ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ ಸಂಸ್ಕೃತಿ ಸಂಪನ್ನತೆಯ ಪ್ರತೀಕವೇ ತಾನಾದ ನಿರಾಡಂಬರ ಮೂರ್ತಿಗಳ ಜೀವಚೈತನ್ಯದ ಸೂಕ್ಷ್ಮಗಳು ಅಕ್ಷರಶಃ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತಿರುತ್ತವೆ.
ಅಕ್ಷತಾ ಕೃಷ್ಣಮೂರ್ತಿ ಸಂಪಾದಿಸಿದ “ಹಾಲಕ್ಕಿ ಕೋಗಿಲೆ” ಪುಸ್ತಕಕ್ಕೆ ಪ್ರೊ.ಕಾಳೇಗೌಡ ನಾಗವಾರರ ಮುನ್ನುಡಿ

 

ಅತ್ಯಂತ ಮುಗ್ಧ, ಪ್ರಾಮಾಣಿಕ, ಪಾರದರ್ಶಕ ಮತ್ತು ನಿರಂತರವಾದ ಜ್ಞಾನಾಕಾಂಕ್ಷಿ ಚಿಂತನೆಯ ನಿಸರ್ಗದತ್ತ ವಿಚಾರಧಾರೆಯಾದ ಜಾನಪದವು ಎಲ್ಲ ಕಾಲಕ್ಕೂ ಸಕಲರ ಏಳಿಗೆಗೂ ಪೂರಕವಾಗುವಂತಹ, ತೆರೆದ ಮನಸ್ಸಿನ ಆರೋಗ್ಯಕರ ಹೆದ್ದಾರಿಯಾಗಿದ್ದು-ಕುತೂಹಲಕಾರಿ ವಿದ್ವಾಂಸರ ಅಚ್ಚರಿ ಮತ್ತು ಶಾಶ್ವತ ಕುತೂಹಲಕ್ಕೆ ಕಾರಣವಾಗಿದೆ. ಭಾರತದ ಪರಿಸ್ಥಿತಿಯಲ್ಲಂತೂ “ಆಕಾಶ ನೋಡೋಕೆ ನೂಕಾಟಯಾಕೆ?” ಎಂಬ ಸಂತೃಪ್ತ ಭಾವದ ನಿರಾಳತೆಯ, ನಿರ್ಲಿಪ್ತ ಆಲೋಚನಾ ವಿಧಾನವಾಗಿ ಈ ಮಾರ್ಗವು “ಅನಂತತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ!” ಎಂಬಂತಹ ಸಹಜ ಉಸಿರಾಟದ ಹೆಮ್ಮೆಯ, ತೀವ್ರತರ ಹುಡುಕಾಟದ, ಸೂಕ್ಷ್ಮವೂ-ಸಂಕೀರ್ಣವೂ ಆಗಿರುವ ಅಧ್ಯಯನ ಹಾಗೂ ಸಂಶೋಧನೆಯ ವಿಧಾನಗಳಿಗೆ ಹೆಚ್ಚಿನ ಸವಾಲುಗಳನ್ನು ಒಡ್ಡುತ್ತಲೇ ನಡೆದುಬಂದಿರುವ ಅಕ್ಷಯ ನಿಧಿಯಾಗಿದೆ.

