ಗೆಳೆಯರ ಪರಿಚಯದ ಮೊದಲನೇ ಭೇಟಿಯಲ್ಲೇ ಅವರು ಒಬ್ಬ ಬರಹಗಾರರು ಎಂದು ತಿಳಿಯಿತು. ಆಗಲೇ ಸುಮಾರು ಕತೆಗಳು ಮತ್ತು ಹಾಸ್ಯ ಲೇಖನ ಬರೆದಿದ್ದರು. ಸುದ್ದಿ ಹಾಗೇ ನನ್ನ ಬರವಣಿಗೆಯತ್ತ ತಿರುಗಿತು. ಒಂದೋ ಎರಡೋ ಕತೆ ಬರೆದಿರುವ ಸಂಗತಿಯನ್ನು ಕೊಂಚ ನಾಚಿಕೆಯಿಂದ ಹೇಳಿಕೊಂಡೆ. ಬರಹಗಾರರಿಗೆ ಮುಖೇಡಿತನ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಅನುಭವವಾಗಿತ್ತು. ಮತ್ತು ನನಗಂತೂ ಈಗಲೂ ಅದು ಮೆದುಳಿನ ಮೇಲಿನ ಸ್ತರದಲ್ಲಿ ಅಂಟಿಕೊಂಡು ಬಿಟ್ಟಿದೆ! ಮಾತಿನ ಮಧ್ಯೆ ಅವರು ಮಿಡಲ್ ವಿಷಯ ತೆಗೆದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೩ನೇ ಬರಹ ನಿಮ್ಮ ಓದಿಗೆ
ಹಿಂದಿನ ಸಂಚಿಕೆಯಲ್ಲಿ ಹೀಗೆ ಮುಗಿಸಿದ್ದೆ…
ಬಹುಶಃ ಇದೇ ಸಮಯ ಅಂತ ಕಾಣುತ್ತೆ. ಬೇರೆ ಡಿಪಾರ್ಟ್ಮೆಂಟ್ನಿಂದ ಒಬ್ಬರು ಇಂಜಿನಿಯರು ನಮ್ಮ ಡಿಪಾರ್ಟ್ಮೆಂಟ್ಗೆ ವರ್ಗ ಆಗಿ ಬಂದರು.
ಯಾವಾಗಲೂ ನನ್ನ ಸುತ್ತ ಜನ ತುಂಬಿ ಕೂತಿರೋದು ನೋಡಿದರು. ಜನ ಇಲ್ಲದೇ ಇದ್ದಾಗ ಏನೋ ಗೀಚುತ್ತಾ ಕುಳಿತಿರೋದು ಕಂಡರು. ಗುಂಪು ಸೇರಿಸಿಕೊಂಡು ಅದೇನು ಮಾಡ್ತಾನೆ ಅನಿಸಿರಬೇಕು. ಅದಕ್ಕಿಂತ ಹೆಚ್ಚಾಗಿ ಪೇಪರ್ ಪೇರಿಸಿಕೊಂಡು ಉದ್ದು ಉದ್ದ ಗೀಚ್ತಾನೆ ಅದೇನು ಎನ್ನುವ ಕುತೂಹಲ ಹುಟ್ಟಿರಬೇಕು. ಹಾಗೇ ನಾನು ಏನು ಎತ್ತ ತಿಳಿದುಕೊಂಡಿರಬೇಕು..(ಇದು ಬರೀ ನನ್ನ ಊಹೆ ಅಷ್ಟೇ)…
ಒಂದು ನಾಲ್ಕೈದು ಸಲ ನನ್ನ ಕೊಠಡಿಯಿಂದ ಆಚೆ ನನ್ನನ್ನು ನೋಡಿ ಇವಾಗ ಇವನನ್ನು ಮಾತಾಡಿಸಬಹುದು ಅಂತ ನಿರ್ಧರಿಸಿ ಒಳಗೆ ಬಂದರು (*ಇದೂ ಸಹ ಬರೀ ನನ್ನ ಊಹೆ ಅಷ್ಟೇ)…
ಎದುರಿದ್ದ ಖುರ್ಚಿ ಪಕ್ಕ ನಿಂತರು.
… ಡಿಸ್ಟರ್ಬ್ ಆಯ್ತಾ? ಎಂದರು. ಏನೋ ಗೀಚುತ್ತಾ ಇದ್ದವನು ತಲೆ ಎತ್ತಿ ನೋಡಿದೆ. ಬನ್ನಿ ಕೂತುಕಳಿ ಡಿಸ್ಟರ್ಬ್ ಏನು ಬಂತು… ಅಂದೆ.
ಬಹುಶಃ ಅವರ ಜತೆ ಆದ ಅವತ್ತಿನ ಭೇಟಿ ನನ್ನ ಮುಂದಿನ ಜೀವನದ ಬಹು ಮುಖ್ಯ ತಿರುವಿಗೆ ಕಾರಣ ಆಯಿತು ಅಂತ ಈಗ ನಲವತ್ತು ವರ್ಷದ ನಂತರ ಹಿಂದಕ್ಕೆ ತಿರುಗಿ ನೋಡಿದರೆ ಅನಿಸಿತು….
ಮುಂದಕ್ಕೆ…
ಎದುರು ಬಂದು ಕೂತರು ಅಂದೆ. ಅವರ ಸಂಗಡ ನನ್ನ ಮಾತುಕತೆ ಅಪರಿಚಿತರ ಸಂಗಡ ಮೊದಲನೇ ಭೇಟಿಯಲ್ಲಿ ಹೇಗೆ ಆಗುತ್ತದೆಯೋ ಅದಕ್ಕಿಂತ ಉತ್ತಮವಾಗೇ ಆಯಿತು ಎಂದು ಹೇಳಬೇಕು. ಅವರ ಜತೆ ಆಡಿದ ಮಾತುಕತೆ ವಿವರಿಸುವ ಮೊದಲು ಕತೆಯನ್ನು ಸ್ವಲ್ಪ ಪಕ್ಕಕ್ಕೆ ಎಳೆದುಕೊಂಡು ಹೋಗುತ್ತಾ ಇದ್ದೇನೆ, ಸ್ವಲ್ಪ ಇದನ್ನು ಓದಿಕೊಳ್ಳಿ ಮತ್ತು ಡಿವಿಏಷನ್ಗೆ ಕೊಂಚ ರೆಡಿ ಮಾಡ್ಕೊಳಿ.
