ್ಷ ನಮ್ಮೂರಿಗೂ ಬರುತ್ತಿದ್ದ. ಅವನ ಮೂಲ ಹೆಸರು ಏನೋ ಯಾರಿಗೂ ಗೊತ್ತಿಲ್ಲ. ಎಲ್ಲರೂ “ನನ್ನೀ ಸಾಬ” ಎಂದೇ ಕರೆಯುತ್ತಿದ್ದರು. ಬಿಳಿಯ ಇಷ್ಟುದ್ದ ಗಡ್ಡ. ತಲೆಗೊಂದು ಬಿಳಿಯ ಟೋಪಿ. ಬೀಡಿ ಸೇದಿ ಸೇದಿ, ಹೊಗೆಯ ಬಣ್ಣಕ್ಕೆ ತಿರುಗಿದ್ದ ಹಲ್ಲುಗಳು. (ಮುಂದಿನ ಎರಡು ಹಲ್ಲುಗಳು ಬಿದ್ದು ಹೋಗಿದ್ದವು) ಚಿಕ್ಕ ಚಿಕ್ಕ ಕಣ್ಣುಗಳ, ಸದಾ ನಗುಮುಖದ ನನ್ನಿ ಸಾಬ ಇಡೀ ಊರಿಗೆ ನೆಂಟನಿದ್ದಂತೆ. ಆತ ತಮ್ಮ ಬೆಳೆಯ ರಕ್ಷಕನೆಂದು ಅವನನ್ನು ಎಲ್ಲರ ಮನೆಯಲ್ಲೂ “ನನ್ನಿ ಸಾಬ್ರೇ ಬನ್ನಿ ಕೂತ್ಗಳಿ.” ಎಂದು ಆದರಿಸಿ ರಾಜೋಪಚಾರ ಮಾಡುತ್ತಿದ್ದರು. ಆತ ಬೇಟೆಯಲ್ಲಿ ನಿಸ್ಸೀಮನೆಂದು ಎಲ್ಲರೂ ಮಾತಾಡುತ್ತಿದ್ದರು. ಆತ ಪೈರಿನ ಸೀಸನ್‌ನಲ್ಲಿ ರಾತ್ರಿ ಗದ್ದೆ ಸುತ್ತ ತಿರುಗಾಡಿ ಹಂದಿ ಹೊಡೆಯುತ್ತಿದ್ದ. ಆತ ಹಂದಿ ಹೊಡೆದ ಮೂಗಾಳಿ ಹೊಕ್ಕಿದರೆ ಸಾಕು, ಸುತ್ತೂರಿನ ಜನರೆಲ್ಲ ಆ ಹಂದಿಯ ಮಾಂಸಕ್ಕಾಗಿ ಹಾತೊರೆದು ಬರುತ್ತಿದ್ದರು. ಆ ಹಂದಿಯ ವ್ಯಾಪಾರವೂ ಬಹಳ ವಿಭಿನ್ನ. ಆತ ಮುಸಲ್ಮಾನನಾಗಿದ್ದರಿಂದ ಹಂದಿ ಮುಟ್ಟುತ್ತಿರಲಿಲ್ಲ. ಸತ್ತ ಹಂದಿಯನ್ನು ಅದರ ಗಾತ್ರ, ಆಕಾರಕ್ಕನುಗುಣವಾಗಿ ಒಬ್ಬ ಶೇರುಗಾರನಿಗೆ ಆತ ಕ್ರಯಕ್ಕೆ ಕೊಟ್ಟು ಬಿಡುತ್ತಿದ್ದ. ಅಲ್ಲಿಂದ ಆತ ಅದನ್ನು ತುಂಡರಿಸಿ ಪಾಲು ಮಾಡಿ ಮಾರಾಟಕ್ಕೆ ಇಡುತ್ತಿದ್ದ. ಮುಂದಿನ ಎರಡು ಮೂರು ದಿನಗಳ ತನಕ ಎಲ್ಲೆಡೆ ಅದೇ ಸುದ್ದಿ. ಆತ ಒಂದೆಡೆ ನಿಲ್ಲದೇ ಹತ್ತೂರು ಸುತ್ತಿ, ಸಾಕಷ್ಟು ಹಂದಿಗಳ ಬೇಟೆ ಆಡುತ್ತಿದ್ದ. ಒಮ್ಮೆ ನಮ್ಮ ಗದ್ದೆಯಲ್ಲಿ ಒಂದು ದೊಡ್ಡ ಹಂದಿ ಹೊಡೆದಿದ್ದ. ಆಗ ನಡೆದ ಒಂದು ರಸವತ್ತಾದ ಘಟನೆ ನಿಮಗೆ ಹೇಳಬೇಕು. ಆಗೆಲ್ಲ ಒಬ್ಬ ದನಕಾಯುವ ಮುದುಕನಿದ್ದ. ನಮ್ಮ ಕಬ್ಬಿನ ಗದ್ದೆ ಏರಿಯ ಮೇಲಿನ ಪುಟ್ಟ ಗುಡಿಸಲಿನಲ್ಲಿ ಅವನ ವಾಸ. ರಾತ್ರಿ ಊಟ ಮಾಡಿ, ಆತ ಅಲ್ಲಿ ಹೋಗಿ ಮಲಗುತ್ತಿದ್ದ. ಆತ ಗಾಂಜಾ ಪ್ರಿಯ. ಆತ ಕಾಡಲ್ಲಿ ಎಲ್ಲೋ ಒಂದೆಡೆ ಗುಪ್ತ ಸ್ಥಳದಲ್ಲಿ ಈ ಗಾಂಜಾ ಬೆಳೆಸಿಕೊಂಡು ಸೇವಿಸುತ್ತಿದ್ದನಂತೆ. (ಬಹಳ ಜನ ಈ ರೀತಿ ಕದ್ದು ಬೆಳೆಸುತ್ತಿದ್ದರಂತೆ) ಆ ಬೆಳಗಿನ ಜಾವ ನಾಲ್ಕರ ಸುಮಾರು ಇರಬಹುದು. ನನ್ನಿ ಸಾಬ ಢಮಾರ್ ಎಂದು ಹಂದಿ ಹೊಡೆದ ಸಪ್ಪಳಕ್ಕೆ ನಾನು ಆಯಿ ಎಚ್ಚರಾಗಿ ಗದ್ದೆಗೆ ಓಡಿದೆವು. (ಅಪ್ಪಯ್ಯ ಗದ್ದೆ ಕಾಯುತ್ತಿದ್ದ) ಅದೆಷ್ಟು ದೊಡ್ಡ ಹಂದಿ ಅಂತೀರಿ! ಆ ಗುಂಡಿನ ಸಪ್ಪಳಕ್ಕೆ ನಮ್ಮ ದನಕಾಯುವ ಮುದುಕನಿಗೂ ಎಚ್ಚರಾಗಿದೆ. ಗಾಂಜಾದ ಮಬ್ಬಿನಲ್ಲೇ ಕಣ್ಣು ಒರೆಸಿಕೊಳ್ಳುತ್ತ ಬಂದ. ನನ್ನಿ ಸಾಬ ಮೊದಲೇ ಹಾಸ್ಯ ಪ್ರಿಯ. ಇವನು ಗುಂಗಿನಲ್ಲಿ ಇರುವುದು ತಿಳಿದು, ಹಂದಿ ಬಿದ್ದ ಜಾಗದತ್ತ ಕೈ ತೋರಿ “ಅಲ್ಲಿ ಹಂದಿ ನಿಂತೈತೆ. ದೊಣ್ಣೆ ತಗಂಡು ಬಡೀರಿ” ಎಂದು ಅತನ ಕೈಗೆ ಬಡಿಗೆ ಹಿಡಿಸಿದ. ಆತ ಆವೇಶ ಬಂದವರಂತೇ ಮುನ್ನುಗ್ಗಿ, ಸತ್ತ ಹಂದಿಯನ್ನು ಬಡ್ ಬಡ್ ಎಂದು ಬಡಿಯುತ್ತ, “ಗದ್ದೆ ತಿಂತಿ? ಸಾಯಿ… ಸಾಯಿ” ಎಂದು ಕೂಗತೊಡಗಿದ್ದ. ಕೈ ಸೋಲುವ ತನಕ ಬಡಿದು, ‘ತಾನೇ ಕೊಂದೆ’ ಎಂಬ ಭ್ರಮೆಯಲ್ಲಿ ಹಿಂದಿರುಗಿದ. ನಾನು, ಆಯಿ ಜೋರಾಗಿ ನಗತೊಡಗಿದ್ದೆವು. ಮುಂದೆ ತಿಂಗಳೊಪ್ಪತ್ತು ಹೇಳಿ ನಗಲು ನಮಗೊಂದು ಮೋಜಿನ ಸುದ್ದಿ ಸಿಕ್ಕಿತ್ತು.