ತುಂಬಾ ವೈವಿಧ್ಯಮಯ ಹಿನ್ನೆಲೆ ಮತ್ತು ವಾತಾವರಣದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಅರಳುತ್ತಾ, ಕವಲೊಡೆಯುತ್ತಾ ಸಾಗಿ ಬಂದಿರುವ ಕರ್ನಾಟಕದ ಜಾನಪದವು ಸಹ ವೈಶಿಷ್ಟ್ಯಪೂರ್ಣವೂ, ವಿಭಿನ್ನವೂ ಆಗಿರುವ ಸಂಪದ್ಭರಿತ ಜ್ಞಾನಶಾಖೆಯಾಗಿ ಕಂಗೊಳಿಸುತ್ತಿರುವುದನ್ನು ತಿಳಿಯುವ ಆನಂದ ನಮ್ಮದಾಗಿದೆ. ಅದರಲ್ಲೂ ನಮ್ಮ ಪಡುಗಡಲು ಮತ್ತು ಸುಪ್ರಸಿದ್ಧ ಸಹ್ಯಾದ್ರಿ ಶ್ರೇಣಿಯ ಎಡೆಬಿಡದ ಒಡನಾಟದ ಚೋದ್ಯದಾಯಕ ಹರ್ಷಕ್ಕೆ ನೆಲೆಮನೆಯಾಗಿರುವ ಉತ್ತರಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯದ ಸಂತೃಪ್ತ ಮಡಿಲಿನ ಮೌಖಿಕ ಸಾಹಿತ್ಯದ ಮತ್ತು ನಿರಾಳ ಬದುಕಿನ ತಾಜಾತನಕ್ಕೆ ನಾನಂತೂ ಮಾರು ಹೋಗಿದ್ದೇನೆ.

ಅಲ್ಲಿನ ಹಾಲಕ್ಕಿ ಒಕ್ಕಲು ಮತ್ತಿತರ ಮುಗ್ಧ, ನಿರ್ಲಿಪ್ತ ಬುಡಕಟ್ಟುಗಳ ಜೀವನಪ್ರೀತಿಯು ನಿಜಕ್ಕೂ ವಿಶಿಷ್ಟವಾದುದು. ಹೀಗಾಗಿ ನನ್ನೆಲ್ಲ ಸುತ್ತಾಟಗಳ ಹರ್ಷದಾಯಕ ಹೆಜ್ಜೆಗಳು ಉತ್ತರಕನ್ನಡ ಮತ್ತು ಕೊಡಗಿನ ಕಡೆಗೆಆನಂದದಿಂದ ಸದಾಕಾಲವೂ ಮುಖಮಾಡಿರುತ್ತವೆ. ಬೆಂಗಳೂರು ವಿಶ್ವವಿದ್ಯಾನಿಲಯದ ಐಚ್ಛಿಕ ಜಾನಪದ ವಿದ್ಯಾರ್ಥಿಗಳನ್ನು ಸತತವಾಗಿ ಹತ್ತು ವರ್ಷಗಳ ಕಾಲ (1974-84) ನಾನು ಕ್ಷೇತ್ರಕಾರ್ಯಕ್ಕಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲೆಡೆ ಕರೆದೊಯ್ದು, ಅಧ್ಯಯನ ನಡೆಸಿ, ಆ ಸಂಬಂಧದ ಸಂಪದ್ಭರಿತ ತಾಜಾ ಅನುಭವಗಳನ್ನು ತೀರಾ ಹತ್ತಿರದಿಂದ ಪಡೆದಿದ್ದೇನೆ.

ಈ ಬಗೆಯ ನನ್ನ ವಿಚಿತ್ರತರ ಆಸಕ್ತಿಯುತ ಸುತ್ತಾಟಗಳ ನಡುವೆಯೇ ಇದೇ ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಜನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರನ್ನು ನಾನು ಹಲವಾರು ಸಲ ತುಂಬಾ ಆತ್ಮೀಯವಾಗಿ ಭೇಟಿಯಾಗಿದ್ದೇನೆ. ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ ಸಂಸ್ಕೃತಿ ಸಂಪನ್ನತೆಯ ಪ್ರತೀಕವೇ ತಾನಾದ ನಿರಾಡಂಬರ ಮೂರ್ತಿಗಳ ಜೀವಚೈತನ್ಯದ ಸೂಕ್ಷ್ಮಗಳು ಅಕ್ಷರಶಃ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತಿರುತ್ತವೆ.

