Advertisement
ಹಂಪಿಯ ಹೊಳೆ ದಂಡೆ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಹಂಪಿಯ ಹೊಳೆ ದಂಡೆ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ. ಇಲ್ಲಿ ಮೇಲೆರಿದರೆ ಹಂಪಿಯ ೩೬೦ ಡಿಗ್ರಿ ಕೋನದ ಸ್ಥಳಗಳು ನಿಚ್ಚಳ.
ಶ್ರೀಧರ್‌
ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹಂಪಿಯಲ್ಲಿ ಓಡಾಡಿದ ಕುರಿತ ಬರಹ

ಹಂಪಿ ಎಂಬ ವಿಸ್ಮಯವನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳುತ್ತವೆ. ಕತೆಗಳಿಗೆ ಕಿವಿಯಾಗಬೇಕಷ್ಟೆ.

ನಿಗೂಢ ಹಂಪಿ

ಹಂಪಿ ನೋಡುವವರು ಕಮಲ್‌ ಮಹಲ್‌, ಗಜ ಶಾಲೆ, ವಿರೂಪಾಕ್ಷ ದೇವಾಲಯ, ಹಜಾರ ರಾಮ, ವಿಜಯ ವಿಠಲ ನೋಡಿಕೊಂಡು ಹಿಂದಿರುಗುವರು. ಹೆಚ್ಚೆಂದರೆ ಅಚ್ಯುತರಾಯ ದೇವಾಲಯ ನೋಡಿ ಹಂಪಿಗೆ ಬೈ ಬೈ ಹೇಳುವರು. ನೋಡುವುದು ಬಿಡಿ ಅದರಾಚೆಗಿನ ಸ್ಥಳಗಳನ್ನು ಮುಟ್ಟಿ ಮೂಸುವುದು ಇಲ್ಲ. ನಿಜವಾಗಿ ನೋಡುವುದೇ ಬೇರೆ. ನೋಡುವುದು ಎಂದರೆ ಹಂಪಿಯ ಅಂತರ್ ಸತ್ವ ಅರಿಯುವುದು. ನೂರಾರು ವರ್ಷಗಳ ಕಾಲ ಇಲ್ಲಿನ ವಾಸ್ತು ಶಿಲ್ಪ ಕಾಪಾಡಿದವರು ಇಲ್ಲಿನ ರೈತರು!

ಹಂಪಿ ಎಂದರೆ ಇಷ್ಟೇ ಅಲ್ಲಾ. ಹಂಪಿಯ ಬಳುಕು ವೈಯಾರ ನೋಡಬೇಕೆಂದರೆ ಹೊರಗೆ ಕಾಲಿಡಬೇಕು. ಹಂಪಿಯ ಪಿಸುಮಾತನ್ನು ಆಲಿಸಬೇಕು. ಹಂಪಿಯ ಮುಖ್ಯ ಆಕರ್ಷಣೆಯ ಆಚೆಗೂ ಅನನ್ಯತೆ ಇದೆ. ಹಂಪಿಯ ನಿಜದ ಅಸ್ಮಿತೆ ಇರುವುದು ಬದುಕು ಇರುವುದು ಮುಖ್ಯ ಮಂದಿರಗಳ ಹೊರಗೆ! ಇವುಗಳಿಗೆ ಹಣಕಿ ಹಾಕಿದರೆ ಹೊಸ ನೋಟ ತೆರೆಯುತ್ತದೆ.

ಹಂಪಿಯ ಪ್ರವಾಸವನ್ನ ವಿಭಿನ್ನವಾಗಿಸಿಕೊಳ್ಳಬೇಕೆಂಬ ಬಯಕೆ ಇದ್ದರೆ ಇಲ್ಲಿನ ಮುಖ್ಯ ಆಕರ್ಷಣೆಯ ಹೊರಗೆ ಇಣುಕಬೇಕು. ಆಗಲೇ ಹಂಪಿಯ ಮೌನ, ಕಂಪನದ ಆಸ್ವಾದನೆ ಮತ್ತು ಅಚ್ಚರಿಗಳು  ಅರ್ಥವಾಗುವುದು. ಹಂಪಿಯ ಜನಸಾಮಾನ್ಯರ ಬದುಕು ಅರ್ಥವಾಗುವುದು. ಹೀಗಾಗಿ ಹೊಸ ಬಗೆಯ ಸ್ಥಳಗಳ ಆಯ್ಕೆ ಮಾಡಿ ನಿರ್ಧರಿಸಿ ಹೊರಟೆವು. ಸ್ಥಳೀಯ ಗೈಡ್‌ ಈರಣ್ಣ ಎಂಬುವವರನ್ನು ಜೊತೆ ಮಾಡಿಕೊಂಡೆವು.  ನಮ್ಮ ಪ್ರಯಾಣದ ಪಟ್ಟಿಯಲ್ಲಿ ಏನೇನೆಲ್ಲಾ ಇತ್ತೊ ಅವೆಲ್ಲಾ ಸಾಧ್ಯವಾಗದೇ ಇದ್ದರೂ ಹನುಮ ಪಾದದ ನೆತ್ತಿ ಮುಟ್ಟಿ, ತೆಪ್ಪದೊಂದಿಗೆ ಪಯಣಿಸಿ, ಸ್ಥಳೀಯ ಆಹಾರ ಸೇವನೆ, ಮದನಕೊತ್ತಲ ಮಂಟಪದಲಿ ಸೂರ್ಯಾಸ್ತದ ಸೊಬಗು ಕಣ್ತುಂಬಿಕೊಂಡೆವು. ಗಜ ಸ್ನಾನವೊಂದು ತಪ್ಪಿ ಹೋಯಿತು.

ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜಾಗ ವಿರೂಪಾಕ್ಷ ಮಂದಿರ! ಅದರ ಸನಿಹವೇ ಒಂದು ಹಳೆಯ ದೋಣಿ ಹೆಂಚಿನ ಮಠವಿದೆ. ಪಿನ್‌ ಹೋಲ್‌ ಕ್ಯಾಮರದಲ್ಲಿ ತಲೆಕೆಳಗಾದ ಛಾಯೆ ತೋರುತ್ತದಷ್ಟೇ ಆದರಿಲ್ಲಿ ನಿಜದ ಬಿಂಬ! ಪಿನ್‌ ಹೋಲ್‌ ಕ್ಯಾಮರದಲ್ಲಿ ಮಠದಿಂದ ಕಂಡ ಸ್ವಾಗತ ಗೋಪುರದ ಬಣ್ಣದ ಪ್ರತಿಬಿಂಬ ಇಂದಿಗೂ ಒಂದು ಸೋಜಿಗ! ಅಲ್ಲಿ ಹೋಗಿ ಬರುವವರ ಪ್ರತಿಬಿಂಬವೂ ಬಣ್ಣದಲ್ಲಿ. ಸಾಮಾನ್ಯವಾಗಿ ಯಾವ ಗೈಡೂ ಈ ಸ್ಥಳಗಳನ್ನೂ ಕಾಣಿಸುವುದಿಲ್ಲ. ಆತ ಕಾಣಿಸದೇ ಉಳಿದಿದ್ದು ನೀವು ಕಂಡರೆ ನಿಮ್ಮೊಳಗೊಂದು ಒಳನೋಟವಿದೆ ಎಂದೇ ಅರ್ಥ. ಬದುಕಿಗೊಂದು ಹೊಸ ಒಳನೋಟ ಪ್ರಾಪ್ತವಾದರೆ ಪ್ರವಾಸ ಸಾರ್ಥಕ.

