ಸದಾ ಹೊಸ ನೋಟವನ್ನು ಕೊಡುವ ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಬೆಟ್ಟಗಳನ್ನು ಏರುವುದು, ಹೊಸ ಜನರ ಭೇಟಿ ಮಾಡುವುದು,  ವಿವಿಧ ಪ್ರದೇಶಗಳ ಹಿನ್ನೆಲೆ ಅರಿಯುವುದೆಂದರೆ ಅಂಜಲಿ ರಾಮಣ್ಣ ಅವರಿಗಿಷ್ಟ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ, ಮಹಿಳಾ ಹಕ್ಕುಗಳ ಬಗ್ಗೆ ನಿಖರವಾದ ನಿಲುವುಗಳನ್ನು ಹೇಳಬಲ್ಲ ಅವರು, ತಮ್ಮ ಸೂಕ್ಷ್ಮ ಒಳನೋಟಗಳನ್ನು ‘ಫ್ಯಾಮಿಲಿ ಕೋರ್ಟ್ ಕಲಿಕೆ’ ಎಂಬ ಶೀರ್ಷಿಕೆಯಡಿ ಮಂಡಿಸುವುದುಂಟು.  ಜಗದಗಲ ಪ್ರಯಾಣ ಮಾಡಿದ ಅವರು ಉತ್ಸಾಹೀ ಬರಹಗಾರ್ತಿ ಕೂಡ. ‘ಕಂಡಷ್ಟು ಪ್ರಪಂಚ’  ಎಂಬ ಪ್ರವಾಸ ಅಂಕಣದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. 

 

ಡಿಸೆಂಬರ್ ಎಂದರೆ ಪಾಠ ಎಷ್ಟು ಕಲಿತೆ ಎಂದು ಪರೀಕ್ಷಿಸುವ ಸಮಯ ನನಗೆ. ಹೇಳದೆಯೂ ಎಲ್ಲವನ್ನೂ ಕಲಿಸಿಕೊಟ್ಟ ಪಪ್ಪ ಅಮ್ಮನ ನಂತರದ ಮೇಷ್ಟ್ರು ಎಂದರೆ ಪ್ರವಾಸ. ಅಲೆದಾಟ ಕಲಿಸುವ ಪಾಠದಿಂದಾಗಿಯೇ ಬದುಕು ಅದೆಷ್ಟು ಸಹ್ಯ ಮತ್ತು ಸುಂದರ ಎನಿಸಿದೆ. ಪ್ರವಾಸ ಕಥನ ಬರೆಯುವುದು ಎಂದರೆ ಕುರುಡ ಕಂಡ ಆನೆಯ ಕಥೆಯಂತೆ. ಆದರೆ ಅದನ್ನು ಓದುವುದು ಮಾತ್ರ ಜೀವವನ್ನು ಹನಿಹನಿಯಾಗಿ ಪ್ರೀತಿಸುತ್ತಾ ಜೀವನದ ಅಮಲು ಏರಿಸಿಕೊಂಡಂತೆ. ನಿತ್ಯ ನೋಡಿದ ಜಾಗವನ್ನೇ ಮತ್ತೆ ಮತ್ತೆ ನೋಡುತ್ತಿದ್ದರೂ ಹೊಸ ಬೆರಗು ಹುಟ್ಟಿಸಿಕೊಳ್ಳುವ ಈ ಪ್ರಪಂಚ ಅದ್ಯಾಕೆ ಇಷ್ಟು ಚೆನ್ನ! ಕಾಮದ ಬಯಕೆ ತೀರುವುದು ಸಹಜ, ಸಾಧ್ಯ.  ಆದರೆ ಸುತ್ತಾಟದ ಆಸೆ ಹೀಗೆ ಜೀವಂತ ಇರಬೇಕಾದರೆ, ಅದು ಯಾವ ಹರೆಯದ ಹಾರ್ಮೋನು ಸಪ್ಲೈ ಹೀಗೆ ನಿರಂತರವಾಗಿ ಸಾಗಿದೆ? ಹುಚ್ಚಿಯಾದರೂ ತಾಯಿ ತಾಯಿಯೇ ಎನ್ನುವ ಗಾದೆ ಬದಲಾಗಿದ್ದನ್ನು ಕಂಡಿದ್ದೇನೆ ಮತ್ತು ಅವಳೂ ಕೇವಲ ಮನುಷ್ಯಳು ಮಾತ್ರ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ.  ಆದರೆ ಪ್ರವಾಸ ಇಷ್ಟವಿಲ್ಲ ಎನ್ನುವವರನ್ನು ಅರಿಯಲು ಸೋತಿದ್ದೇನೆ. ಮನೋವೇಗಕ್ಕೆ ಸೀಮೆ ಇದೆ. ಆದರೆ ಪ್ರಪಂಚಕ್ಕೆ ? ಉಹುಂ, ಕಂಡಷ್ಟೂ ಪ್ರಪಂಚ , ಕಂಡಷ್ಟೇ ಪ್ರಪಂಚ!

