ಮಧ್ಯಾಹ್ನದ ಧಗೆ ಸಂಜೆ ರಾಚುವ ಮಳೆಗೆ ಮುನ್ನುಡಿಯಂತಿತ್ತು. evening southerly will bring heavy rain and thunderstorm ಅಂತ ಬೆಳಿಗ್ಗೆ ರೇಡಿಯೋದಲ್ಲಿ ಕೇಳಿದ್ದು ಕಿವಿಗೆ ಬಿದ್ದಿದ್ದರೂ ತಲೆಗೆ ಹೋಗಿರಲಿಲ್ಲ. ಸಂಜೆಯಾಗುತ್ತಲೂ ದಟ್ಟವಾಗಿ ಮೋಡ ಕವಿಯ ತೊಡಗಿದಾಗ ಅರೆ ಹೌದಲ್ಲ ಎಂದು ನೆನಪಾಯಿತು. ಸಿಗುತ್ತೀಯ ಎಂದು ಬೆಳಿಗ್ಗೆ ಗ್ರೆಗ್ ಫೋನ್ ಮಾಡಿದಾಗ ನಾನು ಹಿಂದು ಮುಂದು ನೋಡದೆ ಒಪ್ಪಿದ್ದು ಸರಿ ಹೋಗಲಿಲ್ಲ ಅನಿಸಿತು. ಈ ಗಾಳಿ ಮಳೆ ಶುರುವಾಗುವ ಮುಂಚೆ ಮನೆ ಸೇರಿಬಿಡೋಣ ಅನಿಸಿ, ಗ್ರೆಗ್‌ಗೆ ಈವತ್ತು ಆಗಲ್ಲ ಅನ್ನೋ ಮನಸ್ಸಾಯಿತು. ಆದರೆ ಫೋನಿನಲ್ಲಿ ಅವನ ಭಾರವಾಗಿದ್ದ ದನಿ ನೆನಪಾಗಿ ಸ್ವಲ್ಪವೇ ಹೊತ್ತು ಮಾತಾಡಿ ಹೊರಟು ಬಿಟ್ಟರಾಯಿತು ಅಂದುಕೊಂಡೆ. ಗ್ರೆಗ್ ಹೇಳಿದ್ದ ಪಬ್ ಕಡೆ ಮೋಡ ನೋಡುತ್ತಾ ಹೆಜ್ಜೆ ಹಾಕಿದೆ. ಮಳೆ ಇನ್ನೇನು ಶುರುವಾಗುವಂತಿತ್ತು.

ಈ ಗ್ರೆಗ್ ವಿಚಿತ್ರ ಪ್ರಾಣಿ. ಹಲವು ವರ್ಷಗಳಿಂದ ಗೊತ್ತಿದ್ದರೂ ಆತ್ಮೀಯ ಗೆಳೆಯನೇನಲ್ಲ. ಇಪ್ಪತ್ತೈದು ದಾಟಿದ್ದು ಈಗಷ್ಟೆ ಮದುವೆಯಾಗಿದ್ದಾನೆ. ಗಂಡ ಹೆಂಡತಿ ಸೇರಿ ಒಂದು ಹೊಸ ಮನೆ ಕೊಂಡಿದ್ದಾರೆ. ಹರೆಯದಲ್ಲಿ ಏನು ಕೆಲಸ ಮಾಡಬೇಕೆಂದು ತಿಳಿಯದೆ, ಸೈನ್ಯ ಸೇರುತ್ತೇನೆಂದು ಹೋಗಿ ಸೈಕಲಾಜಿಕಲ್ ಟೆಸ್ಟ್‌ನಲ್ಲಿ ಫೇಲಾಗಿದ್ದನಂತೆ. ಎತ್ತರಕ್ಕಿರುವ ಗ್ರೆಗ್ ತನ್ನ ಬಲಗೈಯನ್ನು ಒಳ ತಿರುಗಿಸಿ ಸೊಟ್ಟಗೆ ಮಾಡಿ ಹಿಡಿಯುವುದು ಮೊದಲ ಸಲ ನೋಡಿದವರಿಗೆ ಅದನ್ನೇ ದಿಟ್ಟಿಸುವಂತೆ ಮಾಡುತ್ತದೆ. ಕೂಡಲೆ ಅದು ಖಾಯಂ ಸೊಟ್ಟ ಅಲ್ಲ ಅಂತಲೂ ತಿಳಿಯುತ್ತದೆ. ಅವನ ನಗು ಮೊದಲಿಗೆ ಮುಗ್ಧವಾಗಿ ಕಾಣುತ್ತದೆ. ಆದರೆ ಕೂಡಲೆ ಆ ನಗುವಿನಲ್ಲೊಂದು ನೋವಿನ ನೆರಳು ಕಾಣುತ್ತದೆ.

