“ದೇವದೂತನಿಗಿರಬೇಕಾದ ಗಾಂಭೀರ‍್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ.ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು. ಆದಾಗ್ಯೂ, ತನಗಿಂತ ಮೇಲಿನ ಧರ್ಮಾಧ್ಯಕ್ಷರಿಗೆ ಪತ್ರ ಬರೆದು, ಅವರು ಅವರ ಮೇಲ್ಪಟ್ಟವರಿಗೆ ಪತ್ರ ಬರೆದು, ಅವರು ಪೋಪರಿಗೆ ಪತ್ರ ಬರೆದು ಅವರು ತಮ್ಮ ಧರ್ಮ ಸಂಸತ್ತಿನ ಅಭಿಪ್ರಾಯ ಪಡೆದು ಒಂದು ತೀರ್ಮಾನ ತೆಗೆದುಕೊಳ್ಳುವವರೆಗೆ ಕಾಯಬೇಕೆಂದು ಜನರಿಗೆ ತಿಳಿಸಿದರು”
ಜೆ.ವಿ.ಕಾರ್ಲೊ ಅನುವಾದಿಸಿದ ಗೇಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್ ನ ಸಣ್ಣಕಥೆ.

 

ಮಳೆಯ ಮೂರನೆಯ ದಿನ ಮನೆಯೊಳಗೆ ಅವರು ಎಷ್ಟೊಂದು ಏಡಿಗಳನ್ನು ಕೊಂದು ಹಾಕಿದ್ದರೆಂದರೆ ಆ ಗಬ್ಬು ವಾಸನೆಯನ್ನು ಸಹಿಸಲು ಅಸಾಧ್ಯವೆನಿಸಿ ಪೆಲಾಯೊ ಅವುಗಳನ್ನು ತುಂಬಿ, ಮಳೆಯಲ್ಲೇ ನೆನೆದು ಅಂಗಳವನ್ನು ದಾಟಿ ಸಮುದ್ರಕ್ಕೆ ಎಸೆದು ಬಂದ. ಹೊಸದಾಗಿ ಹುಟ್ಟಿದ್ದ ಮಗು ಜ್ವರದಿಂದ ನರಳುತ್ತಿತ್ತು ಮತ್ತು ಅದಕ್ಕೆ ಈ ಗಬ್ಬು ವಾಸನೆಯೇ ಕಾರಣವೆಂದು ಅವರಿಗೆ ಮನದಟ್ಟಾಗಿತ್ತು. ಮಂಗಳವಾರದಿಂದ ಮಳೆ ಒಂದೇ ಸಮನೆ ಹುಯ್ಯುತ್ತಿತ್ತು. ಸಮುದ್ರ ಮತ್ತು ಆಕಾಶ ಒಂದಾಗಿ ಬೂದು ಬಣ್ಣದ ಗೋಡೆಯಂತಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಬೆಳಕಿನ ಹುಡಿಯಂತೆ ಚೆಲ್ಲಿರುತ್ತಿದ್ದ ದಂಡೆಯ ಮರಳು ಕೊಳೆತ ಕಪ್ಪೆ ಚಿಪ್ಪು ಮಿಶ್ರಣದ ಕೆಸರು ಪಾಯಸವಾಗಿತ್ತು. ನಡು ಮಧ್ಯಾಹ್ನದ ಹೊತ್ತಿನಲ್ಲೂ ಕತ್ತಲು ಕವುಚಿಕೊಂಡು ಏನೂ ಕಾಣಿಸುತ್ತಿರಲಿಲ್ಲ. ಕೊಳೆತ ಏಡಿಗಳನ್ನು ಎಸೆದು ವಾಪಸ್ಸಾಗುತ್ತಿದ್ದ ಪೆಲಾಯೋನಿಗೆ ಅಂಗಳದ ಒಂದು ಮೂಲೆಯಲ್ಲಿ ನರಳಾಡುತ್ತಾ ಸರಿದಾಡುತ್ತಿರುವುದು ಏನೆಂದು ಸರಿಯಾಗಿ ಕಾಣಿಸಲಿಲ್ಲ. ಅವನು ತೀರ ಹತ್ತಿರ ಹೋಗಿ ನೋಡಿದಾಗಲೇ ಅವನಿಗೆ ಗೊತ್ತಾಗಿದ್ದು: ಅದೊಂದು ಮುದುಕನ, ಹಣ್ಣು ಹಣ್ಣು ಮುದುಕನ ದೇಹವೆಂದು! ಮುದುಕ ಮಕಾಡೆ ಬಿದ್ದುಕೊಂಡಿದ್ದ. ಏನೇ ಪ್ರಯತ್ನ ಪಟ್ಟರೂ ಅವನಿಗೆ ಮೇಲೇಳಲು ಆಗುತ್ತಿರಲಿಲ್ಲ. ಅವನ ಅಗಾಧ ರೆಕ್ಕೆಗಳೇ ಅವನಿಗೆ ತೊಡಕಾಗಿದ್ದವು!