ಪ್ರಜಾವಾಣಿ ಪತ್ರಿಕೆಯಲ್ಲಿ ವಾರಕ್ಕೆ ಐದಾರು ದಿವಸ ಒಂದು ನವಿರು ಭಾವದ ನಗೆ ಲೇಖನ ಬರುತ್ತಿತ್ತು. ಇದು ಭಾನುವಾರದ ನಗೆ ಬರಹಗಳಿಗಿಂತ ವಿಶಿಷ್ಟವಾಗಿತ್ತು. ಪ್ರಜಾವಾಣಿ ಪತ್ರಿಕೆಯಲ್ಲಿ ಮಾತ್ರ ಇಂತಹ ಲೇಖನಗಳು ಸಂಪಾದಕೀಯ ಪುಟದಲ್ಲಿ ಬರುತ್ತಿತ್ತು. ಇದರ ಹಿನ್ನೆಲೆ ಏನು ಅಂದರೆ ಪ್ರಜಾವಾಣಿಯಲ್ಲಿ ಇಂತಹ ಲೇಖನಗಳಿಗೆ ಶುರು ಹಚ್ಚಿದ್ದು ಲಂಕೇಶರ ಆರಂಭಿಕ ಅರೆ ಹಾಸ್ಯ, ಅರೆ ವಿಡಂಬನೆ, ಅರೆ ವ್ಯಂಗ್ಯ… ಇವೆಲ್ಲಾ ಸೇರಿದ್ದ ಬರಹ. ಲಂಕೇಶ್ ಆಗ ತಾನೇ ಅವರ ಲೆಕ್ಚರರ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ಇನ್ನೂ ಲಂಕೇಶ್ ಪತ್ರಿಕೆ ಹುಟ್ಟಿರಲಿಲ್ಲ. ಈ ಮಧ್ಯಂತರ ಅವಧಿಯಲ್ಲಿ ಲಂಕೇಶರಿಗೆ ವಾರಕ್ಕೆ ಒಮ್ಮೆ ಇಂತಹ ಲೇಖನ ಬರೆಯಲು ಸಂಪಾದಕ ಶ್ರೀ ವೈಯೆನ್ಕೆ ಅವಕಾಶ ಒದಗಿಸಿದ್ದರು. ಆಗಿನ ರಾಜಕೀಯದ ಇಬ್ಬರು ವರ್ಣರಂಜಿತ ನಾಯಕರುಗಳಾದ ಬಂಗಾರಪ್ಪ ಮತ್ತು ಗುಂಡೂರಾಯರು ಲಂಕೇಶರ ಪೆನ್ನಿನ ಮೂಲಕ ಬಂ ಮತ್ತು ಗುಂ ಗಳಾಗಿ ಈ ವಿಡಂಬನೆಗಳ ಪ್ರಮುಖರು ಆಗಿದ್ದರು. ವಾರಕ್ಕೆ ಒಂದು ಅಥವಾ ಎರಡು ಲೇಖನಗಳು ಹೀಗೆ ಪ್ರಕಟವಾಗುತ್ತಿತ್ತು. ಅತ್ಯಂತ ಜನಪ್ರಿಯವೂ ಸಹ ಆಗಿತ್ತು ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಈ ಬಂ ಗುಂ ಲೇಖನಗಳು ಪ್ರವೇಶ ಮಾಡಿದ್ದು ಹೊಸ ನವಿರು ಗಾಲಿಗಾಳಿ ಬೀಸಿದ ಅನುಭವ ಕೊಟ್ಟಿತ್ತು. ಕೆಲವು ಲೇಖನಗಳು ಬಂದ ನಂತರ ಲಂಕೇಶ್ ಪ್ರಜಾವಾಣಿಗೆ ಬರೆಯುವುದು ನಿಲ್ಲಿಸಿದರು. ಪತ್ರಿಕೆ ಆಗಲೇ ಇಂತಹ ಲಘು ಧಾಟಿಯ ಲೇಖನ ಶುರು ಮಾಡಿದ್ದರಿಂದ ಅದನ್ನು ಮುಂದುವರೆಸಲು ತೀರ್ಮಾನಿಸಿತು. ಪ್ಯಾಟರ್ನ್ ಬದಲಾವಣೆ ಆಗಿ ಹಾಸ್ಯದ ಬದಲಿಗೆ ವಿಡಂಬನೆಗಳಿಗೆ ಪ್ರಾಮುಖ್ಯ ಹೆಚ್ಚಿತು ಮತ್ತು ಈ ಬರಹಗಳು ಸಂಪಾದಕೀಯ ಪುಟದ ಮಧ್ಯದಲ್ಲಿ ಬರುತ್ತಿದ್ದರಿಂದ ಮಿಡಲ್ ಕಾಲಂ ಎಂದು ಹೆಸರು ಪಡೆಯಿತು.
ಪ್ರಜಾವಾಣಿ ಪತ್ರಿಕೆಯ ಸಮೂಹದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲೂ ಮಿಡಲ್ ಕಾಲಂ ಇತ್ತು. ಅದರಲ್ಲಿ ಎಲ್ಲ ರೀತಿಯ ಲೇಖನಗಳಿಗೂ ಮುಕ್ತ ಅವಕಾಶ ಇತ್ತು. ಎಲ್ಲಾ ರೀತಿಯ ಅಂದರೆ ಕೋಮಲ ಭಾವನೆಗಳನ್ನು ಹೊರ ಹೊಮ್ಮಿಸುವ ಲೇಖನಗಳು. ಶಾಲೆಯಲ್ಲಿನ ಘಟನೆ, ದೊಡ್ಡವರ ಜತೆಗಿನ ಸಂಪರ್ಕ, ಹೈಸ್ಕೂಲು ಕಾಲೇಜುಗಳ ನಾಸ್ಟಾಲ್ಜಿಕ್ ತುಣುಕುಗಳು… ಇಂತಹ ರೀತಿಯ ಲೇಖನಗಳು.
