ʻಇಡಾʼ ಚಿತ್ರ ತೆರೆದುಕೊಳ್ಳುವುದು ಒಂದು ಕಾನ್ವೆಂಟ್ ನಲ್ಲಿ. ಚಿತ್ರಕ್ಕೆ ಧಾರ್ಮಿಕ ಬುನಾದಿ ಇದೆ ಎನ್ನುವುದು ಮೊದಲನೆ ಚಿತ್ರಿಕೆಯಲ್ಲಿಯೇ ಬಿಂಬಿತವಾಗುತ್ತದೆ. ಆನ್ನಾ ಕ್ರಿಸ್ತನ ವಿಗ್ರಹವನ್ನು ಪೂರ್ಣಗೊಳಿಸುವ ಆನ್ನಾಳ ಪರಿಚಯವಾಗುತ್ತದೆ. ಹದಿನೆಂಟರ ಅವಳಿಗೆ ಮದರ್ ಸುಪೀರಿಯರ್ ಪ್ರಮಾಣ ವಚನ ಸ್ವೀಕರಿಸುವ ಮುಂಚೆ ‘ನಿನ್ನೂರಿಗೆ ಹೋಗಿ ದೂರದ ಸಂಬಂಧಿ ವಾಂಡಾ ಕ್ರುಜ್‌ಳನ್ನು ಭೇಟಿ ಮಾಡಿ ಬಾ’ ಎನ್ನುತ್ತಾಳೆ.
ಅವಳನ್ನು ಭೇಟಿಯಾಗುವ ಸಂದರ್ಭವು ಅವಳ ಮೇಲೆ ಬೀರಿದ ಪ್ರಭಾವಗಳನ್ನು  ಇಡಾ ಸಿನಿಮಾ ಕಟ್ಟಿಕೊಡುವ ರೀತಿ ವಿಭಿನ್ನವಾದುದು. ʻಲೋಕ ಸಿನೆಮಾ ಟಾಕೀಸ್ʼ ನಲ್ಲಿ ಪೋಲೆಂಡ್ ನ ʻಇಡಾʼ ಸಿನಿಮಾ ಕುರಿತು ಬರೆದಿದ್ದಾರೆ ಎ.ಎನ್. ಪ್ರಸನ್ನ

 

ಈ ಶತಮಾನದಲ್ಲಿ ಚಿತ್ರವೊಂದು ಕಪ್ಪು-ಬಿಳುಪು ಎಂದಾಗಲೇ ಕುತೂಹಲ ಪುಟಿಯುತ್ತದೆ. ಅದರ ಅಗತ್ಯ, ಕಥಾವಸ್ತು, ಮತ್ತು ಅದನ್ನು ರೂಢಿಸಿಕೊಂಡಿರುವ ಬಗೆ ಹೇಗಿರಬಹುದು ಎನ್ನುವುದರ ಬಗ್ಗೆ ಇನ್ನಷ್ಟು ಕುತೂಹಲ. ಹೀಗನ್ನುವಾಗಲೇ ತಮ್ಮ ವಿಶಿಷ್ಟತೆಯಿಂದಾಗಿ ಯಶಸ್ವಿಯಾದ ಇಪ್ಪತ್ತೊಂದನೆ ಶತಮಾನದ ಕಪ್ಪು ಬಿಳುಪು ಚಿತ್ರಗಳಾದ ʻರೋಮಾʼ (ನಿ.ಆಲ್‌ ಫಾನ್ಸೋ ಕುರಾನ್), ʻಆರ್ಟಿಸ್ಟ್ʼ(ನಿ. ಮಿಶೆಲ್‌ ಹಸಾನವಿಸಿಯೆಲ್), ʻನೆಬ್ರಸ್ಕಾʼ(ನಿ.ಅಲೆಕ್ಸಾಂಡರ್‌ ಪಾಯ್ನ್‌), ʻಕಂಟ್ರೋಲ್ʼ (ನಿ.ಆಂಟಾನ್‌ ಕಾರ್ಬಿಜ್), ʻಎ ಗರ್ಲ್‌ ವಾಕ್ಸ್‌ ಹೋಮ್ ಅಲೋನ್‌ ಅಟ್‌ ನೈಟ್ʼ (ನಿ. ಅನಾ ಲಿಲಿ ಅಮಿರ್‌ ಪೋರ್) ಮುಂತಾದ ಚಿತ್ರಗಳು ಕಣ್ಣಮುಂದೆ ಸುಳಿಯುವುದುಂಟು.
ʻಇಡಾʼ ಚಿತ್ರದ ಹಿನ್ನೆಲೆ ಎರಡನೆಯ ಮಹಾಯುದ್ಧದ ನಂತರದ ಕಾಲ. ಎಂಭತ್ತೆರಡು ನಿಮಿಷಗಳ ಅವಧಿಯ ಚಿತ್ರದಲ್ಲಿ ಯಾವ ಕ್ಷಣವನ್ನೂ ನಿರರ್ಥಕಗೊಳಿಸುವುದಿಲ್ಲ ನಿರ್ದೇಶಕ ಪಾವೆಲ್ ಪಾವ್ಲಿಕೋವಸ್ಕಿ.

