ಕತೆ ಜರುಗುವ ಆವರಣವು ಅನುಭವದ ಅವಿಭಾಜ್ಯ ಎಂಬುದನ್ನು ಅರಿತು ಅದನ್ನು ಸಹಜ ಸರಾಗತೆಯಲ್ಲಿ ಸಿದ್ಧಿಸಿಕೊಂಡವರು ರಶೀದ್. ಅವರ ಮೊದಲ ಕತೆಯಿಂದಲೂ ಇದನ್ನು ಕಾಣಬಹುದು. ಇಲ್ಲಿಯ ‘ಮೋಹಕ ದ್ವೀಪದ ಮೂಗಿನ ತುದಿ’ ಕತೆಯೊಳಗೆ ಬರುವ ವಿವರಗಳು, ಘಟನೆಗಳು, ಮಾತುಗಳು ಆ ಆವರಣದಲ್ಲಿ ಅಲ್ಲದೇ ಬೇರೆಲ್ಲೂ ಘಟಿಸಲು ಅಸಾಧ್ಯವೆನ್ನುವ ಹಾಗೆ ಸಂಯೋಜನೆಗೊಂಡಿವೆ.
ಕತೆಗಾರ ಅಬ್ದುಲ್‌ ರಶೀದ್‌ ಹೊಸ ಕಥಾ ಸಂಕಲನ “ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್‌ ಎಲಿಜಬೆತ್‌” ಗೆ ವಿವೇಕ ಶಾನಭಾಗ ಬರೆದ ಮಾತುಗಳು

ಕುರುಡು ಪರೀಕ್ಷೆ (ಬ್ಲೈಂಡ್ ಟೆಸ್ಟ್) ಮಾಡಿದರೆ, ಅಂದರೆ ಹೆಸರನ್ನು ಮರೆಮಾಚಿ ಈವರೆಗೂ ನಾವು ಓದಿರದ ಕಥೆಯ ಪುಟವೊಂದನ್ನು ತೋರಿಸಿ ಲೇಖಕರನ್ನು ಪತ್ತೆಹಚ್ಚಲು ಹೇಳಿದರೆ ರಶೀದ್ ಬರವಣಿಗೆಯನ್ನು ಯಾವ ಕಷ್ಟವೂ ಇಲ್ಲದೇ ನಿಸ್ಸಂಶಯವಾಗಿ ಗುರುತಿಸಬಹುದು. ಅದು ಅಷ್ಟು ಅನನ್ಯ. ಅವರ ಗದ್ಯವನ್ನು ಏಕಮೇವಾದ್ವಿತೀಯ ಎನ್ನಲು ಯಾವ ಹಿಂಜರಿಕೆಯೂ ಇರದು.