ಅವನಿನ್ನೂ ಬಂದಿಲ್ಲದ್ದರಿಂದ, ಪಬ್ಬಿನ ಒಂದು ಮೂಲೆಗೆ ಹೋಗಿ ಕೂತೆ. ಸೋಮವಾರವಾದ್ದರಿಂದ ಅಲ್ಲೊಬ್ಬರು ಇಲ್ಲೊಬ್ಬರಷ್ಟೇ ಇದ್ದರು. ದೂರದಲ್ಲಿ ಕಪ್ಪು ಆಫೀಸು ಬಟ್ಟೆತೊಟ್ಟ ಹುಡುಗಿ ಒಬ್ಬಳೇ ಕುಡಿಯುತ್ತಾ, ಗಳಿಗೆಗೊಮ್ಮೆ ಬಾಗಿಲಿನತ್ತ ನೋಡುತ್ತಾ ಕೂತಿದ್ದಳು. ಇನ್ನೊಂದು ಮೂಲೆಯಲ್ಲಿ ಮೂರು ನಾಕು ಹುಡುಗರು ಜೋರಾಗಿ ನಗುತ್ತಾ, ಪೂಲ್ (ಬಿಲಿಯರ್ಡ್ಸ್) ಟೇಬಲ್ಲಿನ ಸುತ್ತ ನಿಂತು ಕುಡಿಯುತ್ತಾ ಆಡುತ್ತಿದ್ದರು. ಕಾಯುವುದೆಂದರೆ ನನಗೆ ರೇಜಿಗೆ.

ಗ್ರೆಗ್ ಪಬ್ ಒಳಗೆ ಬಂದವನೇ, ನಾನು ಮೂಲೆಯಲ್ಲಿ ಕೂತಿರುವುದು ಗೊತ್ತಿರುವವನಂತೆ ನೋಡಿ, ಬಾರಿಗೆ ಹೋಗಿ ಎರಡು ಬಿಯರ್‍ ತೆಕ್ಕೊಂಡೇ ಬಂದ. ಹೇಗಿದ್ದೀಯಗಳೆಲ್ಲಾ ಕೂಡಲೆ ಮುಗಿಸಿ, ಎಲ್ಲಿ ಶುರುಮಾಡುವುದು ಎಂಬಂತೆ ಕೂತುಬಿಟ್ಟ. ಸಾಮಾನ್ಯಕ್ಕಿಂತ ಹೆಚ್ಚೇ ಬೇಸರದಲ್ಲಿದ್ದ. ಏನಪ್ಪ ಎಂದು ಕೇಳಿದೆ. ನೆನ್ನೆ ನನ್ನಜ್ಜಿಯ ಫ್ಯೂನರಲ್‌, ಹೂಳಿಬರಲು ಹೋಗಿದ್ದೆ ಅಂದ.

ಮೂರು ದಿನದ ಕೆಳಗೆ ಇದ್ದಕ್ಕಿದ್ದಂತೆ ತೀರಿಕೊಂಡಳು. ಅಜ್ಜ ತುಂಬಾ ಮುಂಚೆಯೇ ತೀರಿಹೋಗಿದ್ದ. ಅಜ್ಜಿಗೆ ನನ್ನ ತಾಯಿ ಒಬ್ಬಳೆ ಮಗಳು. ನಾನೊಬ್ಬನೇ ಏರ್ಪಾಡೆಲ್ಲಾ ಮಾಡಬೇಕಾಯಿತು. ನನ್ನ ಅಕ್ಕ ತಂಗಿಯರು ಕಡೆ ಗಳಿಗೆಯಲ್ಲಷ್ಟೇ ಬಂದರು. ಆದರೆ ನಮ್ಮ ಅಮ್ಮ ಬರಲೇ ಇಲ್ಲ ಎಂದು ತಲೆ ಕೆಳಗೆ ಹಾಕಿ ಸುಮ್ಮನಾಗಿಬಿಟ್ಟ.

