ನಿಂತಿರುವ ಸಾವಿನ ಸಂಕೇತವೇ ಅಲ್ಲವೇ?

ಬೆಳಕಿನ ಚಂಚಲತೆಗೆ ಆಕಾರ ಬದಲಿಸುವ ನೆರಳು
ದಿಗಂತದ ಗೋಡೆಗೆ ನೇತು ಹಾಕಿದ ಚಿತ್ರಪಟ
ಪದೇ ಪದೇ ತೀರವ ಚುಂಬಿಸಿ ಹಿಂದಿರುಗುವ ನದಿಯ ಅಲೆ
ಮತ್ತೆ ಮತ್ತೆ ಕಳಚಿ‌ ಬೀಳುತ್ತಲೇ ಇರುವ ನಕ್ಷತ್ರ
ಅಡಿಪಾಯವೇ ಇಲ್ಲದೆ ನಿಂತಿರುವ ಭೂಮಿ
ಆದಿ ಅಂತ್ಯವೇ ಇಲ್ಲದ ವ್ಯೋಮದ ನಿರ್ವಾತಕೆ ಸಮಯವೆಂದು ಹೆಸರಿಡಬಹುದೇ?

ಮರಳ‌ ಗಡಿಯಾರದಲಿ ಕಾಲವನು ಬಂಧಿಸುವ ದಾರ್ಷ್ಟ್ಯದಲಿ
ಗ್ರಹಿಕೆಗೆ ನಿಲುಕದ ನಿರ್ದಿಗಂತದ ಬಯಲನು
ಹಗಲು ಇರುಳುಗಳನಾಗಿ ವಿಂಗಡಿಸುವ ಎಳಸುಗಳಿಗೇನು ಗೊತ್ತು
ಸಾವಿರಾರು ಕೋಟಿ ಜೀವಾಣುಗಳಿಗೆ
ದೇಹವಿದ್ದರೆಷ್ಟು ಬಿಟ್ಟರೆಷ್ಟು
ಇಂದು ಈ ರೂಪು ಈ ಉಡುಗೆ ತೊಟ್ಟಿರುವ
ಅಣು ಅಣುಗಳು
ಮಣ್ಣ ಕಣಕಣದಲಿ ಬೆರೆಯುವುದಕೆ ಬೇಕೆಷ್ಟು ಹೊತ್ತು?

ಮಣ್ಣಲ್ಲಿ‌ ಮತ್ತೆ ಚಿಗುರಾಗಿ ಹೂವಾಗಿ ಹಣ್ಣಾಗಿ
ನಿತ್ಯ ಹರಿದ್ವರ್ಣದ ದಟ್ಟ ಕಾಡಾಗಿ ಆವರಿಸುವ
ಜೀವಜ್ಯೋತಿಯು ತೃಣ ಮಾತ್ರದ ಕಣವೇ ಅಲ್ಲವೇ
ಹೊಕ್ಕಳ ಮೊಗ್ಗು ಹೂವಾಗಿ ಅರಳುವ ಅಚ್ಚರಿಗೆ
ಹೆಸರೊಂದನಿಟ್ಟು ಗಂಡಾಗಿ ಹೆಣ್ಣಾಗಿ ಲಾಲಿಸುವ
ಕಕ್ಕುಲಾತಿಯು‌ ಅಗಾಧವಾದ ಬ್ರಹ್ಮಾಂಡದಲಿ‌ ಅಮುಖ್ಯವಲ್ಲವೆಂಬುದೂ ಸೋಜಿಗವೇ ಅಲ್ಲವೇ?

ದೇಹಕೊಂದು ಹೆಸರಿದೆ, ಆಕಾರವೂ ಇದೆ
ಆದರೆ, ಅಂತರಾಳದಲಿ‌ರುವ ಲಕ್ಷ ಕೋಟಿ ಜೀವಾತ್ಮಗಳಿಗೆ ಹೆಸರಿಲ್ಲದಿದ್ದರೂ ಅಸ್ತಿತ್ವವಿದೆ
ಅಗಣಿತ ಅಣುರೇಣುಗಳಿಗೆ ಜಗವನಾಳುವ ಛಾತಿಯಿದೆ
ಸೂರ್ಯರಶ್ಮಿಯ ಪ್ರಖರತೆಗೆ ಮಗ್ಗುಲು ಬದಲಿಸುವ ನೆರಳು, ಬೆನ್ನ ಹಿಂದೆಯೇ ಕಾದು
ನಿಂತಿರುವ ಸಾವಿನ ಸಂಕೇತವೇ ಅಲ್ಲವೇ?

ಡಾ. ಸತ್ಯಪ್ರಕಾಶ್ ಎಂ ಆರ್ ಮೂಲತಃ ಬೆಂಗಳೂರಿನವರು.
ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿ ನಂತರ ಅಧ್ಯಾಪನ ವೃತ್ತಿಯನ್ನು ಆರಿಸಿಕೊಂಡವರು.
ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮಾಧ್ಯಮ ಉದ್ಯಮ, ದಲಿತ ವೀರನಾರಿಯರ ಸಂಕಥನ, ಸಂಸತ್ತಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಭಾಷಣಗಳು ಇವರ ಈ ಪ್ರಕಟಿತ ಕೃತಿಗಳು.