ಕ್ಯಾನ್ವಾಸಿನ ಮೇಲೆ ಚೆಲ್ಲಾಡಿದ
ಬಣ್ಣಗಳ ಪಸೆ ಇನ್ನೂ ಆರಿಯೇ ಇಲ್ಲ
ಕ್ಯಾಲೆಂಡರ್ ಹುಡುಗಿಯರು
ಋಷಿಪಂಚಮಿ ವೃತ ಹಿಡಿದು ಬಿಟ್ಟರು

ದುಬಾರಿ ಬ್ಯೂಟಿಪಾರ್ಲರ್ಗಳಲ್ಲಿ ಹಿಮ್ಮಡಿ
ತಿಕ್ಕಿಸಿಕೊಂಡು ಮುಂಗೈ ನೀವಿಸಿಕೊಂಡು
ಹಚ್ಚಿಸಿದ ಉಗುರು ಬಣ್ಣ ಮುಕ್ಕಾಗದಂತೆ ಕಾಯ್ದಿಟ್ಟಿದಾಯ್ತು
ಚಪ್ಪಟ್ಟೆಯಾದ ಮಾಂಗಲ್ಯ ಬೊಟ್ಟಿಗೀಗ ಎಷ್ಟನೇ ಸಂವತ್ಸರ?

ಖಾಲಿ ಮೈಯಿನ ಮಗನ ಎತ್ತರ ನನ್ನದೇ ಭುಜ ಮೀರಿದೆ
ನೆರಿಗೆ ಬಿಗಿಗೊಳಿಸುವುದ ಕಲಿತ ಮಗಳೀಗ ಆಕಾಶಮುಖಿ
ಅವರಪ್ಪನ ತಲೆಗೂದಲೂ ಅದುರುತ್ತಿದೆ
ಭೂಮಿ ಸುತ್ತುತ್ತಿದ್ದಾಳೆ ತನ್ನ ಸುತ್ತಲೂ ಕೂಡ

ಕೆನ್ನೆ ರಂಗೇರಿಸುತ್ತಿದ್ದ ಹುಡುಗನಲ್ಲೀಗ ಭೇಟಿ ಬೇಕೆಂಬ ಹಠವಿಲ್ಲ
ಮೊಬೈಲ್ ರಿಂಗಾಗುವುದೇ ಮರೆತಿದೆ
ಗೋಡೆಯೂ ಗಡಿಯಾರವ ಬಗ್ಗಿ ನೋಡುತ್ತಿಲ್ಲ
ಹಳೆ ಹೊಸ ವರ್ಷಗಳ ನಡುವಿನ ರೇಖೆ ಮಾತ್ರ ಹಾಗೇ ಉಳಿದಿದೆ

ಅರೆ, ಕನ್ನಡಿಯಲ್ಲಿ ಕಾಣುವ ಈ ಮುಖ ಯಾರದ್ದು ?
ಎಷ್ಟೇ ಉಜ್ಜಿ, ಒರೆಸಿ, ತೊಳೆದರೂ
ಬದಲೇ ಆಗದೆ ಉಳಿದಿದೆಯಲ್ಲ ನಿತ್ಯ ಹರಿದ್ವರ್ಣದ ಕಾಡುಗಳು
ಮರುಭೂಮಿಯಲ್ಲಿ ಹೂತುಕೊಂಡದ್ದು ಬಗಲಿನಲ್ಲೇ ಕಾಣುತ್ತಿದ್ದರೂ

ಈ ಮುಖ ಬೇರಾಗುತ್ತಿಲ್ಲವಲ್ಲ ಹೌದು,
ಕ್ಯಾನ್ವಾಸಿನ ಮೇಲೆ ಚೆಲ್ಲಾಡಿದ
ಬಣ್ಣಗಳ ಪಸೆ ಇನ್ನೂ ಆರಿಯೇ ಇಲ್ಲ
ಇದು ನನ್ನ ಮುಖವೇ ಇರಬೇಕು!

 

ಅಂಜಲಿ ರಾಮಣ್ಣ  ಲೇಖಕಿ, ಕವಯಿತ್ರಿ, ಅಂಕಣಗಾರ್ತಿ,
ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ.
‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’ ಇವರ ಲಲಿತ ಪ್ರಬಂಧಗಳ ಸಂಕಲನ.