ಈ ಚಿತ್ರದ ಕಥಾಹಂದರ ನವೀನ ಮತ್ತು ಸಂಕೀರ್ಣ ಸ್ವರೂಪದ್ದು. ಪ್ಯಾರಿಸ್‌ನಲ್ಲಿ ಟಿವಿ ಕಂಪೆನಿಯಲ್ಲಿ ಸಾಹಿತ್ಯ ವಲಯದಲ್ಲಿನ ಪುಸ್ತಕಗಳನ್ನು ಕುರಿತಂತೆ ಕೆಲಸ ಮಾಡುವ ಜಾರ್ಜ್, ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಂಡತಿ ಆನ್‌ ಮತ್ತು ಮಗ ಫಿರಟ್ ಜತೆಗೂಡಿ ಮಧ್ಯಮ ದರ್ಜೆಯ ಮೇಲ್ವರ್ಗದ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಯಾರೋ ಗುಪ್ತವಾಗಿರಿಸಿದ ಕ್ಯಾಮೆರಾದಿಂದ ಅವನ ಮನೆ ಇತ್ಯಾದಿಯ ವಿಡಿಯೋ ಟೇಪುಗಳನ್ನು ಕಳಿಸುತ್ತಿರುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ(ಹಿಡನ್‌) ಸಿನಿಮಾದ ವಿಶ್ಲೇಷಣೆ

ಆಸ್ಟ್ರಿಯಾದ ಮೈಖೇಲ್‌ ಹೆನೆಕೆ ಮನಶಾಸ್ತ್ರ ತತ್ವಶಾಸ್ತ್ರ ಮತ್ತು ರಂಗಭೂಮಿಯ ವಿಷಯಗಳನ್ನು ಅಭ್ಯಾಸ ಮಾಡಿ ರಂಗ ನಿರ್ದೇಶಕನಾಗಿ ತನ್ನ ವೃತ್ತಿಯನ್ನು ಪ್ರಾರಂಭಿಸಿ ಸ್ಟ್ರಿಂಡ್ ಬರ್ಗ್, ಬ್ರೆಕ್ಟ್ ಮುಂತಾದವರ ನಾಟಕಗಳನ್ನು ಯಶಸ್ವಿಯಾಗಿ ರಂಗದ ಮೇಲೆ ಪ್ರಯೋಗ ಮಾಡಿದ. ಅನಂತರ ಚಲನಚಿತ್ರ ರಂಗವನ್ನು ಪ್ರವೇಶಿಸಿ, 2001ರಲ್ಲಿ ಕಾನ್‌ ಪ್ರಶಸ್ತಿ ವಿಜೇತ `ದ ಪಿಯಾನೋ ಟೀಚರ್ʼ ಮೂಲಕ ಜಗತ್ತಿನ ಸಿನಿಮಾಸಕ್ತರ ಗಮನ ಸೆಳೆದ. ಚಿತ್ರಗಳಲ್ಲಿ ಅವನು ದೈವವನ್ನು ಕುರಿತು ಪ್ರಶ್ನಿಸುವುದು, ಮನುಷ್ಯನಲ್ಲಿ ಹುದುಗಿರುವ ಕ್ರೌರ್ಯ ಮತ್ತಿತರ ಕರಾಳ ಅಂಶಗಳ ಜೊತೆಗೆ ಮಾನವೀಯತೆಯ ವಿವಿಧ ಸ್ವರೂಪಗಳನ್ನು ಬಿತ್ತರಿಸುತ್ತಾನೆ. ಅಲ್ಲದೆ ಮನಶಾಸ್ತ್ರೀಯ ಅಂಶಗಳ ವೈಪರೀತ್ಯಗಳನ್ನು ಬಿಂಬಿಸುವುದು ಅವನ ಚಲನಚಿತ್ರಗಳ ಹೂರಣ.

(ಮೈಖೇಲ್‌ ಹೆನೆಕೆ)

ಸಮಾನ್ಯವಾಗಿ ಬ್ರೆಕ್ಟ್‌ನ ಸಿದ್ಧಾಂತವನ್ನು ಪಾತ್ರಗಳಿಗೆ ಹೊಂದುವಂತೆ ಮಾಡುತ್ತಾನೆ. ಪ್ರೇಕ್ಷಕರು ಪಾತ್ರಗಳೊಡನೆ ಭಾವದ ನೆಲೆಯಲ್ಲಿ ಒಂದಾಗುವುದನ್ನು ತಪ್ಪಿಸಿ, ಚಿತ್ರವನ್ನು ವಿಶ್ಲೇಷಣೆ ದೃಷ್ಟಿಯಿಂದ ವಸ್ತುನಿಷ್ಠವಾಗಿ ನೋಡಬೇಕೆಂದು ಬಯಸುತ್ತಾನೆ. ಇದಲ್ಲದೆ ಚಿತ್ರಗಳನ್ನು ನಿಶ್ಚಿತವಾಗಿ ಕೊನೆಯಾಗುವ ಬಗೆಯನ್ನು ಇಷ್ಟಪಡದೆ, ಪ್ರೇಕ್ಷಕರನ್ನು ಆಲೋಚನೆಯಲ್ಲಿ ಮುಳುಗಿಸಿ ಮುಕ್ತಾಯ ಮಾಡುವ ವಿಶೇಷತೆ ಅವನದು. ಅವನ ಪ್ರಖ್ಯಾತ ಚಿತ್ರಗಳಾದ ʻಅಮೋರ್ʼ(2012), ʻದಿ ವೈಟ್ ರಿಬ್ಬನ್ʼ(2014) ಅನೇಕಾನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ.