ಈ ಕಾಡು ಹಂದಿಗಳು ಎದುರಾದರೆ ಬಲು ಅಪಾಯ. ಅವು ಒಂದು ದಿಕ್ಕಲ್ಲಿ ಹೊರಟರೆ ಅತ್ತಲೇ ಮುಖ ಮಾಡಿ ಹೋಗುತ್ತವೆ. ಹಾಗಾಗಿ ಎದುರು ಬಂದವರ ಮೈ ಮೇಲೆ ಬಂದು ಬಿಡುವ ಅಪಾಯವಿದೆ. ಅದೂ ಕೋರೆ ಮೂಡಿದ ಗಂಡು ಹಂದಿ ಎದುರಾದವರ ಸೀಳಿಯೇ ಬಿಡುತ್ತದೆಯಂತೆ. ಹಾಗೇ ಮರಿ ಹಾಕಿದ ಹಂದಿಯು ತೀರ ಅಪಾಯ ಎಂದು ಹೇಳುತ್ತಾರೆ. ಆದರೆ, ಅವು ಎದುರಾದರೆ, ನಾವು ಸರಕ್ಕನೆ ಅಡ್ಡ ಹಾದಿ ಹಿಡಿದು ಹೊರಳಿಬಿಟ್ಟರೆ, ಬಚಾವು. ಕಾರಣ, ಅವಕ್ಕೆ ಸರಕ್ಕನೆ ತಿರುಗಲು ಬರುವುದೆ ಇಲ್ಲವಂತೆ. ಅವು ಹಿಂಡಾಗಿ ಹೊರಟರೆ ಎಮ್ಮೆ ಕರುಗಳಂತೆ ಭಾಸವಾಗುತ್ತವೆ.
ಅಣ್ಣಯ್ಯ ಸಣ್ಣವನಿರುವಾಗಿನ ಒಂದು ಘಟನೆ ಇದು. ಆತ ಸಂಜೆ ಶಾಲೆಯಿಂದ ಬರುತ್ತಿದ್ದವ ದೂರದ ಕರಡದ (ಹುಲ್ಲು) ಬೇಣದಲ್ಲಿ ಅವುಗಳ ಹಿಂಡು ಹೊರಟಿದ್ದು ನೋಡಿದವನೇ, “ಅರೆ! ನಮ್ಮನೆ ಎಮ್ಮೆ ಕರು ಇದೇಕೆ ಇವುಗಳ ಜೊತೆ ಹೊರಟಿದೆ? ಎಂದು ಗಾಭರಿಬಿದ್ದು ಹೊಡೆದು ಕೊಂಡು ಬರಲು ಹೊರಟಿದ್ದನಂತೆ. ಆದರೆ, ಕೆಲ ಕ್ಷಣದಲ್ಲಿ ಅವು ಓಡುವುದು ನೋಡಿ, ಹಂದಿಗಳೆಂದು ತಿಳಿದು ದಿಗಿಲಾಗಿ, ಮನೆಗೆ ಓಡಿಬಂದನಂತೆ. ಆ ಸೀಸನ್‌ನಲ್ಲಿ ರಾತ್ರಿಯ ವೇಳೆ ಕಾಡು ಹಾದಿಯಲ್ಲಿ ಅಡ್ಡಾಡುವವರು ಉರಿಯ ಸೂಡಿ ( ಬೆಂಕಿಯ ದೊಂದಿ) ಹಿಡಿದೇ ತಿರುಗುತ್ತಿದ್ದರು. ಅವು ಬೆಂಕಿಗೆ ಹೆದರುತ್ತವಂತೆ.
