ಆಸ್ಟ್ರೇಲಿಯದಲ್ಲಿ ಲೆಬನಾನಿನಿಂದ ಬಂದ ಜನರಿದ್ದಾರೆ. ಹೆಚ್ಚಾಗಿ ಕಾರು ರಿಪೇರಿ ಶಾಪೋ ಅಥವಾ ದಿನಸಿ ಅಂಗಡಿಯೋ ಇಟ್ಟುಕೊಂಡಿದ್ದಾರೆ. ಎಂಬತ್ತರ ದಶಕದ ಲೆಬನಾನ್ ಯುದ್ಧದ ಹೊತ್ತಿನಲ್ಲಿ ತಮ್ಮ ಹಾಗೂ ಮಕ್ಕಳ ಜೀವ ಕಾಪಾಡಿಕೊಳ್ಳಲು ಗುಳೆ ಬಂದವರು. ಹೆಚ್ಚಿನವರು ಮುಸಲ್ಮಾನರಾದರೆ, ಕ್ರಿಶ್ಚಿಯನ್ನರೂ ಇದ್ದಾರೆ. ಮುಸಲ್ಮಾನರೆಂದರೆ ಸಿಡಿಮಿಡಿಯೆನ್ನುವ ಲೋಕದಲ್ಲಿ ಲೆಬನಾನಿನ ಮುಸಲ್ಮಾನರಿಂದ ತಮಗೂ ಇಲ್ಲದ ಸಂಕಟ ಎಂದು ಅಲ್ಲಿನ ಕ್ರಿಶ್ಚಿಯನ್ನರು ಗೊಣಗುತ್ತಾರೆ. ಹಾಗೆಯೇ ಹಲವಾರು ಲೆಬನೀಸರು ಒಳ್ಳೆ ಕೆಲಸಗಳಲ್ಲೂ ಇದ್ದಾರೆ. ಅವರ ಮುಂದಿನ ತಲೆಮಾರಿನ ಮಕ್ಕಳು ಎಲ್ಲರಂತೆ ನಾಡಿನ ಉಳಿದವರೊಂದಿಗೆ ಒಡನಾಡಿಕೊಂಡು, ತಮ್ಮ ಕೆಲಸಗಳಲ್ಲಿ ಮುಂದರಿದಿರುವುದೂ ಇದೆ.

ಲೆಬನೀಸರೆಲ್ಲರೂ ನಮ್ಮಂತೆ ತರಕಾರಿ ತುಂಬಾ ಬಳಸುತ್ತಾರೆ, ಹಿಂದಿ ಚಿತ್ರಗಳನ್ನು ತಪ್ಪದೆ ನೋಡಿ ನಲಿಯುತ್ತಾರೆ. ಅದರ ಹಾಡುಗಳಿಗೆ ಕಾಲು ಕುಣಿಸುತ್ತಾ ತಮ್ಮದಾಗಿಸಿಕೊಳ್ಳುತ್ತಾರೆ. ಆದರೂ ಇವರ ಬಗ್ಗೆ ಇಂಡಿಯಾದವರ ಗಮನ ಮತ್ತು ನಿಲುವು ತುಂಬಾ ವಿಚಿತ್ರವಾದ್ದು.

