ಬರುವ ವಾರ ಜಾಗತಿಕ ಯುವ ದಿನ ಸಿಡ್ನಿಯಲ್ಲಿ ನಡೆಯಲಿದೆ. ವಾರವಿಡೀ ನಡೆಯುವ ಉತ್ಸವಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಜವ್ವನಿಗರು ಈ ಊರಿಗೆ ಬರುತ್ತಾರೆ. ಸಿಡ್ನಿವಾಸಿಗಳಿಗೆ ಒಂದು ಕಡೆ ಉತ್ಸಾಹವಾದರೆ, ಮತ್ತೊಂದು ಕಡೆ ಆತಂಕ. ಒಂದು ವಾರ ರೈಲು, ಬಸ್ಸುಗಳು ಉತ್ಸವಿಗಳಿಂದ ತುಂಬಿಕೊಂಡು ದೈನಂದಿಕಕ್ಕೆ ದೊಡ್ಡ ತೊಡರಾಗುತ್ತದೆ. ಕೆಲವೇ ದಿನಗಳಾದ್ದರಿಂದ ಸಹಿಸಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅಲ್ಲದೆ, ಇದರಿಂದ ಸಿಡ್ನಿಗೆ ಜಾತ್ರೆಯ ಕಳೆಬರುವುದೇನೋ ನಿಜ. ಆದರೆ ಈ ಜಾತ್ರೆಯ ಹಿಂದಿನ ಶಕ್ತಿಯ ಬಗ್ಗೆ ಮಾತ್ರ ಹಲವರು ಮುಜುಗರಪಡುತ್ತಿದ್ದಾರೆ.

ಯಾರೋ ನಂಬಿಕಸ್ತ ಧರ್ಮಿಷ್ಟರು ಒಟ್ಟಿಗೆ ಸೇರಿ ಮಾಡಿಕೊಳ್ಳುವ ಉತ್ಸವ. ಕ್ಯಾತಲಿಕ್ ಚರ್ಚು ಇದಕ್ಕೆ ಕೋಟ್ಯಾಂತರ ಡಾಲರ್‍ ಸುರಿಯುತ್ತಿದೆ. ಒಂದೆರಡು ವಾರದ ಮಟ್ಟಿಗೆ ಸಿಡ್ನಿಯ ವ್ಯವಹಾರಸ್ತರಿಗೆ ಒಂದಷ್ಟು ಹೆಚ್ಚು ಲಾಭವಾಗುತ್ತದೆ. ಇವೆಲ್ಲಾ ನಿಜ ಮತ್ತು ಯಾರೂ ತಲೆಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ. ಹಾಗಂದು ಸುಮ್ಮನಾಗಬಹುದು. ಇದೆಲ್ಲಾ ಎಲ್ಲಿ ಗೋಜಲಿಗಿಟ್ಟುಕೊಳ್ಳುತ್ತದೆ ಎನ್ನುವುದು ಮಾತ್ರ ಬಲೇ ಆಸಕ್ತಿಯ ಸಂಗತಿ.

ಈ ಉತ್ಸವಕ್ಕೆ ಇಲ್ಲಿಯ ರಾಜ್ಯ ಸರ್ಕಾರ ಸುಮಾರು ಎಂಬತ್ತು ಮಿಲಿಯನ್ ಡಾಲರಿನಷ್ಟು ದುಡ್ಡು ಸುರಿಯುತ್ತಿದೆ. ಅದು ಪ್ರಜೆಗಳ ದುಡ್ಡು, ಹೀಗೆ ಬಳಸುವುದು ಸರಿಯೇ ಎಂದು ಹುಯಿಲೆದ್ದಿತು. ಒಲಂಪಿಕ್ಸಿಗೆ, ಏಪೆಕ್ ಸಮ್ಮಿಟ್ಟಿಗೆ ಕೂಡ ಈ ರೀತಿಯ ದುಡ್ಡು ಖರ್ಚು ಮಾಡಿದ್ದುಂಟು. ಅದು ಸಹಜ ಮತ್ತು ಹೊಸತೇನಲ್ಲ. ಇದರಿಂದ ಟೂರಿಸಂ ಮೂಲಕ ಸಿಡ್ನಿಗೆ ಒಳ್ಳೆಯದೇ ಆಗುತ್ತದೆ ಎಂದು ಧರ್ಮಾದಾಚೆ ಉಳಿಯಬೇಕಾದ ಸರ್ಕಾರದವರೆಲ್ಲಾ ಒಕ್ಕೊರಲಿನಿಂದ ಹಾಡಿದರು. ಹೋಗಲಿ ಬಿಡಿ.