ಸಮಕಾಲೀನ ಸಂದರ್ಭದಲ್ಲಿ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜಾಗತೀಕರಣದ ಹೆಸರಿನಲ್ಲಿ ನವವಸಾಹತು ಆಳ್ವಿಕೆ ಸ್ಥಾಪಿಸಿರುವ ಸಂಗತಿ ಎಲ್ಲರಿಗೂ ತಿಳಿದದ್ದೆ. ದುರಂತವೆಂದರೆ ನಮ್ಮ ರಾಜಕೀಯ ಧುರೀಣರು ಅವುಗಳೋಡನೆ ಮಾಡಿಕೊಂಡಿರುವ ಒಡಂಬಡಿಕೆಗಳು ಇಂತಹ ಪರಿಸ್ಥಿತಿಗೆ ಕಾರಣವೆನ್ನುವುದೂ ನಿಜವೆ. ಹೀಗಾಗಿ ಇಂಥಹ ಆಳ್ವಿಕೆಯಿಂದ ಮುಕ್ತಿ ಇಲ್ಲ ಎನ್ನುವುದು ಕಟು ಸತ್ಯ. ಅಂದರೆ ಇದು ವಸಾಹತು ಆಳ್ವಿಕೆಯ ಅವಧಿಯಲ್ಲಿ ವಿಜೃಂಭಿಸುತ್ತಿದ್ದ ಜನಾಂಗೀಯ ದಬ್ಬಾಳಿಕೆಯೂ ಒಳಗೊಂಡಂತೆ ಎಲ್ಲವೂ ಬೇರೊಂದು ರೀತಿಯಲ್ಲಿ ಮುಂದುವರಿಯುತ್ತಿದೆ ಎನ್ನುವುದರ ಖಚಿತ ಸೂಚನೆ.

ಈ ವಿಷಯವನ್ನು ʻಕ್ಯಾಷೆʼ(ಹಿಡನ್‌) ಚಿತ್ರದಲ್ಲಿ ಅತ್ಯಂತ ಸಮರ್ಥವಾಗಿ ದಾಖಲು ಪಡಿಸಿದ್ದಾನೆ ನಿರ್ದೇಶಕ ಮೈಖೇಲ್ ಹೆನೆಕೆ. ಈ ಚಿತ್ರ 2೦೦೫ರ ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಇತರ ಹತ್ತೊಂಬತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹಿರಿಮೆಯನ್ನು ಹೊಂದಿದೆ.

ಇದರ ವಸ್ತು ರಾಜಕೀಯಕ್ಕಿಂತ ಹೆಚ್ಚಾಗಿ ಆರ್ಥಿಕ ಮತ್ತು ಜನಾಂಗಗಳ ನಡುವಿನ ಧೋರಣೆಯನ್ನು ಕುರಿತದ್ದು. ಪ್ರಪಂಚದ ಅನೇಕ ರಾಷ್ಟ್ರಗಳು ಒಂದಿಲ್ಲೊಂದು ಪ್ರಬಲ ರಾಷ್ಟ್ರಗಳ ಆಳ್ವಿಕೆಗೆ ಒಳಪಟ್ಟಿದ್ದರಿಂದ ಈ ಎರಡೂ ರಾಷ್ಟ್ರಗಳ ಜನತೆಯಲ್ಲಿರುವ ಜನಾಂಗೀಯ ದಬ್ಬಾಳಿಕೆಯ ನೆಲೆಗಳನ್ನು ತೆರೆದಿಡುತ್ತದೆ. ಇದಕ್ಕಾಗಿ ಫ್ರಾನ್ಸ್‌ ಮತ್ತು ಆಲ್ಜೀರಿಯ ದೇಶಗಳನ್ನು ಪರಿಗಣಿಸಲಾಗಿದೆ. ನಿರ್ದೇಶಕ ಹೆನೆಕೆ ತನ್ನ ಚಿತ್ರದ ಆಶಯ ನೆರವೇರುವ ದೃಷ್ಟಿಯಿಂದ ಮನುಷ್ಯನ ಅಪರಾಧಿಪ್ರಜ್ಞೆ ಮತ್ತು ಅಹಂಕಾರವನ್ನು ಬಳಸಿಕೊಂಡಿದ್ದಾನೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಕ್ಯಾಮೆರಾವನ್ನು ಕೂಡ ಮುಖ್ಯ ಪಾತ್ರವನ್ನಾಗಿ ಮಾಡಿರುವುದು.

