ರಾಜೀವ್ ಗಾಂಧಿಯ ನಡೆಯನ್ನು ಕಂಡ ಈ ನೆಲದ ಜನರಿಗೆ ಭಾರತದ ವಿಸ್ತಾರತೆಯ ಬಗ್ಗೆ ಆಸ್ಥೆ ಏನಿಲ್ಲ, ಬೆಂಗಳೂರು ಗೊತ್ತಿಲ್ಲ ಮತ್ತು ಚೆನ್ನೈ ತಮ್ಮದು ಎನ್ನುವುದನ್ನು ಬಿಟ್ಟಿಲ್ಲ. ಎಲ್‌ಟಿಟಿಈ ಜೊತೆ ಸಂಬಂಧ ಇತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವವರು ಸಂಸದರಾಗಿದ್ದಾರೆ ಎಂದರೆ ನಾವೆಲ್ಲರೂ ಒಂದೇ ಎಂದು ಹಾಡಿಕೊಳ್ಳಲು ಅಡ್ಡಿಯಿಲ್ಲ ಎನ್ನಿಸಿತು. ನಮ್ಮಲ್ಲಿ ಸಿಗುವ ನಾಗಣ್ಣ ಸ್ಟೋರ್ಸ್, ಮಲ್ಲಪ್ಪನ ಅಂಗಡಿ ವಗೈರೆಗಳಂತೆ ಅಲ್ಲಿಯೂ ಗಲ್ಲಿಗಲ್ಲಿಗಳಲ್ಲಿ ಹೇರಳವಾಗಿ ಸಿಗುತ್ತವೆ ಕಾಕಾ ಅಂಗಡಿಗಳು ಮತ್ತು ಮ್ಯಾಗಿ ಮ್ಯಾಗಿ ಮ್ಯಾಗಿ ಟು ಮಿನಿಟ್ಸ್‌ನಲ್ಲೇ ಸಿಗುತ್ತವೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.

 

ಪ್ರವಾಸ ಮುಗಿಸಿ ಹಿಂದಿರುಗಿದ ಕೂಡಲೇ ಸ್ನೇಹಿತೆ ಕೇಳಿದಳು, “ಹೇಗಿತ್ತು ಶ್ರೀಲಂಕ?” ಎಂದು. ಥಟ್ಟನೆ “ಆ~ಕ್ಟರ್ ರಾಹುಲ್ ಭೋಸ್ ಥರ ಇತ್ತು” ಎಂದೆ. ಅತ್ಯಂತ ಆಶ್ಚರ್ಯದಿಂದ ಅವಳು ಹಾಗೆಂದರೇನು ಎಂದಳು. ಇತ್ತಕಡೆಯ ವಿವರಣೆ ಹೇಗಿತ್ತು “looks common but you realize something special; not mesmerizing but surely you would turn back at least once to take a look; not sexy but makes you feel so that’s RB and that’s Srilanka!” ಅವಳ ತಲೆಕೆಟ್ಟಿದ್ದು ಗ್ಯಾರೆಂಟಿ. ನಕ್ಕು ಸುಮ್ಮನಾದಳು ಜಾಣೆ.

ಹೇಳಿಕೇಳಿ ರಾವಣಾಸುರನ ಊರು, ಅಲ್ಲಿನವರ ಎತ್ತರ ಗಾತ್ರ ಎಲ್ಲವೂ, ರಾಮಾಯಣ ಧಾರಾವಾಹಿಯಲ್ಲಿ ಆ ಪಾತ್ರ ಮಾಡಿದ್ದ ಅರವಿಂದ್ ತ್ರಿವೇದಿಯ ಹಾಗೇ ಇರಬಹುದು ಎನ್ನುವ ಬಾಲಿಶ ಕಲ್ಪನೆಯಲ್ಲಿ ಹೋಗಿದ್ದೆ. ಆದರೆ ಅವರುಗಳು ಅಷ್ಟೇನೂ ಎತ್ತರವಿಲ್ಲದ ಮಟ್ಟಸ ಮನುಷ್ಯರು. ಆತ್ಮವಿಶ್ವಾಸ ಕಮ್ಮಿಯೋ ಅಥವಾ ಸಂಕೋಚದ ಜನರೋ ತಿಳಿಯಲು ಸ್ವಲ್ಪ ಸಮಯ ಹಿಡಿಸಿಕೊಳ್ಳುವವರು, ಬಹುಪಾಲು ಜನ ಪ್ರಪಂಚದ ಇತರೆ ಭಾಗಗಳಲ್ಲಿ ಜೀವನವಿದೆ ಎನ್ನುವ ಅರಿವು ಕೂಡ ಬೇಡವರಂತೆ ಇದ್ದವರು. ಕಮಲದ ಹೂವಿನ ಪಕಳೆಗಳ ನಡುವಿನಿಂದ ಮತ್ಸ್ಯಕನ್ಯೆಯೊಬ್ಬಳು ಎದ್ದು ಬಂದಂತೆ ಎನಿಸುವ ಆಕಾರದಲ್ಲಿ ಸೀರೆ ಉಡುವ ಹೆಂಗಸರು. ರಾಜಧಾನಿಯಲ್ಲಿ ಬಾಲಿವುಡ್‌ನ ಪ್ರಭಾವದಿಂದ ತುಂಡುಡುಗೆ ಬೆಡಗಿಯರೂ ಅಲ್ಲಲ್ಲಿ. ಬಾಕಿಯಂತೆ ಹೆಸರು ಹೇಳಲೂ ಬಾರದ ಅಳತೆ ಆಕಾರದ ದೇಹಕ್ಕೆ ಸ್ಕರ್ಟ್ ಮತ್ತು ಶರ್ಟ್ ಸಿಕ್ಕಿಸಿ ಓಡಾಡುವ ಮಹಿಳೆಯರು ಮತ್ತು ಅವರಿಗೆ ಸರಿಹೊಂದುವ ಗಂಡಸರು.