(ಪಾವೆಲ್‌ ಪಾವ್ಲಿಕೋವಸ್ಕಿ)

ಪೋಲೆಂಡಿನ ಸಿನಿಮಾ ಕ್ಷೇತ್ರಕ್ಕೆ ತನ್ನದೇ ಆದ ಹೆಗ್ಗಳಿಕೆಯಿದೆ. ಜೊತೆಗೆ ಅದು ಬಹಳ ವಿಸ್ತಾರವುಳ್ಳದ್ದು. ಎರಡನೆ ಮಹಾಯುದ್ಧದ ನಂತರ ಪೋಲೆಂಡ್‌ನಲ್ಲಿ ಸುಮಾರು ಐವತ್ತು ವರ್ಷಗಳ ಕಾಲ‌ ಕಮ್ಯುನಿಸ್ಟ್‌ ಆಡಳಿತಕ್ಕೆ ಒಳಗಾಗಿ ಎಂಭತ್ತರ ದಶಕದ ಕೊನೆಯ ಭಾಗದಲ್ಲಿ ಅದರಿಂದ ಬಿಡುಗಡೆ ಪಡೆದು ಡೆಮೊಕ್ರಾಟಿಕ್‌ ದೇಶವಾಗಿರುವುದು ತಿಳಿದ ಸಂಗತಿಯೆ. ಆದರೂ ಚಲನಚಿತ್ರಕ್ಕೆ ಸಂಬಂಧಿಸಿದಂತೆ ʻದ ಪ್ರಾಮಿಸ್ಡ್‌ ಲ್ಯಾಂಡ್‌ʼ, ʻಮ್ಯಾನ್‌ ಆಫ್‌ ಐರನ್‌ʼ ಸೇರಿದಂತೆ ಆಸ್ಕರ್‌ ಚಿತ್ರೋತ್ಸವದಲ್ಲಿ ನಾಲ್ಕು ಬಾರಿ ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿ ಪಡೆದ ಆಂಡ್ರೆ ವಾಜ್ಡಾ, ʻನೈಫ್‌ ಇನ್‌ ದ ವಾಟರ್‌ʼ, ʻಪಿಯಾನಿಸ್ಟ್‌ʼ ಮುಂತಾದ ಖ್ಯಾತಿಯ ರೊಮಾನ್‌ ಪೊಲಾನ್ಸ್ಕಿ, ʻಅಟ್‌ ಫುಲ್‌ ಗ್ಯಾಲಪ್‌ʼ, ʻಇನ್‌ವೆಂಟರಿʼ ಮುಂತಾದ ಚಿತ್ರಗಳು ಮತ್ತು ಜೀವಮಾನ ಸಾಧನೆಗಾಗಿ ೨೦೧೨ರಲ್ಲಿ ಗೋವಾ ಚಿತ್ರೋತ್ಸವದಲ್ಲಿ ಪ್ರಶಸ್ತಿ ನೀಡಲಾದ ಜಾ಼ನುಸಿ, ʻವೈಟ್‌ʼ, ʻರೆಡ್ʼ ಮತ್ತು ʻಬ್ಲೂʼ ಚಿತ್ರಗಳಿರುವ ತ್ರೀ ಕಲರ್ಸ್ ಟ್ರಿಯಾಲಜಿಯಿಂದ ಪ್ರಸಿದ್ಧನಾದ ಕೀಸ್ಲೊವಸ್ಕಿ ಮುಂತಾದ ಪ್ರತಿಭಾವಂತ ನಿರ್ದೇಶಕರನ್ನು ನೀಡಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಐಸಾಕ್‌ ಬಾಶೆವಿಸ್‌ ಸಿಂಗರ್‌ ನೊಬೆಲ್‌ ಪ್ರಶಸ್ತಿ ಗಳಿಸಿದರೆ ʻಟ್ಯಾಂಗೋʼ ಖ್ಯಾತಿಯ ಸ್ಲಾವೊಮಿರ್‌ ಮ್ರೋಜೆ಼ಕ್‌ ನಾಟಕ ಕ್ಷೇತ್ರದಲ್ಲಿ ವಿಶ್ವ ಮನ್ನಣೆ ಪಡೆದಿದ್ದಾರೆ. ಇದರಿಂದ ಸ್ಥೂಲವಾಗಿ ವ್ಯಕ್ತವಾಗುವ ಸಂಗತಿಯೆಂದರೆ ಭಾವಾಭಿವ್ಯಕ್ತಿ ಮತ್ತು ಸೃಷ್ಟಿಕ್ರಿಯೆಗೆ ರಾಜಕೀಯ ಅಥವ ಇತರೆ ಕಾರಣಗಳಿಂದ ಸ್ವಾತಂತ್ರ್ಯವಿರದ ಸಂದರ್ಭಗಳಲ್ಲಿ ಅದು ಇನ್ನಷ್ಟು ಬಲದಿಂದ ಆ ಸವಾಲನ್ನು ಸ್ವೀಕರಿಸುತ್ತದೆ. ಅಷ್ಟಲ್ಲದೆ ಅನೇಕಾನೇಕ ಉತ್ಕೃಷ್ಟ ಫಲಗಳು ಲಭಿಸಿದಂತಾಗುತ್ತದೆ.

