ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾ ದೇವಿ  ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ದೇಶದ ವಿವಿಧೆಡೆಗಳಲ್ಲಿ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳ ಜೊತೆಗೆ ದೀರ್ಘಕಾಲ ಉಳಿದುಕೊಂಡು ಅವರ ಹಾಡುಕಥೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತ, ಅವರ ಜೀವನಮೌಲ್ಯಗಳ ಕುರಿತು ಕಾದಂಬರಿ, ಕತೆಗಳನ್ನು ಬರೆದವರು. ಅಷ್ಟು ಮಾತ್ರವಲ್ಲ, ಅವರ ಹಕ್ಕುಗಳ ಪರವಾಗಿ ಹೋರಾಡುತ್ತ ಸರ್ಕಾರಗಳನ್ನು ಎದುರುಹಾಕಿಕೊಂಡು ಗಟ್ಟಿಧ್ವನಿಯಲ್ಲಿ ತಮ್ಮ ವಿಚಾರಗಳನ್ನು ಹೇಳಿದವರು. ಜನವರಿ ೧೪ ಅವರು ಹುಟ್ಟಿದ ದಿನ. ಅವರನ್ನು ಕೇರಳದಲ್ಲಿ ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.

 

‘ದೀದಿ, ಇವತ್ತು ಬೆಳಗ್ಗೆ ನಾವು ಟಿ.ಪಿ. ಚಂದ್ರಶೇಖರನ್ ಅವರ ಮನೆಗೆ ಹೋಗಬೇಕಿದೆ. ಸೀರೆ ಉಟ್ಟುಕೊಳ್ಳಿ’ ಎನ್ನುತ್ತಾ ಜೋಶಿ ಜೋಸೆಫ್ ಪುಟ್ಟ ಹೂಗಳಿರುವ ಬೆಳ್ಳನೆಯ ಸೀರೆಯೊಂದನ್ನು ಹಿಡಿದು ನಿಂತಿದ್ದರು. ಆದರೆ ಮಹಾಶ್ವೇತಾ ದೇವಿ, ತಮ್ಮನ್ನು ಭೇಟಿಯಾಗಲು ಬಂದವರ ಬಳಿ ಮಾತನಾಡುವುದರಲ್ಲೇ ಮುಳುಗಿದ್ದರು. ಕೊನೆಗೆ ಆ ಸೀರೆಯನ್ನು ತೆಗೆದುಕೊಂಡು, ತಮ್ಮ ದಂಟೆ ಊರುತ್ತಾ ಪಕ್ಕದ ಕೊಠಡಿಗೆ ಹೋಗಿ ಸೀರೆ ಉಡುತ್ತ, ತನ್ನನ್ನು ಸಂದರ್ಶಿಸಲು ಬಂದ, ಅಜಿದಾ ಜೊತೆಗೆ ಅಲ್ಲಿಂದಲೇ ಮಾತು ಮುಂದುವರೆಸಿದರು.

‘ವರ್ಷದಿಂದ ವರ್ಷಕ್ಕೆ ನದಿ, ತೊರೆ ಬರಿದಾಗುತ್ತಾ ಸಾಗುತ್ತಿದೆಯಲ್ಲ. ನಾನು ಪಾಲಮೋರ್, ಪುರುಲಿಯಾದಂತಹ ನೂರಾರು ಹಳ್ಳಿಗಳನ್ನು ನೋಡಿದ್ದೇನೆ. ಗ್ರಾಮೀಣ ಪ್ರದೇಶದ ಜನರು ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಸೌಂದರ್ಯ ಎಷ್ಟು ಚೆಂದ! ಆ ಹಳ್ಳಿಗಳಲ್ಲಿ ನದಿಗಳೆಲ್ಲ ಬರಿದಾದರೂ ಜನರು ಮುಸ್ಸಂಜೆ ಗುಡಿಸಲಿನ ಮುಂದೆ ಗುಂಡಿ ತೋಡುತ್ತಾರೆ. ಬೆಳಗ್ಗೆ ಪವಾಡವೆಂಬಂತೆ ಅದರಲ್ಲಿ ನೀರು ತುಂಬಿಕೊಳ್ಳುತ್ತದೆ. ಹೆಂಗಸರು ಅದನ್ನು ಬೇಗ ಬೇಗನೇ ಬಿಂದಿಗೆಗಳಿಗೆ ತುಂಬಿಕೊಳ್ಳುತ್ತಾರೆ. ಸೂರ್ಯೋದಯವಾಗುತ್ತಲೇ ಆ ಗುಂಡಿಗಳು ಮತ್ತೆ ಇಂಗಿ ಹೋಗುತ್ತವೆ. ಹೀಗೆ ಸಾಗುತ್ತದೆ ಹಳ್ಳಿಯ ಜೀವನ. ಆದರೆ ಇತ್ತೀಚೆಗೆ ನಗರೀಕರಣ ಹೆಚ್ಚಾಗುತ್ತಿದೆಯಲ್ಲ. ಬರೇ ಕುಡಿಯುವ ನೀರಿಗೆ ಭಾರತದ ಹೆಂಗಸರು ಎಷ್ಟು ಮೈಲಿ ನಡೆಯಬೇಕಾಗಿದೆ ಎಂದು ನೋಡಿ ಬೇಸರವಾಗುತ್ತದೆ’.