ಬೇರೆಬೇರೆ ದೇಶಗಳಲ್ಲಿ ಉನ್ನತಹುದ್ದೆಗಳಿಗಿಂತ ಬಾರ್‌ಟೆಂಡರ್‌ಗಳಾಗಿ ಕೆಲಸ ಮಾಡುತ್ತಿರುವ ಈ ದೇಶದವರ ಸಂಖ್ಯೆ ಹೆಚ್ಚು. ಶಿಕ್ಷಣ ಎಂದರೆ ‘ಹೂಂ, ಅದೂ ಒಂದು ಆದರೆ ಆಗಲೀ’ ಎನ್ನುವ ಭಾವನೆಯೇ ಹೆಚ್ಚು ಹಾಗಾಗಿ ಸರ್ಕಾರದಿಂದಲೂ ಅಂತಹ ಒತ್ತಾಸೆ ಇಲ್ಲ. ಉಚಿತ ಶಿಕ್ಷಣ, ಹೆಣ್ಣುಮಕ್ಕಳ ಶಿಕ್ಷಣ ಹೀಗೆಲ್ಲಾ ಯೋಜನೆಗಳೇ ಇಲ್ಲದ ವ್ಯವಸ್ಥೆ. ಆದರೆ ಸಮಾಧಾನದ ವಿಷಯ ಎಂದರೆ ಇಲ್ಲಿನವರಿಗೆ ‘ವರದಕ್ಷಿಣೆ’ ಎನ್ನುವ ಕೊಳ್ಳಿದೆವ್ವದ ಪರಿಚಯವೇ ಇಲ್ಲದಿರುವುದು. ಎರಡು ಪ್ರಸಿದ್ಧ, ಮುಖ್ಯ ನಗರಗಳಲ್ಲಿ ಬಿಟ್ಟರೆ ಇಂಗ್ಲೀಶ್ ತಿಳಿಯದ ನಾಡು. ಅಲ್ಲಿ ಮಾತ್ರ ಎರಡು ಜಿಮ್ ಮತ್ತು ಬ್ಯೂಟಿಪಾರ್ಲರ್‌ಗಳು ಸಿಕ್ಕವು. ಸಿನಿಮೋದ್ಯಮವೂ ಇದೆ. ಆದರೆ ನಮ್ಮ ದೇಶದ 1960-70 ದಶಕದಲ್ಲಿ ಇದ್ದ ತಾಂತ್ರಿಕತೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಗ್ರಾಮದ ಜನಕ್ಕೆ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಎಂದರೆ ಇಷ್ಟದವರು.

ಹೆಚ್ಚಿನ ಸ್ಥಳಗಳು ಯುನೆಸ್ಕೋ ಪಾರಂಪಾರಿಕತಾಣ ಎನ್ನುವ ಹೆಗ್ಗಳಿಕೆ ಹೊಂದಿದ್ದರು. ರಸ್ತೆರಸ್ತೆಗಳು ಮಾತ್ರ ಪ್ರಾಣ-ತ್ರಾಣ ಭಿಕ್ಷೆಗಾಗಿ ಕಾದಿವೆ. ಇಡೀ ದೇಶದಲ್ಲಿ ಎರಡೇ ಕಡೆ ಹೈನುಗಾರಿಕೆ ಕೇಂದ್ರಗಳಿವೆ. “ಮೊಸರು ಬೇಕು” ಎಂದು ಕೇಳಿದರೆ ಬಾಯ್ಬಾಯ್ ಬಿಟ್ಟು ನೋಡುತ್ತಾರೆ, ಇನ್ನು ಮೊಸರನ್ನ ಎನ್ನುವ ಊಟ ಅವರ ಪರಿಧಿಯಲ್ಲಿಯೇ ಇಲ್ಲದ್ದು. ಶಾಖಾಹಾರಿ ಎನ್ನುವುದು ಅತೀ ವಿರಳ ಅಲ್ಲಿ ಅದಕ್ಕೇ ‘ಅನ್ನಕ್ಕೆ ಮೊಸರು ಕೊಡಿ’ ಎಂದು ಕೇಳಿದಾಗ, ಹೋಟೇಲಿನವ ಬಿದ್ದೂ ಬಿದ್ದೂ ನಕ್ಕಿದ್ದ. ನಾನು ಹೋಗಿದ್ದಾಗ ಅಲ್ಲಿ ವಾಕರಿಕೆ ಬರುವಷ್ಟು ಪ್ಲಾಸ್ಟಿಕ್ ಬಳಕೆ ಇತ್ತು ಮತ್ತು ಪೆಟ್ರೋಲ್ ಬೆಲೆ ಬೆಂಗಳೂರಿಗಿಂತ ಕಡಿಮೆ ಇತ್ತು. ರಸ್ತೆಯಲ್ಲಿ ಬುರ‍್ಬುರ್ ಎನ್ನುವ ಎಲ್ಲಾ ಕಾರುಗಳೂ ವಿದೇಶಗಳಲ್ಲಿ ಬಳಕೆಯಾಗಿ ಬಿಡಿಭಾಗಗಳಲ್ಲಿ ಈ ದೇಶ ಸೇರಿ ಇಲ್ಲಿ ಜೋಡಿಸಲ್ಪಟ್ಟವು. ಕಾರಣ ಹೊಸ ಕಾರ್ ತೆಗೆದುಕೊಂಡರೆ ಕಾರಿನ ಬೆಲೆಯ 50% ತೆರಿಗೆ ಭರಿಸಬೇಕು ಇಲ್ಲಿ. 2009ರಿಂದೀಚೆಗೆ ಪ್ರವಾಸೋದ್ಯಮ ಚಿಗುರುತ್ತಿದೆ.