ʻಇಡಾʼ ಚಿತ್ರದ ನಿರ್ದೇಶಕ ಪಾವೆಲ್‌ ಪಾವ್ಲಿಕೋವಸ್ಕಿಗೆ 2015ರ ಆಸ್ಕರ್‌ ಪ್ರಶಸ್ತಿ ತಂದುಕೊಟ್ಟರೆ 2019ರಲ್ಲಿ ʻಕೋಲ್ಡ್‌ ವಾರ್‌ʼ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರವೂ ಕಪ್ಪು-ಬಿಳುಪಿನದು.

ʻಇಡಾʼ ಚಿತ್ರ ತೆರೆದುಕೊಳ್ಳುವುದು ಒಂದು ಕಾನ್ವೆಂಟ್ ನಲ್ಲಿ. ಚಿತ್ರಕ್ಕೆ ಧಾರ್ಮಿಕ ಬುನಾದಿ ಇದೆ ಎನ್ನುವುದು ಮೊದಲನೆ ಚಿತ್ರಿಕೆಯಲ್ಲಿಯೇ ಬಿಂಬಿತವಾಗುತ್ತದೆ. ಆನ್ನಾ ಕ್ರಿಸ್ತನ ವಿಗ್ರಹವನ್ನು ಪೂರ್ಣಗೊಳಿಸುವ ಆನ್ನಾಳ ಪರಿಚಯವಾಗುತ್ತದೆ. ಹದಿನೆಂಟರ ಅವಳಿಗೆ ಮದರ್ ಸುಪೀರಿಯರ್ ಪ್ರಮಾಣ ವಚನ ಸ್ವೀಕರಿಸುವ ಮುಂಚೆ ‘ನಿನ್ನೂರಿಗೆ ಹೋಗಿ ದೂರದ ಸಂಬಂಧಿ ವಾಂಡಾ ಕ್ರುಜ್‌ಳನ್ನು ಭೇಟಿ ಮಾಡಿ ಬಾ’ ಎನ್ನುತ್ತಾಳೆ. ಆನ್ನಾ ಅನಾಥಳಾಗಿ ಬೆಳೆದದ್ದು ಆ ಕಾನ್ವೆಂಟ್ ನಲ್ಲಿಯೇ. ಅವಳಿಗೆ ಆ ಪರಿಸರ ವಾತಾವರಣ ಬಿಟ್ಟು ಬೇರೇನೂ ತಿಳಿಯದು. ಅಷ್ಟೇ ಅಲ್ಲದೆ ತನಗೊಬ್ಬ ಸಂಬಂಧಿ ಇರುವುದು ಕೂಡ ತಿಳಿದಿರುವುದಿಲ್ಲ. ಮದರ್ ಸುಪೀರಿಯರ್ ಹೇಳಿದ ಮೇಲೆ ಮುಗಿಯಿತು. ಬೇಸರದಿಂದಲೇ ಕಾನ್ವೆಂಟಿನಲ್ಲಿ ಇರುವ ರೀತಿಯಲ್ಲಿಯೇ ಸಿದ್ಧಳಾಗಿ ಹೊರಡುತ್ತಾಳೆ. ಅವಳ ಮನಸ್ಸನ್ನು ಪ್ರತಿಫಲಿಸುವಂತೆ ಸ್ಟಿಲ್ ಶಾಟ್‌ನಲ್ಲಿ ಹಿಂದೆಲ್ಲೋ ಇರುವ ಕಾನ್ವೆಂಟಿನಿಂದ ಮಂಜು ರಾಶಿಯ ಮಧ್ಯೆ ಇರುವ ಕಿರಿದಾದ ದಾರಿಯಲ್ಲಿ ಒಬ್ಬಳೇ ನಡೆದುಕೊಂಡು ಬರುತ್ತಾಳೆ. ಪ್ರಯಾಣದುದ್ದಕ್ಕೂ ಭವಿಷ್ಯದ ಬಗ್ಗೆ ಕಾತರವಿರುವ ಭಾವವನ್ನು ಅವಳ ಮುಖಚಹರೆಯಲ್ಲಿ ವ್ಯಕ್ತವಾಗುವುದನ್ನು ಅತಿಸಮೀಪ ಚಿತ್ರಿಕೆಯಲ್ಲಿ ಮತ್ತೆ ಮತ್ತೆ ನಿರೂಪಿಸಲಾಗಿದೆ.