ಹಲವಾರು ವರ್ಷಗಳ ಹಿಂದಿನ ಮಾತು. ಆಗತಾನೆ ಇಂಡಿಯಾದಲ್ಲಿ ಟಿವಿಕ್ರಾಂತಿ ಶುರುವಾಗಿತ್ತು. ಅಲ್ಲಿಯ ಟಿವಿ ಹಿಡಿಯಲೋಸುಗ ದೊಡ್ಡ ಡಿಶ್ ಆಂಟೆನಾ ಹಾಕಲು ಗೆಳೆಯನೊಬ್ಬನ ಮನೆಯಲ್ಲಿ ನಾವೆಲ್ಲಾ ಒಟ್ಟುಗೂಡಿದ್ದೆವು. ಅದಕ್ಕೆ ಬೇಕಾದ ಕಬ್ಬಿಣದ ಪೈಪೊಂದನ್ನು ಕತ್ತರಿಸಿಕೊಂಡು ಬರಲು ವರ್ಕಶಾಪಿಗೆ ಹೋಗಬೇಕಾಗಿ ಬಂತು. ಆ ವರ್ಕ್‌ಶಾಪಿನಲ್ಲಿ ಭೇಟಿಯಾದ ಒಬ್ಬ ಲೆಬನೀಸಿನವ ಮಾತುಕತೆಯಾಡುತ್ತಾ ಎಲ್ಲರನ್ನೂ ನಗಿಸುತ್ತಿದ್ದ. ಕುಳ್ಳಗೆ, ಕರಿಬಿಳಿ ಮೀಸೆಯ, ಒರಟು ಕೈಗಳ ಐವತ್ತು ದಾಟಿದವ. ನಮ್ಮೊಡನಿದ್ದ ಒಬ್ಬನಿಗೆ ಕಿಡ್ನಿ ಕೆಟ್ಟು ಡಯಾಲಿಸಿಸಿಗೆ ಪ್ರತಿ ವಾರ ಹೋಗುತ್ತಾನೆ ಎಂದು ಅವನಿಗೆ ಗೊತ್ತಾಯಿತು. ಕೂಡಲೆ ಆ ಬೇನೆಗೆ ಯಾವುದೋ ತರಕಾರಿ ಒಳ್ಳೆಯದು ಎಂದು ಹೇಳತೊಡಗಿದ. ಅವನದು ಹರುಕುಮುರುಕು ಇಂಗ್ಲೀಷು, ಆ ತರಕಾರಿಯ ಹೆಸರು ಗೊತ್ತಿರಲಿಲ್ಲ. ಸರಿ, ಆ ತರಕಾರಿಯ ಬಣ್ಣನೆ ಶುರು ಮಾಡಿದ. ಅದರ ಉದ್ದ, ಗಾತ್ರ, ಬಣ್ಣ ಬೆಳೆಯುವ ಪರಿ ಏನು ಹೇಳಿದರೂ ಅವನು ಯಾವ ತರಕಾರಿ ಹೇಳುತ್ತಿದ್ದಾನೆ ಎಂದು ಯಾರಿಗೂ ತಿಳಿಯಲಿಲ್ಲ. ಪೈಪಿನ ಕೆಲಸ ಮುಗಿದಿದ್ದರೂ, ಹೊರಡಲು ಬಿಡವೊಲ್ಲ. ನಮಗಂತು ಅವನಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು. ಅವನೋ ಪಟ್ಟುಬಿಡದೆ ಹೇಗೇಗೋ ಕೈಬೀಸುತ್ತಾ, ಅದರಿಂದ ಅಡುಗೆ ಮಾಡುವುದನ್ನೆಲ್ಲಾ ವಿವರಿಸುತ್ತಾ ಹೋದ. ಕಡೆಗೆ ಎಲ್ಲವೂ ವಿಫಲವಾದಾಗ ತನ್ನ ಮನೆಯ ಅಡ್ರೆಸ್ ಕೊಟ್ಟು ಅಲ್ಲಿಗೆ ಬಾ, ಹಿತ್ತಲಲ್ಲಿ ಬೆಳೆದಿದೆ ಕೊಡುತ್ತೇನೆ ಅಂದ.

ಡಿಶ್ ಮೇಲಕ್ಕೇರಿಸಿ ಇಂಡಿಯ ಟಿವಿ ನೋಡಿ ನಲಿಯುತ್ತಾ ನಮಗೆ ಅವನ ಮಾತು ಮರೆತೇ ಹೋಯಿತು. ನಮ್ಮ ಗೆಳೆಯನೂ ಮರೆತನೋ ಅಥವಾ ಯಾರು ಹೋಗುತ್ತಾರೆ ಎಂದೋ ಅವನಲ್ಲಿಗೆ ಹೋಗಲೇ ಇಲ್ಲ. ಎರಡು ದಿನ ಕಾದ ಅವನು, ಇವನು ಯಾಕೆ ಬರಲಿಲ್ಲ ಎಂದು ಚಡಪಡಿಸಿದನಂತೆ. ನಾವು ಮಾತು ಮಾತಿಗೆ ಹೇಳಿದ್ದ ಅಡ್ರೆಸ್ಸಿನ ಅಂದಾಜಿನ ಮೇಲೆ ಅಲೆದೂ ಅಲೆದೂ ನಮ್ಮ ಗೆಳೆಯನ ಮನೆ ಹುಡುಕಿಕೊಂಡು ಬಂದನಂತೆ. ಯಾಕೆ ಬರಲಿಲ್ಲ ಎಂದು ದಬಾಯಿಸದನಂತೆ. ತನ್ನ ಹಿತ್ತಲಲ್ಲಿ ಬೆಳೆದಿದ್ದ ತರಕಾರಿಯನ್ನು ಅವರ ಮುಂದೆ ರಾಶಿ ಹಾಕಿದನಂತೆ. ಅದನ್ನು ಹೇಗೆ ಬೇಯಿಸಬೇಕು, ಹೇಗೆ ತಿನ್ನಬೇಕು ಎಂದು ಗಂಟೆ ಕಾಲ ಹೇಳಿದನಂತೆ. ನಂತರ ಟೀ ಕುಡಿದು ಬೈ ಹೇಳಿ ಹೊರಟುಹೋದನಂತೆ. ಇದನ್ನೆಲ್ಲಾ ನಮಗೆ ಹೇಳಿದ ಗೆಳೆಯ “ನೋಡಿ ಅವರಲ್ಲೂ ಒಳ್ಳೆಯವರಿರುತ್ತಾರೆ” ಎಂದಿದ್ದ! ನಾನು ಅವಕ್ಕಾಗಿದ್ದೆ.