ತುಸು ತಡೆದು- ಅಪ್ಪ ಅಮ್ಮ ಬೇರ್ಪಟ್ಟಾಗ ಈ ಅಜ್ಜಿ ನಮ್ಮನ್ನು ಪ್ರೀತಿಯಿಂದ ಮನಸ್ಸಿಟ್ಟು ಬೆಳೆಸಿದಳು. ಪ್ರತಿ ಭಾನುವಾರ ಚರ್ಚಿಗೆ ಕರಕೊಂಡು ಹೋಗುತ್ತಿದ್ದಳು. ನಮ್ಮ ಬಾಲ್ಯದ ತುಂಟಾಟಗಳನ್ನೆಲ್ಲಾ ನೆನಪಿಸುವ ಆ ಚರ್ಚಿನ ಪಕ್ಕದಲ್ಲೇ ಅವಳನ್ನು ಹೂಳಿದೆವು ಅಂದ. ಇಷ್ಟೇ ಆಗಿದ್ದರೆ ಫೋನಿನಲ್ಲೇ ಹೇಳಬಹುದಿತ್ತಲ್ಲ ಅನಿಸಿತು, ಹೇಳಲಿಲ್ಲ.

ಇಂತಹ ಗಳಿಗೆಯಲ್ಲಿ ಏನು ಕೇಳಿದರೂ ಅತಿ ಕುತೂಹಲದಂತೆ ಆಗುತ್ತದೆ ಎಂದು ಸುಮ್ಮನಿದ್ದೆ. ಸಮಾಧಾನ ಮಾಡಿಕೋ ಎನ್ನಲು ಮನಸ್ಸು ಬರಲಿಲ್ಲ. ಅಜ್ಜಿ ಒಬ್ಬಳೇ ಕಡೆಯವರೆಗೂ ತಮ್ಮಿಂದಷ್ಟೇ ಅಲ್ಲ ಯಾರಿಂದಲೂ ಸೇವೆ ಮಾಡಿಸಿಕೊಳ್ಳದೇ ಇದ್ದಳು ಎಂದು ಹೆಮ್ಮೆ ಹಾಗು ವಿಷಾದ ಕೂಡಿಸಿ ಹೇಳಿದ. ಅವಳನ್ನು ಹೂಳುವಾಗ ನನ್ನ ಅಪ್ಪನ ರಕ್ತಸಿಕ್ತ ಎದೆಯೇ ನೆನಪಾಯಿತು ಅಂದ. ನನ್ನ ಮೈ ತಟ್ಟನೆ ತಣ್ಣಗಾಯಿತು. ಅವನನ್ನು ನೋಡಿದಾಗ ನನ್ನ ಕಣ್ಣಲ್ಲಿ ತುಸು ಹೆಚ್ಚೇ ಕುತೂಹಲವಿದ್ದಿರಬೇಕು.

ಅವನೇ ವಿವರಿಸಿದ: “ನಮ್ಮ ಅಮ್ಮ ಮೂರು ಮಕ್ಕಳನ್ನು ಹಾಗು ಅಪ್ಪನನ್ನು ಬಿಟ್ಟು ಏಕಾಏಕಿ ಇನ್ನಾರ ಹಿಂದೆಯೋ ಹೋಗಿಬಿಟ್ಟಳು. ಎಲ್ಲದರ ಬಗ್ಗೆಯೂ ಉತ್ಸಾಹದ ಚಿಲುಮೆಯಾಗಿದ್ದವಳು, ಎಲ್ಲದರ ಬಗ್ಗೆಯೂ ಕನಸುತ್ತಿದ್ದವಳು. ಹಾಗೆ ಹೊರಟು ಹೋಗಿದ್ದು ನನಗೆ ಅರ್ಥವೇ ಆಗಿಲ್ಲ. ಅಪ್ಪನೂ ಅರ್ಥಮಾಡಿಕೊಳ್ಳಲು ತುಂಬಾ ಒದ್ದಾಡಿದ್ದ. ಆ ಒದ್ದಾಟದಲ್ಲೇ ನಮ್ಮನ್ನು ಒಂದೆರಡು ತಿಂಗಳು ನೋಡಿಕೊಂಡ. ಆದರೆ ಒಂದು ಮಧ್ಯಾಹ್ನ ನಾವೆಲ್ಲಾ ಶಾಲೆಯಿಂದ ಮನೆಗೆ ಬಂದು ತಿಂದುಂಡು ಹೊರ ಅಂಗಳದಲ್ಲಿ ಖುಷಿಯಾಗಿ ಆಟ ಆಡುತ್ತಿದ್ದೆವು. ಕಿಚನ್‌ನಿಂದ ಜೋರಾಗಿ ಅಪ್ಪ ಕಿರುಚಿಕೊಳ್ಳುವುದು ಕೇಳಿತು. ನಾವು ಮೂವರೂ ಆಟ ಬಿ‌ಟ್ಟು ಒಳಗೆ ಓಡಿದೆವು.

