ನವೋದಯಕಾಲದ ಲೇಖಕರು ಎದುರಿಸುವ ಎಲ್ಲಬಗೆಯ ವಿಪ್ಲವ ಮತ್ತು ಆತಂಕಗಳನ್ನು ಒಂದು ಕುಟುಂಬದ ಕಥೆಯಮೂಲಕ ಹೇಳುವ ಶ್ರೀನಿವಾಸ ವೈದ್ಯರ ಕ್ರಿಯಾಶೀಲತೆಯನ್ನು ಇಲ್ಲಿ ಕಾಣಬಹುದಾಗಿದೆ. ಅನೇಕ ಸಲ ಅನಂತಮೂರ್ತಿಯವರ ಮೌನಿಯಲ್ಲಿ ಈ ಕಾದಂಬರಿಯ ನೆರಳು ಬಿದ್ದಿರಬಹುದೇ ಅನಿವುವಷ್ಟು ಪ್ರಭಾವಶಾಲಿಯಾಗಿದೆ. ಬೇರು ಕಳೆದುಕೊಂಡ ವ್ಯಕ್ತಿ ಹೊಸ ಬೇರಿನೊಂದಿಗೆ ಕಂಡುಕೊಳ್ಳುವ ಆರ್ಥಿಕ ಭದ್ರತೆ ಮತು ಸಾಮಾಜಿಕ ಸ್ಥಾನಮಾನವನ್ನೂ ಪಡೆದುಕೊಳ್ಳುವ ಕ್ರಿಯೆ ಬ್ರಿಟಿಷರಿಂದ ಭಾರತಕ್ಕೆ ಸಿಗುವ ಸ್ವಾಂತಂತ್ರ್ಯದ ಜೊತೆಗೆ ಹಾಸುಹೊಕ್ಕಾಗಿದೆ. ಕೌಟುಂಬಿಕ ಕಥೆ ರಾಷ್ಟ್ರೀಯ ಇತಿಹಾಸವಾಗಿ ಬದಲಾವಣೆ ಕಾಣುವುದು ಇಲ್ಲಿನ ವಿಶೇಷ.
ಇಂದು ತೀರಿಹೋದ ಶ್ರೀನಿವಾಸ ವೈದ್ಯರ ಕೃತಿಗಳ ಕುರಿತು ನಾರಾಯಣ ಯಾಜಿ ಬರಹ

ಕೆಲವರು ಕಥೆಗಳನ್ನು ಬರೆದು ಆಮೇಲೆ ಮೌನವಾಗಿಬಿಡುತ್ತಾರೆ. ಆದರೆ ಅವರು ರಚಿಸಿದ ಸಾಹಿತ್ಯಗಳು ಮತ್ತು ಅದರಲ್ಲಿನ ಪಾತ್ರಗಳು ಆಮೇಲೆ ನಿರಂತರವಾಗಿ ಮಾತಾಡುತ್ತಲೇ ಇರುತ್ತವೆ. ಆ ಪಾತ್ರಗಳು ಎಂದಿಗೂ ಮಾಸದ ಜನಸಾಮಾನ್ಯರ ಪ್ರತಿನಿಧಿಯಾಗಿ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತವೆ. ಅಂತಹ ಅಪರೂಪದ ಕೃತಿಗಳನ್ನು ಕೊಟ್ಟ ಕನ್ನಡದ ಖ್ಯಾತ ಸಾಹಿತಿ ಮತ್ತು ಕತೆಗಾರ ಶ್ರೀನಿವಾಸ ವೈದ್ಯರು ಇಲ್ಲವೆಂದಾಗ ಇಷ್ಟುದಿನ ನಮ್ಮನಡುವೆ ಮೌನವಾಗಿ ಇದ್ದ ಈ ಹಿರಿಯ ಜೀವವನ್ನು ಭೇಟಿಮಾಡಿದ ಕೆಲ ಕ್ಷಣದ ನೆನಪು ಬಂತು.

