”ನೀನು ಆಸ್ಪತ್ರೆಯಲ್ಲಿದ್ದೆ. ನಾನು ಹೊಸ್ತಿಲ ಮೇಲೆ… ಮುಂದೊಂದು ದಿನ ಆ ಭಗವಂತ ನನ್ನ ಹೊಟ್ಟೆಯೊಳಗೂ ಒಂದು ಬೊಂಬೆಯನ್ನು ಅಡಗಿಸಿಡಬಹುದು ಎಂಬ ಚಿಕ್ಕ ಅರಿವೂ ಇಲ್ಲದ ನಾನು, ನೀನು ಯಾಕಾಗಿ ಎಲ್ಲಿಗೆ ಹೋಗಿರಬಹುದೆಂದು ಊಹಿಸುತ್ತಾ ಯಾಕಾದರಾಗಲಿ, ಸಧ್ಯ ಆ ಹೊಟ್ಟೆ ಬೊಂಬೆಯ ಕಾಟ ತಪ್ಪಿದರೆ ಸಾಕೆಂದು ಜಪಿಸಹತ್ತಿದೆ. ಎಲ್ಲಾ ಹೆಣ್ಣಿಗೂ ಆ ತಾಯಿಯಾಗುವ ಹುಸಿಕಲ್ಪನೆಯೂ ಇಲ್ಲದ ಸ್ವಚ್ಛಂದ ದಿನಗಳೇ ಚಂದ ನೋಡು.”
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಎರಡನೇ ಕಂತು.

 

ಸುರಿದ ಮಳೆಯ ಸುರುವಿಗೆ ಚಿಗುರಿದ ಮಾವಿನ ರುಚಿ ನೋಡಿ ಕೋಗಿಲೆಗೆ ದನಿ ಬಂದಂತಿದೆ. ಅದರ ಕೂಗಿನ ಜೊತೆಜೊತೆಗೇ ತೆರೆದುಕೊಳ್ಳುವ ನೂರಾರು ಕತೆಗಳೂ ಮುಸುಕು ಸರಿಸಿ ನರ್ತಿಸುತ್ತಿವೆ. ಈ ಕೋಗಿಲೆಗೋ, ಏನೊಂದೂ ತಿಳಿಯದು. ಅದಕ್ಕೆ ಹಸಿರು ಚಿಗುರಿದರೆ ಸಾಕು! ಈ ಮಹಾನಗರದ ಎತ್ತೆತ್ತರದ ಮಹಡಿಗಳ ನಡುವೆ ಅಲ್ಲೆಲ್ಲೋ ಒಂಟಿ ಮರವೊಂದು ಬೇಸರದಿಂದ ನಿಂತೇ ಇದೆ. ಹಾಗೆಂದೇ ರೋಬೋಟುಗಳಂತೆ ಓಡಾಡುವ ಜನರ ಮಧ್ಯೆ ಈ ಜೀವತಂತುವೊಂದು ಬೆಳಗಿನಿಂದಲೂ ಮೀಟುತ್ತಿದೆ. ಆಫೀಸಿನ ಕಿಟಕಿಯಿಂದಾಚೆಗೆ ಕಿವಿ ನೆಟ್ಟು ನಾನೂ ಸುಮ್ಮನೇ ಸೋಲುತ್ತಿದ್ದೇನೆ. ಕೋಗಿಲೆ ಎಲ್ಲಿ ಕೂಗಿದರೂ ಕೋಗಿಲೆಯೇ. ಹಾಗೇ ನಾನೂ ಕೂಡಾ, ಈ ಬಹುಮಹಡಿಯ ಗೋಡೆಗಳೇ ನನ್ನ ಪ್ರಪಂಚವಾಗಿ ಉಳಿದುಕೊಂಡವಳು, ಆದರೂ ಎಲ್ಲೋ ಒಂದುಕಡೆ ನೆನಪುಗಳ ಸಮಾಧಿಯೊಳಗೆ ಕೂತು ಹೂತ ಸಮಯದ ಲೆಕ್ಕ ಹಾಕುತ್ತಾ ಭವಿಷ್ಯಕ್ಕೆ ನೆನಪಿನ ಚಮಕಿ ಅಂಟಿಸುತ್ತಾ ಸುಮ್ಮಗೆ ನಡೆಯುವವಳು.

ಮನೆಯ ಸುತ್ತಲ ಮರಗಿಡಗಳಲ್ಲಿ ಲೆಕ್ಕವಿಲ್ಲದಷ್ಟು ಕೋಗಿಲೆಗಳೂ ಗಿಳಿಗಳೂ ಬೀಡು ಬಿಟ್ಟಿದ್ದವು. ಸುಮ್ಮನೇ ಹಿತ್ತಿಲಲ್ಲಿ ಒಗೆಯುವ ಕಲ್ಲಿನ ಮೇಲೆ ನಿಂತು ಅವುಗಳನ್ನೇ ಅನುಕರಿಸುವುದು ನನ್ನ ಪ್ರಿಯವಾದ ಆಟಗಳಲ್ಲೊಂದು. ಅವು ಬೇಸರಿಸುತ್ತಿರಲಿಲ್ಲ, ನನ್ನೊಂದಿಗೆ ಜಗಳ ಕಾಯುತ್ತಿರಲಿಲ್ಲ. ಅವು ಕಳೆದು ನಾನು, ನಾನು ಕಳೆದು ಅವು… ಕೂಗಿದ್ದೇಕೂಗಿದ್ದು. ಕುವ್ವೂ… ಕುವ್ವೂ… ಹೊತ್ತಾಗುವ ಕಾಳಜಿ ಮೂಡುತ್ತಿದ್ದುದು ಕತ್ತಲಾದ ಮೇಲೆಯೇ. ಆ ಒಗೆಯುವ ಕಲ್ಲೋ, ದೊಡ್ಡ ಬೆಟ್ಟದ ಹಾಗೆ! ಹತ್ತಿದರೆ ಏನೋ ವಿಜಯೋತ್ಸಾಹ! ಅದೊಂದು ಸಂಜೆ ನಾನು ಹಾಗೆ ಒಗೆಯೋ ಕಲ್ಲಿನ ಮೇಲೆ ಕೂತು ಕೋಗಿಲೆಯೊಟ್ಟಿಗೆ ಮಾತಾಡುತ್ತಿರುವಾಗ ಮನೆಯೊಳಗೆ ಏನೋ ಗಡಿಬಿಡಿ ಶುರುವಾಗಿತ್ತು.

