ರಾಸ್ಕೋಲ್ನಿಕೋವ್ ಬಲ ಮೊಳಕೈಯನ್ನು ಟೇಬಲ್ಲಿನ ಮೇಲೆ ಆರಾಮವಾಗಿರಿಸಿ, ಎಡ ಮೊಳಕೈಯನ್ನು ಊರಿ ಅಂಗೈಯಲ್ಲಿ ಮುಖ ಇರಿಸಿ ಸ್ವಿದ್ರಿಗೈಲೋವ್‍ನನ್ನು ದಿಟ್ಟಿಸಿದ. ಒಂದು ನಿಮಿಷದಷ್ಟು ಹೊತ್ತು ಅವನ ಮುಖ ನೋಡುತ್ತಲೇ ಇದ್ದ. ಯಾಕೋ ಅದು ವಿಚಿತ್ರವಾದ ಮುಖ, ಮುಖವಾಡದಂಥ ಮುಖ, ಕೆಂಪು ತುಟಿ, ಬಿಳಿಯ ಮುಖ, ನಸುಗೆಂಪು ಕೆನ್ನೆ, ದಟ್ಟವಾದ ಹೊಂಬಣ್ಣದ ಕೂದಲು, ಗಂಭೀರವಾದ ನೀಲಿ ಕಣ್ಣು, ಭಾರ ಅನಿಸುವ ನಿಶ್ಚಲ ದೃಷ್ಟಿ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಸ್ವಿದ್ರಿಗೈಲೋವ್‌ನನ್ನು ನೋಡಲು ಧಾವಿಸುತ್ತಿದ್ದ ರಾಸ್ಕೋಲ್ನಿಕೋವ್. ಅವನಿಂದ ಏನಾಗಬೇಕು ಅನ್ನುವುದೂ ಸ್ಪಷ್ಟವಾಗಿರಲಿಲ್ಲ. ಸ್ವಿದ್ರಿಗೈಲೋವ್ ನಿಗೂಢವಾದ ರೀತಿಯಲ್ಲಿ ತನ್ನ ಮೇಲೆ ಅಧಿಕಾರ ಸ್ಥಾಪಿಸಿದ್ದಾನೆ ಅನಿಸುತಿತ್ತು. ಈ ಸಂಗತಿ ಅರಿವಿಗೆ ಬಂದಮೇಲೆ ಸುಮ್ಮನಿರುವುದು ಅಸಾಧ್ಯವಾಗಿತ್ತು. ಅಲ್ಲದೆ, ಈಗ ಹೊತ್ತು ಬಂದಿತ್ತು.

ದಾರಿಯುದ್ದಕ್ಕೂ ಒಂದು ಪ್ರಶ್ನೆ ವಿಶೇಷವಾಗಿ ಕಾಡುತ್ತಿತ್ತು: ಸ್ವಿದ್ರಿಗೈಲೋವ್ ಹೋಗಿ ಪೋರ್ಫಿರಿಯನ್ನು ಕಂಡಿದ್ದನೇ? ಇಲ್ಲ, ಬೇಕಾದರೆ ಹಾಗಂತ ಆಣೆ ಮಾಡುವುದಕ್ಕೂ ಸಿದ್ಧನಾಗಿದ್ದ ರಾಸ್ಕೋಲ್ನಿಕೋವ್. ಮತ್ತೆ ಮತ್ತೆ ಯೋಚನೆ ಮಾಡುತ್ತಿದ್ದ, ಪೋರ್ಫಿರಿಯ ಇತ್ತೀಚಿನ ಭೇಟಿಯನ್ನು ಇಡಿಯಾಗಿ ನೆನಪುಮಾಡಿಕೊಂಡ. ಸ್ವಿದ್ರಿಗೈಲೋವ್ ಪೋರ್ಫಿರಿಯನ್ನು ಕಂಡಿರಲಿಲ್ಲ. ಅಂಥ ಭೇಟಿ ನಡೆದಿರಲೂ ಇಲ್ಲ ಎಂದು ಸ್ಪಷ್ಟವಾಯಿತು:

ಹಾಗಾದರೆ ಸ್ವಿದ್ರಿಗೈಲೋವ್ ಅವನನ್ನು ನೋಡಲು ಹೋದಾನೋ? ಹೋಗುತ್ತಾನೋ? ಸದ್ಯಕ್ಕಂತೂ ಹೋಗಲಾರ ಅನಿಸಿತು. ಯಾಕೆ? ರಾಸ್ಕೋಲ್ನಿಕೋವ್‌ಗೆ ವಿವರಿಸಲು ಆಗುತ್ತಿರಲಿಲ್ಲ. ಹಾಗೊಂದು ವೇಳೆ ವಿವರಣೆ ಕೊಡಲು ಸಾಧ್ಯವಿದ್ದಿದ್ದರೂ ಅದೇನಿರಬಹುದೆಂದು ತಲೆ ಕೆಡಿಸಿಕೊಳ್ಳಲು ಈ ಕ್ಷಣದಲ್ಲಿ ಅವನು ಸಿದ್ಧನಿರಲಿಲ್ಲ. ಇದೆಲ್ಲ ಅವನಿಗೆ ಹಿಂಸೆ ಕೊಡುತ್ತಿದ್ದರೂ ಈ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ ವಿಚಿತ್ರ ಅನ್ನಿಸಬಹುದು, ಯಾರೂ ನಂಬದೆಯೂ ಇರಬಹುದು, ಆದರೂ ಸದ್ಯದಲ್ಲೇ ತನ್ನ ಮೇಲೆ ಎರಗಲಿರುವ ವಿಪತ್ತಿನ ಬಗ್ಗೆ ಅವನಿಗಷ್ಟು ಚಿಂತೆ ಇರಲೇ ಇಲ್ಲ. ಬೇರೆ ಇನ್ನೇನೋ, ಮತ್ತುಷ್ಟು ಮುಖ್ಯವೂ ತುರ್ತೂ ಆದದ್ದು, ಅವನಿಗೆ, ಅವನಿಗೆ ಮಾತ್ರವೇ ಸಂಬಂಧಿಸಿದ್ದು, ಈಗ ಹಿಂಸೆ ಕೊಡುತ್ತಿತ್ತು. ಇತ್ತೀಚಿನ ದಿನಗಳಲ್ಲೇ ಅವನ ಮನಸ್ಸು ಎಂದೂ ಈಗಿನಷ್ಟು ಚುರುಕಾಗಿರದಿದ್ದರೂ ಕೊನೆಯೇ ಇಲ್ಲ ಅನಿಸುವಂಥ ನೈತಿಕ ದಣಿವು ಅನುಭವಕ್ಕೆ ಬರುತ್ತಿತ್ತು.

