ರಾಜಾರಾಮಮೋಹನ ರಾಯರು ಇಂಗ್ಲೆಂಡ್ ನ ಉತ್ತರಕ್ಕಿರುವ ಬಂದರು ನಗರ ಲಿವರ್ಪೂಲ್ ಅನ್ನು ತಲುಪಿದರು. ಲಿವರ್ಪೂಲ್ ಬಂದರನ್ನು ಜಗತ್ತಿನ ಮೊದಲ ಜಲ ಹಡಗುಕಟ್ಟೆ ಎನ್ನುತ್ತಾರೆ.  ಭಾರತದಿಂದ ಹೊರಟು ಲಿವರ್ಪೂಲ್ ಸೇರಿದ ಹಡಗಿನಲ್ಲಿ ರಾಮಮೋಹನರಾಯರ ಜೊತೆಯಲ್ಲಿ, ಸಾಕು ಮಗ ,ಇಬ್ಬರು ನೌಕರರು ಹಾಗು ಅವರ ನಿತ್ಯದ ಹಾಲಿನ ಬೇಡಿಕೆಯನ್ನು ಪೂರೈಸಲು ಕೆಲವು ದನಗಳು ಇದ್ದವಂತೆ. ಸಂಪ್ರದಾಯಸ್ಥ ಮನೆಯಲ್ಲಿ ಹುಟ್ಟಿ ಸುತ್ತಲಿನ ಸಮಾಜದ ಕ್ರೂರ ಸಂಪ್ರದಾಯಗಳನ್ನು ವಿರೋಧಿಸುವ ಚಳವಳಿಯ ಮುಂಚೂಣಿ ವಹಿಸಿದ ಅವರು, ಸಾಗರವನ್ನು ದಾಟಿ ವಿದೇಶ ಪ್ರವಾಸ ಮಾಡುವ ಬಗ್ಗೆ ಇದ್ದ ಕಟ್ಟಳೆ ನಿರ್ಬಂಧವನ್ನೂ ಮುರಿದವರು.  ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ರಾಜಾರಾಮ್‌ ಮೋಹನ್‌ ರಾಯ್‌ರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಪ್ರತಿವರ್ಷದ ಸೆಪ್ಟೆಂಬರ್ ತಿಂಗಳ ಕೊನೆಯ ಆದಿತ್ಯವಾರ ಇಂಗ್ಲೆಂಡ್ ನ ರಾಜಧಾನಿ ಲಂಡನ್ ನಿಂದ 160 ಕಿಲೋಮೀಟರ್ ಪಶ್ಚಿಮಕ್ಕಿರುವ ಬ್ರಿಸ್ಟಲ್ ಎನ್ನುವ ಊರಿನ ರುದ್ರಭೂಮಿಯ ಸಮಾಧಿಯೊಂದರ ಬಳಿ ಕೆಲವು ಭಾರತೀಯರು, ಸ್ಥಳೀಯ ಆಂಗ್ಲರು, ನಗರದ ಮೇಯರ್, ಕೆಲ ಇತಿಹಾಸಕಾರರು ಸೇರಿ ಸಂಸ್ಮರಣೆಯೊಂದರಲ್ಲಿ ಪಾಲ್ಗೊಳ್ಳುತ್ತಾರೆ. ಬಂಗಾಳದ ಪಾರಂಪರಿಕ ಛತ್ರಿಯನ್ನು ನೆನಪಿಸುವ ಸಮಾಧಿಯ ವಿನ್ಯಾಸದ ನೆರಳಲ್ಲಿ ನಿಂತು ಸೇರಿದವರೆಲ್ಲ ಸುಮಾರು ಇನ್ನೂರು ವರ್ಷಗಳ ಹಿಂದೆ ತೀವ್ರ ವಾದಗಳ ಚಳವಳಿಗಳ ಕಾವಿನಲ್ಲಿ ಬದುಕಿದ್ದ ನಾಯಕನ ಅಚಲ ನಿರ್ಧಾರ ಅಸಾಮಾನ್ಯ ಚಿಂತನೆ, ಕಾಲ, ನವಭಾರತದ ನಿರ್ಮಾಣದಲ್ಲಿ ವಹಿಸಿದ ಪಾತ್ರವನ್ನು ಮತ್ತೊಮ್ಮೆ ಮೆಲುಕು ಹಾಕುತ್ತಾರೆ. ಭಾರತದಲ್ಲಿ ಹುಟ್ಟಿ ಇಂಗ್ಲೆಂಡ್ ನ ನಗರಗಳಲ್ಲಿ ಸುತ್ತಾಡಿ ಬ್ರಿಸ್ಟಲ್ ಅಲ್ಲಿ ಮೃತನಾದ ವ್ಯಕ್ತಿಯನ್ನು ಸ್ಮರಿಸುವ ಭವ್ಯ ಸಮಾಧಿ 1843ರಲ್ಲಿ ಈಗಿರುವ ಸ್ಥಳದಲ್ಲಿ ನಿರ್ಮಾಣಗೊಂಡಿತು. ಭಾರತ ಸರಕಾರದಿಂದ ಅನುದಾನ ಪಡೆದು 1997ರಲ್ಲಿ ಬ್ರಿಸ್ಟಲ್ ನಗರದ ಕೇಂದ್ರದಲ್ಲಿ ಅದೇ ವ್ಯಕ್ತಿಯ ಮೂರ್ತಿಯನ್ನೂ ನಿಲ್ಲಿಸಲಾಯಿತು. ಕೆಲವು ವರ್ಷಗಳಲ್ಲಿ ಬ್ರಿಸ್ಟಲ್ ನ ಪತ್ರಿಕೆಯೊಂದರಲ್ಲಿ ಸ್ಮರಣಾರ್ಥವಾಗಿ ನಿರ್ಮಿಸಿದ ಮೂರ್ತಿಯ ಕುರಿತು ಚರ್ಚೆ ಶುರು ಆಗಿತ್ತು. ಭಾರತೀಯ ಸುಧಾರಕನ ವಿಚಾರಗಳಿಂದ ಪ್ರಭಾವಿತರಾದ ಕೆಲವರು ಸಮರ್ಥಿಸಿ ಬರೆದರೆ ಇತರ ಹಲವು ಬರಹಗಳು ಭಾರತೀಯನೊಬ್ಬನ ಮೂರ್ತಿಯನ್ನು ಬ್ರಿಸ್ಟಲ್ ನಗರದ ಕೇಂದ್ರಸ್ಥಾನದಲ್ಲಿ ಸ್ಥಾಪಿಸಿದ್ದನ್ನು ಪ್ರಶ್ನಿಸಿದ್ದವು. ಸಮಾಧಿ, ಮೂರ್ತಿ, ಅದರ ಕುರಿತಾದ ಚರ್ಚೆಗಳು ಎಂದೋ ಮಡಿದ ಭಾರತೀಯ ಸಾಧಕನಿಗೂ ಬ್ರಿಸ್ಟಲ್, ಲಂಡನ್ ಸೇರಿದಂತೆ ಇಂಗ್ಲೆಂಡ್ ನ ವಿವಿಧ ಊರುಗಳಿಗೂ ಇದ್ದ ಗಾಢ ಶಾಶ್ವತ ಸಂಬಂಧ ಸಂಕೇತ ಆದವು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಇಲ್ಲಿಂದ ದೂರದ ಬಂಗಾಳದಲ್ಲಿ ಹುಟ್ಟಿ, ಆ ಕಾಲಕ್ಕೆ ಕ್ರಾಂತಿಕಾರಕ ಯೋಚನೆಗಳಿಂದ ಪ್ರಸಿದ್ಧಿಗೆ ಬಂದು ಬ್ರಿಟನ್ ಗೆ ಭೇಟಿ ನೀಡಿ ಬೇರೆಬೇರೆ ನಗರಗಳಲ್ಲಿ ಓಡಾಡಿ, ಬ್ರಿಸ್ಟಲ್ ಗೆ ಬಂದಮೇಲೆ ಮೆನೆಂಜಿಟೈಸ್ ಕಾಯಿಲೆಗೆ ತುತ್ತಾಗಿ ಅಸುನೀಗಿದ ವ್ಯಕ್ತಿಯ ನೆನಪು ಮಾಡುವುದು ಪ್ರತಿ ವರ್ಷವೂ ಇಲ್ಲಿ ನಡೆಯುತ್ತದೆ.

(ರಾಜಾರಾಮ ಮೋಹನ ರಾಯರು)

ಸಮಾಜ ಸುಧಾರಕ, ಭಾಷಾ ತಜ್ಞ, ಪತ್ರಕರ್ತ ಎನ್ನುವ ಬಹುಮುಖಿ ವ್ಯಕ್ತಿ ಇಂದಿಗೆ ನೂರಾ ತೊಂಬತ್ತು ವರ್ಷಗಳ ಹಿಂದೆ ಕೊಲ್ಕತ್ತಾದಿಂದ ಇಂಗ್ಲೆಂಡ್ ಗೆ ಹೊರಟದ್ದು ಇದೇ ಏಪ್ರಿಲ್ ತಿಂಗಳಲ್ಲಿ. ಸುತ್ತಿ ಬಳಸಿ ಇವರನ್ನು ಪರಿಚಯಿಸುವ ಬದಲು “ಬ್ರಹ್ಮ ಸಮಾಜ”ವನ್ನು ಸ್ಥಾಪಿಸಿದ ಮಹನೀಯರು ಎಂದು ನೇರವಾಗಿ ಹೇಳಿದರೆ ಇಲ್ಲಿಯ ತನಕ ಹೇಳಿದ ವಿವರಗಳು ಅನಾಯಾಸವಾಗಿ ಕಣ್ಣಮುಂದೆ ಸುಳಿಯುತ್ತಿದ್ದವೇನೋ. 1831ರ ಏಪ್ರಿಲ್ ಎಂಟರಂದು (ಕೆಲವು ಇತಿಹಾಸಕಾರರು ನವೆಂಬರ್ 1830 ಎಂದು ಉಲ್ಲೇಖಿಸಿದ್ದಾರೆ) ರಾಜಾರಾಮ ಮೋಹನ ರಾಯರು ಇಂಗ್ಲೆಂಡ್ ನ ಉತ್ತರಕ್ಕಿರುವ ಬಂದರು ನಗರ ಲಿವರ್ಪೂಲ್ ಅನ್ನು ತಲುಪಿದರು. ಲಿವರ್ಪೂಲ್ ಬಂದರನ್ನು ಜಗತ್ತಿನ ಮೊದಲ ಜಲ ಹಡಗುಕಟ್ಟೆ (ವೆಟ್ ಡಾಕ್) ಎನ್ನುತ್ತಾರೆ. ಇಂಗ್ಲೆಂಡ್ ನ ಬಂದುರಗಳ ಇತಿಹಾಸವನ್ನು ಕೆದಕಿದರೆ ಇದು ಲಂಡನ್ ನ ಬಂದರಿನ ಸಮರ್ಥ ಪ್ರತಿಸ್ಪರ್ಧಿ. ಭಾರತದಿಂದ ಹೊರಟು ಲಿವರ್ಪೂಲ್ ಸೇರಿದ ಹಡಗಿನಲ್ಲಿ ರಾಮ ಮೋಹನರಾಯರ ಜೊತೆಯಲ್ಲಿ, ಸಾಕು ಮಗ, ಇಬ್ಬರು ನೌಕರರು ಹಾಗು ಅವರ ನಿತ್ಯದ ಹಾಲಿನ ಬೇಡಿಕೆಯನ್ನು ಪೂರೈಸಲು ಕೆಲವು ದನಗಳು ಇದ್ದವಂತೆ. ಸಂಪ್ರದಾಯಸ್ಥ ಮನೆಯಲ್ಲಿ ಹುಟ್ಟಿ ಸುತ್ತಲಿನ ಸಮಾಜದ ಕ್ರೂರ ಸಂಪ್ರದಾಯಗಳನ್ನು ವಿರೋಧಿಸುವ ಚಳವಳಿಯ ಮುಂಚೂಣಿ ವಹಿಸುವುದರ ಜೊತೆಗೆ, ಸಾಗರವನ್ನು ದಾಟಿ ವಿದೇಶ ಪ್ರವಾಸ ಮಾಡುವ ಬಗ್ಗೆ ಇದ್ದ ಕಟ್ಟಳೆ ನಿರ್ಬಂಧವನ್ನೂ ಮುರಿದವರು ಅವರು.