ಹಂಪಿಯ ಹನುಮ ಪಾದದ ನೆತ್ತಿಯಿಂದ

ವಿಜಯ ವಿಠಲದ ಹಾದಿಯಲ್ಲೇ ಸಣ್ಣ ಗುಡ್ಡದ ತುದಿಯಲ್ಲಿ ಹನುಮ ಪಾದವಿದೆ. ವಿಜಯ ವಿಠಲ ಎರಡು ಕಿಲೋ ಮೀಟರ್‌ ಎಂಬ ಮೈಲಿಗಲ್ಲು ದಾಟಿ ಸ್ವಲ್ಪ ದೂರಕ್ಕೆ ಹೋಗಿ ಎಡಕ್ಕೆ ಹೊರಳಿ ಕಿಲೋ ಮೀಟರ್‌ ಹುಲುಸಾಗಿ ಬೆಳೆದ ಬಾಳೆ ತೋಟದಂಚಲ್ಲಿ ಸಾಗಿ ಕಟ್ಟಿಗೆ ಅಹಮದ್‌ ಖಾನ್‌ನ ಅರವಟ್ಟಿಗೆ ಬಳಿ ಮೇಲೇರುತ್ತಾ ಸಾಗಬೇಕು.   ನಡು ನಡುವೆ ಜೋಳ ಬೆಳೆದ ಕುರುಹುಗಳು, ಅನೇಕ ಗೋರಿಗಳು ಪಾಳು ಬಿದ್ದ ಮನೆಗಳ ಅವಶೇಷಗಳು ನಿಮಗೆ ಕಾಣಸಿಗುತ್ತದೆ. ಅನೇಕ ನೀರು ಸಂಗ್ರಹಕಗಳು, ಅಲ್ಲಲ್ಲಿ ಬೆಳೆದ ಕಳ್ಳಿ ಗಿಡಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಚ್ಚು ಕಡಿಮೆಯಾದರೆ ನೀವೇ ಗತಿಸುವಿರಿ ಅಂತಹ ಜಾಗ! ಮೇಲೇರಿದಂತೆ ಚಲಿಸುವ ಜಾಗವೂ ಕಡಿದಾಗುತ್ತಾ ಸಾಗುತ್ತದೆ. ದಿಗಂತಕ್ಕೆ ಕೈ ಚಾಚಿದಂತೆ ಇರುವ ಇದರ ನೆತ್ತಿ ಸವರಲು ಬಂಡೆಗಳ ನಡುವೆ ತೆವಳುತ್ತಾ ಸಾಗಬೇಕು. ಹೃದಯ ಬಡಿತ ಹೆಚ್ಚಿಸುವ ಜಾಗಗಳಲ್ಲಿ ಹೆಜ್ಜೆ ಹಾಕಬೇಕು. ವರ್ಟಿಗೋ ಇಲ್ಲದವರಷ್ಟೇ ಸುಲಭವಾಗಿ ಮೇಲೇರಬಲ್ಲರು. ಮೇಲೇರಿದಾಗ, ಅಲ್ಲಿ ನಿಮರ್ಮಿತವಾದ ಬೃಹತ್‌ ಪಾದವೊಂದು ಕಾಣಸಿಗುತ್ತದೆ. ಜೊತೆಗೊಂದು ಚಿಕ್ಕ ಮಂಟಪ ಇದರ ನೆತ್ತಿಯ ಮೇಲೆ. ಇಲ್ಲಿಂದ ಕೆಳಗಿಳಿದು ಮದನ ಕೊತ್ತಲ ಮಂಟಪದತ್ತ ಹೆಜ್ಜೆ ಹಾಕಿದೆವು.

ಮದನಕೊತ್ತಲ ಮಂಟಪವೂ ನಮ್ಮ ಪಟ್ಟಿಯಲ್ಲಿತ್ತು! ಹಂಪಿಗೆ ಬಂದವರು ಮದನಕೊತ್ತಲ ಮಂಟಪದ ಇಳಿ ಸಂಜೆಗೆ ಹೋಗದೇ ಇದ್ದರೆ ಹೇಗೆ? ಅದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹೊಸಪೇಟೆಯಿಂದ ಹಂಪಿಗೆ ಬರುವವರು ಹಂಪಿಗೆ ತಿರುಗುವಲ್ಲಿ ಸಿಕ್ಕ ಬೋರ್ಡ್‌ ಒಂದಕ್ಕೆ ಸಿಕ್ಕಿಸಿದ ಬೃಹತ್‌ ಚಿತ್ರ ನೋಡದೇ ಮುಂಬರಿಯಲಾರರು. ಅದುವೇ ಮದನಕೊತ್ತಲ ಮಂಟಪದ ಸೂರ್ಯಾಸ್ತ! ಅಪಾರ ಸೌಂದರ್ಯದ ಸೂರ್ಯಾಸ್ತವನ್ನು ಕಣ್ಣು ತುಂಬಿಕೊಳ್ಳಲು ನೀವು ಹರ ಸಾಹಸ ಪಡಬೇಕು. ಇಲ್ಲಿಗೆ ಪಯಣಿಸುವ ಅನುಭವವು ಅನನ್ಯ. ಈ ಮಟಂಪಕ್ಕೆ ತೆನಾಲಿ ಮಂಟಪವೆಂಬ ಇನ್ನೊಂದು ಹೆಸರು. ಈ ಹೆಸರು ಹೇಗೆ ಬಂತೆಂಬುದು ಮಾತ್ರ ತಿಳಿದಿಲ್ಲ. ಬನ್ನಿ ಮದನ ಕೊತ್ತಲವನ್ನೇರೋಣ.