ಇಷ್ಟೆಲ್ಲ ಆದಮೇಲೆ, ಈ ಸಣ್ಣಪುಟ್ಟ ಕಷ್ಟಗಳನ್ನು ದಾಟುವುದು ಅಷ್ಟು ಮುಖ್ಯವೋ? ಉದಾಹರಣೆಗೆ, ಸ್ವಿದ್ರಿಗೈಲೋವ್ ಹೋಗಿ ಪೋರ್ಫಿರಿಯನ್ನು ಕಾಣದಂತೆ ಹುನ್ನಾರ ಮಾಡುವುದು ಮುಖ್ಯವೋ? ಸ್ವಿದ್ರಿಗೈಲೋವ್‌ನನ್ನು ಹುಡುಕಿ, ವಿಚಾರಣೆ ಮಾಡುವುದು ಮುಖ್ಯವೋ? ಸಾಕಾಗಿದೆ ಇವೆಲ್ಲ ಅನಿಸುತ್ತಿತ್ತು ಅವನಿಗೆ.

ಆದರೂ ಸ್ವಿದ್ರಿಗೈಲೋವ್‌ನನ್ನು ಭೇಟಿ ಮಾಡಲು ಧಾವಿಸುತ್ತಿದ್ದ ಅವನಿಂದ ಹೊಸದೇನನ್ನಾದರೂ ನಿರೀಕ್ಷೆ ಮಾಡಿದ್ದನೋ? ತಪ್ಪಿಸಿಕೊಳ್ಳುವ ಹೊಸ ದಿಕ್ಕು, ದಾರಿ? ಮುಳುಗುತ್ತಿರುವಾಗ ಹುಲ್ಲುಕಡ್ಡಿಯನ್ನೂ ಗಟ್ಟಿಯಾಗಿ ಹಿಡಿಯುತ್ತಾರೆ! ವಿಧಿಯೋ ಮತ್ತೇನೋ ಅವರಿಬ್ಬರನ್ನೂ ಒಟ್ಟಿಗೆ ತರುತ್ತಿತ್ತೋ? ಬರೀ ದಣಿವು, ಹತಾಶೆ ಇರಬಹುದು; ಸ್ವಿದ್ರಿಗೈಲೋವ್‍ ಅಲ್ಲದೆ ಬೇರೆ ಇನ್ಯಾರೋ ಅವನಿಗೆ ಬೇಕಾಗಿದ್ದು, ಈ ಕ್ಷಣದಲ್ಲಿ ಸ್ವಿದ್ರಿಗೈಲೋವ್ ಅಲ್ಲಿದ್ದಿರಬಹುದು. ಸೋನ್ಯಾ? ಅವನು ಯಾಕೆ ಸೋನ್ಯಾ ಹತ್ತಿರ ಹೋಗಬೇಕು ಈಗ? ಮತ್ತೆ ಕಣ್ಣೀರಿಡು ಅಂತ ಕೇಳುವುದಕ್ಕಾ? ಸೋನ್ಯಾ ಈಗ ಭಯಂಕರ ಶಾಸನದ ಹಾಗಿದ್ದಳು. ಮೀರಲಾಗದ ಶಿಕ್ಷೆ ವಿಧಿಸುತ್ತಿದ್ದಳು. ಬದಲಾಗದ ನಿರ್ಣಯ ಅವಳದ್ದು. ಹಿಡಿದರೆ ಅವಳ ದಾರಿ ಹಿಡಿಯಬೇಕು, ಇಲ್ಲದಿದ್ದರೆ ತನ್ನ ದಾರಿಯಲ್ಲಿ ಸಾಗಬೇಕು. ಅದರಲ್ಲೂ ಈ ಕ್ಷಣದಲ್ಲಿ ಅವಳನ್ನು ನೋಡುವ ಸ್ಥಿತಿಯಲ್ಲಿರಲಿಲ್ಲ ಅವನು. ಸ್ವಿದ್ರಿಗೈಲೋವ್‌ನನ್ನು ನೋಡುವುದೇ ಒಳ್ಳೆಯದೋ? ಏನು ಎತ್ತ ವಿಚಾರಿಸಬಹುದೋ? ಯಾಕೋ ಏನೋ ಸ್ವಿದ್ರಿಗೈಲೋವ್ ನನಗೆ ಬೇಕಾದವನು ಎಂದು ಬಹಳ ಕಾಲದಿಂದ ಅನ್ನಿಸುತ್ತಿತ್ತು ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿದ್ದ ರಾಸ್ಕೋಲ್ನಿಕೋವ್.

ಅವರಿಬ್ಬರಿಗೂ ಸಮಾನವಾದ್ದೇನಿದೆ? ಅವರ ಕೆಟ್ಟ ಕೆಲಸಗಳೂ ಒಂದೇ ಥರದವಲ್ಲ. ಜೊತೆಯಲ್ಲಿದ್ದರೆ ಸಂತೋಷವಾಗುವಂಥವನಲ್ಲ ಅವನು.

ಎದ್ದು ಕಾಣುವ ಹಾಗೆ ಭ್ರಷ್ಟ, ವಿಕೃತ, ಮೋಸಗಾರ, ದುಷ್ಟ ಕೂಡ. ಸಂಶಯವೇ ಇಲ್ಲ. ಅವನ ಬಗ್ಗೆ ಥರಾವರಿ ಕತೆಗಳು ಚಲಾವಣೆಯಲ್ಲಿದ್ದವು. ನಿಜ, ಕ್ಯಾತರೀನಳ ಮಕ್ಕಳಿಗೆ ಸಹಾಯ ಮಾಡುವುದಕ್ಕೆ ಕಷ್ಟಪಟ್ಟಿದ್ದ. ಯಾಕೆ? ಸಹಾಯದ ಅರ್ಥವೇನು? ಯಾರಿಗೆ ಗೊತ್ತು? ದುರುದ್ದೇಶಗಳು, ಕೆಟ್ಟ ಕೆಲಸಗಳು ಸದಾ ಮೊಳಕೆಯೊಡೆಯುತ್ತಲೇ ಇದ್ದವು ಅವನಲ್ಲಿ.