ನಾನು ಓಡಿ ಬಂದು ನೋಡುವಷ್ಟರಲ್ಲಿ ಅತ್ತೆ ನಿನ್ನ ಕೈ ಹಿಡಿದು ಮನೆಯಿಂದ ಹೊರನಡೆಸುತ್ತಿದ್ದಳು. ಅತ್ತ ಅಂಗಳದಲ್ಲಿ ಹನೀಫಣ್ಣನ ಆಟೋ ನಿಂತಿತ್ತು. ನಿನ್ನ ಕಣ್ಣಲ್ಲಿ ನೋವು ಮಡುಗಟ್ಟಿತ್ತು. ನಿನ್ನ ಹೊಟ್ಟೆಯೋ, ದಿನೇ ದಿನೇ ಉಬ್ಬರಿಸುವುದು ಹೆಚ್ಚಾಗುತ್ತಿತ್ತು. ಎಷ್ಟು ದಿನಗಳಿಂದ ಹಾಗೆ ಊದಿಬಿಟ್ಟಿತ್ತು ದೇವರೇ! ನೀನು ಇತ್ತಿತ್ತಲಾಗೆ ನಡೆಯಲೂ ಏದುಸಿರು ಬಿಡುತ್ತಿದ್ದೆ. ಅದು ಹೇಗೆ ಆ ಭಾರ ಹೊತ್ತು ನಡೆಯುತ್ತಿದ್ದೆಯೋ,
‘ಅಮ್ಮೀ, ಏನೇ ಇದೂ? ಅಬ್ಬು ಆಗಿದ್ಯಾ?’ ಅಂತ ಕೇಳಿದರೆ ನಗುತ್ತಿದ್ದೆ.
‘ಇಲ್ಲ ಕಂದಾ, ಅಬ್ಬುಅಲ್ಲ, ಒಳಗೆ ಪುಟ್ಟ ಬೊಂಬೆಯಿದೆ  ಕಣೋ…’ ಅನ್ನುತ್ತಿದ್ದೆ.
“ಯಾಕೆ ಹಾಗೆ ಇಟ್ಕೊಂಡಿದ್ದೀಯಾ.. ನೋವಾಗುತ್ತೆ, ಹೊರಗೆತೆಗೀ..” ಅನ್ನುವ ನನ್ನ ಮುಗ್ಧತೆಗೆ-
“ಮಾಮಿ ಹೇಳೋವರೆಗೂ ತೆಗೆಯೋಹಾಗಿಲ್ಲ ಕಂದಾ…” ಅಂತ ಹೇಳಿ ಮನುಷ್ಯನ ಕೆಲಸಕ್ಕೆ ದೇವರನ್ನು ಹೊಣೆ ಮಾಡುತ್ತಿದ್ದೆ. ‘ಅಮ್ಮನ ಹೊಟ್ಟೆಯ ಬೊಂಬೆ ತೆಗೆಯಬಾರದೇ..! ಅವಳು ಆಟಾಡಕ್ಕೇ ಬರ್ತಿಲ್ಲ ಗೊತ್ತಾ ನಿಂಗೇ..’ ಅಂತ ಕೋಪಗೊಂಡು ಎಷ್ಟೋ ಬಾರಿ ದೇವರ ಮನೆಯ ಹೊರಗೆ ನಿಂತು ಹೇಳಿಕೊಂಡಿದ್ದೆ. ದೇವರೆಂಬೋನೊಬ್ಬ ಇದ್ದು ಅವನಿಗೆ ಕಿವಿಗಳು ಮಾತ್ರ ಕೇಳಿದ್ದರೆ ಈ ಪ್ರಪಂಚ ಹೇಗಿರುತ್ತಿತ್ತೋ? ನಾವೆಲ್ಲಾ ಏನೇನು ಹೇಳಿಕೊಳ್ಳುತ್ತಿದ್ದೆವೋ, ಭೂಮಿ ಮೇಲೆ ಅದೆಷ್ಟು ‘ಹಿಯರಿಂಗ್ ಸೆಂಟರ್ಸ್’ ತೆರೆಯಲ್ಪಡುತ್ತಿದ್ದವೋ, ಒಂದರ್ಧ ಗಂಟೆ ದೇವರಿಗೆ ಏನಾದರೂ ಹೇಳಿಕೊಳ್ಳಲು ಏನು ತೆರಿಗೆ ನೀಡಬೇಕಿತ್ತೋ… ಎಲ್ಲಕ್ಕಿಂತ ಹೆಚ್ಚಾಗಿ ಕೇಳಿ ಕೇಳಿ ದೇವರೆಂಬೋ ದೇವರ ಗತಿ ಏನಾಗಿರುತ್ತಿತ್ತೋ..? ಅಂತೆಲ್ಲಾ ಈಗ ಒಮ್ಮೊಮ್ಮೆ ಅನ್ನಿಸಿ, ಏನೇನೋ ನೆನೆದು ತಡೆಯಲಾರದಷ್ಟು ನಗುವೂ ಬಂದುಬಿಡುತ್ತದೆ. ಎಲ್ಲಿದ್ದರೆ ಅಲ್ಲಿಯೇ ಪಕಪಕನೆ ನಕ್ಕು ಪಕ್ಕದವರ ಕಣ್ಣಿಗೆ ಆಹಾರವಾಗುವ ಹುಚ್ಚು ಇನ್ನೂ ವಾಸಿಯಾಗಿಲ್ಲ ನೋಡು. ಅಮ್ಮಾ… ನೀನು ಅವತ್ತು ಹೇಳಿದ ಆ ಊಹಾತೀತ ವಿಚಿತ್ರ ಬೊಂಬೆಯ ಕಥೆ ನನ್ನ ಮಟ್ಟಿಗೆ ಸಿಟ್ಟು ಹಾಗೂ ಕುತೂಹಲ ಎರಡೂ ಸಮಾಸಮ ಬೆಳೆಯಲು ಕಾರಣವಾಗಿತ್ತೆಂಬುದು ನಿನಗೆ ಹೇಗೆ ತಿಳಿಯಬೇಕು! ನಾನು ಓಡಿ ಬಾಗಿಲ ಬಳಿ ಬಂದಿದ್ದೆ. ಅತ್ತೆ ‘ಇರು, ಇರೂ… ಅಮ್ಮನ್ನ ಡಾಕ್ಟರ್ ಹತ್ರ ಕರಕೊಂಡು ಹೋಗಬೇಕು. ನೀನು ಇಲ್ಲೇ ಇರಬೇಕು.’ ಅಂದು ನನ್ನ ತಡೆದು ನಿನ್ನ ನಡೆಸಿಕೊಂಡು ಮುನ್ನಡೆದಳು.