ಮದನ ಕೊತ್ತಲದ ದಾರಿಯಲ್ಲಿ

ಗಜ ಶಾಲೆಯ ಬಲ ತುದಿಯ ರಂಗನಾಥ ದೇವಾಲಯದ ಸನಿಹ ದಾರಿಯಲ್ಲಿ ಅನತಿ ದೂರದವರೆಗೆ ನಿರ್ಜನ ದಾರಿಯಲ್ಲಿ ಸಾಗಬೇಕು. ಅದೊಂದು ಬೆದರಿಸುವ ನಿರ್ಜನ ದಾರಿ. ಎದುರಿಗೆ ಏರು ಗುಡ್ಡ. ದೂರದಲ್ಲಿ ಮಹಾನವಮಿ ದಿಬ್ಬ. ಒಂದಾನೊಂದು ಕಾಲದಲ್ಲಿ ದೊಡ್ಡ ದೇವಾಲಯ. ವಿದೇಶಿ ಮತ್ತು ಸ್ವದೇಶಿ ಆಕ್ರಮಣದ ತರುವಾಯ ಕೇವಲ ದಿಬ್ಬ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ!

ನೂರಾರು ಅವಶೇಷಗಳಡಿಯಲ್ಲಿ ನೆಟ್ಟನೋಟ. ಉದುದ್ದ ಮಲಗಿದ್ದ ವಹಿವಾಟಿನ ಖಾಲಿ ಅಂಗಡಿ ಸಾಲುಗಳು. ಕೃಷ್ಣ ಮತ್ತು ಅಚ್ಯುತರಾಯ ದೇವಾಲಯದ ಬೀದಿಗಳು ಅಚ್ಚರಿ ಮೂಡಿಸುತ್ತದೆ. ಇಷ್ಟೊಂದು ಅಗಲದ ಬೀದಿಯ ನೋಡಿದರೆ ಅವರ ಮುಂದಾಲೋಚನೆಗೆ ದೊಡ್ಡ ಸಲಾಮು. ಊರು ಎಲ್ಲಿಯವರೆಗೆ ಬೆಳೆಯುತ್ತದೆ ಎಂಬ ಅಂದಾಜು ಅವರ ತೀಕ್ಷ್ಣಮತಿಯ ದ್ಯೋತಕ!

ಗಜಶಾಲೆಯಿಂದ ಮುಂದಡಿ ಇಟ್ಟರೆ ಅಡಿಗಡಿಗೆ ಸಿಗುವ ಒಡೆದ ಮಡಿಕೆ ಚೂರುಗಳು. ಒಂಟಿಯಾಗಿ ಕಲ್ಲು ಮುಳ್ಳು ಕಂಟಿಗಳ ನಡುವೆ ಹುದುಗಿದ ಜೀವನೋತ್ಸಾಹದ ಹೆದ್ದಾರಿಗಳಾದ ದಾರಿಗಳನ್ನು ಕಂಡಾಗ ಕರಳು ಚುರುಕ್‌ ಎನ್ನುತ್ತದೆ. ವಿಷಾದದ ಒಣ ಬಿಸಿಲು ರಾಚುತ್ತದೆ. ಕಾಲದ ಕೈವಾಡಕ್ಕೆ ನಲುಗಿದ ಫಲವತ್ತತೆಯ ಭೂಮಿ. ಕಳಕೊಂಡ ಖಾಲಿತನ, ಹಳವಂಡಗಳ ಹದ್ದು ಮನದ ಮುಗಿಲಿನಲಿ!

ತಾಳಿಕೋಟೆ ಕದನದ ನಂತರ ಹಂಪಿಯ ಕನಸು ಕರಗುತ್ತಾ ನಿಧ ನಿಧಾನಕ್ಕೆ ಈ ಜಾಗಗಳನ್ನೆಲ್ಲಾ ತೊರೆದು ಜನ ಹೊಸ ಕನಸ ಬೆನ್ನಟ್ಟಿ ಹೊರಟರಿರಬೇಕು. ಇವೆಲ್ಲವ ಕಂಡಾಗ ವಸುಧೇಂದ್ರರ ತೇಜೋ-ತುಂಗಭದ್ರ ಕಾದಂಬರಿಯ ಮಹತ್ವಾಕಾಂಕ್ಷಿ ಅಹಮದ್‌ ಖಾನ್‌ ನೆನಪಿಗೆ ಬರುತ್ತಾನೆ. ಏನೋ ಆಗಲು ಹೋಗಿ ಏನೂ ಆಗದೆ ತುಂಗಾ ತೀರದಲ್ಲಿ ಒಂಟಿಯಾಗಿ ಉಳಿಯುತ್ತಾನೆ. ಜೊತೆಗೆ ಕಿವಿಯನ್ನೂ ಮತಾಂಧರಿಂದ ಕಳೆದುಕೊಳ್ಳುತ್ತಾನೆ.  ಆತ ದುಡ್ಡಿನಾಸೆಗೆ ತನ್ನೂರ ತೊರೆದಂತೆ ಇಲ್ಲಿನ ಜನ ಬಿಡಾರ ಕೊಡವಿ ಹೊರಟಿರಬೇಕು. ತನ್ನ ತನವ ತೊರೆದ ನದಿಯಂತೆ.