ಇನ್ನೂ ಒಂದು ಯೋಚನೆ, ಮನಸಿನಿಂದ ಹೊರ ದೂಡಬೇಕೆಂದು ಪ್ರಯತ್ನಿಸಿದರೂ ಬಿಡದೆ, ಈ ಎಲ್ಲ ದಿನಗಳಲ್ಲಿ ರಾಸ್ಕೋಲ್ನಿಕೋವ್‌ನ ಮನಸಿಗೆ ಮತ್ತೆ ಮತ್ತೆ ಬಂದು ತೊಂದರೆ ಕೊಡುತ್ತಲೇ ಇತ್ತು. ಅದನ್ನು ಕಿತ್ತು ಹಾಕುವುದು ಅಷ್ಟು ಕಷ್ಟವಾಗಿತ್ತು! ಸ್ವಿದ್ರಿಗೈಲೋವ್ ಇಲ್ಲೇ ಸುತ್ತ ಮುತ್ತ ಸುಳಿದಾಡುತ್ತಿದ್ದಾನೆ, ನನ್ನ ಗುಟ್ಟೆಲ್ಲ ಗೊತ್ತಾಗಿದೆ ಅವನಿಗೆ ಎಂದು ಒಂದೊಂದು ಸಾರಿ ಅನಿಸುತ್ತಿತ್ತು, ಸ್ವಿದ್ರಿಗೈಲೋವ್‍ ದುನ್ಯಾಳ ಮೇಲೆ ಕಣ್ಣು ಹಾಕಿದ್ದ, ಈಗಲೂ ಅವಳ ಆಸೆ ಬಿಟ್ಟಿಲ್ಲವೋ ಅವನು? ಆಸೆ ಇದೆ ಇನ್ನೂ ಅನಿಸತ್ತೆ, ನನ್ನ ಗುಟ್ಟು ಗೊತ್ತಾದಮೇಲೆ, ಅದನ್ನು ಅಸ್ತ್ರದ ಹಾಗೆ ದುನ್ಯಾಳ ಮೇಲೆ ಪ್ರಯೋಗಿಸದೆ ಇರುತ್ತಾನಾ ಈಗ?

ಈ ಚಿಂತೆ ಬಹಳ ಹಿಂಸೆ ಕೊಡುತ್ತಿತ್ತು. ನಿದ್ದೆಯಲ್ಲೂ. ಆದರೆ ಈಗ, ಸ್ವಿದ್ರಿಗೈಲೋವ್‍ನನ್ನು ನೋಡಲು ಹೋಗುತ್ತಿರುವಾಗ ಬಹಳ ಸ್ಪಷ್ಟವಾಗಿ ಮನಸಿಗೆ ತೋರಿಬಂದಿತ್ತು. ಈ ಯೋಚನೆಯೊಂದೇ ಉಗ್ರ ಕೋಪವನ್ನು ಹುಟ್ಟಿಸುತ್ತಿತ್ತು. ಪರಿಸ್ಥಿತಿ, ರಾಸ್ಕೋಲ್ನಿಕೋವ್‌ನದು ಕೂಡಾ, ಪೂರಾ ಬದಲಾಗುತದೆ. ದುನ್ಯಾಗೆ ತೊಂದರೆ ಆಗದಿರಲೆಂದು, ಅವಳು ದುಡುಕಿ ಅನಾಹುತ ಮಾಡಿಕೊಳ್ಳದಿರಲೆಂದು, ಎಲ್ಲ ಸಂಗತಿಯನ್ನೂ ಅವಳಿಗೆ ಹೇಳಬೇಕಾಗಿ ಬರದೆ. ತಾನೇ ಹೋಗಿ ಪೋಲೀಸರಿಗೆ ಶರಣಾಗಬೇಕಾಗುತ್ತದೆ. ಮತ್ತೆ ಪತ್ರ? ಅವತ್ತು ಬೆಳಗ್ಗೆ ದುನ್ಯಾಗೆ ಯಾವುದೋ ಪತ್ರ ಬಂದಿತಂತೆ! ಪೀಟರ್ಸ್‍ಬರ್ಗಿನಲ್ಲಿ ಯಾರು ತಾನೇ ಅವಳಿಗೆ ಬರೆಯಲು ಸಾಧ್ಯ? (ಪೀಟರ್ ಪೆಟ್ರೊವಿಚ್ ಬರೆದಿರಬಹುದಾ?) ನಿಜ, ರಝುಮಿಖಿನ್ ಅಲ್ಲಿ ಕಾವಲಿದ್ದಾನೆ. ಆದರೆ ರಝುಮಿಖಿನ್‌ಗೆ ಏನೂ ಗೊತ್ತಿಲ್ಲ. ಅವನಿಗೂ ಎಲ್ಲ ಹೇಳಬೇಕಾದೀತೋ? ಈ ಯೋಚನೆಯೇ ರಾಸ್ಕೋಲ್ನಿಕೋವ್‌ನಲ್ಲಿ ಅಸಹ್ಯ ಹುಟ್ಟಿಸುತ್ತಿತ್ತು.

‘ಏನೇ ಆಗಲಿ, ಸ್ವಿದ್ರಿಗೈಲೋವ್‍ನನ್ನ ಬೇಗ ಕಾಣಬೇಕು,’-ಕೊನೆಗೂ ರಾಸ್ಕೋಲ್ನಿಕೋವ್ ತೀರ್ಮಾನ ಮಾಡಿದ. ‘ಸದ್ಯ, ಈಗ ವಿಷಯದ ಒಟ್ಟು ಸಾರಾಂಶ ಮುಖ್ಯವೇ ಹೊರತು ವಿವರಗಳಲ್ಲ. ಆದರೂ ದುನ್ಯಾ ವಿಷಯದಲ್ಲಿ ಸ್ವಿದ್ರಿಗೈಲೋವ್ ಏನಾದರೂ ಕುತಂತ್ರ ಮಾಡಿದ್ದರೆ, ಆಗ…’

