ಈ ಹುಡುಗನಿಗೆ ಈ ತೊಟ್ಟಿಲಿನದೇ ಆಕರ್ಷಣೆ. ಜಾತ್ರೆಯನ್ನು ನೋಡಲು ಅಲ್ಲಿ ವ್ಯಾಪಾರ ಮಾಡಲು ಬಂದ ಮಗ ಜಾತ್ರೆಯಲ್ಲಿಯ ಎಲ್ಲವನ್ನ ನೋಡಿ ಸಂತಸ ಪಡುತ್ತಾನೆ. ತಂದೆಯನ್ನ ಕೂಡ ತೊಟ್ಟಿಲಲ್ಲಿ ಕೂರಿಸಿ ಒಂದು ರೈಡ್ ಮಾಡಿಸುತ್ತಾನೆ. ಒಂದು ಹಂತದಲ್ಲಿ ತನ್ನ ಜೇಬಿನಲ್ಲಿ ಇರಿಸಿ ಕೊಂಡ ರೆಕ್ಕೆಯನ್ನ ಹಾರಿಸಿ ಬಿಡುತ್ತಾನೆ. ಆ ರೆಕ್ಕೆ ತಾನು ಕುಳಿತ ತೊಟ್ಟಿಲಿನಷ್ಟು ಎತ್ತರಕ್ಕೆ ಹಾರಿದಾಗ ಮಗ ‘ಅಪ್ಪ ಅಷ್ಟು ಎತ್ರ ಹೋಗೋದು ಹೇಗೆ ?ʼ ಎಂದು ಕೇಳುತ್ತಾನೆ.
ಅಕ್ಷಯ ಪಂಡಿತ್ ಬರೆದ ‘ಬಯಲಲಿ ತೇಲುತ ತಾನುʼ ಕಥಾಸಂಕಲನಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು
ಕತೆ ಬರೆಯುವುದು ಅನ್ನುತ್ತೇವೆ, ಕತೆ ಹೇಳುವುದು ಅನ್ನುತ್ತೇವೆ, ಕತೆ ಕೇಳುವುದು ಅನ್ನುವ ಪ್ರಯೋಗ ಕೂಡ ಇದೆ. ಆದರೆ ನನಗೆ ಕೇಳಿದರೆ ಕತೆ ಬರೆಯುವುದು. ಕತೆ ಹೇಳುವುದು, ಕತೆ ಕೇಳುವುದು ಎಂಬ ಪ್ರಯೋಗವೇ ತಪ್ಪು. ಕತೆ ಯಾವತ್ತೂ ಸಂಭವಿಸುತ್ತದೆ. ಕತೆ ನಡೆಯುತ್ತದೆ. ಕತೆ ನಮ್ಮ ಸುತ್ತಲಿನ ಎಲ್ಲ ಘಟನೆಗಳ ಮೂಲಕ ಜನ್ಮತಾಳುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕತೆ ರೂಪುಗೊಳ್ಳುತ್ತದೆ. ಕತೆಯ ವಿಶೇಷತೆ ಅಂದರೆ ಅದರೊಳಗಿನಿಂದ ಕತೆಯನ್ನ ಬೇರ್ಪಡಿಸಲಾಗವುದಿಲ್ಲ. ಅದು ಕತೆಯೇ ಆಗಿರುತ್ತದೆ. ಕತೆ ಅಂದರೇನೆ ನಿರೂಪಿಸು, ಹೇಳು, ವರ್ಣಿಸು, ವಿವರಿಸು, ನೆರೇಟ್, ಟೆಲ್. ಎಂಬ ಅರ್ಥಗಳಿವೆ. ಕಥನ ಅಂದರು ಕೂಡ ಇದೇ ಅರ್ಥ. ಇದಕ್ಕೆ ಬೇರೆ ಬೇರೆ ಅರ್ಥ ವ್ಯಾಪ್ತಿಯನ್ನ ಕೊಡುವ ಕೆಲಸ ಕತೆಗಾರನದ್ದು. ಹೀಗೆಂದೇ ನೂರಾರು ವೈವಿಧ್ಯಮಯ ಕತೆಗಳ ಬಗ್ಗೆ ನಾವು ಮಾತನಾಡುತ್ತೇವೆ. ಪಂಚತಂತ್ರ ಕತೆ, ಚಾತಕ ಕತೆ, ತೆನಾಲಿ ರಾಮನ ಕತೆ, ಬೊಕ್ಯಾಶಿಯೋ ಕತೆಗಳು, ಅರೇಬಿಯನ್ ನೈಟ್ಸ್ ಕತೆಗಳು, ಇನ್ನೂ ಹಲವು. ಈ ಎಲ್ಲ ಕತೆಗಳೂ ಮನುಷ್ಯನ ಅನುಭವದಿಂದ, ಕಲ್ಪನೆಯಿಂದ, ಬದುಕು ಹೀಗಿದೆ ಅನ್ನುವ ಊಹೆಯಿಂದ ಹುಟ್ಟಿದವುಗಳು. ಒಳ್ಳೇ ಕತೆಯೊಂದು ಒಳ್ಳೆಯದಾಗುವುದು ಅದು ಬದುಕಿಗೆ ಎಷ್ಟು ಹತ್ತಿರವಾಗಿದೆ ಅನ್ನುವುದರ ಮೇಲೆ.
ನನ್ನ ಕಿರಿಯ ಸ್ನೇಹಿತರಾದ ಶ್ರೀ ಅಕ್ಷಯ ಪಂಡಿತ್ “ಬಯಲಲಿ ತೇಲುತ ತಾನು” ಎಂಬ ಕಥಾಸಂಕಲನ ಒಂದನ್ನ ಇದೀಗ ಹೊರ ತಂದಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ತಾವು ಬರೆದ ಈ ಕತೆಗಳು ಅಲ್ಲಲ್ಲಿ ಸ್ಪರ್ಧೆಗಳಲ್ಲಿ ಮೆಚ್ಚುಗೆ, ಬಹುಮಾನ ಪಡೆದಿವೆ ಎಂಬ ವಿಷಯವನ್ನ ಲೇಖಕರು ಹೇಳಿದ್ದಾರೆ. ಕತೆಗಳು ಕೂಡ ಈ ಮಾತಿಗೆ ಪೂರಕವಾಗಿ ನಿಂತಿವೆ. ಅಲ್ಲದೆ ಒಳ್ಳೆಯ ಕತೆಯೊಂದು ಹೇಗಿರಬೇಕು ಎಂಬ ಮಾತಿಗೆ ಈ ಕತೆಗಳು ಮಾದರಿಯಾಗಿವೆ.
ಮೊದಲ ಕತೆ ‘ಬಯಲಲಿ ತೇಲುತ ತಾನು’ ತಂದೆ ಮಗ ಸಾಗರದ ಜಾತ್ರೆಗೆ ಬಂದ ಕತೆ. ಇವರ ಉದ್ದೇಶ ಮಕ್ಕಳು ಕೊಳ್ಳಬಹುದಾದ ಸಣ್ಣ ಪುಟ್ಟ ಆಟಿಗೆಗಳನ್ನ ಮಾರುವುದು. ಅಪ್ಪನ ಜೊತೆಯಲ್ಲಿ ಮಗ ಹಾರುವ ರೆಕ್ಕೆಗಳ ಒಂದು ಆಟಿಕೆಯನ್ನೂ ಮಾರುತ್ತಾನೆ. ಜಾತ್ರೆಯಲ್ಲಿ ಎತ್ತರ ಎತ್ತರಕ್ಕೆ ಹೋಗುವ ಒಂದು