ಮನೆಯ ಸುತ್ತಲ ಮರಗಿಡಗಳಲ್ಲಿ ಲೆಕ್ಕವಿಲ್ಲದಷ್ಟು ಕೋಗಿಲೆಗಳೂ ಗಿಳಿಗಳೂ ಬೀಡು ಬಿಟ್ಟಿದ್ದವು. ಸುಮ್ಮನೇ ಹಿತ್ತಿಲಲ್ಲಿ ಒಗೆಯುವ ಕಲ್ಲಿನ ಮೇಲೆ ನಿಂತು ಅವುಗಳನ್ನೇ ಅನುಕರಿಸುವುದು ನನ್ನ ಪ್ರಿಯವಾದ ಆಟಗಳಲ್ಲೊಂದು. ಅವು ಬೇಸರಿಸುತ್ತಿರಲಿಲ್ಲ, ನನ್ನೊಂದಿಗೆ ಜಗಳ ಕಾಯುತ್ತಿರಲಿಲ್ಲ. ಅವು ಕಳೆದು ನಾನು, ನಾನು ಕಳೆದು ಅವು… ಕೂಗಿದ್ದೇಕೂಗಿದ್ದು. ಕುವ್ವೂ… ಕುವ್ವೂ… ಹೊತ್ತಾಗುವ ಕಾಳಜಿ ಮೂಡುತ್ತಿದ್ದುದು ಕತ್ತಲಾದ ಮೇಲೆಯೇ. ಆ ಒಗೆಯುವ ಕಲ್ಲೋ, ದೊಡ್ಡ ಬೆಟ್ಟದ ಹಾಗೆ! ಹತ್ತಿದರೆ ಏನೋ ವಿಜಯೋತ್ಸಾಹ! ಅದೊಂದು ಸಂಜೆ ನಾನು ಹಾಗೆ ಒಗೆಯೋ ಕಲ್ಲಿನ ಮೇಲೆ ಕೂತು ಕೋಗಿಲೆಯೊಟ್ಟಿಗೆ ಮಾತಾಡುತ್ತಿರುವಾಗ ಮನೆಯೊಳಗೆ ಏನೋ ಗಡಿಬಿಡಿ ಶುರುವಾಗಿತ್ತು.

ನೀನು ಎರಡೂ ಕೈಗಳಿಂದ ಹೊಟ್ಟೆಯನ್ನು ಗಟ್ಟಿ ಹಿಡಿದಿದ್ದೆ. ನೋವಿನಿಂದ ಮುಖ ಕಿವುಚುತ್ತಿದ್ದೆ. ನನ್ನೆಡೆಗೊಮ್ಮೆ ಆದ್ರಳಾಗಿ ನೋಡಿ ‘ಪುಟ್ಟೂ…’ ಅಂತ ಮಾತ್ರ ಕೂಗಿ ಮತ್ತೇನೂ ಹೇಳದೇ ಮುನ್ನಡೆದು ಆಟೋ ಹತ್ತಿದೆ. ನಂಗೆ ಅಳು ಉಕ್ಕಿ ಬಂದಿತ್ತು. ಎಂದಿನಂತೆ ಅಪ್ಪ ಮನೆಯಲ್ಲಿರಲಿಲ್ಲ. ಅತ್ತೆ ಹಿಂತಿರುಗಿ ಅಜ್ಜನನ್ನು ಕುರಿತು ‘ಅವರ ಮನೆಯವರಿಗೆ ಒಂದು ಟೆಲಿಗ್ರಾಂ ಕೊಡು ಅಣ್ಣಾ..’ ಅಂತಷ್ಟೇ ಹೇಳಿ ತಾನೂ ಆಟೋ ಹತ್ತಿದಳು. ಅವಳ ನಿರ್ವಿಕಾರ ಭಾವ, ಮಾತು ನನಗೇನೂ ಹೊಸತಾಗಿರಲಿಲ್ಲ. ಅಜ್ಜನೂ ‘ಹೋ, ಸರಿ ಸರಿ.’ ಅನ್ನುತ್ತಾ ಬಾಗಿಲಿಗೆ ತಗುಲಿಸಿದ್ದ ಅಂಗಿ ಏರಿಸಿಕೊಳ್ಳುತ್ತಾ ಕೂಗಳತೆಯ ದೂರದ ಪೋಸ್ಟಾಫೀಸಿಗೆ ಹೊರಟೇಬಿಟ್ಟರು. ಮನೆಯಂಗಳದಲ್ಲಿ ನಾನೊಬ್ಬಳೇ… ಸಂಜೆಗೆ ಅರಳಿದ ಹೂಗಳ ಪರಿಮಳದ ಜೊತೆಗೆ ನಡೆಯುತ್ತಿರುವುದೇನು ಎಂಬ ಕಿಂಚಿತ್ ಅರಿವೂ ಇಲ್ಲದೇ ನೀನು ಹೋದ ದಿಕ್ಕನ್ನೇ ನೋಡುತ್ತಾ ಗೊಂಬೆಯಂತೆ ನಿಂತುಬಿಟ್ಟಿದ್ದೆ. ಕೆನ್ನೆಗಿಳಿದ ಎರಡು ಮುತ್ತಿನ ಹನಿಗಳು ಗಲ್ಲ ಮುಟ್ಟಲು ಓಡುತ್ತಿದ್ದವು. ಗಾಳಿ ತನಗೇನೂ ತಿಳಿದಿಲ್ಲವೋ ಅಥವಾ ಬೇಕಿಲ್ಲವೋ ಎಂಬಂತೆ ತನ್ನ ಪಾಡಿಗೆ ತಾನು ತಣ್ಣಗೆ ಬೀಸುತ್ತಲೇ ಇತ್ತು. ನಾನು ಅಳುತ್ತಲೇ ಇದ್ದೆ. ಯಾರಾದರೂ ಆ ಬೊಂಬೇನ ಹೊರತೆಗೆದು ನಿನ್ನ ಉಳಿಸಬಾರದೇ..! ಯಾಕಿಂಥಾ ಆಟ ಆಡಿಸ್ತಾನೆ ಮಾಮಿ..?

