ಈ ಕೆಲವು ವರ್ಷಗಳ ಕೆಳಗೆ ಆಸ್ಟ್ರೇಲಿಯವೂ ತೀವ್ರವಾದಿಗಳ ಬಾಂಬ್ ದಾಳಿಯಿಂದ ತತ್ತರಿಸಿತ್ತು. ಆಸ್ಟ್ರೇಲಿಯದ ಹರೆಯದವರು ಮೋಜು ಮಾಡಲು ಹೋಗುವ ಬಾಲಿಯ ಹೋಟೆಲ್ ಮೇಲಿನ ಬಾಂಬ್ ದಾಳಿಯಲ್ಲಿ ಹಲವು ಆಸೀಗಳು ಪ್ರಾಣಬಿಟ್ಟಿದ್ದರು. ಈಗ ಇಂಡಿಯದ ಹಿಂದೂವಾದಿಗಳಂತೆ ಆಗ ಇಲ್ಲೂ ಕೆಲವರು ತೊಡೆ ತಟ್ಟಿಕೊಂಡು ಕೂಗಾಡಿದ್ದರು. ಆಸ್ಟ್ರೇಲಿಯದ ಯುದ್ಧ ವಿಮಾನಗಳು ಇಂಡೊನೀಷಿಯಾದ ತೀವ್ರವಾದಿ ನೆಲೆಗಳ ಮೇಲೆ ದಾಳಿಯಿಡುವುದೊಂದೇ ಉಳಿದಿರುವ ದಾರಿ ಎಂದು ಕೂಗಾಡಿದರು. ಇಲ್ಲದಿದ್ದರೆ, ಇನ್ನೊಂದೆರಡು ವರ್ಷದಲ್ಲಿ ದಂಡೆತ್ತಿ ಬಂದು ನಮ್ಮನ್ನು ಆಕ್ರಮಿಸಿ ಆಸ್ಟ್ರೇಲಿಯವನ್ನು ಮುಸ್ಲಿಮ್ ದೇಶ ಮಾಡಿಬಿಡುತ್ತಾರೆಂದು ಹಾರಾಡಿದರು.

ಆಗಲೂ ತುಸು ತಣ್ಣಗೆ ಯೋಚಿಸುವವರು ಕಂಗೆಟ್ಟಿದ್ದರು. ಏನು ಮುಂದಿನ ದಾರಿ ಎಂದು ತಡಬಡಿಸಿದರು. ಬೆದರಿದವರಂತೆ, ಸೋತವರಂತೆ ಕೊಂಚ ಮೌನವಾಗಿ ಇದ್ದರು. ತೀವ್ರವಾದಕ್ಕೆ ತೀವ್ರವಾದ ಉತ್ತರವಾಗಕೂಡದು ಎಂದು ನಂಬಿದ್ದವರು ಆಗಲಾರದು ಎಂದು ವಿವರಿಸಲು ಹೆಣಗಿದರು.

ಸದ್ಯ, ಯುದ್ಧವಿಮಾನಗಳು ದಾಳಿಯಿಡಲಿಲ್ಲ. ಬಾಂಬ್ ದಾಳಿಯಿಂದ ತಮ್ಮ ಜೀವನಾಧಾರ ಕಳೆದುಕೊಂಡ ಬಾಲಿ ಜನರ ಕತೆ ವ್ಯಥೆ ಗೊತ್ತಾಗ ತೊಡಗಿತು. ಆಸ್ಟ್ರೇಲಿಯನ್ನರು ಹೆಚ್ಚು ಹೆಚ್ಚಾಗಿ ಬಾಲಿಗೆ ಹೋಗಬೇಕು. ಹೆದರಬಾರದು, ಸೋಲಬಾರದು – ಅದೊಂದು ಉತ್ತರವಾಗಬೇಕು ಎಂದು ಹಲವರು ಹೇಳಿದರು. ಬಾಲಿಗೆ ಹೋಗುವವರ ಸಂಖ್ಯೆ ಕ್ರಮೇಣ ಜಾಸ್ತಿಯಾಗಿ ಮತ್ತೆ ಮುಂಚಿನಂತಾಯಿತು. ಮುಂಬೈ ದಾಳಿಯಾದಾಗ ಬಾಲಿಗೆ ಮೋಜು ಮಾಡಲು ಹೋಗಿದ್ದ ನನ್ನ ಗೆಳೆಯ ಅಲ್ಲಿಂದಲೇ ಇಮೇಲ್ ಕಳಿಸಿದ್ದ.