ಧಾರವಾಡದ ರೇಲ್ವೆ ನಿಲ್ದಾಣದ ಮೊದಲನೆಯ ನಂಬರ್ ಪ್ಲಾಟ್-ಫಾರ್ಮ್‌ನಲ್ಲಿ ರೈಲಿಗಾಗಿ ಕಾಯುವಾಗಲೆಲ್ಲ ನಾನು ಹುಡುಕುವುದು ಶ್ರೀನಿವಾಸ ವೈದ್ಯರ ಶ್ರದ್ಧಾ ಪ್ರಬಂಧ/ಕಥೆಯಲ್ಲಿ (ಮನಸುಖರಾಯನ ಮನಸು) ಬರುವ ತಂದೆಯ ಪಾತ್ರವನ್ನು. ಇಲ್ಲಿ ಎಲ್ಲೋ ಶ್ರೀನಿವಾಸ ವೈದ್ಯರು ನಿಂತು ರೈಲಿಗಾಗಿ ಕಾಯುತ್ತಿದ್ದಿರಬೇಕು. ಸಂಸಾರದ ನೋವುಗಳಿಗೆ ನೊಗಕೊಟ್ಟು ನುಗ್ಗಾದ ಮಧ್ಯವಯಸ್ಕ ತಂದೆಯೋರ್ವರು ತನ್ನ ಮಕ್ಕಳಿಗೆ ಈ ಸ್ಥಿತಿ ಬರಬಾರದೆನ್ನುವ ಕಾಳಜಿಯಿಂದ ಆ ಮಗುವಿನ ಏಳ್ಗೆಗಾಗಿ ಸದಾ ಚಿಂತಿಸುವ, ಎಲ್ಲಿ ತನ್ನ ನಿರೀಕ್ಷೆ ಬುಡಮೇಲಾಗುವುದೋ ಎನ್ನುವ ಕಾಳಜಿಯಿಂದ ಬಾಹ್ಯದಲ್ಲಿ ಸದಾ ಬಯ್ಯುತ್ತಿರುವ ಆದರೆ ಅಂತರಂಗದಲ್ಲಿ ಅಷ್ಟೇ ನೋಯುವ, ಮಕ್ಕಳಿಗೆ ಮನಮಿಡಿಯುವ ಪಾತ್ರ ಎದುರಿಗೆ ಬರುತ್ತದೆ. ಧಾರವಾಡದ ಸ್ಟೇಷನ್ನಿನ ಎದುರಿಗಿರುವ ದೊಡ್ದ ಕಂಬವನ್ನು ನೋಡಿ ಇಲ್ಲಿಯೇ ಕಥಾನಾಯಕನ ತಂದೆಯವರು (ಮುಂಡನಮಿಶ್ರರು!) ಮಗ ಮುಂಬೈಗೆ ಹೋಗುವಾಗ ಬೀಳ್ಕೊಡಲು ಬಂದಿರಬಹುದಾ ಅಂದುಕೊಳ್ಳುತ್ತೇನೆ. ಇದು ಅವರದೇ ಕಥೆ ಇರಬೇಕೆನ್ನುವ ಗುಮಾನಿ ಯಾವಾಗಲೂ ಇದೆ. ಅವರನ್ನು ಭೇಟಿಯಾದಾಗ ಕೇಳಿಯೇಬಿಡಬೇಕು ಎನ್ನುವ ಆಸೆ ಮನಸ್ಸಿನಲ್ಲಿ ಇತ್ತು. ಒಮ್ಮೆ ಅವರನ್ನು ನನ್ನ ಬ್ಯಾಂಕಿನ ಸಹೋದ್ಯೋಗಿ ಮಿತ್ರ ಮತ್ತು ವಿಮರ್ಶಕ ಶ್ರೀನಿವಾಸ ವಾಡಪ್ಪಿಯವರು ಧಾರವಾಡದ ಸಾಂಸ್ಕೃತಿಕ ಸಂಭ್ರಮದಲ್ಲಿ ಪರಿಚಯಿಸಿದ್ದರು. ನನಗೋ ಅವರನ್ನು ಭೇಟಿಯಾಗಿ ಅವರ ಮನಸುಖರಾಯನ ಮನಸುಗಳ ಕುರಿತು ಮತ್ತು ಹಳ್ಳ ಬಂತು ಹಳ್ಳ ಕೃತಿಯ ಕುರಿತು ಕೇಳಬೇಕೆನ್ನುವ ಮನಸ್ಸಿತ್ತು. ಆದರೆ ಅಂದು ಅವರ ಆರೋಗ್ಯ ಸರಿ ಇರಲಿಲ್ಲ. “ತಮ್ಮ ತಂದೆ ಬಿ. ಆರ್. ವಾಡಪ್ಪಿಯವರ ಶಿಷ್ಯ ಅವರು, ತಮ್ಮ ಮನೆಯಲ್ಲಿಯೇ ಅವರನ್ನು ನಿಮಗೆ ಭೆಟ್ಟಿಮಾಡಿಸುವ” ಎಂದಿದ್ದರು ನಮ್ಮ ವಾಡಪ್ಪಿಯವರು. ಆ ದಿನ ಬರಲೇ ಇಲ್ಲ. ಆ ದಿನ ಅವರೇ ಹೇಳಿದ್ದು “ಅದು ಅವ್ರ ಕಥೆಯಲ್ಲರಿ, ಅವರ ತಂದೆ ಧಾರವಾಡದ ಪ್ರಸಿದ್ಧ ವಕೀಲರಾಗಿದ್ದರು. ಸಾಕಷ್ಟು ಸ್ಥಿತಿವಂತ ಕುಟುಂಬ ಅವರದ್ದು” ಎಂದಿದ್ದರು. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರೀಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣಗೊಳಿಸಿ ನಂತರ ಮುಂಬಾಯಿಗೆ ಹೋಗಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು.

ಅದೇನೇ ಇರಲಿ, ಇವತ್ತಿಗೂ ನನ್ನ ಮನಸ್ಸನ್ನು ಕಾಡುತ್ತಿರುವ ಪ್ರಬಂಧ “ಶ್ರದ್ಧಾ”. ಪರಕಾಯ ಪ್ರವೇಶವನ್ನು ಅಷ್ಟೊಂದು ಸೊಗಸಾಗಿ ಮಾಡಲು ಸಾಧ್ಯವೇ ಎಂದು ಎನಿಸುತ್ತದೆ. ಇಂದೂ ಸಹ ನನಗೆ ಅವರ ಕತೆಯಲ್ಲ ಎನ್ನುವುದನ್ನು ನಂಬಲು ಆಗುತ್ತಲೇ ಇಲ್ಲ. ಕನ್ನಡದ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬಹುದಾದ ಹತ್ತು ಕಥೆಗಳಲ್ಲಿ ಈ ಕಥೆಯೂ ಒಂದು. ಈ ಕೃತಿಗೆ 2003ರಲ್ಲಿ ಪರಮಾನಂದ ಪ್ರಶಸ್ತಿ ಬಂದಿದೆ.