ಈ ದೃಶ್ಯವನ್ನು ಕಂಡು ಕಕ್ಕಾಬಿಕ್ಕಿಯಾದ ಪೆಲಾಯೊ, ಒಳಗೆ ಜ್ವರದಿಂದ ಸುಡುತ್ತಿದ್ದ ಮಗುವಿನ ಹಣೆಯ ಮೇಲೆ ತಣ್ಣೀರು ಬಟ್ಟೆಯನ್ನು ಕಟ್ಟುತ್ತಿದ್ದ ಹೆಂಡತಿ ಎಲಿಸೆಂಡಾಳ ಬಳಿ ಧಾವಿಸಿ ಅವಳನ್ನು ಹೊರಗೆ ಕರೆದುಕೊಂಡು ಬಂದು ತೋರಿಸಿದ. ಅವರಿಬ್ಬರೂ ಗರಬಡಿದಂತೆ ಕೆಸರಿನಲ್ಲಿ ಕೊಸರಾಡುತ್ತಿದ್ದ ಮುದುಕನನ್ನು ನೋಡತೊಡಗಿದರು. ಮುದುಕ ಚಿಂದಿ ಆಯುವವನಂತೆ ಬಟ್ಟೆ ಧರಿಸಿದ್ದ. ಕೆಲವು ನೆರೆತ ಕೂದಲುಗಳನ್ನು ಬಿಟ್ಟರೆ ತಲೆ ಬೋಳಾಗಿತ್ತು. ಬಾಯಲ್ಲಿ ಕೆಲವೇ ಹಲ್ಲುಗಳು ಉಳಿದಿದ್ದವು. ನೆಂದು ತೊಪ್ಪೆಯಾಗಿದ್ದ ಮುದುಕ ಆ ವಯಸ್ಸಿನ ಘನತೆಯನ್ನು ಕಳೆದುಕೊಂಡಿದ್ದ. ಬಹಳಷ್ಟು ಗರಿಗಳನ್ನು ಕಳೆದುಕೊಂಡ ಅವನ ದೊಡ್ಡ ಗಾತ್ರದ ರೆಕ್ಕೆಗಳು ಕೆಸರಿನಲ್ಲಿ ಹೂತು ಕೊಳಕಾಗಿದ್ದವು. ಬಹಳ ಹೊತ್ತಿನಿಂದ ತದೇಕವಾಗಿ ಅವನನ್ನೇ ಗಮನಿಸುತ್ತಿದ್ದ ಪೆಲಾಯೊ ಮತ್ತು ಎಲಿಸೆಂಡಾಳಿಗೆ ಮುದುಕ ಬಹಳ ಚಿರಪರಿಚಿತನಂತೆ ಭಾಸವಾಗತೊಡಗಿತು. ಅವರು ಅವನನ್ನು ಮಾತನಾಡಿಸಿದರು. ಅವನು ಗಟ್ಟಿಯಾದ ನಾವಿಕನ ಸ್ವರದಲ್ಲಿ ಅವರು ಅರಿಯದ ಯಾವುದೋ ಬಾಷೆಯಲ್ಲಿ ಏನೋ ವಟಗುಟ್ಟಿದ. ಅವನ ರೆಕ್ಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವನು ಅದ್ಯಾವುದೋ ಸಮುದ್ರಪಾಲಾದ ನೌಕೆಯಿಂದ ಬದುಕುಳಿದವನಿರಬೇಕೆಂದು ಅವರು ಊಹಿಸಿದರು. ಆದಾಗ್ಯೂ ಅವರು ತಮ್ಮ ನೆರೆಯ ಹೆಂಗಸೊಬ್ಬಳನ್ನು ಕರೆದು ಅವಳ ಅಭಿಪ್ರಾಯವನ್ನು ಕೇಳಿದರು. ಬದುಕು – ಸಾವಿನ ಬಗ್ಗೆ ಬಹಳಷ್ಟು ತಿಳಿದವಳೆಂದು ಅವಳು ಊರಿನಲ್ಲೇ ಹೆಸರುವಾಸಿಯಾಗಿದ್ದಳು. ಅವಳಿಗೆ ಒಂದೇ ನೋಟ ಸಾಕಾಯಿತು.
ಇವನೊಬ್ಬ ಮುದಿ ದೇವದೂತ. ಮಗುವನ್ನು ಕೊಂಡೊಯ್ಯಲು ಬಂದಿರಬೇಕು. ಆದರೆ ಮಳೆಯ ಹೊಡೆತ ತಾಳಲಾರದೆ ಬಿದ್ದು ಬಿಟ್ಟಿದ್ದಾನೆ. ಅವನನ್ನು ಬಡಿದು ಸಾಯಿಸಿಬಿಡಿ! ಎಂದು ತೀರ್ಮಾನ ಕೊಟ್ಟಳು.

ಪೆಲಾಯೊನ ಮನೆಯಲ್ಲಿ ಮುದಿ ದೇವದೂತನೊಬ್ಬ ಸೆರೆಯಾಗಿ ಬಿದ್ದಿದ್ದಾನೆಂದು ಎಲ್ಲೆಡೆ ಸುದ್ದಿ ಹರಡಿತು. ದೇವರ ವಿರುದ್ಧ ಫಿತೂರಿ ಹೂಡಿ ಸಿಕ್ಕಿಬಿದ್ದ ಇಂತಾ ದೇವದೂತರುಗಳು ಮುಖತಪ್ಪಿಸಿ ಹೀಗೆ ತಿರುಗುತ್ತಿರುತ್ತಾರೆಂದು ಆ ಬುದ್ಧಿವಂತ ಹೆಂಗಸು ಹೇಳಿದ್ದಳಾದರೂ ಅವನನ್ನು ಬಡಿದು ಸಾಯಿಸುವಷ್ಟು ಕ್ರೌರ್ಯ ಅವರಲ್ಲಿರಲಿಲ್ಲ. ಮುದಿ ದೇವದೂತನನ್ನು ಪೆಲಾಯೊ ದಿನವಿಡಿ ಅಡುಗೆಮನೆಯ ಕಿಟಕಿಯಿಂದಲೇ ಗಮನಿಸುತ್ತಿದ್ದ. ಅವನ ಕೈಯಲ್ಲಿ ಬಡಿಗೆಯೊಂದು ಸಿದ್ಧವಾಗಿಯೇ ಇತ್ತು. ರಾತ್ರಿ ಮಲಗುವ ಮುನ್ನ ಪೆಲಾಯೊ ಅವನನ್ನು ಎಳೆದು ತಂತಿ ಬಲೆಯಲ್ಲಿ ಹೆಣೆದ ಕೋಳಿ ಗೂಡಿನೊಳಗೆ ತಳ್ಳಿದ. ಮಧ್ಯ ರಾತ್ರಿಯಲ್ಲಿ ಮಳೆ ನಿಂತಾಗ ಪೆಲಾಯೊ ಮತ್ತು ಎಲಿಸೆಂಡಾ ಏಡಿಗಳನ್ನು ಕೊಲ್ಲುವುದರಲ್ಲೇ ನಿರತರಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಮಗು ಎಚ್ಚರಗೊಂಡಿತು. ಜ್ವರ ಇಳಿದಿತ್ತು. ಅವರಿಬ್ಬರಿಗೂ ಎಷ್ಟೊಂದು ನೆಮ್ಮದಿ ಆಯಿತೆಂದರೆ, ಅವನ ಹಣೆಯಲ್ಲಿ ಬರೆದಂತೆ ಆಗಲಿ ಮುದಿ ದೇವದೂತನನ್ನು ಮೂರು ದಿನಗಳಿಗಾಗುವಷ್ಟು ಆಹಾರ ಮತ್ತು ನೀರು ಕೊಟ್ಟು ಒಂದು ತೆಪ್ಪದಲ್ಲಿ ಸಮುದ್ರಕ್ಕೆ ಬಿಡುವುದೆಂದು ತೀರ್ಮಾನಿಸಿದರು. ಆದರೆ ಮಾರನೆಯ ಬೆಳಿಗ್ಗೆ ಅವರು ಎದ್ದು ಕೋಳಿ ಗೂಡಿನ ಬಳಿ ಬಂದಾಗ ಇಡೀ ಊರೇ ಅವರ ಅಂಗಳದಲ್ಲಿ ನೆರೆದಿತ್ತು. ಮುದಿ ದೇವದೂತ ಒಂದು ಸರ್ಕಸ್ ಪ್ರಾಣಿಯೆಂಬಂತೆ ಜನ ಅವನನ್ನು ಚುಚ್ಚಿ ತಡವಿ ಗೇಲಿ ಮಾಡಿ ಆನಂದಪಡುತ್ತಿದ್ದರು.