ನಾನ್-ವೆಜ್ ತಿನ್ನದ ನಮ್ಮ ಎಷ್ಟೋ ಜನ ಸಂಪ್ರದಾಯಸ್ತರು ಲೆಬನೀಸರ ಅಂಗಡಿಗಳಿಗೆ ಹೋಗುವುದಿಲ್ಲ. ತಲೆಯಲ್ಲಿ ಏನೇನೋ ತುಂಬಿಕೊಂಡು ಆ ಅಂಗಡಿಗಳತ್ತ ಸುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲೊಂದು ತಮಾಷೆ ನೋಡಿ. ಲೆಬನೀಸರ ದಿನಸಿ ಅಂಗಡಿಯಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ, ಖರ್ಜೂರ ಚೆನ್ನಾಗಿ ಇರುತ್ತದೆ. ಕಡಿಮೆ ಬೆಲೆಗೂ ಸಿಗುತ್ತದೆ. ಅವನ್ನೇ ಬಣ್ಣದ ಡಬ್ಬದಲ್ಲಿ ತುಂಬಿ ಎರಡರಷ್ಟು ಬೆಲೆಗೆ ಸೂಪರ್ ಮಾರ್ಕೆಟ್ಟುಗಳಲ್ಲಿ ಮಾರುತ್ತಾರೆ. ಆ ಮೋಸವನ್ನು ನಮ್ಮವರು ಬಲು ಬೇಗ ಅರಿತುಕೊಳ್ಳುವ ಜಾಣರು. ಆದರೂ ಲೆಬನೀಸಂಗಡಿಗೆ ಹೋಗಕೂಡದು ಎಂದು ತಾಕೀತು ಮಾಡುವ ಭಾರತೀಯ ಗಂಡಂದಿರಿದ್ದಾರೆ. ಅಲ್ಲಿಂದ ತಂದ ಬಾದಾಮಿ ಗೋಡಂಬಿ ಕೇಜಿಗಟ್ಟಲೆ ತಿನ್ನಿಸಿ ಬೇರೆಯವರು ತಮ್ಮ ಮಕ್ಕಳನ್ನು ದಷ್ಟಪುಷ್ಟವಾಗಿ ಬೆಳೆಸುತ್ತಾರೆ ಎಂದು ಪರಿತಪಿಸುವ ಅವರ ಹೆಂಡತಿಯರಿದ್ದಾರೆ. ಆ ಹೆಂಡತಿಯರು ‘ಹೋದರೆ ಏನೀಗ’ ಎಂದು ಹತ್ತಿರದವರ ಜತೆ ಅಸಹನೆಯಿಂದ ಗುಸುಗುಸು ಅಂದುಕೊಳ್ಳುತ್ತಾರೆ. ಕಡೆಗೆ ತಡೆಯಲಾರದೆ ಗಂಡನ ಕಣ್ಣುತಪ್ಪಿಸಿ, ಬೇರೆಲ್ಲಿಂದಲೋ ತಂದೆ ಎಂದು ಸುಳ್ಳು ಹೇಳುತ್ತಾರೆ. ಲೆಬನೀಸಂಗಡಿಯಿಂದಲೇ ತಂದು ತಮ್ಮ ಮಕ್ಕಳಿಗೂ ತಿನ್ನಿಸಿ ನೆಮ್ಮದಿಪಡುತ್ತಾರೆ. ಈ ನಮ್ಮ ತಾಯಂದರಿಗೆ ಆ ಅಂಗಡಿಯವ ಲೆಬನೀಸನೋ ಮುಸಲ್ಮಾನನೋ ಅನ್ನುವದಕ್ಕಿಂತ ತಮ್ಮ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುವುದು ಬೇಕಾಗಿರುತ್ತದೆ.