ಒಳ್ಳೆಯ ಕತೆಗಳ ಮುಖ್ಯ ಲಕ್ಷಣವೆಂದರೆ ಅವುಗಳು ಮತ್ತೆಮತ್ತೆ ಓದಲು ನಮ್ಮನ್ನು ಪ್ರೇರೇಪಿಸುತ್ತದೆ. ರಶೀದರ ಎಷ್ಟೊಂದು ಕತೆಗಳನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ಓದಿದ್ದೇನೆ. ತನ್ನ ಅಂತರಂಗವನ್ನು ಒಂದೇಟಿಗೆ ಎಂದೂ ಬಿಟ್ಟುಕೊಡದ ಬರವಣಿಗೆಯು, ತನ್ನ ಶೈಲಿಯಿಂದ ನಮ್ಮನ್ನು ತನ್ನತ್ತ ಪದೇಪದೇ ಸೆಳೆಯುತ್ತದೆ. ಈ ಶೈಲಿಯೆನ್ನುವುದು ಕತೆಗಾರನೊಬ್ಬ ತನ್ನ ಜಗತ್ತನ್ನು ಅರಿಯಲು ಬಳಸುವ ಕಣ್ಣು. ನಮಗದನ್ನು ಕಾಣಿಸಲು ಬಳಸುವ ದೃಷ್ಟಿ. ಭಾಷೆ, ವಿವರ, ವರ್ಣನೆ ಎಲ್ಲವೂ ಸೇರಿ ಉಂಟಾದ ಪಾಕ. ವಿಸ್ತಾರವಾದ ಅರ್ಥದಲ್ಲಿ ನೋಡಿದರೆ ಪರಿಸರವನ್ನು ಬಲ್ಲ ಸ್ಥಾನಿಕನ ಹಾಗೆ ಅದು ಸಹಜ ಸುಂದರವಾಗಿ ನಮ್ಮನ್ನು ತನ್ನ ಪ್ರಪಂಚದಲ್ಲಿ ಸುತ್ತಾಡಿಸುವ ಮಾರ್ಗದರ್ಶಿ. ಕೆಲವು ಪ್ರತಿಭಾವಂತರಿಗೆ ಶೈಲಿಯು ಸಹಜವಾಗಿ ಒದಗುತ್ತದೆ. ಕೆಲವರು ಅದನ್ನು ಕಷ್ಟಪಟ್ಟು ಕೈವಶಪಡಿಸಿಕೊಳ್ಳುತ್ತಾರೆ. ಈ ವಿಷಯದಲ್ಲಿ ರಶೀದ್ ಅತ್ಯಂತ ಪ್ರತಿಭಾವಂತರು. ಅವರ ಶೈಲಿಯ ಸಹಜತೆಯು ಎಷ್ಟು ವಿಶಿಷ್ಟವೆಂದರೆ ಅದನ್ನು ಅನುಭವಿಸಬೇಕೇ ಹೊರತು ಯಾವ ಬಗೆಯ ವಿವರಣೆಗೂ ಅದು ದಕ್ಕುವುದಿಲ್ಲ. ಸಿದ್ಧಮಾದರಿಗಳನ್ನು ಮುರಿಯುತ್ತ, ನಮ್ಮ ಗ್ರಹೀತಗಳಿಗೆ, ಪೂರ್ವಗ್ರಹಗಳಿಗೆ ಸವಾಲು ಒಡ್ಡುತ್ತ ವಿಭಿನ್ನ ಲೋಕದೊಳಗೆ ಕರೆದೊಯ್ಯುವ ಅವರ ಕತೆಗಳನ್ನು ಓದಿದಾಗ ದೊರಕುವ ಆನಂದ, ಕಳವಳ, ಉದ್ವೇಗ, ಚಿಂತನೆಗಳನ್ನು ಸುಮ್ಮನೇ ಪಡೆಯಬೇಕಲ್ಲದೇ ಯಾವ ಸಾಹಿತ್ಯಿಕ ಹತಾರಗಳಿಂದಲೂ ದಕ್ಕಿಸಿಕೊಳ್ಳಲಾಗದು. ಸಿದ್ಧ ಅಪೇಕ್ಷೆಗಳನ್ನು ಬದಿಗೊತ್ತದೇ ಅವರ ಬರಹಗಳನ್ನು ಓದಿದರೆ ಅಲ್ಲಿಯ ಸ್ವಾದ ದಕ್ಕುವುದಿಲ್ಲ. ಅವರ ಅಪೂರ್ವ ಕಾದಂಬರಿ ‘ಹೂವಿನ ಕೊಲ್ಲಿ’ಯಿಂದ ಓದುಗರು, ವಿಮರ್ಶಕರು ತಬ್ಬಿಬ್ಬಾಗಲು ಇದೇ ಕಾರಣ. ನಾನು ತುಂಬಾ ಇಷ್ಟಪಡುವ ಪ್ರಪಂಚದ ಬರಹಗಾರರಲ್ಲಿ ರಶೀದ್ ಕೂಡ ಒಬ್ಬರು.

(ಅಬ್ದುಲ್‌ ರಶೀದ್‌)

ಬದುಕಿನ ವಿಪರ್ಯಾಸಗಳನ್ನು ಸತತವಾಗಿ ಪ್ರತಿ ಕ್ಷಣದಲ್ಲೂ ಕಾಣಬಲ್ಲ ಲೇಖಕ ರಶೀದ್. ಉತ್ಕಟ ಕಾಮಪ್ರೇಮದ ಬದಿಯಲ್ಲೇ ಅವರಿಗೆ ಅದರ ನಿಸ್ಸಾರತೆ, ಜಡತೆಗಳೂ ಕಾಣುತ್ತವೆ. ಇದನ್ನು ಅವರು ನಿರ್ವಹಿಸುವ ಬಗೆಯಲ್ಲಿ ಲಘುವಿನೋದವೂ ವಿಷಾದವೂ ಇದೆ. ಬದುಕಿನಿಂದ ಕಥೆ ಹುಟ್ಟುವ ಸೃಜನಶೀಲ ಪ್ರಕ್ರಿಯೆಯ ನಡುವೆ ಮೂಗು ತೂರಿಸುವ ಕಲಾವಿದರ ಅಧಿಕಪ್ರಸಂಗವನ್ನು ಅವರು ಲೇವಡಿ ಮಾಡಿದ ಘಟನೆಯೊಂದು ನೆನಪಾಗುತ್ತಿದೆ. ಅವರು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘಕ್ಕೆ ಕವಿತೆಯೊಂದನ್ನು ಕಳಿಸುವ ಮೊದಲು ಅದನ್ನು ಹಿರಿಯರೊಬ್ಬರಿಗೆ ತೋರಿಸಿದರಂತೆ. ಅವರು ಕವಿತೆಯಲ್ಲಿ ಭಾವತೀವ್ರತೆ ತುಸು ಕಡಿಮೆಯಾಗಿವೆ ಎಂದರಂತೆ. ಅದಕ್ಕೆ ರಶೀದ್ ಕವಿತೆಯ ಆರಂಭದ ಶಬ್ದವಾಗಿ ‘ಹಾ!’ ಎಂಬುದನ್ನು ಸೇರಿಸಿ ಅವರನ್ನು ತೃಪ್ತಿಪಡಿಸಿದರಂತೆ. ಇದನ್ನು ನೆನೆಸಿ ನಾವು ಎಷ್ಟೊಂದು ನಕ್ಕಿದ್ದೆವು. ಬರವಣಿಗೆಯ ಸಹಜತೆಯ ಬಗ್ಗೆ, ಸಾಹಿತ್ಯದ ಪಂಡಿತರ ಬಗ್ಗೆ ಅವರ ಒಟ್ಟೂ ನಿಲುವನ್ನು ಈ ಘಟನೆ ಹೇಳುತ್ತದೆಂದು ನನಗನಿಸುತ್ತದೆ. ಪುಸ್ತಕವೊಂದರ ಮುನ್ನುಡಿಯಲ್ಲಿ ರಶೀದ್ ಬರೆದ ಈ ಮಾತುಗಳನ್ನು ನೆನಪಿಸಿಕೊಳ್ಳುವುದು ಇಲ್ಲಿ ಅನುಚಿತವಾಗಲಾರದು: ‘ಯಾವ ಬರಹಗಾರನಿಗೂ ಆ ಕಾಲದ ಮೇಲೆ ತನ್ನನ್ನು ತಾನು ಹೇರಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ದೊಡ್ಡ ಸತ್ಯ. ಕಾಲ ಮಾತ್ರ ಸಾಹಿತ್ಯವನ್ನೂ ಕಥೆಗಾರರನ್ನೂ ಕವಿಗಳನ್ನೂ ಸೃಷ್ಟಿಸಬಲ್ಲದು. ಅಕಾಲದಲ್ಲಿ ಬರೆಯುವವನು ಎಂಥ ಪ್ರತಿಭಾವಂತನಾಗಿದ್ದರೂ ಕಾಲ ಆತನನ್ನು ಅಂಡು ಒರೆಸುವ ಕಾಗದದಂತೆ ಬಳಸಿಕೊಳ್ಳುತ್ತದೆ. ಹಾಗಾಗಿ ತಂತ್ರಗಾರಿಕೆ, ಕಲಾತ್ಮಕತೆ ಇತ್ಯಾದಿಗಳಿಂದ ಸುಸ್ತು ಹೊಡೆಸಿಕೊಳ್ಳದೆ ಬದುಕಿನ ಇತರ ಸೌಂದರ್ಯಗಳತ್ತ ಮುಖ ಮಾಡುವುದು ಜಾಣತನ ಎಂಬುದು ನನ್ನ ಅನುಭವ.’