ಅವರಿಬ್ಬರೂ ಗರಬಡಿದಂತೆ ಕೆಸರಿನಲ್ಲಿ ಕೊಸರಾಡುತ್ತಿದ್ದ ಮುದುಕನನ್ನು ನೋಡತೊಡಗಿದರು. ಮುದುಕ ಚಿಂದಿ ಆಯುವವನಂತೆ ಬಟ್ಟೆ ಧರಿಸಿದ್ದ. ಕೆಲವು ನೆರೆತ ಕೂದಲುಗಳನ್ನು ಬಿಟ್ಟರೆ ತಲೆ ಬೋಳಾಗಿತ್ತು. ಬಾಯಲ್ಲಿ ಕೆಲವೇ ಹಲ್ಲುಗಳು ಉಳಿದಿದ್ದವು. ನೆಂದು ತೊಪ್ಪೆಯಾಗಿದ್ದ ಮುದುಕ ಆ ವಯಸ್ಸಿನ ಘನತೆಯನ್ನು ಕಳೆದುಕೊಂಡಿದ್ದ. ಬಹಳಷ್ಟು ಗರಿಗಳನ್ನು ಕಳೆದುಕೊಂಡ ಅವನ ದೊಡ್ಡ ಗಾತ್ರದ ರೆಕ್ಕೆಗಳು ಕೆಸರಿನಲ್ಲಿ ಹೂತು ಕೊಳಕಾಗಿದ್ದವು. ಬಹಳ ಹೊತ್ತಿನಿಂದ ತದೇಕವಾಗಿ ಅವನನ್ನೇ ಗಮನಿಸುತ್ತಿದ್ದ ಪೆಲಾಯೊ ಮತ್ತು ಎಲಿಸೆಂಡಾಳಿಗೆ ಮುದುಕ ಬಹಳ ಚಿರಪರಿಚಿತನಂತೆ ಭಾಸವಾಗತೊಡಗಿತು.

ಅಷ್ಟರಲ್ಲಿ, ಸುದ್ದಿ ತಿಳಿದ ಊರ ಪಾದ್ರಿ ಗೊನ್ಜಾಗ ಅಲ್ಲಿಗೆ ಧಾವಿಸಿ ಬಂದರು. ಆ ಹೊತ್ತಿಗೆ ಅಲ್ಲಿ ನೆರೆದಿದ್ದ ಜನ ಮೊದಲಿನವರಂತೆ ಮುದಿ ದೇವದೂತನನ್ನು ಛೇಡಿಸುವುದನ್ನು ಬಿಟ್ಟು ಅವನ ಭವಿಷ್ಯದ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಅವರಲ್ಲೊಬ್ಬ ಮುಗ್ಧ ಅವನನ್ನು ಊರಿನ ಮೇಯರನ್ನಾಗಿ ನೇಮಿಸಿದರೆ ಚೆನ್ನಾಗಿರುತ್ತದೆ ಎಂದ. ಇನ್ನು ಕೆಲವರು ದೇಶದ ದಂಡನಾಯಕನನ್ನಾಗಿ ನೇಮಿಸಬೇಕೆಂದು ಅಭಿಪ್ರಾಯಪಟ್ಟರು. ಮತ್ತೆ ಕೆಲವರು ಅವನಿಗೆ ಬುದ್ಧಿವಂತ ರೆಕ್ಕೆ ಮಾನವರ ಸಂತಾನವನ್ನು ಬೆಳೆಸುವ ಕಾರ್ಯಕ್ಕೆ ಹಚ್ಚಬೇಕೆಂದು ಮಾತನಾಡತೊಡಗಿದರು. ಗೂಡಿನ ಒಂದು ಮೂಲೆಯಲ್ಲಿ ಬಿಸಿಲಿಗೆ ತನ್ನ ರೆಕ್ಕೆಗಳನ್ನು ಒಡ್ಡಿ ಒಣಗಿಸಿಕೊಳ್ಳುತ್ತಿದ್ದ ಅವನು, ಗಲಿಬಿಲಿಗೊಂಡ ಕೋಳಿಗಳ ಮಧ್ಯೆಯಲ್ಲಿ ಒಂದು ದೊಡ್ಡ ಕೋಳಿಯಂತೆ ಕಾಣುತ್ತಿದ್ದ. ಅವನನ್ನು ಹತ್ತಿರದಿಂದ ಕಂಡು ಮಾತನಾಡಿಸಲು ಪಾದ್ರಿಯೇ ಗೂಡಿನೊಳಗೆ ಹೊಕ್ಕು ಮುದಿ ದೇವದೂತನಿಗೆ ದೇವಬಾಷೆ ಲ್ಯಾಟಿನಿನಲ್ಲಿ ಶುಭ ದಿನವನ್ನು ಹಾರೈಸಿದ. ಮುದಿ ದೇವದೂತ ಯಾವುದೋ ಅನ್ಯ ಬಾಷೆಯಲ್ಲಿ ಏನೋ ವಟಗುಟ್ಟಿದ. ದೇವರ ಬಾಷೆಯನ್ನಾಗಲೀ, ಅಥವಾ ಭೂಮಿಯ ಮೇಲೆ ಅವನ ಪ್ರತಿನಿಧಿಯನ್ನು ಹೇಗೆ ಮಾತನಾಡಿಸಬೇಕೆಂದು ಗೊತ್ತಿರದ ಇವನೊಬ್ಬ ಸುಳ್ಳು ದೇವದೂತನೆಂದು ಪಾದ್ರಿ ತೀರ್ಮಾನಿಸಿದ. ಹತ್ತಿರದಿಂದ ಗಮನಿಸಿದಾಗ ಅವನಲ್ಲಿ ದೈವಾಂಶಕ್ಕಿಂತಲೂ ಮಾನವ ಸಹಜ ಗುಣಗಳೇ ಕಂಡವು. ಅವನ ರೆಕ್ಕೆಗಳಲ್ಲಿ ಭೂಲೋಕದ ಹೇನುಗಳೇ ಹರಿದಾಡುತ್ತಿದ್ದವು ಹಾಗೂ ಮಳೆಯ ಹೊಡೆತಕ್ಕೆ ಘಾಸಿಗೊಂಡಿದ್ದವು.