ಆದರೆ ಜನರನ್ನು ನಿಜವಾಗಿಯೂ ಕಿಚಾಯಿಸಿದ್ದು ಮಾತ್ರ ಸರ್ಕಾರ ತರಾತುರಿಯಲ್ಲಿ ಪಾಸು ಮಾಡಿದ ಒಂದು ಕಾಯಿದೆ. ಆ ಕಾಯ್ದೆಯಡಿಯಲ್ಲಿ ಈ ಉತ್ಸವದ ಹೊತ್ತಲ್ಲಿ ಯಾರಾದರೂ ಉತ್ಸವಿಗಳಿಗೆ ಅನಾದರ ಅಥವಾ ಕಸಿವಿಸಿ ಉಂಟುಮಾಡಿದರೆ, ಎಚ್ಚರಿಸಿದ ಮೇಲೂ ಹಾಗೆ ಮಾಡುವುದನ್ನು ನಿಲ್ಲಿಸದಿದ್ದರೆ ಅವರಿಗೆ ೫೫೦೦ ಡಾಲರಿನಷ್ಟು ಜುಲ್ಮಾನೆ ವಿಧಿಸಬಹುದು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕೊಂದನ್ನು ಕಿತ್ತುಕೊಳ್ಳುವ ಹುನ್ನಾರ ಎಂದು ಎಲ್ಲರೂ ಸಿಡಿಮಿಡಿಗೊಂಡಿದ್ದಾರೆ.

ಈ ಉತ್ಸವಕ್ಕೆ ಪೋಪನೂ ಬರುತ್ತಿದ್ದಾನೆ. ಹೋಮೋಸೆಕ್ಸುಯಾಲಿಟಿ ಬಗ್ಗೆ, ಕಾಂಡಾಮುಗಳ ಬಗ್ಗೆ, ಹೆಂಗಸರ ಸಮಾನತೆಯ ಬಗ್ಗೆ ಚರ್ಚಿನ ನಿಲುವು ಎಷ್ಟು ಅನಾದಿ ಕಾಲಕ್ಕೆ ಸಲ್ಲುವಂತ್ತದು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಚರ್ಚಿನ ನಿಲುವನ್ನು ವಿರೋಧಿಸುವವರು ಮತ್ತು ಮುಖ್ಯವಾಗಿ ಚರ್ಚಿನ ಆಶ್ರಯದಲ್ಲಿ ನಡೆದ ಎಷ್ಟೋ ಲೈಂಗಿಕ ಅತ್ಯಾಚಾರಗಳಿಂದ ವ್ಯಕ್ತಿತ್ವ ಹಾಗು ಬದುಕು ನುಚ್ಚುನೂರಾದ ಎಷ್ಟೋ ಮಂದಿ ಪೋಪಿನೆದುರು ಧಿಕ್ಕಾರ ಕೂಗಲು ಇದು ಸದವಕಾಶ. ಮತ್ತು ಅದೊಂದು ಮೂಲಭೂತ ಹಕ್ಕು ಕೂಡ. ಗೇ ಜನಾಂಗದವರಿಂದ ಕೆಣಕುವಂತಹ ವೇಷಭೂಷಣ ತೊಟ್ಟು ಮೆರವಣಿಗೆ ಮಾಡುವ ಯೋಜನೆ ಇದೆ. ಹಲವಾರು ಸಂಘಟನೆಗಳು ಇದೇ ಹೊತ್ತಲ್ಲಿ ವಿಶೇಷ ಚಳುವಳಿಗಳನ್ನು ಹಮ್ಮಿಕೊಂಡಿದೆ. ಈ ಕಾಯ್ದೆ ಆ ಎಲ್ಲ ಹಕ್ಕನ್ನು ಕಿತ್ತುಕೊಳ್ಳಲೇ ರೂಪಿಸಿದಂತಿದೆ.