ವಾಂಡಾಳನ್ನು ಭೇಟಿ ಮಾಡುವ ಮುಂಚೆಯೇ ಮುಂದಿನ ದಾರಿ ಸರಳವಲ್ಲ ಎಂದು ಸೂಚಿಸುವ ಸುತ್ತಿಕೊಂಡು ಹೋಗುವ ಮೆಟ್ಟಿಲುಗಳನ್ನು ಹತ್ತಿ ಹೋಗುತ್ತಾಳೆ. ಸೌಮ್ಯವಾದ ದುಂಡುಮುಖದ ಆನ್ನಾ ಗಡಸು ಛಾಯೆಯ ಚೌಕುಮುಖದ ವಾಂಡಾಳನ್ನು ಭೇಟಿ ಮಾಡುತ್ತಾಳೆ. ಬಾಗಿಲು ತೆರೆದು ನೋಡುವ ವಾಂಡಾ ಅವಳ ನಿರೀಕ್ಷೆಯಲ್ಲಿಯೇ ಇರುವಳೇನೋ ಎನ್ನಿಸುವಂತೆ ನಿರ್ಭಾವ ಮುಖಚಹರೆ ಎದುರಾಗುತ್ತದೆ. ನಡಿಗೆ, ನೋಟ, ಮಾತುಗಳಲ್ಲಿ ಯಾವ ಬಗೆಯ ಭಾವ ಸಂಚಲನ ಕಾಣುವುದಿಲ್ಲ. ಆ ಸಮಯದಲ್ಲಿಯೇ ಅವಳಿಗೆ ಸಿಗರೇಟು ಮತ್ತು ಗಂಡಸಿನೊಬ್ಬನ ಸಂಗವಿರುವುದು ನಿರೂಪಿತವಾಗುತ್ತದೆ.

ಆನ್ನಾಳೊಂದಿಗೆ ಆಡುವ ಮಾತುಗಳು ಕೆಲವು ಮಾತ್ರ. ನಂತರ ನೀನು ಜ್ಯೂ ಎಂದು ಹೇಳಿ ಆಶ್ಚರ್ಯದಲ್ಲಿ ಮುಳುಗಿಸುತ್ತಾಳೆ ವಾಂಡಾ. ಅದಕ್ಕೆ ಆನ್ನಾಗೆ ಸಾಧ್ಯವಾಗುವುದು ಬಿಟ್ಟಕಣ್ಣು ಬಿಟ್ಟಂತೆ ನೋಡುವುದಷ್ಟೇ. ಅಲ್ಲಿಯ ತನಕ ತನ್ನ ಬಗ್ಗೆ ಏನೂ ತಿಳಿದಿರದ ಆನ್ನಾಗೆ ಅವಳು ಹುಟ್ಟಿದ ಊರು, ಮತ್ತು ಈಗ ಇಲ್ಲದ ತಂದೆ ತಾಯಿ ಇತ್ಯಾದಿಯನ್ನು ತಿಳಿಸುತ್ತಾಳೆ ವಾಂಡಾ. ಹಾಗಿದ್ದರೆ ಅವರ ಸಮಾಧಿ ಸ್ಥಳಕ್ಕಾದರೂ ಹೋಗೋಣವೆನ್ನುವ ಆನ್ನಾಳಿಗೆ, ಅವರಿಗೆ ಸಮಾಧಿ ಎನ್ನುವುದೇ ಇಲ್ಲವೆಂದು ತಿಳಿಸಿ ಬೆರಗು ಮೂಡಿಸಿ, ಅವರು ಕಾಡಿನಲ್ಲೋ ಇನ್ನೆಲ್ಲೋ ಸತ್ತಿರಬೇಕು ಎನ್ನುತ್ತಾಳೆ. ಅದಕ್ಕೆ ಆನ್ನಾಳದು ಆಶ್ಚರ್ಯದ ಪ್ರತಿಕ್ರಿಯೆಯಷ್ಟೆ. ನಮಗೆ ಕಾಣುವುದು ಸಮೀಪ ಚಿತ್ರಿಕೆಯಲ್ಲಿನ ಅರ್ಧ ಕಪ್ಪು, ಅರ್ಧ ಬಿಳುಪು ಮುಖದ ಆನ್ನಾ. ಅದರ ಹಿನ್ನೆಲೆಗೆ ಅವಳ ಭಾವನೆಗೆ ಫೂರಕವಾದ ಸಂಗೀತವಿರುತ್ತದೆ.

ಅವಳ ಮನಸ್ಸನ್ನು ಪ್ರತಿಫಲಿಸುವಂತೆ ಸ್ಟಿಲ್ ಶಾಟ್‌ನಲ್ಲಿ ಹಿಂದೆಲ್ಲೋ ಇರುವ ಕಾನ್ವೆಂಟಿನಿಂದ ಮಂಜು ರಾಶಿಯ ಮಧ್ಯೆ ಇರುವ ಕಿರಿದಾದ ದಾರಿಯಲ್ಲಿ ಒಬ್ಬಳೇ ನಡೆದುಕೊಂಡು ಬರುತ್ತಾಳೆ.