ದೇವದೂತನಿಗಿರಬೇಕಾದ ಗಾಂಭೀರ‍್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ. ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು. ಆದಾಗ್ಯೂ, ತನಗಿಂತ ಮೇಲಿನ ಧರ್ಮಾಧ್ಯಕ್ಷರಿಗೆ ಪತ್ರ ಬರೆದು, ಅವರು ಅವರ ಮೇಲ್ಪಟ್ಟವರಿಗೆ ಪತ್ರ ಬರೆದು, ಅವರು ಪೋಪರಿಗೆ ಪತ್ರ ಬರೆದು ಅವರು ತಮ್ಮ ಧರ್ಮ ಸಂಸತ್ತಿನ ಅಭಿಪ್ರಾಯ ಪಡೆದು ಒಂದು ತೀರ್ಮಾನ ತೆಗೆದುಕೊಳ್ಳುವವರೆಗೆ ಕಾಯಬೇಕೆಂದು ಜನರಿಗೆ ತಿಳಿಸಿದರು. ಪಾದ್ರಿಯ ಮಾತುಗಳಿಗೆ ಜನ ರವಷ್ಟೂ ಬೆಲೆಕೊಡಲಿಲ್ಲ. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸುತ್ತಮುತ್ತಲ ಹಳ್ಳಿಗಳಿಂದ ಜನರು ಹಿಂಡು ಹಿಂಡಾಗಿ ಪೆಲಾಯೊನ ಅಂಗಳಕ್ಕೆ ಮುಗಿಬಿದ್ದರು. ಕೊನೆಗೆ ಜನರ ಗುಂಪನ್ನು ನಿಯಂತ್ರಿಸಲು ಪೋಲಿಸರು ಆಗಮಿಸಿಬೇಕಾಯಿತು. ಕಸದಿಂದ ತುಂಬಿದ್ದ ಅಂಗಳವನ್ನು ಗುಡಿಸಿ ಗುಡಿಸಿ ಎಲಿಸೆಂಡಾಳ ಸೊಂಟ ಬಿದ್ದು ಹೋಯಿತು. ಆಗ ಅವರಿಗೊಂದು ಉಪಾಯ ಹೊಳೆಯಿತು. ಅಂಗಳಕ್ಕೆ ಬೇಲಿಯನ್ನು ಹಾಕಿ, ಮುದಿ ದೇವದೂತನನ್ನು ನೋಡಲು ಬರುವ ಒಬ್ಬೊಬ್ಬರಿಂದಲೂ ಐದು ಸೆಂಟು ಶುಲ್ಕ ವಸೂಲು ಮಾಡುವುದು!

ಬಹಳ ದೂರದೂರದಿಂದ ಜನ ಬರತೊಡಗಿದರು. ಇದೇ ಸಮಯಕ್ಕೆ ಸರಿಯಾಗಿ ಊರಿಗೊಂದು ದೊಂಬರಾಟದ ತಂಡ ಬಂದಿಳಿಯಿತು. ಅದರಲ್ಲೊಬ್ಬ ಹಾರಾಡುವ ಕಲಾವಿದನಿದ್ದ. ಅವನು ಜನರ ಮೇಲೆ ಹಾರಾಡಿ ತೋರಿಸಿದ. ಆದರೂ ಜನ ಅವನ ಕಡೆಗೆ ಆಸಕ್ತರಾಗಲಿಲ್ಲ. ಏಕೆಂದರೆ ಅವನ ರೆಕ್ಕೆಗಳು ದೇವದೂತನ ರೆಕ್ಕೆಗಳಾಗದೆ ಬಾವಲಿಯ ರೆಕ್ಕೆಗಳಾಗಿದ್ದವು. ದೂರ ದೂರದ ಊರುಗಳಿಂದ ಕಾಹಿಲೆಗಳಿಂದ ನರಳುತ್ತಿರುವವರು ಬರತೊಡಗಿದರು: ಬಾಲ್ಯದಿಂದಲೇ ಹೃದಯದ ಕಾಹಿಲೆಯಿಂದ ನರಳುತ್ತಿದ್ದ ಹೆಂಗಸು; ನಕ್ಷತ್ರಗಳ ಸದ್ದಿನಿಂದ ನಿದ್ದೆ ಮಾಡಲಾಗದ ಪೋರ್ಚುಗಿಸ್ ಗಂಡಸು; ಜಾಗೃತ ಅವಸ್ಥೆಯಲ್ಲಿ ಮಾಡಿದ ಕೆಲಸಗಳನ್ನು ನಿದ್ರಾವಸ್ಥೆಯಲ್ಲಿ ಎದ್ದು ಹಾಳುಮಾಡುವವನು; ಮತ್ತೂ, ಕಡಿಮೆ ಗಂಭೀರದ ಕಾಹಿಲೆಯವರು.. ಬರುತ್ತಲೇ ಇದ್ದರು. ಇವರೆಲ್ಲರನ್ನು ಸಂಭಾಳಿಸುತ್ತಾ ಪೆಲಾಯೋ ಮತ್ತು ಎಲಿಸೆಂಡಳ ಹೆಣ ಬಿದ್ದೋಗಿತ್ತಾದರೂ ಅವರು ಬಹಳ ಖುಷಿಯಲ್ಲಿದ್ದರು. ಒಂದೇ ವಾರದಲ್ಲಿ ಅವರ ಮನೆಯ ಕೊಠಡಿ ದುಡ್ಡಿನಿಂದ ತುಂಬಿ ಹೋಗಿತ್ತು. ಆದರೂ, ಮುದಿ ದೇವದೂತನ್ನು ನೋಡಲು ಕಾತರಿಸುತ್ತಿದ್ದ ಜನರ ಸಾಲು ದಿಗಂತದವರೆಗೂ ಹಬ್ಬಿತ್ತು.