ರಾಜಾರಾಮ ಮೋಹನ ರಾಯರು ಬದುಕಿದ್ದ ಕಾಲವೆಂದರೆ ಭಾರತದಲ್ಲಿ ಮೊಘಲ್ ಚಕ್ರಾಧಿಪತ್ಯ ಪತನ ಹೊಂದುತ್ತಿದ್ದ ಕಾಲ. 1806ರಿಂದ 1837ರ ತನಕ ಆಡಳಿತ ನಡೆಸಿದ ಎರಡನೆಯ ಅಕ್ಬರ್ ಶಾ, ಮೊಘಲ್ ಚಕ್ರಾಧಿಪತ್ಯದ ಕಡೆಯ ಅರಸನಾದ ಬಹದ್ದೂರ್ ಷಾ ಝಫರ್ ನ ತಂದೆ. 1830ರಲ್ಲಿ ಮೊಘಲ್ ಅರಸ ರಾಮಮೋಹನ ರಾಯರ ವಿದ್ವತ್ತು, ಸೇವೆ, ಪ್ರತಿಭೆಗಳನ್ನು ಗಮನಿಸಿ “ರಾಜಾ” ಎನ್ನುವ ಬಿರುದು ಕೊಟ್ಟಿದ್ದ. ರಾಜಾ ರಾಮಮೋಹನರಾಯರು ಅದೇ ಮೊಘಲ್ ದೊರೆಯ ರಾಯಭಾರಿಯಾಗಿ ಇಂಗ್ಲೆಂಡ್ ತಲುಪಿದವರು. ಎರಡನೆಯ ಅಕ್ಬರ್ ಷಾನಿಗೆ ಈಸ್ಟ್ ಇಂಡಿಯಾ ಕಂಪೆನಿಯ ಜೊತೆ ತಕರಾರು ಇತ್ತು. ಮುಖ್ಯವಾಗಿ, ತಾನು ಕೇಳಿದಷ್ಟು ವೇತನ ನೀಡುತ್ತಿಲ್ಲ ಎನ್ನುವ ಬಗ್ಗೆ. 1805ರಲ್ಲಿ ಲಾರ್ಡ್ ವೆಲ್ಲೆಸ್ಲಿ, ವರ್ಷಕ್ಕೆ ಹದಿನೈದು ಲಕ್ಷ ಗೌರವ ವೇತನ ನೀಡುವುದಾಗಿ ಮೊಘಲ್ ದೊರೆಗೆ ಭರವಸೆ ನೀಡಿದ್ದ. ನಂತರ ಬ್ರಿಟಿಷರು ಹನ್ನೆರಡು ಲಕ್ಷಕ್ಕಿಂತ ಹೆಚ್ಚು ವೇತನ ನೀಡಲು ನಿರಾಕರಿಸಿದರು. ಈ ನಡೆಯನ್ನು ವಿಶ್ವಾಸಘಾತ ಎಂದು ಭಾವಿಸಿದ ಅಕ್ಬರ್ ಷಾ ಪ್ರತಿಭಟಿಸಿದ. ದುರ್ಬಲ ಪ್ರತಿರೋಧ ಸಹಜವಾಗಿ ಯಾವುದೇ ಪರಿಣಾಮ ಬೀರದಿದ್ದಾಗ ತನ್ನ ದೂರನ್ನು ಬ್ರಿಟಿಷ್ ಸಂಸತ್ತಿಗೆ ಮುಟ್ಟಿಸುವ ಹೊಣೆಯನ್ನು ರಾಜಾರಾಮಮೋಹನ ರಾಯರ ಮೇಲೆ ಹೊರಿಸಿ ಇಂಗ್ಲೆಂಡ್ ಗೆ ಕಳುಹಿಸಿದ. ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದಲ್ಲಿ ಹಲವು ಅನ್ಯಾಯಗಳು ನಡೆಯುತ್ತಿದ್ದವು. ಅಂತಹವುಗಳನ್ನು ಸ್ಥಳೀಯ ವಿಚಾರಗಳೆಂದು ಇಂಗ್ಲೆಂಡ್ ಅಲ್ಲಿರುವ ಸರಕಾರ ನಿರ್ಲಕ್ಷಿಸುತ್ತಿತ್ತು. ಒಂದು ವೇಳೆ ಲಂಡನ್ ಗೆ ಭೇಟಿ ನೀಡಿ ನೇರವಾಗಿ ಅವರ ಗಮನಕ್ಕೆ ತಂದರೆ, ಜನರ ವಿಶ್ವಾಸದ ಮೇಲೆ ನಡೆಯುವ ಸರಕಾರಕ್ಕೆ ಇಂಗ್ಲೆಂಡ್ ನ ಮಹಾರಾಜನಿಗೂ ಸಂಸತ್ತಿಗೂ ಉತ್ತರದಾಯಿ ಆಗುವುದು ಅನಿವಾರ್ಯ ಆಗಬಹುದು ಎನ್ನುವ ನಂಬಿಕೆ ಮೊಘಲ್ ರಾಜನದಾಗಿತ್ತು.