‘ಬಾಂಗ್ಲಾದಲ್ಲಿ ಸ್ಪಾಂಜ್ ಐರನ್ ಫ್ಯಾಕ್ಟರಿಗಳು ಬಂದಾಗ ಮಧ್ಯಮ ವರ್ಗದ ಜನರು ಖುಷಿಯಾದರು. ಹೆಚ್ಚು ಶ್ರಮವಿಲ್ಲದೆ ಸಂಬಳ ಪಡೆಯುವ ಉದ್ಯೋಗಕ್ಕೆ ಎಲ್ಲರೂ ಮರುಳಾಗುತ್ತಾರೆ. ಆದರೆ ಈ ಫ್ಯಾಕ್ಟರಿ ಸಿಂಡ್ರೋಮ್‌ನಿಂದ ದೀರ್ಘಾವಧಿಯಲ್ಲಿ ಒಳಿತಾಗುವುದಿಲ್ಲ. ತೊರೆಗಳು ಬರಿದಾಗುವುದು, ಕುಡಿಯುವ ನೀರು ಇಂಗಿ ಹೋಗುವುದು ಒಳಿತಿನ ವಿಚಾರಗಳೇನೂ ಅಲ್ಲ. ಇಂದು ಸಿಗುವ ಸಣ್ಣ ಖುಷಿಯು ನಾಳೆಯ ನೆಮ್ಮದಿಯನ್ನೇ ಕಿತ್ತುಕೊಳ್ಳುವುದಲ್ಲ..’ ಎಂದು ಹೇಳುತ್ತಿದ್ದರು. ಅವರ ಹೇಳಿದ ಮಾತುಗಳನ್ನು ಅಜಿದಾ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು.
ಜ್ಞಾನಪೀಠ ಪ್ರಶಸ್ತಿ ಪಡೆದ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಅವರು, ಕೇರಳದ ಒಂಜಿಯಂನಲ್ಲಿ, ‘ರೆವಲ್ಯೂಷನರಿ ಮಾರ್ಕ್ಸ್ ವಾದಿ ಪಾರ್ಟಿ’ಯ ಸ್ಥಾಪಕ ಟಿ.ಪಿ. ಚಂದ್ರಶೇಖರನ್ ಕೊಲೆಯಾದ ಸುದ್ದಿ ಕೇಳಿ ಅವರ ಮನೆಗೆ ಭೇಟಿ ನೀಡಲು ಸಿದ್ಧರಾಗಿದ್ದರು. ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ಒಬ್ಬರಾದ ಮೇಲೆ ಒಬ್ಬರು ಸಂದರ್ಶಕರು ಬರುತ್ತಲೇ ಇದ್ದುದರಿಂದ ಹೊರಡುವುದು ತಡವಾಗುತ್ತಿತ್ತು.

ಸಶಸ್ತ್ರ ನಕ್ಸಲ್ ಚಳವಳಿಯಿಂದ ಮರಳಿ, ಮಾನವಹಕ್ಕುಗಳ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಅಜಿದಾ ‘ಅನ್ವೇಷಿ’ ಎಂಬ ಸಂಸ್ಥೆಯ ಸಂಸ್ಥಾಪಕಿ. ಮಹಿಳಾಪರ ಚಿಂತನೆಗಳಿರುವ ಆಕೆ, ಪತ್ರಿಕೆಗಾಗಿ ಮಹಾಶ್ವೇತಾ ದೇವಿ ಅವರ ಸಂದರ್ಶನ ತೆಗೆದುಕೊಳ್ಳುತ್ತಿದ್ದರು. ಮನೆಯಲ್ಲಿ ಸೀರೆ ಉಡುತ್ತಲೇ ಮಗಳಿಗೆ ಏನೋ, ಹೇಳುತ್ತಾ, ಆದೇಶಿಸುತ್ತ ಇರುವ ಅಮ್ಮನಂತೆ ಮಹಾಶ್ವೇತಾ ದೇವಿ, ಅಜಿದಾ ಜೊತೆ ಮಾತನಾಡುತ್ತಿದ್ದರು. ಅಲ್ಲೇ ಕುಳಿತಿದ್ದ ನನ್ನನ್ನೂ ಉದ್ದೇಶಿಸಿ ತಮ್ಮ ಆಲೋಚನೆಗಳನ್ನು ಹೇಳುತ್ತಾ, ‘ಈ ಅಭಿವೃದ್ಧಿಯ ನಿಜವಾದ ಹಿಕಮತ್ತು ಏನೆಂದು ನಿಮಗೆ ಅರ್ಥವಾಯಿತಾ..’ ಎಂದು ಕೇಳುತ್ತಿದ್ದರು. ಜಗತ್ತಿನ ಯಾವುದೇ ಮೂಲೆಯಲ್ಲಾಗಲೀ, ಹಿಂಸೆಯು ಅಂತಿಮವಾಗಿ ಮಹಿಳೆಯ ಬದುಕನ್ನು ಹೇಗೆ ಅಸಹನೀಯಗೊಳಿಸುತ್ತದೆ ಎಂಬುದನ್ನು ವಿವರಿಸುತ್ತಿದ್ದರು. ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕಿಯೊಬ್ಬರು ಹಮ್ಮುಬಿಮ್ಮು ಏನೂ ಇಲ್ಲದೇ, ಹೀಗೆ ಅಸಡ್ಡಾಳವಾಗಿ ಸೀರೆ ಉಡುತ್ತ ಉಡುತ್ತ ಅಮ್ಮನಂತೆ ಮಾತನಾಡುತ್ತಿರುವುದನ್ನು ನಾನು ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದೆ.