ಪ್ರಜಾವಾಣಿಯಲ್ಲಿ ರಾಜಕೀಯ ವಿಡಂಬನೆಗಳಿಗೆ ಪ್ರಾಮುಖ್ಯತೆ ಇತ್ತು. ಪ್ರಾಮುಖ್ಯತೆ ಏನು ಬರೀ ರಾಜಕೀಯ ವಿಡಂಬನೆಗಳು ವಿಜೃಂಭಿಸುತ್ತಿದ್ದವು. ಬೇರೆ ವಿಷಯ ಈ ಕಾಲಂನಲ್ಲಿ ಬರುತ್ತಿರಲಿಲ್ಲ. ಹೆರಾಲ್ಡ್ ಪತ್ರಿಕೆಗೆ ಬರೆಯುವವರು ತಮ್ಮ ನೈಜ ಹೆಸರಿನಲ್ಲೇ ಬರೆಯುತ್ತಿದ್ದರು.
ಪ್ರಜಾವಾಣಿಯಲ್ಲಿ ಈ ಮಿಡಲ್ ಕಾಲಂಗಳಿಗೆ ನೈಜ ಹೆಸರಿನಲ್ಲಿ ಬರೆಯುತ್ತಿದ್ದವರು ಒಬ್ಬರೋ ಇಬ್ಬರೋ ಅಷ್ಟೇ. ಮಿಕ್ಕ ಎಲ್ಲರೂ ಒಂದು ಗೂಢ ನಾಮದಲ್ಲಿ ಬರೆಯುತ್ತಿದ್ದವರು! ಇದು ಯಾಕೆ ಬರೆದವರು ತಮ್ಮ ನಿಜರೂಪದಲ್ಲಿ ಬರೆಯುತ್ತಿಲ್ಲ ಎನ್ನುವ ಸೋಜಿಗ ಸಹ ಇತ್ತು. ರಾಜಕೀಯದ ವಿಡಂಬನೆ ಆದ್ದರಿಂದ ಸುಮಾರು ಪವರ್ ಫುಲ್ ಖ್ಯಾತನಾಮರ ಅವಗುಣಗಳು ಇಲ್ಲಿ ಮೇನ್ ಪ್ಲಾಟ್ ಆಗುತ್ತಾ ಇದ್ದದ್ದರಿಂದ ಬರೆದವರು ತಮ್ಮ ಕ್ಷೇಮ ನೋಡಿಕೊಳ್ಳಲು ನೈಜ ಹೆಸರಿನಲ್ಲಿ ಬರೆಯುತ್ತಿಲ್ಲ ಎಂದು ಅನಿಸಿತ್ತು. ಮಿಡಲ್ ಲೇಖಕರು ಗೂಢನಾಮಿಗಳು ಎಂದು ಅರ್ಥೈಸಿಕೊಂಡಿದ್ದೆ. ಇದು ನನ್ನ ಊಹೆ ಇದ್ದರೂ ಇರಬಹುದು. ಆಗಿನ ಮಿಡಲ್ ಕಾಲಂ ನಕೆಲವು ಹೆಸರುಗಳು ಎಂದರೆ ಅಗಸ್ತ್ಯ, ಸೋಮು, ರತ್ನ, ಚಂಬಾ, ಗೌತಮ, ಸೂರಿ, ಕೃಷ್ಣ ಸುಬ್ಬರಾವ್, ಶಾಸ್ತ್ರೀ, ಬಾಗೂರು ಚಂದ್ರು, ವನಮಾಲಿ….. ಇಂತಹ ಹೆಸರುಗಳು ಮತ್ತು ತಮಾಷೆ ಎಂದರೆ ಬೇರೆ ಪತ್ರಿಕೆಗಳಲ್ಲಿ ಈ ಹೆಸರುಗಳು ತುಂಬಾ ಅಂದರೆ ತುಂಬಾ ಅಪರೂಪವಾಗಿದ್ದವು. ಶ್ರೀ ಆನಂದ ರಾಮ ಶಾಸ್ತ್ರೀ ಅವರು ಪೂರ್ಣ ಹೆಸರಲ್ಲಿ ಬರೆಯುತ್ತಿದ್ದರು. ಅವರಿಗೆ ಬೇರೆ ಗೂಢ ನಾಮ ಇರಲಿಲ್ಲ.(ಮುಂದೆ ಎಷ್ಟೋ ವರ್ಷದ ನಂತರ ಈ ಹೆಸರುಗಳ ಓನರ್ಗಳು ಯಾರು ಎಂದು ತಿಳಿಯಿತು. ಅವರೆಲ್ಲರೂ ನನಗೆ ಹತ್ತಿರವಾದರು ಮತ್ತು ಗೆಳೆತನ ಬೆಳೆಯಿತು…
ಅಗಸ್ತ್ಯ… ದೊಡ್ಡರಂಗೇ ಗೌಡರು, ಸೋಮು, ರತ್ನ.. ನವರತ್ನ ರಾಮ್, ಚಂಬಾ, ಬಾಗೂರು ಚಂದ್ರು.. ಬೀ ಎಸ್ ಚಂದ್ರಶೇಖರ್, ಗೌತಮ.. ರಾಮಮೂರ್ತಿ, ಸೂರಿ.. ಸೂರಿ ಹಾರ್ದಲ್ಲಿ.. ಸೂರ್ಯನಾರಾಯಣ ಕೆದಿಲಾಯ, ಕೃಷ್ಣ ಸುಬ್ಬರಾವ್, ಎಚ್ ಎಸ್ ಕೃಷ್ಣ, ವನಮಾಲಿ.. ಎಂ ಎಸ್ ನರಸಿಂಹ ಮೂರ್ತಿ… ಹೀಗೆ!)