ರಾಮಮೋಹನ ರಾಯರು ಲಂಡನ್ ಗೆ ಬಂದಮೇಲೆ ಆಗಿನ ಮಹಾರಾಜ ನಾಲ್ಕನೆಯ ವಿಲಿಯಂನನ್ನು ತನ್ನ ಅಹವಾಲನ್ನು ಕೇಳಲು ಒಪ್ಪಿಸಿದರು. ಮೊಘಲ್ ದೊರೆಯ ವೇತನವನ್ನು ಹೆಚ್ಚಿಸಲು ಕೋರಿದರು. ಬಹಳ ಪ್ರಯತ್ನದ ನಂತರ, ಮೊಘಲ್ ದೊರೆ ಕೇಳಿದಷ್ಟು ಅಲ್ಲದಿದ್ದರೂ ವೇತನವನ್ನು ಸ್ವಲ್ಪ ಮಟ್ಟಿಗೆ ಏರಿಸಲು ಬ್ರಿಟಿಷ್ ಸರಕಾರ ಒಪ್ಪಿಗೆ ನೀಡಿತು. ರಾಮಮೋಹನ ರಾಯರ ಭೇಟಿಯ ಅಧೀಕೃತ ಉದ್ದೇಶ ಮೊಘಲ್ ದೊರೆಯ ವೇತನ ಹೆಚ್ಚಿಸುವುದು ಆಗಿದ್ದರೂ ಇಂಗ್ಲೆಂಡ್ ಪ್ರವಾಸದಲ್ಲಿ ಕೆಲವು ಮಹತ್ವದ ಕೆಲಸಗಳನ್ನು ಮಾಡಬೇಕೆಂದುಕೊಂಡು ಬಂದಿದ್ದರು. ಅವರ ಇನ್ನೊಂದು ಜರೂರಿ ಕೆಲಸ ಲಾರ್ಡ್ ವಿಲಿಯಂ ಬೆಂಟಿಕ್ಸ್ ಜಾರಿಗೆ ತಂದಿದ್ದ ಸತಿ ಕಾನೂನಿನ ಪರ ವಿರೋಧಗಳ ಬಗ್ಗೆ ಇತ್ತು. 1829ರಲ್ಲಿ ಸತಿ ಪದ್ಧತಿ ನಿಷೇದ ಕಾಯಿದೆ ಜಾರಿಗೆ ಬಂದಿತ್ತು.

ಭಾರತದಲ್ಲಿ “ಸತಿ”ಯ ಪರವಾಗಿ ಸಂಪ್ರದಾಯವಾದಿಗಳ ಪ್ರಚಾರದಿಂದ ಈ ಕಾನೂನು ರದ್ದಾಗುವ ಸಾಧ್ಯತೆ ಇತ್ತು. ಸತಿ ನಿಷೇಧ ಚಳವಳಿಯ ನೇತೃತ್ವ ವಹಿಸಿದ್ದ ರಾಮಮೋಹನ ರಾಯರು ಲಂಡನ್ ಅಲ್ಲಿ ಇರುವಾಗ ಅಲ್ಲಿನ ವಕೀಲರನ್ನು ಭೇಟಿಯಾಗಿ ಚರ್ಚಿಸಿದರು. 1832ರಲ್ಲಿ “ಪ್ರೈವಿ ಕೌನ್ಸಿಲ್” ನ ಎದುರು ಮೂರು ದಿನಗಳ ವಿಚಾರಣೆ ವಿಮರ್ಶೆ ನಡೆಯಿತು, ಬೆಂಟಿಕ್ ನ ಕಾನೂನನ್ನು ಎತ್ತಿ ಹಿಡಿಯಲಾಯಿತು. ತೀರ್ಪು ಕೇಳಿ ನಿರಾಳರಾದ ಅವರು “ಮಹಿಳೆಯರ ಕೊಲೆಯಲ್ಲಿ ನಾವು ಭಾರತೀಯರು ಅಪರಾಧಿಗಳಾಗುವುದು ಮುಂದುವರಿಯಬಾರದು, ಇನ್ನು ನಾವು ಸುಧಾರಣೆಯ ಹಾದಿಯಲ್ಲಿ ಅರ್ಹವಾಗಿ ಸಾಗಬೇಕು” ಎಂದರು.