ತೊಟ್ಟಿಲೂ ಇದೆ. ಈ ಹುಡುಗನಿಗೆ ಈ ತೊಟ್ಟಿಲಿನದೇ ಆಕರ್ಷಣೆ. ಜಾತ್ರೆಯನ್ನು ನೋಡಲು ಅಲ್ಲಿ ವ್ಯಾಪಾರ ಮಾಡಲು ಬಂದ ಮಗ ಜಾತ್ರೆಯಲ್ಲಿಯ ಎಲ್ಲವನ್ನ ನೋಡಿ ಸಂತಸ ಪಡುತ್ತಾನೆ. ತಂದೆಯನ್ನ ಕೂಡ ತೊಟ್ಟಿಲಲ್ಲಿ ಕೂರಿಸಿ ಒಂದು ರೈಡ್ ಮಾಡಿಸುತ್ತಾನೆ. ಒಂದು ಹಂತದಲ್ಲಿ ತನ್ನ ಜೇಬಿನಲ್ಲಿ ಇರಿಸಿ ಕೊಂಡ ರೆಕ್ಕೆಯನ್ನ ಹಾರಿಸಿ ಬಿಡುತ್ತಾನೆ. ಆ ರೆಕ್ಕೆ ತಾನು ಕುಳಿತ ತೊಟ್ಟಿಲಿನಷ್ಟು ಎತ್ತರಕ್ಕೆ ಹಾರಿದಾಗ ಮಗ ‘ಅಪ್ಪ ಅಷ್ಟು ಎತ್ರ ಹೋಗೋದು ಹೇಗೆ ?ʼ ಎಂದು ಕೇಳುತ್ತಾನೆ. ಆಟಿಗೆ ಮಾರಲು ಬಂದವ ಇನ್ನೇನೋ ಆಗಿ ಯೋಚಿಸುತ್ತಾನೆ. ಹಾರು ರೆಕ್ಕೆಗಳನ್ನ ಹಾರಿಸುವ ಹುಡುಗ ಕತೆ ಮುಗಿಯುತ್ತಿರುವಾಗ ಮತ್ತೇನೋ ಆಗಿ ಪರಿವರ್ತಿತನಾಗಿರುತ್ತಾನೆ. ಇಲ್ಲಿಯ ಉಳಿದ ಕತೆಗಳು ಕೂಡ ಏನೋ ಹೇಳಲು ಹೊರಟು ಮತ್ತೇನನ್ನೋ ಹೇಳುತ್ತವೆ. ಹಾಗಂತ ಇದೊಂದು ಅಪವಾದ ಎಂದು ನಾನು ಹೇಳುತ್ತಿಲ್ಲ. ಈ ಕತೆಗಳ ವಿಶೇಷವೇ ಇದು.
ತನ್ನ ಅಕ್ಕನ ಚಿತ್ರ ಬರೆಯಲಾರದ ಓರ್ವ ಕಲಾವಿದ ಕೊನೆಗೆ ಬೆಂಗಳೂರು ಸೇರಿ ಬೀದಿ ಪಕ್ಕದ ಚಿತ್ರಗಾರನಾಗುತ್ತಾನೆ. ಅಂತೆಯೇ ಅಲ್ಲಿ ಎದುರಾದ ಓರ್ವಳ ಚಿತ್ರ ಬರೆಯುತ್ತಾನೆ (ರೇಖೆಗಳು). ನಂತರ ತಾನು ಈ ಹಿಂದೆ ಬರೆದು ಗೋಡೆಯ ಮೇಲೆ ಹಚ್ಚಿದ ಚಿತ್ರಗಳನ್ನ ತೆಗೆದು ಆವಳ ಚಿತ್ರಗಳನ್ನೇ ಅಲ್ಲಿ ಹಚ್ಚಿ ನೋಡಿ ಸಂತಸ ಪಡುತ್ತಾನೆ. ತನ್ನನ್ನ ಏಂಜಲ್ ಎಂದು ಕರೆಸಿಕೊಳ್ಳುವ ಆಕೆ ಚಿತ್ರಗಾರನ ಪಾಲಿಗೆ ಏಂಜಲ್ ಆಗಿಯೇ ಮಾರ್ಪಡುತ್ತಾಳೆ.