ಈ ಚಿತ್ರದ ಕಥಾಹಂದರ ನವೀನ ಮತ್ತು ಸಂಕೀರ್ಣ ಸ್ವರೂಪದ್ದು. ಪ್ಯಾರಿಸ್‌ನಲ್ಲಿ ಟಿವಿ ಕಂಪೆನಿಯಲ್ಲಿ ಸಾಹಿತ್ಯ ವಲಯದಲ್ಲಿನ ಪುಸ್ತಕಗಳನ್ನು ಕುರಿತಂತೆ ಕೆಲಸ ಮಾಡುವ ಜಾರ್ಜ್, ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಂಡತಿ ಆನ್‌ ಮತ್ತು ಮಗ ಫಿರಟ್ ಜತೆಗೂಡಿ ಮಧ್ಯಮ ದರ್ಜೆಯ ಮೇಲ್ವರ್ಗದ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಯಾರೋ ಗುಪ್ತವಾಗಿರಿಸಿದ ಕ್ಯಾಮೆರಾದಿಂದ ಅವನ ಮನೆ ಇತ್ಯಾದಿಯ ವಿಡಿಯೋ ಟೇಪುಗಳನ್ನು ಕಳಿಸುತ್ತಿರುತ್ತಾರೆ. ಮತ್ತೆ ಮತ್ತೆ ಬರುವ ಟೇಪುಗಳಲ್ಲಿ ಅವನ ಗತ ಜೀವನದ ಬಗ್ಗೆ ಸಂಬಂಧವಿರುವ ಹಾಗೆ ಕಂಡು ಅದು ಸೂಚಿಸುವ ವಿಷಯವನ್ನು ಗೋಪ್ಯವಾಗಿಡುವುದರಿಂದ ಅವನ ಸಾಂಸಾರಿಕ ಜೀವನದಲ್ಲಿ ಉಬ್ಬರಗಳು ಉಂಟಾಗುತ್ತವೆ. ಟೇಪುಗಳು ತನ್ನನ್ನು ಬೆದರಿಸುವ ಉದ್ದೇಶದಿಂದ ಮಾಡುತ್ತಿದ್ದಾನೆಂದು ತಿಳಿಯುತ್ತಾನೆ. ಇದು ಹಿಂದೆ ಫ್ರಾನ್ಸ್‌ನ ವಸಾಹತು ದೇಶವಾಗಿದ್ದ ಆಲ್ಜೀರಿಯಾದಲ್ಲಿ ಅನಾಥನಾಗಿ ತನ್ನೊಂದಿಗಿದ್ದ ಓರಗೆಯ ಮಜೀದ್ ಎಂಬುವವನು ಕೃತ್ಯ ಎಂಬ ಅನುಮಾನವಾಗುತ್ತದೆ. ಟೇಪುಗಳಿಂದ ವಿಳಾಸವನ್ನು ಪತ್ತೆ ಮಾಡಿ ಅವನನ್ನು ಭೇಟಿಯಾಗುತ್ತಾನೆ.

ಮಜೀದ್ ಟೇಪುಗಳನ್ನು ತಾನು ಕಳಿಸಿಲ್ಲವೆಂದು ಹೇಳಿದರೂ ಜಾರ್ಜ್‌ ನಂಬುವುದಿಲ್ಲ. ಇದಲ್ಲದೆ ಅದೊಂದು ದಿನ ಮಗ ಕಾಣೆಯಾದಾಗಲೂ ಅದು ಮಜಿದ್‌ನ ಕೆಲಸವೆಂದೇ ಆರೋಪ ಹೊರಿಸಿ ತಪಾಸಣೆಗೆ ಪೋಲೀಸರ ಸಹಕಾರ ಬಯಸುತ್ತಾನೆ. ಇವೆಲ್ಲದರಿಂದ ಮಜೀದ್‌ ತೀವ್ರ ವ್ಯಾಕುಲಕ್ಕೆ ಒಳಗಾಗುತ್ತಾನೆ. ಕರೆಯ ಮೇರೆಗೆ ಅವನನ್ನು ಕಾಣಲು ಹೋಗುತ್ತಾನೆ. ಮಜೀದ್ ಅವನ ಎದುರಿನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅನಂತರ ಭೇಟಿಯಾಗುವ ಮಜೀದ ಮಗನ ಮೇಲೆ ವೀಡಿಯೋ ಟೇಪುಗಳನ್ನು ಕಳಿಸಬಾರದೆಂದು ಬೆದರಿಕೆ ಹಾಕುತ್ತಾನೆ ಜಾರ್ಜ್.