ತುಂಬಾ ವೈವಿಧ್ಯಮಯ ಹಿನ್ನೆಲೆ ಮತ್ತು ವಾತಾವರಣದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಅರಳುತ್ತಾ, ಕವಲೊಡೆಯುತ್ತಾ ಸಾಗಿ ಬಂದಿರುವ ಕರ್ನಾಟಕದ ಜಾನಪದವು ಸಹ ವೈಶಿಷ್ಟ್ಯಪೂರ್ಣವೂ, ವಿಭಿನ್ನವೂ ಆಗಿರುವ ಸಂಪದ್ಭರಿತ ಜ್ಞಾನಶಾಖೆಯಾಗಿ ಕಂಗೊಳಿಸುತ್ತಿರುವುದನ್ನು ತಿಳಿಯುವ ಆನಂದ ನಮ್ಮದಾಗಿದೆ.

ಈಚೆಗೆ ಭಾರತ ಸರ್ಕಾರವು ಸುಕ್ರಜ್ಜಿ ಅಂತಹ ಗ್ರಾಮೀಣ ಭಾಗದ ಶ್ರೇಷ್ಠ ಕಲಾವಿದೆಯ ಮಹತ್ವವನ್ನು ಅರಿತು ಪದ್ಮಶ್ರೀ ಪ್ರಶಸ್ತಿ ನೀಡಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ಕಡುಬಡತನದ ನಡುವೆಯೇ ಹುಟ್ಟಿ ಬೆಳೆದು, ನೂರೆಂಟು ಅಭದ್ರತೆಯ ಸಂಕೋಲೆಗಳ ತೊಡಕುಗಳನ್ನೆಲ್ಲಾ ಬದಿಗೊತ್ತಿ ತುಂಬು ಸೃಜನಶೀಲತೆಯ ಸಾಕ್ಷಾತ್ ಪ್ರತೀಕವಾಗಿ ಬೆಳಗುತ್ತಿರುವ ಸುಕ್ರಜ್ಜಿ ಅವರ ನಿರಂತರ ಸಮಾಜಮುಖಿ ಕ್ರಿಯೆಗಳ ಜೀವಂತಿಕೆಯು ನಿಜಕ್ಕೂ ಮಾದರಿಯಾಗಿದೆ. ಇದೇರೀತಿಯಲ್ಲಿ ಸಾಲುಮರದ ತಿಮ್ಮಕ್ಕನವರಂತಹ ಹೆಮ್ಮೆಯ ಜನೋಪಕಾರಿ ಪರಿಸರ ಪ್ರೇಮಿಯನ್ನು ಭಾರತ ಸರ್ಕಾರ ಗೌರವಿಸಿದ ಸಂದರ್ಭದಲ್ಲಿ, ರಾಷ್ಟ್ರಪತಿಗಳು ಆಕೆಗೆ ವಿನಯದಿಂದ ತಲೆಬಾಗಿದಾಗ-ಆ ಮುಗ್ಧ ತುಂಬು ಮನದ ಪರಿಶುದ್ಧ ಸ್ತ್ರೀ ಚೇತನವು ಅವರ ತಲೆಮುಟ್ಟಿ ಪ್ರೀತಿಯಿಂದ ನೇವರಿಸುತ್ತಾ ಆಶೀರ್ವದಿಸಿದ ಘಟನೆಯನ್ನು ದೃಶ್ಯಮಾಧ್ಯಮಗಳಲ್ಲಿ ಇಡೀ ರಾಷ್ಟ್ರವೇ ಬೆಕ್ಕಸ ಬೆರಗಾಗಿ ವೀಕ್ಷಿಸಿತು.

