ಹದಿಮೂರು ವರ್ಷದ ನಂತರ ಮೊನ್ನೆ ನನ್ನ ಹಳೆಯ ಮ್ಯಾನೆಜರ್‍ ಒಬ್ಬಾಕೆಯನ್ನು ಭೇಟಿಮಾಡಿದ್ದೆ. ನನ್ನೊಡನೆ ಇನ್ನೊಂದಿಬ್ಬರು ಇದ್ದರು. ಕುಶಲ ಮಾತು ಎಲ್ಲ ಮುಗಿದು ಊಟ ಮುಂದುವರಿದಂತೆ ನಮ್ಮ ಮಾತು ಎತ್ತೆತ್ತಲೋ ಹರಿದಾಡಿತು. ನಾವೇನೇನು ಮಾಡಿದೆವು, ಎಲ್ಲೆಲ್ಲಿ ಕೆಲಸಮಾಡಿದೆವು, ಎಲ್ಲೆಲ್ಲಿ ಹೇಗಿತ್ತು ಎಂದೆಲ್ಲಾ ಹರಟುತ್ತ ಹೋದೆವು. ಹೆಂಡತಿ ಮಕ್ಕಳ ಸಮಾಚಾರವೂ ಹಾದು ಹೋಯಿತು. ಇಲ್ಲಿ ಒಂದು ವಿಶೇಷವೇನೆಂದರೆ ನಮ್ಮ ಮ್ಯಾನೇಜರಳ ಸಂಸಾರದ ವಿಷಯವನ್ನು ಎತ್ತುವುದಕ್ಕೆ ಎಲ್ಲರಿಗೂ ಹಿಂಜರಿಕೆ. ಅಲ್ಲಿದ್ದವರಿಗೆಲ್ಲಾ ಗೊತ್ತಿದ್ದ ಓಪನ್ ಸಿಕ್ರೆಟ್ ಎಂದರೆ ಆಕೆ ಗಂಡಸರ ಜತೆಗೆ ಭದ್ರವಾದ ಯಾವುದೇ ಸಂಬಂಧದಲ್ಲಿಯೂ ಇಲ್ಲದಿದುದು. ಲಕ್ಷಣವಾಗಿಯೇ ಇರುವ ಆಕೆ ಮೊತ್ತೊಬ್ಬಳು ಹೇಳುವ ಪ್ರಕಾರ ತುಂಬಾ ಬೇಗನೇ ತನಗಿಷ್ಟವಾದ ಗಂಡಸರನ್ನು ಒಲಿಸಿಕೊಳ್ಳಬಲ್ಲಳು ಎಂದು.

ಹದಿನೈದು ವರ್ಷದ ಕೆಳಗೆ ಮದುವೆಯಾಗಿದ್ದರೂ ಒಂದು ವರ್ಷದ ಆಸುಪಾಸಿನಲ್ಲೇ ಅದು ಮುರಿದುಬಿದ್ದಿತ್ತು. ಮದುವೆಯ ಫೋಟೋಗಳನ್ನು ನಮ್ಮೊಡನೆ ಬೀಗುತ್ತಾ ಹಂಚಿಕೊಂಡದ್ದು ನನಗಂತೂ ಚೆನ್ನಾಗಿ ನೆನಪಿದೆ. ಆದರೆ ಆ ಮದುವೆ ಕೊನೆಗೊಳ್ಳುವುದರಲ್ಲಿ ಹೆಚ್ಚು ದಿನ ಹಿಡಿದಿರಲಿಲ್ಲ. ನಮ್ಮ ಗುಮಾನಿಯ ಪ್ರಕಾರ ಈಕೆ ಒಲಿಸಿಕೊಳ್ಳುವಷ್ಟೇ ಬೇಗ ಸಂಗಾತಿಗಳ ಬಗ್ಗೆ, ಗಂಡಸರ ಬಗ್ಗೆ ಬೇಸತ್ತು ಹೋಗುತ್ತಾಳೆ ಎಂದು. ಹಾಗೆಯೇ ಆಕೆಯ ಇನ್ನೊಂದು ಮುಖದ ಬಗ್ಗೆಯೂ ಹೇಳಬೇಕು. ತನ್ನ ಕೆಲಸದಲ್ಲಿ ಅತ್ಯಂತ ವಿಧೇಯಳು ಮತ್ತು ಅತ್ಯಂತ ಕಮಿಟೆಡ್. ಹಲವು ಸಲ ನಾನೇ ನೋಡಿರುವಂತೆ ಹನ್ನೆರಡು, ಹದಿನಾರು ಗಂಟೆಗಳ ಕಾಲ ಎಡೆಬಿಡದೆ ಕೆಲಸ ಮಾಡುತ್ತಿದ್ದಳು. ವರ್ಕೋಹಾಲಿಕ್ ಅನ್ನಬಹುದು. ಅವಳ ವಯ್ಯಕ್ತಿಕ ಬದುಕು ಹಸನಾಗಿರಲು ಅದೂ ಕೂಡ ಒಂದು ತೊಡಕೇ ಆಗಿತ್ತೇನೋ. ಅದೇನೇ ಆದರೂ, ನಮಗೇ ಗೊತ್ತಿರುವಂತೆ ಹಲವರೊಡನೆ ಈಗಾಗಲೇ ಬೆರೆತು-ಮುರಿದು ಹಿಂದೆ ನೋಡದೆ ಮುಂದೆ ನಡೆಯುವುದು ಆಕೆಯ ಪ್ರವೃತ್ತಿ ಮತ್ತು ದಿಟ್ಟತನ. ನಾನೀಗ ಹೇಳ ಹೊರಟಿರುವುದಕ್ಕೂ ಆಕೆಯ ಈ ಸಂಗತಿಗೂ ಏನೂ ಸಂಬಂಧವಿಲ್ಲ.

ನಮ್ಮ ನಮ್ಮ ಅನುಭವಗಳನ್ನು ಹೇಳಿಕೊಳ್ಳುವಾಗ ಒಂದು ಮಾತು ಬಂದಿತು. ನನ್ನ ಹಳೆಯ ಮ್ಯಾನೇಜರ್‍ “ಇಂಡಿಯನ್ನರೊಂದಿಗಿನ ನನ್ನ ಅನುಭವವೆಲ್ಲಾ ಒಳ್ಳೆಯದೇ…” ಎಂದಳು. ನನ್ನ ಜತೆಗಿದ್ದ ಮತ್ತೊಬ್ಬಾಕೆಯೂ ಇಂಡಿಯನ್ನಾದ್ದರಿಂದ ಈ ನಮೂನೆಯ ಮಾತು ಬರುವುದು ನಿರೀಕ್ಷಿತವೇ. ಆದರೆ ಅವಳ ಮಾತು ತುಂಬಾ ಪ್ರಾಮಾಣಿಕವಾಗಿಯೇ ಇತ್ತು. ನನ್ನಿಂದ ತೊಡಗಿ ಹಲವರ ಉದಾಹರಣೆಯನ್ನೂ ಕೊಟ್ಟಳು. ಆಕೆಗದು ನಿಜವಾಗಿಯೂ ಅಭಿಮಾನದ ವಿಷಯವೇ ಆಗಿತ್ತು ಎಂಬುದನ್ನು ಆಕೆಯ ಮಾತಿನ ಧಾಟಿಯಲ್ಲೇ ಹೇಳಬಹುದಿತ್ತು. ಆದರೆ, ಉಳಿದವರು ಬೇರೆ ಬಗೆಯ ಕೆಲವು ಅನುಭವಗಳನ್ನೂ ಕಂಡಿದ್ದರು. ಸಿಂಗಪುರದ ಕೆಲವು ಇಂಡಿಯನ್ ಮೂಲದ ಜನರೊಡೆಗಿನ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡರು. ನಂತರ ಒಬ್ಬಾತ “ತಾನು ಕಂಡ ಹಾಗೆ ಇಂಡಿಯನ್ನರು ಒಳ್ಳೆಯ ಕೆಲಸಗಾರರು, ಆದರೆ ತುಂಬಾ ಬ್ಯಾಡ್ ಮ್ಯಾನೇಜರರು…” ಎಂದ. ಒಂದು ಕ್ಷಣ ನನ್ನ ಇಂಡಿಯಾದ ಕೆಲಸದಲ್ಲಿನ ಮ್ಯಾನೇಜರರ ವಿಚಾರ ತಲೆಯಲ್ಲಿ ಸುಳಿದು ಹೋಯಿತು. ಎಲ್ಲರೂ ಮೌನವಾದೆವು. ನಂತರ ನಾನು “ಹಾಗೆ ಯಾಕಿರಬಹುದು ಎಂದು ನಿಮಗೆ ಅನಿಸುತ್ತದೆ?” ಎಂದು ಓಪನ್ ಪ್ರಶ್ನೆ ಕೇಳಿದೆ. ಯಾರಿಗೂ ಏನೂ ಹೊಳೆಯಲಿಲ್ಲ. ಭುಜ ಕುಣಿಸಿದರು. ಮುಗುಳು ನಕ್ಕರು.