‘ನೀನು ನಂಗೆ ಬೇಕು ಅಮ್ಮಾ.. ಆ ಬೊಂಬೇನ ಬಿಸಾಡಿ ಬೇಗ ಬಂದುಬಿಡೂ..’ ಅಂತ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ಮನೆಯ ಎದುರಿನ ಬಯಲಿನಲ್ಲಿ ನನ್ನ ಸ್ನೇಹಿತರು ಈ ಪ್ರಪಂಚಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕುಂಟೇಬಿಲ್ಲೆಯ ಬಚ್ಚೆಯೊಂದಕ್ಕೆ ವೀರಾವೇಶದಿಂದ ಕಚ್ಚಾಡುತ್ತಿದ್ದರು. ನಡುನಡುವೆ ಒಬ್ಬರನ್ನೊಬ್ಬರು ಪಟಪಟನೆ ಹೊಡೆದುಕೊಳ್ಳುತ್ತಲೂ ಮತ್ತೆ ರಾಜಿಯಾಗುತ್ತಲೂ ಬಚ್ಚೆ ಹಿಡಿದಿದ್ದವಳ ಮನವೊಲಿಸಿ ಅದನ್ನು ಎಗರಿಸಲು ನೋಡುತ್ತಾ ಅದು ಸಾಧ್ಯವಾಗದಿದ್ದಾಗ ‘ಲೇ, ಠೂ ಬಿಟ್ಬಿಡಣ ಕಣ್ರೇ… ಇವ್ಳು ಬಚ್ಚೆ ಕೊಡಲ್ಲ.’ ಎಂತ ಪೇಟೆಬೀದಿಯ ದಲ್ಲಾಳಿಗಳಂತೆ ತಮ್ಮ ಜಾಣ್ಮೆ ಪ್ರದರ್ಶಿಸುತ್ತಲೂ ಇದ್ದರು. ಯಾವಾಗಲೂ ನನ್ನ ದೋಸ್ತಿಗಳು ನನಗಿಂತ ತುಸು ದೊಡ್ಡವರೇ ಆಗಿರುವುದು ಚಿಕ್ಕಂದಿನಿಂದಲೂ ಬಂದ ಚಾಳಿ. ನೀನು ನನ್ನ ಮೊನ್ನೆ ಮೊನ್ನೆಯವರೆಗೂ ಅದಕ್ಕಾಗೇ ಹೀಯಾಳಿಸಿದ್ದೂ ನಾನು ಮರೆತಿಲ್ಲ. ಆ ಕ್ಷಣ ಅವರ ಬಳಿ ಓಡಿಹೋಗಿ ಅವರ ಬಚ್ಚೆ-ಸಮರದಲ್ಲಿ ಪಾಲ್ಗೊಳ್ಳುವ ಮನಸಾದರೂ ಸುತ್ತಲೂ ಮುತ್ತುತ್ತಿದ್ದ ಕತ್ತಲು ಯಾಕೋ ಭಯಾನಕವೆನಿಸಿ ಸುಮ್ಮನೆ ನನ್ನ ಪುಟ್ಟ ಗೊಂಬೆ ತಬ್ಬಿ ನಿಂತಿದ್ದೆ. ದೂರದಲ್ಲಿ ಅಜ್ಜ ಬರುತ್ತಿರುವುದು ಕಾಣಿಸಿತು.