ಈ ಬಗೆಯ ಘಟನೆಗಳು ಜನತಂತ್ರ ವ್ಯವಸ್ಥೆಯ ಅಸಾಧಾರಣ ಸೊಬಗನ್ನು ಸದಭಿರುಚಿಯ ಭಾಗವಾಗಿ ವಿಸ್ತರಿಸುತ್ತಿರುವ ಹರ್ಷದಾಯಕ ಸಂಗತಿಗಳಾಗಿವೆ. ಸುಕ್ರಜ್ಜಿಯಂತಹ ಅತ್ಯುತ್ತಮ ಗ್ರಾಮೀಣ ಪ್ರತಿಭೆಗಳೂ ಸಹ ಇಂತಹ ಶ್ರೇಷ್ಠ ಮಾದರಿಗಳಾಗಿ ನಮ್ಮ ನಡುವೆ ಕಂಗೊಳಿಸುತ್ತಿರುವುದನ್ನು ನಾವೆಲ್ಲಾ ಹೆಜ್ಜೆಹೆಜ್ಜೆಗೂ ಕಾಣುತ್ತಿದ್ದೇವೆ. ಈ ಎಲ್ಲಾ ಶ್ರಮಜೀವಿ ಪರಂಪರೆಯ ಶಾಶ್ವತ ಋಣದ ಮಕ್ಕಳಾಗಿಯೇ ಮೆರೆಯುತ್ತಿರುವ ನಮ್ಮ ನಡುವಣ ಶಾಸಕ, ಸಂಸದ, ಅಧಿಕಾರಿ, ಪ್ರಾಧ್ಯಾಪಕ, ಮಂತ್ರಿ, ಪ್ರಧಾನಿ, ರಾಷ್ಟ್ರಪತಿಯೂ ಸೇರಿದಂತಹ ಐಷಾರಾಮಿ ತೋಳ ತೊಟ್ಟಿಲುಗಳಲ್ಲಿ ಪವಡಿಸುವ, ಸದಾಕಾಲವೂ ಕೂತುಂಡು ತಣಿಯುವ, ನೆಣಗೊಬ್ಬಿನ ಹೊಣೆಗೇಡಿಗಡಣದ ನಡುವೆ ಇವರೆಲ್ಲಾ ಚಿರಂತನ ದೇವತಾ ಸ್ವರೂಪಿಗಳಾಗಿ ಸದಾಕಾಲವೂ ಬೆಳಗುತ್ತಿದ್ದಾರೆ.

ತುಂಬು ಮನಸ್ಸು ಮತ್ತು ಮುಕ್ತ ಚಿಂತನೆಯ ಹರಿಕಾರರಾಗಿಯೇ ಬದುಕುತ್ತಿರುವ ಹಾಲಕ್ಕಿ ಒಕ್ಕಲು ಜನಾಂಗದ ಅತ್ಯುತ್ತಮ ಪ್ರತಿಭೆಯಾದ ಸುಕ್ರಜ್ಜಿ ಅವರ ಕ್ರಿಯಾಶೀಲ ಚಟುವಟಿಕೆಗಳನ್ನು ಹತ್ತಿರದಿಂದ ಕಂಡು, ಕೇಳಿ, ತಿಳಿದ ಪ್ರಜ್ಞಾವಂತರೆಲ್ಲರೂ ಆ ನಿರಾಡಂಬರ ಜೀವವನ್ನು ಅಪಾರವಾಗಿ ಗೌರವಿಸುವ ಪರಿಯು ಆಶ್ಚರ್ಯಕರವಾದುದು. ಈ ಎಲ್ಲ ಅಗ್ಗಳಿಕೆಗಳ ಹಿನ್ನೆಲೆಯಲ್ಲಿ ಸುಕ್ರಜ್ಜಿ ಅವರ ಸಾಧನೆಯ ನಾನಾ ಮುಖಗಳನ್ನೂ ಪ್ರಕಟಿಸುವಂತಹ ಒಂದು ಉತ್ತಮ ಅಭಿನಂದನ ಗ್ರಂಥವನ್ನು ಹೊರತರುವ ಪ್ರಯತ್ನಕ್ಕಾಗಿ ನಾನು ಹಲವಾರು ದಿನಗಳಿಂದಲೂ ತೀವ್ರವಾಗಿ ಹಂಬಲಿಸುತ್ತಿದ್ದೆ. ಅದೇ ಭಾಗದಲ್ಲಿ ಹುಟ್ಟಿ, ಬೆಳೆದು ಪ್ರಜ್ಞಾವಂತ ಲೇಖಕಿಯಾಗಿರುವ ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಈ ಹೊಣೆಗಾರಿಕೆಯನ್ನು ಒಪ್ಪಿಸುವುದು ಸೂಕ್ತವೆಂದು ನಿರ್ಧರಿಸಿದೆ.