ಒಂದು ಕಾಲದಲ್ಲಿ ಅಪಾರ ಜನಸ್ತೋಮವನು ಕಟ್ಟಿಕೊಂಡ ಊರಿಗ ಪುಟಾಣಿ ಹಳ್ಳಿ. ಗುಡ್ಡದ ತುದಿಗಳಲ್ಲೂ ಮಡಿಕೆ ಕಂಡವನಿಗೆ ಎಂದೋ ಬಿಸುಟು ಹೋದವರ ತಾಪದ ಬಿಸಿ ತಟ್ಟುತ್ತದೆ. ಇಲ್ಲಿಯವರೆಗೆ ಆ ರಾಜ ಮಾಡಿಕೊಡುತ್ತಿದ್ದ ವ್ಯವಸ್ಥೆ ಅಚ್ಚರಿ ಹುಟ್ಟಿಸುತ್ತದೆ. ಗಜ ಶಾಲೆಯಿಂದ ಏನಿಲ್ಲವೆಂದರೂ ಎರಡು ಕಿಲೋ ಮೀಟರ್‌ಗೂ ಹೆಚ್ಚು ದೂರ ಕ್ರಮಿಸಬೇಕು.  ಗಜ ಶಾಲೆಯಿಂದ ಇಲ್ಲಿಯವರೆಗಿನ ದೂರವೇ ನಿಮ್ಮನ್ನು ದಂಗು ಬಡಿಸುತ್ತದೆ! ಈಗ ಮುಳ್ಳು ಕಂಟಿಗಳ ಒಳ ದಾರಿ. ಬೆಟ್ಟದಿಂದ ಇಳಿಬಿಟ್ಟಂತಹ ಇಳಿಜಾರು ಬಂಡೆಯನು ಭಾರಿ ಕಷ್ಟದಲಿ ಏರಬೇಕು. ಯಾರೋ ಪುಣ್ಯಾತ್ಮ ಇಲ್ಲಿ ಪುಟಾಣಿ ಮೆಟ್ಟಿಲು ನಿರ್ಮಿಸಿದ್ದಾನೆ! ಎಲ್ಲೆಲ್ಲೂ ದೈವ ಮತ್ತು ದೇವರುಗಳು. ನಡುವೆಲ್ಲೋ ದೊಡ್ಡ ಹನುಮಂತ ಮೂರ್ತಿ ಕೆತ್ತಿಟ್ಟಿದ್ದರು. ಒಂದಾನೊಂದು ಕಾಲದಲ್ಲಿ ದೇವಾಲಯ ಮತ್ತು ಮನೆಗಳ ಸಮುಚ್ಚಯವಿದ್ದಿರಬೇಕು. ಈಗ ಬಟಾ ಬಯಲು. ಅಲ್ಲಲ್ಲಿ ಮಂಟಪಗಳು ನಿದ್ರಿಸುವ ವಿರಾಮ ಪಡೆಯುವ ಸಣ್ಣ ಜಾಗಗಳನ್ನು ನೀವು ನೋಡಬಹುದು. ತೆನಾಲಿ ಮಂಟಪದ ಉತ್ತರ ದಿಕ್ಕಿಗೆ ಮಾತಂಗ ಪರ್ವತ ಪವಡಿಸಿತ್ತು. ಹಾವಿನ ಹೆಡೆಯಂತಹ ಬಂಡೆಯೊಂದು ಕಂಡಿತು. ಪ್ರಕೃತಿಯ ಅಚ್ಚರಿಯ ಮುಂದೆ ಉಳಿದಚ್ಚರಿಗಳು ಗೌಣ.

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ. ಇಲ್ಲಿ ಮೇಲೆರಿದರೆ ಹಂಪಿಯ ೩೬೦ ಡಿಗ್ರಿ ಕೋನದ ಸ್ಥಳಗಳು ನಿಚ್ಚಳ.