ತುಂಬಾ ಜನರಲ್ ಆದ ಆ ಮಾತನ್ನು ಒಪ್ಪುವುದು ಬಿಡುವುದು ಮುಖ್ಯವಲ್ಲ. ಅಥವಾ ಸರಿ/ತಪ್ಪು ಎನ್ನುವುದೂ ಅಲ್ಲ. ಆದರೆ ಇಂಡಿಯನ್ನರು ಹಾಗೆ ಕಾಣುವುದರ ಹಿಂದೆ ಏನೆಲ್ಲಾ ಇದೆಯಲ್ಲಾ ಎಂದು ಅನಿಸುತು. ಯಾವುದೂ ಸ್ಪಷ್ಟವಲ್ಲದಿದ್ದರೂ ಏನೋ ಹುಡುಕಾಟಕ್ಕೆ ಅದು ಎಡೆಮಾಡಿಕೊಟ್ಟಿತು. ನಮ್ಮ ಚರಿತ್ರೆ, ಸಂಸ್ಕೃತಿ, ಸಮಾಜ ಎಲ್ಲವನ್ನೂ ಅದು ಮತ್ತೊಮ್ಮೆ ಹೊಸ ದಿಟ್ಟಿನಲ್ಲಿ ನೋಡುವಂತೆ ಪ್ರೇರೇಪಿಸಿತು. ಮ್ಯಾನೇಜರನಾಗಲು ಅನರ್ಹ ಎಂದು ನನಗೆ ನಾನೇ ತುಂಬಾ ದಿನಗಳ ಮೊದಲೇ ಹೇಳಿಕೊಂಡಿದ್ದೆ. ತಾಂತ್ರಿಕತೆಯಲ್ಲಿ ಮುಳುಗಬಲ್ಲ ನನ್ನ ಸ್ವಭಾವವೂ ಅದಕ್ಕೆ ಕಾರಣವಿರಬಹುದು. ಹೇಳಿಸಿಕೊಂಡು ಮಾಡಿ ಗೆಲ್ಲುವ ನಾವು ಹೇಳಿ ಮಾಡಿಸುವಾಗ ಸೋಲುತ್ತೇವ ಎಂಬ ಯೋಚನೆ ಒಂದು ಕಡೆಯಾದರೆ ಹಾಗೆಂದು ನಮ್ಮನ್ನು ಗುರುತಿಸುವ ಉಳಿದವರ ಕಣ್ಣಲ್ಲಿ ನಾವು ಹೇಗೆಲ್ಲಾ ಕಾಣುತ್ತೇವಲ್ಲ ಎಂದು ಇನ್ನೊಂದು ಯೋಚನೆಯೂ ಆವರಿಸಿತು.

ಊಟ ಮುಗಿದು ಹೊರಡುವಾಗ ನನ್ನ ಹಳೆಯ ಮ್ಯಾನೇಜರಳು – “ಮತ್ತೆ ಹೀಗೇ ಸಿಗೋಣ… ಇನ್ನೊಂದು ಹತ್ತು ವರ್ಷ ಮಾಡುವುದು ಬೇಡ” ಎಂದು ಪುಟುಪುಟು ರಸ್ತೆ ದಾಟಿ ಹೊತ್ತಾಯಿತು ಎನ್ನುತ್ತಾ ಓಡಿದಳು.