ಅವರಿಗೆ ಈ ಯೋಜನೆಯ ಬಗ್ಗೆ ವಿವರಿಸಿದಾಗ ಉತ್ಸಾಹ ಮತ್ತು ಸಡಗರದಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡರು. ಕಥೆ, ಕವಿತೆ, ಗಜಲ್, ವಿಮರ್ಶೆ, ವೈಚಾರಿಕತೆ- ಮುಂತಾದ ಪ್ರಕಾರಗಳಲ್ಲಿ ತೀವ್ರತರವಾದ ಪ್ರೀತಿಯಿಂದ ದುಡಿಯುತ್ತಿರುವ ಅಕ್ಷತಾ ನಮ್ಮ ಯುವ ಲೇಖಕಿಯರ ಬಳಗದಲ್ಲಿ ಗಮನಾರ್ಹವಾದ ರೀತಿಯಲ್ಲಿ ತೊಡಗಿಕೊಂಡಿದ್ದಾರೆ. ನಾಡಿನ ಬೇರೆ ಬೇರೆ ಭಾಗದ ಪ್ರಜ್ಞಾವಂತರು ಅಪರಿಮಿತವಾದ ಮೆಚ್ಚುಗೆಯಿಂದ ಬರೆದಿರುವ ಸುಕ್ರಜ್ಜಿಯವರನ್ನು ಕುರಿತ ಬರಹಗಳನ್ನೆಲ್ಲಾ ಆಸ್ಥೆಯಿಂದ ಕಲೆಹಾಕಿ, ಅಧ್ಯಯನ ಮಾಡಿ, ತಾವೂ ವಿವರವಾದ ತಮ್ಮ ಕ್ಷೇತ್ರಕಾರ್ಯದ ಮೂಲಕ ಉತ್ತಮ ವಿವೇಚನೆಯಿಂದ ಕೂಡಿದ “ಹಾಲಕ್ಕಿ ಕೋಗಿಲೆ” ಗ್ರಂಥವನ್ನು ವಿಶೇಷ ಶ್ರದ್ಧೆ ಮತ್ತು ಆಸಕ್ತಿಯಿಂದ ಇವರು ಸಿದ್ಧಪಡಿಸಿದ್ದಾರೆ.

ಜನಪದ ಸಾಹಿತ್ಯ, ಸಂಸ್ಕೃತಿ ಕುರಿತಂತೆ ಅಧ್ಯಯನ, ಸಂಶೋಧನೆಯಲ್ಲಿ ನಿರತರಾದವರಿಗೆ ಈ ಕೃತಿಯು ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾದುದೆಂದು ನಾನು ನಂಬಿದ್ದೇನೆ. ಅಪರಿಮಿತವಾದ ಪ್ರೀತಿಯಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ಥಕಕಾರ್ಯ ಮಾಡಿರುವ ಅಕ್ಷತಾ ಅವರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಇವರು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮಹತ್ವಪೂರ್ಣ ಹೊತ್ತಗೆಗಳನ್ನು ಪ್ರಕಟಿಸಿ ಕೀರ್ತಿಶಾಲಿಗಳಾಗಲೆಂದು ತುಂಬು ಮನಸ್ಸಿನಿಂದ ಹಾರೈಸುತ್ತೇನೆ.