ಹೀಗೆಯೇ ‘ಎಲ್ಲೂ ಸಲ್ಲದವರು’, ‘ಭಾರತ ಸಿಟಿ’, ‘ಫ್ರೀವೇ’ ಮೊದಲಾದ ಕತೆಗಳು ಕೂಡ ಗೊಂದಲದಲ್ಲಿ ಸಿಲುಕಿರುವ ಅತ್ಯಾಧುನಿಕ ನಾಗರೀಕರ ಕತೆಗಳನ್ನು ಹೇಳುತ್ತವೆ. ಬೆಂಗಳೂರಿನಲ್ಲಿ ಹುಟ್ಟಿದ ಓರ್ವ ‘ಕಮ್ಮರಡಿ’ ಎಂಬ ಸಣ್ಣ ಹಳ್ಳಿಯೊಂದನ್ನ ಪ್ರೀತಿಸುವುದು (ಎಲ್ಲೂ ಸಲ್ಲದವರು), ಕಬ್ಬಿನ ಗದ್ದೆ, ಮನೆ ಇವೆಲ್ಲವನ್ನ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಕಳೆದುಕೊಂಡ ಓರ್ವ ಮುದುಕ ಹಿಂದಿನ ಆ ದಿನಗಳನ್ನ ಹುಡುಕಿಕೊಂಡು ರೈಲಿನಲ್ಲಿ ಅಲೆದಾಡುವುದು (ಭಾರತ್ ಸಿಟಿ), ಇವತ್ತಿನ ಎಲ್ಲ ಆಧುನಿಕ ಸೌಲಭ್ಯಗಳ ನಡುವೆ ಬದುಕುತ್ತ, ದಿಕ್ಕು ತಪ್ಪುತ್ತಿರುವ ಇಂದಿನ ಯುವ ಜನತೆ, ಎಲ್ಲಿ ಹೋಗುತ್ತಿದ್ದೇವೆ ಎಂಬುದನ್ನ ಅರಿಯದೆ ಎಕ್ಸಿಟ್ ಬಾಗಿಲು ಸಿಕ್ಕರೆ ಅತ್ತ ಧಾವಿಸುವ ಮನೋಭಾವ ಬೆಳೆಸಿಕೊಂಡಿರುವ ದುರಂತ ಕತೆ (ಫ್ರೀ ವೇ) ಇವೆಲ್ಲ ಓದಿ ಮರೆಯಬಹುದಾದ ಕತೆಗಳಲ್ಲ, ಓದಿ ಮನನ ಮಾಡಬೇಕಾದ ಕತೆಗಳು.
ಇವಲ್ಲದೆ ಇಲ್ಲಿ ಮತ್ತೂ ಕೆಲ ಕತೆಗಳಿವೆ. ಇಂದಿನ ಬದುಕಿನ ವಿಪರ್ಯಾಸಗಳನ್ನ ತಿಳಿಸಿ ಹೇಳುವ ಕತೆಗಳು. ಇಂದಿನ ಇಬ್ಬಂದಿತನದ ಬದುಕನ್ನ ವಿಡಂಬಿಸುವ ಕತೆಗಳು. ಜೊತೆಗೆ ಮನೆ ಗೆದ್ದು ಮಾರು ಗೆಲ್ಲು ಅನ್ನುವ ಹಾಗೆ ಲೇಖಕರು ಇಲ್ಲಿಯ ಬದುಕನ್ನ ಸಮರ್ಥವಾಗಿ ಚಿತ್ರಿಸಿದ ಹಾಗೆ ಅಮೇರಿಕೆಯ ಬದುಕನ್ನು ಕೂಡ ಪರಿಚಯ ಮಾಡಿಕೊಡುತ್ತಾರೆ.