ಇದೆಲ್ಲದರ ಕೇಂದ್ರ ಬಿಂದು ಮುದಿ ದೇವದೂತನಾಗಿದ್ದರೂ, ಅವನು ಮಾತ್ರ ನಿರ್ಲಿಪ್ತನಂತಿದ್ದ. ಅವನು ಕೋಳಿಗೋಡಿನ ದಗೆಯೊಳಗೆ ನೆಮ್ಮದಿ ಕಾಣಲು ಹರ ಸಾಹಸಪಡುತ್ತಿದ್ದ. ಅವನ ಸುತ್ತಾ ಹೊರಗೆ ಹಚ್ಚಿಸಿದ್ದ ದೀಪಗಳಿಂದ, ಪವಿತ್ರ ಮೋಂಬತ್ತಿಗಳಿಂದ ಅವನು ಕಂಗಾಲಾಗಿದ್ದ. ದೇವದೂತರ ಆಹಾರ ನುಸಿಗುಳಿಗೆಗಳೆಂದು ಬುದ್ದಿವಂತ ಹೆಂಗಸು ಹೇಳಿದ್ದರಿಂದ ಮೊದಮೊದಲು ಜನರು ಅವನಿಗೆ ಅವನ್ನು ತಿನ್ನಿಸಲು ಪ್ರಯತ್ನಿಸಿದ್ದರು. ಇದನ್ನು, ಮತ್ತು ಪೋಪರ ಪ್ರಸಾದವೆಂದು ಭಕ್ತರು ತಂದ ಆಹಾರವನ್ನು ಅವನು ಮುಟ್ಟಲೇ ಇಲ್ಲ. ಚೆನ್ನಾಗಿ ಬೇಯಿಸಿದ ಬದನೆಕಾಯಿಯನ್ನು ಮಾತ್ರ ಅವನು ಬಹಳ ಖುಶಿಯಿಂದ ತಿನ್ನುತ್ತಿದ್ದ. ಅವನಲ್ಲಡಗಿದ್ದ ದೈವಿಕ ಕಳೆಯೆಂದರೆ ತಾಳ್ಮೆಯೊಂದೇ! ಶುರುವಿನಲ್ಲಿ ಕೋಳಿಗಳು ಅವನ ರೆಕ್ಕೆಗಳಲ್ಲಡಗಿದ್ದ ದೇವಲೋಕದ ಹೇನುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತಿದ್ದಾಗ, ವಿಕಲಾಂಗರು ತಮ್ಮ ಊನ ಅಂಗಗಳಿಗೆ ಸವರಲು ಅವನ ಗರಿಗಳನ್ನು ಕೀಳತೊಡಗಿದಾಗ, ಅವನನ್ನು ಎಬ್ಬಿಸಿ ನೋಡಲು ಕೆಲವರು ಕಲ್ಲುಗಳನ್ನು ಬೀರಿದಾಗ ಅವನು ಪ್ರದರ್ಶಿಸಿದ ತಾಳ್ಮೆ ಊಹಿಸಲಸದಳ! ಅವನು ಬಹಳ ಹೊತ್ತಿನಿಂದ ನಿಶ್ಚಲವಾಗಿ ಬಿದ್ದುಕೊಂಡಿದ್ದಾಗ, ಅವನು ಸತ್ತಿದ್ದಾನೆಂದು ತಿಳಿದು ಕೆಲವರು ಅವನನ್ನು ಕಾದ ಕಬ್ಬಿಣದಿಂದ ಚುರುಗುಟ್ಟಿಸಿದಾಗ ಮಾತ್ರ ಅವನು ಒಮ್ಮೆ ತಾಳ್ಮೆ ಕಳೆದುಕೊಂಡಿದ್ದ. ಅವನು ಉಂಟು ಮಾಡಿದ್ದ ಗೊಂದಲ, ಗದ್ದಲ ಮಾತ್ರ ಖಂಡಿತ ಈ ಈ ಜಗತ್ತಿನದ್ದಾಗಿರಲಿಲ್ಲ. ಅವನ ಪ್ರತಿಕ್ರಿಯೆ ಸಿಟ್ಟಿನದಲ್ಲ, ಬದಲಾಗಿ ನೋವಿನಿಂದುಂಟಾದ್ದು ಎಂದು ಬಹಳ ಜನರಿಗೆ ಅನಿಸಿದ್ದರಿಂದ ಮುಂದೆ ಅವರು ಜಾಗರೂಕರಾಗಿದ್ದರು.

ಸೆರೆಯಾದ ದೇವದೂತನ ಬಗ್ಗೆ ಪೋಪರ ತೀರ್ಮಾನ ಹೊರ ಬೀಳುವವರೆಗೆ ಪಾದ್ರಿ ಗೊನ್ಜಾಗ ತನ್ನ ಭಕ್ತರ ಆವೇಶವನ್ನು ತಡೆ ಹಿಡಿಯಲು ಬಹಳಷ್ಟು ಪ್ರಯತ್ನಪಟ್ಟಿದ್ದರು. ಆದರೆ, ರೋಮ್ ಪ್ರಭುಗಳಿಗೆ ಯಾವುದೇ ಅವಸರವಿರಲಿಲ್ಲ. ಅವರು, ಇವನಿಗೆ ಹೊಕ್ಕಳಿದೆಯೇ? ಆರ್ಮಾಯಿಕ್ ಭಾಷೆ ಬರುತ್ತದೆಯೇ? ಅಥವಾ, ಇವನು ರೆಕ್ಕೆಗಳಿರುವ ನೋರ್ವೇಜಿಯನ್ ಅಲ್ಲ ತಾನೇ? ಎಂಬ ಕೂದಲು ಸೀಳುವ ಕಾಯಕದಲ್ಲಿ ತೊಡಗಿದ್ದರು. ಈ ಮಧ್ಯೆ ಒಂದು ಘಟನೆ ಜರುಗದಿದ್ದಲ್ಲಿ ಈ ಕಾಯಕ ಯುಗಯುಗಾಂತರಕ್ಕೂ ಮುಂದುವರಿಯುತ್ತಿತ್ತೇನೋ?