ಆದರೆ ಈ ಕಾಯ್ದೆ ಬೂಮರಾಂಗಿನಂತೆ ಸರ್ಕಾರಕ್ಕೆ ಬಂದೆರಗಿದ್ದು ಮಾತ್ರ ನಗೆಪಾಟಲಿನ ವಿಷಯ. ಒಂದು ಕಡೆ ಚರ್ಚಿನ ವಿರುದ್ಧವಷ್ಟೇ ಅಲ್ಲದೆ ಈ ಕಾಯ್ದೆಯನ್ನೂ ಧಿಕ್ಕರಿಸಲು ಹೆಚ್ಚೆಚ್ಚು ಜನ ಮುಂದಾಗುತ್ತಿದ್ದಾರೆ. ಪೋಲೀಸರಿಗೆ ಸಹಾಯ ಮಾಡಬೇಕಾಗಿದ್ದ ಎಷ್ಟೋ ಸ್ವಯಂಸೇವಕ ಸಂಘಟನೆಗಳು ಈ ಕಾಯ್ದೆಯಿಂದಾಗಿ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಚರ್ಚಿನವರೇ ಎಷ್ಟೋ ಮಂದಿ ಈ ಕಾಯ್ದೆ ಅನಾವಶ್ಯಕ, ಜನರ ಹಕ್ಕನ್ನು ಹತ್ತಿಕ್ಕುವ ದುರುಳ ಸಾಧನ ಎಂದು ಹೀಗಳೆದಿದ್ದಾರೆ. ಸರ್ಕಾರ ಮಾತ್ರ ಪೋಲೀಸರಿಗೆ ಬೇಕಾದ ಹೆಚ್ಚಿನ ಅಧಿಕಾರವನ್ನು ಕೊಡಲು ಈ ಕಾಯಿದೆ ಅನಿವಾರ್ಯ ಎಂದು ಮೊಂಡು ಹಿಡಿದ ಮಕ್ಕಳಂತೆ ಗೊಣಗುತ್ತಿದ್ದಾರೆ.

ಈ ಎಲ್ಲ ಗೊಣಗಾಟ ಮತ್ತು ಕಿತ್ತಾಟದ ನಡುವೆ ಊರಿಗೆ ಪೋಪಿನ ಸರ್ಕಸ್ ಬಂದು ಬೀಡು ಬಿಡಲಿದೆ. ಆಗ ಎಲ್ಲ ಕಡೆಯವರೂ ಹುಚ್ಚೇಳುತ್ತಾರೆ. ಚಾಕು ನುಂಗುವ, ಬೆಂಕಿ ಉಗುಳುವ, ಹಗ್ಗ ಹತ್ತುವ, ಚಾವಟಿ ಬೀಸುವ ಮತ್ತು ಮುಖ್ಯವಾಗಿ ಬಣ್ಣದ ವೇಷದ ಕೋಡಂಗಿಗಳೂ ಸೇರಿದಂತೆ ಊರಿನ ಬೀದಿ ತುಂಬಾ ಹಲವಾರು ಬಗೆಯ ಸರ್ಕಸ್ ಪ್ರಾಣಿಗಳು ಅಲೆದಾಡುತ್ತವೆ ಅದನ್ನು ಕಾತರದಿಂದ ಎದುರು ನೋಡುತ್ತಾ ಕೂತಿದ್ದೇನೆ.