ಹೊಸ ವರ್ಷದ ಮೊದಲ ದಿನದಂದು ಸಿಡ್ನಿ ಆಕಾಶದಲ್ಲಿ ಮೋಡಗಳು, ಸಣ್ಣನೆ ಮಳೆ, ಚಳಿ. ಸಮುದ್ರ ಭುಸುಗುಡುತ್ತಿತ್ತು. ಅಲೆಗಳ ರಭಸವನ್ನು ನೋಡಿದಾಗ ಮನುಷ್ಯರು ಮಾಡಿಕೊಂಡಿದ್ದ ಹಿಂದಿನ ದಿನದ ಪಾರ್ಟಿಯ ಗಮ್ಮತ್ತು ಅವಕ್ಕೆ ಇಷ್ಟವಾಗಲಿಲ್ಲವೇನೋ ಎಂಬಂತಿತ್ತು. ಅಲೆಗಳ ಹೊರಳಾಟ ಯಾಕೋ ನನ್ನಲ್ಲಿ ದುಃಖ ಉಕ್ಕಿಸಿತ್ತು. ನಗರದ ಪೂರ್ವ ತೀರದಲ್ಲಿರುವ ಸುಂದರ ಸಮುದ್ರತೀರದ ಸುಮಾರು ಮೂವತ್ತಕ್ಕೂ ಹೆಚ್ಚು ಬೀಚ್‌ಗಳನ್ನ ಮುಚ್ಚಿದ್ದರು. ಹೊಸವರ್ಷದ ಆಗಮನವನ್ನು ಅತಿಯಾಗೆ ಆಚರಿಸಲು ಹೋಗಿ ಹಲವಾರು ಕಡೆ ಸಮುದ್ರಕ್ಕಿಳಿದ್ದಿದ್ದ ಜನರು ಆಪತ್ತಿಗೀಡಾಗಿದ್ದು ವರದಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಕತೆಗಳ ಒಳಗೆ ನಾವು, ನಮ್ಮೊಳಗೆ ಕಥೆಗಳು. ಕ್ಯಾಲೆಂಡರ್ ವರ್ಷ ಬದಲಾಯಿತು, ಕಥೆಗಳು ಮುಂದುವರೆದಿವೆ.
ಹೊಸ ವರ್ಷ ೨೦೨೬ ರ ಶುಭಾಶಯಗಳು.
ಹೊಸ ವರ್ಷದ ಹಿಂದಿನ ರಾತ್ರಿ ೩೧ ರಂದು ಸಿಡ್ನಿ ನಗರದ Harbour Bridge ಸುತ್ತಮುತ್ತ ರಾಶಿರಾಶಿ ಜನ. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಬ್ರಿಡ್ಜ್ ಮೇಲೆ, ಅದರ ಸುತ್ತಲೂ ನಾನಾ ರೀತಿಯ fireworks ಶೋ ನಡೆಯಲಿತ್ತು. ಈ ರೀತಿಯ ಫೈರ್ವರ್ಕ್ಸ್ ಶೋ ಶುರುವಾಗಿದ್ದೆ ಸಿಡ್ನಿ ನಗರದಲ್ಲಿ. ಹಾರ್ಬರ್ ಬ್ರಿಡ್ಜ್ ಇರುವುದರಿಂದ, ಅದರ ಸುತ್ತಲೂ ನಡೆಯುವ ಈ ಬೆಳಕಿನ ಓಕುಳಿಯಿಂದ ಈ ಶೋಗೆ ವಿಶೇಷ ಕಳೆ ಬಂದಿದೆ. ಇದೆ ರೀತಿ ಫೈರ್ವರ್ಕ್ಸ್ ಶೋ ಆಸ್ಟ್ರೇಲಿಯಾದ ಎಲ್ಲಾ ಪ್ರಮುಖ ನಗರಗಳಲ್ಲಿ ನಡೆಯುತ್ತವೆ. ಆದರೆ ಅತ್ಯಂತ ದೊಡ್ಡದು, ಆಕರ್ಷಕವಾದದ್ದು, ಮತ್ತು ಸುಂದರವಾದದ್ದು ಈ ಶೋ – ಸಿಡ್ನಿ ನಗರದ ಹಾರ್ಬರ್ ಬ್ರಿಡ್ಜ್ ಫೈರ್ವರ್ಕ್ಸ್.