ಆಸ್ಟ್ರೇಲಿಯ ಸರ್ಕಾರ ಜನರ ಮುಂದೆ ಎದೆತಟ್ಟಿಕೊಳ್ಳುವ ಮಾತಾಡುತ್ತಿದ್ದರೂ ಒಳಗೊಳಗೆ ಒಂದೆರಡು ಕೆಲಸವನ್ನು ಮಾಡುತ್ತಿತ್ತು. ಇಂಡೊನೀಷಿಯಾದ ಸೈನ್ಯದ ಜತೆ ತನ್ನ ಸಂಬಂಧವನ್ನು ಇನ್ನಷ್ಟು ಬಿಗಿ ಮಾಡಿಕೊಳ್ಳತೊಡಗಿತು. ಜತೆಜತೆಗೆ ತರಬೇತು ಮಾಡುವುದನ್ನು ಹೆಚ್ಚಿಸಿಕೊಂಡಿತು. ಅದು ಹಲವರ ಅನುಮಾನ ಮತ್ತು ಸಿಟ್ಟಿಗೆ ಕಾರಣವಾಗಿತ್ತು. “ಇಂಡೋನಿಷಿಯಾವನ್ನು ನಂಬಲು ಸಾಧ್ಯವಿಲ್ಲ. ಎಷ್ಟೆಂದರೂ ಅದು ಮುಸ್ಲಿಮರದೇ ದೇಶ” ಎನ್ನುತ್ತಾ ಅಲ್ಲಿಯ ಚಿಕ್ಕಪುಟ್ಟ ಮುಲ್ಲಾಗಳ ಮಾತುಗಳನ್ನು ಉದಹರಿಸತೊಡಗಿದರು. ಆಸ್ಟ್ರೇಲಿಯಕ್ಕೆ ಕೊನೆಗಾಲ ಕಾದಿದೆ ಎಂದು ಹುಯಿಲಿಟ್ಟರು.

ಆದರೆ ಆಸ್ಟ್ರೇಲಿಯ ಸರ್ಕಾರ ಸೈನ್ಯ ತರಬೇತಿಗಿಂತ ಮುಖ್ಯವಾಗಿ ಮಾಡಿದ ಇನ್ನೊಂದು ಕೆಲಸ – ಇಂಡೊನೀಷಿಯದ ಗುಡ್ಡಗಾಡುಗಳಲ್ಲಿನ ಹಳ್ಳಿ ಶಾಲೆಗಳಿಗೆ ಹಣ, ಸರಕುಗಳ ಮೂಲಕ ಬೆಂಬಲ ಕೊಡತೊಡಗಿದ್ದು. ಆ ಬೆಂಬಲ ಹಲವು ಕಡೆ ಮದ್ರಾಸಗಳಿಗೂ ತಲುಪಿತು. ಮತ್ತೆ ಕೂಗಾಟ ಶುರುವಾಯಿತು. “ನಾವೇ ಉಗ್ರಗಾಮಿಗಳನ್ನು ತಯಾರು ಮಾಡಲು ಸಹಾಯ ಮಾಡುತ್ತಿದ್ದೇವೆ. ನಾಳೆ ಸಿಡ್ನಿ, ಮೆಲ್ಬರ್ನ್‌ಗಳಲ್ಲಿ ಬಾಂಬು ಸಿಡಿಯುತ್ತವೆ” ಎಂದು ಎಗ್ಗಿಲ್ಲದೆ ಹರಿಹಾಯ್ದರು.

