ಕವಿಯಾದವನಿಗೆ ತನ್ನ ಪದಗಳ ಗೊಡವೆ ಬೇಡ, ಅದು ಯಾರದ್ದೊ ನೋವು, ಆರ್ತನಾದ ಮಾತ್ರ ನನ್ನದು ಎನ್ನುವ ದೈನ್ಯತೆ ಎಂದಿಗೂ ಬೇಕು. ಅದು ನನ್ನ ಮಿತ್ರನ ಕವಿತೆಗಳಲಿ ತುಂಬಿ ಹೋಗಿದೆ. ಹೀಗಾಗಿಯೇ ಈ ಸಂಕಲನ ‘ಗಾಯಗೊಂಡ ಸಾಲುಗಳು‌’ ಎಂಬ ಹಣೆಪಟ್ಟಿ ಹೊತ್ತು ಹೊರಬಂದಿವೆ. ಗಾಯಗೊಂಡ ಪದಗಳನೇ ಹೆಣೆದು ಬ್ಯಾಂಡೇಜು ಕಟ್ಟಿದ ಪದಗಳಿವು. ಯಾರೂ ಮೂಸದ ಸರ್ಕಾರಿ ಆಸ್ಪತ್ರೆಯ ಕಟ್ಟೆಯ ಮೇಲೆ ಕೂತ ಅನಾಥ ವೃದ್ಧನಂತೆ ಇಲ್ಲಿನ ಕವಿತೆಗಳು ಕಾಣಿಸತೊಡಗುತ್ತವೆ.
ಸದಾಶಿವ ಸೊರಟೂರು ಕವನ ಸಂಕಲನ “ಗಾಯಗೊಂಡ ಸಾಲುಗಳು” ಕುರಿತು ದೀಪಾ ಗೋನಾಳ ಬರಹ

‘ಭೂಮಿಗೆ ದೊಡ್ಡ ದೊಡ್ಡ
ಬೆಳಕು ಬರುವುದು ಹೀಗೆಯೆ
ಕತ್ತಲಲ್ಲೆ…’

ಬೆಳಕನ್ನೂ ಅಕ್ಷರಗಳಲ್ಲಿ ತೋರಿಸಬಲ್ಲ, ಪರಿಮಳವನ್ನೂ ಸಾಲುಗಳಲ್ಲಿ ಹೊಮ್ಮಿಸಬಲ್ಲ ಮಿತ್ರನಿಗೆ ಏನು ಹೇಳಬೇಕನ್ನುವುದು ಒಮ್ಮೆಮ್ಮೆ ಹೊಳಿಯುವುದೇ ಇಲ್ಲ. ಅವನ ಕತೆಗಳದ್ದು ಒಂದು ಕತೆಯಾದರೆ ಕವಿತೆಗಳದ್ದು ಬೇರೆಯದೆ ಸಂತೆ.. ರೊಟ್ಟಿ ಹಿಟ್ಟು ಮುಗಿದ ದಿನ ಬಡತನದ ಬಾಲ್ಯ ನೆನೆದು ಅವ್ವನ ಒದ್ದೆ ಸೆರಗಂಚಂತ ಕವಿತೆ ಹಾಳೆಗಿಳಿಸುತ್ತಾನೆ. ಅಲ್ಲೆಲ್ಲೊ ಯುದ್ಧದ ಹೆಡ್ಲೈನಿಗೆ ಇಲ್ಲಿರುವವರ ಕಣ್ಣು ತೇವವಾಗುವಂತ ಹಾಡಕಟ್ಟುತ್ತಾನೆ. ಆ ಹಾಡಿನ ಕಿಸೆಯಲ್ಲೊಂದು ರಕ್ತವರ್ಣದ ಗುಲಾಬಿ ಇಟ್ಟು ನಮ್ಮ ಪಾಡು ನೋಡುತ್ತಾನೆ. ಇವನ ಇಂತ ಭಾವಾಟಗಳನ್ನ ಸೌಮ್ಯ ಅದು ಹೇಗೆ ತಾಳಿಕೊಂಡಿದ್ದಾಳೊ ಎಂದು ದಿಗಿಲಾಗುತ್ತದೆ.