ಇಂಗ್ಲೆಂಡ್ ಅಲ್ಲಿ ಹೋದಲ್ಲೆಲ್ಲ ರಾಮಮೋಹನ ರಾಯರಿಗೆ ಸ್ವಾಗತ ಸಿಗುತ್ತಿತ್ತು. ಸಿರಿವಂತರ, ಸುಧಾರಣಾವಾದಿಗಳ, ವಿದ್ವಾಂಸರ ಗೌರವ ಸಿಗುತ್ತಿತ್ತು. “ಬ್ರಹ್ಮ ಸಮಾಜದ” ಮೂಲಕ ಧಾರ್ಮಿಕ ಸಾಮಾಜಿಕ ಅನಿಷ್ಟಗಳ, ಜಾತಿ ಪದ್ಧತಿಯ ವಿರುದ್ಧದ ಹೋರಾಟಗಳ ಬಗ್ಗೆ ತಿಳಿದವರು ಇಂಗ್ಲೆಂಡ್ ಅಲ್ಲಿ ಹಲವರು ಇದ್ದರು. ಇಂಗ್ಲೆಂಡ್ ನಲ್ಲಿ ಕಳೆದ ಎರಡೂವರೆ ಮೂರು ವರ್ಷಗಳ ಸಮಯದಲ್ಲಿ ಸಾಂಸ್ಕೃತಿಕ ವಿನಿಮಯ ಸಂವಾದಗಳು ನಡೆದವು. ರಾಮಮೋಹನ ರಾಯರೂ ಆಂಗ್ಲ ಸಂಸ್ಕೃತಿಯ ಬಗ್ಗೆ ಅವರು ಅಪಾರ ಮೆಚ್ಚುಗೆ ಇದ್ದವರು. ಸಂಸತ್ತಿನ ಪ್ರತಿನಿಧಿಗಳನ್ನು ಭೇಟಿ ಆದರು, ಭಾರತೀಯ ಅರ್ಥ ಶಾಸ್ತ್ರದ, ನ್ಯಾಯಾಂಗ ವ್ಯವಸ್ಥೆ, ಭಾರತದ ವಾಸ್ತವಿಕ ಪರಿಸ್ಥಿತಿಗಳ ಬಗ್ಗೆ ಸಂಸತ್ತಿನಲ್ಲಿ ಪ್ರಬಂಧ ಮಂಡಿಸಿದರು. ಅವರು ಬರೆದ ಪುಸ್ತಕಗಳನ್ನು ಹತ್ತೊಂಭತ್ತನೆಯ ಶತಮಾನದ ಪ್ರಸಿದ್ಧ ಮಹಿಳಾವಾದಿ ಸೋಫಿಯಾ ಡೊಬ್ಸನ್ ಕೊಲೆಟ್ ಪ್ರಕಟಿಸುವಲ್ಲಿ ಸಹಕರಿಸಿದರು. ಬ್ರಹ್ಮ ಸಮಾಜದ ಚಿಂತನೆಗಳ ಬಗ್ಗೆ ಒಲವು ಮೂಡಿಸಿಕೊಂಡಿದ್ದ ಸೋಫಿಯಾ, ಆ ಕುರಿತೂ ಪುಸ್ತಕಗಳನ್ನು ಬರೆದರು.

ರಾಮಮೋಹನ ರಾಯರ ಭೇಟಿಯ ಅಧೀಕೃತ ಉದ್ದೇಶ ಮೊಘಲ್ ದೊರೆಯ ವೇತನ ಹೆಚ್ಚಿಸುವುದು ಆಗಿದ್ದರೂ ಇಂಗ್ಲೆಂಡ್ ಪ್ರವಾಸದಲ್ಲಿ ಕೆಲವು ಮಹತ್ವದ ಕೆಲಸಗಳನ್ನು ಮಾಡಬೇಕೆಂದುಕೊಂಡು ಬಂದಿದ್ದರು. ಅವರ ಇನ್ನೊಂದು ಜರೂರಿ ಕೆಲಸ ಲಾರ್ಡ್ ವಿಲಿಯಂ ಬೆಂಟಿಕ್ಸ್ ಜಾರಿಗೆ ತಂದಿದ್ದ ಸತಿ ಕಾನೂನಿನ ಪರ ವಿರೋಧಗಳ ಬಗ್ಗೆ ಇತ್ತು.