ಇಡೀ ಒಂದು ತಿಂಗಳು ಯೋಚನೆ ಮಾಡಿ ಮಾಡಿ ರಾಸ್ಕೋಲ್ನಿಕೋವ್ ಎಷ್ಟು ದಣಿದಿದ್ದನೆಂದರೆ ಬೇರೆ ಯಾವ ತೀರ್ಮಾನಕ್ಕೂ ಬರಲಾಗದೆ, ‘…ಆಗ, ಅವನನ್ನು ಕೊಂದುಬಿಡುತ್ತೇನೆ!’ ಅಂದುಕೊಂಡ.
ಮನಸು ಭಾರವಾಯಿತು. ರಸ್ತೆಯ ಮಧ್ಯೆಯೇ ನಿಂತ. ಸುತ್ತಲೂ ನೋಡಿದ. ಯಾವ ದಾರಿ ಹಿಡಿದು ಎಲ್ಲಿಗೆ ಬಂದಿದ್ದ? ಅವನು ಒಬುಖೋವ್‍ಸ್ಕಿ ಪ್ರಾಸ್ಪೆಕ್ಟಿನಲ್ಲಿದ್ದ. ಹೇಮಾರ್ಕೆಟ್ಟು ದಾಟಿ ಮೂವತ್ತು, ನಲವತ್ತು ಹೆಜ್ಜೆ ಮುಂದೆ ಬಂದಿದ್ದ. ಅವನ ಎಡಭಾಗಕ್ಕೆ ಇದ್ದ ಕಟ್ಟಡದ ಇಡೀ ಎರಡನೆಯ ಮಹಡಿಯನ್ನು ಹೆಂಡದಂಗಡಿ ಆಕ್ರಮಿಸಿಕೊಂಡಿತ್ತು. ಎಲ್ಲ ಕಿಟಕಿ ತೆರೆದಿದ್ದವು. ಕಿಟಕಿಯಲ್ಲಿ ಕಾಣುತ್ತಿದ್ದವರನ್ನು ನೋಡಿದರೆ ಜನ ತುಂಬಿಕೊಂಡಿದ್ದಾರೆ ಅನಿಸುತ್ತಿತ್ತು. ದೊಡ್ಡ ಕೋಣೆಯಲ್ಲಿ ಹಾಡು ಹೇಳುತ್ತಿದ್ದರು, ಕ್ಲಾರಿನೆಟ್, ಪಿಟೀಲುಗಳ ಸದ್ದು ಕೇಳುತ್ತಿತ್ತು. ಟರ್ಕಿಶ್ ಡ್ರಮ್ಮು ಬಾರಿಸುತ್ತಿದ್ದರು. ಹೆಂಗಸರ ಕೀರಲು ಮಾತಿನ ಗದ್ದಲ ಕೇಳುತ್ತಿತ್ತು. ‘ಈ ರಸ್ತೆಗೆ ಯಾಕೆ ಬಂದೆ?’ ಅಂದುಕೊಳ್ಳುತ್ತ ರಾಸ್ಕೋಲ್ನಿಕೋವ್ ಹಿಂದಿರುಗಲಿದ್ದಾಗ, ಇದ್ದಕಿದ್ದ ಹಾಗೆ, ಆ ಹೆಂಡದಂಗಡಿಯ ಕೊನೆಯಲ್ಲಿ, ತೆರೆದ ಕಿಟಕಿಯೊಂದರ ಬದಿಯಲ್ಲಿ, ಸ್ವಿದ್ರಿಗೈಲೋವ್ ಕಂಡ. ಕಿಟಕಿಯ ಪಕ್ಕದ ಟೀ ಟೇಬಲ್ಲಿನ ಮುಂದೆ ಕೂತಿದ್ದ. ಅವನ ಬಾಯಲ್ಲಿ ಪೈಪು ಇತ್ತು. ಸ್ವಿದ್ರಿಗೈಲೋವ್ ತನ್ನನ್ನೇ ಗಮನಿಸುತ್ತಿದ್ದಾನೆ ಅನ್ನುವುದು ಗೊತ್ತಾಗಿ ರಾಸ್ಕೋಲ್ನಿಕೋವ್‍ ಮನಸಿನಲ್ಲಿ ವಿಚಿತ್ರ ಭಯ ಹುಟ್ಟಿತು. ಅದೇ ಕ್ಷಣದಲ್ಲೇ ಸ್ವಿದ್ರಿಗೈಲೋವ್ ನನ್ನ ಕಣ್ಣಿಗೆ ಬೀಳುವುದಕ್ಕೆ ಮೊದಲೇ ನುಣುಚಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾನೆ ಅಂತಲೂ ಅನ್ನಿಸಿತು. ತಕ್ಷಣವೇ ರಾಸ್ಕೋಲ್ನಿಕೋವ್ ತಾನು ಅವನನ್ನು ನೋಡಿಯೇ ಇಲ್ಲ ಅನ್ನುವ ಹಾಗೆ ನಟಿಸುತ್ತ ಕಣ್ಣು ಹೊರಳಿಸಿ ಇನ್ನೆಲ್ಲೋ ನೋಡಿದ. ಎದೆ ಬಡಿದುಕೊಳ್ಳುತ್ತಿತ್ತು. ಕಣ್ಣಂಚಿನಲ್ಲಿ ಅವನನ್ನೇ ಗಮನಿಸುತ್ತಿದ್ದ. ರಾಸ್ಕೋಲ್ನಿಕೋವ್‍ಗೆ ಅನಿಸಿದ್ದು ನಿಜ. ಸ್ವಿದ್ರಿಗೈಲೋವ್‍ಗೆ ಕಾಣಿಸಿಕೊಳ್ಳುವ ಇಷ್ಟವಿರಲಿಲ್ಲ. ಬಾಯಿಂದ ಪೈಪು ತೆಗೆದ, ಎಲ್ಲಾದರೂ, ಬಚ್ಚಿಟ್ಟುಕೊಳ್ಳಬೇಕೆಂದು ಕುರ್ಚಿ ಹಿಂದೆ ಸರಿಸುತ್ತ ಎದ್ದು ನಿಂತ. ರಾಸ್ಕೋಲ್ನಿಕೋವ್ ತನ್ನನ್ನು ಗಮನಿಸುತ್ತಿದ್ದಾನೆ ಅನ್ನುವುದು ಅವನ ಗಮನಕ್ಕೆ ಬಂದಿರಬೇಕು. ಅವರಿಬ್ಬರ ಮೊದಲ ಭೇಟಿಯ ದೃಶ್ಯ, ರಾಸ್ಕೋಲ್ನಿಕೋವ್ ಮಲಗಿದ್ದ ಹಾಗೆ ನಟಿಸುತ್ತಿದ್ದಾಗ ಸ್ವಿದ್ರಿಗೈಲೋವ್ ಹೊಸ್ತಿಲ ಮೇಲೆ ನಿಂತು ನೋಡುತ್ತಿದ್ದ ದೃಶ್ಯ ಮತ್ತೆ ನಡೆಯುತ್ತಿತ್ತು. ಸ್ವಿದ್ರಿಗೈಲೋವ್‍ನ ಮುಖದ ಮೇಲೆ ತುಂಟ ನಗೆಯೊಂದು ಮೂಡಿತು. ಮುಖವೆಲ್ಲ ಹರಡಿತು. ಒಬ್ಬರು ಇನ್ನೊಬ್ಬರನ್ನು ಗಮನಿಸುತ್ತಿದ್ದೇವೆ ಅನ್ನುವುದು ಇಬ್ಬರಿಗೂ ಗೊತ್ತಾಗಿತ್ತು. ಕೊನೆಗೆ ಸ್ವಿದ್ರಿಗೈಲೋವ್ ದೊಡ್ಡದಾಗಿ ನಕ್ಕ.