ಅಂದರೆ ಈ ಗೂಢ ಹೆಸರುಗಳು ಈ ಲೇಖನಗಳು ಪತ್ರಿಕಾ ಸಮೂಹದ ಬರಹಗಾರರೇ ಬರೆಯುತ್ತಿರುವುದು ಮತ್ತು ಅವರುಗಳಿಗೆ ಮಾತ್ರ ಈ ಜಾಗ ಮೀಸಲು ಎನ್ನುವ ಭಾವನೆ ಬೇರೂರಿತ್ತು. ನಾಲ್ಕು ನೂರು ಐನೂರು ಪದಗಳ ಈ ಲೇಖನಗಳು ಕಚಗುಳಿ ಇಡುವ ರಾಜಕೀಯ ಲೇಖನಗಳು. ರಾಜಕಾರಣಿಗಳ ಲೇವಡಿ ಯಾವ ಮಟ್ಟಕ್ಕೆ ಇರುತ್ತಿತ್ತು ಎಂದರೆ ಅದನ್ನು ಓದಿ ರಾಜಕಾರಣಿಗಳು ತಿಂಗಳಾನುಗಟ್ಟಲೆ ಒದ್ದಾಡುವ ಮಟ್ಟಿಗೆ ಲೇವಡಿ ವಿಡಂಬನೆ ತಮಾಷೆ… ಇವು ಇರುತ್ತಿದ್ದವು. ಬಹುಶಃ ಈ ಕಾರಣದಿಂದಲೇ ಪತ್ರಿಕೆ ಬಂದ ಕೂಡಲೇ ಮೊದಲು ಮಧ್ಯದ ಪುಟ ತೆರೆದು ಈ ಕಾಲಂ ಓದಿ ಮುಂದೆ ಇತರ ಪುಟಕ್ಕೆ ಹೋಗುವವರನ್ನು ನಾನು ನೋಡಿದ್ದೆ. ಇಷ್ಟು ಹಿನ್ನೆಲೆ ನಿಮ್ಮ ನೆನಪಿನಲ್ಲಿ ಇರಲಿ. ಈಗ ಮತ್ತೆ ಮೇನ್ ಟ್ರ್ಯಾಕ್ಗೆ ಬರ್ತಾ ಇದೀನಿ.

ಈ ಡಿವಿಯೇಷನ್ಗೆ ಬರುವ ಮೊದಲು ನಿಮಗೆ ಈ ಕತೆ ಬಿಚ್ಚಿಟ್ಟಿದ್ದೆ… ಗೆಳೆಯರು ಎದುರು ಬಂದು ಕೂತರು ಅಂದೆ. ಅವರ ಸಂಗಡ ನನ್ನ ಮಾತುಕತೆ ಅಪರಿಚಿತರ ಸಂಗಡ ಮೊದಲನೇ ಭೇಟಿಯಲ್ಲಿ ಹೇಗೆ ಆಗುತ್ತದೆಯೋ ಅದಕ್ಕಿಂತ ಉತ್ತಮವಾಗೇ ಆಯಿತು ಎಂದು ಹೇಳಬೇಕು. ಅವರ ಜತೆ ಆಡಿದ ಮಾತು ಕತೆ ವಿವರಿಸುವ ಮೊದಲು ಕತೆಯನ್ನು ಸ್ವಲ್ಪ ಪಕ್ಕಕ್ಕೆ ಎಳೆದುಕೊಂಡು ಹೋಗುತ್ತಾ ಇದ್ದೇನೆ, ಸ್ವಲ್ಪ ಇದನ್ನು ಓದಿಕೊಳ್ಳಿ ಮತ್ತು ಡಿವಿಏಷನ್ಗೆ ಕೊಂಚ ರೆಡಿ ಮಾಡ್ಕೊಳಿ. ಈಗ ಮತ್ತೆ ಮೇನ್ ಟ್ರ್ಯಾಕ್ಗೆ ಹಾರುತ್ತಾ ಇದ್ದೇನೆ. ಗೆಳೆಯರ ಪರಿಚಯದ ಮೊದಲನೇ ಭೇಟಿಯಲ್ಲೇ ಅವರು ಒಬ್ಬ ಬರಹಗಾರರು ಎಂದು ತಿಳಿಯಿತು. ಆಗಲೇ ಸುಮಾರು ಕತೆಗಳು ಮತ್ತು ಹಾಸ್ಯ ಲೇಖನ ಬರೆದಿದ್ದರು. ಸುದ್ದಿ ಹಾಗೇ ನನ್ನ ಬರವಣಿಗೆಯತ್ತ ತಿರುಗಿತು. ಒಂದೋ ಎರಡೋ ಕತೆ ಬರೆದಿರುವ ಸಂಗತಿಯನ್ನು ಕೊಂಚ ನಾಚಿಕೆಯಿಂದ ಹೇಳಿಕೊಂಡೆ. ಬರಹಗಾರರಿಗೆ ಮುಖೇಡಿತನ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಅನುಭವವಾಗಿತ್ತು. ಮತ್ತು ನನಗಂತೂ ಈಗಲೂ ಅದು ಮೆದುಳಿನ ಮೇಲಿನ ಸ್ತರದಲ್ಲಿ ಅಂಟಿಕೊಂಡು ಬಿಟ್ಟಿದೆ! ಮಾತಿನ ಮಧ್ಯೆ ಅವರು ಮಿಡಲ್ ವಿಷಯ ತೆಗೆದರು. ಅದಕ್ಕೆ ಅವರ ಕೊಡುಗೆಯನ್ನು ಸಹ ಹೇಳಿದರು. ಅದು ಕ್ಲೋಸ್ಡ್ ಕಾಲಂ ಇರಬಹುದು ಎನ್ನುವ ನನ್ನ ನಂಬಿಕೆ ಅವರ ಮಾತಿನಿಂದ ಗಾಳಿಯ ಹಾಗೆ ತೂರಿಹೋಯಿತು!