ತಾವು ನಂಬಿ ಪ್ರಚಾರ ಪಡಿಸುತ್ತಿದ್ದ ಏಕಮೂರ್ತಿ ವಾದ ಅವರಿಗೆ ಇಂಗ್ಲೆಂಡ್ ಅಲ್ಲಿ ಹಲವು ಸ್ನೇಹಿತರನ್ನು ನೀಡಿತ್ತು (ಮತ್ತೆ ವಿರೋಧವನ್ನೂ). ಲೂಸಿ ಐಕಿನ್, ಜೆರೆಮಿ ಬೆಂಥಮ್, ವಿಲಿಯಮ್ ಗೋದ್ವಿನ್ ರಾಬರ್ಟ್ ಓವನ್ ರು ಬಂದು ರಾಯರನ್ನು ಭೇಟಿಯಾದರು. ತತ್ವಶಾಸ್ತ್ರಜ್ಞ ಬೆಂಥಮ್ ರನ್ನು ಮಧ್ಯರಾತ್ರಿಯಲ್ಲಿ ಭೇಟಿಯಾಗಿದ್ದು ಅವರಿಗೆ ಖುಷಿ ಕೊಟ್ಟಿತ್ತು. ಸಮಾಜವಾದಿಯಾದ ಚಾರ್ಲ್ಸ್ ಓವನ್ ನ ನಾಸ್ತಿಕವಾದ ಕುರಿತು ಕಟುವಾಗಿ ಮಾತನಾಡಿದ್ದರು. ವಿಭಿನ್ನ ರಾಜಕೀಯ ಹಾಗು ಧಾರ್ಮಿಕ ಚಿಂತನೆಗಳ ವೈವಿಧ್ಯಮಯ ಜನರ ಜೊತೆ ಸಂವಾದ ಮತ್ತು ವಾಗ್ವಾದ ಎರಡೂ ನಡೆಯುತ್ತಿದ್ದವು. ಬ್ರಿಟನ್ನಿನ ಮಧ್ಯಮ ವರ್ಗದ ಹಿನ್ನೆಲೆಯ ಸುಧಾರಕರು, ಅವರ ಹೆಣ್ಣು ಮಕ್ಕಳು ಅಥವಾ ಮದುವೆಯಾಗದ ದಾದಿಯರು ಅವರ ಮಾತುಗಳನ್ನು ವಿಶೇಷ ಆಸಕ್ತಿಯಿಂದ ಕೇಳುತ್ತಿದ್ದರು. ಆಗಿನ ಕೈಗಾರಿಕಾ ನಗರ ಮ್ಯಾಂಚೆಸ್ಟರ್ ಅಲ್ಲಿ ರಾಮಮೋಹನ ರಾಯರು ಪ್ರವಾಸದಲ್ಲಿದ್ದಾಗ, ಪುರುಷ ಹಾಗು ಮಹಿಳಾ ಕಾರ್ಮಿಕರು ಗುಂಪಾಗಿ ಅವರು ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದರು, ಕೈಕುಲುಕಲು, ಅಪ್ಪುಗೆ ನೀಡಲು ಕಾಯುತ್ತಿದ್ದರು. ತಮ್ಮ ಭಾಷಣದಲ್ಲಿ 1832ರ ಸುಧಾರಣಾ ಕಾನೂನನ್ನು ಜಾರಿಗೆ ತರುವಲ್ಲಿ ಮಹಾರಾಜನನ್ನು ಸಂಸತ್ತಿನ ಮಂತ್ರಿಗಳನ್ನು ಬೆಂಬಲಿಸುವಂತೆ ಕೋರುತ್ತಿದ್ದರು.

1831ರಲ್ಲಿ ನಾಲ್ಕನೆಯ ವಿಲಿಯಮ್ ನ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ರಾಮಮೋಹನ ರಾಯರು ಪಾಲ್ಗೊಂಡರು. 1832ರ ಮಹತ್ವದ ಸುಧಾರಣಾ ವಿಧೇಯಕ ಬ್ರಿಟಿಷ್ ಸಂಸತ್ತಿನಲ್ಲಿರುವುದು ಅವರ ಗಮನದಲ್ಲಿತ್ತು. ಬ್ರಿಟನ್ನಿನ ಆಡಳಿತದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ, ಮತದಾನದ ಹಕ್ಕನ್ನು ಸಮಾಜದ ವಿವಿಧ ಸ್ತರಗಳಿಗೆ ವಿಸ್ತರಿಸಿದ ಆ ಕಾನೂನಿನ ಬಗ್ಗೆ ಆಸಕ್ತಿ ಕುತೂಹಲ ಇತ್ತು. ಒಂದು ವೇಳೆ ವಿಧೇಯಕ ಸದನದ ಒಪ್ಪಿಗೆ ಪಡೆಯದಿದ್ದರೆ, ತಾನು ಇಂಗ್ಲೆಂಡ್ ಇಂದ ಆ ಕ್ಷಣವೇ ಮರಳಿ ಹೋಗುತ್ತಿದ್ದೆ ಎಂದೂ ಹೇಳಿಕೊಂಡಿದ್ದರು.1832ರ ಸುಧಾರಣಾ ಕಾನೂನು ಸಂಸತ್ತಿನ ಅನುಮೋದನೆ ಪಡೆದಾಗ, ಲಿವರ್ಪೂಲ್ ನ ಏಕಮೂರ್ತಿವಾದಿ ಸ್ನೇಹಿತ, ವ್ಯಾಪಾರಸ್ಥ ವಿಲಿಯಮ್ ರಥ್ಬೊನ್ ರಿಗೆ” ಇಂಗ್ಲೆಂಡ್ ನ ಸಶಕ್ತ ಜನರು, ಭ್ರಷ್ಟಾಚಾರ ಮತ್ತು ಸ್ವಾರ್ಥಗಳನ್ನು ಸಾರ್ವಜನಿಕ ಬದುಕಿನಿಂದ ದೂರ ಇಡುವಲ್ಲಿ ಅಂತೂ ಯಶಸ್ವಿ ಆಗಬಹುದು” ಎಂದು ಬರೆದಿದ್ದರು.