ಅವರೊಳಗಿನ ಸಾಹಿತ್ಯದ ಪರಿಪೂರ್ಣತೆಗೆ ಸಾಕ್ಷಿ ಅವರ ಕಾದಂಬರಿ “ಹಳ್ಳ ಬಂತು ಹಳ್ಳ”. ಈ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎರಡೂ ದೊರೆತಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವಾಗಿಯೂ ದಾಖಲಾಗಬಹುದಾದ ಒಂದು ಕಾದಂಬರಿ ಇದು. ಬ್ರಿಟಿಷರ ವಿರುದ್ಧದ ಹೋರಾಟದ ವಿವಿಧ ಮಜಲುಗಳು ಇಲ್ಲಿ ಚಿತ್ರಿತವಾಗಿವೆ. ನಾನಾಸಾಹೇಬನ ಸಂದೇಶವನ್ನು ನರಗುಂದದ ದೇಸಾಯಿಯವರಿಗೆ ತಲುಪಿಸುವ ಸಲುವಾಗಿ ಬಂದ ತರುಣರಿಬ್ಬರು ಪರಿಸ್ಥಿಯ ಕಾರಣದಿಂದ ಇಲ್ಲೇ ಉಳಿಯಬೇಕಾಗಿ ಬಂದ ಕಥೆಯಾದರೂ ಇದು ಒಂದು ಶತಮಾದುದ್ದದ ಸಾಂಸ್ಕೃತಿಕ ಪಲ್ಲಟವನ್ನು ಹೇಳುವ ಕಾದಂಬರಿಯಾಗಿದೆ. ಕಮಲಪಂತ ಕಮಲಯ್ಯನಾಗಿ ಇಲ್ಲಿಯೇ ಉಳಿದು ನಂತರ ಕಮಲಾಚಾರ್ಯನಾಗಿ ಬದಲಾವಣೆಯಾಗುವುದು ಕೇವಲ ಹೆಸರಷ್ಟೇ ಅಲ್ಲ. ಪರಿಸ್ಥಿತಿಯ ಕಾರಣದಿಂದ ಭಾರತದ ಜನಜೀವನದ ಪರಿವರ್ತನೆಯೂ ಹೌದು. ಅವರ ಮಗನಾದ ವಾಸುದೇವಾಚಾರ್ಯನ ಮೂಲಕ ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಿಂದ ಇಪ್ಪತ್ತನೆಯ ಶತಮಾದ ಐವತ್ತರ ದಶಕದವರೆಗಿನ ಹರವುಗಳನ್ನು ಪಡೆದುಕೊಂಡಿದೆ. ಹಳ್ಳ ನದಿಯಲ್ಲ; ಮಳೆಗಾಲದ ನೀರಿನ ಒತ್ತಡದಲ್ಲಿ ತುಂಬಿ ಹರಿಯುತ್ತಾ ಬೇಸಿಗೆಯಲ್ಲಿ ಬರಿದಾಗುತ್ತಾ ಅಗೆದರೆ ಎಲ್ಲೋ ನೀರಿನ ಪಸೆ ಸಿಗುವಂತೆ ಇಲ್ಲಿ ಬದುಕಿನ ಬಂಡಿ ಸಾಗುತ್ತಿದೆ. ಮಳೆಗಾಲದಲ್ಲಿ ನೀರಿನ ಬಲ ಬಂದರೆ ಪ್ರವಾಹದಿಂದ ಹಳ್ಳ ಮಾಡುವ ಅನಾಹುತಗಳು ಅಷ್ಟಿಷ್ಟಲ್ಲ. ಹಳ್ಳ ಯಾವತ್ತಿದ್ದರೂ ಹಳ್ಳವೇ, ಅದಕ್ಕೆ ಒಂದು ಸ್ಥಿರವಾದ ಹೆಸರಿರುವುದಿಲ್ಲ. ಹರಿದು ಹೋಗುವ ಊರಿನಲ್ಲಿಯೇ ಯಾವ ಯಾವುದೋ ಹೆಸರಿನಿಂದ ಕರೆಸಿಕೊಳ್ಳುತ್ತಾ ನದಿಯನ್ನು ಸೇರುತ್ತದೆ. ತನ್ನ ಸ್ವರೂಪವನ್ನೂ ಹೆಸರನ್ನೂ ಕಳೆದುಕೊಳ್ಳುತ್ತಾ ಹೊಸ ಹೆಸರನ್ನು ಪಡೆದುಕೊಳ್ಳುತ್ತಾ ಹರಿಯುವ ಕ್ರಿಯೆ ಹಳ್ಳದ್ದು.