ರಾಜೀವ್ ಗಾಂಧಿಯ ನಡೆಯನ್ನು ಕಂಡ ಈ ನೆಲದ ಜನರಿಗೆ ಭಾರತದ ವಿಸ್ತಾರತೆಯ ಬಗ್ಗೆ ಆಸ್ಥೆ ಏನಿಲ್ಲ, ಬೆಂಗಳೂರು ಗೊತ್ತಿಲ್ಲ ಮತ್ತು ಚೆನ್ನೈ ತಮ್ಮದು ಎನ್ನುವುದನ್ನು ಬಿಟ್ಟಿಲ್ಲ. ಎಲ್‌ಟಿಟಿಈ ಜೊತೆ ಸಂಬಂಧ ಇತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವವರು ಸಂಸದರಾಗಿದ್ದಾರೆ ಎಂದರೆ ನಾವೆಲ್ಲರೂ ಒಂದೇ ಎಂದು ಹಾಡಿಕೊಳ್ಳಲು ಅಡ್ಡಿಯಿಲ್ಲ ಎನ್ನಿಸಿತು. ನಮ್ಮಲ್ಲಿ ಸಿಗುವ ನಾಗಣ್ಣ ಸ್ಟೋರ್ಸ್, ಮಲ್ಲಪ್ಪನ ಅಂಗಡಿ ವಗೈರೆಗಳಂತೆ ಅಲ್ಲಿಯೂ ಗಲ್ಲಿಗಲ್ಲಿಗಳಲ್ಲಿ ಹೇರಳವಾಗಿ ಸಿಗುತ್ತವೆ ಕಾಕಾ ಅಂಗಡಿಗಳು ಮತ್ತು ಮ್ಯಾಗಿ ಮ್ಯಾಗಿ ಮ್ಯಾಗಿ ಟು ಮಿನಿಟ್ಸ್‌ನಲ್ಲೇ ಸಿಗುತ್ತವೆ. ರೈಲುಗಳಲ್ಲಿ ಎಸಿ ಕೋಚ್, ಫಸ್ಟ್ ಕ್ಲಾಸ್ ಅಂತೇನೂ ಇಲ್ಲ. ಇರುವುದೆಲ್ಲಾ ಸೆಕೆಂಡ್ ಕ್ಲಾಸ್ ಮತ್ತು ಜೆನೆರಲ್ ವರ್ಗ ಮತ್ತು ಸಾಮಾನ್ಯ ಪ್ರಜೆಗೂ ದಕ್ಕುವ ದರ ಟಿಕೆಟ್‌ದ್ದು. ಸುನಾಮಿ ಬಂದಾಗ ಅಂದಾಜಿನ ಪ್ರಕಾರ 40 ಸಾವಿರ ಜನರು ತೀರಿಕೊಂಡರಂತೆ. ಏಲಕ್ಕಿ, ಚಹಾ ಪುಡಿಗಳನ್ನು ರಫ್ತು ಮಾಡುವ ದೇಶ ಅದೇ ಗುಣಮಟ್ಟದ ಸಾಮಾನನ್ನು 60%ದರ ಕಡಿತಗೊಳಿಸಿ ತನ್ನ ಪ್ರಜೆಗಳಿಗೆ ಮಾರುತ್ತದೆ. ಮರದ ಹಲಗೆಯ ಪ್ಯಾಕೇಜಿನ ಆಕರ್ಷಣೆಗೆ ಎರಡು ಡಬ್ಬ ಟೀ ಪುಡಿ ಕೊಂಡು ತಂದೆ.