‘ಸರಿ, ಸರಿ! ಬಾ, ಒಳಕ್ಕೆ. ಇಲ್ಲಿದೀನಿ!’ ಕಿಟಕಿಯಾಚೆ ಬಗ್ಗಿ ಕೂಗಿದ.

ರಾಸ್ಕೋಲ್ನಿಕೋವ್ ಒಳಕ್ಕೆ ಹೋದ. ಅಂಗಡಿಯವರು, ಕಾರಕೂನರು, ಮತ್ತೆ ಇನ್ನು ಯಾರು ಯಾರೋ ಪುಟ್ಟ ಪುಟ್ಟ ಮೇಜುಗಳ ಮುಂದೆ ಸಂಜೆಯ ಟೀ ಕುಡಿಯುತ್ತ, ಹಾಡುಗಾರರ ಹಾಡು ಮುಳುಗುವ ಹಾಗೆ ಚೀರಾಡುತ್ತ ಕೂತಿದ್ದ ದೊಡ್ಡ ಕೋಣೆ; ಅದಕ್ಕೆ ಅಂಟಿದ ಹಾಗೆ ಹಿಂಬದಿಯಲ್ಲಿದ್ದ ಚಿಕ್ಕ ಕೋಣೆ; ಅದಕ್ಕೆ ಒಂದೇ ಕಿಟಕಿ. ಬಿಲಿಯರ್ಡ್ಸ್ ಬಾಲುಗಳು ಟಕ್ ಟಕ್ ಎಂದು ಒಂದಕ್ಕೊಂಡು ಬಡಿಯುವ ಸದ್ದು ಎಲ್ಲಿಂದಲೋ ಕೇಳುತ್ತಿತ್ತು. ಸ್ವಿದ್ರಿಗೈಲೋವ್‌ನ ಮುಂದಿದ್ದ ಮೇಜಿನ ಮೇಲೆ ಶಾಂಪೇನಿನ ಬಾಟಲಿ ಮುಚ್ಚಳ ತೆರೆದುಕೊಂಡು ಕೂತಿತ್ತು. ಪಕ್ಕದಲ್ಲಿ ಅರ್ಧ ತುಂಬಿದ್ದ ಗ್ಲಾಸು ಇತ್ತು. ಆ ರೂಮಿನಲ್ಲಿ ಒಬ್ಬ ಹುಡುಗ ಹಾರ್ಮೋನಿಯಮ್ ನುಡಿಸುತ್ತಿದ್ದ, ಕೆಂಪು ಕೆನ್ನೆಯ ನಳನಳಿಸುತ್ತಿದ್ದ ಹದಿನೆಂಟು ವರ್ಷದ ಹುಡುಗಿ ಗೆರೆಗಳಿದ್ದ ಅಂಗಿಯನ್ನು ಸ್ಕರ್ಟಿನೊಳಕ್ಕೆ ಸಿಕ್ಕಿಸಿಕೊಂಡು, ರಿಬ್ಬನ್ನು ಕಟ್ಟಿದ ಹ್ಯಾಟು ತೊಟ್ಟು ಹಾಡುತ್ತಿದ್ದಳು. ಪಕ್ಕದ ಕೋಣೆಯ ಗದ್ದಲದ ಮಧ್ಯೆಯೂ ಗಾರು ದನಿಯಲ್ಲಿ ಹಾಡುತ್ತಿದ್ದಳು…

‘ಸಾಕು!’ ರಾಸ್ಕೋಲ್ನಿಕೋವ್ ಬರುತ್ತಿದ್ದ ಹಾಗೆ ಹಾಡು ನಿಲ್ಲಿಸುವಂತೆ ಸೂಚಿಸಿದ ಸ್ವಿದ್ರಿಗೈಲೋವ್.

ಹಾಡುತ್ತಿದ್ದ ಹುಡುಗಿ ತಟ್ಟನೆ ಸುಮ್ಮನಾದಳು. ಗೌರವ ಪೂರ್ವಕವಾಗಿ ಕಾಯುತ್ತ ನಿಂತಳು. ಹಾಡುತ್ತಿದ್ದಾಗಲೂ ಅವಳ ಮುಖದಲ್ಲಿ ಗಂಭೀರವಾದ ಗೌರವದ ನೋಟವಿತ್ತು.

‘ಹೇಯ್, ಫಿಲಿಪ್, ಇನ್ನೊಂದು ಗ್ಲಾಸು!’ ಸ್ವಿದ್ರಿಗೈಲೋವ್ ಕೂಗಿದ.

‘ವೈನ್ ಕುಡಿಯಲ್ಲ,’ ಅಂದ ರಾಸ್ಕೋಲ್ನಿಕೋವ್.