ಮಾರನೇ ದಿವಸ ಅವರ ಮಿಡಲ್ ಕಾಲಂ ಬರಹಗಳ ಒಂದು ಫೈಲ್ ತಂದು ಕೊಟ್ಟರು. ಅದನ್ನು ಓದಿದ ಮೇಲೆ ಒಂದು ರೀತಿ ಖುಷಿ ಹುಟ್ಟಿತು ಎಂದೇ ಹೇಳಬೇಕು. ಖುಷಿ ಯಾಕೆ ಎಂದರೆ ತುಂಬಾ ಸಲೀಸಾಗಿ ಬರೆಯಬಹುದು ಎಂದು ಮತ್ತು ಅದರಲ್ಲಿನ ಬರಹದ ಸೂಕ್ಷ್ಮತೆ ಆಗಲೇ ನನಗೆ ತಿಳಿದಿದೆ ಎನ್ನುವ ಆತ್ಮವಿಶ್ವಾಸ.
ಹೀಗೆ ಹೊರಳು ದಾರಿಗೆ ನನ್ನ ಎಂಟ್ರಿ ಆಯಿತಾ. ನನಗೆ ಮಿಡಲ್ ಅನ್ನು ಯಾರು ಬೇಕಾದರೂ ಬರೆಯಬಹುದು, ಅದು ಸೀಮಿತವಲ್ಲ ಮತ್ತು ಮುಕ್ತ ಎಂದು ಗೊತ್ತಾಗುವ ಹಾಗೆ ಗೌತಮ ಹೆಸರಿನಲ್ಲಿ ಆಗಾಗಲೇ ಸಾಕಷ್ಟು ಕೃಷಿ ಮಾಡಿದ್ದ ಶ್ರೀ ರಾಮಮೂರ್ತಿ ಜ್ಞಾನಾರ್ಜನೆ ಮಾಡಿದರು. AMIE ಓದಿದ್ದ ಶ್ರೀ ರಾಮಮೂರ್ತಿ ನಮ್ಮ ಇಲಾಖೆಗೆ ಬೇರೆ ವಿಭಾಗದಿಂದ ವರ್ಗವಾಗಿ ಬಂದಿದ್ದರು. ಹಾಗಾಗಿ ಅವರ ಜತೆ ಹೆಚ್ಚು ಬೆರೆಯುವಿಕೆಗೆ ಕಾರಣ ಹುಟ್ಟಿತು. ಅವರ ಕಾರ್ಯ ವಿಸ್ತಾರ ನನ್ನದಕ್ಕೆ ಹೋಲಿಸಿದರೆ ದೊಡ್ಡದು ಮತ್ತು ಕಣ್ಗಾವಲು ಬೇರೆ ನಡೆಸಬೇಕಾದ ಹುದ್ದೆ ಅದು. ನನಗೆ ಅಂತಹ ತಾಪತ್ರಯ ಇರಲಿಲ್ಲ ಮತ್ತು ಅದರ ಒತ್ತಡವೂ ಸಹ ಇರಲಿಲ್ಲ. ಹಾಗೆ ನೋಡಿದರೆ ನನ್ನ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ ಯಾವ ರೀತಿಯ ಒತ್ತಡವೂ ಇಲ್ಲದೆ ಅಂತಹ ತಲೆ ಹೋಗುವ ಜವಾಬ್ದಾರಿ ಸಹ ಇಲ್ಲದೇ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿ ಮಿಕ್ಕ ಹವ್ಯಾಸಗಳಿಗೆ ಸಮಯ ಕೊಡುತ್ತಿದ್ದ ಮನುಷ್ಯ ಇಡೀ ಭೂಮಂಡಲದಲ್ಲಿ ಯಾರಾದರೂ ಇದ್ದರೆ ಅದು ನಾನು!
ಸರಿ ಅವರು ಅಂದರೆ ಗೌತಮ ಅವರ ಬರಹಗಳ ಒಂದು ಫೈಲ್ ಕೊಟ್ಟರು ಅಂತ ಹೇಳಿದೆ ತಾನೇ? ಫೈಲ್ ಓದಿದ ಮಾರನೇ ದಿವಸವೇ ಮೂರು ಪುಟದ ಒಂದು ಹಾಸ್ಯ ಲೇಖನ ಬರೆದೆ. ಅದರ ಹೆಸರು “ಪ್ರಿಯ ವೀಕ್ಷಕರೇ…..” ಅಂತ. ಬೆಂಗಳೂರು ದೂರದರ್ಶನದಲ್ಲಿ ಆಗ ವಾರಕ್ಕೊಮ್ಮೆ ಈ ಪ್ರಿಯ ವೀಕ್ಷಕರೇ….. ಕಾರ್ಯಕ್ರಮ ಬಿತ್ತರ ಆಗುತ್ತಿತ್ತು. ಹಿಂದಿನ ವಾರದ ಕಾರ್ಯಕ್ರಮ ಕುರಿತ ಹಾಗೆ ವೀಕ್ಷಕರು ಬರೆದ ಪತ್ರಗಳನ್ನು ಓದುತ್ತಿದ್ದರು. ಪತ್ರಗಳಲ್ಲಿ ಕೆಲವೊಮ್ಮೆ ಸಂಶಯಗಳು, ಸಲಹೆಗಳು ಇರುತ್ತಿತ್ತು. ಮತ್ತು ಕಾರ್ಯಕ್ರಮಗಳನ್ನು ಹೊಗಳಿ ಪತ್ರಗಳು ಇರುತ್ತಿದ್ದವು. ನೂರಕ್ಕೆ ನೂರು ಹೊಗಳಿ ಬರೆದ ಪತ್ರಗಳು! ಯಾರಿಗೆ ಇವರ ಕಾರ್ಯಕ್ರಮಗಳು ಮೆಚ್ಚುಗೆ ಆಗೋಲ್ಲ ಅಂದರೆ ಅಂತಹ ಪತ್ರಗಳನ್ನು ಓದುತ್ತಿರಲಿಲ್ಲ. ಕಾರ್ಯಕ್ರಮ ಚೆನ್ನಿಲ್ಲದ ಬಗ್ಗೆ ಬರೆದ ಪತ್ರಗಳು ಯಾವ ಕಾರಣಕ್ಕೆ ಇರುವುದಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಕು! ಅಂದರೆ ಮೆಚ್ಚುಗೆಯ ಪತ್ರಗಳ ಮಹಾಪೂರ ಇರುತ್ತಿತ್ತು. ಸಾಮಾನ್ಯವಾಗಿ ಒಂದು ಗಂಡಸು ಒಂದು ಹೆಂಗಸು ಅಕ್ಕಪಕ್ಕ ಕೂತು ಎದುರು ಇರಿಸಿಕೊಂಡ ರಾಶಿಯಿಂದ ಪತ್ರ ತೆಗೆದು ಓದುತ್ತಿದ್ದರು. ಅಕ್ಕ ಪಕ್ಕ ಯಾಕೆ ಕೂರುತ್ತಿದ್ದರು ಎಂದರೆ ದೂರದರ್ಶಿ ಪೆಟ್ಟಿಗೆಯಲ್ಲಿ ಇಬ್ಬರ ಮುಖವೂ ಕಾಣಬೇಕಲ್ಲ.. ಈ ಕಾರಣಕ್ಕೆ! ಸಾಮಾನ್ಯವಾಗಿ ದೂರದರ್ಶನದ ಹಿರಿಯ ಅಧಿಕಾರಿ ಇದರಲ್ಲಿ ಭಾಗವಹಿಸುತ್ತಿದ್ದರು. ಈಗ ಇಂತಹ ಕಾರ್ಯಕ್ರಮ ಇರುವ ಮಟ್ಟಿಗೆ ಕಾಣೆ. ಅಸಂಖ್ಯಾತ ಚಾನಲ್ಗಳು ಇರುವುದರಿಂದ ಒಂದು ಕಾರ್ಯಕ್ರಮ ಬೋರ್ ಅನಿಸಿದರೆ ಮತ್ತೊಂದು ನೋಡಬಹುದು. ಅದೂ ಬೋರ್ ಅನಿಸುತ್ತಾ ಇನ್ನೊಂದಕ್ಕೆ ಹೋಗಿ ಅಷ್ಟೇ! ಆಗ ಇದ್ದದ್ದು ಎರಡೇ ಚಾನೆಲ್. ಒಂದು ದೆಹಲಿ ಕಾರ್ಯಕ್ರಮಗಳು, ಮತ್ತೊಂದು ಕನ್ನಡ ಕಾರ್ಯಕ್ರಮವನ್ನು ಸೀಮಿತ ಅವಧಿಗೆ ಮಾತ್ರ ಪ್ರಸಾರ ಮಾಡುತ್ತಿತ್ತು. ದೆಹಲಿ ಚಾನಲ್ಗೆ ರಾಷ್ಟ್ರೀಯ ವಾಹಿನಿ ಅಂತ ಹೆಸರಿತ್ತು. ಅದು ಆಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇತ್ತು. ಈಗಲೂ ಕೇಂದ್ರ ಸರ್ಕಾರದ ನಿಯಂತ್ರಣವೇ. ಈಗ ಬೇರೆಬೇರೆ ವಾಹಿನಿಗಳು ಸಾವಿರಾರು ಸಂಖ್ಯೆಯಲ್ಲಿ ಲಭ್ಯ ಇರೋದರಿಂದ ಜನರಿಗೆ ಬೇಕಾದ್ದು ಆಯ್ಕೆ ಮಾಡಿಕೊಳ್ಳುವ ಅವಕಾಶ ಹೆಚ್ಚಿದೆ. ದೆಹಲಿ ದೊರೆಗಳ ಕಾರುಬಾರು ಹೆಚ್ಚೇ ಇತ್ತು. ಸ್ಥಳೀಯ ಚಾನಲ್ಗಳ ಕಂಟ್ರೋಲ್ ಸಹ ದೆಹಲಿಯದು. ಅವರು ಹೇಳಿದ ಹಾಗೆ ಇವರು ಕೇಳಬೇಕು, ಇದು ಅಂದಿನ ವ್ಯವಸ್ಥೆ!
ಇಬ್ಬರು ಕೂತು ಪ್ರಿಯ ವೀಕ್ಷಕರೇ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು ಎಂದು ಹೇಳಿದೆ. ಈ ಕಾರ್ಯಕ್ರಮ ವಾರಕ್ಕೆ ಒಮ್ಮೆ ಪ್ರಸಾರ ಆಗುತ್ತಿತ್ತು. ಈ ಪ್ರಿಯ ವೀಕ್ಷಕರೇ ಕಾರ್ಯಕ್ರಮವನ್ನೇ ಹಾಸ್ಯಮಯ ಮಾಡಿದರೆ ವಿಡಂಬಿಸಿದರೆ ಹೇಗೆ ಅನಿಸಿತು. ಅದರ ಫಲವೇ ನನ್ನ ಮೊಟ್ಟಮೊದಲ ಮಿಡಲ್ ಬರಹ.
ಇಬ್ಬರು ಹೆಂಗಸರು ಕೂತು ಲೋಕಾಭಿರಾಮವಾಗಿ ಉಟ್ಟ ಸೀರೆ ಉಂಡ ಅಡಿಗೆ ಇತ್ಯಾದಿಗಳ ಬಗ್ಗೆ ಮಾತಾಡುತ್ತಿರುವ ಲೇಖನ ಅದು. ಶನಿವಾರ ಬೆಳಿಗ್ಗೆ ಅಂಚೆ ಡಬ್ಬಕ್ಕೆ ಹಾಕಿದ್ದು. ಬುಧವಾರ ಪತ್ರಿಕೆಯಲ್ಲಿ ಪ್ರಕಟ ಆಗಿತ್ತು. ಬಹುಶಃ ಶ್ರೀ ಗುಜ್ಜಾರ್ ಅವರಿರಬೇಕು, ಒಳ್ಳೆಯ ವ್ಯಂಗ್ಯ ಚಿತ್ರ ಬರೆದಿದ್ದರು. ಈ ಕಾಲಂ ಅನ್ನು ಎಲ್ಲರೂ ಗೂಢ ನಾಮದಲ್ಲಿ ಬರೀತಾ ಇದ್ದರು ಅಂತ ಹೇಳಿದೆ ತಾನೇ?