ಇದಿಷ್ಟು ಕತೆಯ ಹಂದರ. ನಿರ್ದೇಶಕ ಹೆನೆಕೆ ಟೈಟಲ್ ಕಾಡುಗಳಲ್ಲಿಯೇ ಚಿತ್ರದ ಮೂಲ ಅಂಶವಾದ ವಿಡಿಯೋ ಟೇಪನ್ನು ವಿಶೇಷ ರೀತಿಯಲ್ಲಿ ಪರಿಚಯಿಸುತ್ತಾನೆ. ನಾವು ಸ್ಟಿಲ್ ಫೋಟೋ ಒಂದನ್ನ ಸಹಜವಾದ ಅವಧಿಗಿಂತ ತೀರಾ ಹೆಚ್ಚಿನ ಅವಧಿ ನೋಡುತ್ತಿದ್ದೇವೆಂಬ ಅನಿಸಿಕೆಯಲ್ಲಿರುತ್ತೇವೆ. ಅದನ್ನು ತುಂಡರಿಸಿದಾಗ ಜಾರ್ಜ್, ಆನ್‌ಳ ಜೊತೆ ಪ್ಯಾರಿಸ್ಸಿನಲ್ಲಿರುವ ತಮ್ಮ ಮನೆಯ ಮುಂದುಗಡೆಯಿಂದಲೇ ಚಿತ್ರಿಸಿದ ವಿಡಿಯೋ ಟೇಪಿನ ಚಿತ್ರಣವನ್ನು ಟಿವಿಯಲ್ಲಿ ನೋಡುತ್ತಿರುವ ದೃಶ್ಯ ತೆರೆದುಕೊಳ್ಳುತ್ತದೆ. ಆ ಟೇಪಿನಲ್ಲಿ ಜಾರ್ಜನ ಮನೆಯಲ್ಲದೆ, ಹೊರಗಡೆ ರಸ್ತೆ, ವಾಹನಗಳು ಇತ್ಯಾದಿಗಳಿರುತ್ತವೆ. ಅದರಲ್ಲಿ ಅದೊಂದು, ಅವೇಳೆಯಲ್ಲಿ ಕಾಲಿಂಗ್ ಬೆಲ್ ಆಗುತ್ತದೆ. ಯಾರಿರಬಹುದೆಂದು ಹಾಲ್‌, ಅಂಗಳ ಮತ್ತು ಹೊರಗಿನ ಗೇಟು ದಾಟಿ ಸಾಮಾನ್ಯ ಗತಿಯಲ್ಲಿ ಬಾಗಿಲಾಚೆ ಹೋಗುವ ಜಾರ್ಜ್‌ಗೆ ಯಾರೂ ಕಾಣುವುದಿಲ್ಲ. ಆದರೆ ಅವನಲ್ಲಿ ಆಶ್ಚರ್ಯ ಹುಟ್ಟಿಸುವ ಎರಡನೆ ವೀಡಿಯೋ ಕ್ಯಾಸೆಟ್ ಜೊತೆಗೆ ರೇಖಾ ಚಿತ್ರವಿರುವ ಹಾಳೆಯೊಂದು ಇರುತ್ತದೆ. ಸಮೀಪ ಚಿತ್ರಿಕೆಯಲ್ಲಿ ತೆಗೆದ ಅದರಲ್ಲಿ ತೆರೆದ ಬಾಯಿಯಿಂದ ರಕ್ತ ಹೊರಕ್ಕೆ ಬಿದ್ದ ರೂಪವಿರುತ್ತದೆ. ಇವೆಲ್ಲದರಿಂದ ಜಾರ್ಜ್ ವಿಚಲಿತಗೊಳ್ಳುತ್ತಾನೆ. ಇದಾದ ಮೇಲೆ ಮೂರನೆಯ ಟೇಪು ಕೂಡ ತಲುಪಿ ಅವನ ಗತ ಕಾಲದಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತದೆ ಮತ್ತು ಯಾರು ಟೇಪುಗಳನ್ನು ಕಳಿಸುತ್ತಿರಬಹುದು ಎಂಬ ಅನುಮಾನ ಉಂಟಾಗುತ್ತದೆ.

ನಿರ್ದೇಶಕ ಹೆನೆಕೆ ತನ್ನ ಚಿತ್ರದ ಆಶಯ ನೆರವೇರುವ ದೃಷ್ಟಿಯಿಂದ ಮನುಷ್ಯನ ಅಪರಾಧಿಪ್ರಜ್ಞೆ ಮತ್ತು ಅಹಂಕಾರವನ್ನು ಬಳಸಿಕೊಂಡಿದ್ದಾನೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಕ್ಯಾಮೆರಾವನ್ನು ಕೂಡ ಮುಖ್ಯ ಪಾತ್ರವನ್ನಾಗಿ ಮಾಡಿರುವುದು.

ಅನಂತರ ತನ್ನ ತಾಯಿಯ ಸಂಗಡ ಅವಳ ಆರೋಗ್ಯದ ಬಗ್ಗೆ ಚರ್ಚಿಸುತ್ತಾ, ಅವಳು ಮರೆತು ಹೋದಂತೆ ಕಾಣುವ ಮಜೀದ್‌ನ ಬಗ್ಗೆ ನೆನಪಿಸುತ್ತಾನೆ. ನಲವತ್ತು ವರ್ಷದ ಹಿಂದೆ ತಂದೆ ತಾಯಿಯರಿಲ್ಲದೆ ತಮ್ಮ ಬಳಿ ಇದ್ದ ಮಜೀದ್‌ನನ್ನು ಆಕೆ ದತ್ತು ತೆಗೆದುಕೊಳ್ಳಬೇಕೆಂದಿದ್ದ ಸಂಗತಿಯನ್ನು ತಿಳಿಸುತ್ತಾನೆ. ವಿವರಗಳು ಗೊತ್ತಾದ ಆಕೆಗೆ ಮಗ ದುಗುಡಗೊಂಡಿರುವುದು ಕಾಣುತ್ತದೆ. ತಾಯಿಯ ರೂಮಿನಿಂದ ಹೊರಗೆ ಬರುತ್ತಿದ್ದಂತೆಯೇ ಅವನ ಮನಸ್ಸಿನಲ್ಲಿ ಇದ್ದುದಕ್ಕೆ ರೂಪ ಕೊಡುವಂತೆ ಹುಂಜವೊಂದರ ಕುತ್ತಿಗೆಯ ಮೇಲೆ ಮಚ್ಚಿನೇಟು ಬಿದ್ದು ರಕ್ತ ಚಿಮ್ಮುವ ಸಮೀಪ ಚಿತ್ರಿಕೆ ನಮ್ಮನ್ನು ಆವರಿಸುತ್ತದೆ. ಇದರ ಜೊತೆಗೆ ಕೇಳಿಸುವ ಹಿನ್ನೆಲೆ ಶಬ್ದದಿಂದ ಸಾಂದರ್ಭಿಕ ಶಬ್ದವನ್ನು ಅಳವಡಿಸಿರುವುದನ್ನು ಕಾಣುತ್ತೇವೆ. ಇದು ಇಡೀ ಚಿತ್ರಕ್ಕೆ ಅನ್ವಯಿಸುತ್ತದೆ. ಅನಂತರ ಆರೇಳು ವರ್ಷದ ಮಜೀದ್‌ನ ಮುಖದಲ್ಲಿ ಮೂಗಿನಿಂದ ಗಲ್ಲದ ತನಕ ರಕ್ತ ಹರಿದಿರುವುದು ಮತ್ತು ಅವನನ್ನು ಬೆರಗುಗಣ್ಣಿನಿಂದ ನೋಡುತ್ತಿರುವ ಸುಮಾರು ಅವನಷ್ಟೇ ವಯಸ್ಸಿನ ಜಾರ್ಜ್‌ನನ್ನು ಕಾಣುತ್ತೇವೆ. ಈಗಿನ ಮನೆಯಲ್ಲಿ ಮಲಗಿದ್ದಾಗ ಜಾರ್ಜ್‌ ಇದನ್ನು ನೆನಪಿಸಿಕೊಂಡು ಬೆಚ್ಚಿಬೀಳುತ್ತಾನೆ. ಟೇಪ್ ಕಳಿಸುತ್ತಿರುವ ವ್ಯಕ್ತಿ ಮಜೀದ್ ಎಂದು ಅನುಮಾನವಾಗುತ್ತದೆ.

