ನಿಮಲ್ಲೀಗ ಉತ್ತರ ಭೂಕಂಡದ ಬಿರುಬಿಸಿಲು ಹಿಂದಾಗಿ ಮುಂಗಾರಿನ ಮೋಡಗಳು ಮುಚ್ಚಿಕೊಳ್ಳುತ್ತಿದೆ ಎಂದು ಗೊತ್ತು. ಅದಕ್ಕೆ ನನ್ನ ಎಷ್ಟೋ ವಿಚಾರಗಳು ನಿಮಗೆ ದೂರ ಅನಿಬಹುದು. ಇಲ್ಲಿ ನನ್ನ ಯೋಚನೆಯನ್ನು ರೂಪಿಸುತ್ತಿರುವುದು ಚಳಿಗಾಲದ ತಂಡಿ ಮತ್ತು ಮುಂಜಾನೆಯ ಮಂಜು. ಬಿಸಿಲೇರಿದರೂ ಹಿತವಾಗುವಷ್ಟೇ ಬೆಚ್ಚಗಾಗುವ ಹಗಲುಗಳು. ಕಂಬಳಿ ಹೊದ್ದು ತಣ್ಣೀರಲ್ಲಿ ನಿಂತ ಹಾಗೆ. ಯಾಕೋ ಬಿಸಿಲಿಗೆ ಹಾತೊರೆಯಲು ಮನಸ್ಸು ಒಪ್ಪುತ್ತಿಲ್ಲ. ಇನ್ನೊಂದಷ್ಟು ಚಳಿಯಿರಲಿ ಅನಿಸುತ್ತಿದೆ. ಇದೆಲ್ಲಾ ಹೀಗೇಕೆ ಎಂದು ತಿಳಿಯುತ್ತಿಲ್ಲ.

ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಳಲ್ಲಿ ಮೈದಾನದಲ್ಲೆಲ್ಲಾ ಬಿಳಿಯ ಹಕ್ಕಿಗಳನ್ನು ನೋಡುತ್ತಿದ್ದೆವು. ಅಲ್ಲಿ ಬಿಳಿಯ ಕಾಗೆಗಳಿವೆ ಎಂದು ನನ್ನ ಗೆಳೆಯರು ನಗುತ್ತಿದ್ದುದು ನೆನಪಿದೆ. ಅವು ಬಿಳಿಯ ಕಾಗೆಗಳೇ ಅಗಿದ್ದರೆ, ನಮ್ಮ ಯಾವ ನುಡಿಗಟ್ಟಿಗೂ ಸಿಕ್ಕದ ಹಾಗೆ ಇವೆಯಲ್ಲ ಅನಿಸಿತ್ತು. ಕನ್ನಡದಲ್ಲಿ ವಿವರಿಸುವಾಗ ಅದಕ್ಕಾಗಿಯೇ ಹೊಸ ನುಡಿಗಟ್ಟಿನ ಅಗತ್ಯವಿದೆಯಲ್ಲಾ ಅನಿಸಿತ್ತು. ಆ ಹೊಸ ನುಡಿಗಟ್ಟನ್ನು ಬಿಳಿ ಮತ್ತು ಕಾಗೆ ಎಂಬ ಎರಡು ಬಿಡಿ ನುಡಿಗಳಿಗಿರುವ ಚರಿತ್ರೆಗಳ ಆಚೆಗೆ ಕಾಣಬೇಕನಿಸುತ್ತಿತ್ತು. ಇಲ್ಲಿಗೆ ಬಂದ ಮೇಲೆ ಅವು ಕಾಗೆಗಳೇ ಅಲ್ಲ. ಸೀಗಲ್ಸ್, ಕಡಲುಕಾಗೆಗಳು ಅಂತ ಗೊತ್ತಾಯಿತು. ಅಬಾರಿಜಿನಿಗಳು ಈ ಕಾಗೆಯನ್ನು ಹೇಗೆ ನೋಡಿದ್ದಾರೆ, ಹೇಗೆ ವಿವರಿಸಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅವರು ಅದನ್ನು ಹೇಗೆ ಒಳಗೆಳೆದುಕೊಂಡಿದ್ದಾರೆ ಎಂದು ಇಷ್ಟು ದಿನ ಯಾಕೆ ನನಗೆ ಕುತೂಹಲವಾಗಲಿಲ್ಲ ಎಂದು ಸಣ್ಣಗೆ ಸಿಟ್ಟು ಬರುತ್ತದೆ. ಇರಲಿ, ಏನೋ ಹೇಳಲು ಹೋಗಿ ಏನೋ ಹೇಳುತ್ತಿದ್ದೇನೆ. ಚಳಿಗಾಲದ ಕತೆಗಳ ಮತ್ತೊಂದು ಲಕ್ಷಣವೇ ದಾರಿ ತಪ್ಪುವುದಲ್ಲವೆ?