ಕತ್ತಲಾಗದ ವಿನಃ ಅಪ್ಪನೇನೂ ಮನೆ ಸೇರುತ್ತಿರಲಿಲ್ಲ. ಅದು ಎಷ್ಟು ಗಂಟೆಯೋ ನನಗೆ ತಿಳಿಯುತ್ತಲೂ ಇರಲಿಲ್ಲ. ಅಮ್ಮನ ಅಡುಗೆಮನೆ ಕೆಲಸವಂತೂ ಮುಗಿದಿರುತ್ತಿತ್ತು. ಸಮಯ ಹೇಳೆಂದರೆ ‘ರ’ಕಾರ ಬರದ ನಾನು ‘ಆಯೂವಯೆ’ ಅನ್ನುತ್ತಿದ್ದೆನಂತೆ, ಮಾಮ ಯಾವಾಗಲೂ ಕಿಚಾಯಿಸುತ್ತಿದ್ದ. ಆ ‘ಆರೂವರೆ’ ಅಪ್ಪನ ಬರುವಿನ ಕಾಲವೋ, ನೀನು ದೇವರಿಗೆ ಬೆಳಕು ಕಾಣಿಸುತ್ತಿದ್ದ ಸಮಯವೋ, ಅಜ್ಜನ ಗೊಣಗು ಮೇರು ಮುಟ್ಟುವ ಸಂದರ್ಭವೋ ಅಂತೂ ಅಪ್ಪನು ಬಂದವರೇ ಕೈಕಾಲು ತೊಳೆದು ಬಟ್ಟೆ ಬದಲಿಸಿ ಬೀದಿಬಾಗಿಲಿಗೆ ಹೋಗುತ್ತಿದ್ದರು. ಹೂದೋಟದವರೆಗೂ ನಡೆದು ಮುಂದೆ ಕೈಕಟ್ಟಿ ಎದೆ ಹಿಗ್ಗಿಸಿ ನಿಲ್ಲುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಅಲ್ಲಿ ಅಪ್ಪನ ಹಲವು ಸ್ನೇಹಿತರು ಬಂದು ಸೇರುತ್ತಿದ್ದರು. ಹಾಗೆ ಅಪ್ಪ ಬಿಳೀ ಬನೀನು ಪಂಚೆ ತೊಟ್ಟು ಕೈಕಟ್ಟಿ ಅಂಗಳದಲ್ಲಿ ಮಾತಾಡುತ್ತಾ ಗಂಭೀರವಾಗಿ ನಗುತ್ತಾ ನಿಲ್ಲುತ್ತಿದ್ದ ಆ ದೃಶ್ಯ ಇಂದಿಗೂ ಮನಸಲ್ಲಿ ಅಚ್ಚೊತ್ತಿದಂತಿದೆ. ‘ಹಾಗಲ್ಲ ಕಣೋ ಗೋಪೀ, ಅದು ನೀನಂದಷ್ಟು ಸುಲಭವಲ್ಲ. ರಾಜಕೀಯಾಂದ್ರೆ ನೂರೆಂಟಿರುತ್ತೆ.’ ಅಂತ ಇವರಂದರೆ ಗೋಪಣ್ಣ ಮಾಮ ಹೌದೌದು ಎಂಬಂತೆ ತಲೆ ಹಾಕುತ್ತಾ ನಿಲ್ಲುತ್ತಿದ್ದ. ಆಗೊಮ್ಮೆ ಈಗೊಮ್ಮೆ ಏನೇನೋ ಹೇಳಿಕೊಂಡು ಸ್ನೇಹಿತರೆಲ್ಲಾ ಗಹಗಹಿಸಿ ನಗುವರು. ಕೆಲವೊಮ್ಮೆ ಅವರ ಹೆಂಡಿರಾದ ಸಂಧ್ಯಾ ಮಾಮಿ, ವನಜಾ ಮಾಮಿಯೂ ಇವರ ಮಾತಿಗೆ ದನಿ ಸೇರಿಸಿ ಏನೇನೋ ಹೇಳಿ ನಗುವರು. ಅಪ್ಪನು ‘ಬಿಡಿ ಅತ್ಗೇ, ಇವನಿಗೆ ಬುದ್ಧಿ ಬರಲ್ಲ, ನಿಮ್ಮ ಕಷ್ಟ ತೀರಲ್ಲ.’ ಅನ್ನುವರು. ಆಗ ಎಲ್ಲರೂ ಗೋಪಣ್ಣ ಮಾಮನ ಮುಖ ನೋಡಿ ಬಿದ್ದುಬಿದ್ದು ನಗುವರು. ಅಮ್ಮಾ.. ಇಡೀ ಬೀದಿಗೆ ಬೀದಿಯೇ ಸೇರಿ ನಕ್ಕು ಸಂಭ್ರಮಿಸುತ್ತಿದ್ದರೂ ನೀನೊಬ್ಬಳು ಯಾಕೆ ಎಂದೂ ಹೊರಬಂದು ಎಲ್ಲರಂತೆ ಅಂಗಳದಲ್ಲಿ ನಿಂತು ಮಾತಾಡುತ್ತಲೇ ಇರಲಿಲ್ಲ? ನನ್ನೊಡನೆ ನೂರೆಂಟು ಹರಟಿ, ಮುತ್ತು ಹರಡಿದಂತೆ ನಗುತ್ತಿದ್ದವಳು ಇವರ್ಯಾರಾದರೂ ಮಾತಾಡಿಸಿದಾಗ ಒಂದೆರಡು ಪದಗಳಲ್ಲೇ ಉತ್ತರಕೊಟ್ಟು ತಲೆತಗ್ಗಿಸಿ ಯಾಕೆ ಒಳನಡೆಯುತ್ತಿದ್ದೆ? ನೀನೂ ಕೊಂಚ ಹೊರಬಂದು ಮಾತಾಡಿದ್ದರೆ ನಾವಿಬ್ಬರೂ ಎಷ್ಟೊಂದು ನಗಬಹುದಿತ್ತು! ನೋಡು ನೋಡು, ಇವರನ್ನೆಲ್ಲಾ ನೋಡುತ್ತಾ ಮಜಾ ಅನ್ನಿಸಿ ನಿನ್ನನ್ನು ಕರೆಯಬೇಕೆಂದು ಮನಸಲ್ಲಿ ಬಂದದ್ದು ಮರೆತೇ ಹೋಗುತ್ತಿತ್ತು.

ದೇವರೆಂಬೋನೊಬ್ಬ ಇದ್ದು ಅವನಿಗೆ ಕಿವಿಗಳು ಮಾತ್ರ ಕೇಳಿದ್ದರೆ ಈ ಪ್ರಪಂಚ ಹೇಗಿರುತ್ತಿತ್ತೋ? ನಾವೆಲ್ಲಾ ಏನೇನು ಹೇಳಿಕೊಳ್ಳುತ್ತಿದ್ದೆವೋ, ಭೂಮಿ ಮೇಲೆ ಅದೆಷ್ಟು ‘ಹಿಯರಿಂಗ್ ಸೆಂಟರ್ಸ್’ ತೆರೆಯಲ್ಪಡುತ್ತಿದ್ದವೋ, ಒಂದರ್ಧಗಂಟೆ ದೇವರಿಗೆ ಏನಾದರೂ ಹೇಳಿಕೊಳ್ಳಲು ಏನು ತೆರಿಗೆ ನೀಡಬೇಕಿತ್ತೋ… ಎಲ್ಲಕ್ಕಿಂತ ಹೆಚ್ಚಾಗಿ ಕೇಳಿ ಕೇಳಿ ದೇವರೆಂಬೋ ದೇವರ ಗತಿ ಏನಾಗಿರುತ್ತಿತ್ತೋ..? ಅಂತೆಲ್ಲಾ ಈಗ ಒಮ್ಮೊಮ್ಮೆ ಅನ್ನಿಸಿ, ಏನೇನೋ ನೆನೆದು ತಡೆಯಲಾರದಷ್ಟು ನಗುವೂ ಬಂದುಬಿಡುತ್ತದೆ. ಎಲ್ಲಿದ್ದರೆ ಅಲ್ಲಿಯೇ ಪಕಪಕನೆ ನಕ್ಕು ಪಕ್ಕದವರ ಕಣ್ಣಿಗೆ ಆಹಾರವಾಗುವ ಹುಚ್ಚು ಇನ್ನೂ ವಾಸಿಯಾಗಿಲ್ಲ ನೋಡು. ಅಮ್ಮಾ… ನೀನು ಅವತ್ತು ಹೇಳಿದ ಆ ಊಹಾತೀತ ವಿಚಿತ್ರ ಬೊಂಬೆಯ ಕಥೆ ನನ್ನ ಮಟ್ಟಿಗೆ ಸಿಟ್ಟು ಹಾಗೂ ಕುತೂಹಲ ಎರಡೂ ಸಮಾಸಮ ಬೆಳೆಯಲು ಕಾರಣವಾಗಿತ್ತೆಂಬುದು ನಿನಗೆ ಹೇಗೆ ತಿಳಿಯಬೇಕು! ನಾನು ಓಡಿ ಬಾಗಿಲ ಬಳಿ ಬಂದಿದ್ದೆ.

