ನಾವೆಲ್ಲರೂ ಲೌಕಿಕದ ಸಕಲ ಭೋಗ ಸಂಗತಿಗಳನ್ನೂ ಇನ್ನಿಲ್ಲದಂತೆ ಹಪಹಪಿಸಿ ಕೊಂಡು ಸುಖಿಸುತ್ತಿದ್ದೇವೆ. ಪ್ರತಿಯೊಂದರಲ್ಲಿಯೂ ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸುತ್ತೇವೆ. ಈ ಭೋಗ ಸಂಸ್ಕೃತಿಯಿಂದಾಗಿ ಪ್ರಕೃತಿಯಲ್ಲಿ ಲೋಹ-ಅದಿರು-ಗಿಡ-ಮರ-ನದಿ-ಸಮುದ್ರ ಎಲ್ಲವೂ ಅತಿಯಾಗಿ ಬಳಸಲ್ಪಟ್ಟು ಶೋಷಣೆಗೆ ಗುರಿಯಾಗಿವೆ. ಸರಳ ಬದುಕಿಗೆ ಮೊರೆ ಹೋದವರೂ ಕೂಡ ಹೇಳಿದಷ್ಟು ಸುಲಭವಾಗಿ ತಮ್ಮ ಸನ್ಯಾಸವನ್ನು ಆಚರಣೆಗೆ ತರಲಾರರು. ಅಕ್ಕ ಸನ್ಯಾಸವೆಂದರೆ ಹೇಗಿರಬೇಕೆಂದು ತುಂಬಾ ಸರಳವಾದ ಶಬ್ದಗಳಲ್ಲಿ ವಿವರಿಸುತ್ತಾಳೆ.
ಅಕ್ಕಮಹಾದೇವಿ ಜಯಂತಿಯ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ

 

ಇಂದು ಚೈತ್ರ ಪೂರ್ಣಿಮಾ. ಅಂದರೆ ಅಕ್ಕಮಹಾದೇವಿಯ ಜಯಂತಿ. ಆ ಕಾಲದಲ್ಲಿಯೇ ತನ್ನ ಮನದೊಳಗೆ ಮೂಡಿದ ದೈವ ಸಾಕ್ಷಾತ್ಕಾರದ ಹಂಬಲವನ್ನು ಲೌಕಿಕದ ಆಮಿಷಗಳಿಂದ ಕಾಪಾಡಿಕೊಂಡು, ಅರಸೊತ್ತಿಗೆಯ ಮೋಹ ಪಾಶಗಳಿಂದ ಬಿಡಿಸಿಕೊಂಡು, ಒಬ್ಬೊಂಟಿಯಾಗಿ ಲೋಕ ಸಂಚಾರ ಮಾಡುತ್ತ ತನ್ನ ಗುರಿಯನ್ನು ಸೇರಿದ ಅಪ್ರತಿಮ ಸಾಹಸಿಯಾದ ಅಕ್ಕಮಹಾದೇವಿಯನ್ನು ನೆನಪಿಸಿಕೊಳ್ಳುವುದು ಒಂದು ರೋಮಾಂಚನದ ಸಂಗತಿ. ದೈನಂದಿನ ಜೀವನದಲ್ಲಿ ನಮ್ಮನ್ನು ಆಕರ್ಷಿಸುವ ಹಲವಾರು ಸಂಗತಿಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ಅಕ್ಕನ ವಚನಗಳು ದಾರಿದೀವಿಗೆಗಳಾಗುತ್ತವೆ. ಅವಳ ಬದುಕು ಮತ್ತು ಬರಹಗಳ ಬೆಳಕಿನಲ್ಲಿ ನಾವು ಆಧ್ಯಾತ್ಮ ಸಾಕ್ಷಾತ್ಕಾರದ ಪ್ರಯತ್ನಕ್ಕೆ ತೊಡಗಿಕೊಳ್ಳಬಹುದು. ಅವಳ ವಚನವೊಂದನ್ನು ನೋಡೋಣ-