ಆದರೆ ಇಲ್ಲಿಯ ಕಾಗೆಗಳೂ ಕಪ್ಪಾಗಿಯೇ ಇವೆ. ಇಂಡಿಯಾದ ಕಾಗೆಗಳಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದು. ಹದ್ದೇನೋ ಎಂಬ ಅನುಮಾನ ಬರುವ ಹಾಗೆ ಅವು ಹಾರಿದಾಗ ದೊಡ್ಡದಾಗಿ ಕಾಣುತ್ತವೆ. ಆದರೆ, ಅವುಗಳ ಬಣ್ಣ ಹದ್ದಿನ ಬಣ್ಣಕ್ಕಿಂತ ಬೇರೆಯಾದ್ದರಿಂದ ತಟ್ಟನೆ ಕಾಗೆಗಳೆಂದು ಹೇಳಿಬಿಡಬಹುದು. ದೊಡ್ಡದಾದರೂ ಹದ್ದಿಗಿರಬೇಕಾದ ಗಾಂಭೀರ್ಯ ಇವುಗಳಿಗಿಲ್ಲ. ಹದ್ದುಗಳು ತಮ್ಮ ಮೈಗಾತ್ರಕ್ಕೆ ಮೀರಿದ ಭಾರವನ್ನು ಹೊರುವಂತೆ ಕಾಣುತ್ತವೆ. ಅದು ಈ ಕಾಗೆಗಳನ್ನು ನೋಡಿದಾಗ ನನ್ನ ಅರಿವಿಗೆ ಬಂದಿದ್ದು. ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಿಕರಿಗೂ ಹಾಗೇ ಅನಿಸಿರಬೇಕು. ಅದಕ್ಕಾಗಿಯೇ ಅವುಗಳು ದೇವತೆಗಳನ್ನು ಹೊರುವಂತಿದೆ ಎಂದು ಚಿತ್ರಿಸಿಕೊಂಡಿರಬೇಕು. ನೋಡಿ ಮತ್ತೆ ಕಾಗೆ ಬಿ‌ಟ್ಟು ಹದ್ದಿನ ಬೆನ್ನು ಹತ್ತಿದೆನಲ್ಲ!

ನಾನು ಚಿಕ್ಕವನಿದ್ದಾಗ ಬೆಂಗಳೂರಿನಲ್ಲಿ ನೋಡುತ್ತಿದ್ದ ಪೀಚು ಕಾಗೆಗಳಿಗಿಂತ ಇವು ದೊಡ್ಡವು ಎಂಬುದಲ್ಲದೆ ಇನ್ನೊಂದು ಭಿನ್ನತೆಯೂ ಇದೆ. ಬೆಂಗಳೂರಿನ ಕಾಗೆಯ ಕಣ್ಣುಗಳಲ್ಲಿ ನಾವು ಪುಟ್ಟವರಿದ್ದಾಗ ಕಾಣುತ್ತಿದ ದಿಗಿಲು ಮತ್ತು ಎಚ್ಚರಕ್ಕೆ ಸಂಬಂಧಪಟ್ಟಿದ್ದು. ಬೆಂಗಳೂರಂತ ನಗರದಲ್ಲಿ, ಸಾವಿರಾರು ವರ್ಷಗಳಿಂದ ಎದುರಾಗದೇ ಇರದ ಹೊಸ ಒತ್ತಡಗಳಿಗೆ ಒಗ್ಗಿಕೊಳ್ಳಬೇಕಾದ ಕಾಗೆಗಳ ಕಣ್ಣಲ್ಲಿ ಬೇರೇನು ಇರಲು ಸಾಧ್ಯ ಎಂದು ಈಗ ಅನಿಸುತ್ತಿದೆ. ನಿಧಾನಕ್ಕೆ ಹೋಗುವ ಎತ್ತಿನಗಾಡಿಯ ಮೇಲೋ, ಜಟಕಾದ ಮೇಲೋ ತಾನೂ ಕೂತು ಮಜಮಾಡಲು ಕಲಿತಿದ್ದ ಕಾಗೆಗಳಿಗೆ ಧಿಡೀರನೆ ಹೊಗೆ ಕಾರುತ್ತ ಭರೋ ಎಂದು ಹೋಗುವ ಬಸ್ಸು, ಕಾರು, ಬೈಕು ಎಷ್ಟೊಂದು ದಿಗಿಲು ಹುಟ್ಟಿಸಿರಬಹುದು ಎಂದು ಕನಿಕರವಾಗುತ್ತದೆ. ಅವುಗಳ ಕಣ್ಣಲ್ಲಿ ಕಂಡದ್ದಕ್ಕೆ ಹೊಸ ಅರ್ಥ ಹೊಳೆಯುತ್ತದೆ. ಅರೆ, ನಾನು ಹೇಳ ಹೊರಟ್ಟಿದ್ದು ಮತ್ತೆ ಮರೆತುಬಿಟ್ಟೆ!

ಇರಲಿ, ಇಲ್ಲಿಯ ಕಾಗೆಗಳ ಕಣ್ಣಲ್ಲಿ ಅಲ್ಲಿರುವಷ್ಟು ದಿಗಿಲು,ಎಚ್ಚರ ನನಗೆ ಕಂಡಿಲ್ಲ. ಸಾಯದೇ ಉಳಿಯಲು ಎಲ್ಲ ಪ್ರಾಣಿಗೂ ಇರಬೇಕಾದಷ್ಟು ಎಚ್ಚರ ಇದ್ದೇ ಇದೆ. ಅಲ್ಲಿಯ ಕಾಗೆಗಳಂತೆ ಇವೂ ಕತ್ತನ್ನು ಆಚೀಚೆ ತಟ್ಟನೆ ತಿರುಗಿ ನೋಡುತ್ತವೆ. ಆದರೂ ಆ ಕಾಗೆಗಳ ಕಣ್ಣಿನ ದಿಗಿಲು ಇಲ್ಲಿದ್ದ ಹಾಗಿಲ್ಲ. ಹಾಗಾಗಿಯೇ ಇವುಗಳು ಏರುವುದರಲ್ಲಿ ಇಳಿಯುವುದರಲ್ಲಿ ಅಲ್ಲಿಯ ಕಾಗೆಗಳಿಗಿಂತ ಹೆಚ್ಚು ನಿಧಾನ ಮತ್ತು ಸಾವಕಾಶ. ಈ ಕಾಗೆಗಳನ್ನು ನೋಡಿದ ಮೇಲೆ ಬೆಂಗಳೂರಿನ ಕಾಗೆಗಳು ಚೋಟುದ್ದದ ಏರ್‍-ಸ್ಟ್ರಿಪ್ಪಿನಲ್ಲೇ ಇಳಿಯಬೇಕಾದ ಪುಟ್ಟ ವಿಮಾನಗಳ ಹಾಗೆ ನೆಲಕ್ಕೆ ಧುಮುಕುತ್ತವೆ ಅನಿಸುತ್ತದೆ. ಛೆ ನೋಡಿ, ಮತ್ತೆ ಯಾವುದಕ್ಕೋ ತಿರುಗಿಬಿಟ್ಟೆ! ನಾನು ಹೇಳ ಹೊರಟಿದ್ದು ಇಲ್ಲಿಯ ಕಾಗೆಗಳ ಬಗ್ಗೆ ಅಲ್ಲವೆ?

