ಸುಮಾರು ೫೦,೦೦೦ ಕೆಲಸಗಾರರನ್ನು ತೆಗೆದುಹಾಕಿ ಮಾರ್ಕೆಟ್ಟಿನಲ್ಲಿ ತನ್ನ ಸ್ಥಾನವನ್ನು ಭದ್ರಮಾಡಿಕೊಳ್ಳಲು ಹವಣಿಸಿದ ಜಾಗತಿಕ ಬ್ಯಾಂಕಿನ ಸುದ್ದಿ ಕೇಳಿಯೇ ಇರುತ್ತೀರಿ. ಒಂದೆರಡು ವರ್ಷದ ಹಿಂದೆ ಐವತ್ತು ಡಾಲರಿದ್ದ ಶೇರುಬೆಲೆ ನಾಕೈದು ಡಾಲರಿಗೆ ಇಳಿದು ಬ್ಯಾಂಕು ನಖಶಿಖಾಂತ ನಡುಗಿದ ಸುದ್ದಿಯನ್ನೂ, ಅಮೇರಿಕಾ ಸರ್ಕಾರ ಜನರ ದುಡ್ಡನ್ನು ಬ್ಯಾಂಕಿಗೆ ಕೊಟ್ಟು ಬಚಾವ್ ಮಾಡಿದ್ದನ್ನೂ ಕೇಳಿರುತ್ತೀರಿ. ಇವೆಲ್ಲ ನನ್ನ ಮಟ್ಟಿಗೆ ಸುದ್ದಿ ಮಾತ್ರ ಆಗಿರಲಿಲ್ಲ. ಹಾಗೆ ನೋಡಿದರೆ ಇಂತಹ ಸುದ್ದಿಗಳು ಯಾರಿಗೂ ಸುದ್ದಿ ಮಾತ್ರವೇ ಆಗಿರುವುದಿಲ್ಲ. ಇವುಗಳ ಹೊಡೆತ, ಪರಿಣಾಮ ಎಲ್ಲರಿಗೂ ಒಂದಲ್ಲ ಒಂದು ಬಗೆಯಲ್ಲಿ ಆಗಿಯೇ ಇರುತ್ತದೆ. ಕೆಲವರಿಗೆ ತಡವಾಗಿ, ಕೆಲವರಿಗೆ ತಕ್ಷಣಕ್ಕೆ. ಸಮಾಜದ ಎಲ್ಲ ಅಂಗಗಳನ್ನು ವ್ಯಾಪಿಸಿಬಿಡುವ ದೊಡ್ಡ ಕಾರ್ಪೊರೇಷನ್‌ಗಳ ಸಂಗತಿಯೇ ಹಾಗಲ್ಲವೆ.

ಹೋದವಾರ ಅದೇ ಬ್ಯಾಂಕಿನಲ್ಲಿ ನನ್ನ ಸುತ್ತಮುತ್ತಲೇ ಹತ್ತಾರು ಜನರನ್ನು ಬಹಳ ಪ್ರೊಫೆಶನಲ್ಲಾಗಿ ಬಾಸ್ ಕೆಲಸದಿಂದ ವಜಾ ಮಾಡಿದ. ಕ್ಷಮೆ ಯಾಚಿಸದೆ ಏನು ಹೇಳಬೇಕು, ಎಷ್ಟು ಹೇಳಬೇಕು ಎಂದು ಮೊದಲೇ ಆತನಿಗೆ ಸೂಚನೆಗಳು ಬಂದಿದ್ದವಂತೆ. ಅದರ ಪ್ರಕಾರ ಚಾಚೂ ತಪ್ಪದೆ, ಸದ್ದುಗದ್ದಲವಿಲ್ಲದೆ ಚುರುಕಾಗಿ ವಜಾ ಕಾರ್ಯಕ್ರಮ ಜರುಗಿತು. ಜಗತ್ತಿನ ಇತಿಹಾಸದಲ್ಲೇ ಅತಿ ಹೆಚ್ಚಿನ ವಜಾಗಳಲ್ಲಿ ಇದೂ ಒಂದು ಎಂದು ಸುದ್ದಿ ಕೇಳುವಾಗ ಏನೂ ಅನಿಸಿರಲಿಲ್ಲ. ಆದರೆ ಅಂದು ಅಕ್ಕಪಕ್ಕದ ಖಾಲಿ ಡೆಸ್ಕುಗಳನ್ನು, ಅದರ ಮೇಲೆ ಪೂರ್ತಿ ಮಾಡಿರದ ನೋಟ್ಸುಗಳನ್ನು, ಅರ್ಧ ಕುಡಿದಿಟ್ಟ ಕಾಫಿಗಳನ್ನು ನೋಡಿದಾಗ ಆ ಸುದ್ದಿ ವಿಚಿತ್ರವಾಗಿ ತಟ್ಟಿತು. ವಜಾ ಆಗದೆ ಉಳಿದವರು ಕಂಗೆಟ್ಟ ಕೋಳಿಗಳಂತೆ ಅತ್ತಿತ್ತ ನೋಡುತ್ತಾ ಇರುವುದು ಸುದ್ದಿಯನ್ನು ಮನದಟ್ಟು ಮಾಡಿತು. ಆ ಬ್ಯಾಂಕಿಗೆ ನೇರವಾಗಿ ಕೆಲಸ ಮಾಡದ ನನ್ನ ಸ್ಥಿತಿ ಭದ್ರವೋ ಅಭದ್ರವೋ ಎರಡೂ ನಿಶ್ಚಿತವಲ್ಲ ಎಂಬುದು ತಿಳಿಯಿತು.

ಅದೇ ಬ್ಯಾಂಕಲ್ಲಿ ಹತ್ತಾರು ವರ್ಷ ಬೇರೆಬೇರೆ ದೇಶದಲ್ಲಿ ಕೆಲಸ ಮಾಡಿದ್ದ ಇಂಡಿಯನ್ ಮೂಲದ ಮಹಿಳೆ ಎಂದಿನಂತೆ ಒಂಬತ್ತಕ್ಕೆ ಕೆಲಸಕ್ಕೆ ಬಂದಳು. ಆಗ ಗೊತ್ತಿರದ ಸಂಗತಿ ಆಕೆಗೆ ೯.೧೫ಕ್ಕೆ ಗೊತ್ತಾಯಿತು. ತನ್ನ ಕೆಲವು ಸಮಾನುಗಳನ್ನು ಒಂದು ರಟ್ಟಿನ ಬಾಕ್ಸಿಗೆ ತುಂಬಿ, ಪಕ್ಕದಲ್ಲಿದ್ದ ತನ್ನ ಗೆಳತಿಯ ಕಾಲಡಿ ಇಟ್ಟು ಆಕೆ ಹೊರ ಹೋಗಬೇಕಾಯಿತು. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಆಕೆಯ ಬಾಸ್, ಆಕೆಯನ್ನು ಲಿಫ್ಟಿನವರೆಗೂ ಬಿಟ್ಟು ಬರಲು ಹೋದ. ಆಕೆ ಹೋದ ಮೇಲೂ ಆತ ತಲೆ ಕೆಳಗೆ ಹಾಕಿ ಕಾರಿಡಾರಿನಲ್ಲಿ ಅರ್ಧಗಂಟೆ ನಿಂತಿದ್ದು ನೋಡಿದಾಗ ಜ್ವರ ಯಾರಿಗೆ ಬರೆ ಯಾರಿಗೆ ಅನಿಸಿತು.