‘ರಾಜಕೀಯ ನಾಯಕರು, ಅಧಿಕಾರಿಗಳು ಇಂದು ಹೇಗೆ ಜನರ ಬಳಿಗೆ ಹೋಗಿ ಅವರನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ, ಹಾಗೆಯೇ ಲೇಖಕರು, ಸಾಹಿತಿಗಳು ಕೂಡ ಜನರ ಬಳಿಗೆ ಹೋಗುವುದು ಕಡಿಮೆಯಾಗುತ್ತಿದೆ. ಜನರಿಂದ ದೂರ ನಿಂತು ಬರವಣಿಗೆ ಮಾಡುತ್ತಾರೆ. ಬರಹ ಮತ್ತು ರಾಜಕೀಯ – ಈ ಎರಡೂ ವಲಯದವರಿಗೆ ಅಂತಿಮ ನ್ಯಾಯಾಧೀಶರು ಜನರೇ ಅಲ್ಲವೇ. ಆದರೆ ಈಗಿನವರು ಹೆಚ್ಚು ಸ್ಥಳಗಳನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಸ್ಥಳಗಳನ್ನು ನೋಡುವುದು ಎಂದರೆ ಅದು ಪ್ರವಾಸೀ ಶೋಕಿಯಲ್ಲ. ನಮ್ಮ ಬರಹವಾಗಲೀ, ಜನನಾಯಕರ ನೀತಿಯಾಗಲೀ ಅವುಗಳು ಜನರಿಗಾಗಿಯೇ ಇರುವಂಥದ್ದು. ಆದ್ದರಿಂದ ಬರಹಗಾರರ ಧೋರಣೆ ಮತ್ತು ರಾಜಕೀಯ ನಾಯಕರ ಚಿಂತನೆಯು ಜನರ ಯೋಚನಾಲಹರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು’

‘ರಾಜಕೀಯದ ನೇತೃತ್ವ ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗುತ್ತದೆ ಅಷ್ಟೆ. ಆದರೆ ಎಲ್ಲ ನಾಯಕರುಗಳೂ ಸ್ವಾರ್ಥಿಗಳೇ. ಆದ್ದರಿಂದ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರಬೇಕು. ಅದಕ್ಕಾಗಿಯೇ ನಾನು ಹೇಳುವುದು ಸದಾ ಹೋರಾಟಕ್ಕೆ ಸಜ್ಜಾಗಿರಿ. ಫೈಟ್, ಫೈಟ್, ಫೈಟ್. ಯು ಹ್ಯಾವ್ ಟು ಫೈಟ್. ನಾಯಕತ್ವ ಯಾರದ್ದೇ ಇರಲಿ. ಲೆಫ್ಟ್ ಆರ್ ರೈಟ್.. ದೇ ಆರ್ ಬೇಸಿಕಲಿ ಸ್ಕೌಂಡ್ರಲ್ಸ್. ಆದ್ದರಿಂದ ಜನರು ಹೋರಾಟ ಮಾಡುವುದು ಅನಿವಾರ್ಯ ಸ್ಥಿತಿ..’ ಎಂದರು. ಇದನ್ನೆಲ್ಲಾ ಕೇಳುತ್ತ, ಹೂಂಗುಟ್ಟುತ್ತ, ಬರೆಯುತ್ತಿದ್ದ ಅಜಿದಾ ತಲೆ ಎತ್ತಿ,
‘ದೀದಿ ನಿಮಗೆ ಕ್ರಾಂತಿ ಗೀತೆಗಳೆಂದರೆ ಇಷ್ಟ ಅಲ್ವಾ. ನಮಗಾಗಿ ಒಂದೆರಡು ಹಾಡುಗಳನ್ನು ಹಾಡಬಹುದಲ್ಲ..’ ಎನ್ನುತ್ತ, ಜೋಷಿಯವರ ಮುಖನೋಡಿದರು.