ಇಲ್ಲಿಯ ‘ರಕ್ತಚಂದನ’ ಕತೆಯನ್ನು ಓದುವಾಗ ನಮ್ಮ ನಡುವೆ ನಡೆದ ಸೃಜನಶೀಲತೆಯ ಕುರಿತ ಮಾತುಕತೆಗಳೆಲ್ಲ ನೆನಪಾದವು. ಒಳ್ಳೆಯ ಕತೆಗಾರ ತಾನು ಹೇಳುವ ಸಂಗತಿಗಳ ಬಗೆಗಿನ ಸತ್ಯಾಸತ್ಯತೆಯ ಕುರಿತು ಓದುಗರ ಮನಸ್ಸಿನಲ್ಲಿ ಯಾವ ಸಂದೇಹವೂ ಏಳದ ರೀತಿಯಲ್ಲಿ ಬರೆಯುತ್ತಾನೆ. ರಶೀದ್‌ರ ಬರವಣಿಗೆಯಲ್ಲಿ ಅತಿವಾಸ್ತವದ ಸಂಗತಿಗಳು ಅತಿಯೆನ್ನಿಸದ ಹಾಗೆ ಸಹಜವಾಗಿರುತ್ತವೆ. ಈವರೆಗೆ ಕನ್ನಡದಲ್ಲಿ ಅನೇಕರು ಅತಿವಾಸ್ತವ ಅಥವಾ ಫ್ಯಾಂಟಸಿ ಕತೆಗಳನ್ನು ಬರೆದಿದ್ದಾರೆ. ಅವರಿಗೆ ಅದೊಂದು ತಂತ್ರ ಮಾತ್ರವಾಗಿದ್ದರಿಂದ, ಕತೆಯೊಳಗೆ ಸಾವಯವವಾಗಿ ಒಂದಾಗಿಲ್ಲದ್ದರಿಂದ ಅದಾವುದೂ ಸಫಲವಾಗಿಲ್ಲ. ಉದಾಹರಣೆಗೆ ಕತೆಯ ನಿರೂಪಕನ ಮೂಗು ಬೆಳೆಯುತ್ತ ಹೋಗುವ ವಿವರವನ್ನು ಓದಿದೊಡನೆ ಅದು ಏನನ್ನು ಸೂಚಿಸುತ್ತದೆಂದು ಮನಸ್ಸು ಚಿಂತಿಸತೊಡಗುತ್ತದೆಯೇ ಹೊರತು ಅದು ನಮ್ಮ ಅನುಭವದ ಭಾಗವಾಗುವುದಿಲ್ಲ. ಅದೊಂದು ಬೌದ್ಧಿಕ ಕಸರತ್ತಾಗುತ್ತದೆ ಅಷ್ಟೇ. ಆದರೆ ರಶೀದರಿಗೆ ಮಾತ್ರ ಬರೆದದ್ದು ನಿಜವೆನಿಸುವ ಈ ಸಿದ್ಧಿಯು ಪ್ರಾಪ್ತವಾಗಿದೆ. ಹಾಗಾಗಿಯೇ ಅತಿವಾಸ್ತವದ ಕತೆಗಳನ್ನು ಚರ್ಚಿಸುವಾಗ ರಶೀದರ ಹೆಸರು ಪ್ರಸ್ತಾಪವಾಗುವುದಿಲ್ಲ. ಇದು ಅವರ ಸಾಧನೆಯೇ ಸರಿ.

ತನ್ನ ಅಂತರಂಗವನ್ನು ಒಂದೇಟಿಗೆ ಎಂದೂ ಬಿಟ್ಟುಕೊಡದ ಬರವಣಿಗೆಯು, ತನ್ನ ಶೈಲಿಯಿಂದ ನಮ್ಮನ್ನು ತನ್ನತ್ತ ಪದೇಪದೇ ಸೆಳೆಯುತ್ತದೆ. ಈ ಶೈಲಿಯೆನ್ನುವುದು ಕತೆಗಾರನೊಬ್ಬ ತನ್ನ ಜಗತ್ತನ್ನು ಅರಿಯಲು ಬಳಸುವ ಕಣ್ಣು.

ಈ ಸಂಕಲನದ ‘ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್’ ಎಂಬ ಕತೆ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುವ ರಾಜಕೀಯದ ಹಾಸ್ಯಾಸ್ಪದತೆ ಮತ್ತು ಅರ್ಥಹೀನತೆಯನ್ನು ಮುಖಕ್ಕೆ ರಾಚುವಂತೆ ಹೇಳುತ್ತದೆ. ಐತಿಹಾಸಿಕ ವ್ಯಕ್ತಿಗಳನ್ನು ನೆನಪಿಟ್ಟುಕೊಳ್ಳಲು ಈವತ್ತಿನ ವ್ಯಕ್ತಿಗಳಿಗೆ ಆ ಹೆಸರುಗಳನ್ನು ಕೊಡುವ ಕಲ್ಪನೆಯೇ ಅದ್ಭುತ ರೂಪಕವಾಗಿದೆ. ರೆಪ್ರೆಸೆಂಟೇಶನ್ ಅಥವಾ ಪ್ರಾತಿನಿಧಿಕರಣದ ಸಮಸ್ಯಾತ್ಮಕತೆಯನ್ನು ಲಘುಹಾಸ್ಯದಲ್ಲಿ ಆದರೆ ಅತ್ಯಂತ ಪ್ರಬಲವಾಗಿ ನಿರೂಪಿಸಿದ ಅಪರೂಪದ ಕತೆಯಿದು. ಸಲಿಂಗ ಸಂಗವನ್ನೂ ಸಹ ಒಳಗೊಂಡಿರುವುದರಿಂದ ಕತೆ ಇನ್ನೂ ಸಂಕೀರ್ಣವಾಗಿದೆ.