ನನ್ನ ಸುತ್ತಮುತ್ತ ಆದದ್ದಕ್ಕಿಂತ ಹೆಚ್ಚಾಗಿ ಇಪ್ಪತ್ತನಾಕನೇ ಮಹಡಿಯ ಟ್ರೇಡಿಂಗ್ ಫ್ಲೋರಿಂದ ಸಿಕ್ಕಾಪಟ್ಟೆ ಜನರನ್ನು ಮನೆಗೆ ಕಳಿಸದರಂತೆ. ಅಲ್ಲಿಂದ ಲಿಫ್ಟ್‌ಗಳು ತುಂಬಿ ತುಂಬಿ ಇಳಿಯುತ್ತಿತ್ತಂತೆ. ಕೆಲವರು ಆಗಸ ಕಳಚಿ ಬಿದ್ದಂತಿದ್ದರಂತೆ. ಇನ್ನು ಕೆಲವರು ನಗುತ್ತಿದ್ದರಂತೆ, ಅರ್ಧ ಖುಷಿ ಅರ್ಧ ಶಾಕ್‌ನಿಂದ. ಇವೆಲ್ಲವನ್ನು ತನ್ನ ಸರದಿಯೂ ಬರುತ್ತದೇನೋ ಎಂಬಂತೆ ನಡುಗುವ ದನಿಯಲ್ಲಿ ಒಬ್ಬರಿಗೊಬ್ಬರು ಪಿಸುಗುಟ್ಟಿಕೊಳ್ಳುತ್ತಿದ್ದರು. ತಮ್ಮ ಸಂಗಾತಿಯರಿಗೆ ಫೋನ್ ಮಾಡಿ ನಾನಿನ್ನೂ ಕೆಲಸ ಕಳಕೊಂಡಿಲ್ಲ ಎಂದು ತಗ್ಗಿದ ದನಿಯಲ್ಲಿ ಹೇಳುತ್ತಿದ್ದರು. ಪಕ್ಕದಲ್ಲಿ ಕಾಣುತ್ತಿದ್ದ ಎತ್ತರದ ಬಿಲ್ಡಿಂಗಿನ ಹೊರಗೆ ತೊಟ್ಟಿಲು ಕಟ್ಟಿಕೊಳ್ಳದೆ, ಮೈಗೆ ಹಗ್ಗ ಬಿಗಿದುಕೊಂಡು ಜೋತಾಡುತ್ತಾ ಕಿಟಕಿ ಗಾಜನ್ನು ಕ್ಲೀನ್ ಮಾಡುತ್ತಿದ್ದವರನ್ನು ಕೆಲವರು ಮೌನವಾಗಿ ದಿಟ್ಟಿಸುತ್ತಿದ್ದರು. ಬೇರೆ ದಿನವಾಗಿದ್ದರೆ ಆ ಕೆಲಸಕ್ಕೆ ಸಿಗುವ ಸಂಬಳ ಹಾಗು ಅದರ ರಿಸ್ಕಿನ ಬಗ್ಗೆ ಜೋರಾದ ಚರ್ಚೆ ನಡೆದಿರುತ್ತಿತ್ತು.

ಪ್ರತಿ ಶುಕ್ರವಾರ ಸಂಜೆ ಬ್ಯಾಂಕಿನ ಬಾಬ್ತಲ್ಲೇ ಒಟ್ಟಿಗೆ ಕೂತು ವೈನ್, ಬಿಯರ್ ಕುಡಿದು “ಅನ್-ವೈಂಡ್” ಆಗುವುದು ರೂಢಿ. ಆದರೆ ಆ ಶುಕ್ರವಾರ ಸಂಜೆ ಮಾತ್ರ ಹೆಚ್ಚು ಜನರಿರಲಿಲ್ಲ. ಸಿಟ್ಟು, ಆತಂಕ, ನಿರಾಶೆ ಎಲ್ಲ ಅವಕ್ಕೆ ಕಾರಣವಾಗಿದ್ದವೇನೋ. ಹತ್ತಾರು ವರ್ಷ ಜತೆಯಲ್ಲಿ ಕೆಲಸ ಮಾಡಿದವರಿಗೆ ಹೊರತಳಲ್ಪಟ್ಟಾಗ ಬೈ ಹೇಳಲು ಆಗಿರದಿದ್ದ ಕೆಲವರು ಪಕ್ಕದ ಪಬ್ಬಿಗೆ ಬಂದಾಗ ಹಲವರು ಸೇರಿದ್ದೆವು. ಒಂದು ವರ್ಷವಷ್ಟೇ ಕೆಲಸ ಮಾಡಿದ್ದ ಹತ್ತೊಂಬತ್ತರ ಮುದ್ದುಮುಖದ ಹುಡುಗ ದೈಹಿಕವಾಗಿ ಮಾತ್ರ ನಮ್ಮ ಮುಂದಿದ್ದ. ತನ್ನ ಮೌಲ್ಯವೇ ಪ್ರಶ್ನೆಗೊಳಪಟ್ಟಂತೆ, ನಾನೇನು ತಪ್ಪು ಮಾಡಿದೆ ಎನ್ನುವಂತೆ ಎಲ್ಲರನ್ನೂ ನೋಡುತ್ತಿದ್ದ. ನಾಕಾರು ವರ್ಷ ಕೆಲಸ ಮಾಡಿದ್ದ ದೊಡ್ಡ ಬಾಯಿಯವ ಆಗಲೇ ಹೊಸ ಬಿಸಿನೆಸ್ ಕಾರ್ಡ್ ಮಾಡಿಸಿಕೊಂಡು ಬಂದು ಹಂಚುತ್ತಿದ್ದ. ಹದಿನೈದು ವರ್ಷದಿಂದ ಕೆಲಸ ಮಾಡಿದ್ದ ಹದಿಹರೆಯದ ಮಕ್ಕಳಿರುವವ ಹಿಂದಿನ ದಿನದ ಅನುಭವ ವಿವರಿಸುತ್ತಿದ್ದ. ಮನೆಗೆ ಹೋಗುತ್ತಿದ್ದೇನೆ ಎಂದು ಹೆಂಡತಿಗೆ ಹೇಳಿದ್ದು ಆಕೆ ಅರ್ಥವಾಗಲು ತುಂಬಾ ಹೊತ್ತು ಹಿಡಿಯಿತಂತೆ. ಗೊತ್ತಾದೊಡನೆ ಸಂಜೆ ಬೇಗ ಮನೆಗೆ ಬಂದು, ಸ್ಪೆಷಲ್ ಡಿನ್ನರ್‍ ಯೋಜಿಸಿ, ಜತೆಗೆ ತಂದಿದ್ದ ವೈನ್ ಕೊಟ್ಟು ಬೇಸರಿಸಬೇಡ ಎಂದು ಅಪ್ಪಿಕೊಂಡಳಂತೆ. ರಾತ್ರಿ ತುಂಬ ಹೊತ್ತನವರೆಗೆ ತಾನೇ ಬೇಸರಿಸಿಕೊಂಡು ಮಲಗಲಿಲ್ಲವಂತೆ. ಹೆಂಡತಿಯ ಆ ನಡವಳಿಕೆ ನಗುವಂತ ಜೋಕೋ ಅಲ್ಲವೋ ಎಂದು ಆತನಿಗೇ ತಿಳಿದಂತಿರಲಿಲ್ಲ.

ಈ ಹೊತ್ತೇ ಅಂತದು. ಯಾವುದು ಜೋಕು ಯಾವುದು ಅಲ್ಲ ಎಂದು ಹೇಳುವುದೇ ಕಷ್ಟ. ಯಾವುದೂ ಜೋಕಲ್ಲ ಎಂದು ತಲೆಗೆ ಕೈಹೊತ್ತು ಕೂರಬಹುದು ಅಥವಾ ಎಲ್ಲವನ್ನೂ ನಗುನಗುತ್ತಾ ನೋಡಬಹುದು. ದೂರದಲ್ಲೆಲ್ಲೋ ಈ ಜಾಗತಿಕ ಬೃಹತ್ ಯಂತ್ರದ ಮೇಲ್ವಿಚಾರಣೆ ತಪ್ಪಿ ಗೇರಿನ ಹಲ್ಲು ಮುರಿಯುತ್ತದೆ. ನಮ್ಮ ಪಕ್ಕದಲ್ಲೇ ಗರಗರ ಸದ್ದು ಮಾಡಿ ದಿನವಹಿ ಬದುಕನ್ನು ಕದಡುತ್ತದೆ. ಈವರೆಗು ಕಂಡಿರದ ಕೊಂಡಿಗಳು ನಿಚ್ಚಳವಾಗುತ್ತದೆ.