ಆನ್ನಾಳಿಗೆ ವಾಂಡಾಳ ಜೊತೆ ಹೆಚ್ಚಿಗೆ ಮಾತಿಗೆ ಅವಕಾಶವಿಲ್ಲ. ವಾಂಡಾ ನಿರ್ಧರಿಸಿದಂತೆ ಅವರು ಹೊರಡುವುದು ಆನ್ನಾಳ ಊರಿಗೆ. ವಾಂಡಾಳ ಹಳೆಯ, ರಿಪೇರಿಯಿಲ್ಲದ, ಬಣ್ಣದ ವಾಸನೆಯನ್ನೂ ಕಾಣದ ಕಾರಿನಲ್ಲಿ. ಅವರ ಪ್ರಯಾಣ ಉದ್ದಾನುದ್ದ ಮರಗಳಿರುವ ನಿರ್ಜನ ದಾರಿಗಳಲ್ಲಿ. ಮರಗಳು ಕಿಂಚಿತ್‌ ಅಲ್ಲಾಡುತ್ತಿರುವುದಿಲ್ಲ. ಅವು ಒಟ್ಟಾರೆಯಾಗಿ ಎಲ್ಲವೂ ಬಿಗಿದ ವಾತಾವಣಕ್ಕೆ ಸಾಕ್ಷಿಯಾಗುತ್ತವೆ. ದಾರಿಯಲ್ಲಿ ವಾಂಡಾಳಿಗೆ ಸಿಗರೇಟು ಸಂಗಾತಿಯಾದರೆ ಅನ್ನಾಳಿಗೆ ಮೌನವೇ ಸಂಗಾತಿ.

ಅವರು ತಲುಪಬೇಕಾಗಿದ್ದ ಊರು ಸಿಗುತ್ತದೆ. ಅಲ್ಲೆಲ್ಲಿಯೂ ಮನುಷ್ಯರ ಓಡಾಟವಿಲ್ಲ. ಬೇರೆ ಇನ್ನಾವುದರ ಚಲನೆಯೂ ಇಲ್ಲ. ಅವರು ಹಿಂದೆ ಆನ್ನಾಳ ತಂದೆ-ತಾಯಿ ಇದ್ದ ಮನೆಗೆ ಹೋಗುತ್ತಾರೆ. ಬಾಗಿಲು ಬಡಿದರೆ ನಿರುತ್ತರ. ಪಕ್ಕದ ಮನೆಯವಗೆ ಆ ಮನೆಯಲ್ಲಿ ಯುದ್ಧದ ನಂತರ ಇದ್ದವರ ಬಗ್ಗೆ ಏನೂ ತಿಳಿಯದು. ತಿಳಿದಿರಬಹುದಾದ ಅವಳ ಗಂಡ ಸಿಗುವುದಕ್ಕೆ ಕಾಯಬೇಕು. ಅವರು ನಿರಾಶರಾಗುವುದಿಲ್ಲ. ತಿರುಗಿ ಬಂದರೂ ಅವನು ಉಪಕಾರಿ ಎನಿಸುವುದಿಲ್ಲ.

ಅವರು ಹೊರಟು ಹೊಟೇಲ್ ಒಂದರಲ್ಲಿ ತಂಗುತ್ತಾರೆ. ಆ ಹೋಟೆಲ್ ನಲ್ಲಿ ಆನ್ನಾಳ ತಂದೆ ತಾಯಿಯ ಬಗ್ಗೆ ಯಾರಿಗೂ ತಿಳಿಯದು. ಅವರು ಕಳೆಯುವ ಸಮಯ ಇಡೀ ಚಿತ್ರದ ಮುಖ್ಯವಾದ ಭಾಗ. ವಾಂಡಾಳಂತೂ ತಾನು ಸಿಗರೇಟನ್ನು ಬಿಟ್ಟಿರುವುದಿಲ್ಲ ಎನ್ನುವ ರೀತಿಯಲ್ಲಿ ಯಾವಾಗಲೂ ಬಾಯಿಗೆ ಅದನ್ನು ಅಂಟಿಸಿಕೊಂಡೇ ಇರುತ್ತಾಳೆ, ಇಷ್ಟಲ್ಲದೆ ಅವಳಿಗೆ ಕುಡಿತದ ಗೀಳು. ಇವುಗಳನ್ನು ಸುಮ್ಮನೆ ನೋಡುತ್ತಾ ಹೆಚ್ಚು ಮಾತಾಡದೆ ತನ್ನ ಪಾಡಿಗೆ ತಾನು ಇರಲು ಪ್ರಯತ್ನಿಸುತ್ತಾಳೆ ಆನ್ನಾ. ಕೇವಲ ಒಂದೆರಡು ದಿನಗಳ ಒಡನಾಟದಿಂದಲೇ ವಾಂಡಾ ಮತ್ತು ಅನ್ನಾಳ ಜೀವನಶೈಲಿ ಅಜಗಜಾಂತರ ವ್ಯತ್ಯಾಸ ಇರುವುದು ಕಂಡುಬರುತ್ತದೆ.