ತಲೆಗೂದಲಿಗೆ ಬಣ್ಣಬಳಿದುಕೊಂಡು ವಾರೆಯಾಗಿ ಕೈತಿರುಗಿಸುತ್ತಾ, ಕೋರೆಯಲ್ಲಿ ಕಾಲಿಡುತ್ತಾ, ಬೆರಳುಗಳ ಬಿಗಿತದಲ್ಲಿ ಬಾಲ್ ಹಿಡಿದು ಕ್ರೀಜ಼್ ಮೇಲೆ ಓಡಿ ಬರುತ್ತಿದ್ದ ಮಲಿಂಗನ ಬಗ್ಗೆ ನನಗೆ ತೀರದ ಸೆಳೆತ. ತನ್ನ ಸೋಲುಗಳಿಗೆ ತನ್ನ ಹೆಂಡತಿಯ ಕಾಲ್ಗುಣವೇ ಕಾರಣ ಅದಕ್ಕೇ ವಿಚ್ಛೇಧನ ಪಡೆದೆ ಎಂದು ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದ ಸನತ್ ಜಯಸೂರ್ಯ ಎಂದರೆ ನನಗೆ ಸಿಟ್ಟಾತಿಸಿಟ್ಟು. ಒಲವು, ಮುನಿಸು ಎರಡನ್ನೂ ಸೇರಿಸಿಕೊಂಡೇ ಆ ದೇಶದಲ್ಲಿ ಎರಡು ಮುಖ್ಯ ನಗರಗಳಲ್ಲಿ ಇರುವ ಕ್ರಿಕೇಟ್ ಸ್ಟೇಡಿಯಮ್ ಅನ್ನು ನೋಡಲು ಹೋದೆ. ಬೆಂಗಳೂರಿನ ಸಂಪಂಗಿರಾಮನಗರದ್ದೋ ಅಥವಾ ಶ್ರೀರಾಮಪುರದ ಪಾರ್ಕಿನಷ್ಟೋ ಮಾತ್ರ ಅಳತೆ ಇರುವ ಕ್ರೀಡಾಂಗಣದಲ್ಲಿ ಫೋಟೊಗಳನ್ನು ತೆಗೆದುಕೊಂಡೆ. ಜಗತ್ತಿನ ನೇತ್ರದಾನದ 36% ಪಾಲನ್ನು ಹೊಂದಿರುವ ಹೆಗ್ಗಳಿಕೆಯ ಬತ್ತಳಿಕೆ ಹೊತ್ತ ಇಲ್ಲಿನ ಜನ ಶಾಂತಿಪ್ರಿಯರು. ನನ್ನ ಪ್ರಯಾಣದ 21 ದಿನಗಳಲ್ಲಿ ಒಮ್ಮೆಯೂ ರಸ್ತೆ ಜಗಳ ನೋಡಲು ಸಿಗಲಿಲ್ಲ.

ಸ್ವರ್ಣವಾಹಿನಿ ಮತ್ತು ಇನ್ನೊಂದು ಹೆಸರಿನ ಎರಡೇ ಎರಡು ದೂರದರ್ಶನ ಚ್ಯಾನಲ್ ಇವೆ. ಬಾಕಿಯಂತೆ ಎಲ್ಲವೂ ಭಾರತೀಯ ಮತ್ತು ಪಾಶ್ಚಾತ್ಯ ವಾಹಿನಿಗಳು. ಚೀನಿಯರು ವ್ಯವಹಾರಕ್ಕಾಗಿ ಬಂದರೆ ಜಪಾನಿಯರು ಪ್ರವಾಸಕ್ಕಾಗಿ ಬರುತ್ತಾರೆ ಇಲ್ಲಿಗೆ.