ಮಧ್ಯರಾತ್ರಿ ೧೨ ಗಂಟೆಗೂ ಮೊದಲು ಒಂಭತ್ತು ಗಂಟೆಗೆ ಕಿರಿ ಗಾತ್ರದ ಶೋ ಇದೆ. ಇದನ್ನು ನಾನು ೨೦೦೧ ರಲ್ಲಿ ನೋಡಿದ್ದೆ. ನಾವೊಂದಷ್ಟು ಭಾರತೀಯ ವಿದ್ಯಾರ್ಥಿಗಳು ಗುಂಪಾಗಿ ವಲೊಂಗೊಂಗ್‌ನಿಂದ ಬಂದು, ಮುಂಚಿತವಾಗೇ ಜಾಗ ಹಿಡಿದುಕೊಂಡು ರಂಗುರಂಗಿನ ಫೈರ್‌ವರ್ಕ್ಸ್ ಶೋ ನೋಡಿ ಅಬ್ಬಾ ಎಂದು ಉದ್ಗರಿಸಿ ನಿಬ್ಬೆರಗಾಗಿದ್ದೆವು. ಆ ನಂತರವೂ ವಾಪಾಸ್ ವಲೊಂಗಾಂಗ್‌ಗೆ ಹೋಗಿ ಮಧ್ಯರಾತ್ರಿ ಹನ್ನೆರಡರ ಶೋವನ್ನು ಟೀವೀಯಲ್ಲಿ ನೋಡಿದ್ದು ನೆನಪಿದೆ.

ಈ ಬಾರಿ ೨೦೨೫ ರ ಡಿಸೆಂಬರ್ ೩೧ ರಂದು ಒಂಭತ್ತು ಗಂಟೆಯ ಶೋ ನೋಡಲು ನಾನು, ನನ್ನ ಗಂಡ ಹೋಗಿ ಮೊದಲು ಬ್ರಿಡ್ಜ್ ಪಕ್ಕದಲ್ಲಿ ಆ ಕಡೆ ಈ ಕಡೆ ಎಲ್ಲಾ ಕಡೆ ಸುತ್ತಾಡಿದೆವು. ಸೇತುವೆ ಕಾಣುವಂತೆ ಒಳ್ಳೆಯ ಒಂದು ಜಾಗ ಹಿಡಿಯುವುದು ನಮ್ಮದಷ್ಟೇ ಅಲ್ಲ, ಅಲ್ಲಿ ಎಲ್ಲೆಲ್ಲೂ ನೆರೆದಿದ್ದ ಮಿಲಿಯನ್ ಗಟ್ಟಲೆ ಜನರೆಲ್ಲರದ್ದೂ ಅದೇ ಗುರಿ. ಎರಡು ಪಾದ, ಕಾಲೂರಲು ಬೇಕಿದ್ದ ಜಾಗಕ್ಕಾಗಿ ಅದೆಷ್ಟು ಅಲೆದಾಟ! ಹಾಗೆ ಹುಡುಕಾಡುತ್ತಿದ್ದವರು ಹೆಚ್ಚಿನವರು ಹೊರಗಿನಿಂದ ಬಂದಿದ್ದವರು. ಪ್ರವಾಸಿಗರು, ವಿದ್ಯಾರ್ಥಿಗಳು, ಸಿಡ್ನಿಗೆ ಹೊಸದಾಗಿ ಬಂದವರು, ಹನಿಮೂನ್‌ಗೆಂದು ಬಂದವರು … ಅದೆಷ್ಟು ಕಥೆಗಳಿದ್ದವೋ ಅವರಲ್ಲಿ, ಆ ಹುಡುಕಾಟದಲ್ಲಿ.
ಎಲ್ಲರನ್ನೂ ನೋಡುತ್ತಾ, ಕಾಲೆಳೆದುಕೊಂಡು ಹೋಗಿ ಸೇತುವೆಯ ಪಕ್ಕ ನಿಂತು ನೋಡಿದರೆ ನೂರಕ್ಕೆ ತೊಂಭತ್ತು ಭಾಗ ಜನರು ಏಷ್ಯನ್ನರು. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಭಾರತ, ದ್ವೀಪದೇಶಗಳವರು, ಚೈನೀಸ್, ಎಲ್ಲಾರೂ … ಅಪರೂಪಕ್ಕೆ ದಕ್ಷಿಣ ಅಮೆರಿಕನ್ನರು (ಸ್ಪ್ಯಾನಿಷ್ ಮಾತನಾಡುತ್ತಿದ್ದರು), ಅಲ್ಲೊಂದು ಇಲ್ಲೊಂದು ಆಫ್ರಿಕನ್ ಮುಖ … ಪುಟ್ಟ ಗುಂಪು, ದೊಡ್ಡ ಗುಂಪು, ರಗ್ ಹಾಸಿಕೊಂಡು ತಿಂಡಿ ತಿಂದಿದ್ದೂ, ಕಾರ್ಡ್ಸ್ ಗೇಮ್ ಆಡಿದ್ದೂ, ಹಾಡು ಹೇಳಿದ್ದು, ಜೋಕ್ಸ್ ಹಂಚಿಕೊಂಡು ನಗಾಡಿದ್ದು … ಅಷ್ಟೆಲ್ಲ ಜನಸಾಗರದಲ್ಲಿದ್ದ ವೈವಿಧ್ಯತೆಗಳನ್ನು ನೋಡುತ್ತಾ ಕಾಲ ಸರಿದಿದ್ದೆ ತಿಳಿಯಲಿಲ್ಲ.