‘ನಿನ್ನಿಷ್ಟ. ಇದು ನಿನಗಲ್ಲ. ತಗೋ, ಕಾತ್ಯಾ. ಇವತ್ತಿಗೆ ಇಷ್ಟು ಸಾಕು. ಹೊರಡು ಇನ್ನು!’ ಅವನು ಗ್ಲಾಸು ತುಂಬುವಷ್ಟು ವೈನು ಬಗ್ಗಿಸಿದ. ಪಕ್ಕದಲ್ಲೊಂದು ಹಳದಿಯ ನೋಟು ಇಟ್ಟ. ಕಾಟ್ಯಾ ಹೆಂಗಸರು ಕುಡಿಯುವ ಹಾಗೆ ವೈನು ಕುಡಿದಳು. ಅಂದರೆ, ಲೋಟ ಕೆಳಗಿಳಿಸದೆ ಇಪ್ಪತ್ತು ಗುಟುಕಿನಲ್ಲಿ ವೈನು ಖಾಲಿ ಮಾಡಿದಳು. ದುಡ್ಡು ತೆಗೆದುಕೊಂಡು, ಸ್ವಿದ್ರಿಗೈಲೋವ್‍ ಗಂಭೀರವಾಗಿ ಮುಂದೆ ಚಾಚಿದ ಮುಂಗೈಗೆ ಮುತ್ತಿಟ್ಟು, ಹೊರಟು ಹೋದಳು. ಹಾರ್ಮೋನಿಯಮ್ ಹುಡುಗ ಅವಳ ಹಿಂದೆಯೇ ಹೋದ. ಬೀದಿಯಲ್ಲಿ ಹಾಡುತ್ತಿದ್ದವರನ್ನು ಕರೆದುಕೊಂಡು ಬಂದಿದ್ದ. ಸ್ವಿದ್ರಿಗೈಲೋವ್. ಪೀಟರ್ಸ್‌ಬರ್ಗ್‌ಗೆ ಬಂದು ಇನ್ನೂ ಒಂದು ವಾರವಾಗಿರಲಿಲ್ಲ. ಅಷ್ಟರಲ್ಲೆ ಅವನಿಗೆ ಯಜಮಾನನ ಗತ್ತು ಬಂದಿತ್ತು. ಹೆಂಡದಂಗಡಿಯ ಫಿಲಿಪ್ ಕೂಡ ‘ಚೆನ್ನಾಗಿ ಗೊತ್ತಿರುವ’ವನಾಗಿದ್ದ. ದೊಡ್ಡ ರೂಮಿಗೆ ಹೋಗುವ ಬಾಗಿಲು ಮುಚ್ಚಿ ಬೀಗ ಹಾಕಿತ್ತು ಮನೆಯಲ್ಲಿರುವಷ್ಟೇ ಆರಾಮವಾಗಿ ಅಲ್ಲಿದ್ದ ಸ್ವಿದ್ರಿಗೈಲೋವ್. ದಿನಗಟ್ಟಲೆ ಅಲ್ಲೇ ಕಳೆಯುತ್ತಿದ್ದ ಹಾಗಿತ್ತು. ಹೆಂಡದಂಗಡಿ ಕೊಳಕಾಗಿ, ‘ಸುಮಾರು’ ಅನ್ನುವುದಕ್ಕಿಂತ ಅತ್ತತ್ತ ಅನ್ನುವ ಹಾಗಿತ್ತು.

‘ಹುಡುಕಿಕೊಂಡು ನಿಮ್ಮ ಮನೆಗೆ ಹೋಗಿದ್ದೆ, ಹೇಮಾರ್ಕೆಟ್ಟಿನಿಂದ ಇದ್ದಕಿದ್ದ ಹಾಗೆ -ಸ್ಕಿ ಪ್ರಾಸ್ಪೆಕ್ಟ್ ಗೆ ಯಾಕೆ ತಿರುಗಿಕೊಂಡೆನೋ ಗೊತ್ತಿಲ್ಲ! ಇದು ನಾನು ಮನೆಗೆ ಹೋಗುವ ಮಾಮೂಲು ದಾರಿ ಅಲ್ಲ. ಹೀಗೇ ಬಂದರೆ ನೀನು ಇಲ್ಲಿದೀಯ! ವಿಚಿತ್ರ!’ ಅಂದ ರಾಸ್ಕೋಲ್ನಿಕೋವ್.

‘ಪವಾಡ ಅಂತ ಒಂದೇಮಾತಲ್ಲಿ ಹೇಳು!’

‘ಅಕಸ್ಮಾತ್ತೂ ಆಗಿರಬಹುದು ಇದು.’

‘ನೋಡಿರಯ್ಯಾ ಈಗಿನ ಕಾಲದ ಹುಡುಗರನ್ನ!’ ಸ್ವಿದ್ರಿಗೈಲೋವ್ ಗಹಗಹಿಸಿ ನಕ್ಕ. ‘ಎಲ್ಲಾರೂ ಒಂದೇ ಥರ! ಪವಾಡಗಳನ್ನ ಗುಟ್ಟಾಗಿ ನಂಬತಾರೆ, ಒಪ್ಪಿಕೊಳ್ಳಲ್ಲ! ಆಕಸ್ಮಿಕ ‘ಇರಬಹುದು’ ಅನ್ನತಾರೆ. ಅಭಿಪ್ರಾಯ ನಿಜವಾಗಿ ತಿಳಿಸುವ ವಿಚಾರದಲ್ಲಿ ಎಂಥಾ ಹೇಡಿಗಳು ಅನ್ನುವುದು ನಿನಗೆ ಗೊತ್ತಿಲ್ಲ ರೋಡಿಯಾನ್ ರೊಮಾನ್ಯಿಚ್! ನಾನು ನಿನ್ನ ಬಗ್ಗೆ ಹೇಳತಾ ಇಲ್ಲ. ನಿನ್ನ ಅಭಿಪ್ರಾಯ ನಿನಗೆ. ನಿನಗೆ ನಿನ್ನದೇ ಅಭಿಪ್ರಾಯ ಇದೆ ಅಂತಲೇ ನನಗೆ ಆಸಕ್ತಿ ಹುಟ್ಟಿದ್ದು.’

‘ಮತ್ತಿನ್ನೇನೂ ಇಲ್ಲವಾ?’

‘ಅಷ್ಟು ಸಾಕಲ್ಲ.’