ಕೊಲಂಬೋ, ಕ್ಯಾಂಡಿ, ಅನುರಾಧಾಪುರ, ನುವರ ಏಲಿಯಾ, ಸಿರಿಗಿರಿಯ, ದಾಂಬುಲಾ, ಪಿನ್ನವೇಲಾ YES ಇದು ಶ್ರೀಲಂಕಾ ದ್ವೀಪ ದೇಶ! ರಾಮಾಯಣದಲ್ಲಿ ಮುಖ್ಯ ಪಾಲು ಪಡೆದುಕೊಂಡ ಕಾವ್ಯಾಂಕಣ ಆದರೆ ಎಲ್ಲೆಲ್ಲೂ ಬುದ್ಧಮಯ. ಅವನ ಪಾದ, ಹಲ್ಲು ಹೀಗೆ ಬೌದ್ಧಧರ್ಮಕ್ಕೆ ಸಂಬಂಧಿಸಿದ ಅಧ್ಯಾಯಗಳಿಗೆ ಪ್ರತ್ಯೇಕ ದೇವಸ್ಥಾನಗಳನ್ನು ಹೊಂದಿದೆ. ಆದರೆ ಕ್ರಿಸ್ಮಸ್ ಎನ್ನುವುದು ಏಕಮೇವ ಸಂಭ್ರಮಾಚರಣೆಯಾಗಿದೆ ಇಲ್ಲಿ. ಶ್ರೀಲಂಕಾ. ರಾಮಾಯಣ ಪ್ರವಾಸ ಎನ್ನುವ ಯೋಜನೆಯಲ್ಲಿ ಹೋದರೆ ಮಾತ್ರ ಭಾರತದಿಂದಲೇ ಹೋಗುವ ಮಾರ್ಗದರ್ಶಿ ಆ ಜಾಗಗಳನ್ನು ತೋರಿಸಬಲ್ಲ. ಇಲ್ಲದಿದ್ದರೆ ಅಲ್ಲಿನವರಿಗೆ ರಾಮಾಯಣದ ಬಗ್ಗೆ ಏನೂ ತಿಳಿದಿಲ್ಲ ಮತ್ತು ಜಾಗಗಳು ಗೊತ್ತಿಲ್ಲ. ನನ್ನ ಮಾರ್ಗದರ್ಶಿಯಾಗಿದ್ದವನ ಹೆಸರು ಸಂಗಮಿತ್ರ. ಆತನಿಗೆ ನುವರ ಏಲಿಯಾ ಎನ್ನುವ ಊರಿನಲ್ಲಿ ಅಶೋಕವನ ಇದೆ, ಅಲ್ಲಿ ರಾಮಸೀತೆಯರ ದೇವಸ್ಥಾನ ಇದೆ ಮತ್ತು ಹನುಂತನ ಪಾದದ ಗುರುತು ಇದೆ ಎಂದು ಓದಿದ್ದ ವಿಷಯವನ್ನು ಹೇಳಿ ಆ ಜಾಗಕ್ಕೆ ಕರೆದುಕೊಂಡು ಹೋಗಲು ದುಂಬಾಲು ಬಿದ್ದು ನೋಡಿದ್ದಾಯ್ತು.

ಉಚಿತ ಶಿಕ್ಷಣ, ಹೆಣ್ಣುಮಕ್ಕಳ ಶಿಕ್ಷಣ ಹೀಗೆಲ್ಲಾ ಯೋಜನೆಗಳೇ ಇಲ್ಲದ ವ್ಯವಸ್ಥೆ. ಆದರೆ ಸಮಾಧಾನದ ವಿಷಯ ಎಂದರೆ ಇಲ್ಲಿನವರಿಗೆ ‘ವರದಕ್ಷಿಣೆ’ ಎನ್ನುವ ಕೊಳ್ಳಿದೆವ್ವದ ಪರಿಚಯವೇ ಇಲ್ಲದಿರುವುದು. ಎರಡು ಪ್ರಸಿದ್ಧ, ಮುಖ್ಯ ನಗರಗಳಲ್ಲಿ ಬಿಟ್ಟರೆ ಇಂಗ್ಲೀಶ್ ತಿಳಿಯದ ನಾಡು. ಅಲ್ಲಿ ಮಾತ್ರ ಎರಡು ಜಿಮ್ ಮತ್ತು ಬ್ಯೂಟಿಪಾರ್ಲರ್‌ಗಳು ಸಿಕ್ಕವು.

ಬೌದ್ಧಧರ್ಮ ಸಮಾನತೆಯ ಏಕೈಕ ಸನ್ನೆಕೋಲು ಎಂದೇ ತಲೆಯಲ್ಲಿ ತುಂಬಿಹೋಗಿದ್ದವಳಿಗೆ ಅಲ್ಲಿಯೂ ಹೆಣ್ಣು ಕೊಟ್ಟು ತರುವ ವಿಷಯದಲ್ಲಿ ಸಂಬಂಧ ಬೆಳೆಸದ ಪಂಗಡಗಳಿವೆ ಎಂದು ತಿಳಿದಾಗ ಮಂಗನನ್ನು ಮಾನವ ಮಾಡುತ್ತವೆ ಧರ್ಮಗಳು ಎನ್ನುವ ಭ್ರಮೆ ಬಿಟ್ಟಂತಾಯ್ತು. ಕೊಲಂಬೋ, ಕ್ಯಾಂಡಿಯ ಜನಗಳು ಅನುರಾಧಾಪುರ ಮತ್ತು ಸಿಗಿರಿಯ ಪ್ರಾಂತ್ಯಗಳ ಜೊತೆ ವಿವಾಹ ಒಲ್ಲರು. ಅನುರಾಧಾಪುರದಲ್ಲಿ ಅವರುಗಳ ಪೂಜಾ ವಿಧಾನವನ್ನೂ ಕಂಡೆ. ಊದುಬತ್ತಿ ಹಚ್ಚುವುದು, ಅನ್ನವನ್ನು ಬುದ್ಧನ ವಿಗ್ರಹಕ್ಕೆ ಮೆತ್ತುವುದು, ಸಾಮವೇದ ಲಯದಲ್ಲಿ ಹಾಡುತ್ತಾ ವಿಗ್ರಹ ಸುತ್ತುವುದು, ಹಣ್ಣುಗಳನ್ನು ನೇವೇದ್ಯದಂತೆ ಇಡುವುದು, ಮಾಂಸದ ಭಕ್ಷ್ಯಗಳ ಎಡೆ ಇಡುವುದು ಇವೆಲ್ಲವೂ ಅವರಲ್ಲೂ, ಅಲ್ಲೂ ಇದೆ, ಇದೆ ಮತ್ತು ಇದೆ.