ಹಾಡುಗಳನ್ನು ಹಾಡೋಣ ಬನ್ನಿ, ರಬೀಂದ್ರ ಗೀತೆ ನಿಮಗೂ ಗೊತ್ತಿರಬಹುದು.. ಎನ್ನುತ್ತ ಅಮರ್ ಸೋನಾರ್ ಬಾಂಗ್ಲಾ ಅಮಿ.. ಹಾಡನ್ನು ಹಾಡಿದರು. ಜೋಷಿಯೂ ದನಿಗೂಡಿಸಿದರು. ಆಮೇಲೆ, ಹಮ್ ಬೂಕ್ ಸೆ ಮರ್‌ನೇ ವಾಲೇ, ಆಮೇಲೆ ಹೋ ತಯ್ಯಾರ್.. ಮಜ್ದೂರ್ ಹೋಶಿಯಾರ್.. ಎಂದು ಬಹಳ ಉತ್ಸಾಹದಿಂದ ಹಾಡಲು ಶುರು ಮಾಡಿದರು. ಆ ಹಾಡು ಹಾಡುವಷ್ಟರಲ್ಲಿ ಹೊರಡಲು ಸಮಯವಾಯಿತೆಂದು ಜೋಷಿ ಜ್ಞಾಪಿಸಿದರು.

‘ಹೌದೌದು ಹೊರಡೋಣ. ದುಡಿಮೆ, ದುಡಿಮೆ ದುಡಿಮೆ.. ಸದಾ ದುಡಿಮೆಯೇ ಮನುಷ್ಯನ ದೇವರು. ನಮ್ಮ ನಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕು. ಮತ್ತು ಪ್ರತೀ ಕೆಲಸದ ಉದ್ದೇಶವೂ ಜನಪರವಾಗಿಯೇ ಇದ್ದಾಗ ಖಂಡಿತ ಅತೃಪ್ತಿ ಕಾಡುವುದಿಲ್ಲ ನೋಡಿ’ ಎನ್ನುತ್ತಾ ಅಜಿದಾರನ್ನು ಬೀಳ್ಕೊಟ್ಟರು. ‘ನೀವು ಹೀಗೆ ಕ್ರಿಯಾಶೀಲರಾಗಿರುವುದರಿಂದಲೇ ನಮಗೆ ಸ್ಫೂರ್ತಿ ದೀದಿ. ನೂರು ವರ್ಷ ನೀವು ನಮ್ಮ ಜೊತೆಗೆ ಇರಬೇಕು’ ಎಂದು ಜೋಷಿ ಜೋಸೆಫ್ ಹೇಳಿದಾಗ, ‘ಭಡವಾ, ನನಗೆ ಇನ್ನೂರು ವರ್ಷ ಬದುಕಬೇಕೆಂಬ ಯೋಚನೆ ಇದೆ. ಮುಚ್ಚುಬಾಯಿ’ ಎನ್ನುತ್ತ ಹೊರಟರು. ‘ಜರ್ನೀಂಗ್ ವಿದ್ ಮಹಾಶ್ವೇತಾ ದೇವಿ’ ಎಂಬ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿದವರು ಜೋಷಿ ಜೋಸೆಫ್, ಮಹಾಶ್ವೇತಾ ದೇವಿ ಅವರ ಆ ಪ್ರಯಾಣದ ಜೊತೆಗಿದ್ದರು.

(ಅಜಿದಾ ಜೊತೆ ಮಾತನಾಡುತ್ತಿರುವ ಮಹಾಶ್ವೇತಾ ದೇವಿ)

‘ಹೆಚ್ಚು ಶ್ರಮವಿಲ್ಲದೆ ಸಂಬಳ ಪಡೆಯುವ ಉದ್ಯೋಗಕ್ಕೆ ಎಲ್ಲರೂ ಮರುಳಾಗುತ್ತಾರೆ. ಆದರೆ ಈ ಫ್ಯಾಕ್ಟರಿ ಸಿಂಡ್ರೋಮ್‌ನಿಂದ ದೀರ್ಘಾವಧಿಯಲ್ಲಿ ಒಳಿತಾಗುವುದಿಲ್ಲ. ತೊರೆಗಳು ಬರಿದಾಗುವುದು, ಕುಡಿಯುವ ನೀರು ಇಂಗಿ ಹೋಗುವುದು ಒಳಿತಿನ ವಿಚಾರಗಳೇನೂ ಅಲ್ಲ. ಇಂದು ಸಿಗುವ ಸಣ್ಣ ಖುಷಿಯು ನಾಳೆಯ ನೆಮ್ಮದಿಯನ್ನೇ ಕಿತ್ತುಕೊಳ್ಳುವುದಲ್ಲ..’