ಸ್ನೇಹಿತರ ಮಧ್ಯೆ ಅಪ್ಪನನ್ನು ಸಿನೆಮಾ ಹೀರೋದಂತೆ ಕಂಡು ಮಂತ್ರಮುಗ್ಧಳಾಗುತ್ತಿದ್ದೆ. ಮೆಲ್ಲಗೆ ಸದ್ದಿಲ್ಲದೇ ಸ್ವಲ್ಪ ಸ್ವಲ್ಪವೇ ಹೊರಸರಿದು ಅಪ್ಪನ ಬಳಿಗೆ ಹೋಗಿ ಹುಸಿನಗುತ್ತಾ ಅವರ ಪಂಚೆ ಹಿಡಿದು ನಿಲ್ಲುತ್ತಿದ್ದೆ. ಒಂದು ಕೈಲಿ ಅವರ ಪಂಚೆ ಬಿಗಿದು ಹಿಡಿದು ಮತ್ತೊಂದು ಕೈ ಬೆರಳನ್ನು ಬಾಯಿಗಿಟ್ಟು ಅಪ್ಪನ ಮಾತನ್ನೇ ಕೇಳುತ್ತಾ ನಿಲ್ಲುವಾಗ ಹೆಮ್ಮೆಗೆ ಮುಖದ ಮೇಲೆ ಕಿರುನಗೆ ಕುಣಿಯುತ್ತಿತ್ತು. ಅಪ್ಪ ತನ್ನ ಎಡ ಅಂಗೈ ಚಾಚಿ ನನ್ನ ಬೆನ್ನು ಸವರಿ ‘ಓನಪ್ಪಾ ಮುದ್ದೂ..’ ಅನ್ನುವುದೇ ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣಗಳಾಗಿದ್ದವು. ಯಾರಾದರೂ ‘ಸುಬ್ಬಣ್ಣಾ ನಿನ್ನ ಮಗಳು ಗೊಂಬೆ ಕಣೋ..’ ಅಂದರೆ ಅಪ್ಪನ ಮುಖದ ಮೇಲೊಂದು ಗಂಭೀರ ನಗೆ ತೇಲಿ ಮಾಯವಾಗುತ್ತಿತ್ತು. ಇದ್ದಕ್ಕಿದ್ದಂತೇ ಅಪ್ಪನ ಮುದ್ದಿನ ಮಗಳೆಂಬ ಭ್ರಮೆಯೊಂದು ನನ್ನನ್ನಾವರಿಸಿ ಎದೆ ಗರ್ವದಿಂದ ಬೀಗುತ್ತಿತ್ತು.

ಇಂದು ನೀನು ಹಾಗೆ ಮುಸ್ಸಂಜೆಯಲ್ಲಿ ಹೊರಟುಹೋದ ಮೇಲೆ ಅಪ್ಪ ಬೇಕೆಂಬ ಬಯಕೆ ಉತ್ಕಟವಾಗಿತ್ತು. ಮುಂಬಾಗಿಲ ತೋಳು ಹಿಡಿದು ನಿಂತವಳು ಹಾಗೇ ನಿಂತಿದ್ದೆ. ನೀನು ಗೌರೀಹಬ್ಬಕ್ಕೆ ಕೊಡಿಸಿದ್ದ ಆ ಜೇನುತುಪ್ಪದ ಬಣ್ಣದ (ನೀನು ಹೀಗೇ ಹೇಳುತ್ತಿದ್ದೆ ನೆನಪಿದೆಯಾ?) ಲಂಗ ತೊಟ್ಟು ಬೆರಳು ಬಾಯಿಗಿಟ್ಟು ಕಚ್ಚುತ್ತಾ ಕಾಯುತ್ತಿದ್ದೆ. ಮನೆಯ ಮುಂದಿನ ಕೈತೋಟ ಬಟಾಬಯಲಾದಂತೆ ತೋರುತ್ತಿತ್ತು. ಉತ್ಥಾನ ದ್ವಾದಶಿಗೆ ಚಪ್ಪರಕಟ್ಟಿ ಸಿಂಗರಿಸುತ್ತಿದ್ದ ತುಳಸೀಕಟ್ಟೆ ನನ್ನಂತೆಯೇ ಒಂಟಿಯಾಗಿ ವರ್ಣವಿಹೀನವಾದಂತೆ ತೋರುತ್ತಿತ್ತು. ಅಲ್ಲಿ ಸಂಜೆಯ ದೀಪವಿರಲಿಲ್ಲ. ಸಂಜೆಮಲ್ಲಿಗೆಗಳು ಅದಾಗಲೇ ತೊಟ್ಟು ಕಳಚಲು ಸಿದ್ಧವಾಗಿ ನಿಂತಿದ್ದವು. ಆಗ ಅಂಗಳಕ್ಕೆ ಗಡಿಬಿಡಿಯಿಂದ ನುಗ್ಗಿ ಬಂದ ಸಂಧ್ಯಾ ಮಾಮಿ ಅಜ್ಜನನ್ನು ಅದೇನೇನೋ ಕೇಳುತ್ತಿದ್ದರು. ಅಜ್ಜನ ನೀರಸ ಪ್ರತಿಕ್ರಿಯೆ ಅವರಿಗೆ ಅಷ್ಟಾಗಿ ಹಿಡಿಸಿದಂತೆ ಕಾಣಲಿಲ್ಲ. ಸುಮ್ಮನೆ ತಲೆಯಾಡಿಸಿ ಹೊರಬಂದವರೇ-
“ಹೊಟ್ಟೆ ಹಸೀತಿದ್ರೆ ಸೀದಾ ನಮ್ಮನೆಗೆ ಬಾ ಕಂದಾ.. ರೋಷನೀ ಅಕ್ಕನ ಜೊತೆ ನಿಂಗೂ ಮಮ್ಮಮ್ ಮಾಡಿಸ್ತೀನಿ. ತುಂಬಾ ಹೊತ್ತು ಹೀಗೆ ಬಾಗಿಲಿಗೆ ನಿಲ್ಬೇಡ. ಕತ್ಲಾಗ್ತಾ ಇದೆ. ಅಪ್ಪಅಮ್ಮ ಬರೋದು ಹೊತ್ತಾಗುತ್ತೆ, ಒಳಗ್ಹೋಗು ಪುಟಾಣಿ.”ಅಂದರು.
ಕೆನ್ನೆಗೆ ಒಂದು ಮುತ್ತಿಟ್ಟು ಹೊರಟುಹೋದರು ಮಾಮಿ. ಯಾಕೋ ಸಿಟ್ಟು ಹತ್ತಿ ಅಜ್ಜನನ್ನೇ ಗುರಾಯಿಸಿದೆ. ಏನರ್ಥವಾಯಿತೋ.. ‘ಬಾರಪ್ಪಾ ಒಳಗೆ. ಸಾಕು ನಿಂತಿದ್ದು.’ ಅಂದು ಮತ್ತೆ ಆರಾಮಕುರ್ಚಿಗೊರಗಿ ಕಣ್ಣು ಮುಚ್ಚಿ ‘ಭಜಗೋವಿಂದಮ್.. ಭಜಗೋವಿಂದಮ್..’ ಗುನುಗತೊಡಗಿದರು.