ಆಸ್‌ಏಯ್ಡ್ ಎಂಬ ಸರ್ಕಾರಿ ಸಂಘಟನೆಯ ಮೂಲಕ ಸಾವಿರ ಹೊಸ ಶಾಲೆಗಳು ತೆರೆದುಕೊಂಡವು. ಇನ್ನೊಂದೆರಡು ಸಾವಿರ ಶಾಲೆಗಳ ಜೀರ್ಣೋದ್ಧಾರವಾದವು. ಹಲವು ಬಾಲಕಿಯರ ಶಾಲೆಗಳು ಮತ್ತೆ ಮೇಲೆದ್ದವು. ವಿದ್ಯಾಭ್ಯಾಸ ಕನಸಾಗಿದ್ದ ಎಷ್ಟೋ ಪುಟ್ಟ ಮಕ್ಕಳು ಬರೆಯಲು ಓದಲು ಕಲಿಯುವ ಉಮೇದಿಂದ ಕುಣಿದಾಡಿದರು. ವಿದ್ಯಾಭ್ಯಾಸ “ಸೆಕ್ಯುಲರ್” ಆಗಿರಬೇಕೆಂಬ ತಾಕೀತೊಂದನ್ನು ಹಾಕಿ ಈಗಲೂ ಬೆಂಬಲ ಕೊಡುತ್ತಿದ್ದಾರೆ. ಮದ್ರಾಸದಲ್ಲೂ ಕುರಾನ್ ಪಠಣ, ಇಸ್ಲಾಮ್ ವಿದ್ಯಾಭ್ಯಾಸದ ಜತೆಗೆ ಸೆಕ್ಯುಲರ್ ಓದು-ಚರ್ಚೆಯನ್ನು ಹುಟ್ಟುಹಾಕುತ್ತಿದ್ದಾರೆ. ಸೆಕ್ಯುಲರ್ ಎನ್ನುವುದು ಇಸ್ಲಾಮ್‌ಗೆ ಪರಕೀಯ ಎಂಬಂತಹ ನಿರ್ಣಯಿಸಿಕೊಂಡ ಸೋಗಲಾಡಿತನ ಬಿಟ್ಟು, ಅದರೊಳಗಿನ ಮುಕ್ತತೆಯ ಅಂಶಗಳನ್ನೇ ಎತ್ತಿ ಹಿಡಿದು ಚರ್ಚಿಸುವಂತೆ ಹುರಿದುಂಬಿಸುತ್ತಿದ್ದಾರೆ. ಇವೆಲ್ಲಾ ಜನರನ್ನು ತಟ್ಟನೆ ಬದಲು ಮಾಡಿ ಬಿಡುತ್ತದೆ ಎನ್ನುವುದಕ್ಕಿಂತ ಮಕ್ಕಳಿಗೆ ಸಿಗಬೇಕಾದ ಲೋಕ ಚಿಂತನೆಯ ಹಲವು ಆಯಾಮಗಳನ್ನು ದೊರಕಿಸುತ್ತದೆ ಎಂಬುದು ಮುಖ್ಯ ಆಶಯ. ಅದರಿಂದ ಕೆಲವರಾದರೂ ಏಕಮುಖ ಚಿಂತನೆಯನ್ನು ಪ್ರಶ್ನಿಸುವಂತಾಗುತ್ತಾರೆ ಎಂಬುದು ಮುಖ್ಯ ಆಶಯ. ಇವೆಲ್ಲಾ ಈ ಕಾರ್ಯಕ್ರಮದ ಹಿಂದಿರುವ ಯೋಚನೆಗಳು.