ಹೋಟೆಲ್ ನಿಂದ ಟಿ.ಪಿ. ಚಂದ್ರಶೇಖರನ್ ಮನೆಗೆ ತೆರಳುವ ದಾರಿಯಲ್ಲಿಯೇ, ಕೊಲೆಯಾದ ಸ್ಥಳವನ್ನು ಹಾದುಹೋಗಬೇಕಾಗಿತ್ತು. ಒಂದು ದಿನದ ಹಿಂದೆಯಷ್ಟೇ ಕೊಲೆ ನಡೆದುದರಿಂದ, ರಸ್ತೆಯಂಚಿನಲ್ಲಿ ಚೆಲ್ಲಿದ ರಕ್ತವು ಇನ್ನೂ ಒಣಗಿರಲಿಲ್ಲ. ರಕ್ತ ಚೆಲ್ಲಿದಷ್ಟು ಜಾಗದ ಸುತ್ತಲೂ ಕಲ್ಲುಗಳನ್ನು ಜೋಡಿಸಿಟ್ಟಿದ್ದರು. ಅಲ್ಲೇ ಒಂದೆರಡು ಕಲ್ಲುಗಳನ್ನು ರಾಶಿ ಮಾಡಿ, ಉದ್ದವಿರುವ ಕೋಲೊಂದನ್ನು ಊರಿ, ಪಕ್ಷದ ಕೆಂಪು ಧ್ವಜವನ್ನು ಹಾರಿಸಲಾಗಿತ್ತು. ಕೊಲೆಯು ಹೇಗೆ ನಡೆಯಿತು, ಕಚ್ಛಾ ಬಾಂಬು ಸಿಡಿಸಿ ಚಂದ್ರಶೇಖರನ್ ಅವರನ್ನು ಬೈಕಿನಿಂದ ಬೀಳಿಸಿದ್ದು ಹೇಗೆ, ನಂತರ ಹಲ್ಲೆ ಮಾಡಿದ್ದು ಹೇಗೆ ಎಂಬುದನ್ನು ಯಾರೋ ಮಲಯಾಳೀ ಭಾಷೆಯಲ್ಲಿ ವಿವರಿಸಿದರೆ, ಮತ್ತೊಬ್ಬರು ಇಂಗ್ಲಿಷ್ ಗೆ ಅನುವಾದಿಸಿ ಹೇಳಿದರು. ಆದರೆ ಮಹಾಶ್ವೇತಾದೇವಿ ಆ ಮಾತುಗಳತ್ತ ಹೆಚ್ಚು ಗಮನ ಕೊಡದೆ ಸುಮ್ಮನೇ ಒಂದಷ್ಟು ಹೊತ್ತು ನಿಂತು, ಬಳಿಕ ವಾಹನವೇರಿದರು.

ದಟ್ಟ ಹಸಿರಿನ, ಓಣಿ ಕೇರಿಗಳನ್ನು ದಾಟಿ ಟಿ.ಪಿ. ಚಂದ್ರಶೇಖರನ್ ಅವರ ಮನೆಯನ್ನು ತಲುಪುವಷ್ಟರಲ್ಲಿ ಆ ಮನೆಯ ಅಂಗಳದಲ್ಲಿ ಹಲವಾರು ಮಂದಿ ಕಾರ್ಯಕರ್ತರು ಸೇರಿದ್ದರು. ಇನ್ನೂ ನಿರ್ಮಾಣ ಹಂತದಲ್ಲಿದ್ದ ಮನೆಯದು. ಮಹಾಶ್ವೇತಾ ದೇವಿ ಬರುತ್ತಾರೆ ಎಂಬ ಸುದ್ದಿ ಕೇಳಿ ಮಾಧ್ಯಮದವರು ಅಲ್ಲಿ ಕಾದು ನಿಂತಿದ್ದರು. ಮನೆಯೊಳಗಿನ ದೃಶ್ಯ ಮನಕಲುಕುವಂತಿತ್ತು ಎಂದರೆ ಕ್ಲೀಷೆಯಾದೀತು. ಚಂದ್ರಶೇಖರನ್ ಅವರ ಅಮ್ಮ ಅಲ್ಲಿ ಕುಳಿತಿದ್ದರು. 76 ವರ್ಷದ ಹಿರಿಯಜ್ಜಿ, ಮಗನನ್ನು ಕಳೆದುಕೊಂಡ ದುಃಖವನ್ನು 86 ವರ್ಷದ ಮತ್ತೊಬ್ಬರು ಹಿರಿಯಜ್ಜಿಯಾದ ಮಹಾಶ್ವೇತಾ ದೇವಿ ಗ್ರಹಿಸಬಲ್ಲವರಾಗಿದ್ದರು. ಮಡದಿ, ಮಗನೊಡನೆ ಒಂದೆರಡು ಮಾತನಾಡಿದರು. ಒಂದರ್ಧ ಗಂಟೆಯಷ್ಟು ಹೊತ್ತು ಮನೆಯಲ್ಲಿ ಮೌನವಾಗಿಯೇ ಕುಳಿತ ಬಳಿಕ ಹೊರಬರುವ ವೇಳೆಗೆ ಮಾಧ್ಯಮ ಪ್ರತಿನಿಧಿಗಳೆಲ್ಲ ಅವರನ್ನು ಸುತ್ತುವರೆದಿದ್ದರು.

‘ಜನಾಂದೋಲನದ ರೂಪದಲ್ಲಿ  ಚಂದ್ರಶೇಖರನ್ ಮತ್ತೆ ಬರುತ್ತಾರೆ’ ಎಂದು ಒಂದೆರಡು ಮಾತುಗಳನ್ನು ಹೇಳಿ ಹೊರಟರು. ಹತ್ಯೆಯನ್ನು ವಿರೋಧಿಸಿ ನಡೆಯಲಿದ್ದ, ಸಾರ್ವಜನಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಬೇಕಿತ್ತು.