ಕತೆ ಜರುಗುವ ಆವರಣವು ಅನುಭವದ ಅವಿಭಾಜ್ಯ ಎಂಬುದನ್ನು ಅರಿತು ಅದನ್ನು ಸಹಜ ಸರಾಗತೆಯಲ್ಲಿ ಸಿದ್ಧಿಸಿಕೊಂಡವರು ರಶೀದ್. ಅವರ ಮೊದಲ ಕತೆಯಿಂದಲೂ ಇದನ್ನು ಕಾಣಬಹುದು. ಇಲ್ಲಿಯ ‘ಮೋಹಕ ದ್ವೀಪದ ಮೂಗಿನ ತುದಿ’ ಕತೆಯೊಳಗೆ ಬರುವ ವಿವರಗಳು, ಘಟನೆಗಳು, ಮಾತುಗಳು ಆ ಆವರಣದಲ್ಲಿ ಅಲ್ಲದೇ ಬೇರೆಲ್ಲೂ ಘಟಿಸಲು ಅಸಾಧ್ಯವೆನ್ನುವ ಹಾಗೆ ಸಂಯೋಜನೆಗೊಂಡಿವೆ.

ಕವಿತೆಗಳ ಹಾಗಿರುವ, ಓದಿ ಅನುಭವಿಸಬೇಕಾಗಿರುವ ಈ ಕತೆಗಳನ್ನು ತೀರಾ ಹಿಂಜಲು ಅಳುಕಾಗುತ್ತದೆ. ಅವುಗಳ ಸಂಕೀರ್ಣತೆಯನ್ನು ಮುಕ್ಕುಗೊಳಿಸುವೆನೆಂದು ಭಯವಾಗುತ್ತದೆ. ಇಲ್ಲಿಯ ಕತೆಗಳ ಕೆಲವು ಉದ್ಧರಣೆಗಳನ್ನು ಗಮನಿಸಿದರೆ ಅವುಗಳ ಗಹನತೆಯ ಹೊಳಹು ತುಸು ದೊರೆತೀತು.

‘ಹೊಳೆಯ ಬದಿಯಲ್ಲಿ ದೊಡ್ಡಕ್ಕೆ ಬೆಳೆದಿದ್ದ ಕಮ್ಯುನಿಸ್ಟ್ ಅಥವಾ ಕಾಂಗ್ರೆಸ್ ಎಂದು ಕರೆಯಲ್ಪಡುವ ನಾಲ್ಕು ಗಿಡಗಳನ್ನು ಅವರು ಆಯ್ದುಕೊಂಡಿದ್ದರು. ಶಾಲೆಯಲ್ಲಿ ಉಚ್ಚೆ ಹುಯ್ಯಲು ಬಿಟ್ಟಾಗಲೆಲ್ಲ ಅದಕ್ಕೆ ಉದ್ದಕ್ಕೆ ರಭಸದಲ್ಲಿ ಹುಯ್ಯುತ್ತಿದ್ದರು. ಅವರ ಉಚ್ಚೆಯ ಲವಣದಿಂದಾಗಿ ಯಾರ ಗಿಡ ಮೊದಲು ಸಾಯುವುದು ಎಂಬುದು ಅವರ ಸ್ಪರ್ಧೆ. ನಾನು ಸ್ಪರ್ಧೆಗೆ ಇರಲಿಲ್ಲ. ಯಾಕೆಂದರೆ ನಾನು ನದಿಯಲ್ಲಿ ಈಜುವಾಗಲೇ ಗೊತ್ತಾಗದ ಹಾಗೆ ನೀರಿನಲ್ಲಿ ಹುಯ್ದುಬಿಡುತ್ತಿದ್ದೆ. ಹುಡುಗರ ಹಾಗೆ ದೂರಕ್ಕೆ ರಭಸದಲ್ಲಿ ಹುಯ್ಯುವುದು ನನಗೆ ಸಾಧ್ಯವಿರಲಿಲ್ಲ. ಅದಕ್ಕಾಗಿ ನಾನು, `ನನ್ನ ಅಪ್ಪ ಕಮ್ಯುನಿಸ್ಟು, ನನ್ನ ಅಮ್ಮ ಕಾಂಗ್ರೆಸ್ಸು. ಅದಕ್ಕಾಗಿ ನಾನು ಹುಯ್ಯುವುದಿಲ್ಲ’ ಎಂದು ಸುಳ್ಳು ಹೇಳುತ್ತಿದ್ದೆ.’
(‘ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್)