ನನ್ನ ಪಕ್ಕ ನೀಟಾಗಿ ಒಂದು ರಗ್ ಹಾಕಿ ಕೂತಿದ್ದದ್ದು ಅಫ್ಘಾನಿಸ್ತಾನದ ಜೋಡಿ. ಹೆಂಡತಿ ಸಿಡ್ನಿಗೆ ಬಂದು ನಾಲ್ಕು ವರ್ಷಗಳಾಯಿತಂತೆ. ಸುಮಾರಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು. ಅವಳ ಗಂಡ ಬಂದು ಒಂದು ವರ್ಷ, ಅವನಿಗೆ ಅಷ್ಟಷ್ಟು ಅರ್ಥವಾಗುತ್ತಿತ್ತು. ನಮ್ಮ ಮಾತುಕತೆಯನ್ನು ಹೆಂಡತಿ ಭಾಷಾಂತರಿಸಿ ಅವನಿಗೆ ಹೇಳುತ್ತಿದ್ದಳು. ಇತ್ತಕಡೆ ಇದ್ದದ್ದು ಎರಡು ಉತ್ತರ ಭಾರತೀಯ ಹನಿಮೂನ್ ಜೋಡಿ. ಅವರಲ್ಲಿ ಒಬ್ಬ ಗಂಡ ಚಿಕ್ಕದೊಂದು tripod ನಿಲ್ಲಿಸಿಕೊಂಡು, ಫೋನ್ ಸಿಗಿಸಿ ಹನ್ನೆರಡು ಗಂಟೆಯ fireworks ಶೋ ರೆಕಾರ್ಡ್ ಮಾಡಲು ಸನ್ನದ್ಧನಾಗಿದ್ದ. ಯಾವಾಗ ಅಂದರೆ ಮಧ್ಯಾಹ್ನ ನಾಲ್ಕು ಗಂಟೆಯಿಂದ! ಇದಕ್ಕಾಗೇ ತಾನು, ತನ್ನ ಹೆಂಡತಿ ಇಲ್ಲಿಗೆ ಬಂದದ್ದು, ಅಂದ. ಅವನ ಪಕ್ಕದಲ್ಲಿದ್ದ ಇನ್ನೊಂದು ಜೋಡಿಯ ಗಂಡ ಹೇಳಿದ್ದು ಬೇರೊಂದು ಕಥೆ. ಮದುವೆಗೆ ಮುಂಚೆಯೇ ಅವನ ಹೆಂಡತಿ ಆಗುವವಳು ಸಿಡ್ನಿಯಲ್ಲಿ ಹನಿಮೂನ್ ಎಂದು ತೀರ್ಮಾನಿಸಿದ್ದಳಂತೆ. ಒಂಭತ್ತು ಗಂಟೆಯ ಮಿನಿ ಶೋ ನೋಡುವಾಗ ನನ್ನ ಮುಂದೆ ನಿಂತಿದ್ದ ಅವಳು ವಾವ್ ವಾವ್ ಎನ್ನುತ್ತಾ, ಹಿಂದೆ ತಿರುಗಿ ಗಂಡನನ್ನು ನೋಡುತ್ತಾ ಐ ಲವ್ ಯೂ, ಥಾಂಕ್ಯೂ ಎನ್ನುತ್ತಿದ್ದಳು. ಕಣ್ಣಲ್ಲಿ ನೀರು. ಒಂಭತ್ತು ಗಂಟೆ ಶೋಗೆ ಹೀಗಾದರೆ ಇನ್ನು ಹನ್ನೆರಡು ಗಂಟೆಯ ವಿಶ್ವಪ್ರಸಿದ್ಧಿಯಾದ ಭರ್ಜರಿ ಶೋ ನೋಡುವಾಗ ಇವಳ ಪ್ರತಿಕ್ರಿಯೆ ಏನಿರಬಹುದು ಎಂದು ಕುತೂಹಲ ಮೂಡಿತ್ತು.