ಅವನು ಹೀಗೆ ಯೋಚಿಸುವಾಗಲೇ ಮತ್ತೊಂದು ಕವಿತೆ ಕಳಿಸಿ ಇದನ್ನು ನೋಡಿ ಹೇಳು ಎನ್ನುವಾಗ
ಅದೆಷ್ಟು ಸ್ಪೀಡಪ್ಪಾ ಈ ಕನ್ನಡ ಮೇಷ್ಟ್ರು ಅನಿಸುತ್ತದೆ.

‘ತುಟಿ ಕುರಿತಾಗಿ ಅವಳು ಬರೆದ ಸಾಲು
ನೆನಪಾಗಿ ತಿವಿಯಿತು ಬಟ್ಟಲಿನ ಅಂಚು..’

ಇಂಥ ಸಾಲೊಂದು ಕವಿತೆಯ ಒಳಕಂಡಾಗ ಅವಳ ಕವಿತೆ ನಾನು ಓದಬೇಕು ಅನ್ನಿಸಿದ್ದಿದೆ ನನಗೆ.

ನೀವು ನಮ್ಮ ಅತಿಥಿ
ಉಂಡ ಮೇಲೂ ಗುಂಡು ನುಗ್ಗಿಸಬಹುದು
ನನ್ನ ಎದೆ ಸಿದ್ಧವಿದೆ…

ಎನ್ನುವಾಗ ಬಂದೂಕಿನ ನಳಿಕೆಯಲಿ ಗುಬ್ಬಿ ಗೂಡು ಕಟ್ಟುವ ಕವಿ ಆಶಯ ನೆನಪಾಗದೆ ಇದ್ದೀತೆ ಕನ್ನಡದ ಓದುಗನಿಗೆ. ಹೀಗೆ ಅತಿಥಿಯನ್ನು/ಶತ್ರುವನ್ನು ಸಮಾನವಾಗಿ ಪ್ರೀತಿಸುವುದು ಕಲಿಸಿದ್ದು ಮಾತ್ರ ಕನ್ನಡದ ಪುಣ್ಯಕೋಟಿ ಕತೆ ಅಂತಲೂ ಅನ್ನಿಸದೇ ಇದ್ದೀತೆ..!?

ಇಲ್ಲಿ ಅಕ್ಷರಗಳ ಅಲೆಮಾರಿತನವಿದೆ ಅನಿಸುವಾಗ ಥಟ್ಟನೇ ಎದೆಗೆ ಚುಚ್ಚುವ ಸಾಲುಗಳು ಎದುರಾಗುತ್ತವೆ. ಅಲ್ಲಲ್ಲಿ ಗುಂಡುಗಳ ಸುರಿಮಳೆ, ಅನ್ನ, ಟ್ರಿಗರ್, ಶತ್ರು, ಮಗು, ಅಪ್ಪ ಹೀಗೆ ಒಂದೇ ವೇಗದಲ್ಲಿ ಇಳಿಯುವ ಇರಿಯುವ ಪದಗಳ ಧೋ… ಮಳೆ, ಒಂದು ಕಾಡುವ ಸಾಲಿನಲ್ಲಿ ಇನ್ನೊಂದು ಅಡ್ಡಗಟ್ಟಿ ನಿಂತು ಮತ್ತೇನನ್ನೊ ಪ್ರಶ್ನಿಸುವ ಪದ ಎದುರಾಗುತ್ತದೆ.

ಅವ್ವ ಹಾಕಿದ ಕಸೂತಿ ತಂದು ಎದೆಯಲ್ಲಿ ನೇತುಹಾಕುವ ಕವಿಮಿತ್ರನ ಕವಿತೆಗಳು ಅಡ್ಡಾಡದ ಜಾಗಗಳೇ ಇಲ್ಲ. ಎಲ್ಲೆಂದರಲ್ಲಿ ಎಗ್ಗಿಲ್ಲದೆ ಸುತ್ತುವ ಅಲೆಮಾರಿತನ, ದಾರಿ ತಪ್ಪಿಸಿಕೊಂಡ ಕರುವಿನ ಮುಗ್ಧತನ, ತಲೆ ನೇವರಿಸುವ ಮಮತಾಮನ ಹೀಗೆ ಯಾವ ಕವಿತೆಯ ಮೇಲೆ ಕೈಯ್ಯಾಡಿಸಿದರು ಸಂತೈಸುವ ಗುಣ ಹೊತ್ತ ಪದ್ಯಗಳೇ ಎಲ್ಲವು.