‘ಬಹುಶಃ ಜೀವನದಲ್ಲಿ ನನಗೆ ಆಗಿರುವುದೆಲ್ಲಾ ಅವಳಿಗೂ ಆಗಿದೆ. ಅದಕ್ಕೇ ನಾವಿಬ್ಬರೂ ಜೊತೆಯಲ್ಲಿ ಇದ್ದೇವೆ. ನಾನು ಹೆಂಡತಿಯ ಪಾತ್ರ ವಹಿಸಿದ್ದೇನೆ. ಅವಳು ಗಂಡನ ಪಾತ್ರ. ಆದರೆ ನಮಗಿಬ್ಬರಿಗೂ ಗಂಡಸಿನ ಅಥವಾ ಹೆಂಗಸಿನ ಅಂಗಗಳಿಲ್ಲ. ಆದರೆ ನಾವಿಬ್ಬರೂ ಎಲ್ಲ ಗಂಡು ಹೆಣ್ಣುಗಳಿಗಿಂತ ಸುಖಿಗಳಾಗಿದ್ದೇವೆ.’
(‘ಲಾರ್ಡ್ ಕಾರ್ನವಾಲೀಸ್ ಮತ್ತು ಕ್ವೀನ್ ಎಲಿಜಬೆತ್)

ಅವರು ಆಕಸ್ಮಿಕವಾಗಿ ನಡೆದ ಒಂದು ರತಿ ಸಾಹಸದಲ್ಲಿ ಸಿಲುಕಿ ಕಿರಿಸ್ತಾನಳಾದ ಒಬ್ಬಳು ಆರೋಗ್ಯ ಸಹಾಯಕಿಯನ್ನು ಮದುವೆಯಾಗಬೇಕಾಗಿ ಬಂದಿತ್ತು. ಹಾಗಾಗಿ ಮೀನು ತಿನ್ನುವುದನ್ನೂ ಇಷ್ಟಪಡಬೇಕಾಯಿತು. ಅದನ್ನೇ ಮಧ್ಯಾಹ್ನ ಬುತ್ತಿ ಚೀಲಕ್ಕೆ ಹಾಕಿ ಕಳುಹಿಸುತ್ತಿದ್ದಳು ಆ ಆರೋಗ್ಯ ಸಹಾಯಕಿ. ಪಂಡಿತರು ಊಟದ ಬುತ್ತಿ ಬಿಚ್ಚುವಾಗ ನಾವು ಹತ್ತಿರ ಹೋಗಿ ಮೂಗಿನ ಹೊಳ್ಳೆ ಅರಳಿಸಿ ನಿಲ್ಲುತ್ತಿದ್ದೆವು. `ಅದೇನು ಬಗ್ಗಿ ನೋಡುತ್ತೀರಾ ಮಂಗನಮರಿಗಳಾ? ಇದು ಜಲಪುಷ್ಪದ ಸಾಂಬಾರು’ ಎಂದು ಅವರು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಅಂದಿನಿಂದ ಮೀನನ್ನು ನಾನೂ ಜಲಪುಷ್ಪವೆಂದೇ ಕರೆಯುವುದು. ಕೇಳಿದವರಿಗೂ ಪೆಡಸು ವಾಸನೆ, ಮುಳ್ಳು ಭಯ ಅಂತ ಅನಿಸದ ಒಂದು ಒಳ್ಳೆಯ ಹೆಸರು.
(ಜಲಪುಷ್ಪ)