ಸಂಕಲನದ ಎಲ್ಲ ಕತೆಗಳನ್ನ ಹೀಗೆ ಜರಡಿ ಹಿಡಿದು ನೋಡುವುದರಲ್ಲಿ ನನಗೆ ಆಸಕ್ತಿ ಇಲ್ಲ. ಕೊಂಡು ಓದುವ ಓದುಗರೂ ಒಂದಿಷ್ಟು ವಿಚಾರ ಮಾಡಲಿ, ಹೊಸ ಅನುಭವವನ್ನ ಪಡೆಯಲಿ ಎಂಬುದು ನನ್ನಾಸೆ. ಹೀಗೆಂದೇ ಮುನ್ನುಡಿಯ ಈ ಉಪದ್ವಾಪವನ್ನ ಇಲ್ಲಿಗೆ ನಿಲ್ಲಿಸಿ ನೇರವಾಗಿ ಪುಸ್ತಕವನ್ನ ನಿಮ್ಮ ಕೈಗೆ ಕೊಡುತ್ತಿದ್ದೇನೆ, ಆದರೂ ಇಲ್ಲಿಯ ಕತೆಗಳಲ್ಲಿ ಸತ್ವ ಇದೆ, ಆರೋಗ್ಯಕರವಾದ ಮನಸ್ಸಿದೆ. ಕಣ್ಣು ಮುಚ್ಚಿ ಎಲ್ಲವನ್ನ ಅನುಸರಿಸಬಾರದು ಎಂಬ ಎಚ್ಚರಿಕೆ ಇದೆ, ಹಿಂದಿನದರ ಬಗ್ಗೆ ಗೌರವ ಇದೆ. ಇಂದಿನ ಬದುಕಿನ ಬಗ್ಗೆ ಸಂಶಯವಿದೆ. ವ್ಯಂಗ್ಯವಿದೆ.
(ಕೃತಿ: ಬಯಲಲಿ ತೇಲುತ ತಾನು (ಕಥಾಸಂಕಲನ), ಲೇಖಕರು: ಅಕ್ಷಯ ಪಂಡಿತ್, ಪ್ರಕಾಶಕರು: ಸಂಕಥನ, ಬೆಲೆ: ೧೦೦/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಅಕ್ಷಯ್ ಪಂಡಿತ್ ರ ಈ ಕಥಾಸಂಕಲನಕ್ಕೆ ಖ್ಯಾತ ಸಾಹಿತಿ ಡಾ. ನಾ.ಡಿಸೋಜ ಅವರು ಬರೆದಿರುವ ಮುನ್ನುಡಿಯಲ್ಲಿ ” ಕತೆ ” ಯ ಜನ್ಮರಹಸ್ಯವನ್ನೇ ಬಿಚ್ಚಿಡುತ್ತಾ, ಅದು ರೂಪುಗೊಳ್ಳುವ ಬಗೆ ಮತ್ತು ಹೊಮ್ಮಿಸುವ ‘ ಅರ್ಥ ‘ದ ವ್ಯಾಪ್ತಿಯನ್ನು ವಿಸ್ತಾರಗೊಳಿಸುವ ಕತೆಗಾರನ ಕೌಶಲ್ಯವನ್ನೂ ಪ್ರಸ್ತಾಪಿಸಿದ್ದಾರೆ. ಈ ಸಂಕಲನದ ಕೆಲವು ಕತೆಗಳ ಸೂಕ್ಷ್ಮ ಎಳೆಗಳನ್ನೂ ಅಲ್ಲಲ್ಲಿ ತೆರೆದಿಟ್ಟು ಯುವ ಕತೆಗಾರನ ಪ್ರೌಡಿಮೆಗೂ ಕನ್ನಡಿ ಹಿಡಿಯುತ್ತಾ ಓದುಗರ ಕುತೂಹಲವನ್ನು ಸೆಳೆದಿದ್ದಾರೆ. ಅವರಿಗೂ , ಕತೆಗಾರ ಅಕ್ಷಯ್ ಪಂಡಿತ್ ಗೂ ಅಭಿನಂದನೆಗಳು. ಪ್ರಕಟಿಸಿರುವ ” ಕೆಂಡಸಂಪಿಗೆ ” ಬಳಗಕ್ಕೂ ಅಭಿವಂದನೆಗಳು..
~ ಕೆ.ಎಸ್.ರಾಜಾರಾಮ್, ಫೋಟೋಕತೆಗಾರ.