ಸಾಕಿನ್ನು ಎತ್ತಿಡೋಣ ಈ ಕವಿತೆಗಳ ಪಾಡು ನಮಗೇಕೆ ಎನ್ನುವಾಗಲೇ ಗಾಳಿಗೆ ಹಾರಿ ಪುಟವೊಂದು ತನ್ನ ಮುಖ ತೋರಿಸುವಾಗ-
ನನ್ನ ಸಾಲುಗಳಿಗೆ ಕಂಬನಿ ಕಲೆ ಕಂಡರೆ
ದಯವಿಟ್ಟು ಕ್ಷಮಿಸಿ
ಆಸ್ಪತ್ರೆಯಲಿ ಯಾರೊ ಬಿಟ್ಟುಹೋದ
ಪದಗಳನು ಸಮಾಧಾನಿಸಿ
ಕೂಡಿಸಿ ಹೊಸದಿದ್ದೇನೆ
ಎಂಬುವ ಪದ್ಯ ಎದುರಿಗೆ ನಿಂತು ಪಿಳಿಪಿಳಿ ಕಣ್ಣುಬಿಡುತ್ತದೆ. ಈ ಪದ್ಯಗಳಿಗೆ ಜೀವವಿದ್ದಿದ್ದರೆ ಇವೆಲ್ಲ ನನ್ನ ಕ್ಲೋಸು ಫ್ರೆಂಡುಗಳಾಗಿರುತ್ತಿದ್ದವೇನೊ.

ಕವಿಯಾದವನಿಗೆ ತನ್ನ ಪದಗಳ ಗೊಡವೆ ಬೇಡ, ಅದು ಯಾರದ್ದೊ ನೋವು, ಆರ್ತನಾದ ಮಾತ್ರ ನನ್ನದು ಎನ್ನುವ ದೈನ್ಯತೆ ಎಂದಿಗೂ ಬೇಕು. ಅದು ನನ್ನ ಮಿತ್ರನ ಕವಿತೆಗಳಲಿ ತುಂಬಿ ಹೋಗಿದೆ. ಹೀಗಾಗಿಯೇ ಈ ಸಂಕಲನ ‘ಗಾಯಗೊಂಡ ಸಾಲುಗಳು‌’ ಎಂಬ ಹಣೆಪಟ್ಟಿ ಹೊತ್ತು ಹೊರಬಂದಿವೆ. ಗಾಯಗೊಂಡ ಪದಗಳನೇ ಹೆಣೆದು ಬ್ಯಾಂಡೇಜು ಕಟ್ಟಿದ ಪದಗಳಿವು. ಯಾರೂ ಮೂಸದ ಸರ್ಕಾರಿ ಆಸ್ಪತ್ರೆಯ ಕಟ್ಟೆಯ ಮೇಲೆ ಕೂತ ಅನಾಥ ವೃದ್ಧನಂತೆ ಇಲ್ಲಿನ ಕವಿತೆಗಳು ಕಾಣಿಸತೊಡಗುತ್ತವೆ. ಆದರೆ ಎಲ್ಲರ ಪ್ರಾರ್ಥನೆಯು ಆ ವೃದ್ಧನಿಗಾಗಿಯೇ ಇರುವಂತೆ, ಸಂಜೆಗೆ ಅವನಿಗೊಂದು ಸೂರು ನೀಡದೆ ದೇವರಾದರೂ ನೆಮ್ಮದಿಯಾಗಿ ಹೇಗೆ ಮಲಗಿಯಾನು ಹೇಳಿ.