ಅವರು ವಾದ್ಯಗೋಷ್ಠಿಗೆ ಹೋಗುತ್ತಾರೆ. ಆನ್ನಾಳಿಗೆ ಅದರ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೆ. ಆದರೆ ವಾಂಡಾ ಅದರಲ್ಲಿ ಪೂರ್ಣ ಆಸಕ್ತಿಯಿಂದ ಎಲ್ಲವನ್ನು ಗಮನಿಸಿ ಸಂತೋಷಪಡುತ್ತಾಳೆ. ವಾದ್ಯವೃಂದದವರಂತೂ ತಮ್ಮಲ್ಲೇ ತನ್ಮಯರಾಗಿ ಭಾವಪೂರ್ಣವಾಗಿ ಒಬ್ಬಳು ಹಾಡುತ್ತಿದ್ದರೆ ಉಳಿದ ಸಹ ವಾದಕರೆಲ್ಲ ಒಳಗೆ ಸೂಕ್ತ ಬೆಂಬಲ ಕೊಡುತ್ತಿರುತ್ತಾರೆ. ಇದರಿಂದ ಉತ್ತೇಜಿತಳಾಗಿ ವಾಂಡಾ ಅಲ್ಲಿರುವವನೊಬ್ಬನೊಟ್ಟಿಗೆ ಸ್ನೇಹ ಸಂಪಾದಿಸಲು ಸಾಧ್ಯವಾಗುತ್ತದೆ. ಆದರೆ ಇದೆಲ್ಲವನ್ನೂ ಸುಮ್ಮನೆ ನಿರ್ಭಾವದಿಂದ ಗಮನಿಸುತ್ತಿರುತ್ತಾಳೆ ಆನ್ನಾ. ಅವಳಿಗೆ ಗೊತ್ತಾಗುವ ರೀತಿಯಲ್ಲಿಯೇ ವಾಂಡಾ ತನ್ನ ಸಂಗಾತಿಯೊಡನೆ ಹೊರಡುತ್ತಾಳೆ.

ಹೊಟೇಲ್ ನಲ್ಲಿ ತನ್ನಷ್ಟಕ್ಕೆ ಸುಮ್ಮನಿದ್ದ ಆನ್ನಾಳಿಗೆ ಯಾವಾಗಲಾದರೂ ಪುರುಷ ಸಂಘದ ಬಯಕೆ ಉಂಟಾಗಿತ್ತೆ ಎಂದು ಕೇಳುತ್ತಾಳೆ ವಾಂಡಾ. ಅವಳು ಆ ಥರದ ಸಂದರ್ಭವೇ ಇಲ್ಲ ಎಂದು ಚುಟುಕಾಗಿ ಉತ್ತರಿಸುತ್ತಾಳೆ. ಯಾವ ರೀತಿಯ ಬಯಕೆ ಆಕರ್ಷಣೆ ಇಲ್ಲದಿರುವ ಪ್ರಮಾಣ ಮಾಡಿ ಏನು ಪ್ರಯೋಜನ ಎಂದು ಲೇವಡಿ ಮಾಡುತ್ತಾಳೆ. ಹಾಗೆ ಅವಳು ಹೇಳಿದ್ದು ಆನ್ನಾಳಲ್ಲಿ ಬೇರೊಂದು ಬಗೆಯ ಅನಿಸಿಕೆ ಹುಟ್ಟಲು ಕಾರಣವಾಗುತ್ತದೆ. ಮಾರನೇ ದಿನ ಆನ್ನಾ ವಾದ್ಯಗೋಷ್ಠಿಗೆ ಒಬ್ಬಳೇ ಹೋಗುತ್ತಾಳೆ. ವಾದ್ಯಗೋಷ್ಠಿಯಲ್ಲಿ ವಾದ್ಯ ನುಡಿಸುವವನೊಬ್ಬನ ಬಗ್ಗೆ ಅವಳಲ್ಲಿ ಆಕರ್ಷಣೆ ಉಂಟಾಗುತ್ತದೆ. ಅವನು ಅದನ್ನು ಗಮನಿಸಿ ಅವಳನ್ನು ಪ್ರತ್ಯೇಕವಾಗಿ ಅಲ್ಲಿಯೇ ಭೇಟಿ ಮಾಡಿದಾಗ ಅವಳು ಮಾತಾಡುವುದು ಅತ್ಯಲ್ಪ. ಬಯಕೆ ತುಂಬಿದ ದೃಷ್ಟಿಯಿಂದ ಅವನನ್ನು ನೋಡುತ್ತಾಳೆ ಅಷ್ಟೆ. ಅವರು ಆ ದಿನ ರಾತ್ರಿಯನ್ನು ಒಟ್ಟಾಗಿ ಕಳೆಯುತ್ತಾರೆ. ಅದಕ್ಕೆ ಯಾವ ಬಗೆಯ ವಿರೋಧವೂ ಸಂಕೋಚವೂ ಇಲ್ಲದಂತೆ ವರ್ತಿಸುವ ಅವಳನ್ನು, ಮದುವೆಯಾಗಿ ಮಕ್ಕಳು ಪಡೆದುಕೊಂಡು, ದೂರ ಹೋಗಿ ಇದ್ದುಬಿಡೋಣ ಎನ್ನುತ್ತಾನೆ ಅವನು. ಅವಳು ಅದನ್ನು ಸ್ವೀಕಾರ ಮಾಡಿದೆ ಎಂದು ಸೂಚಿಸುವಂತೆ ನಸು ನಗುತ್ತಾಳೆ. ಆದರೆ ಬೆಳಗಾಗುವುದಕ್ಕೆ ಮುಂಚೆಯೇ ತಾನು ಏನು ಮಾಡಬೇಕೆಂದು ನಿರ್ಧರಿಸಿರುತ್ತಾಳೆ.