ಇವತ್ತು ಗೋವಾದ ಉಟೋರ್ಡ ಎನ್ನುವ ಊರಲ್ಲಿ ಕುಳಿತಿದ್ದೇನೆ. ನಾಳೆ ವಾಸ್ಕೋ-ಡಿ-ಗಾಮಕ್ಕೆ ವಾಕಿಂಗ್ ಟೂರ್ ಹೋಗುತ್ತಿದ್ದೇನೆ. ಈ ಸಂಜೆ ಅಲೆಗಳಿಗೆ ’ನಾ ಬಂದೆ ನಾ ನೋಡಿದೆ’ ಎಂದು ಹೇಳಲು ಹೋಗಿದ್ದಾಗ ಇಟಲಿಯಿಂದ ಬಂದಿದ್ದ ನೋರಾ ಎನ್ನುವಾಕೆಯ ಪರಿಚಯ ಆಯ್ತು. ’ಪರ್ವತಗಳನ್ನು ಬಗ್ಗು ಬಡಿಯುವುದು’ ಆಕೆಯ ಹವ್ಯಾಸ ಅಂತೆ. ಆಕೆ ಹಾಗೆ ಹೇಳುತ್ತಿದ್ದಾಗ ನೆನಪಾಗಿದ್ದು ಪರ್ವತಾರೋಹಿಗಳ ಕಾಶಿ ಎನಿಸಿಕೊಂಡ ಡಾರ್ಜಲಿಂಗ್ ಎನ್ನುವ ವಿಶ್ವಸುಂದರಿ. ಪ್ರಪಂಚದೆಲ್ಲೆಡೆಯಿಂದಲೂ ಬರುವ ಪರ್ವತಾರೋಹಿಗಳಿಗೆ ತರಬೇತು ನೀಡುವ ವಿಶ್ವದ ಅತೀ ದೊಡ್ಡದಾದ ಮತ್ತು ೧೯೬೧ರಲ್ಲಿ ಮಹಿಳಾ ಚಾರಣಿಗರಿಗೂ ತರಬೇತಿ ಪ್ರಾರಂಭಿಸಿದ ಮೊದಲ ಸಂಸ್ಥೆ ‘ಹಿಮಾಲಯನ್ ಪರ್ವತಾರೋಹಣ ಸಂಸ್ಥೆ’ ಇಲ್ಲಿದೆ. ಒಳಾವರಣದಲ್ಲಿ ತೇನ್ಸಿಂಗ್ ಸ್ಮಾರಕ ಸ್ವಾಗತಿಸುತ್ತದೆ. ಸಂಸ್ಥೆಯೊಳಗೆ ಸಂಗ್ರಹ ಮನೆಯಿದೆ.

ಕಬ್ಬಿಣದ ಉದ್ದುದ್ದ ಹಲ್ಲುಗಳುಳ್ಳ ಬೂಟುಗಳು, ಉಕ್ಕಿನ ಪಿಕಾಸಿಗಳು, ಗಾಜು ಮತ್ತು ಸೆಣಬಿನಿಂದ ತಯಾರು ಮಾಡಿದ ದಪ್ಪ ಹುರಿಗಳು, ಕಪ್ಪು ಕನ್ನಡಕಗಳು, ಟೊಪ್ಪಿಗೆಗಳು, ಆಮ್ಲಜಕದ ದೊಡ್ಡ ಗಾತ್ರದ ಸಿಲಿಂಡರ್ ಮತ್ತೊಂದಿಷ್ಟಿತರೆ ಉಪಕರಣಗಳು ಗೋಡೆಗೆ ಆತುಕೊಂಡ ಗಾಜಿನ ಪೆಟ್ಟಿಗೆಯೊಂದನ್ನು ಅಲಂಕರಿಸಿವೆ. “ಇವು ತೇನ್ಸಿಂಗ್ ಮೌಂಟೆವೆರೆಸ್ಟ್ ಪರ್ವತಾರೋಹಣಕ್ಕೆ ಉಪಯೋಗಿಸಿದ ಸಾಮಗ್ರಿಗಳು” ಎನ್ನುವ ಫಲಕವನ್ನು ಹಾಕಲಾಗಿದೆ. ನನಗಂತೂ ನಂಬಲಾಗಲಿಲ್ಲ. ಕಾರಣ ಒಂದೊಂದು ಬೂಟಿನ ತೂಕ ೩ ಕಿಲೋ. ಅಂದಮೇಲೆ ಉಳಿದ ಸಾಮಾನುಗಳ ಒಟ್ಟು ತೂಕ ಎಷ್ಟಿದ್ದೀತು? ಅಬ್ಬ, ಆ ಭಾರವನ್ನು ಮೈ ಮೇಲೆ ಹೊರೆಯಾಗಿಸಿಕೊಂಡು, ಯಾವುದೇ ತರಬೇತಿಯಿಲ್ಲದೆ, ಮಾರ್ಗದ ಕರಾರುವಾಕ್ಕು ಸುಳಿವಿಲ್ಲದೆ, ಹವಾಮನ ವೈಪರೀತ್ಯಗಳನ್ನು ಎದುರಿಸುತ್ತಾ ತೇನ್ಸಿಂಗ್ ಹಿಮಪರ್ವತವನ್ನು ಹತ್ತಿದ್ದಾದರೂ ಹೇಗೆ?