ಆ ದಿನಗಳಲ್ಲಿ ವಿವಿಧ ದೊಂಬರಾಟಗಳ ಮಧ್ಯೆ ಊರಿನಲ್ಲಿ ಹೆತ್ತವರನ್ನು ಕಡೆಗಣಿಸಿದ್ದಕ್ಕಾಗಿ ಜೇಡಳಾಗಿ ರೂಪಾಂತರಗೊಂಡ ಹೆಣ್ಣೊಬ್ಬಳ ಪ್ರದರ್ಶನವೊಂದು ಶುರುಹಚ್ಚಿಕೊಂಡಿತು. ಅವಳನ್ನು ನೋಡುವುದಕ್ಕಾಗಿ ಮುದಿ ದೇವದೂತನಿಗಿಂತಲೂ ಕಡಿಮೆ ಪ್ರವೇಶ ಶುಲ್ಕವಿಡಲಾಗಿತ್ತು. ಅಲ್ಲದೆ ಇವಳನ್ನು ತಡವಿ ನೋಡಲು, ಅವಳ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಲು ಯಾವುದೇ ಕಟ್ಟುಪಾಡುಗಳಿರಲಿಲ್ಲ. ಅವಳು ಒಂದು ಮೇಕೆಯಷ್ಟು ಗಾತ್ರದ ಟರಾಂಟುಲಾ ಜೇಡಳಾಗಿದ್ದು ಶೋಕತಪ್ತ ಕನ್ನಿಕೆಯ ಮುಖವನ್ನು ಹೊತ್ತಿದ್ದಳು. ಅವಳ ವಿಲಕ್ಷಣ ರೂಪಕ್ಕಿಂತಲೂ ಜನರನ್ನಾಕರ್ಷಿಸಿದ್ದು ಅವಳ ಹೃದಯವಿದ್ರಾವಕ ಕತೆ. ಅವಳಿನ್ನೂ ಬಾಲೆಯಾಗಿದ್ದಳು. ಹೆತ್ತವರ ಕಣ್ಣು ತಪ್ಪಿಸಿ ನೃತ್ಯಕ್ಕೆಂದು ಹೋಗಿ ಸರಿ ರಾತ್ರಿಯಲ್ಲಿ ಮನೆಗೆ ಬರುತ್ತಿದ್ದಳು. ಅದೊಂದು ನಿರ್ಜನವಾದ ಕಾಡು ಪ್ರದೇಶ. ಒಮ್ಮೆಲೆ ಅಗಸದಲ್ಲಿ ಗುಡುಗು ಮಿಂಚುಗಳ ಆರ್ಭಟ ಶುರುವಾಯಿತು. ಆಕಾಶವು ಇಬ್ಭಾಗವಾಗಿ ಗಂಧಕದ ಮಳೆ ಸುರಿದು ಹುಡುಗಿ ಜೇಡಳಾಗಿ ರೂಪಾಂತರಗೊಂಡಳು. ಅವಳ ಮೇಲೆ ಕರುಣೆಪಟ್ಟು ಜನರು ಎಸೆದ ಮಾಂಸದ ತುಣುಕುಗಳೇ ಅವಳ ಆಹಾರವಾಯಿತು. ಜನಸಾಮಾನ್ಯರ ಕಡೆಗೆ ಕತ್ತೆತ್ತಿಯೂ ನೋಡದ ಮುದಿ ದೇವದೂತನಿಗಿಂತಲೂ ಜೇಡಳಾಗಿ ಶಾಪಗ್ರಸ್ತಳಾದ ಬಾಲೆ ಜನರಿಗೆ ಇಷ್ಟವಾದಳು. ಮುದಿ ದೇವದೂತನಿಗೆ ಆರೋಪಿಸಲಾಗಿದ್ದ ಪವಾಡಗಳು ಕೂಡ ವಿಲಕ್ಷಣ ಸ್ವರೂಪದ್ದಾಗಿದ್ದವು: ಕುರುಡನಿಗೆ ದೃಷ್ಟಿಯ ಬದಲು ಮೂರು ಹೊಸ ಹಲ್ಲುಗಳು ಹುಟ್ಟಿದ್ದು, ಪಾರ್ಶ್ವವಾಯು ಪೀಡಿತನಿಗೆ ನಡೆಯುವ ಶಕ್ತಿಯ ಬದಲು ಲಾಟರಿ ಹೊಡೆದಿದ್ದು, ಕುಷ್ಠರೋಗಿಯ ವ್ರಣಗಳಲ್ಲಿ ಸೂರ್ಯಕಾಂತಿಯ ಹೂಗಳು ಅರಳಿದ್ದು! ಇದರಿಂದಾಗಿ ಮುದಿ ದೇವದೂತ ತನ್ನ ಹೆಸರನ್ನು ಕೆಡಿಸಿಕೊಂಡಿದ್ದ. ಈ ಮಧ್ಯೆ ಜೇಡರ ಬಾಲೆಯ ಆಗಮನ ಅವನನ್ನು ಮುಗಿಸಿತೆಂದೇ ಹೇಳಬಹುದು. ಇದರಿಂದಾಗಿ ಪಾದ್ರಿ ಗೊನ್ಜಾಗ ನೆಮ್ಮದಿಯ ಉಸಿರು ಬಿಡುವಂತಾಯಿತು. ಪೆಲಾಯೋನ ಅಂಗಳ ಬರಿದಾಗಿ ಮೊದಲಿನಂತಾಯಿತು.

ಇದೆಲ್ಲದರ ಕೇಂದ್ರ ಬಿಂದು ಮುದಿ ದೇವದೂತನಾಗಿದ್ದರೂ, ಅವನು ಮಾತ್ರ ನಿರ್ಲಿಪ್ತನಂತಿದ್ದ. ಅವನು ಕೋಳಿಗೋಡಿನ ದಗೆಯೊಳಗೆ ನೆಮ್ಮದಿ ಕಾಣಲು ಹರ ಸಾಹಸಪಡುತ್ತಿದ್ದ. ಅವನ ಸುತ್ತಾ ಹೊರಗೆ ಹಚ್ಚಿಸಿದ್ದ ದೀಪಗಳಿಂದ, ಪವಿತ್ರ ಮೋಂಬತ್ತಿಗಳಿಂದ ಅವನು ಕಂಗಾಲಾಗಿದ್ದ. ದೇವದೂತರ ಆಹಾರ ನುಸಿಗುಳಿಗೆಗಳೆಂದು ಬುದ್ದಿವಂತ ಹೆಂಗಸು ಹೇಳಿದ್ದರಿಂದ ಮೊದಮೊದಲು ಜನರು ಅವನಿಗೆ ಅವನ್ನು ತಿನ್ನಿಸಲು ಪ್ರಯತ್ನಿಸಿದ್ದರು.

ಮನೆಯೊಡೆಯನಿಗೇನು ಬೇಸರವಾಗಲಿಲ್ಲ. ಅವರು ಸಾಕಷ್ಟು ದುಡ್ಡನ್ನು ಸಂಪಾದಿಸಿದ್ದರು. ಪೆಲಾಯೋ ಎರಡಂತಸ್ತಿನ ದೊಡ್ಡ ಮಜಭೂತಾದ ಮನೆಯನ್ನು ಕಟ್ಟಿಸಿದ. ದಾರಿ ತಪ್ಪಿದ ದೇವದೂತರುಗಳು ಒಳಗೆ ಬರದಂತೆ ಕಿಟಕಿಗಳಿಗೆ ಕಬ್ಬಿಣದ ಅಡ್ಡಪಟ್ಟಿಗಳನ್ನು ಹಾಕಿಸಿದ. ಚಳಿಗಾಲದಲ್ಲಿ ಏಡಿಗಳು ಒಳ ಬರದಂತೆ ತನ್ನ ಜಾಗದ ಸುತ್ತ ತಂತಿಬಲೆಯ ಬೇಲಿಯನ್ನು ಹಾಕಿದ. ತನ್ನ ನ್ಯಾಯಾಲಯದ ಜವಾನನ ಕೆಲಸಕ್ಕೆ ರಾಜಿನಾಮೆಯಿತ್ತು ಪೇಟೆಗೆ ಹತ್ತಿರದಲ್ಲೇ ಮೊಲ ಸಾಕಾಣಿಕೆ ಕಸುಬನ್ನು ಶುರು ಮಾಡಿದ. ಅವನ ಹೆಂಡತಿ ಎಂದೂ ನೋಡರಿಯದಿದ್ದ ರೇಶ್ಮೆ ಉಡುಪುಗಳನ್ನು, ಅಪ್ಪಟ ಚರ್ಮದ ಪಾದರಕ್ಷೆಗಳನ್ನು ಕೊಂಡು ಭಾನುವಾರಗಳಲ್ಲಿ ಮೆರೆದಳು. ಕೋಳಿಗೂಡು ಮಾತ್ರ ಯಾವುದೇ ಬದಲಾವಣೆಗಳನ್ನು ಕಾಣದೆ ಯಥಾಸ್ಥಿತಿಯಲ್ಲಿತ್ತು. ಯಾವತ್ತಾದರೂ ಅದನ್ನು ಸ್ವಚ್ಛಗೊಳಿಸಿದ್ದಿದ್ದರೆ ಅದು ಅಲ್ಲಿಂದ ಹೊರಡುತ್ತಿದ್ದ ದುರ್ನಾತಕ್ಕೆ ಹೊರತು ಮುದಿ ದೇವದೂತನ ಪ್ರೀತಿಯಿಂದಲ್ಲ! ಮೊದಮೊದಲು ಮಗು ನಡೆಯಲು ಕಲಿತಾಗ ಅದು ಕೋಳಿಗೂಡಿನ ಕಡೆಗೆ ಹೋಗದಂತೆ ಅವರು ಜಾಗರೂಕರಾಗಿರುತ್ತಿದ್ದರು. ಆದರೆ ಸಮಯ ಕಳೆದಂತೆ. ದುರ್ನಾತಕ್ಕೆ ಅವರ ಮೂಗುಗಳು ಒಗ್ಗಿಕೊಂಡಂತೆ, ಮಗು ಕೋಳಿಗೂಡಿನ ಒಳಗೆ ಹೋಗುವುದು ಅವರಿಗೆ ಅಪಥ್ಯವೆನಿಸಲಿಲ್ಲ. ದೇವದೂತನೂ ಕೂಡ ಮಗುವಿನ ಪುಂಡಾಟಿಕೆಗಳನ್ನು ಸಹಿಸುಕೊಂಡಿರುವಂತೆ ಕಾಣಿಸುತ್ತಿತ್ತು. ಕಾಕತಾಳಿಯವೆಂಬಂತೆ ಮಗುವಿಗೂ ಮುದಿದೇವದೂತನಿಗೂ ಒಮ್ಮೆಲೇ ಸೀತಾಳ ಸಿಡುಬು ಬಂದಿತು. ಮಗುವನ್ನು ಪರೀಕ್ಷಿಸಲು ಬಂದಿದ್ದ ವೈದ್ಯ ದೇವದೂತನನ್ನೂ ಪರೀಕ್ಷಿಸಿದ. ಅದರ ಎದೆಯಿಂದ, ಮೂತ್ರಪಿಂಡಗಳಿಂದ ಎಂತೆಂತವೋ ವಿಚಿತ್ರ ಸದ್ದುಗಳು ಹೊರಟು ಅದು ಬದುಕಿರುವುದೇ ವೈದ್ಯರಿಗೆ ಆಶ್ಚರ್ಯವೆನಿಸಿತು. ವೈದ್ಯರಿಗೆ ಅದಕ್ಕಿಂತ ಆಶ್ಚರ್ಯವೆನಿಸಿದ್ದು ಆ ಅಗಾಧ ರೆಕ್ಕೆಗಳು. ಅವು ಖಂಡಿತವಾಗಿಯೂ ಮಾನವ ಶರೀರದ ಮೇಲೆ ಅವರಿಗೆ ಅಭಾಸವೆನಿಸಲಿಲ್ಲ. ಬೇರೆ ಮಾನವರಿಗೂ ಏಕೆ ರೆಕ್ಕೆಗಳಿಲ್ಲವೆಂದು ಅವರು ವಿಸ್ಮಯಪಟ್ಟರು.

ಮಗು ಶಾಲೆಗೆ ಸೇರುವ ವಯಸ್ಸಿಗೆ ಕೋಳಿಗೂಡು ಮುರಿದು ಬಿದ್ದಿತ್ತು. ಮುದಿ ದೇವದೂತ ತನ್ನ ರೆಕ್ಕೆಗಳನ್ನು ಎಳೆದುಕೊಂಡು ಎಲ್ಲೆಂದರಲ್ಲಿ ಹೋಗುತ್ತಿದ್ದ. ಈಗ ಅಡುಗೆ ಕೋಣೆಯಲ್ಲಿದ್ದರೆ, ಮತ್ತೊಮ್ಮೆ ಅವರ ಮಲಗುವ ಕೋಣೆಯಲ್ಲಿರುತ್ತಿದ್ದ. ಅವರು ಪೊರಕೆ ಹಿಡಿದು ಅವನನ್ನು ಓಡಿಸುತ್ತಿದ್ದರು. ಅವನು ಸಾಯುತ್ತಿರುವವನಂತೆ ಕಾಣಿಸುತ್ತಿದ್ದ. ಅವನು ಏನೂ ತಿನ್ನುತ್ತಿರಲಿಲ್ಲ. ಅವನ ಮುದಿ ಕಣ್ಣುಗಳಲ್ಲಿ ಪೊರೆ ಬೆಳೆದು ಮುಚ್ಚಿ ಹೋದಂತೆ ಕಾಣಿಸುತ್ತಿದ್ದವು. ಅವನ ರೆಕ್ಕೆಯಲ್ಲಿ ಉಳಿದಿದ್ದ ಗರಿಗಳೂ ಕೂಡ ಉದುರಿಹೋಗುವಂತೆ ಕಾಣಿಸುತ್ತಿದ್ದವು. ಅವನ ಮೇಲೊಂದು ಕಂಬಳಿ ಎಸೆದು ಪೆಲಾಯೋ ಅವನನ್ನು ಶೆಡ್ಡಿನಲ್ಲಿ ಮಲಗಲು ಅನುವು ಮಾಡಿಕೊಟ್ಟ. ಅವನಿಗೆ ಜ್ವರ ಬಂದಿರುವುದು ಅವರಿಗೆ ಆಗಲೇ ಗೊತ್ತಾಗಿದ್ದು. ಜ್ವರದ ತಾಪದಿಂದ ಅವನು ಏನೇನೋ ಬಡಬಡಿಸುತ್ತಿದ್ದ. ಅವನು ಸತ್ತು ಹೋದರೆ ಏನು ಮಾಡುವುದೆಂದು ಅವರು ಚಿಂತೆಗೀಡಾದರು. ಸತ್ತ ದೇವದೂತರನ್ನು ಏನು ಮಾಡುವುದೆಂದು ನೆರೆಯ ಬುದ್ಧಿವಂತ ಹೆಂಗಸು ಅವರಿಗೆ ಹೇಳಿರಲಿಲ್ಲ.