ಪಶ್ಚಿಮದ ಕಲ್ಪನೆ ಮತ್ತು ಭೇಟಿಯನ್ನು ಇಷ್ಟಪಟ್ಟಿದ್ದ ಅವರ ಕೆಲವು ಸಾಲುಗಳು ಹೀಗಿದ್ದವು; “ಯುರೋಪ್ ನ ಕಲ್ಪನೆಯನ್ನು ಮೆಚ್ಚಿದ್ದೇನೆ, ಸಾಹಿತ್ಯವನ್ನು ಉತ್ಸಾಹದಿಂದ ಪ್ರೋತ್ಸಾಹಿಸಲಾಗುತ್ತದೆ, ಜ್ಞಾನ ಎಲ್ಲ ಕಡೆಯೂ ಹರಿದಿದೆ. ಅಂತಹ ಸಾಮಾಜಿಕಯಂತ್ರ ಬಹುತೇಕ ಪರಿಪೂರ್ಣತೆಯನ್ನು ಕಂಡಿದೆ, ರಾಜಕೀಯ ದಿನದಿನವೂ ಅಭಿವೃದ್ಧಿ ಕಾಣುತ್ತಿದೆ. ನೈತಿಕ ಕರ್ತವ್ಯಗಳನ್ನು ಎಲ್ಲರೂ ಎಚ್ಚರಿಕೆಯಿಂದ ಪಾಲಿಸುತ್ತಿದ್ದಾರೆ. ನಾನು ಪಶ್ಚಿಮವನ್ನು ನಿರಂತರ ಭೇಟಿ ಮಾಡಲು ನಿರಂತರ ಯತ್ನ ಮಾಡುತ್ತಿರುವೆ. ನನ್ನನ್ನು ಇಲ್ಲಿನ ಅನುಭವಗಳು ತೃಪ್ತಿ ಪಡಿಸಿವೆ”. ರಾಮಮೋಹನ ರಾಯರಿಗೆ ಯುರೋಪ್ ನಾಗರಿಕತೆಯನ್ನು ನೋಡಿ ಸುತ್ತಿ ಬರುವ ಮನಸ್ಸಿತ್ತು. ದಶಕಗಳ ಕಾಲ ಮನಪೂರ್ವಕ ಮೆಚ್ಚಿಕೊಂಡ ಯೂರೋಪಿನ ದರ್ಶನ ಪಡೆಯಲು 1832ರ ಬೇಸಿಗೆಯಲ್ಲಿ ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ಗೆ ಪ್ರಯಾಣಿಸಿದರು. ಅಲ್ಲಿನ ರಾಜಕೀಯ ಬೆಳವಣಿಗೆಗಳು ಅವರನ್ನು ಯಾವಾಗಲೂ ಪ್ರಚೋದಿಸಿ ಪ್ರೇರೇಪಿಸುತ್ತಿದ್ದವು. ಅಲ್ಪ ಕಾಲದ ಭೇಟಿ ಅದಾಗಿದ್ದರೂ ಅವರ ಮಾತುಗಳನ್ನು ಕೇಳಲು ಬಂದ ಪ್ರೇಕ್ಷಕರಲ್ಲಿ ಮಹಾರಾಜ ಲೂಯಿಸ್ ಫಿಲಿಪ್ ಕೂಡ ಐದ್ದ. ಅದೇ ವರ್ಷ ಇಂಗ್ಲೆಂಡ್ ಗೆ ಮರಳಿ ಭಾರತೀಯರಿಗೆ ಹಾಗು ಇಂಗ್ಲಿಷ್ ಜನರ ನಡುವೆ ಧರ್ಮ ನಿರಪೇಕ್ಷ ಸಮಾನತೆಯನ್ನು ತರುವ ಕಾನೂನಿಗೊಸ್ಕರ ತನ್ನ ಪ್ರಭಾವದಿಂದ ಲಾಬಿ ನಡೆಸಿದರು. ಭಾರತೀಯ ಜ್ಯೂರಿ ಕಾನೂನು ಅದೇ ವರ್ಷ ಪಾಸಾಯಿತು. ಆಮದಾದ ಉಪ್ಪನ್ನು ತರಿಸಿಕೊಂಡು ಭಾರತದಲ್ಲಿನ ಉಪ್ಪಿನ ಏಕಸ್ವಾಮ್ಯವನ್ನು ಎದುರಿಸಬೇಕು ಎಂದು ಗಟ್ಟಿಯಾಗಿ ನಂಬಿದ್ದರು.

1832ರಲ್ಲಿ ರಾಮ್ ಮೋಹನ್ ಜನಪ್ರತಿನಿಧಿಗಳ ಸೆಲೆಕ್ಟ್ ಕಮಿಟಿಯ ವಿಚಾರಣೆಯಲ್ಲಿ ಪಾಲ್ಗೊಂಡರು. ಕಂಪೆನಿಯ ಆಡಳಿತದಲ್ಲಿ ಭಾರತದ ನೈತಿಕ ವ್ಯವಸ್ಥೆ ವಸ್ತುಗಳ ಕುರಿತು ಚರ್ಚಿಸಿದರು. ಬ್ರಿಟಿಷ್ ಸಂಸತ್ತಿಗೆ ನ್ಯಾಯಾಂಗ ಹಾಗು ಹಣಕಾಸು ವ್ಯವಸ್ಥೆಗಳ ವಿಷಯದಲ್ಲಿ ಭಾರತೀಯನೊಬ್ಬನ ದೃಷ್ಟಿಕೋನ ಅಪೇಕ್ಷಿಸುತ್ತಿದ್ದ ಆಂಗ್ಲ ಸರಕಾರ, ರಾಜಾರಾಮ್ ಮೋಹನ ರಾಯರ ಅಭಿಪ್ರಾಯದ ಬಗ್ಗೆ ಆಸಕ್ತಿ ವಹಿಸಿತು. ಯೂರೋಪಿನ ವಸಾಹತಿನ ಬಗ್ಗೆ ಅವರ ಹೇಳಿಕೆ ಮತ್ತು ಟಿಪ್ಪಣಿ,1833ರ ಚಾರ್ಟರ್ ಆಕ್ಟ್ ಗೆ ದಾರಿಯಾಯಿತು. ಆ ಕಾಯಿದೆ ಯುರೋಪಿಯನ್ನರಿಗೆ ಭಾರತದಲ್ಲಿ ಪರವಾನಿಗೆ ಇಲ್ಲದೆ ಕೆಲವು ಪ್ರದೇಶಗಳಲ್ಲಿ ನೆಲೆಸಲು ಅನುವು ಮಾಡಿಕೊಟ್ಟಿತು.