ಈ ಕವಿಗಳ ಪಾಡು ಅದೇ. ಅವರಿಗೆ ಊರಿನ ಎಲ್ಲ ಗೊಡವೆಗಳು ಬೇಕು. ಸಂಜೆಗೆ ಎಲ್ಲರು ನೆಮ್ಮದಿಯ ಮಾಡಿನ ಕೆಳಗೆ ಪಾಚಿಕೊಳ್ಳಬೇಕು. ಅವರೆಲ್ಲ ಮಲಗಿ ಸುಖದಿಂದಿದ್ದಾರೆಂಬ ಭ್ರಮೆಯ ನಶೆಯಲಿ ಅವನು ಮತ್ತೊಂದು ಬೆಳಗಿಗೆ ಸಜ್ಜುಗೊಳ್ಳುತ್ತಾನೆ. ಮತ್ತೊಂದು ಕವಿತೆಗೆ ಎದೆಯಲಿ ಜಾಗ ಮಾಡಿಕೊಡುತ್ತಾನೆ.

ದಯವಿಟ್ಟು ಕ್ಷಮಿಸಿ
ನಿಮ್ಮ ಕಾವ್ಯಲೋಕದ ಗೆರೆಗಳನು
ನನ್ನ ಈ ಕವಿತೆ ಮುರಿದಿದ್ದಿದ್ದರೆ

ಕಾವ್ಯಲೋಕದ ಗೆರೆಗಳು ಎಲ್ಲೆಲ್ಲಿಯವರೆಗೆ ಚಾಚಿಕೊಂಡಿವೆಯೋ ಸ್ವತಃ ಕವಿಗೂ ತಿಳಿದಿಲ್ಲ. ಆದರೆ ನೀವು ಎಳೆಯುವ ಗೆರೆಯನ್ನ ಮಾತ್ರ ಕವಿತೆ ಮೀರುತ್ತದೆ. ಅದು ಕವಿತೆಯ ಮೂಲ ಗುಣ ಅದನ್ನು ತುಂಬು ಪ್ರೀತಿಯಿಂದ ಒಪ್ಪಿಕೊಂಡಿರುವ ಕವಿ ಸದಾಶಿವ ಸೊರಟೂರು ತನ್ನ ಗಾಯಗೊಂಡ ಸಾಲುಗಳ ತುಂಬ ಸಾಲಾಗಿ ಜೋಡಿಸಿದ್ದಾರೆ.

ಪೆನ್ನು ಹಿಡಿಯಲಾಗದ ಕೈಗಳಿಗೆ ಕೋಳವಾದರೂ
ಶೋಭಿಸಲಿ
ಎಂದು ಶಪಿಸಿಕೊಂಡಿದ್ದಾರೆ.

ಇಂದು ಈ ಕವಿತೆಗಳಿಗೆ ಬಿಡುಗಡೆ. ಮಿತ್ರನ ಕವಿತೆ ಕತೆ ಲೇಖನಗಳಿಗೆ ಸದಾ ಕಿವಿಯಾಗುವ ನನಗೆ ಈ ಗಾಯಗೊಂಡ ಸಾಲುಗಳಿಗೆ ಕವಿತಾಪ್ರಿಯರು ಮುಲಾಮು ಹಚ್ಚುವರೊ ಉಪ್ಪುಹಚ್ಚುವರೊ ನೋಡಬೇಕಿದೆ.

ಈ ಸಾಲುಗಳು, ಈ ಗಾಯಗಳು, ಈ ನೋವುಗಳು, ಕವಿಯೊಬ್ಬನವಲ್ಲ. ಅವು ಎಲ್ಲರವು ಹೌದಾದ್ದರಿಂದ ಈ ಗಾಯಗಳನು ಎದೆಗವಚಿಕೊಂಡು ಶೂಶ್ರುಷೆ ಮಾಡುವರೆಂಬ ನಂಬುಗೆಯೊಂದಿಗೆ…

(ಕೃತಿ: ಗಾಯಗೊಂಡ ಸಾಲುಗಳು (ಕವನ ಸಂಕಲನ), ಲೇಖಕರು: ಸದಾಶಿವ ಸೊರಟೂರು, ಪ್ರಕಾಶಕರು: ವೀರಲೋಕ ಪುಸ್ತಕ, ಬೆಲೆ: 110/-)