ಮನೆಯೊಡೆಯನಿಗೇನು ಬೇಸರವಾಗಲಿಲ್ಲ. ಅವರು ಸಾಕಷ್ಟು ದುಡ್ಡನ್ನು ಸಂಪಾದಿಸಿದ್ದರು. ಪೆಲಾಯೋ ಎರಡಂತಸ್ತಿನ ದೊಡ್ಡ ಮಜಭೂತಾದ ಮನೆಯನ್ನು ಕಟ್ಟಿಸಿದ. ದಾರಿ ತಪ್ಪಿದ ದೇವದೂತರುಗಳು ಒಳಗೆ ಬರದಂತೆ ಕಿಟಕಿಗಳಿಗೆ ಕಬ್ಬಿಣದ ಅಡ್ಡಪಟ್ಟಿಗಳನ್ನು ಹಾಕಿಸಿದ. ಚಳಿಗಾಲದಲ್ಲಿ ಏಡಿಗಳು ಒಳ ಬರದಂತೆ ತನ್ನ ಜಾಗದ ಸುತ್ತ ತಂತಿಬಲೆಯ ಬೇಲಿಯನ್ನು ಹಾಕಿದ. ತನ್ನ ನ್ಯಾಯಾಲಯದ ಜವಾನನ ಕೆಲಸಕ್ಕೆ ರಾಜಿನಾಮೆಯಿತ್ತು ಪೇಟೆಗೆ ಹತ್ತಿರದಲ್ಲೇ ಮೊಲ ಸಾಕಾಣಿಕೆ ಕಸುಬನ್ನು ಶುರು ಮಾಡಿದ. ಅವನ ಹೆಂಡತಿ ಎಂದೂ ನೋಡರಿಯದಿದ್ದ ರೇಶ್ಮೆ ಉಡುಪುಗಳನ್ನು, ಅಪ್ಪಟ ಚರ್ಮದ ಪಾದರಕ್ಷೆಗಳನ್ನು ಕೊಂಡು ಭಾನುವಾರಗಳಲ್ಲಿ ಮೆರೆದಳು. ಕೋಳಿಗೂಡು ಮಾತ್ರ ಯಾವುದೇ ಬದಲಾವಣೆಗಳನ್ನು ಕಾಣದೆ ಯಥಾಸ್ಥಿತಿಯಲ್ಲಿತ್ತು. ಯಾವತ್ತಾದರೂ ಅದನ್ನು ಸ್ವಚ್ಛಗೊಳಿಸಿದ್ದಿದ್ದರೆ ಅದು ಅಲ್ಲಿಂದ ಹೊರಡುತ್ತಿದ್ದ ದುರ್ನಾತಕ್ಕೆ ಹೊರತು ಮುದಿ ದೇವದೂತನ ಪ್ರೀತಿಯಿಂದಲ್ಲ!

ಅಂತೂ, ಮುದಿ ದೇವದೂತ ಚಳಿಗಾಲವನ್ನು ದಾಟಿ ಹೇಗೋ ಬಿಸಿಲು ಕಾಣುವಂತಾದ. ಹೇಗೋ ಅಂಗಳದ ಮೂಲೆಗೆ ಸೇರಿ ಬಹಳ ದಿನಗಳವರೆಗೆ ಯಾರ ಕಣ್ಣಿಗೂ ಕಾಣದಂತೆ ಬಿಸಿಲು ಕಾಯಿಸುತ್ತಾ ಬಿದ್ದು ಕೊಂಡಿದ್ದ. ಡಿಸೆಂಬರ್ ತಿಂಗಳ ಆರಂಭದಲ್ಲಿ ಅವನ ರೆಕ್ಕೆಗಳಲ್ಲಿ ಒಂದೊಂದೇ ಹೊಸ ಗರಿಗಳು ಕಾಣಿಸಲಾರಂಭಿಸಿದವು. ಅವನು ನಾವಿಕರ ಹಾಡುಗಳನ್ನು ಗುನುಗತೊಡಗಿದ್ದ. ಒಂದು ಬೆಳಿಗ್ಗೆ ಎಲಿಸೆಂಡಾ ಮಧ್ಯಾಹ್ನದ ಊಟಕ್ಕೆ ತರಕಾರಿಯನ್ನು ಕತ್ತರಿಸುತ್ತಿದ್ದಾಗ ಸಮುದ್ರದ ಕಡೆಯಿಂದ ಬಲವಾಗಿ ಬೀಸಿಬಂದ ಗಾಳಿ ಅಡುಗೆಮನೆಗೂ ನುಗ್ಗಿತು. ಅವಳು ಕಿಟಕಿಯನ್ನು ಮುಚ್ಚಲು ಹೋದಾಗ, ಹೊರಗೆ ಮುದಿ ದೇವದೂತ ಹಾರಾಡಲು ಪ್ರಯತ್ನಪಡುತ್ತಿದ್ದ ದೃಶ್ಯ ಕಾಣಿಸಿತು. ಅವನ ಕೈ ಉಗುರುಗಳು ತರಕಾರಿ ತೋಟದ ಮಣ್ಣನ್ನು ಗೆಬರುತ್ತಿದ್ದವು. ಅವನು ಪ್ರಯಾಸಪಡುತ್ತಾ, ತೂರಾಡುತ್ತಾ ಮೇಲೇರಿದ. ಅವನೆಲ್ಲಿ ಶೆಡ್ಡಿಗೆ ಡಿಕ್ಕಿ ಹೊಡೆದು ಅದನ್ನು ಬೀಳಿಸುತ್ತಾನೋ ಎಂದು ಎಲಿಸೆಂಡಾ ಗಾಬರಿಗೊಂಡಳು. ಹಾಗಾಗದೆ ಮುದಿ ದೇವದೂತ ರೆಕ್ಕೆಗಳನ್ನು ಬಡಿಯುತ್ತಾ ಮೆಲ್ಲಗೆ ಮೇಲೇರಿದ. ಅವಳು ದೀರ್ಘವಾದ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟಳು. ಅವಳು ನೋಡುನೋಡುತ್ತಿದ್ದಂತೆಯೇ ಮುದಿ ದೇವದೂತ ಒಡ್ಡೊಡ್ಡಾಗಿ ರೆಕ್ಕೆಗಳನ್ನು ಬಡಿಯುತ್ತಾ ಬಹಳ ದೂರ ದೂರ ಸಾಗಿದ. ಅವಳು ನಿಂತಲ್ಲಿಂದ ಅವನು ಒಂದು ಮುದಿ ಹದ್ದಿನಂತೆ ಕಾಣಿಸುತ್ತಿದ್ದ. ದಿಗಂತದಲ್ಲಿ ಅವನು ಒಂದು ಚುಕ್ಕಿಯಂತೆ ಕಾಣಿಸುತ್ತಿರುವವರೆಗೆ ಅವಳು ನೋಡುತ್ತಲೇ ಇದ್ದಳು.

 

(ಮೂಲ: ಮಾರ್ಕ್ವೆಜ್ ಬರೆದ A Very Old man with Enormous Wings: ಸ್ಪ್ಯಾನಿಶ್ ನಿಂದ ಗ್ರೆಗೊರಿ ರಬಸ್ಸಾ ರವರ ಇಂಗ್ಲಿಷ್ ಅನುವಾದ)
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)