ಈವತ್ತು ಮುಂಜಾನೆ ಇಳಿದಿದ್ದ ದಟ್ಟ ಮಂಜಿನ ಪರದೆಯಾಚೆ ಕೂತು ಕಾಗೆಯೊಂದು ಕೂಗುತ್ತಿತ್ತು. ಇಲ್ಲಿನ ಕಾಗೆಗಳು ಕಾವ್-ಕಾವ್ ಅನ್ನಲ್ಲ ಅಂತ ಮೊದಲೇ ನಿಮಗೆ ಹೇಳಬೇಕೆಂದುಕೊಂಡಿದ್ದೆ. ಆಗಿರಲಿಲ್ಲ. ಇರಲಿ, ಅವುಗಳ ಕೂಗು ನಿಜವಾಗಿಯೂ ಯಾವುದೋ ಮಗುವಿನ ಅಳುವನಿಂತೆ, ಕೂಗಿನಂತೆ ಕೇಳುತ್ತದೆ. ಕೂಗುತ್ತಲೇ ಇದ್ದರೆ, ಪಕ್ಕದ ಮನೆಯ ಮಗುವೋ, ಹಿಂದಿನ ಬೀದಿಯ ಮಗುವೋ ಅಳುತ್ತಿದೆ ಅನಿಸದೇ ಇರುವುದಿಲ್ಲ. ಈವತ್ತು ಕಾಗೆಯ ಕೂಗು ಕೇಳಿದೊಡನೆ, ಸಣ್ಣ ಮಗು ಅಳುವುದನ್ನು ಕೇಳಿ ತುಂಬಾ ದಿನವಾಯಿತಲ್ಲ ಅಂತ ಅನಿಸಿತು. ದಟ್ಟ ಮಂಜಿನಾಚೆ ಮಗುವಿನ ಅಳುವಂತೆ ಕೇಳುವ ಕಾಗೆಯ ಕೂಗು. ನನಗೆ ತಿಳಿದ ಯಾವ ನುಡಿಗಟ್ಟಿಗೂ ಒಳ್ಳಗೊಳ್ಳದೇ ಉಳಿದು ಬಿಡುತ್ತದಲ್ಲ. ಏನೆಂದು ತಿಳಿಯಬೇಕು ಅನಿಸುವಾಗಲೇ ಆಗುವ ಕಳವಳ. ಕೂಗು ನಿಲ್ಲದೇ ಕೇಳುತ್ತಲೇ ಇದುದ್ದರಿಂದ ಯಾವುದೋ ಮಗುವಿರಬಹುದೇ ಎಂಬ ಅನುಮಾನ ದಟ್ಟವಾಗುವುದು. ಇಂತ ಚಳಿಯಲ್ಲಿ ಅಳುವ ಮಗುವನ್ನು ಯಾರು ಬಿಡುತ್ತಾರೆ ಎಂದು ಎಷ್ಟು ಸಮಾಧಾನ ಹೇಳಿಕೊಂಡರೂ ಸಾಲದೇ ಹೋಗುವುದು.

ಆ ಮಂಜಿನ ಗೋಡೆಯ ಮೇಲೆ ಉಗುರನ್ನು ಗೀಚಿ ಹರಿದು ಇಣಕಿ ನೋಡಬೇಕನಿಸಿತು. ಆದರೆ ಅಷ್ಟರಲ್ಲಿ ಕೂಗಿನಂತ ಅಳುವೋ, ಅಳುವಿನಂತ ಕೂಗೋ ಆದ ಅದು ನಿಂತಿತು. ಯಾರೋ ಮಗುವನ್ನು ಎತ್ತಿಕೊಂಡು ಅದಕ್ಕೆ ಬೆಚ್ಚಗೆ ಹೊದವಸ್ತ್ರ ಹೊಚ್ಚಿರಬಹುದು. ಬೆಚ್ಚಗಾದ ಸುಖದಲ್ಲಿ ಅದು ಸುಮ್ಮನಾಗಿರಬಹುದು. ಅಥವಾ ಕೂಗಿ ಕೂಗಿ ಗಂಟಲೊಣಗಿ, ಏನೂ ಕಾಣದ ಮಂಜಲ್ಲಿ ಸುಮ್ಮನೆ ಕೂತು ಕಾಗೆಯೊಂದು ಧ್ಯಾನಸ್ತವಾಗಿರಬಹುದು.