ಅನಂತರ ಜಾರ್ಜ್-ಆನ್‌ ಇನ್ನೊಂದು ಟೇಪ್ ನೋಡಿದ ಮೇಲೆ ಆ ಟೇಪ್ ಕಳಿಸಿರಬಹುದಾದ ವ್ಯಕ್ತಿಯೊಬ್ಬನ ಮೇಲೆ ಅನುಮಾನವಿದೆ ಎಂದು ಹೇಳುವ ಜಾರ್ಜ್ ಬೇರೆ ಯಾವ ಸಂಗತಿಯನ್ನೂ ಹೇಳುವುದಿಲ್ಲ. ಅದರಲ್ಲಿ ಕಾಣುವ ವಿಳಾಸವನ್ನು ಪತ್ತೆ ಹಚ್ಚಿ ಕೆಳದರ್ಜೆಯ ಫ್ಲಾಟಿಗೆ ಹೋಗುತ್ತಾನೆ. ಬಾಗಿಲು ತೆಗೆಯುವ ಮಜೀದ್ ಜಾರ್ಜ್‌ನನ್ನು ಗುರುತಿಸಿದರೂ ಯಾವುದೇ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಟಿವಿಯಲ್ಲಿ ಕಾಣಿಸಿಕೊಳ್ಳುವುದರಿಂದ ಗೊತ್ತು ಎಂದಷ್ಟೇ ಹೇಳಿ ಸೌಜನ್ಯದಿಂದ ನಡೆದುಕೊಂಡು ಬಂದ ಕಾರಣ ಕೇಳುತ್ತಾ ಕೇಳುತ್ತಾನೆ. ಉದ್ವೇಗವನ್ನು ತಡೆಹಿಡಿಯದೆ ವರ್ತಿಸುವ ಜಾರ್ಜ್ ತನ್ನನ್ನು ಬೆದರಿಸುವುದಕ್ಕಾಗಿ ಟೇಪ್‌ ಕಳಿಸುತ್ತಿರುವುದಾಗಿ ಆರೋಪಿಸಿ, ಹಾಗೆ ಮಾಡುತ್ತಿರುವುದರ ನಿಜವಾದ ಕಾರಣವೇನು ಎಂದು ಏರುದನಿಯಿಂದ ಕೇಳುತ್ತಾನೆ. ಆದರೆ ಸಮಚಿತ್ತದಿಂದ, ಮೆಲುದನಿಯಲ್ಲಿ ಮಜೀದ್, ಜಾರ್ಜ್‌ನ ಆರೋಪವನ್ನು ನಿರಾಕರಿಸುತ್ತಾನೆ. ಆದರೆ ಟೇಪುಗಳು ಯಾರೋ ಕಳಿಸುತ್ತಿದ್ದಾರೆ ಎನ್ನುವುದನ್ನು ನಂಬುವುದಾಗಿ ಹೇಳುತ್ತಾನೆ. ಅಷ್ಟೇ ಸಹಜವಾಗಿ ಮತ್ತು ಸಲೀಸಾಗಿ ತಾನು ಹೇಳುವುದನ್ನು ಜಾರ್ಜ್ ನಂಬುತ್ತಿಲ್ಲವೆಂಬ ಖೇದ ವ್ಯಕ್ತ ಪಡಿಸುತ್ತಾನೆ.