ಹಿಂಸೆಯಿಂದ ಏನನ್ನೂ ಸಾಧಿಸುವುದು ಸಾಧ್ಯವಾಗುವುದಿಲ್ಲ, ಹತಾಶೆಯ ಪರಿಣಾಮವಷ್ಟೇ ಹಿಂಸೆ ಎಂಬ ಮಾತುಗಳನ್ನು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಅವರ ಇಂಗ್ಲಿಷ್ ಮಾತುಗಳನ್ನು ಮಲಯಾಳಂ ಭಾಷೆಗೆ ಅನುವಾದಿಸುತ್ತಿದ್ದರು. ‘ಒಬ್ಬ ಸ್ಫೂರ್ತಿದಾಯಕ ವ್ಯಕ್ತಿಯೋ, ನಾಯಕನೋ ಹೋರಾಟದ ಕಣದಿಂದ ಮರೆಯಾದ ಎಂಬ ಕಾರಣಕ್ಕೆ ಜನಾಂದೋಲನಗಳು ನಿಲ್ಲುತ್ತವೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಆಂದೋಲನ ಜನರಿಗಾಗಿಯೇ ಹುಟ್ಟಿಕೊಂಡಿದ್ದಾದರೆ ಅದು ಮತ್ತೆ ಮುಂದುವರೆಯುತ್ತದೆ. ಸ್ವಾರ್ಥದ ಹೋರಾಟವಾದರೆ ಮುಂದುವರೆಯಲಾರದೇನೋ. ಆದರೆ ಆ ನಡುವಿನ ಮೌನವನ್ನು ನಕಾರಾತ್ಮಕವಾಗಿ ವ್ಯಾಖ್ಯಾನಿಸುವುದು ಸರಿಯಲ್ಲ.’ ಎಂಬುದು ಅವರ ಭಾಷಣದ ತಾತ್ಪರ್ಯವಾಗಿತ್ತು.

ಬಂಗಾಳಿ ಭಾಷೆಯ ಬರಹಗಾರ್ತಿಯಾದರೂ ಮಹಾಶ್ವೇತಾ ದೇವಿ ಆ ಭಾಷೆಗೆ ಮತ್ತು ಪ್ರದೇಶಕ್ಕೆ ಮಾತ್ರ ಸೀಮಿತರಾದವರಲ್ಲ. ತಮ್ಮ ಕಾದಂಬರಿಗಳಿಗಾಗಿ, ಬರಹಗಳಿಗಾಗಿ ಆಕೆ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಮಾಡಿದವರು. ಆದಿವಾಸಿಗಳ, ದಲಿತರ ಮತ್ತು ಸಮಾಜದ ಅಂಚಿಗೆ ತಳ್ಳಲ್ಪಟ್ಟವರ, ಅಂತಹ ಸಮುದಾಯಗಳಲ್ಲಿರುವ ಮಹಿಳೆಯರ ಬದುಕಿನ ಬವಣೆಗಳ ಬಗ್ಗೆ ಆಸ್ಥೆ ಹೊಂದಿದ್ದರು. ಪಶ್ಚಿಮ ಬಂಗಾಳ, ಬಿಹಾರ, ಮಧ್ಯ ಪ್ರದೇಶ, ಛತ್ತೀಸ್ ಗಢ ರಾಜ್ಯಗಳ ಬುಡಕಟ್ಟು ಸಮುದಾಯಗಳ ಜೊತೆಗೆ ದೀರ್ಘಕಾಲ ಜೀವನ ಮಾಡಿ ಅವರ ಜೀವನ ಶೈಲಿಯನ್ನು ಅರ್ಥಮಾಡಿಕೊಂಡವರು. ಆದ್ದರಿಂದಲೇ ಅವರು ಹೇಳುತ್ತಿದ್ದರು, ‘ನನ್ನ ಬದುಕಿನ ಹೆಚ್ಚಿನ ಸಮಯ ಬುಡಕಟ್ಟು ಜನಾಂಗದವರ ವಿಚಾರವಾಗಿಯೇ ಕಳೆದಿದ್ದೇನೆ. ಅವರಷ್ಟು ಮುಕ್ತವಾದ ನಾಗರಿಕ ಸಮಾಜ ಮತ್ತೊಂದಿಲ್ಲ ಎಂದು ನನಗೆ ಅನಿಸುತ್ತದೆ. ಬ್ರಿಟಿಷರ ಆಳ್ವಿಕೆ ಇದ್ದಾಗ ಕೆಲವು ಬುಡಕಟ್ಟು ಜನಾಂಗದವರನ್ನು ಕ್ರಿಮಿನಲ್‌ಗಳು ಎಂದು ಘೋಷಣೆ ಮಾಡಿಬಿಟ್ಟರು. ಅವರಲ್ಲಿ ನಾಗರಿಕ ಮೌಲ್ಯಗಳು ಇಲ್ಲ ಎನ್ನುವುದು ಬ್ರಿಟಿಷರ ಅಭಿಪ್ರಾಯ. ಆದರೆ ನಾಗರಿಕ ಮೌಲ್ಯಗಳ ವ್ಯಾಖ್ಯೆಯಾದರೂ ಏನು? ಮಾನವೀಯವಾಗಿ ಬದುಕುವ ಹಕ್ಕನ್ನು ಕಿತ್ತುಕೊಂಡು ನೂರಾರು ಕಟ್ಟುಪಾಡುಗಳ ಸಂಕೋಲೆ ಮಾಡುವುದೇ ನಾಗರಿಕತೆಯೇ? ಬುಡಕಟ್ಟು ಜನಾಂಗದವರು ಅತ್ಯಂತ ಮಾನವೀಯವಾಗಿ, ನಾಗರಿಕರಾಗಿ ಬದುಕುತ್ತಿದ್ದಾರೆ. ಅಲ್ಲಿ ಮದುವೆಯ ಹಕ್ಕಿದೆ, ವಿಚ್ಛೇದನದ ಹಕ್ಕೂ ಇದೆ. ವಿಧವಾ ವಿವಾಹ ಇದೆ. ಹೆಜ್ಜೆ ಹೆಜ್ಜೆಗೂ ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲ. ತಾನು ಮೇಲು, ನೀನು ಕೀಳು ಎನ್ನುವ ವರ್ಗಗಳು ಕೂಡಾ ಇಲ್ಲ. ಭಾರೀ ಆಸ್ತಿಯನ್ನು ಸಂಗ್ರಹಿಸುವ ಪ್ರಶ್ನೆಯೇ ಅವರಲ್ಲಿ ಇಲ್ಲ. ಎಲ್ಲರೂ ಸರಳವಾಗಿ ಬದುಕುವ ಅವಕಾಶವಿದ್ದರೆ ಅದು ನಾಗರಿಕತೆಯಲ್ಲದೆ ಮತ್ತೇನು. ನನ್ನ ಪ್ರಕಾರ ಭಾರತದ ಬುಡಕಟ್ಟು ಜನಾಂಗದವರು ನಮಗಿಂತಲೂ ಹೆಚ್ಚು ನಾಗರಿಕವಾಗಿ ಬದುಕುತ್ತಿದ್ದಾರೆ ಎಂದು ಪ್ರಯಾಣದ ಸಂದರ್ಭದಲ್ಲಿ ಹೇಳಿದರು.