ಆಗೆಲ್ಲ ಈ ಹಂದಿಗಳನ್ನು ಕೊಲ್ಲಲು ನಾಡ ಬಾಂಬು ಕೂಡಾ ಉಪಯೋಗಿಸುತ್ತಿದ್ದರು. ಸಿಡಿಮದ್ದನ್ನು ಒಂದು ಪ್ರಮಾಣದಲ್ಲಿ ಕತ್ತದ ನಾರಿನಲ್ಲಿ (ಬಹುಶಃ) ಉಂಡೆಯ ಆಕಾರದಲ್ಲಿ ಬಿಗಿಯಾಗಿ ಸುತ್ತಿ, ಅದರ ಮೇಲ್ಭಾಗಕ್ಕೆ ಮಾಂಸದ ಚೂರುಗಳನ್ನು ಸವರಿ, ಅವು ಗದ್ದೆಗೆ ಹಾಯುವ ದಾರಿಯ ಪೊದೆಯೊಳಗೆ ಮುಚ್ಚಿ ಇಡುತ್ತಿದ್ದರು. ಆ ಮಾಂಸದ ವಾಸನೆಗೆ ಮರುಳಾಗಿ, ಅವು ಆ ಗುಂಡನ್ನು ಬಾಯಲ್ಲಿ ಕಡಿದರೆ, ಅದು ಢಂ ಎಂದು ಅವುಗಳ ಗಂಟಲನ್ನೇ ಸೀಳಿಬಿಡುತ್ತಿತ್ತು. ಈ ರೀತಿ ಹಂದಿ ಕೊಲ್ಲುವವರೂ ಬಹಳ ಜನ ಇದ್ದರು. ಆದರೆ, ಒಮ್ಮೊಮ್ಮೆ ಕತ್ತಲಲ್ಲಿ ಜನ ತುಳಿದರೆ ಕಾಲು ಹೋಗುವ ಅಪಾಯವೂ ಇತ್ತು. ಹಾಗೇ ಸಾಕು ಪ್ರಾಣಿಗಳೂ ಅಪಾಯಕ್ಕೆ ಸಿಲುಕುವ ಭಯವಿತ್ತು.
ಅದಕ್ಕೆ ಸಂಬಂಧಿಸಿದ ಒಂದು ಘಟನೆ ಹೇಳುತ್ತೇನೆ ಕೇಳಿ. ನಾನಾಗ ಮೂರು/ ನಾಲ್ಕನೆಯ ತರಗತಿಯಲ್ಲಿ ಇದ್ದೆ. ನಮ್ಮಲ್ಲಿ ಒಂದು ನಾಯಿ ಇತ್ತು. ಅದರ ಹೆಸರು ನೆನಪಾಗುತ್ತಿಲ್ಲ. ಅದು ನನ್ನ ಮುದ್ದಿನ ನಾಯಿಯಾಗಿತ್ತು. ದಿನಾ ಬೆಳಗ್ಗೆ ನಾವು ಒಳಗೆ ಅಸರಿಗೆ ಕುಡಿಯಲು ಕುಳಿತರೆ ಸಾಕು; ತಲೆ ಬಾಗಿಲಲ್ಲಿ ಚೂಪಗೆ ಕುಳಿತು, ಅಪ್ಪಯ್ಯ ತರುವ ದೋಸೆಯ ಚೂರಿಗೆ ಕಾಯುತ್ತಿತ್ತು.