ಅವರು ನೂರಾರು ವರ್ಷಗಳ ಹಿಂದೆ ಅರಬಿ ಕಡಲಿನ ಮೂಲಕ ಹಾಯಿ ದೋಣಿ ಹತ್ತಿ ಪರಾರಿಯಾಗಿ ಬಂದು ಕೊಡಗಿನ ಕಾಡಲ್ಲಿ ಒಂದು ಗುಂಪಾಗಿ ಬದುಕುತ್ತಿದ್ದರಂತೆ. ಅವರು ಹಾಗೆ ಭಯದಲ್ಲಿ ಓಡಿ ಬರಲು ಕಾರಣ ಅರೇಬಿಯಾದ ಖಲೀಫರು ತಮ್ಮನ್ನು ಹಿಡಿದು ಮುಸಲ್ಮಾನರನ್ನಾಗಿ ಮಾಡಬಹುದು ಎಂಬ ಹೆದರಿಕೆ. ಆದರೆ ತಮಾಷೆ ನೋಡಿ. ಕಾಡಲ್ಲಿ ಹೆದರಿಕೊಂಡು ಬದುಕುತ್ತಿದ್ದ ಅವರನ್ನು ಕೊಡಗಿನ ರಾಜ ಸೈನ್ಯಕ್ಕೆ ಸೇರಿಸಿಕೊಂಡ. ಖಡ್ಗ ಕೊಟ್ಟು ಟೀಪೂ ಸುಲ್ತಾನನ ಪಡೆಯೊಡನೆ ಕಾದಾಡಲು ಕಳಿಸಿದ ಆ ರಾಜ ತಾನು ಮಾತ್ರ ಅರಮನೆಯ ನೆಲಮಾಳಿಗೆಯಲ್ಲಿ ಅಡಗಿಕೊಂಡ. ಯುದ್ಧಕ್ಕೆ ಹೊರಟಿದ್ದವರನ್ನು ಸೆರೆಹಿಡಿದ ಟೀಪೂವಿನ ಕಡೆಯವರು ಅವರನ್ನು ಶ್ರೀರಂಗಪಟ್ಟಣಕ್ಕೆ ಎಳೆದುಕೊಂಡು ಹೋಗಿ ಮುಸಲ್ಮಾನರನ್ನಾಗಿ ಮಾಡಿದರು.
(ರಕ್ತಚಂದನ)

(ವಿವೇಕ ಶಾನಭಾಗ)

ಅವರು ಮರಳಿದಾಗ ಅವರು ಕೈಯಲ್ಲಿ ಹಳೆಯ ಕೊಡಪಾನಗಳು ಮತ್ತು ಮುಖದಲ್ಲಿ ಒಂದು ಮಾಯದ ನಗು. ಆ ನಗು ಅವರ ಮುಖದಿಂದ ಅಳಿಸಿಹೋಗಲೇ ಇಲ್ಲ. ಅವರಿಗೆ ಹುಚ್ಚು ಹಿಡಿದಿತ್ತು, ಏಕೆಂದರೆ ನನ್ನ ಬಾಪಾ ನಿಜವಾಗಿಯೂ ಕೊಪ್ಪರಿಗೆಯನ್ನು ನೋಡಿದ್ದರು. ಮತ್ತು ಒಂದು ಸರ್ಪವೂ ಅದನ್ನು ಕಾಯುತ್ತಿರುವುದು ಅವರಿಗೆ ಕಂಡಿತ್ತು. ಅವರಿಗೆ ಹೆದರಿಕೆಯಾಗಿರಲಿಲ್ಲ. ನಿಜಕ್ಕೂ ಅಷ್ಟು ದೊಡ್ಡ ಐಶ್ವರ್ಯ ನೋಡಿ ತುಂಬ ಖುಷಿಯಾಗಿತ್ತು.
(ಕಲಗಚ್ಚು)