ಅವರೊಬ್ಬರು ಪತ್ರಕರ್ತೆಯಂತೆ ಸುತ್ತಾಡಿದವರು. ಜೀವನ್ಮುಖಿಯಾಗಿ ಯೋಚಿಸುತ್ತ ಬರೆದವರು. ೧೯೭೭ರಲ್ಲಿ ಅವರು ಬರೆದ ‘ಅರಣ್ಯೇರ್ ಅಧಿಕಾರಿ’ ಕೃತಿಯು ಬಿರ್ಸಾ ಮುಂಡಾನ ಹೋರಾಟದ ಕುರಿತಾಗಿತ್ತು. ಜಾರ್ಖಂಡ್ ನಲ್ಲಿ ಜೀತಪದ್ಧತಿ ವಿರುದ್ಧ ನಡೆದ ಹೋರಾಟದಲ್ಲಿ, ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾ ನೀತಿಯ ವಿರುದ್ಧದ ಪ್ರತಿಭಟನೆಯಲ್ಲಿ. ನಂದಿಗ್ರಾಮ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಅವರು ಬರೆದ ‘ಹಜಾರ್ ಚುರಾಶಿರ್ ಮಾ’ ಎಂಬ ಕಾದಂಬರಿಯಲ್ಲಿ ತಾಯಿಯೊಬ್ಬಳು ತನ್ನ ಮಗನ ಕುರಿತು ಕನಸು ಕಾಣುತ್ತ, ಬದುಕಿನ ಜಂಜಾಟಗಳನ್ನು ಎದುರಿಸುತ್ತಾ ಬಾಳುತ್ತಾಳೆ. ಆದರೆ ವ್ಯವಸ್ಥೆಯ ವಿರುದ್ಧ ಹೋರಾಟದ ಕಣಕ್ಕಿಳಿದ ಮಗನು ಹೆಣವಾಗುತ್ತಾನೆ. ವ್ಯವಸ್ಥೆಯ ಪಾಲಿಗೆ ಅದೊಂದು ಸಂಖ್ಯೆ(1084)ಯ ಹೆಣವಷ್ಟೇ..’ ಹೀಗೆ ಉಳ್ಳವರ ದರ್ಪ ಮತ್ತು ಇಲ್ಲದಿರುವವರ ನೋವಿಗೆ ದನಿಯಾದ ಬರಹಲೋಕ ಅವರದ್ದು.

ಮಹಾಶ್ವೇತಾ ದೇವಿ ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇಪ್ಪತ್ತು ಸಣ್ಣ ಕತೆಗಳ ಸಂಕಲನ. ಬರವಣಿಗೆ ಮತ್ತು ಚಳವಳಿಯೇ ಅವರ ಬದುಕಾಗಿತ್ತು. ೧೯೨೬ರ ಜನವರಿ ೨೪ರಂದು ಅವರು ಈಗಿನ ಬಾಂಗ್ಲಾದೇಶದಲ್ಲಿರುವ ಢಾಕಾದಲ್ಲಿ ಹುಟ್ಟಿದರು. ಅವರ ತಂದೆ ಮನಿಷ್ ಘಟಕ್ ಮತ್ತು ತಾಯಿ ಧರಿತ್ರಿ ದೇವಿ ಕೂಡ ಬರಹಗಾರರಾಗಿದ್ದರು. ಚಿಕ್ಕಪ್ಪ ಋತ್ವಿಕ್ ಘಟಕ್ ಪ್ರಸಿದ್ಧ ಚಿತ್ರನಿರ್ಮಾಪಕರು. ಅವರ ಪತಿ ಬಿಜೋನ್ ಭಟ್ಟಾಚಾರ್ಯ ನಾಟಕಕಾರರು. ಎಲ್ಲರೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು.