ಮೂರ್ನಾಕು ವಾರದ ಕೆಳಗಷ್ಟೆ, ಆಸ್ಟ್ರೇಲಿಯದ ತೀವ್ರ ಒತ್ತಡ ಮತ್ತು ಇಲ್ಲಿಯ ಮಾಧ್ಯಮಗಳ ಅವಿರತ ಗಮನದಡಿಯಲ್ಲಿ ಬಾಲಿಯ ಬಾಂಬ್ ದಾಳಿಗೆ ಕಾರಣರಾದವರ ವಿಚಾರಣೆ ಮುಗಿಯಿತು. ಮರಣದಂಡನೆ ವಿಧಿಸಿಲಾದ ಉಗ್ರರನ್ನು ಇಂಡೊನೀಷಿಯ ಗುಂಡಿಟ್ಟು ಕೊಂದಿತು. ಮರಣದಂಡನೆ ಕೈಬಿಟ್ಟಿರುವ ಆಸ್ಟ್ರೇಲಿಯದಲ್ಲಿ ಇದೊಂದು ಇರುಸುಮುರಸಿನ ಸಂಗತಿ. ಅವರನ್ನು ಕೊಲ್ಲಬಾರದೆಂದು ಆಸ್ಟ್ರೇಲಿಯಾ ಹೇಳಲಿಲ್ಲ. ಹೇಳಬೇಕಿತ್ತು ಎಂದು ಹಲವರ ಅಂಬೋಣ. ಅದಕ್ಕೆ ಇನ್ನೊಂದು ಹಿನ್ನೆಲೆ ಇದೆ. ಬಾಲಿಗೆ ಡ್ರಗ್ಸ್ ಕದ್ದೊಯ್ದು ಸಿಕ್ಕಿಕೊಂಡ ಆಸೀ ಹುಡುಗರು ಈಗ ಅದೇ ಶಿಕ್ಷೆ ಎದುರು ನೋಡುತ್ತಿದ್ದಾರೆ. ತನ್ನ ಪ್ರಜೆಗಳನ್ನು ರಕ್ಷಿಸುವ ಕರ್ತವ್ಯ ನೆನಪಿದ್ದೂ ಅವರ ವಿಷಯದಲ್ಲಿ ಈಗ ಆಸ್ಟ್ರೇಲಿಯದ ಬಾಯಿ ಕಟ್ಟಿದೆ.

ಇಂತಹ ಹಲವು  ದ್ವಂದ್ವಗಳು, ವಿಪರೀತಗಳು ಎಲ್ಲ ಕಡೆಯೂ ಇರುತ್ತವೆ. ಆಸ್ಟ್ರೇಲಿಯಾದ ಈ ಸತ್ಯ ಇಂಡಿಯಕ್ಕೂ ಸಲ್ಲುತ್ತದೆ. ಅಮೇರಿಕಾ ೯/೧೧ ನಂತರ ಆಫ್ಗಾನಿಸ್ತಾನದ ಮೇಲೆ ಮತ್ತು ಇರಾಕಿನ ಮೇಲೆ ದಾಳಿಯಿಟ್ಟ ಪರಿಯೇ ನಮಗಿರುವ ಮಾದರಿ ಎಂದುಕೊಂಡರೆ ಮೂರ್ಖತನವಾಗುತ್ತದೆ. ಉದ್ವೇಗ ತುಂಬಿದ ಕತ್ತಿಮಸೆತದ ಮಾತನ್ನು ತುಸು ಕಡಿಮೆ ಮಾಡಿ, ದೂರದೃಷ್ಟಿಯಿಂದ ಯೋಚಿಸಿ ಮುಂದುವರಿಯುವುದು ಮುಖ್ಯ ಅನಿಸುತ್ತದೆ. ಈ ಹಿಂದೆ ಇದು ನಮ್ಮಿಂದ ಸಾಧ್ಯ ಎಂದು ತೋರಿದ್ದೇವೆ ಕೂಡ. ಈಗಲೂ “ಸಮರ್ಥ” ಪ್ರತಿಕ್ರಿಯೆ ಕೊಟ್ಟುಬಿಡುವ ತರಾತುರಿಗಿಂತ, ಸಾರ್ಥಕವಾಗಬಹುದಾದ ಅರ್ಥಪೂರ್ಣ ಪ್ರತಿಕ್ರಿಯೆಯನ್ನು ಮಾತಿನಲ್ಲಷ್ಟೇ ಅಲ್ಲ ಕ್ರಿಯೆಯಲ್ಲೂ ರೂಪಿಸಿಕೊಳ್ಳಬೇಕಾದ ದೊಡ್ಡ ಸವಾಲು ನಮ್ಮೆದುರಿಗಿದೆ.