ಹಾಗಾಗಿಯೇ ತನ್ನ ಎಂದಿನ ಕಾನ್ವೆಂಟಿನಲ್ಲಿನ ಸಿಸ್ಟರ್‌ನ ಉಡುಪನ್ನು ತೊಟ್ಟು ಇನ್ನೂ ಮಲಗಿರುವ ಅವನನ್ನು ಬಿಟ್ಟು ಸುಮ್ಮನೆ ಹಿಂತಿರುಗುತ್ತಾಳೆ. ಈ ಇಡೀ ಪ್ರಕರಣದಿಂದ ವಾಂಡಾ ಮತ್ತು ಆನ್ನಾಳ ನಡುವೆ ಯಾವ ಬಗೆಯ ವ್ಯತ್ಯಾಸ ಇರದಂತಾಗುತ್ತದೆ. ಮಾನವ ಸಹಜ ಆಕರ್ಷಣೆ ದೋಷಗಳಿಗೆ ಒಳಪಟ್ಟು ಆನ್ನಾ ಕೂಡ ಅದನ್ನು ಸ್ವೀಕರಿಸಿದ ನಂತರ ಅವಳೂ ಕೂಡ ಎಲ್ಲರಂತೊಬ್ಬಳು ಎನ್ನುವ ಪರಿಸ್ಥಿತಿ ತಲುಪುತ್ತಾಳೆ. ವಾಂಡಾಳಿಗೆ ಅವಳು ಹೀಗೆ ಪರಿವರ್ತಿತವಾಗಿರುವುದು ಕೂಡ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಜೊತೆಗೆ ಅದರ ಅಗತ್ಯವೂ ಇರುವುದಿಲ್ಲ.

ಆನ್ನಾ ಮತ್ತು ವಾಂಡಾ ಊರಿನಲ್ಲಿ ಅವರಿದ್ದ ಮನೆಗೆ ಸಂಬಂಧಿಸಿದ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತಾರೆ. ಆನ್ನಾಳ ತಂದೆ, ತಾಯಿಯನ್ನು ಕಾಡಲ್ಲಿರಿಸಿ ಸಾಕಿದವನು ಮತ್ತು ಅವರನ್ನು ಕೊಂದವನೂ ಅವನೇ ಎಂದು ತಿಳಿಯುತ್ತದೆ. ಆ ವ್ಯಕ್ತಿಯ ಮಗನಿಗೆ ಆ ಸಂಗತಿ ತಿಳಿದಿರುತ್ತದೆ. ಆನ್ನಾಳಿಗೆ ದಿಗ್ಭ್ರಮೆಯುಂಟಾದರೆ ವಾಂಡಾಳಿಗೆ ಯಾವ ಅತಿರೇಕದ ಭಾವವೂ ಉಂಟಾಗುವುದಿಲ್ಲ. ವಾಂಡಾ ತಾನು ನ್ಯಾಯಾಂಗದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಯಾಗಿದ್ದಾಗ ಎಷ್ಟೋ ಜನರ ಸಾವಿಗೆ ಕಾರಣನಾಗಿದ್ದಾನೆ ಎಂದು, ಯಾವ ಬಗೆಯ ಅಳುಕೂ ಇಲ್ಲದೆ ಹೇಳಿರುತ್ತಾಳೆ. ಹಾಗೆಂದೇ ಈಗ ಮತ್ತೆ ಸಾವು ಕೊಲೆ ಇತ್ಯಾದಿಗಳಿಂದ ಕಿಂಚಿತ್ ಅತಿರೇಕಗೊಳ್ಳುವುದಿಲ್ಲ.