ಯಾವುದೋ ಹಳ್ಳಿಯ ನಡುವೆ ಕೆಟ್ಟು ನಿಂತ ಕಾರನ್ನು ರಿಪೇರಿ ಮಾಡಿಕೊಟ್ಟ 60 ವಯಸ್ಸಿನ ಆಸುಪಾಸಿನ ಗ್ಯಾರೇಜ್ ಮಾಲೀಕ ಹೇಳಿದ್ದು, ಆತ 1979ರಲ್ಲಿ ಗುಣಸೇಖರನ್ ಎನ್ನುವ ಸಿನೆಮಾ ನಿರ್ಮಾಪಕರ ಕಾರ್ ರಿಪೇರಿ ಮಾಡಲು ಭಾರತಕ್ಕೆ ಬಂದಿದ್ದರಂತೆ. ಕಾರ್ ಸರಿಯಾದ ಖುಷಿಗೆ ಆ ನಿರ್ಮಾಪಕರು ಈತನನ್ನು ಒಂದು ವಾರಗಳ ಕಾಲ ಕಾಶ್ಮೀರ ಪ್ರವಾಸಕ್ಕೆ ಕಳುಹಿಸಿದ್ದರಂತೆ.

ಹೂಂ, ಇಲ್ಲಿಯವರೆಗೂ ಓದುತ್ತಾ ಓದುತ್ತಾ ನನ್ನ ಜೊತೆ ಶ್ರೀಲಂಕೆಯ ಮೇಲ್ಮೈ ಪ್ರವಾಸ ನೀವೂ ಮಾಡಿದ್ದೀರ. ಆದರೆ ಈಗ ಆ ದೇಶ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದೆ. ನಾಳೆ ಏನೋ ಎನ್ನುವ ಆತಂಕ ಊಹೆಗೂ ಸಿಗದ್ದು. ಅಲ್ಲಿನವರು ಎಲ್ಲಿಗೂ ಹೋಗಲಾರರು, ಇಲ್ಲಿನವರು ಅಲ್ಲಿಗೆ ಬರುವುದೇ ಬೇಡ ಎನ್ನುವ ಸ್ಥಿತಿಯವರು. ಹೀಗೆ ಒಂದು ದೇಶ ಮುರಿದು ಬೀಳುವುದು ಎಂದರೆ ಅಲ್ಲಿನ ಪ್ರಜೆಗಳು ಮಾತ್ರವಲ್ಲ, ಪ್ರಕೃತಿಯೂ ಸಂಕಷ್ಟಕ್ಕೆ ಸಿಲುಕುತ್ತಾಳೆ. ಮನುಷ್ಯರೊಂದಿಗೆ ಪ್ರಾಣಿಗಳಿಗೂ ’ವನವಾಸ’. ಈ ಸತ್ಯದ ಅರಿವಿನೊಂದಿಗೆ ನನಗೀಗ ನೆನಪಾಗುತ್ತಿದೆ ಅಲ್ಲಿ ಕಂಡ ’ಅನೆಗಳ ಅನಾಥಾಲಯ’.

“ಓಹ್! ಅನಾಥಾಲಯಗಳ ಸಂಖ್ಯೆ ಹೆಚ್ಚಲಿ” ಹೀಗೊಂದು ಉದ್ಗಾರ ಅಂದು ಅಲ್ಲಿ ನನ್ನಿಂದ ಹೊರಬಿದ್ದಾಗ ಅವರಿವರಿಗೆ ನಾನೆಷ್ಟು ಕ್ರೂರಿ ಅನ್ನಿಸಿತ್ತೋ ಏನೋ. ಆದರೆ…..

ಒಂದು ಕಾಲದಲ್ಲಿ ಪ್ರಪಂಚದಲ್ಲೇ ಆನೆಗಳ ಸಂಖ್ಯೆ ಹೆಚ್ಚಿದ್ದ ದೇಶ ಶ್ರೀಲಂಕ. ಈ ಶತಮಾನದ ಆರಂಭದಲ್ಲಿ 36000 ಆನೆಗಳಿದ್ದ ನಾಡಿನಲ್ಲಿ ಇಂದು ಉಳಿದಿರುವುದು ಕೇವಲ 2600 ಆನೆಗಳು ಮಾತ್ರ. ಕಾಡುಗಳ ನಾಶದಿಂದ ಕಾಡು ಪ್ರಾಣಿಗಳು ಆಹಾರ ಅರಸುತ್ತಾ ನಾಡಿಗೆ ಬರುವುದು ನಿತ್ಯದ ಸುದ್ದಿಯಾಗಿದೆ. ಇದರಿಂದ ಕಾಡು ನಾಡು ಎರಡಕ್ಕೂ ಆಗುವ ಹಾನಿಯನ್ನು ಮನಗಂಡು ಶ್ರೀಲಂಕಾ ಸರ್ಕಾರದ ಅರಣ್ಯ ಸಂರಕ್ಷಣಾ ಇಲಾಖೆಯು 1975ರಲ್ಲಿ 25 ಎಕರೆಗಳ ಪ್ರದೇಶದಲ್ಲಿ ಸ್ಥಾಪಿಸಿದ್ದು, ಆನೆಗಳಿಗೊಂದು ಅನಾಥಾಲಯ. ಇದು ವಿಶ್ವದಲ್ಲೇ ಆನೆಗಳಿಗಾಗಿ ಇರುವ ಏಕೈಕ ಆಶ್ರಮ. ಇಲ್ಲಿಂದ ಎಷ್ಟೋ ಆನೆಗಳು ಈಗ ಸುಸ್ಥಿತಿಯಲ್ಲಿ ಕಾಡಿಗೆ ಮರಳಿವೆ. ದಾರಿತಪ್ಪಿದ ಮರಿಯಾನೆಗಳು, ಮದವೇರಿದ ಸಲಗಗಳು, ಅಪಘಾತಕ್ಕೀಡಾದ ಆನೆಗಳು, ಗಾಯಗೊಂಡ ಆನೆಗಳು, ಆಹಾರ ಅರಸಲಾರದ ಮುದಿಯಾನೆಗಳಿಗೆ ಆಶ್ರಯ ಈ ಆಲಯ. ನನ್ನ ಭೇಟಿಯ ಸಮಯದಲ್ಲಿ 86 ಆನೆಗಳ ಆಶ್ರಯತಾಣ.

ಶ್ರೀಲಂಕಾದ ಪಿನ್ನವೇಲಾ ಎಂಬ ಊರಿನಲ್ಲಿರುವ ಆನೆಗಳ ಅನಾಥಾಲಯದಲ್ಲಿ ಪ್ರತೀ ಆನೆಗೂ ದಿನವೊಂದಕ್ಕೆ 170 ರಿಂದ 200 ಪೌಂಡ್‌ಗಳಷ್ಟು ಆಹಾರವನ್ನು ನೀಡಲಾಗುತ್ತಿದೆ. 1984ರಿಂದೀಚೆಗೆ 24 ಮರಿಗಳು ಇಲ್ಲಿ ಜನ್ಮತಾಳಿವೆ. ಸಮ, ರಾಣಿ, ಸುನೀತ, ರಾಜ, ವಿಜಯ, ಕುಮಾರಿ, ಮಿತ್ತಳ ಎಲ್ಲರೂ ಇಲ್ಲಿದ್ದಾರೆ. ಹುಟ್ಟಿನಿಂದ ಕಣ್ಣುಕಾಣದ ಸಮಳ ಜೊತೆಗೆ ಎಲ್ಲರಿಗೂ ತಕ್ಕಮಟ್ಟಿನ ಔಷಧೋಪಚಾರಗಳು ನಡೆಯುತ್ತಿದೆ. ಪುಟ್ಟ ಮರಿಗಳಿಗೆ ಬಾಟಲಿ ಹಾಲಿನ ಸೇವೆಯೂ ನಡೆಯುತ್ತೆ. ಅಲ್ಲೇ ಹತ್ತಿರವಿರುವ ‘ಮಹಾ ಓಯಾ’ ನದಿಯಲ್ಲಿ ದಿನಕ್ಕೆರಡು ಬಾರಿ ಝಳಕದ ಪುಳಕವೂ ಉಂಟು. ಜನರು ಓಡಾಡುವ ರಸ್ತೆಗಳಲ್ಲೀಗ ಆಡಾಡುತ್ತಲೂ, ಗಾಂಭೀರ್ಯದಲ್ಲೂ ನದಿ ತಲುಪುವ 86 ಆನೆಗಳನ್ನು ನೋಡಿದಾಗ ಸೋಜಿಗವಲ್ಲ ಉಂಟಾಗಿದ್ದು ಪ್ರೀತಿ, ಮುದ್ದು ಮತ್ತು ಅಪ್ಪುಗೆಯ ವಾಂಛೆ.

ಕ್ಯಾಂಡಿಯಿಂದ ಪಿನ್ನವೇಲಾಕ್ಕೆ 66 ಕಿಲೋಮೀಟರ್‌ಗಳ ದೂರ, 2 ಗಂಟೆಗಳ ಪ್ರಯಾಣ. ಬೆಳಿಗ್ಗೆ 8 ಗಂಟೆಗೆ ಅಲ್ಲಿದ್ದರೆ ಮರಿಯಾನೆಗಳು ತುಂಟಾಟದಲ್ಲಿ ಹಾಲು ಹೀರುವ ನೋಟ, 10 ಮತ್ತು ಮಧ್ಯಾಹ್ನ 12 ಕ್ಕೆ 400 ಮೀಟರ್‌ಗಳಷ್ಟು ನಡೆದು ನೀರಿನಾಟಕ್ಕೆ ಹೋಗುವ ಆನೆಗಳ ಪೆರೇಡ್, 4 ಗಂಟೆಗೆ ಭರ್ಜರಿ ಭೋಜನ ಎಲ್ಲವನ್ನೂ ನೋಡಬಹುದು. ಸಾರ್ಕ್ ದೇಶದ ಪ್ರಜೆಗಳಿಗೆ 500 ಸಿಂಹಳ ರೂಪಾಯಿಗಳ ಪ್ರವೇಶ ಶುಲ್ಕ. ಸುತ್ತಮುತ್ತ ಖಾಸಗಿ ಆನೆಗಳ ಸಾಕು ಮನೆಗಳಿವೆ. ಶುಲ್ಕ ಭರಿಸಿದರೆ ಆನೆ ಸವಾರಿ ಮಾಡಿ ಅವುಗಳ ಮೈತೊಳೆದು, ತಿನಿಸು ನೀಡಿ, ಮ್ಯೂಸಿಯಂ ನೋಡಿ ಆನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಪಡೆದು ಬರಬಹುದು.