ವೈಯಕ್ತಿಕ ಧೋರಣೆಯಲ್ಲಿ ಜಾರ್ಜ್ ವಸಾಹತು ಆಳ್ವಿಕೆಯ ಕಾಲದ ಮುಂದುವರಿಕೆ ಎನ್ನುವುದನ್ನು ಮಾತು, ಭಾವ ಮತ್ತು ಆಂಗಿಕ ಅಭಿನಯದಲ್ಲಿ ಬಿಂಬಿಸುತ್ತಾನೆ. ಅದಕ್ಕನುಗುಣವಾಗಿ ಅಂಥ ಆಳ್ವಿಕೆಗೆ ಒಳಗಾದ ಸ್ಥಿತಿಯನ್ನು ಮಜೀದ್‌, ನೇರವಲ್ಲದ, ಅತ್ತಿತ್ತ ಹರಿಯುವ ನೋಟ, ಮೆಲುದನಿ, ಆಂತರ್ಯದಲ್ಲಿರುವುದನ್ನು ತಡೆಹಿಡಿಯುವ ಪ್ರಯತ್ನ, ಇವುಗಳಿಂದ ಅತ್ಯಂತ ಸಮರ್ಥವಾಗಿ ವ್ಯಕ್ತಪಡಿಸುತ್ತಾನೆ. ಆಲ್ಜೀರಿಯಾದಲ್ಲಿದ್ದಾಗ ಮನೆಯವರಿಗೆ ತನ್ನ ಬಗ್ಗೆ ಸುಳ್ಳು ಹೇಳಿ, ತನ್ನ ಓದು ಮತ್ತು ಜೀವನಕ್ಕೇ ಎರವಾಗಿದ್ದನ್ನು ಜಾರ್ಜ್‌ಗೆ ತಿಳಿಸುತ್ತಾನೆ. ಇಡೀ ಚಿತ್ರದಲ್ಲಿ ಇರುವುದು ಇದೊಂದೇ ಹೆಚ್ಚಿನ ಅವಧಿಯ ದೃಶ್ಯ. ಮಜೀದನನ್ನು ಹಳೆಯ ಒಡನಾಟದ ಬಗ್ಗೆ ಚಕಾರವೆತ್ತದ ಜಾರ್ಜ್ ಸಿಟ್ಟು ಮಾಡಿಕೊಂಡು ಹೊರಡುತ್ತಾನೆ.

ಜಾರ್ಜ್‌ಗೆ ಮತ್ತೊಂದು ಟೇಪ್ ತಲುಪಿದ ಮೇಲೆ ಆನ್‌ಳ ಜೊತೆ ನೋಡುತ್ತಾನೆ. ಅದು ಅವನ ಮತ್ತು ಮಜೀದ್ ಭೇಟಿಯನ್ನು ಕುರಿತಾದದ್ದು. ಅದರಲ್ಲಿ ಜಾರ್ಜ್ ಹೊರಟುಹೋದ ನಂತರ ಕುಳಿತಲ್ಲಿಯೇ ಕುಳಿತಿರುವ ಮಜೀದ್ ಕೆಲವು ಕ್ಷಣಗಳ ನಂತರ ಮಡುಗಟ್ಟಿದ ಸಂಕಟ ಮತ್ತು ಉಕ್ಕುವ ಉದ್ವೇಗ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯವಿರುತ್ತದೆ. ಈ ಟೇಪುಗಳು ಮಜೀದನ ಕೃತ್ಯವಲ್ಲವೆಂದು ಅವನು ನಿಜ ಹೇಳುತ್ತಿದ್ದಾನೆ ಎಂದು ಆನ್‌ ಹೇಳಿದರೂ ಜಾರ್ಜ್ ಒಪ್ಪದೆ, ಎಲ್ಲವೂ ಅವನದೇ ವ್ಯವಸ್ಥೆ ಎಂದು ವಾದಿಸುತ್ತಾನೆ. ನಲವತ್ತು ವರ್ಷದ ಹಿಂದೆ ಅವನು ತಮ್ಮೊಡನೆ ಇದ್ದುದ್ದನ್ನು ಅವಳಿಗೆ ತಿಳಿಸುತ್ತಾನೆ. ತಾನು ಹಾಗೆ ಭಾವಿಸಲು ಅವನ ಬಗ್ಗೆ ಸುಳ್ಳು ಹೇಳಿದ್ದರಿಂದ ಅವನನ್ನು ಅವಮಾನಿಸುತ್ತಿದ್ದಾರೆಂದು ಹೇಳುತ್ತಾನೆ. ಆದರೆ ಅದೇನೆಂದು ಒತ್ತಾಯ ಮಾಡಿದರೂ ಹೇಳುವುದಿಲ್ಲ.

ಆನ್ ತನ್ನ ಸಹೋದ್ಯೋಗಿಯೊಂದಿಗೆ ಈ ವಿಷಯವನ್ನು ಹಂಚಿಕೊಂಡು ಪರಿತಪಿಸುತ್ತಾಳೆ. ಅವರಿಬ್ಬರ ಸಂಬಂಧ ಕೇವಲ ಸ್ನೇಹ ಮಾತ್ರವಲ್ಲ ಎನ್ನುವುದನ್ನು ನಿರ್ದೇಶಕ ಸೂಚಿಸುವ ದೃಶ್ಯದ ನಂತರ ಮಗ ಪಿರೆಟ್ ಮನೆಗೆ ಬಾರದಿರುವುದರಿಂದ ಜಾರ್ಜ್-ಆನ್‌ ಆತಂಕಕ್ಕೆ ಒಳಗಾಗುತ್ತಾರೆ. ಆನ್‌ಳ ವಿರೋಧದ ನಡುವೆಯೂ ಜಾರ್ಜ್ ಮಜೀದ್ ತನ್ನ ಮಗನನ್ನು ಅಪಹರಿಸಿದ್ದಾನೆಂದು ಸಂದೇಹಪಡುತ್ತಾನೆ. ಪೊಲೀಸರನ್ನು ಕರೆದುಕೊಂಡು ಮಜೀದನ ಹೋದರೆ ಅಲ್ಲಿ ಅವನ ಮಗನಿರುತ್ತಾನೆ. ನಂತರ ಕಾಲ ಪಲ್ಲಟಗೊಂಡ ದೃಶ್ಯದಲ್ಲಿ ಮಜೀದ್ ಮತ್ತು ಅವನ ಮಗನನ್ನು ಪೋಲಿಸ್ ವ್ಯಾನಿನಲ್ಲಿ ಕಾಣುತ್ತೇವೆ. ಮಜೀದ್ ಮತ್ತಷ್ಟು ಕುಗ್ಗಿದವನಂತೆ ನಮಗೆ ಭಾಸವಾಗುತ್ತದೆ. ಖಚಿತ ಪ್ರಮಾಣವಿಲ್ಲದ ಕಾರಣ ಅವನನ್ನು ಬಿಟ್ಟು ಬಿಡುತ್ತಾರೆಂದು ಜಾರ್ಜ್ ಹೆಂಡತಿಗೆ ಹೇಳುತ್ತಾನೆ. ನಂತರದ ದೃಶ್ಯದಲ್ಲಿ ಆನ್‌ಳ ಸ್ನೇಹಿತೆಯ ಜೊತೆಗೆ ಬರುವ ಫಿರಟ್ ಅಮ್ಮನ ಬಗ್ಗೆ ಸೆಟೆದುಕೊಂಡು ಯಾವ ಪ್ರಶ್ನೆಗೂ ಉತ್ತರ ಕೊಡುವುದಿಲ್ಲ. ಕೊನೆಗೆ ಆಡುವ ಒಂದು ಮಾತಿನಲ್ಲಿ ಸಹೋದ್ಯೋಗಿಯೊಂದಿಗೆ ಇರಬಹುದಾದ ಆಕೆಯ ಅನೈತಿಕ ಸಂಬಂಧವನ್ನು ಸೂಚಿಸುತ್ತಾನೆ.