ಆಗೊಮ್ಮೆ ಈಗೊಮ್ಮೆ ಏನೇನೋ ಹೇಳಿಕೊಂಡು ಸ್ನೇಹಿತರೆಲ್ಲಾ ಗಹಗಹಿಸಿ ನಗುವರು. ಕೆಲವೊಮ್ಮೆ ಅವರ ಹೆಂಡಿರಾದ ಸಂಧ್ಯಾ ಮಾಮಿ, ವನಜಾ ಮಾಮಿಯೂ ಇವರ ಮಾತಿಗೆ ದನಿ ಸೇರಿಸಿ ಏನೇನೋ ಹೇಳಿ ನಗುವರು. ಅಪ್ಪನು ‘ಬಿಡಿ ಅತ್ಗೇ, ಇವನಿಗೆ ಬುದ್ಧಿ ಬರಲ್ಲ, ನಿಮ್ಮ ಕಷ್ಟ ತೀರಲ್ಲ.’ ಅನ್ನುವರು. ಆಗ ಎಲ್ಲರೂ ಗೋಪಣ್ಣ ಮಾಮನ ಮುಖ ನೋಡಿ ಬಿದ್ದುಬಿದ್ದು ನಗುವರು. ಅಮ್ಮಾ.. ಇಡೀ ಬೀದಿಗೆ ಬೀದಿಯೇ ಸೇರಿ ನಕ್ಕು ಸಂಭ್ರಮಿಸುತ್ತಿದ್ದರೂ ನೀನೊಬ್ಬಳು ಯಾಕೆ ಎಂದೂ ಹೊರಬಂದು ಎಲ್ಲರಂತೆ ಅಂಗಳದಲ್ಲಿ ನಿಂತು ಮಾತಾಡುತ್ತಲೇ ಇರಲಿಲ್ಲ? ನನ್ನೊಡನೆ ನೂರೆಂಟು ಹರಟಿ, ಮುತ್ತು ಹರಡಿದಂತೆ ನಗುತ್ತಿದ್ದವಳು ಇವರ್ಯಾರಾದರೂ ಮಾತಾಡಿಸಿದಾಗ ಒಂದೆರಡು ಪದಗಳಲ್ಲೇ ಉತ್ತರಕೊಟ್ಟು ತಲೆತಗ್ಗಿಸಿ ಯಾಕೆ ಒಳನಡೆಯುತ್ತಿದ್ದೆ?ನೀನೂ ಕೊಂಚ ಹೊರಬಂದು ಮಾತಾಡಿದ್ದರೆ ನಾವಿಬ್ಬರೂ ಎಷ್ಟೊಂದು ನಗಬಹುದಿತ್ತು! ನೋಡು ನೋಡು, ಇವರನ್ನೆಲ್ಲಾ ನೋಡುತ್ತಾ ಮಜಾ ಅನ್ನಿಸಿ ನಿನ್ನನ್ನು ಕರೆಯಬೇಕೆಂದು ಮನಸಲ್ಲಿ ಬಂದದ್ದು ಮರೆತೇ ಹೋಗುತ್ತಿತ್ತು.