ಸಾಂಕೇತಿಕವಾಗಿ ಈ ಚಿತ್ರಣವನ್ನು ಕಾದಂಬರಿಯುದ್ದಕ್ಕೂ ಕಟ್ಟಿಕೊಳ್ಳುತ್ತಾ ಸಾಗಿದ್ದಾರೆ. ಉತ್ತರ ಭಾರತದ ವ್ಯಕ್ತಿ ಸ್ಥಳೀಯನಾಗಿ ಪರಿವರ್ತನೆಯಾಗುವಾಗ ತನ್ನ ಮೂಲವನ್ನೂ ಮರೆಯುವ ಸಂಗತಿ ಎಲ್ಲಿಯೂ ನಾಟಕೀಯವಾಗಿಲ್ಲ. ಸಾಮಾಜಿಕವಾಗಿ ಬ್ರಾಹ್ಮಣ ಕುಟುಂಬ ಹಲವು ಸವಾಲುಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಏನೂ ಇಲ್ಲ ಎಂದು ಬಿಟ್ಟರೆ ಬ್ರಾಹ್ಮಣ್ಯಕ್ಕೆ ಧಕ್ಕೆ ಬರುವ ಸಂಗತಿಗಳು ಅನೇಕ. ಬಡತನ ಬಂತೆಂದು ಎಲ್ಲಾ ಆಚಾರಗಳನ್ನೂ ಬಿಡಲಾಗುವುದಿಲ್ಲ. ಸಾಮಾಜಿಕವಾಗಿ ವಾಸುದೇವಾಚಾರ್ಯನ ಕುಟುಂಬದ ತುಳಸಾಬಾಯಿ, ನಾರಾಯಣ, ರುಕ್ಮಾ, ಅಂಬಕ್ಕ, ರಾಮು ಇವರೆಲ್ಲರನ್ನೂ ಕಾಡುವ ಸಂಗತಿಗಳು ಬಿಡಬೇಕೆಂದರೂ ಬಿಡಲಾರದ ಸಂಬಂಧಗಳು ಕಾದಂಬರಿಯ ಆಚೆಗೂ ಎದ್ದು ನಿಂತು ನಮ್ಮನ್ನು ಅನುಸರಿಸುತ್ತವೆ. ಕೌಟುಂಬಿಕ ತಲ್ಲಣಗಳೆಂದು ಬಿಡುವಹಾಗೇ ಇಲ್ಲ; ಇದರ ಸಂಗಡವೇ ಆ ಕಾಲದ ಸಾಂಸ್ಕೃತಿಕ ಏರುಪೇರುಗಳೂ ಜೊತೆಜೊತೆಯಾಗಿ ಸಾಗುತ್ತವೆ. ಕನ್ನಡದ ನೆಲೆಯಿಂದ ಸಾವಿರಾರು ಮೈಲು ದೂರದ ವ್ಯಕ್ತಿಯ ಮೂಲ ಕುಟುಂಬವೊಂದು ನರಗುಂದದಲ್ಲಿ ನೆಲೆಕಂಡುಕೊಳ್ಳುವ ಎರಡು ತಲೆಮಾರಿನಲ್ಲಿ ಹೊಸ ಸಂಸ್ಕೃತಿಗಳನ್ನು ಕಟ್ಟಿಕೊಳ್ಳುತ್ತಾ ಮೂಲದವನ್ನು ಕಳೆದುಕೊಳ್ಳುವ ಜೀವನ ಅಂದಿನ ಕಾಲದ ಸಾಮಾಜಿಕ ಬದಲಾವಣೆಯ ಸಂಕೇತವೂ ಹೌದಾಗಿದೆ.