ಅವರು ಅನ್ನಾಳ ತಂದೆ ತಾಯಿಯ ಹತ್ಯೆ ಮಾಡಿದ ಮಗನನ್ನು ಭೇಟಿ ಮಾಡುತ್ತಾರೆ. ಸಮಾಧಿ ನೋಡಬೇಕೆಂದು ಹಂಬಲಿಸುತ್ತಾಳೆ ಎಂದಾಗ ಅವನಿಗೆ ಅದೊಂದು ಅಂತರಂಗದಲ್ಲಿ ಹುದುಗಿದ ಭಾವದೊತ್ತಡವನ್ನು ಹೊರಹಾಕುವ ಅವಕಾಶವಾಗುತ್ತದೆ. ಹಾಗೆಂದೇ ಮರುಮಾತಿಲ್ಲದೆ ಅವರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾನೆ. ಅದೊಂದು ಉದ್ದಾನುದ್ದ ಮರಗಳಿರುವ ಪ್ರದೇಶ. ಅಲ್ಲಿ ಆ ಸ್ಥಳವೊಂದರಲ್ಲಿ ಅಗೆದು ಬಗೆದು ಈಗ ದೊರಕುವ ತಲೆಬುರುಡೆಯನ್ನು ಹೊರತೆಗೆಯುತ್ತಾನೆ. ಅದನ್ನು ಪ್ರೀತಿಯಿಂದ ಎದೆಗವುಚಿಕೊಳ್ಳುತ್ತಾಳೆ ಆನ್ನಾ. ಆದರೆ ಯಾವುದೇ ವಿಧವಾದ ಭಾವಾತಿರೇಕಕ್ಕೆ ಒಳಗಾಗುವುದಿಲ್ಲ. ಅದಕ್ಕೆ ವಿರುದ್ಧವಾಗಿ ನಿರ್ಭಾವದಿಂದ ಇರುತ್ತಾಳೆ. ಇದು ಆ ಬಗೆಯ ಭಾವವನ್ನು ಪ್ರಕಟಿಸುವ ವಾಂಡಾಳಿಗೆ ಸರಿಸಮಾನಾಗಿರುತ್ತದೆ.

ಅಲ್ಲಿ ದೊರೆತ ತಲೆಬುರುಡೆಯನ್ನು ಸೂಟ್ ಕೇಸ್ ನೊಳಗೆ ಇಟ್ಟುಕೊಂಡು ತಾನು ಬಂದ ಕೆಲಸ ಮುಗಿಯಿತು ಎಂಬ ಭಾವನೆಯಿಂದ ಈ ಮೊದಲು ಇದ್ದ ಸ್ಥಳಕ್ಕೆ ಹೊರಡುತ್ತಾಳೆ. ಮುಕ್ತಾಯದಲ್ಲಿಯೂ ಕೂಡ ಅದೇ ಉದ್ದಾನುದ್ದ ಕಿರುದಾರಿಯಲ್ಲಿ ಆಚೀಚೆ ಹಬ್ಬಿರುವ ಮಂಜುಗಡ್ಡೆಯ ನಡುವೆ ನಡೆದುಕೊಂಡು ಒಬ್ಬಳೇ ಕಾನ್ವೆಂಟ್ ನತ್ತ ಹೆಜ್ಜೆ ಹಾಕುತ್ತಾಳೆ.

ಆನ್ನಾ ತಾನು ಯಹೂದಿಯಾಗಿರುವುದು, ಪ್ರಮಾಣ ವಚನ ಮತ್ತು ಸಾಮಾನ್ಯ ಮನುಷ್ಯಳಾಗಿರುವುದು ಅವಳ ಅಂತರಂಗದಲ್ಲಿ ಜೊತೆಗಿರುವ ಸಂಗತಿಗಳು. ಅವಳು ತೆಗೆದುಕೊಳ್ಳುವ ಮುಂದಿನ ನಿರ್ಧಾರಗಳನ್ನು ಪ್ರೇಕ್ಷಕರ ಕಲ್ಪನೆಗೆ ಬಿಡುತ್ತಾನೆ ನಿರ್ದೇಶಕ.


ಇಡೀ ಚಿತ್ರದಲ್ಲಿ ಸಂಭಾಷಣೆಗಳು ಅತ್ಯಲ್ಪ. ಚಿತ್ರದಲ್ಲಿ ಛಾಯಾಗ್ರಾಹಕ ರಿಸರ್ಡ್ ಲೆನ್ಸಿವಸ್ಕಿ ಕತ್ತಲೆ-ಬೆಳಕಿನ ಧೀಮಂತಿಕೆಯನ್ನು ಉನ್ನತ ಮಟ್ಟದಲ್ಲಿ ಪ್ರದರ್ಶಿಸುತ್ತಾರೆ. ಅವರ ಕೊಡುಗೆ ಪಾತ್ರಗಳಿಗೆ ಜೀವ ಕೊಡುತ್ತದೆ. ಇದರ ಜೊತೆಯಲ್ಲಿಯೇ ದೃಶ್ಯಗಳಲ್ಲಿ ಪ್ರಕಟವಾಗುವ ಭಾವಗಳನ್ನು ವ್ಯಕ್ತಪಡಿಸುವ ಪಾತ್ರಗಳ ಅಭಿನಯಕ್ಕೆ ಬೆಂಬಲವಾಗಿ ಸಮರ್ಥ ಹಿನ್ನೆಲೆ ಸಂಗೀತವಿದೆ. ಇವೆಲ್ಲವನ್ನು ನಿಭಾಯಿಸಿದ ನಿರ್ದೇಶಕ ಪಾವೆಲ್‌ ಪಾವ್ಲಿಕೋವಸ್ಕಿಗೆ ಸಲಾಮ್‌ ಎನ್ನದಿದ್ದರೆ ಹೇಗೆ?