(ತೇನ್ ಸಿಂಗ್ ಸೊಸೆಯ ಜೊತೆ ಲೇಖಕಿ ಅಂಜಲಿ ರಾಮಣ್ಣ)

ಫೋಟೋಗಳನ್ನು ನೋಡಿದಾಗ ಆತ ಇಷ್ಟು ಭಾರವನ್ನು ಹೊತ್ತಿರಲು ಸಾಧ್ಯವೇ ಎನ್ನುವ ಅನುಮಾನವೂ ಮೂಡಿತ್ತು. ಮುಂದಿನ ಗ್ಯಾಲೆರಿಯಲ್ಲಿ ಇಂದಿನ ಪರ್ವತಾರೋಹಿಗಳು ಬಳಸುವ ಹಗುರವಾದ, ಆಧುನಿಕವಾದ ಸುರಕ್ಷಿತವಾದ ಸಾಮಾಗ್ರಿಗಳ ಪ್ರದರ್ಶನ. “ಪಾಪ ತೇನ್ಸಿಂಗ್ ಎಷ್ಟು ಕಷ್ಟ ಪಟ್ಟ” ಎಂದ ನನ್ನ ಮಾತನ್ನು ಕೇಳಿಸಿಕೊಂಡ ಮಾರ್ಗದರ್ಶಕ ಬಿಜೊಯ್ “ತೇನ್ಸಿಂಗ್ ಬಗ್ಗೆ ಇಷ್ಟೊಂದು ಆಸಕ್ತಿ ತೋರಿಸುತ್ತಿದ್ದೀರಲ್ಲಾ, ಅವರ ಮನೆಯಿರುವುದು ಇಲ್ಲೇ ನಿಮಗೆ ಗೊತ್ತೆ ?’ ಎಂದ “ ಹೌದಾ? ಎಲ್ಲಿದೆ? ಈಗಲೇ ಕರೆದ್ಕೊಂಡ್ಹೋಗಿ “ ಎಂದು ಅಲವತ್ತುಕೊಂಡೆ. ಅಲ್ಲ್ಯಾರಿಗೂ ವಿಳಾಸ ಅಥವಾ ಫೋನ್ ನಂಬರ್ ತಿಳಿದಿಲ್ಲವೆನ್ನುವುದು ಅಶ್ಚರ್ಯವಾಗಿತ್ತು. ಹಟ ಬಿಡದೆ ನಾನು ಹೋಟೇಲ್ ಮ್ಯಾನೇಜರ್ ಬೆನ್ನಿಗೆ ಬಿದ್ದೆ, ರಾತ್ರಿ ೧೧ ಗಂಟೆಗೆ ತೇನ್ಸಿಂಗ್ ನಾರ್ಗೆ ಶೆರ್ಪನ ಕುಟುಂಬವಿದೆ ಎನ್ನಲಾದ ಮನೆಯ ದೂರವಾಣಿ ಸಂಖ್ಯೆ ಸಿಕ್ಕಿಯೇಬಿಟ್ಟಿತು. ಕೂಡಲೇ ಫೋನಾಯಿಸಿದೆ. ಅತ್ತ ಕಡೆಯಿಂದ ಹೆಂಗಸರೊಬ್ಬರು ತೇನ್ಸಿಂಗ್ನ ಸೊಸೆ ಎನ್ನುವ ಗುರುತು ನೀಡಿ ನನ್ನ ಪರಿಚಯ ಕೇಳಿಕೊಂಡು “ನಾಳೆ ಬೆಳಗ್ಗೆ ೯.೩೦ಕ್ಕೆ ಬನ್ನಿ” ಎಂದರು. ಅರ್ಥವಾದಷ್ಟು ವಿಳಾಸ ಬರೆದುಕೊಂಡೆ. ಸುಮಾರು ೫೫ ವರ್ಷ ಮೇಲ್ಪಟ್ಟ, ಸುಕ್ಕುಗಟ್ಟಿದ ಬಿಳಿ ಚರ್ಮದ, ಹ್ಯೋಂಜ಼ು ಧರಿಸಿದ, ಮೊಂಡು ಮೂಗಿನ,ಗುಂಡು ಮುಖದ ಪರ್ವತ ಪ್ರದೇಶದ ಹೆಣ್ಣೊಬ್ಬಳ ಕಲ್ಪನೆಯೊಂದಿಗೆ ನಾನು ಮಾತನಾಡಿದ್ದೆ.