ನಾನು ಯಾವ ಗೂಢ ನಾಮದಲ್ಲಿ ಬರೆದೆ?
ಈ ಮುನ್ನ ಒಂದೋ ಎರಡೋ ಕತೆ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟ ಆಗಿತ್ತು ಅಂತ ಹೇಳಿದ್ದೆ ತಾನೇ? ಅವಕ್ಕೂ ಗೂಢ ನಾಮದಲ್ಲಿ ಬರೆದಿದ್ದು. ಇದಕ್ಕೆ ಕಾರಣ ಅದೇನು ಅಂತ ತಿಳಿಯದು. ಬಹುಶಃ ನನ್ನ ಹೆಸರು ಚೆನ್ನಾಗಿಲ್ಲ ಅಂತ ಅನಿಸಿತ್ತು ಅಂತ ಕಾಣ್ಸುತ್ತೆ. ನಿಖರವಾಗಿ ಗೊತ್ತಿಲ್ಲ. ಹಾಗೆ ನೋಡಿದರೆ ಈಗಲೂ ನನ್ನ ಹೆಸರು ಹೇಳಬೇಕಾದರೆ ಕೃಷ್ಣ ಅನ್ನುವ ಉತ್ತರ ಭಾಗ ಸರಿಯಾಗಿ ಬಾಯಿನಿಂದ ಹೊರಟಿಲ್ಲ ಅನಿಸಿ ಬಿಡುತ್ತದೆ ಮತ್ತು ಕೃಷ್ಣ ಕಿಸ್ನ ಆಯಿತೇ ಎನ್ನುವ ಡೌಟ್ ಏಳುತ್ತದೆ! ಬಹುಶಃ ಇದೇ ಕಾರಣಕ್ಕೆ ನನ್ನ ಗೂಢ ನಾಮ ಹುಟ್ಟಿರಬೇಕು. ಕತೆ ಬರೆದ ಆ ಕ್ಷಣಕ್ಕೆ ಲೇಖಕನಾಗಿ ಯಾವ ಹೆಸರು ಕೊಡುವುದು ಎಂದು ಒಂದೇ ಕ್ಷಣ ಅನಿಸಿದ್ದುಂಟು. ಕೂಡಲೇ ಪ್ರಭಾ ಅಂತ ಇನ್ವರ್ಟೆಡ್ ಕಾಮಾದಲ್ಲಿ ಬರೆದಿದ್ದೆ. ಈಗಲೂ ಅದನ್ನೇ ಬರೆದೆ! ಮುಂದೆ ಸುಮಾರು ಲೇಖನಗಳು ಇದೇ ಹೆಸರಲ್ಲಿ ಪ್ರಕಟವಾದವು.
ಮೊದಲನೇ ಮಿಡಲ್ ಎನ್ನುವ ಹಾಸ್ಯ ಲೇಖನ ಪ್ರಕಟ ಆಯ್ತು ನೋಡಿ. ಕತೆ ಬರೆಯೋದು ನಿಂತೇ ಹೋಯಿತು. ಇದಕ್ಕೆ ಮುಖ್ಯ ಕಾರಣ ಈಗ ಗೊತ್ತಾಗಿದೆ. ಕತೆ ಬರೆಯಲು ಹೆಚ್ಚು ಶ್ರಮ ಬೇಕು, ತಲೆ ಹೆಚ್ಚು ಕೆಲಸ ಮಾಡಬೇಕು. ಜತೆಗೆ ಅದು ಸ್ವೀಕೃತವಾಗಬೇಕು. ಸ್ವೀಕೃತವಾಗಲಿಲ್ಲ ಎಂದರೆ ಎಲ್ಲಾ ಪತ್ರಿಕಾ ಕಚೇರಿ ಸುತ್ತಿ ಸುತ್ತಿ ಭೂಮಿ ಗುಂಡಾಗಿದೆ ಎನ್ನುವುದನ್ನು ಪ್ರೂವ್ ಮಾಡಬೇಕು. ಇಪ್ಪತ್ತು ಮೂವತ್ತು ಪುಟದ ಕತೆ ಹೀಗೆ ಹುಟ್ಟು ಪಡೆದು ಇಡೀ ಪತ್ರಿಕಾ ಲೋಕದಲ್ಲಿ ಒಂದು ಕಡೆ ಅಸ್ವೀಕೃತವಾಗದೆ ಒಂದೊಂದು ಆಫೀಸಿಂದ ಇನ್ನೊಂದು ಆಫೀಸಿಗೆ, ಅಲ್ಲಿಂದ ಮತ್ತೊಂದಕ್ಕೆ.. ಹೀಗೆ ವಿಶ್ವ ಪರ್ಯಟನೆ ವ್ರತ ಮಾಡಬೇಕು. ಪ್ರತಿ ಸಲ ಪತ್ರಿಕಾ ಕಚೇರಿಗೆ ಈ ಕತೆಗಳು ಪೋಸ್ಟ್ನಲ್ಲಿ ಹೋಗಬೇಕು ಅಂದರೆ ಅದಕ್ಕೆ ಟೂ ವೆ ಸ್ಟ್ಯಾಂಪ್ ಅಂಟಿಸಬೇಕು ಅಂದರೆ ಎಷ್ಟು ಕಾಸು ಖರ್ಚು? ನನಗೆ ಬರುತ್ತಿದ್ದ ಸಂಬಳದಲ್ಲಿ(ನನ್ನ ಮನೆಯಲ್ಲಿ ನನ್ನ ಸಂಬಳದ ಬಗ್ಗೆ ಒಂದು ಮಾತು ಆಗಾಗ ಇತ್ತು… ಪುಲಾ ಪುಲಾ ಅಂತ ಬರುವ ಸಂಬಳದಲ್ಲಿ….. ಅಂತ. ಇನ್ನೂ ಒಂದು ಜೋಕು ಅಂದರೆ ನಾನು ಬರೆಯುವುದು ಶುರು ಮಾಡಿದಾಗ ಆರುನೂರು ಹನ್ನೆರೆಡು ನನ್ನ ಸಂಬಳ ಅಂತ ಬರೆಯುತ್ತಾ ಇದ್ದೆ. ಹತ್ತು ವರ್ಷದ ನಂತರವೂ ನನ್ನ ಸಂಬಳ ಆರುನೂರು ಹನ್ನೆರೆಡು ಅಂತಲೇ ಬರೆಯುತ್ತಾ ಇದ್ದೆ. ನನ್ನ ಸ್ನೇಹಿತರು ನಿನ್ನ ಸಂಬಳ ಹಾಗೇ ಸ್ಟಾಂಡ್ ಸ್ಟಿಲ್ ಆಗಿಬಿಟ್ಟಿದೆ. ಮಿಡಲ್ನಲ್ಲಿ ಅದಕ್ಕಿಂತ ಸಂಬಳ ಹೆಚ್ಚು ಅದಕ್ಕೆ…. ಅಂತ ರೇಗಿಸೋರು..) ಮೇಜರ್ ಪೋರ್ಷನ್ ಹೀಗೆ ಖರ್ಚು ಮಾಡುವುದು ಬುದ್ಧಿವಂತಿಕೆಯ ಲಕ್ಷಣವೇ… ನನ್ನ ಮನಸ್ಸು ಹಾಗೂ ಬುದ್ಧಿ ಹೀಗೆ ಓಡಿತೇ?