ಅರ್ಥ ಸನ್ಯಾಸಿಯಾದಡೇನಯ್ಯಾ
ಆವಂಗದಿಂದ ಬಂದಡೂ ಕೊಳದಿರಬೇಕು
ರುಚಿ ಸನ್ಯಾಸಿಯಾದಡೇನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ ಸನ್ಯಾಸಿಯಾದಡೇನಯ್ಯಾ
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು
ದಿಗಂಬರಿಯಾದಡೇನಯ್ಯಾ
ಮನ ಬತ್ತಲೆ ಇರಬೇಕು
ಇಂತೀ ಚತುರ್ವಿಧದ ಹೊಲಬರಿಯದೆ ವೃಥಾ ಕೆಟ್ಟರು
ಕಾಣಾ ಚೆನ್ನಮಲ್ಲಿಕಾರ್ಜುನಾ

ನಾವೆಲ್ಲರೂ ಲೌಕಿಕದ ಸಕಲ ಭೋಗ ಸಂಗತಿಗಳನ್ನೂ ಇನ್ನಿಲ್ಲದಂತೆ ಹಪಹಪಿಸಿ ಕೊಂಡು ಸುಖಿಸುತ್ತಿದ್ದೇವೆ. ಪ್ರತಿಯೊಂದರಲ್ಲಿಯೂ ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸುತ್ತೇವೆ. ಈ ಭೋಗ ಸಂಸ್ಕೃತಿಯಿಂದಾಗಿ ಪ್ರಕೃತಿಯಲ್ಲಿ ಲೋಹ-ಅದಿರು-ಗಿಡ-ಮರ-ನದಿ-ಸಮುದ್ರ ಎಲ್ಲವೂ ಅತಿಯಾಗಿ ಬಳಸಲ್ಪಟ್ಟು ಶೋಷಣೆಗೆ ಗುರಿಯಾಗಿವೆ. ಸರಳ ಬದುಕಿಗೆ ಮೊರೆ ಹೋದವರೂ ಕೂಡ ಹೇಳಿದಷ್ಟು ಸುಲಭವಾಗಿ ತಮ್ಮ ಸನ್ಯಾಸವನ್ನು ಆಚರಣೆಗೆ ತರಲಾರರು. ಅಕ್ಕ ಸನ್ಯಾಸವೆಂದರೆ ಹೇಗಿರಬೇಕೆಂದು ತುಂಬಾ ಸರಳವಾದ ಶಬ್ದಗಳಲ್ಲಿ ವಿವರಿಸುತ್ತಾಳೆ.

ಹಣದ ವಿಷಯದಲ್ಲಿ ಆಸೆಯಿಲ್ಲ ಎಂದು ಹೇಳಿಕೊಳ್ಳುವವರನ್ನು ಕುರಿತಾಗಿ ಅವಳು ಹೇಳುವುದು ಅವರು ಯಾವ ರೂಪದಲ್ಲಿ ಹಣ ಬಂದರೂ ತೆಗೆದುಕೊಳ್ಳಬಾರದು ಎಂಬುದಾಗಿ. ಊಟ-ತಿಂಡಿಯ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಹಾಗೂ ಜೀವ ಉಳಿಸಿಕೊಳ್ಳುವುದಕ್ಕಾಗಿ ಕೊಂಚ ಆಹಾರವನ್ನು ಮಾತ್ರ ಸೇವಿಸುತ್ತೇನೆ ಎನ್ನುವವರಿಗೆ ಅವಳು ಹೀಗೆ ಹೇಳುತ್ತಾಳೆ-ಸಿಹಿಯಾದ ಪದಾರ್ಥವನ್ನು ತಿನ್ನುವಾಗ ನಾಲಿಗೆಯ ತುತ್ತ ತುದಿಯಲ್ಲಿಯೂ ಕೂಡ ಅದು ಸಿಹಿಯಾಗಿದೆ ಎಂದು ಅನ್ನಿಸ ಬಾರದು. ಅಂದರೆ ಮನಸ್ಸು ವಿಷಯ ಸುಖದಿಂದ ವಿಮುಖಗೊಂಡಾಗ ತಿಂದ ವಸ್ತುವಿನ ರುಚಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