ನಾನು ಬಹಳ ಹಿಂದೆ Stories Lives Tell ಎನ್ನುವ ಪುಸ್ತಕವನ್ನು ಬಹಳ ಹಚ್ಚಿಕೊಂಡಿದ್ದೆ. ಆ ಪುಸ್ತಕದ ಕರ್ತೃಗಳು Carol Witherell ಮತ್ತು Nel Noddings. ಸ್ಟೋರಿ ಟೆಲ್ಲಿಂಗ್ ಎನ್ನುವ ಅಧ್ಯಯನಪೂರ್ವಕ ವಿಧಾನವನ್ನು ಅನುಸರಿಸಿ ರಿಸರ್ಚ್ ಮಾಡುವುದರ ಬಗ್ಗೆ ಆ ಪುಸ್ತಕವಿತ್ತು. ಅಂದರೆ ನಮ್ಮೆಲ್ಲರ ಜೀವನ, ಬದುಕು, ಕೆಲಸ, ಸಂಸಾರ ಎಲ್ಲವೂ ಸ್ಟೋರೀಸ್. ಅವಲ್ಲಿ ನಾವು, ನಮ್ಮೊಳಗೆ ಅವು.

ಇದು ನನಗೆ ನೆನಪಿಗೆ ಬಂದದ್ದು Bondi ಬೀಚ್ ಗೆ ಹೋಗಿ ಅಲ್ಲಿ ಮೂರು ವಾರಗಳ ಹಿಂದೆ ನಡೆದಿದ್ದ ಶೂಟಿಂಗ್ ಸ್ಥಳವನ್ನು ನೋಡಿದಾಗ. ಅಲ್ಲೂ ಕೂಡ ನೂರಾರು ಜನರು, ಘಟನೆಯ ವಿವರಗಳನ್ನು ಹೇಳುವವರು, ಕೇಳುವವರು, ಪುಟ್ಟ ಹುಡುಗಿ ಮಾಟಿಲ್ದ ಫೋಟೋ ನೋಡಿ ಕಣ್ಣೀರಿಟ್ಟವರು, ಶೂಟಿಂಗ್ ನಡೆಯುವ ಮುಂಚೆ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದ ಪಾರ್ಕ್ ಕಡೆ ದೀರ್ಘ ನೋಟ, ಅಲ್ಲೇ ಇದ್ದ ಜ್ಯುಯಿಷ್ ಸಮುದಾಯದ ಹಿರಿಯರು, ಅವರು ಹರಸುತ್ತಿದ್ದದ್ದು, ಡೊನೇಷನ್ ಡಬ್ಬಗಳು, ಎಲ್ಲಾ ಕಡೆ ಪೊಲೀಸರು, ಗನ್ ಹಿಡಿದ ವಿಶೇಷ ಪಡೆಯ ಪೊಲೀಸರು, ಆಂಬುಲೆನ್ಸ್ …. ಎಲ್ಲವೂ ಅವುಗಳದ್ದೇ ಆದ ಕಥೆಗಳನ್ನು ಹೇಳುತ್ತಿದ್ದವು. ಅದೆಷ್ಟೋ ಗತಕಾಲದ, ಅಂತರಾಳದಲ್ಲಿ ಮಡುಗಟ್ಟಿದ್ದ ದುಃಖವೆಲ್ಲವೂ ಈಗ Bondi ಬೀಚ್ ನಲ್ಲಿ ಕೆರೆ ಬದು ಹರಿದು ಹರಿಯುತ್ತಿತ್ತು.
ಹೊಸ ವರ್ಷದ ಮೊದಲ ದಿನದಂದು ಸಿಡ್ನಿ ಆಕಾಶದಲ್ಲಿ ಮೋಡಗಳು, ಸಣ್ಣನೆ ಮಳೆ, ಚಳಿ. ಸಮುದ್ರ ಭುಸುಗುಡುತ್ತಿತ್ತು. ಅಲೆಗಳ ರಭಸವನ್ನು ನೋಡಿದಾಗ ಮನುಷ್ಯರು ಮಾಡಿಕೊಂಡಿದ್ದ ಹಿಂದಿನ ದಿನದ ಪಾರ್ಟಿಯ ಗಮ್ಮತ್ತು ಅವಕ್ಕೆ ಇಷ್ಟವಾಗಲಿಲ್ಲವೇನೋ ಎಂಬಂತಿತ್ತು. ಅಲೆಗಳ ಹೊರಳಾಟ ಯಾಕೋ ನನ್ನಲ್ಲಿ ದುಃಖ ಉಕ್ಕಿಸಿತ್ತು.