ಒಂದೊಂದು ಬೂಟಿನ ತೂಕ ೩ ಕಿಲೋ. ಅಂದಮೇಲೆ ಉಳಿದ ಸಾಮಾನುಗಳ ಒಟ್ಟು ತೂಕ ಎಷ್ಟಿದ್ದೀತು? ಅಬ್ಬ, ಆ ಭಾರವನ್ನು ಮೈ ಮೇಲೆ ಹೊರೆಯಾಗಿಸಿಕೊಂಡು, ಯಾವುದೇ ತರಬೇತಿಯಿಲ್ಲದೆ, ಮಾರ್ಗದ ಕರಾರುವಾಕ್ಕು ಸುಳಿವಿಲ್ಲದೆ, ಹವಾಮನ ವೈಪರೀತ್ಯಗಳನ್ನು ಎದುರಿಸುತ್ತಾ ತೇನ್ಸಿಂಗ್ ಹಿಮಪರ್ವತವನ್ನು ಹತ್ತಿದ್ದಾದರೂ ಹೇಗೆ?

ನೇಪಾಳದ ಥಾಮಿ ಹಳ್ಳಿಯ ಶೆರ್ಪಾ ಜನಾಂಗದ ಬಡ ಕುಟುಂಬವೊಂದರ ೧೩ ಮಕ್ಕಳಲ್ಲಿ ೧೯೧೪ರಲ್ಲಿ ೧೧ನೆಯವನಾಗಿ ಹುಟ್ಟಿದ್ದು ತೇನ್ಸಿಂಗ್. ಬೆಳೆದದ್ದು ಭಾರತದಲ್ಲಿ. ಪರ್ವತಾರೋಹಿಗಳ ಸಾಮಾನುಗಳನ್ನು ಬೆನ್ನ ಮೇಲೆ ಹೊತ್ತೊಯ್ದು ಹೊಟ್ಟೆಹೊರೆಯುತ್ತಿದ್ದ ಕೃಶಾಂಗಿ. ಬಾಲ್ಯದಿಂದಲೂ ಹಿಮಾಲಯದೆಡೆಗೆ ಆಕರ್ಷಿತನಾಗಿದ್ದ ಹುಡುಗ ತನಗೆ ತಾನೆ ಕೊಟ್ಟುಕೊಂಡಿದ್ದ ಮಾತು “ ಹಿಮಾಲಯ ನಿನ್ನನ್ನು ಏರಿಯೇ ತೀರುತ್ತೇನೆ “. ಇದನ್ನು ಹತ್ತು ವರ್ಷದ ಹುಡುಗನಿದ್ದಾಗ ತಾಯಿಗೆ ಹೇಳಿಯೂ ಇದ್ದ. ನಂತರ ೧೯೫೩ರಲ್ಲಿ ಮೌಂಟೆವೆರೆಸ್ಟ್ ಹತ್ತಿದ ಮೊದಲ ಭಾರತೀಯನೆನಿಸಿಕೊಂಡ. ಆತನ ಕುಟುಂಬವೆಂದರೆ ಸಣ್ಣದಾದ ಕತ್ತಲೆ ಕೋಣೆಗಳಿರುವ ಮನೆಯೊಂದರಲ್ಲಿ, ಮುದುಕರಂತೆ ತೋರುವ, ಅನಾರೋಗ್ಯವಂತ ಬಡವರು. ಇದು ತೇನ್ಸಿಂಗ್ ಕುಟುಂಬದ ಬಗ್ಗೆ ನನಗಿದ್ದ ಕಲ್ಪನೆ.