ಮದನಕೊತ್ತಳದ ಮುಸ್ಸಂಜೆ

ನೆತ್ತಿ ಹತ್ತಿ ಪುಳಕಗೊಂಡು ಸ್ವಲ್ಪ ವಿಶ್ರಮಿಸಿಕೊಂಡೆವು. ಮೇಲೇರಿ ಬಂದ ಗೈಡ್‌ ಸನಿಹದ ಕಡಿದಾದ ಬಂಡೆ ಏರಿದ. ಇಳಿಯುವಾಗಂತೂ ನಮಗೇ ಭಯವಾಯಿತು. ಸೂರ್ಯನನ್ನು ನುಂಗುವಂತೆ, ಯೋಗ ನಮಸ್ಕಾರದ ನಡುವೆ ಸೂರ್ಯನ ಸಿಲುಕಿಸಿ ಮುಂತಾದ ವಿವಿಧ ಭಂಗಿಯಲ್ಲಿ ಚಿತ್ರ ತೆಗೆದು ಖುಷಿ ಪಟ್ಟೆವು. ಸ್ವಲ್ಪ ಆಯ ತಪ್ಪಿದರೂ ಮೂಳೆಗಳೆಲ್ಲಾ ಪುಡಿ ಪುಡಿ.  ಮದನಕೊತ್ತಲ ಮಂಟಪದಲಿ ಮುಸ್ಸಂಜೆಯನು ಕಳೆದು, ಹಗಲು ಮುಗಿಯುವ ಮೊದಲೇ ಇಳಿಯತೊಡಗಿದೆವು. ಮದನ ಕೊತ್ತಲದ ಮುಸ್ಸಂಜೆ ಅನ್ಯಾದರ್ಶ. ಅಪರೂಪದ ಹಲವು ಚಿತ್ರಗಳು ನನ್ನ ಲ್ಯಾಪ್‌ಟಾಪ್‌ ಸೇರಿದವು.

ಮತ್ತದೇ ದಾರಿಯಲ್ಲಿ ಮುಳ್ಳು ಕಂಟಿಗಳ ನಡುವೆ  ಮುಂದುವರಿಯ ಬೇಕಿರುವುದರಿಂದ ಹಾಗೂ ಈ ದಾರಿಯಲ್ಲಿ ಕರಡಿ, ಚಿರತೆಗಳ ಹಾವಳಿ ಬಲು ಜೋರೆಂದು ಬೇಗನೆ ಇಳಿದೆವು.

ಚಕ್ರ ತೀರ್ಥದ ಸೆಳೆತ

ವಿರೂಪಾಕ್ಷ ಮಂದಿರದಿಂದ ನೇರ ಚಲಿಸಿ ತುಂಗೆಯ ತೀರದ ಲಿಂಗದ ಮುಂದಿರುವುದೇ ಚಕ್ರತೀರ್ಥ. ಇಲ್ಲಿನ ಸೆಳತವೇ ಅನನ್ಯ. ಇಲ್ಲಿಂದಲೇ ಆಚೆ ದಡಕ್ಕೆ ತೆಪ್ಪದಲ್ಲಿ ಬಿಡಲಾಗುತ್ತದೆ. ಆಚೆ ದಡದ ಚಂದ್ರಮೌಳೇಶ್ವರ ದೇವಾಲಯ ಮತ್ತು ಮಠಗಳನ್ನು ನೋಡಿ ಬಂದಿದ್ದು ಇಲ್ಲಿಂದಲೇ. ಅದೊಂದು ವಿಶಿಷ್ಟ ಕಥನ.

ಚಕ್ರತೀರ್ಥದಲ್ಲಿ ಮಿಂದೆದ್ದು ಬಂದು ಕೋದಂಡರಾಮನಿಗೆ ನಮಿಸಿ ಅಲ್ಲೇ ಎಡಕ್ಕೆ ಸಿಗುವ ಮೆದು ಇಡ್ಲಿ ಮತ್ತು ಹಸಿರು ಚಟ್ನಿ, ಬೋಂಡಾ ಉದರದ ಉಪಶಮನಕ್ಕೆ ಹೇಳಿ ಮಾಡಿಸಿದವಂತೆ ಅನ್ನಿಸಿದವು. ೧೦ರೊಳಗೆಲ್ಲಾ ಖಾಲಿ ಖಾಲಿ. ಅಲ್ಲಲ್ಲಿ ಚೌಕುಳಿ ವಯರ್‌ ಬುಟ್ಟಿ ಬಿಡಿಸಿ ಊಟಕ್ಕೆ ಕೂತ ಕಾರ್ಮಿಕರು ಗಮನ ಸೆಳೆಯುತ್ತಾರೆ.

ಕೋದಂಡ ರಾಮ, ಯಂತ್ರೋದ್ಧಾರಕ ಹನುಮ, ಕೋಟಿಲಿಂಗ, ಸೀತಾ ಸೆರಗು, ರಂಗನಾಥ, ಅಚ್ಯುತರಾಯ ಪೇಟೆ ಇತ್ಯಾದಿಗಳನ್ನು ದರ್ಶಿಸಿ ಹಳೆಯ ಹೆದ್ದಾರಿಗಳನ್ನು ಹಾಯಬಹುದು.