1831 ರಿಂದ 1833ರ ತನಕದ ಇಂಗ್ಲೆಂಡ್ ತಿರುಗಾಟವನ್ನು ಬೇರೆಬೇರೆ ಕಾರಣಗಳಿಗೆ ಮಹತ್ವಪೂರ್ಣ ಎಂದು ಈಗಲೂ ಬ್ರಿಟನ್ನಿನ ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ರಾಮಮೋಹನ ರಾಯರರ ಯೋಚನೆಗಳು, ಬಿಟ್ಟುಹೋದ ಹೇಳಿಕೆಗಳು ಬ್ರಿಟಿಷ್ ವಸಾಹತಿನ ಅಧ್ಯಯನದ ಬಗ್ಗೆ ಅಮೂಲ್ಯ ಮಾಹಿತಿಯಾಗಿ ಉಳಿದುಕೊಂಡಿವೆ. ಅಂತರ್ಧರ್ಮೀಯ ಸಂವಾದದ ಮೊದಮೊದಲ ಉದಾಹರಣೆಯಾಗಿ, ಬ್ರಿಟಿಷರ ಕಲ್ಪನೆಯಲ್ಲಿ ಭಾರತದ ಚಿತ್ರಣವಾಗಿ, ಕ್ರೈಸ್ತ ಮತಕ್ಕೆ ಭಾರತದ ಪ್ರತಿಕ್ರಿಯೆಯಾಗಿ ಇತಿಹಾಸಕಾರರಿಗೆ ಕಾಣಿಸಿದೆ. ಸತಿ ಪದ್ಧತಿಯ ನಿಷೇಧದ ಪರವಾಗಿ ಅವರು ಲಂಡನ್ ಅಲ್ಲಿ ಮಂಡಿಸಿದ ವಾದಗಳು ಭಾರತೀಯ ಮಹಿಳೆಯರು ಅಂದು ಮಾತ್ರವಲ್ಲದೇ ಇಂದಿಗೂ ಎದುರಿಸುವ ನೈತಿಕ ಹಾಗು ಸಾಂಸ್ಕೃತಿಕ ಸವಾಲುಗಳಿಗೆ ಸಂಬಂಧಿಸಿವೆ.

1833ರ ಬೇಸಿಗೆಯ ಕೊನೆಯಲ್ಲಿ ಬ್ರಿಸ್ಟಲ್ ಗೆ ಬಂದಿದ್ದ ರಾಮಮೋಹನ ರಾಯರು ಮೆನೆಂಜಿಟೈಸ್ ಕಾಯಿಲೆಯಿಂದ ಮಡಿದರು. ಬ್ರಿಸ್ಟಲ್ ನಲ್ಲಿ ಇದ್ದ ಮನೆಯಲ್ಲಿಯೇ ಅವರನ್ನು ಹೂಳಲಾಯಿತು, 1843ರಲ್ಲಿ ಅವಶೇಷಗಳನ್ನು, ವಿಶೇಷವಾಗಿ ನಿರ್ಮಿಸಲಾದ ಸಮಾಧಿಗೆ ವರ್ಗಾಯಿಸಲಾಯಿತು. ಅವರ ವ್ಯಕ್ತಿತ್ವವನ್ನು ಚಿತ್ರಿಸುವ ಕೆಲವು ಸಾಲುಗಳನ್ನು ಸಮಾಧಿಯ ಕಲ್ಲಿನ ಮೇಲೆ ಕೆತ್ತಿ, ಕೆಳಗೆ ವಿರಮಿಸಿರುವ ಸುಧಾರಕನಿಗೆ ವಿದಾಯ ಹೇಳಲಾಯಿತು. ಅಂದು ಸಮಾಧಿಯನ್ನು ಕಟ್ಟುವಲ್ಲಿ ಮತ್ತೆ ಇಂದಿಗೂ ನಿರ್ವಹಿಸುವಲ್ಲಿ ದ್ವಾರಕಾನಾಥ ಟ್ಯಾಗೋರರಿಂದ ಹಿಡಿದು ಈ ಕಾಲದ ಅಭಿಮಾನಿಗಳ, ಸಮಾನ ಮನಸ್ಕರ ಪೋಷಣೆ ದೇಣಿಗೆ ಸಹಾಯ ಮಾಡಿದೆ. ಇನ್ನು ಲಂಡನ್ ನಲ್ಲಿ ಇದ್ದಾಗ ವಾಸಿಸುತ್ತಿದ್ದ, ಬ್ಲೂಮ್ಸ್‌ಬರಿ ಪ್ರದೇಶದ ಬೆಡ್ಫೋರ್ಡ್ ಚೌಕದ ೪೯ನೆಯ ನಂಬ್ರದ ಮನೆಯ ಗೋಡೆಯ ಮೇಲೆ 1985ರಲ್ಲಿ ನೆಡಲಾದ ನೀಲಿ ಫಲಕ “1772ರಲ್ಲಿ ಹುಟ್ಟಿ 1833ರಲ್ಲಿ ಮಡಿದ ಭಾರತೀಯ ವಿದ್ವಾಂಸ, ಸಮಾಜ ಸುಧಾರಕ” ಇಲ್ಲಿದ್ದರು ಎಂದೂ ನೆನಪು ಮಾಡುತ್ತಿದೆ.