ಉತ್ಸಾಹದ ರಭಸಕ್ಕೆ ನಿದ್ದೆ ಹೆದರಿ ಓಡಿಹೋಗಿತ್ತು. ಆತನಿಗೆಷ್ಟು ಮಕ್ಕಳಿರಬಹುದು ? ಮನೆ ಹೇಗಿರಬಹುದು? ಮೊಮ್ಮಕ್ಕಳು ಹೊಟ್ಟೆಹೊರೆಯಲು ಏನು ಮಾಡುತ್ತಿರಬಹುದು? ಅವರ ಮನೆಯಲ್ಲಿ ಬೆಳಕು ಇದ್ದೀತೆ? ನಾನು ಯಾವ ಬಟ್ಟೆ ಹಾಕಿಕೊಂಡು ಹೋದರೆ ಪಾಪ, ಅವರಿಗೆ ಮುಜುಗರವಾಗೋಲ್ಲ? ಹೀಗೆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮಗ್ಗುಲು ಬದಲಿಸಿದ್ದೆ. ಸೂರ್ಯನಿಲ್ಲದ, ಮೋಡ ಮುಸುಕಿದ, ಚಳಿ ಹಿಡಿದ ಬೆಳಗಿಗೆ ಎಚ್ಚರಗೊಂಡೆ. ಒಂದಡಿ ದೂರವೂ ಕಾಣದಷ್ಟು ಮಂಜು ಮುಸುಕಿತ್ತು. ಅಂತೂ ಹುಡುಕುತ್ತಾ ಅವರ ಮನೆಯಿದೆ ಎನ್ನಲಾದ ರಸ್ತೆ ತಲುಪಿದೆ. ಅದು ನಮ್ಮ ವಿಧಾನಸೌಧವಿರುವ ಆದರೆ ಕಡಿದಾದ ಡೊಂಕಾದ ರಸ್ತೆಯಂತಿತ್ತು. ಸಣ್ಣ ಮನೆಗಳು, ಗುಡಿಸಲುಗಳೆಲ್ಲೂ ಕಾಣುತ್ತಿರಲಿಲ್ಲ. ಚಾಲಕ ನೀಮಾದ್ರುಪ್ಕಾ “ ಇದೇ ನೋಡಿ ತೇನ್ಸಿಂಗ್ ಮನೆ” ಅಂತ್ಹೇಳಿ ಒಂದು ಮನೆಯ ಮುಂದೆ ಕಾರು ನಿಲ್ಲಿಸಿದ. ನನಗೋ ವಿಪರೀತ ಅನುಮಾನ. ನನ್ನ ಊಹೆಗೂ ಈ ಜಾಗಕ್ಕೂ ಯಥಾವತ್ ಸಂಬಂಧವಿರಲಿಲ್ಲ. ಮತ್ತದೇ ನಂಬರಿಗೆ ಫೋನ್ಮಾಡಿದೆ. ಆಕೆ “ಹೌದು, ಅದೇ ನಮ್ಮ ಮನೆ. ಗೇಟು ತೆಕ್ಕೊಂಡು ಮೇಲೆ ಬನ್ನಿ” ಎಂದರು.

ಮನೆಯ ಹೆಸರು ಘಾಂಗ್-ಲಾ (ಬಂಗಲೆ). ಮೋಡದೊಳಗೆ ಹಸುರು ಗಿಡಗಳ ಮಧ್ಯೆ ಮೂವತ್ತು ಮೆಟ್ಟಲುಗಳನ್ನೇರಿ ಬಾಗಿಲಲ್ಲಿ ನಿಂತಾಗ ಕೆಂಪು ಹೂವುಗಳ ದರ್ಶನ. ಒಳಗಡಿಯಿಟ್ಟಾಗ ಅನಿಸಿದ್ದು ಅದು ಬರಿ ಮನೆಯಲ್ಲ, ಪುಟ್ಟದೊಂದು ಅರಮನೆ.

(ತೇನ್ ಸಿಂಗ್ ಮನೆಯ ಒಳಾಂಗಣದ ದೃಶ್ಯಗಳು)

ಮನೆಯ ಹೆಸರು ಘಾಂಗ್-ಲಾ (ಬಂಗಲೆ). ಮೋಡದೊಳಗೆ ಹಸುರು ಗಿಡಗಳ ಮಧ್ಯೆ ಮೂವತ್ತು ಮೆಟ್ಟಲುಗಳನ್ನೇರಿ ಬಾಗಿಲಲ್ಲಿ ನಿಂತಾಗ ಕೆಂಪು ಹೂವುಗಳ ದರ್ಶನ. ಒಳಗಡಿಯಿಟ್ಟಾಗ ಅನಿಸಿದ್ದು ಅದು ಬರಿ ಮನೆಯಲ್ಲ, ಪುಟ್ಟದೊಂದು ಅರಮನೆ.