ಸ್ವಿದ್ರಿಗೈಲೋವ್ ಸ್ವಲ್ಪ ನಶೆಯಲ್ಲಿದ್ದ ಹಾಗಿತ್ತು. ಅವನಿನ್ನೂ ಅರ್ಧ ಗ್ಲಾಸು ಮಾತ್ರ ಕುಡಿದಿದ್ದ.

‘ನೀನು ಯಾವುದನ್ನ ನನ್ನ ಅಭಿಪ್ರಾಯ ಅನ್ನುತೀಯೋ ಅದು ಗೊತ್ತಾಗುವ ಮೊದಲೇ ನನ್ನ ಹುಡುಕಿಕೊಂಡು ಬಂದಿದ್ದೆ,’ ಅಂದ ರಾಸ್ಕೋಲ್ನಿಕೋವ್.

ಹಾಗಾದರೆ ಸ್ವಿದ್ರಿಗೈಲೋವ್ ಅವನನ್ನು ನೋಡಲು ಹೋದಾನೋ? ಹೋಗುತ್ತಾನೋ? ಸದ್ಯಕ್ಕಂತೂ ಹೋಗಲಾರ ಅನಿಸಿತು. ಯಾಕೆ? ರಾಸ್ಕೋಲ್ನಿಕೋವ್‌ಗೆ ವಿವರಿಸಲು ಆಗುತ್ತಿರಲಿಲ್ಲ. ಹಾಗೊಂದು ವೇಳೆ ವಿವರಣೆ ಕೊಡಲು ಸಾಧ್ಯವಿದ್ದಿದ್ದರೂ ಅದೇನಿರಬಹುದೆಂದು ತಲೆ ಕೆಡಿಸಿಕೊಳ್ಳಲು ಈ ಕ್ಷಣದಲ್ಲಿ ಅವನು ಸಿದ್ಧನಿರಲಿಲ್ಲ.

‘ಅದು ಬೇರೆಯ ವಿಚಾರ. ನಮ್ಮ ನಮ್ಮ ದಾರಿ ನಮಗೆ. ಇನ್ನ ಪವಾಡದ ವಿಷಯ.. ನೀನು ಎರಡು ಮೂರು ದಿನ ನಿದ್ದೆ ಮಾಡಿಬಿಟ್ಟೆ ಅಂತ ಕಾಣತ್ತೆ. ಈ ಹೆಂಡದಂಗಡಿಯಲ್ಲಿ ಭೇಟಿಯಾಗಣ ಅಂತ ನಾನೇ ನಿನಗೆ ಹೇಳಿದ್ದೆ. ನೀನು ನೆಟ್ಟಗೆ ಇಲ್ಲಿಗೆ ಬಂದಿದೀಯ. ಪವಾಡ ಏನೂ ಇಲ್ಲ. ಈ ಅಂಗಡಿ ಎಲ್ಲಿದೆ ಹೇಗೆ ಬರಬೇಕು ಅಂತಲೂ ಹೇಳಿದೆ. ಎಷ್ಟು ಹೊತ್ತಿಗೆ ಸಿಗತೇನೆ ಅಂತಲು ಹೇಳಿದ್ದೆ. ಜ್ಞಾಪಕ ಇದೆಯಾ?’

‘ಮರೆತುಹೋದೆ.’ ಆಶ್ಚರ್ಯಪಟ್ಟ ರಾಸ್ಕೋಲ್ನಿಕೋವ್.

‘ಅಡ್ರೆಸ್ಸು ಎರಡು ಸಾರಿ ಹೇಳಿದೆ ನಿನಗೆ. ಅದು ನಿನ್ನ ಮನಸಿನಲ್ಲಿ ಕೂತುಬಿಟ್ಟಿದೆ. ಹಾಗಾಗಿ ನಿನಗೇ ಗೊತ್ತಿಲ್ಲದೆ ಆಟೋಮ್ಯಾಟಿಕ್ಕಾಗಿ ನಾನು ಹೇಳಿದ ದಾರಿಯಲ್ಲಿ ನೀನಾಗೇ ಬಂದಿದೀಯ. ಆವಾಗ ನಾನು ಹೇಳಿದ್ದು ನಿನಗೆ ಅರ್ಥ ಆಯಿತು ಅನ್ನುವ ಗ್ಯಾರಂಟಿ ಇರಲಿಲ್ಲ ನನಗೆ. ನೀನು ತುಂಬಾ ಮಾತಾಡಿದೆ. ಈ ಪೀಟರ್ಸ್‌ಬರ್ಗ್‌ನ ಬಹಳ ಜನ ನಡೀತಾ ನಡೀತಾ ಅವರಷ್ಟಕ್ಕೇ ಮಾತಾಡಿಕೊಳ್ಳತಾರೆ. ಅರೆ ಹುಚ್ಚರ ಊರು ಇದು. ಡಾಕ್ಟರು, ಲಾಯರು, ತತ್ವಜ್ಞಾನಿಗಳು ಈ ಊರಿಗೆ ಬಂದು ತಮ್ಮ ತಮ್ಮದೇ ಸಂಶೋಧನೆ ಮಾಡುವುದಕ್ಕೆ ಬೇಕಾಷ್ಟಿದೆ ಇಲ್ಲಿ. ಪೀಟರ್ಸ್‌ಬರ್ಗ್‌ನ ಹಾಗೆ ಮನಸಿನ ಮೇಲೆ ವಿಚಿತ್ರ ವಿಷಾದದ ಪ್ರಭಾವ ಬೀರುವ ಊರು ಇನ್ನೊಂದಿಲ್ಲ. ಇಲ್ಲಿನ ಹವಾನೇ ವಿಚಿತ್ರ. ಜೊತೆಗೆ ಇಡೀ ರಶಿಯದ ರಾಜಧಾನಿ. ಇಲ್ಲಿರುವ ಎಲ್ಲಾದರ ಮೇಲೂ ಎಲ್ಲರ ಮೇಲೂ ರಾಜಧಾನಿಯ ಮುದ್ರೆ ಇದೆ. ಆ ವಿಷಯ ಬೇಡ, ಈಗ. ಮುಖ್ಯ ಏನಂದರೆ, ನಿನ್ನನ್ನ ಬಹಳ ಗಮನಿಸಿದ್ದೇನೆ. ನೀನು ತಲೆ ಎತ್ತಿ ನೇರವಾಗಿ ನೋಡತ ಮನೆಯಿಂದ ಹೊರಡತೀಯ. ಇಪ್ಪತ್ತು ಹೆಜ್ಜೆ ನಡೀತಿದ್ದ ಹಾಗೆ ತಲೆ ತಗ್ಗಿಸತೀಯ, ಬೆನ್ನ ಹಿಂದೆ ಕೈ ಕಟ್ಟಿಕೊಳ್ಳತೀಯ. ಆಮೇಲೆ ತುಟಿ ಆಡಿಸತಾ ಮಣಮಣ ನಿನಗೇ ಮಾತಾಡಿಕೊಳ್ಳತೀಯ ಏನೋ ಹೇಳುವವನ ಹಾಗೆ ಕೈ ಆಡಿಸತಾ ರಸ್ತೆ ಮಧ್ಯ ತುಂಬ ಹೊತ್ತು ನಿಂತುಬಿಡತೀಯ. ಒಳ್ಳೆಯದಲ್ಲ, ಸಾರ್. ನನ್ನ ಹಾಗೇ ಬೇರೆಯವರೂ ಗಮನಿಸಬಹುದು ಅದರಿಂದ ನಿಮಗೆ ಕೆಟ್ಟದ್ದೂ ಆಗಬಹುದು. ನನಗೇನೂ ಆಗಬೇಕಾಗಿಲ್ಲ, ಅನ್ನು. ನಾನೇನು ನಿನ್ನ ವಾಸಿ ಮಾಡಕ್ಕೆ ಬಂದಿಲ್ಲ. ಅರ್ಥ ಆಯಿತಲ್ಲ.’