ಇಲ್ಲಿಂದಲೇ ಕಂಪ-ಭೂಪ ಮಾರ್ಗ ಪ್ರಾರಂಭವಾಗಿ ಸುಗ್ರಿವನ ಗುಹೆ ಹಾಯ್ದು ವಿಠಲ ದೇವಾಲಯದ ಹಿಂಬದಿಗೆ ಪುರಂದರ ಮಂಟಪದ ಬಾಜುವಲ್ಲೇ ಹಾದು ಹೋಗುತ್ತದೆ. ಬೆಳ್ಳಂಬೆಳಗ್ಗೆ ನಾಲ್ಕಕ್ಕೆ ಹೊರಟರೆ ೫ರ ಸುಮಾರಿಗೆ ಪುರಂದರ ಮಂಟಪದ ಸನಿಹವಿರುತ್ತೀರಿ. ಇಲ್ಲೊಬ್ಬಳು ಲಕ್ಷ್ಮೀ ಇಡ್ಲಿ, ವಡೆ, ಬಿಸಿ ಬಿಸಿ ಮೆಣಸಿನ ಬಜ್ಜಿಯನ್ನು ಬಯನಿ ಮರದ ನೆರಳಡಿ ಮಾರಾಟಕ್ಕೆ ನಿಂತಿರುತ್ತಾಳೆ. ಮುಂಜಾವಿಗೆ ಪುರಂದರ ಮಂಟಪದ ಸ್ವಚ್ಚಂದದ ಗಾಳಿ ಕುಡಿದು ಬಂದು ಮೆದು ಇಡ್ಲಿ ಮೆಲ್ಲುವ ಆ ಸುಖವೇ ಬೇರೆ. ಪುರಂದರ ಮಂಟಪದಿಂದ ಆಚೆಗೆ ತಲುಪಲು ನಿರ್ಮಿಸಿದ ೫೦೦ ವರ್ಷ ಹಳೆಯ ಸೇತುವೆಯುದ್ದಕ್ಕೂ ಕಣ್ಣು ಹಾಯಿಸಿ. ಹೊಸ ಮಿಂಚೊಂದು ಸಂಚಾರವಾಗುತ್ತದೆ. ಹಾಗೆಯೇ ಆಚೆ ಬದಿಯ ದೇವಾಲಯಕ್ಕೂ ಕಲ್ಲುಗಳ ಮೇಲೆ ಜಿಗಿಯುತ್ತಾ ಹೋಗಿ ಬರಬಹುದು. ಆಚೆ ದಡದಲ್ಲಿ ನೆಲಕ್ಕುರುಳಲು ತಯಾರಾದ ದೇವಾಲಯ ಹಾಗು ಇಬ್ಬರು ವೃದ್ಧರಿರುವ ಪುಟಾಣಿ ಮಠವಿದೆ.

ಇಲ್ಲಿನ ಗಾಳಿ, ನೀರಲ್ಲಿ ಒಂಟಿತನದ ಅಮಲು. ಇಲ್ಲಿಂದ ಮುಂದಡಿ ಇಟ್ಟರೆ ತಿರುಮಲ ದೇವಾಲಯ, ತುಲಾಭಾರ ಮಂಟಪ ಮತ್ತು ವಿಜಯ ವಿಠಲನ ಗುಡಿ ಎದುರಿಗಿರುತ್ತೀರಿ.

ಹೀಗೆ ಸಾಗಿದ ಅನನ್ಯ ದಾರಿಗುಂಟ ಸಿಗುವ ವಿಶಾಲ ಬೀದಿ ಮತ್ತು ಪ್ರತಿ ಬೀದಿಯ ಅಚ್ಚುಕಟ್ಟುತನ ನಮ್ಮ ಇಂದಿನ ವ್ಯವಸ್ಥೆಯನ್ನು ಗೇಲಿ ಮಾಡುವಂತಿದೆ. ತುಂಗಭದ್ರೆಯನ್ನು ತಿರುಗಿಸಿ ಹಂಪಿಗೆ ಸದಾ ನೀರಿನ ಕೊರತೆಯಾಗದಂತೆ ಕಾಪಾಡಿದುದು ಒಂದು ಅದ್ಭುತ ಇಂಜಿನಿಯರಿಂಗ್‌ ಸಾಹಸ. ಇಂದಿಗೂ ಇದೊಂದು ಮಿಸ್ಟರಿಯೇ!