ಒಂದು ಉಪಾಯ ಅದೇ ಕಂಡು ಹಿಡಿಯಿತು.

“ಕತೆ ಬರೆದರೆ ಅದು ಅಸ್ವೀಕೃತವಾಗಿ ವಾಪಸ್ ಬಂದರೆ ಬೇರೆ ಬೇರೆ ಪತ್ರಿಕೆಗೆ ರವಾನಿಸಬೇಕು. ಅದರಿಂದ ಕತೆ ಬರೆಯೋದು ಕಮ್ಮಿ ಮಾಡ್ಕೋ. ಅದರ ಬದಲು ಮಿಡಲ್ ಬರಿ. ಹೇಗಿದ್ದರೂ ಅದು ರಾಜಕೀಯದ್ದು. ರಿಲೀವೆನ್ಸ್ ಕಡಿಮೆ ಆಗುತ್ತೆ ಬೇರೆ ಕಡೆ ಕಳಿಸಬೇಕು ಅಂತ ಅನಿಸೋದಿಲ್ಲ. ಜತೆಗೆ ಇದು ವಾಪಸ್ ಬರಲಿ ಅಂತ ವಾಪಸ್ ಪ್ರಯಾಣಕ್ಕೆ ಸ್ಟಾಂಪ್ ಇಡುವುದು ಸಹ ಬೇಡ…” ಈ ಐಡಿಯ ಹೇಗೆ ವರ್ಕ್ ಮಾಡಿತು ಅಂದರೆ ರಿಟರ್ನ್ ಜರ್ನಿ ಸ್ಟಾಂಪ್ ಇಲ್ಲದೇ ಹೇರಳವಾಗಿ ಮಿಡಲ್ಗಳು ಹೋದವು ಹೋದವು ಹೋದವು. ಕೆಲವು ಸಲ ದಿವಸಕ್ಕೆ ಐದು ಹೋಗಿದ್ದೂ ಸಹ ಉಂಟು. ಹೀಗೆ ಹೋದವು ಎಲ್ಲವೂ ಪ್ರಿಂಟ್ ಆಗ್ತಾ ಇರಲಿಲ್ಲ. ಆದರೆ ಒಂದು solace ಇರ್ತಾ ಇತ್ತು. ಮನಸಿಗೆ ಬಂದದ್ದು ಪೆನ್ ಪೇಪರ್ ಮೂಲಕ ಕಕ್ಕಿದ್ದು. ಶ್ರೀ ಕೃಷ್ಣ ಪರಮಾತ್ಮನ ನಿನ್ನ ಕರ್ಮ ನೀನು ಮಾಡು, ಅದರ ಫಲದ ಬಗ್ಗೆ ಚಿಂತೆ ಬೇಡ ಈ ಮಾತಿನಲ್ಲಿ ಅತಿಯಾದ ನಂಬಿಕೆ ಹುಟ್ಟಿ ಬೆಳೆಯಿತು. ಬರೆಯೋದು ನಿನ್ನ ಕರ್ಮ, ಪತ್ರಿಕೆಗಳಿಗೆ ಕಳಿಸೋದು ಸಹ ಒಂದು ಕರ್ಮ. ಪ್ರಿಂಟ್ ಆಗತ್ತೋ ಬಿಡುತ್ತೋ ಅದರ ಬಗ್ಗೆ ಚಿಂತೆ ಬೇಡ. ನಿನ್ನ ಕರ್ಮ ನೀನು ಮಾಡು. ಅದರ ಫಲದ ಬಗ್ಗೆ ಚಿಂತೆ ಬಿಡು………! ಇದು ಅಂದರೆ ಈ ಹುಚ್ಚು ಹೇಗೆ ಹತ್ತಿತು ಎಂದರೆ ಮತ್ತೆ ಕೆಲವು ಗೂಢ ನಾಮಗಳು ಹುಟ್ಟಿದವು ಮತ್ತು ಒಂದೇ ಮನುಷ್ಯ ಇಷ್ಟೊಂದು ಗೂಢ ನಾಮ ಇರಿಸಿಕೊಳ್ಳಲು ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ.. ಮುಂದಿನ ಹಂತ ಮತ್ತಷ್ಟು ರೋಚಕವಾಗಿದ್ದು ಮತ್ತು ಎತ್ತರಕ್ಕೆ ಏರಿದ ಕತೆ ಕೇಳಲು ನೀವು ಮುಂದಿನ ಸಂಚಿಕೆಗೆ ಕಾಯಲೇ ಬೇಕು. ಸರೀನಾ ಸರ? ಮೇಡಂ ಅವ್ರೇ ಸರೀನಾ…
ಇನ್ನೂ ಇದೆ…..

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