ಹಲವರು ಆಸಕ್ತಿಯಿಂದ ದೂರ ಇದ್ದೇನೆ ಎಂದು ಹೇಳಿಕೊಳ್ಳುತ್ತಾರೆ ಆದರೆ ಹೆಣ್ಣಿನ ಕುರಿತಾದ ಆಕರ್ಷಣೆ ಅವರನ್ನು ಬಿಟ್ಟಿರುವುದಿಲ್ಲ. ಅನೇಕ ಮಠಗಳು ಲೈಂಗಿಕ ಹಗರಣಗಳ ಗೂಡಾಗಿರುವುದೇ ಇದಕ್ಕೆ ಸಾಕ್ಷಿ. ಆದ್ದರಿಂದಲೇ ಅಕ್ಕ ಹೇಳುತ್ತಾಳೆ-ಜಾಗೃತಿ-ಸ್ವಪ್ನ-ಸುಷುಪ್ತಿ ಈ ಮೂರು ಅವಸ್ಥೆಗಳಲ್ಲಿಯೂ ಹೆಣ್ಣಿನ ಬಯಕೆ ಮೂಡಬಾರದು. ಜಾಗೃತಿ ಎಂದರೆ ಎಚ್ಚರವಾಗಿರುವ ಸಾಮಾನ್ಯ ಅವಸ್ಥೆ. ಸ್ವಪ್ನ ಎಂದರೆ ನಿದ್ದೆ ಮಾಡುತ್ತಿರುವಾಗಿನ ಸ್ಥಿತಿ. ಸುಷುಪ್ತಿ ಎಂದರೆ ನಾವು ನಿದ್ದೆಯಲ್ಲಿದ್ದಾಗ ಮನಸ್ಸು ಎಚ್ಚರಗೊಂಡಿರುವ ಅರೆಎಚ್ಚರದ ಸ್ಥಿತಿ. ಈ ಮೂರೂ ಅವಸ್ಥೆಗಳಲ್ಲಿಯೂ ಕಾಮದ ಸುಳಿವಿಲ್ಲದಿದ್ದರೆ ಮಾತ್ರ ನಾವು ಆ ಆಕರ್ಷಣೆಯಿಂದ ತಪ್ಪಿಸಿಕೊಂಡಿದ್ದೇವೆಂದು ಅರ್ಥ.

ಇನ್ನು ಉಡುಪಿನ ವಿಚಾರಕ್ಕೆ ಬಂದರೆ ಕೆಲವರು ಕಾಷಾಯ ಧಾರಣೆ ಮಾಡಿರಬಹುದು. ಕೆಲವರು ಬಿಳಿಯುಡುಗೆ ಉಟ್ಟಿರಬಹುದು, ಕೆಲವರು ದಿಗಂಬರರೂ ಆಗಿರಬಹುದು ಆದರೆ ಅಕ್ಕ ಸ್ಪಷ್ಟವಾಗಿ ಹೇಳುತ್ತಾಳೆ- ಬೆತ್ತಲಾಗಬೇಕಾದುದು ಮನಸ್ಸು. ಅದು ಆಸೆ-ಆಮಿಷವಳಿದು ನಿರ್ವಾಣಗೊಳ್ಳಬೇಕು. ಲೌಕಿಕ ಜಗತ್ತಿನ ಲಾಲಸೆಗಳಿಂದ ಅತೀತವಾಗಿ ಪಾರದರ್ಶಕಗೊಳ್ಳಬೇಕು. ಹೀಗೆ ನಾಲ್ಕು ರೀತಿಯಲ್ಲಿ ನಾವು ಶುದ್ಧಿಗೊಂಡರೆ ಮಾತ್ರ ಆಧ್ಯಾತ್ಮದ ಮಾರ್ಗದಲ್ಲಿ ಸಾಗಲು ಅರ್ಹರಾಗುತ್ತೇವೆ. ಅದಿಲ್ಲದೆಯೇ ಮಾಡುವ ಪ್ರಯತ್ನಗಳೆಲ್ಲವೂ ಕೇವಲ ಬಾಹ್ಯಾಡಂಬರ ಮಾತ್ರವಾಗಿರುತ್ತದೆ ಎಂಬುದು ಆಕೆಯ ಅಂಬೋಣ.