ಕಮಲಪಂತ ಕಮಲಯ್ಯನಾಗಿ ಇಲ್ಲಿಯೇ ಉಳಿದು ನಂತರ ಕಮಲಾಚಾರ್ಯನಾಗಿ ಬದಲಾವಣೆಯಾಗುವುದು ಕೇವಲ ಹೆಸರಷ್ಟೇ ಅಲ್ಲ. ಪರಿಸ್ಥಿತಿಯ ಕಾರಣದಿಂದ ಭಾರತದ ಜನಜೀವನದ ಪರಿವರ್ತನೆಯೂ ಹೌದು. ಅವರ ಮಗನಾದ ವಾಸುದೇವಾಚಾರ್ಯನ ಮೂಲಕ ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಿಂದ ಇಪ್ಪತ್ತನೆಯ ಶತಮಾದ ಐವತ್ತರ ದಶಕದವರೆಗಿನ ಹರವುಗಳನ್ನು ಪಡೆದುಕೊಂಡಿದೆ.

ನವೋದಯಕಾಲದ ಲೇಖಕರು ಎದುರಿಸುವ ಎಲ್ಲಬಗೆಯ ವಿಪ್ಲವ ಮತ್ತು ಆತಂಕಗಳನ್ನು ಒಂದು ಕುಟುಂಬದ ಕಥೆಯಮೂಲಕ ಹೇಳುವ ಶ್ರೀನಿವಾಸ ವೈದ್ಯರ ಕ್ರಿಯಾಶೀಲತೆಯನ್ನು ಇಲ್ಲಿ ಕಾಣಬಹುದಾಗಿದೆ. ಅನೇಕ ಸಲ ಅನಂತಮೂರ್ತಿಯವರ ಮೌನಿಯಲ್ಲಿ ಈ ಕಾದಂಬರಿಯ ನೆರಳು ಬಿದ್ದಿರಬಹುದೇ ಅನಿವುವಷ್ಟು ಪ್ರಭಾವಶಾಲಿಯಾಗಿದೆ. ಬೇರು ಕಳೆದುಕೊಂಡ ವ್ಯಕ್ತಿ ಹೊಸ ಬೇರಿನೊಂದಿಗೆ ಕಂಡುಕೊಳ್ಳುವ ಆರ್ಥಿಕ ಭದ್ರತೆ ಮತು ಸಾಮಾಜಿಕ ಸ್ಥಾನಮಾನವನ್ನೂ ಪಡೆದುಕೊಳ್ಳುವ ಕ್ರಿಯೆ ಬ್ರಿಟಿಷರಿಂದ ಭಾರತಕ್ಕೆ ಸಿಗುವ ಸ್ವಾಂತಂತ್ರ್ಯದ ಜೊತೆಗೆ ಹಾಸುಹೊಕ್ಕಾಗಿದೆ. ಕೌಟುಂಬಿಕ ಕಥೆ ರಾಷ್ಟ್ರೀಯ ಇತಿಹಾಸವಾಗಿ ಬದಲಾವಣೆ ಕಾಣುವುದು ಇಲ್ಲಿನ ವಿಶೇಷ. ಇಡೀ ಭಾರತವನ್ನು ಆಗಿನ ಕಾಲದಲ್ಲಿ ಬಾಲಗಂಗಾಧರ ಟಿಳಕರು, ಮಹಾತ್ಮಾ ಗಾಂಧಿ, ನೆಹರೂ, ವಲ್ಲಭಭಾಯಿ ಪಟೇಲ, ಸುಭಾಶ್‌ಚಂದ್ರ ಬೋಸ್ ಇವರ ಹೋರಾಟವನ್ನು ಜನಸಾಮಾನ್ಯರಲ್ಲಿ ಬೀರಿದ ಪ್ರಭಾವದ ಜೊತೆಗೆ ಧಾರವಾಡ, ನರಗುಂದದಂತಹ ಹಳ್ಳಿಯ ಅಪ್ಪಗೋಳು, ಶಿವಬಸಯ್ಯ, ಕಮಲಾಚಾರ್ಯನ ಕುಟುಂಬದ ಎಲ್ಲರ ಸಂಕಟ ಸವಾಲುಗಳನ್ನು ನಮ್ಮೆದುರು ಇರಿಸುತ್ತದೆ. ಕಾದಂಬರಿಯುದ್ದಕ್ಕೂ ಇಂದು ಧಾರವಾಡದಲ್ಲಿಯೇ ಮರೆಯಾಗುತ್ತಿರುವ ಮರಾಠಿಮಿಶ್ರಿತ ಧಾರವಾಡದ ಕನ್ನಡದ ಸೊಗಡು, ಬೇಂದ್ರೆಯವರ ಕನ್ನಡವನ್ನು ನೆನಪಿಸುತ್ತಾ ಸಾಗುತ್ತದೆ. ಸ್ವಾತಂತ್ರ್ಯ ಹೋರಾಟ ದೇಶಕ್ಕೆ ಸೀಮಿತವಾದರೂ ಅದರಲ್ಲಿ ಮನೆ ಮನೆಯ ಕತೆಗಳ ಮೊತ್ತವೂ ಇದೆ ಎನ್ನುವುದನ್ನು ಅನಾವರಣಗೊಳಿಸುವ ಕಾದಂಬರಿ ಇದು. ಮನಸುಖರಾಯನ ಶ್ರದ್ಧಾ ಮತ್ತು ಹಳ್ಳ ಬಂತು ಹಳ್ಳ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಮಿನುಗುವ ನಕ್ಷತ್ರಗಳು. ಕಥಾ ಕಮ್ಮಟದಲ್ಲಿ ಯುವ ಕತೆಗಾರರಿಗೆ ಕತೆಯೊಂದನ್ನು ಹೇಗೆ ಹೆಣೆಯುತ್ತಾ ಸಾಗಬೇಕೆನ್ನುವುದನ್ನು ಹೇಳಿಕೊಡುವ ಕೃತಿಗಳು ಇವು.

ಶ್ರೀನಿವಾಸ ವಾಡಪ್ಪಿಯವರು ಹೇಳುವಂತೆ ಅವರ ತಂದೆಯವರಿಗೆ ಮಗ ವೈದ್ಯನೋ ಇಲ್ಲವೇ ತನ್ನಂತೆ ವಕೀಲನಾಗಲಿ ಎನ್ನುವ ಆಶೆ ಇತ್ತಂತೆ. ಆದರೆ ಅವರು ಸ್ವಿನಾಯಕ ಗೋಕಾಕರ ಪ್ರಭಾವಕ್ಕೆ ಒಳಗಾಗಿ ಸಾಹಿತ್ಯದೆಡೆಗೆ ಆಕರ್ಷಿತರಾದರು. ಮಾರ್ಕ್ವೇಝ್‍ನ ‘No one writes to the Colonel’ ಕಾದಂಬರಿಯನ್ನು ಕನ್ನಡಕ್ಕೆ ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ ಎನ್ನುವ ಹೆಸರಿನಿಂದ ಅನುವಾದ ಮಾಡಿದರು. ಮೂಲತಃ ನಗೆಬರಹ ಹಾಸ್ಯ, ಲಲಿತ ಪ್ರಬಂಧದ ಪ್ರಕಾರಗಳ ಸಾಹಿತ್ಯದ ಇವರು ನಂತರ ಗಂಭೀರ ಸಾಹಿತ್ಯದೆಡೆ ಪಯಣ ಮಾಡಿ ಅಲ್ಲಿಯೂ ಗಟ್ಟಿಕಾಳಾಗಿ ಉಳಿದರು.

ತಮ್ಮ ಎಂಭತ್ತೇಳನೆಯ ವಯಸ್ಸಿನಲ್ಲಿ ದಿನಾಂಕ್ ಎಪ್ರಿಲ್ 21, 2023ರಂದು ತೀರಿಕೊಂಡ ಶ್ರೀನಿವಾಸ ವೈದ್ಯರು ಕನ್ನಡದ ಸಾಹಿತ್ಯ ಜಗತ್ತಿನಲ್ಲಿ ಮರೆಯಲಾರದ ಹೆಸರಾಗಿ ಉಳಿಯುತ್ತಾರೆ.