ಜಾರ್ಜ್ ಟೀವಿ ಆಫೀಸಿನಲ್ಲಿರುವಾಗ ಮಜೀದ್‌ನಿಂದ ಫೋನ್‌ ಬರುತ್ತದೆ. ಇಡೀ ಚಿತ್ರದಲ್ಲಿ ಅತ್ಯಂತ ಮುಖ್ಯವಾದ ಈ ದೃಶ್ಯದಲ್ಲಿ ಜಾರ್ಜ್ ಮಜೀದನ ಫ್ಲ್ಯಾಟ್ ಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಾನೆ. ಮಜೀದ ಅವನನ್ನು ಖಾಲಿ ಇರುವ ಹಜಾರಕ್ಕೆ ಕರೆದುಕೊಂಡು ಹೋಗುತ್ತಾನೆ. ಒಬ್ಬರಿಂದೊಬ್ಬರು ಸುಮಾರು ಹತ್ತು ಅಡಿ ದೂರದಲ್ಲಿ ನಿಂತಿರುವಂತೆಯೇ ಜಾರ್ಜ್ ಕರೆದದ್ದು ಏಕೆಂದು ಅಬ್ಬರಿಸುತ್ತಾನೆ. ಅದನ್ನ ಜೇಬಿನಿಂದ ಕೈ ಚಾಕು ತೆಗೆದುಕೊಂಡು ಕುತ್ತಿಗೆಯನ್ನು ಕೊಯ್ದುಕೊಳ್ಳುತ್ತಾನೆ. ರಕ್ತ ಚಿಮ್ಮಿ ಕೆಳಗುರುಳುತ್ತಾನೆ. ಏನೂ ತೋಚದ ಜಾರ್ಜ್ ಸುಮ್ಮನೆ ನಿಂತಿರುತ್ತಾನೆ. ನಮಗೆ ಅವನ ಬೆನ್ನು ಮಾತ್ರ ಕಾಣುತ್ತಿರುತ್ತದೆ. ಆತ್ಮಹತ್ಯೆಯ ನಿಜವಾದ ಕಾರಣ ಮತ್ತು ಜಾರ್ಜ್‌ನಲ್ಲಿ ಉಂಟಾಗಿರಬಹುದಾದ ಭಾವವನ್ನು ಊಹಿಸಿಕೊಳ್ಳಲು ನಮಗೆ ಬಿಟ್ಟುಬಿಡುತ್ತಾನೆ ಮೈಕೇಲ್ ಹೆನೆಕೆ. ಇಡೀ ಶಾಟ್ ನಲ್ಲಿ ಕ್ಯಾಮೆರಾ ಸ್ಥಿರವಾಗಿರುತ್ತದೆ. ಜೊತೆಗೆ ಸಂಪೂರ್ಣ ನಿಶ್ಯಬ್ದ. ಆಮೇಲೆ ಅರೆಬೆಳಕಿನಲ್ಲಿ ಜಾರ್ಜ್ ಮನೆಗೆ ನಿಧಾನಗತಿಯಲ್ಲಿ ಬರುತ್ತಾನೆ ಮತ್ತು ಆನ್‌ಳಿಗೆ ನಡೆದದ್ದನ್ನು ತಿಳಿಸುತ್ತಾನೆ. ನಂತರ ಹಿಂದಿನ ಹುಂಜದ ಕಥೆಯನ್ನು ಕೂಡ ಹೇಳುತ್ತಾನೆ. ತನಗೆ ಹೆದರಿಕೆ ಹುಟ್ಟಿಸಲೆಂದೇ ಅವನು ಹಾಗೆ ಮಾಡಿದ್ದೆಂದು ತಿಳಿಸುತ್ತಾನೆ. ಆಗಲೂ ಅವಳಿಗೆ ತಾನು ಅವನ ಬಗ್ಗೆ ಹೇಳಿದ ಸುಳ್ಳು ಏನು ಎನ್ನುವುದನ್ನು ಹೇಳುವುದಿಲ್ಲ. ಚಿತ್ರದಲ್ಲಿ ಕೊನೆಗೂ ಇದು ನಿಗೂಢವಾಗಿಯೇ ಉಳಿಯುತ್ತದೆ.