ಕಾರ್ಪೆಟ್ಟಾವೃತ ಮನೆಯೊಳಗೆ ಇಂಗ್ಲಿಷ್ ರೋಸ್‍ನ ಘಮ. ಜೀನ್ಸ್ ಪ್ಯಾಂಟು ಹಾಕಿಕೊಂಡಿದ್ದ ಯುವತಿಯಿಂದ ಸ್ವಾಗತ. ಮಾತೇ ಹೊರಡಂತಾಯ್ತು. “ಶ್ರೀಮತಿ ಜ್ಯಾಂಲಿನ್ ಸಿಗುತ್ತಾರೆಯೇ?” ಎನ್ನುವ ನನ್ನ ಪ್ರಶ್ನೆಗೆ ಆಕೆ ‘ಅದು ನಾನೇ’ ಎಂದಾಗ ನನಗೆ ಮತ್ತೊಂದು ಶಾಕ್. ಕಲ್ಪನೆಗಿಂತಲೂ ಸುಂದರವಿರುವ ವಾಸ್ತವ ಕೂಡ ಇರುತ್ತೆ ಅಂತ ಮೊದಲ ಬಾರಿಗೆ ತಿಳಿದಿತ್ತು.

ಮನೆಯೊಳಗೆ ಹೋಗುತ್ತಿದ್ದಂತೆ ಎಡ ಭಾಗದ ಕೋಣೆಯೊಂದನ್ನು ಕಚೇರಿಯನ್ನಾಗಿ ಮಾಡಲಾಗಿದೆ. ಉಳಿದಂತೆ ಮನೆಪೂರಾ ಒಂದು ಶ್ರೀಮಂತ ಸಂಗ್ರಹಾಲಯ. ಗೋಡೆಗಳು ಮೆಟ್ಟಿಲಿಗಳಿಗೆಲ್ಲಾ ಅಲಂಕೃತಗೊಂಡ ಮರದ ಹಾಸು. ತೇನ್ಸಿಂಗ್ ಮೌಂಟೆವೆರೆಸ್ಟ್ ಹತ್ತಿದಾಗ ಹಾಕಿಕೊಂಡಿದ್ದ ಬಟ್ಟೆ ಮೊದಲ್ಗೊಂಡು ಬಂದಿರುವ ಪದಕಗಳು, ಸನ್ಮಾನ ಪದವಿಗಳ ಸಾಕ್ಷಿಗಳು, ಛಾಯಾಯಾಚಿತ್ರಗಳು, ಆತ ಬಳಸಿದ್ದ ಕ್ಯಾಮೆರಗಳು ಹೀಗೆ ಎಲ್ಲವನ್ನೂ ಜೋಡಿಸಿಡಲಾಗಿದೆ. “ ಇಷ್ಟು ಅಕ್ಕರೆಯಿಂದ ನೀವಿಟ್ಟಿರುವ ಸಾಮಗ್ರಿಗಳನ್ನು ನೋಡಲು ಬಹಳ ಪ್ರವಾಸಿಗರು ಬರ್ತಿರ್ತಾರೇನೋ ?” ಎಂದು ನಾನು ಕೇಳಿದ ಪ್ರಶ್ನೆಗೆ ತೇನ್ಸಿಂಗ್ ಸೊಸೆ ಸೋಯಾಂಗ್ ಜ್ಯಾಂಲಿನ್ “ಇದು ಪ್ರವಾಸಿಗರ ತಾಣವಲ್ಲ. ನಮ್ಮ ಖಾಸಗಿ ಮನೆ. ಕೇವಲ ಕುಟುಂಬ ಮತ್ತು ಸ್ನೇಹಿತರಿಗಾಗಿ ” ಎಂದಾಗ ನನ್ನ ಅದೃಷ್ಟದ ಬೆನ್ನು ತಟ್ಟಿಕೊಂಡೆ. ಆಕೆ ಫೋಟೊ ತೆಗೆದುಕೊಳ್ಳಲು ಪ್ರೀತಿಯಿಂದ ಒಪ್ಪಿದ್ದಕ್ಕೆ ಕೃತಜ್ಞತೆ ಹೇಳಿದ್ದೆ.