ಒಂದು ಬೆಳಗ್ಗೆ ನಾಯಿಯ ಸುಳಿವೇ ಇಲ್ಲ! ಅಪ್ಪಯ್ಯ ದೋಸೆ ಹಿಡಿದು ಹೊರಬಂದು ಕರೆದರೂ ನಾಯಿಯ ಪತ್ತೆಯೇ ಇರಲಿಲ್ಲ. ಅಪ್ಪಯ್ಯ “ಕುರು ಕುರು” ಎಂದು ಕರೆಯುತ್ತ, ಮೇಲಿನ ಗದ್ದೆಯ ಸಂಕ ದಾಟಿ ಬೆಟ್ಟದತ್ತ ನಡೆದರು. ನಾನೂ ಗಾಬರಿಯಿಂದ ಅಪ್ಪಯ್ಯನನ್ನು ಹಿಂಬಾಲಿಸಿದ್ದೆ. ಬೆಟ್ಟದ ಬಲಬದಿಯ ಕಿರುದಾರಿ ಹಿಡಿದು ಸಾಗಿದರೆ, ಅಲ್ಲೊಂದು ನೆಲ್ಲಿ ಮರ. ಅದರ ಬುಡದಲ್ಲಿ ನಮ್ಮ ನಾಯಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದೆ. ನಾನು ಗಾಬರಿಯಿಂದ ಜೋರಾಗಿ ಅಳತೊಡಗಿದೆ. ಯಾರೋ ರಾತ್ರಿ ಅಲ್ಲಿರುವ ಪೊದೆಯಲ್ಲಿ ನಾಡ ಬಾಂಬು ಇಟ್ಟಿದ್ದಾರೆ! ಮಾಂಸದ ವಾಸನೆಗೆ ಮರುಳಾಗಿ, ಅದು ಆ ಬಾಂಬನ್ನು ಬಯಲಲ್ಲಿ ತಂದಿಟ್ಟುಕೊಂಡು ಇಡಿದಾಗಿ ಕಚ್ಚದೆ, ಮೆಲ್ಲಗೆ ಒಂದು ಮೂಲೆಯನ್ನು ಬಿಡಿಸಿದೆ. ಅದಕ್ಕೇ ಸ್ವಲ್ಪಭಾಗ ಸಿಡಿದು, ಅದರ ಮೇಲ್ದವಡೆ ಸ್ವಲ್ಪ ಸೀಳಿತ್ತು. ಬಾಯೆಲ್ಲ ರಕ್ತ ಸಿಕ್ತ. ಸುತ್ತೆಲ್ಲ ಕೋಳಿಯ ಮಾಂಸದ ದುರ್ವಾಸನೆ. ನಾನು ಯಾವುದನ್ನು ಲೆಕ್ಕಿಸದೆ, ಅದನ್ನು ಅಳುತ್ತ ತಬ್ಬಿಕೊಂಡೆ. ಪಾಪ ಅಂಥ ದೀನ ಅವಸ್ಥೆಯಲ್ಲೂ ಅದು ಮೆಲ್ಲಗೆ ಬಾಲ ಆಡಿಸಿ, ವಿಶ್ವಾಸ ತೋರಿತು. ಅಂತೂ ಅದನ್ನು ಮನೆಗೆ ಹೊತ್ತು ತಂದೆವು. ಅದರ ಬಾಯಿಯನ್ನು ಉಗುರು ಬೆಚ್ಚಗಿನ ನೀರಲ್ಲಿ ತೊಳೆದೆ. ಅಪ್ಪಯ್ಯ ‘ಹುಲಿ ಬರಕನ ಸೊಪ್ಪಿನ’ ಹಸಿರು ಮದ್ದು ಅರೆದು ಗಾಯಕ್ಕೆ ಸವರಿದ. ಹುಳ ಮುಟ್ಟ ಬಾರದೆಂದು, ಮೇಲೆ ಬೂದಿ ಹಾಕಲು ತಿಳಿಸಿದ. ನಾನು ಅದನ್ನು ಪುಟ್ಟ ಮಗುವಿನಂತೆ ಆರೈಕೆ ಮಾಡಿದ್ದೆ. ಹೆಚ್ಚು ಕಮ್ಮಿ ಎರಡು ತಿಂಗಳೇ ಬೇಕಾಯ್ತು ಅದು ಸುಧಾರಿಸಿಕೊಳ್ಳಲು. ಕೊನೆಗೂ ಅದರ ಸುಂಡಿಗೆ ಸೀಳು ಗಾಯದ ಕಲೆ ಹಾಗೆಯೇ ಉಳಿದಿತ್ತು. ಪವಾಡ ಸದೃಶವಾಗಿ ಅದು ಪ್ರಾಣಾಪಾಯದಿಂದ ಪಾರಾಗಿ, ಹುಶಾರಾಯಿತು ಅನ್ನುವುದೇ ದೊಡ್ಡ ಖುಶಿ.
ಮುಂದಿನ ಸಂಚಿಕೆಯಲ್ಲಿ, ಈ ಕಾಡು ಹಂದಿ ಎಸಗಿದ ಇನ್ನೊಂದು ದೊಡ್ಡ ಆಘಾತದ ಬಗ್ಗೆ ಹೇಳುವೆ.
ಮುಂದುವರಿಯುವುದು…

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