ಮಾಲ್ಯವಂತದ ಮುಂಜಾನೆ

ಮಾಲ್ಯವಂತದ ಚುಬುಕು ಎಂಥವರನ್ನು ಆಕರ್ಷಿಸದೇ ಬಿಡದು. ದೇವಾಲಯದವರೆಗೆ ರಸ್ತೆ ಇದೆ. ಮುಂದೆ ಸಣ್ಣ ದಾರಿಯಲ್ಲಿ ಕತ್ತಲಲ್ಲಿ ನಡೆಯಬೇಕು.

ಮೇಲೇರಿದಾಗ ಕಾಣುವ ದೃಶ್ಯಾವಳಿಗಳಿಗೆ ನೀವು ಮಾರು ಹೋಗುವಿರಿ. ಒಂದೆಡೆ ಮಾಲ್ಯವಂತ ರಘುನಾಥ ದೇವಾಲಯ; ಇನ್ನೊಂದೆಡೆ ಗಜಶಾಲೆ ಕಾಣಸಿಗುತ್ತದೆ. ಮಾಲ್ಯವಂತದ ಬೆಳಗು ಹಾಗೂ ಸಂಜೆಗಳು ಪ್ರೇಯಸಿಯ ಬಿಸಿ ಅಪ್ಪುಗೆಯಂತೆ ಬೆಚ್ಚಗೆ! ಸದಾ ಹಂಪಿಗಾಗಿ ಹಾತೊರೆಯುವಂತೆ ಮಾಡುತ್ತದೆ!

ರಾಮನಿಲ್ಲಿಗೆ ವನವಾಸದ ಸಮಯಕ್ಕೆ ಬಂದಿರುವ ಕುರುಹಾಗಿ ರಘುನಾಥ ದೇವಾಲಯ ನಿರ್ಮಿಸಲಾಗಿದೆ. ಜೊತೆಗೊಂದು ವಿಶಿಷ್ಟ ಶಿವಾಲಯವಿದೆ. ಶಿವಾಲಯದೆದುರು ಪುಟಾಣಿ ಲಿಂಗಗಳನ್ನು ಕೆತ್ತಿಡಲಾಗಿದೆ. ಸೂರ್ಯೋದಯ ವೀಕ್ಷಣೆಗೆ ಅತ್ಯಂತ ಪ್ರಶಸ್ತವಾದ ಜಾಗವೇ ಮಾಲ್ಯವಂತ.

ಮಾಲ್ಯವಂತ ದೇವಾಲಯದಲ್ಲಿ ೨೪ ಗಂಟೆ ಭಜನೆ ಮತ್ತು ಪಾರಾಯಣ ನಡೆಯುತ್ತದೆ. ಅಲ್ಲಲ್ಲಿ ಅರಳುವ ನಾಗಸಂಪಿಗೆಯ ಘಮಲನ್ನು ಆಸ್ವಾದಿಸುತ್ತಾ ನೆತ್ತಿ ಏರಿದರೆ ಅಪೂರ್ವ ಅಹ್ಲಾದ.  ಇನ್ನೂ ಎತ್ತರಕೆ ಏರಿದರೆ ಹಂಪಿಯ ದಶ ದಿಕ್ಕುಗಳೂ ಕಾಣ ಸಿಗುತ್ತದೆ. ಪ್ರತಿವರ್ಷ ನಡೆಯುವ ಹಂಪಿಯ ಫಲ ಪುಷ್ಪ ಪೂಜೆಗೆ ಕಾತರನಾಗಿ ಕಾಯುತ್ತಾ ನಮ್ಮ ರೂಂನತ್ತ ನಡೆದೆವು.

ವರ್ಷ ವರ್ಷವೂ ಹಂಪಿಯನ್ನು ನೋಡುವ ಬಯಕೆ ಜ್ವರದಂತೆ ಏರುತ್ತಲೇ ಇದೆ. ಮತ್ತೆಂದು ಹಂಪಿಯ ಅಲೆಮಾರಿತನದ ಗಾಳಿಯನ್ನು ಹೀರುವೆನೆಂಬ ತವಕದಲ್ಲೇ ಕಳೆಯುತ್ತಿದೆ ದಿನಗಳು.

(ಫೋಟೋಗಳು: ಲೇಖಕರವು)

About The Author

ಶ್ರೀಧರ್‌ ಎಸ್.‌ ಸಿದ್ದಾಪುರ

ಶ್ರೀಧರ್‌ ಎಸ್.‌ ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ.  “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