ಆಫ್ರಿಕ ಮತ್ತು ಏಷ್ಯಾ ಎರಡೂ ಬಗೆಯ ಆನೆಗಳನ್ನು ಇಲ್ಲಿ ನೋಡಬಹುದು. ಅಧ್ಯಯನಗಳ ಪ್ರಕಾರ ಆಫ್ರಿಕಾ ಆನೆಗಳು ಗಟ್ಟಿಗರಾದರೆ ಏಷ್ಯನ್ನರು ಬುದ್ಧಿವಂತರು ಮತ್ತು ರೂಪಿಷ್ಟರು. ಮಾವುತನ ಭಾಷೆಯನ್ನು ಮಾತ್ರ ಮಾನ್ಯ ಮಾಡುವ ಇವುಗಳು ಮತ್ತ್ಯಾರಿಗೂ ಬಗ್ಗವು. ಮಾವುತ ವೃತ್ತಿ ವಂಶಪಾರಂಪರ್ಯವಾಗಿ ಮಾತ್ರ ಬರುವುದು, ಯಾವ ಶಾಲಾ ಕಾಲೇಜುಗಳಲ್ಲೂ ಕಲಿಯುವಂಥದ್ದಲ್ಲ! ತನ್ನ 13ನೇ ವಯಸ್ಸಿನಿಂದ ಒಟ್ಟು ಜೀವಿತಾವಧಿಯಲ್ಲಿ 2-3 ಮರಿಗಳಿಗೆ ಮಾತ್ರ ಜನ್ಮ ನೀಡಬಲ್ಲ ಆನೆಗಳ ಎತ್ತರ 8 ಅಡಿಗಳಾದರೆ ತೂಕ 1800 ಕಿಲೋಗ್ರಾಂಗಳಷ್ಟು. ಪ್ರಪಂಚದ ಒಟ್ಟು ಆನೆಗಳ ಸಂಖ್ಯೆಯಲ್ಲಿ ಕೇವಲ 5 ಶೇಕಡ ಆನೆಗಳಿಗೆ ಮಾತ್ರ ದಂತವಿರುವುದು!

ಬದುಕು ಕಟ್ಟಿಕೊಡ ಬಲ್ಲ ಅರಣ್ಯ ಸಂಪತ್ತು ನಶಿಸಿಹೋಗುತ್ತಿರುವ ದಿನಗಳಲ್ಲಿ, ಪ್ರಕೃತಿಯ ಸಮತೋಲನ ಕಾಪಾಡುವ ಉದ್ದೇಶದಿಂದ ಅಸ್ತಿತ್ವದಲ್ಲಿರುವ ಇಂತಹ ‘ಅನಾಥಾಲಯ’ಗಳ ಸಂಖ್ಯೆ ಹೆಚ್ಚಲಿ ಎಂದು ನನಗನಿಸಿದ್ದರಲ್ಲಿ ತಪ್ಪೇನಿದೆ?! ನಿಜಕ್ಕೂ ಶ್ರೀಲಂಕಾದ ಪಿನ್ನವೇಲ ಆನೆಗಳ ಅನಾಥಾಶ್ರಮ ಒಮ್ಮೆಯಾದರೂ ನೋಡಲೇ ಬೇಕಾದ, ಅನುಭವಿಸಲೇ ಬೇಕಾದ ಜಾಗ. ಆದರೀಗ? ಆ ಆನೆಗಳಿಗೆ ಕೂಳು ಸಿಗುತ್ತಿದೆಯೇ ಎನ್ನುವ ಯೋಚನೆಯೊಂದಿಗೇ ರಾವಣಾಸುರನ ಅರಮನೆಯಲ್ಲಿನ ಮಂಡೋದರಿಯ ಅಂತಃಪುರ ನೋಡಿ ಬರಬೇಕೆಂಬ ನನ್ನ ಗುಟ್ಟಾದ ಆಸೆ ನೆರವೇರುವುದೇ ಎನ್ನುವ ಅನುಮಾನವೂ ಜೊತೆಯಾಗಿದೆ. ಪ್ರತಿಕೂಲನಾದವ ದೈವನಲ್ಲ ಎನ್ನುವ ನಂಬಿಕೆಯಲ್ಲೇ ಇಲ್ಲಿ ಅಲ್ಲಿ ಶಾಂತಿ ನೆಲೆಸಲಿ, ಪ್ರವಾಸ ಯಥೇಚ್ಛವಾಗಲಿ ಎನ್ನುವ ಪ್ರಾರ್ಥನೆ.