ಹತ್ತೊಂಭತ್ತನೆ ವಯಸ್ಸಿನಲ್ಲಿ ದಾವಾಫುತಿ ಎನ್ನುವ ಶೆರ್ಪಾ ಹುಡುಗಿಯನ್ನು ಮದುವೆಯಾದ ತೇನ್ಸಿಂಗ್ ಅಲ್ಪಾವಧಿಯ ಸಂಸಾರದ ನಂತರ ಆಕೆಯ ಸಾವಿನಿಂದಾಗಿ ಅಂಗ್ಲಾಮು ಎನ್ನುವ ಯುವತಿಯನ್ನು ಮದುವೆಯಾದ. ಅವರಿಬ್ಬರು ದಾಂಪತ್ಯದಲ್ಲಿ ಪಡೆದಿದ್ದು ಇಬ್ಬರು ಹೆಣ್ಣುಮಕ್ಕಳನ್ನು. ಒಬ್ಬಾಕೆ ಈಗಲೂ ಡಾರ್ಜೀಲಿಂಗ್ನಲ್ಲೇ ಇದ್ದಾರೆ. ೧೯೬೪ರಲ್ಲಿ ಆತನ ಮೂರನೆ ಹೆಂಡತಿಯಾಗಿ ಬಂದವಳು ದಾಕು. ಇವರಿಬ್ಬರಿಗೆ ೩ ಗಂಡು ಮಕ್ಕಳು ಹಾಗು ಇಬ್ಬರು ಹೆಣ್ಣುಮಕ್ಕಳು. ಒಟ್ಟು ೧೨ ಮೊಮ್ಮಕ್ಕಳ ಅಜ್ಜ ತೇನ್ಸಿಂಗ್. ಇಬ್ಬರು ಗಂಡು ಮಕ್ಕಳು ಅಮೆರಿಕೆಯಲ್ಲಿ ವ್ಯಾಪರಸ್ಥರಾಗಿದ್ದರೆ, ಹೆಣ್ಣು ಮಕ್ಕಳು ಆಸ್ಟ್ರೇಲಿಯಾದಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ೧೯೯೭ರಲ್ಲಿ ಆತನ ಮೂರನೆ ಪತ್ನಿ ತೀರಿಕೊಂಡರು. ನಾನು ಭೇಟಿ ಮಾಡಿದ್ದು ತೇನ್ಸಿಂಗ್ ಮನೆಯಲ್ಲಿ ವಾಸವಾಗಿರುವ ಮಗ ಜ್ಯಾಂಲಿನ್ ತೇನ್ಸಿಂಗ್ ನಾರ್ಗೆ ಸಂಸಾರವನ್ನು.

ಬಾಲ್ಯದಿಂದಲೂ ತಂದೆಯಿಂದ ಪ್ರಭಾವಿತನಾದ ಮಗ, ೧೯೬೫ರಲ್ಲಿ ಹುಟ್ಟಿದ ಜ್ಯಾಂಲಿನ್ ಅವರ ಹೆಂಡತಿ ಸೋಯಾಂಗ್, ಕೆಲಿಂಗ್ಪಾಂಗಿನ ಅತ್ತ್ಯುತ್ತಮ ವಸತಿ ಶಾಲೆಯಲ್ಲಿ ಓದುತ್ತಿರುವ ಮೂರು ಮಕ್ಕಳ ತುಂಬಿದ ಸಂಸಾರ. ಎಡ್ಮಂಡ್ ಹಿಲರಿಯ ಮಗ ಪೀಟರ್ ಹಿಲರಿಯೊಡನೆ ಹಾಗು ತಮ್ಮದೇ ಚಾರಣಿಗರ ಗುಂಪಿನೊಡನೆ ಎವೆರೆಸ್ಟ್ ಏರಿದ್ದು, ಜೊತೆಗೆ ಇನ್ನೂ ಹಲವಾರು ನೀರ್ಗಲ್ಲುಗಳನ್ನು, ಶಿಖರಗಳನ್ನು ಒಟ್ಟು ೨೨ ಬಾರಿ ಚಾರಣ ಮಾಡಿದವರು. ಚಾರಣಾಸಕ್ತರಿಗಾಗಿ ತಮ್ಮದೇ ಆದ ತರಬೇತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವುಗಳಲ್ಲೊಂದು ಡಾರ್ಜಿಲಿಂಗ್ನ ತೇನ್ಸಿಂಗ್ ನಾರ್ಗೆ ಸಾಹಸ ಸಂಸ್ಥೆ. ಹಲವಾರು ದೇಶಗಳ ಪ್ರಶಸ್ತಿ ಪದಕಗಳನ್ನು ಪಡೆದುಕೊಂಡಿರುವ ಜ್ಯಾಂಲಿನ್ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಉತ್ತಮ ಉಪನ್ಯಾಸಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಎಂಟು ಪೌಂಡ್ಗಳ ತೂಕವಿರುವ ಐಮ್ಯಾಕ್ಸ್ ಕ್ಯಾಮೆರದಲ್ಲಿ ತಮ್ಮ ಮೌಂಟೆವೆರೆಸ್ಟ್ ಚಾರಣವನ್ನು ಭೂಮಟ್ಟದಿಂದ ೨೭೦೦೦ ಅಡಿಗಳ ಮೇಲಿರುವ ಹಿಮಶಿಖರದಿಂದ ಚಿತ್ರಿಸಿಕೊಂಡು ಬಂದ ಸಾಹಸಿ.