ಆ ರಾತ್ರಿಯೇ ಮಜೀದ್‌ನ ಮಗ ಮನೆಗೆ ಬಂದಾಗ ಅವನನ್ನು ಎದುರಿಸುವ ನೈತಿಕ ಶಕ್ತಿ ಜಾರ್ಜ್‌ಗೆ ಇಲ್ಲವಾಗುತ್ತದೆ. ಮಜೀದ್‌ನ ಮಗ ಜಾರ್ಜ್‌ನ ಆಫೀಸಿನಲ್ಲಿಯೂ ಕಾಣಿಸಿಕೊಳ್ಳುತ್ತಾನೆ. ಅವನನ್ನು ನೋಡಿ ಗಲಿಬಿಲಿಗೊಂಡ ಜಾರ್ಜ್ ನೆಪವೊಂದನ್ನು ಹೇಳಿ ಸಾಗು ಹಾಕುವುದಕ್ಕೆ ನೋಡುತ್ತಾನೆ. ಆದರೆ ಅದಕ್ಕೆ ಜಗ್ಗದೆ ತಾನು ಅವನ ತಂದೆಯ ಸಾವಿಗೆ ಕಾರಣನಲ್ಲವೆಂದು ಹೇಳುವುದಲ್ಲದೆ ಇನ್ನು ಮುಂದೆ ವಿಡಿಯೋ ಟೇಪುಗಳನ್ನು ಕಳಿಸಕೂಡದೆಂದು ತಾಕೀತು ಮಾಡುತ್ತಾನೆ. ವಿಪರೀತವೆನಿಸುವ ಅಂಥ ಸಂದರ್ಭದಲ್ಲಿಯೂ ಮಜೀದ್‌ನ ಮಗ ಹಿಂಜರಿಕೆಯಿಂದಲೇ ವರ್ತಿಸುತ್ತಾನೆ. ವಿಪರ್ಯಾಸವೆನ್ನುವಂತೆ ಜಾರ್ಜ್‌ಗೆ ಹೆಚ್ಚು ಮಾತನಾಡಲು, ಆಕ್ರೋಶ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುತ್ತಾನೆ.

ಮಧ್ಯಾಹ್ನ ಮನೆಯಲ್ಲಿ ಜಾರ್ಜ್ ಅಪರಾಧಿತನದಿಂದ ಜರ್ಜರಿತನಾದವನಂತೆ ಕಾಣಿಸಿ ನಿದ್ದೆ ಮಾತ್ರೆಗಳನ್ನು ನುಂಗುತ್ತಾನೆ. ಎಲ್ಲರಿಂದ ಮುಚ್ಚಿ ಕೊಳ್ಳುವವನಂತೆ ಕರ್ಟನ್ನುಗಳನ್ನು ಹಾಕಿ ಅರೆಬೆಳಕಿನಲ್ಲಿ ಬಟ್ಟೆ ಕಳಚಿ ಬೆತ್ತಲಾಗಿ ಮುಸುಕೆಳೆದು ಮಲಗುತ್ತಾನೆ. ಅವನ ಕಣ್ಣೆದುರು ಅಂದಿನ ದೃಶ್ಯ ಎದುರಾಗುತ್ತದೆ. ದೂರ ಚಿತ್ರಿಕೆಯಲ್ಲಿ ಬೇಡವೆಂದು ತಪ್ಪಿಸಿಕೊಳ್ಳಲು ಅತ್ತಿತ್ತ ನೋಡುತ್ತ ಓಡುವ ಮಜೀದ್ ಕೊನೆಗೆ ಕಾರಿನೊಳಗೆ ಹೋಗುತ್ತಾನೆ. ಈ ಚಿತ್ರಿಕೆಯ ನಂತರ ಮಜೀದನಿಗೆ ತಪ್ಪಿಸಿ ಜಾರ್ಜ್‌ ವ್ಯಾಸಂಗ ಮಾಡಿದನೆಂದು ಸೂಚಿಸುವ ದೃಶ್ಯದ ಮೇಲೆ ಮೂಡುವ ಟೈಟಲ್ ಕಾರ್ಡುಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ನಿಜಕ್ಕೂ ಕಷ್ಟವೇ.

ವಸಾಹತುತನದ ಧೋರಣೆ ಮತ್ತು ದೌರ್ಜನ್ಯದ ಪರಿಯನ್ನು ಅದಕ್ಕೆ ಒಳಗಾದ ಎಲ್ಲ ದೇಶಗಳ ಪ್ರೇಕ್ಷಕರರಲ್ಲಿ ಹಲಕೆಲವು ಬಗೆಯ ಆಲೋಚನೆಗಳು ಹೊಮ್ಮುವಂತೆ ಮಾಡುವುದರಲ್ಲಿ ಚಿತ್ರ ಯಶಸ್ವಿಯಾಗುತ್ತದೆ.. ಜೊತೆಗೆ ಹಲವಾರು ರೀತಿಯಲ್ಲಿ ಇಂದಿಗೂ ಇಂಥ ಪರಿಸ್ಥಿತಿ ಇರುವುದಾದರೆ ಕಟು ವಾಸ್ತವ ಎನ್ನಿಸಿದರೆ ಆಶ್ಚರ್ಯವಿಲ್ಲ.