ಕಿಚನ್ ಕಿಟಕಿ ಮುಚ್ಚಿ ಕತ್ತಲಲ್ಲಿ ಕುರ್ಚಿಯ ಮೇಲೆ ಅಪ್ಪ ಒಬ್ಬನೇ ಕೂತಿದ್ದ. ಕಿಚನ್ ನೈಫಿಂದ ತನ್ನ ಎದೆಯನ್ನು ಬಗೆದುಕೊಳ್ಳುತ್ತಿದ್ದ. ಎದುರಿಗಿದ್ದ ಟೇಬಲ್ ಎಲ್ಲಾ ರಕ್ತಮಯವಾಗಿತ್ತು. ನಾನು ಯಾಕೆ ಬದುಕಿರಬೇಕು ಎಂದು ಕೂಗುತ್ತಿದ್ದ. ನಾವೆಲ್ಲ ಕಂಗಾಲಾಗಿ ಅಳುತ್ತಾ ಕಿರುಚತೊಡಗಿದೆವು. ಅಷ್ಟರಲ್ಲಿ ಅಕ್ಕ ಅವನ ಕೈಯಿಂದ ಚಾಕು ಕಿತ್ತುಕೊಂಡು ಆಂಬುಲೆನ್ಸಿಗೆ ಅಳುತ್ತಾ ಫೋನ್ ಮಾಡಿದಳು. ಒಂದು ವಾರ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡ. ಆದರೆ ಅಂದೇ ಅಜ್ಜಿ ನಮ್ಮನ್ನು ಸಾಕಲು ಅಲ್ಲಿಂದ ಕರಕೊಂಡು ಹೋಗಿಬಿಟ್ಟಳು. ಚರ್ಚ್ ಪಕ್ಕದ ಮರದ ನೆರಳು ಅವಳ ಗೋರಿಯನ್ನು ತಂಪಾಗಿಡುವಂತಿದೆ.” ಅವನ ದನಿ ಇಂಗಿಹೋಯಿತು.

ಅವನ ಭುಜಕ್ಕೆ ಕೈಹಾಕಿ ಮೆಲ್ಲಗೆ ತಟ್ಟಿದೆ. ಗ್ರೆಗ್ ತಲೆಯೆತ್ತಿ ನೋಡಿದ, ಅಳುತ್ತಿರಲಿಲ್ಲ. ಮನೆಗೆ ಹೋಗಬೇಕು, ಹೆಂಡತಿ ಕಾಯುತ್ತಿರುತ್ತಾಳೆ ಎಂದು ಎದ್ದು “ಸಿಗುವ, ಸಿಗುವ” ಎಂದು ಹೊರಟೇಬಿಟ್ಟ. ಮನಸ್ಸು ಹಗುರಾದೊಡನೆ ಏನೋ ನೆನಪಾಗಿರಬೇಕು ಅನಿಸಿತು.

ಪಬ್ಬಿಂದ ಹೊರಗೆ ಬಂದಾಗ ಮೋಡ ಕವಿದೇ ಇತ್ತು. ಇನ್ನೂ ಮಳೆ ಶುರುವಾಗಿರಲಿಲ್ಲ. ಎಲ್ಲಿಲ್ಲದ ಗಾಳಿ ಬೀಸುತ್ತಿತ್ತು. ಜನ ತಮ್ಮ ಬಟ್ಟೆ, ಕೈಲಿದ್ದ ಬ್ಯಾಗು, ಕೊಡೆಗಳನ್ನು ಹಾರಿಹೋಗದಂತೆ ಅವುಚಿಕೊಂಡು ದುಡುದುಡು ಓಡುತ್ತಿದ್ದರು. ಮಳೆ ರಾಚಿಬಿಟ್ಟಿದ್ದರೆ ಚೆನ್ನಿತ್ತು ಎಂದು ನನಗೆ ನಾನೇ ಹೇಳಿಕೊಂಡೆ.