ನೀನು ಆಸ್ಪತ್ರೆಯಲ್ಲಿದ್ದೆ. ನಾನು ಹೊಸ್ತಿಲ ಮೇಲೆ… ಮುಂದೊಂದು ದಿನ ನಾನೂ ಹೀಗೇ ಆಸ್ಪತ್ರೆ ಸೇರಬೇಕಾಗುತ್ತೆ, ಆ ಭಗವಂತ ನನ್ನ ಹೊಟ್ಟೆಯೊಳಗೂ ಒಂದು ಬೊಂಬೆಯನ್ನು ಅಡಗಿಸಿಡಬಹುದು ಎಂಬ ಚಿಕ್ಕಅರಿವೂ ಇಲ್ಲದ ನಾನು, ನೀನು ಯಾಕಾಗಿ ಎಲ್ಲಿಗೆ ಹೋಗಿರಬಹುದೆಂದು ಊಹಿಸುತ್ತಾ ಯಾಕಾದರಾಗಲಿ, ಸಧ್ಯ ಆ ಹೊಟ್ಟೆ ಬೊಂಬೆಯ ಕಾಟತಪ್ಪಿದರೆ ಸಾಕೆಂದು ಜಪಿಸಹತ್ತಿದೆ. ಎಲ್ಲಾ ಹೆಣ್ಣಿಗೂ ಆ ತಾಯಿಯಾಗುವ ಹುಸಿಕಲ್ಪನೆಯೂ ಇಲ್ಲದ ಸ್ವಚ್ಛಂದ ದಿನಗಳೇ ಚಂದ ನೋಡು. ನಮಗೆ ನಾವೇ ಬೊಂಬೆಗಳಾಗಿರುವ ಸುಖದ ಕಾಲ. ಗಂಡೆಂಬ ಇನ್ನೊಂದು ಜೀವಿಯು ನಮ್ಮ ಇರುವನ್ನು ಈ ಮಟ್ಟಿಗೆ ಬದಲಿಸಿಬಿಡುವ ಕಲ್ಪನೆಯೂ ಇಲ್ಲದ ಸ್ವೇಚ್ಛೆಯ ಸಮಯ. ಬಾಲ್ಯದಲ್ಲಿ ಎಲ್ಲ ಹೆಣ್ಣುಗಳಿಗೂ ಇದೊಂದು ಅಚ್ಚರಿಯೇ ಆಗಿತ್ತು. ಬಹಳ ಗಟ್ಟಿಗಿತ್ತಿ ನೀನು, ದಿಕ್ಕಿಲ್ಲದೇ ತನ್ನವರಿಲ್ಲದೇ ಪ್ರಾಣಾಂತಿಕವಾದ ಪ್ರಸವಗಳನ್ನು ನಿಭಾಯಿಸಿದವಳು. ಆ ಸಮಯ ನೋವು ತಿನ್ನಲಾಗದೇ ಎಂತಹ ಪ್ರಸವ ವೈರಾಗ್ಯ ನಿನ್ನನ್ನು ಕಾಡಿರಬಹುದು! ಆದರೆ ಇಲ್ಲಿ ನೋಡು, ಮನೆಯ ಪಡಸಾಲೆಯಲ್ಲಿ ಅಜ್ಜನೂ ಅಪ್ಪನೂ ಜೋರಾಗಿ ಏನೇನೋ ಮಾತಾಡಿಕೊಳ್ಳುತ್ತಿದ್ದರು. ನನ್ನೆಡೆಗೊಮ್ಮೆ ತಿರುಗಿ ನೋಡಿದ ಅಜ್ಜ “ಮೊದಲು ಈ ಮುಂಡೇದನ್ನ ಸಂಧ್ಯಮ್ಮನ ಮನೆಗೆ ಬಿಟ್ಟು ಬಾ.. ಆಮೇಲೆ ಮಾತಾಡುವ.” ಅಂದರು. ಅಪ್ಪ ನನ್ನೆಡೆಗೆ ತಿರುಗಿ-
“ಬಾರೇ ಪುಟ್ಟಿ, ಇವತ್ತು ಮಾಮಿ ಮನೇಲಿ ಊಟ ಮಾಡುವಿಯಂತೆ, ನಿಮ್ಮಮ್ಮ ಇಲ್ಲ ಇವತ್ತು.” ಅಂದರು.

ಮಾಮಿ ಮನೆಗೆ ಹೋಗೋದೇನೋ ಖುಷಿಯೇ ಸರಿ, ಆದರೆ ಅಮ್ಮ ಬರೋಲ್ಲವೆಂಬ ಮಾತು ಯಾಕೋ ಸಖತ್ ನೋವು ಕೊಟ್ಟಿತು. ಕಣ್ಣಲ್ಲಿ ಬಂದ ನೀರಿನೊಟ್ಟಿಗೇ ‘ಆಆ…’ ಅನ್ನುವ ದನಿ ತೆಗೆಯಲಿದ್ದವಳಿಗೆ ಈಗ ದನಿ ತೆಗೆದರೆ ಇಬ್ಬರಲ್ಲೊಬ್ಬರು ಎರಡು ಪೆಟ್ಟು ಕೊಡೋದು ಗ್ಯಾರಂಟಿಯೆಂದು ನೆನಪಾಗಿ ಹಾಗೇ ನನ್ನ ಮುದ್ದು ಚೆಂದುಟಿಗಳ ಸುರುಳಿ ಮಾಡುತ್ತಾ ಆ ಸುರುಳಿಯಲ್ಲೇ ನನ್ನ ದುಃಖ ಅಡಗಿಸಿಡುತ್ತಾ ಮೌನದಲ್ಲಿ ಅತ್ತೆ.
“ಏಯ್ ಅಳುಪುರ್ಕಿ, ಅಳಬೇಡ ಬಾ, ಅಮ್ಮ ಬರ್ತಾಳೆ.” ಅಂದು ನನ್ನ ಎತ್ತಿಕೊಂಡರು ಅಪ್ಪ. ಆಶ್ಚರ್ಯ! ಕೆನ್ನೆಗೆರಡು ಮುತ್ತೂ ಕೊಟ್ಟರು.

ಅಪ್ಪ ನನ್ನನ್ನು ‘ಎತ್ತಿ ಮುತ್ತಾಡುತ್ತಿರುವ ಭಾಗಶಃ ಕೊನೆಯ ದಿನ ಅದು’ ಅನ್ನುವ ಕಿಂಚಿತ್ ಸುಳಿವೂ ಸಿಗಲಿಲ್ಲ ಕಣೇ ಅವತ್ತು. ಗೊತ್ತಾಗಿದ್ದರೆ ಅಕ್ಷರಶಃ ಆ ಭಗವಂತನೊಟ್ಟಿಗಾದರೂ ಬಡಿದಾಡಿ ಆ ಕ್ಷಣವನ್ನು ಹಾಗೇ ಉಳಿಸಿಕೊಳ್ಳುತ್ತಿದ್ದೆನೋ ಏನೋ… ಅಪ್ಪ… ನನ್ನ ಅತ್ಯಂತ ಪ್ರೀತಿಪಾತ್ರ ವಸ್ತು… ನಿಜ ಹೇಳಲಾ.. ಒಂದು ಗುಲಗಂಜಿ ತೂಕ ನಿನಗಿಂತಲೂ ಹೆಚ್ಚೇ.. ಹೀಗೇ.. ಹೇಳಲಾರದ ಹೇಳಿಕೊಂಡಿಲ್ಲದ ಹಲವಾರು ಸತ್ಯಗಳು ಅಡಗಿರುವ ಮನದ ತಿಜೋರಿಯನ್ನು ಇನ್ನಾದರೂ ತೆರೆಯಬೇಕಲ್ಲವಾ? ಮತ್ತೆ ಕೇಳು..

(ಮುಂದುವರಿಯುವುದು)
(ಕಲಾಕೃತಿಗಳು: ಪ್ಯಾಬ್ಲೋ ಪಿಕಾಸೋ, ಹೆಸರಾಂತ ಸ್ಪ್ಯಾನಿಶ್ ಕಲಾವಿದ)