ಮಹಾಶ್ವೇತಾದೇವಿ ೨೮ರ ವಯಸ್ಸಿನಲ್ಲಿಯೇ ರಾಜಸ್ಥಾನದ ಹಿಂದುಳಿದ ಪ್ರದೇಶಗಳಲ್ಲಿ ಸಂಚರಿಸಿ ಝಾನ್ಸಿ ರಾಣಿಯ ಬಗ್ಗೆ ಮಾಹಿತಿ, ಹಾಡುಗಳನ್ನು ಸಂಗ್ರಹಿಸಿ ಆಕೆಯ ಜೀವನ ಚರಿತ್ರೆ ಬರೆದರು. ಅದು ಅವರ ಮೊದಲ ಕೃತಿ. ಬಳಿಕ ಬಂಗಾಳದ ಪಾಲಮುವಿನಲ್ಲಿ ಜೀತದಾಳುಗಳ ಬಗ್ಗೆ, ಮೇದಿನಿಪುರದ ಲೋಧಾ ಸಮುದಾಯದ ಕುರಿತು, ಪುರುಲಿಯಾದ ಶಬರ ಸಮುದಾಯದ ಕುರಿತು ಬರೆಯುತ್ತಲೇ ಸಾಗಿದರು. ಅಂತಹ ಸಮುದಾಯಗಳಲ್ಲಿದ್ದ ಕತೆಗಳು, ಐತಿಹ್ಯಗಳು, ಹಾಡುಗಳು ಮೌಖಿಕವಾಗಿಯೇ ಉಳಿದುಕೊಂಡಿರುವುದನ್ನು ಗುರುತಿಸಿದರು.

‘ಆದಿವಾಸಿಗಳು ಏನನ್ನೂ ಬರೆದಿಡುವುದಿಲ್ಲ. ಅವರಿಗೊಂದು ಲಿಪಿಯೇ ಇಲ್ಲ. ಅವರ ಬದುಕಿನ ಕತೆಗಳು, ಸವಾಲುಗಳು ಅವರ ಹಾಡುಗಳಲ್ಲಿ, ಅವರ ನುಡಿಗಟ್ಟುಗಳಲ್ಲಿರುತ್ತವೆ. ಅವು ನಿರಂತರವಾಗಿ ಬೆಳೆಯುತ್ತಲೇ ಹೋಗುತ್ತವೆ. ಇಂತಹುದೇ ಗುರಿಯನ್ನು ತಲುಪಬೇಕೆಂಬ ಉದ್ದೇಶವಿಲ್ಲದೇ, ತನ್ನ ಪಾಡಿಗೆ ಹರಿಯುತ್ತಲೇ ಇರುವ ದೀರ್ಘ ನದಿಯಂತೆ ಅವರ ಕತೆಗಳು ಸಾಗುತ್ತವೆ’ ಎಂದು ಅವರೊಂದು ಕಡೆ ಬರೆದಿದ್ದಾರೆ.

ಸಾಹಿತ್ಯ ಅಕಾಡೆಮಿ, ಪದ್ಮಶ್ರೀ, ಪದವಿಭೂಷಣ್, ಜ್ಞಾನಪೀಠ, ರೋಮನ್ ಮ್ಯಾಗ್ಸೆಸೆ ಪ್ರಶಸ್ತಿಗಳು ಅವರ ಬಳಿ ಬಂದವು. ನೋಬೆಲ್ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಪ್ರಶಸ್ತಿಗಳ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ ಮಹಾಶ್ವೇತಾ ದೇವಿ ಹೇಳಿದ್ದು ಹೀಗೆ:

‘ಅಯ್ಯೋ, ಪ್ರಶಸ್ತಿಗಳ ಮಾತುಬಿಡಿ, ಬರಹವಾಗಲೀ, ಹೋರಾಟವಾಗಲೀ ಜನರ ಪರವಾಗಿರಬೇಕು, ಜನರ ಪರ ಹೋರಾಡುವಾಗ ಅಧಿಕಾರದಲ್ಲಿ ಯಾರಿದ್ದಾರೆ ಎಂಬ ತರ್ಕ ನಮಗೇಕೆ ? ಪ್ರಶಸ್ತಿಗಳನ್ನು ಕೊಟ್ಟ ಮಾತ್ರಕ್ಕೆ ಜನಪರವಾಗಿರುವ ನಮ್ಮ ಬರಹ ಮತ್ತು ಹೋರಾಟದ ದಿಕ್ಕು ಬದಲಾಗಬಾರದಷ್ಟೇ.’

(ಫೋಟೋಗಳು: ಲೇಖಕರವು)