ತಮ್ಮ ತಂದೆಗೆ ಶ್ರದ್ಧಾಂಜಲಿಯಾಗಿ “ ಟಚಿಂಗ್ ಮೈ ಫಾದರ್ಸ್ ಸೋಲ್ “ ಎನ್ನುವ ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ. ೧೮ ವಿದೇಶಿ ಭಾಷೆಗಳಲ್ಲಿ ಲಭ್ಯವಿದೆ. ತೇನ್ಸಿಂಗಿಗೆ ಹಿಮಾಲಯದ ಬಗ್ಗೆ ಇದ್ದ ಗೌರವ, ಆಸಕ್ತಿ ಮತ್ತು ಮಾಡಿದ ಸಾಧನೆಗಳನ್ನು ಮಾತ್ರವಲ್ಲದೆ, ಶೆರ್ಪಾ ಜನಾಂಗದ ಸ್ಥಿತಿಗತಿಗಳ ಬಗ್ಗೆ ಈ ಪುಸ್ತಕದಲ್ಲಿ ಪ್ರಪಂಚದ ಗಮನ ಸೆಳೆದ ಮೊದಲ ಪುಸ್ತಕವಿದು. ಪುಸ್ತಕದ ಪ್ರತಿ ಸದ್ಯಕ್ಕೆ ಸಿಗುತ್ತಿಲ್ಲವಾದ್ದರಿಂದ ಸೋಯಾಂಗ್ ಕೊಟ್ಟ ಖಾಸಗಿ ಪ್ರತಿಯನ್ನು ಅಲ್ಲಿಯೇ ಕುಳಿತು ತಿರುವಿದೆ. ನನ್ನನ್ನು ಆಕರ್ಷಿಸಿದ ಸಾಲುಗಳು ತೇನ್ಸಿಂಗ್ ಹೇಳಿದ್ದು “ನೇಪಾಳ ನನ್ನ ತಾಯಿ, ಭಾರತ ನನ್ನ ತೊಟ್ಟಿಲು”. ಜ್ಯಾಂಲಿನ್ ಹೇಳುತ್ತಾರೆ “ ನನ್ನಪ್ಪ ತೀಕ್ಷ್ಣವಾದ ಅಲೋಚನೆ-ಅಭಿವ್ಯಕ್ತಿ ಉಳ್ಳವರಾಗಿದ್ದರು. ರಾಜಕೀಯ, ಪ್ರಚಾರಗಳಿಂದ ದೂರ. ಅದಕ್ಕಾಗಿಯೇ ೧೯೮೬ರಲ್ಲಿ ಕೊನೆಯುಸಿರಿನವರೆಗೂ ಚಾರಣಿಗರಿಗೆ ಬಿಟ್ಟು ಬೇರರ್ಯಾರಿಗೂ ಹೆಚ್ಚು ಪರಿಚಿತರಾಗದೆ ಉಳಿದರು.

ಅಲ್ಲಿಂದ ಹೊರಟಾಗ ಸೋಯಾಂಗ್ ಹೇಳಿದ್ದು “ ತೇನ್ಸಿಂಗಿನ ಮೂಲ ಹೆಸರು ನಾಮ್ಗ್ಯಲ್ ವಾಂಗ್ಡಿ ನಂತರದಲ್ಲಿ ನಾರ್ಗೆ ಎಂದು ಬದಲಿಸಲಾಯ್ತು. ಕಾರಣ ನೇಪಾಳಿ ಭಾಷೆಯಲ್ಲಿ ನಾರ್ಗೆ ಅಂದರೆ ಅದೃಷ್ಟವಂತ ಎನ್ನುವ ಅರ್ಥ. ಅಂದಹಾಗೆ, ಅಲ್ಲಿಯೇ ಹತ್ತಿರದಲ್ಲಿರುವ ೫೦.೨ ಅಡಿಗಳ ತೇನ್ಸಿಂಗ್ ಎನ್ನುವ ಹೆಸರಿನ ಬಂಡೆಯನ್ನು ನಾನೂ ಹತ್ತಿ ಬಂದೆ.