ಅವರ ಹಳೆಯ ಕತೆಗಳ ಅನೇಕ ಹೆಂಗಸರು ಮಾರುವೇಷದಲ್ಲಿ ಬಂದು ಈ ಕತೆಗಳೊಳಗೆ ಸೇರಿಕೊಂಡ ಹಾಗೆ ಅನಿಸುತ್ತದೆ. ಅವರ ಜೋರು, ಬಿನ್ನಾಣ, ಭಂಡತನ, ಧೈರ್ಯ ಮತ್ತು ಲಾವಣ್ಯದ ಅಸ್ತ್ರಗಳಿಂದ ರಶೀದರನ್ನವರು ಕಾಡುತ್ತಿರುವ ಭಾಸವಾಗುತ್ತದೆ. ಅಜ್ಜಿಯರಾಗಿ, ಹುಡುಗಿಯರಾಗಿ, ಗೆಳತಿಯರಾಗಿ, ಪ್ರೇಯಸಿಯರಾಗಿ, ಉಮ್ಮನಾಗಿ ನಾನಾ ಛದ್ಮವೇಷಗಳಲ್ಲಿ ಅವರು ರಶೀದರನ್ನು ಆಟವಾಡಿಸುತ್ತಿದ್ದಾರೆ. ಆ ಕತೆಗಳನ್ನು ರಶೀದ ನಮಗಾಗಿ ಶೇಖರಿಸಿ ಕೊಟ್ಟಿದ್ದಾರೆ.

ತುಷಾರದಲ್ಲಿ ಪ್ರಕಟವಾದ ರಶೀದರ ಮೊಟ್ಟಮೊದಲ ಕತೆ ‘ಮೂಸಾ ಮೊೈಲಿಯಾರರ ಮುದ್ದಿನ ಮಗಳು’ ಕುರಿತು ದೀರ್ಘ ಕಾಲ ನಾವು ಮಾತನಾಡಿದ್ದು, ಹೆಜ್ಜೆಗೊಂದು ಕತೆ ಹುಟ್ಟಿಸುವ ಅವರೊಡನೆ ಮೈಸೂರಿನ ಮುಸ್ಲಿಂ ಹಾಸ್ಟೆಲ್ಲಿನಲ್ಲಿ ಕತೆಗಳನ್ನು ಕೇಳುತ್ತ ರಾತ್ರಿಗಳನ್ನು ಕಳೆದಿದ್ದು ಈಗಲೂ ಮನಸ್ಸಿನಲ್ಲಿ ಹಸಿರಾಗಿದೆ. ‘ದೇಶ ಕಾಲ’ವನ್ನು ನಾನು ಸಂಪಾದಿಸುತ್ತಿದ್ದ ವರ್ಷಗಳಲ್ಲಿ ಅವರು ಬರೆದ ಎಲ್ಲ ಕತೆಗಳೂ ಅಲ್ಲಿಯೇ ಪ್ರಕಟವಾದವೆಂಬುದು ನನಗೆ ಹೆಮ್ಮೆಯ ವಿಷಯ. ಅವರದೊಂದು ಕಥೆಯಲ್ಲಿ ನನ್ನನ್ನೇ ಒಂದು ಪಾತ್ರವಾಗಿಸಿದ್ದಾರೆ ಮತ್ತು ಆ ಕತೆಯೂ ದೇಶ ಕಾಲದಲ್ಲಿಯೇ ಪ್ರಕಟವಾಯಿತು! ದಶಕಗಳ ನಮ್ಮ ಸ್ನೇಹದಲ್ಲಿ ಬಳಸದ ಬಹುವಚನವನ್ನು ಈ ಲೇಖನದಲ್ಲಿ ಬಳಸುವುದು ತುಸು ಎಡಚೆನಿಸುತ್ತಿದೆ.

ರಶೀದ್ ಬರೆಯದೇ ಹೋಗಿದ್ದರೆ, ಇಂಥ ಶ್ರೀಮಂತ, ಅನನ್ಯ ಲೋಕವೊಂದನ್ನು, ಈ ಜೀವನದರ್ಶನವನ್ನು ಕಾಣುವ ಅವಕಾಶ ಕನ್ನಡಿಗರಿಗೆ ಇರುತ್ತಿರಲಿಲ್ಲ. ಕನ್ನಡ ಭಾಷೆಯ ಈ ಸೊಗಸು ನಮ್ಮ ಅರಿವಿಗೆ ಬರುತ್ತಿರಲಿಲ್ಲ. ಇದಕ್ಕಾಗಿ ರಶೀದರಿಗೆ ಅನಂತ ಧನ್ಯವಾದಗಳು.

ವಿವೇಕ ಶಾನಭಾಗ
27 ಜುಲೈ 2021
(ಕೃತಿ: ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್‌ ಎಲಿಜಬೆತ್‌ (ಕತೆಗಳು), ಲೇಖಕರು: ಅಬ್ದುಲ್‌ ರಶೀದ್‌, ಪ್ರಕಾಶಕರು: ಬಹುವಚನ, ಬೆಲೆ: 135/-)