ನಗರದ ಪೂರ್ವ ತೀರದಲ್ಲಿರುವ ಸುಂದರ ಸಮುದ್ರತೀರದ ಸುಮಾರು ಮೂವತ್ತಕ್ಕೂ ಹೆಚ್ಚು ಬೀಚ್‌ಗಳನ್ನ ಮುಚ್ಚಿದ್ದರು. ಹೊಸವರ್ಷದ ಆಗಮನವನ್ನು ಅತಿಯಾಗೆ ಆಚರಿಸಲು ಹೋಗಿ ಹಲವಾರು ಕಡೆ ಸಮುದ್ರಕ್ಕಿಳಿದ್ದಿದ್ದ ಜನರು ಆಪತ್ತಿಗೀಡಾಗಿದ್ದು ವರದಿಯಾಗಿತ್ತು.
ನಾವಿದ್ದ ಕಡೆ ಬೀಚಿನಲ್ಲಿ ಮೂವರು ನಾಪತ್ತೆಯಾಗಿ, ಹುಡುಕಾಟದ ನಂತರ ಇಬ್ಬರ ದೇಹಗಳು ಪತ್ತೆಯಾಗಿದ್ದು ಅದು ದೊಡ್ಡ ಸುದ್ದಿಯಾಗಿತ್ತು. ಮೂರನೇ ವ್ಯಕ್ತಿಗಾಗಿ ಸತತ ಹುಡುಕಾಟ ನಡೆದಿತ್ತು. ಆಕಾಶದಲ್ಲಿ ಲೈಫ್ ಸೇವರ್ಸ್ ಪಡೆಯ ಹೆಲಿಕಾಪ್ಟರ್, ಕೆಳಗೆ ಸಮುದ್ರತೀರದಲ್ಲಿ ಪೊಲೀಸ್ ಬೋಟ್, ಹಲವಾರು ಡೈವರ್ಸ್ ಮತ್ತಿತರ ರಕ್ಷಣಾ ದಳದವರು … ಈ ಇಡೀ ಹುಡುಕಾಟದ ಪ್ರಯತ್ನ ಅನೇಕರಲ್ಲಿ ಕುತೂಹಲ ಹುಟ್ಟಿಸಿ, ಅದು ಮತ್ತಷ್ಟು ಜನರನ್ನು ಸೇರಿಸಿತ್ತು. ಕಡೆಗೆ ಆ ಮೂರನೇ ವ್ಯಕ್ತಿ ಸಿಗಲಿಲ್ಲ ಎಂದು ತೋರುತ್ತದೆ. ಆ ವ್ಯಕ್ತಿಗಳ ವಿವರಗಳು ಇನ್ನೂ ಬಹಿರಂಗವಾಗಿರಲಿಲ್ಲ. ಯಾರವರು, ಎಲ್ಲಿಂದ ಬಂದವರು, ವರ್ಷದ ಮೊದಲ ದಿನವೇ ಸಾಯುವ ವಿಧಿಬರಹ ಎಂತಹದು, ಇವೆಲ್ಲಾ ಕಾಡುವ ಕಥೆಗಳು.

ಇಂದು ಇವು ನಮಗೆ ಹೊಸ ಕಥೆಗಳು. ವಾರ ಕಳೆದ ನಂತರ ಇಲ್ಲಿಯ ಸ್ಥಳೀಯ ಜನರಿಗೆ ಅವು ಹಳೆಯದಾಗುವ ವಿಷಯಗಳು. ಹಳೆಯದಾಗಲೇ ಬೇಕು. ಈ ಕಥೆಗಳು ಮಾಸಬೇಕು. ಆಗಲೇ ಹೊಸ ಕಥೆಗಳಿಗೆ ಅನುವು. ಅವು ಹೊಳೆಯುತ್ತವೆ. ಹಾಗೆಯೇ ಹಳೆಯದಾಗುತ್ತೆ. ಹಳೆ ಬೇರು, ಹೊಸ ಚಿಗುರು. ಅವೇ ನಾವು, ನಮ್ಮ ಜೀವನ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