‘ನನ್ನ ಯಾರೋ ಹಿಂಬಾಲಿಸತಾ ಇದಾರೆ, ಗೊತ್ತಾ?’ ಹುಡುಕು ನೋಟ ಬೀರುತ್ತ ರಾಸ್ಕೋಲ್ನಿಕೋವ್ ಕೇಳಿದ.

‘ಇಲ್ಲ! ನನಗೆ ಗೊತ್ತಿಲ್ಲ!’ ಆಶ್ಚರ್ಯಗೊಂಡವನ ಹಾಗೆ ಹೇಳಿದ ಸ್ವಿದ್ರಿಗೈಲೋವ್.

‘ಸರಿ, ನನ್ನ ವಿಚಾರ ಬಿಡಣ,’ ರಾಸ್ಕೋಲ್ನಿಕೋವ್ ಹುಬ್ಬು ಗಂಟಿಕ್ಕಿ ಗೊಣಗಿದ.

‘ಸರಿ ನಿನ್ನ ವಿಚಾರ ಬಿಡಣ.’

‘ಹೇಳು, ನೀನು ಇಲ್ಲಿಗೆ ಕುಡಿಯಕ್ಕೆ ಬಂದಿದ್ದರೆ, ಇಲ್ಲಿಗೆ ಬಾ ಅಂತ ನನಗೆ ಎರಡು ಸಾರಿ ಹೇಳಿದ್ದರೆ ಅದು ಯಾಕೆ ನಾನು ಕಿಟಕಿಯಿಂದ ನಿನ್ನ ನೋಡಿದಾಗ, ಈಗ, ಬಚ್ಟಿಟ್ಟುಕೊಳ್ಳಕ್ಕೆ, ಎದ್ದು ಹೋಗಕ್ಕೆ ನೋಡಿದೆಯಲ್ಲ, ಅದನ್ನ ನಾನು ಗಮನಿಸಿದೆ. ಯಾಕೆ?’

‘ಹ್ಹೆಹ್ಹೇ! ಅದು ಯಾಕೆ ಅವತ್ತು ನಾನು ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಾಗ ನೀನು ಸೋಫಾ ಮೇಲೆ ಮಲಗಿರುವವನ ಹಾಗೆ ಕಣ್ಣು ಮುಚ್ಚಿ ಆಟ ಕಟ್ಟಿದೆ?’

‘ನನಗೆ ಏನೇನೋ ಕಾರಣ ಇತ್ತು… ನಿನಗೂ ಗೊತ್ತಿದೆ.’

‘ನನಗೂ ಏನೇನೋ ಕಾರಣ ಇತ್ತು. ಹೇಳಲ್ಲ.’

ರಾಸ್ಕೋಲ್ನಿಕೋವ್ ಬಲ ಮೊಳಕೈಯನ್ನು ಟೇಬಲ್ಲಿನ ಮೇಲೆ ಆರಾಮವಾಗಿರಿಸಿ, ಎಡ ಮೊಳಕೈಯನ್ನು ಊರಿ ಅಂಗೈಯಲ್ಲಿ ಮುಖ ಇರಿಸಿ ಸ್ವಿದ್ರಿಗೈಲೋವ್‍ನನ್ನು ದಿಟ್ಟಿಸಿದ. ಒಂದು ನಿಮಿಷದಷ್ಟು ಹೊತ್ತು ಅವನ ಮುಖ ನೋಡುತ್ತಲೇ ಇದ್ದ. ಯಾಕೋ ಅದು ವಿಚಿತ್ರವಾದ ಮುಖ, ಮುಖವಾಡದಂಥ ಮುಖ, ಕೆಂಪು ತುಟಿ, ಬಿಳಿಯ ಮುಖ, ನಸುಗೆಂಪು ಕೆನ್ನೆ, ದಟ್ಟವಾದ ಹೊಂಬಣ್ಣದ ಕೂದಲು, ಗಂಭೀರವಾದ ನೀಲಿ ಕಣ್ಣು, ಭಾರ ಅನಿಸುವ ನಿಶ್ಚಲ ದೃಷ್ಟಿ. ಚೆಲುವಾದ ಆದರೆ ನೋಡಲು ಹಿತವೆನ್ನಿಸದ, ಅವನಿಗಾದ ವಯಸ್ಸನ್ನು ಗಮನಿಸಿದರೆ ಹುಡುಗು ಅನ್ನಿಸುವಂಥ ಮುಖ ಅದು. ಅವನು ತೊಟ್ಟಿದ್ದ ಬಟ್ಟೆ ಇತ್ತೀಚಿನ ಶೈಲಿಯದು, ಬೇಸಗೆಗೆ ಹೊಂದುವ ಹಾಗೆ ಹಗುರಾದದ್ದು; ಬೆರಳಲ್ಲಿ ದೊಡ್ಡ ಉಂಗುರ, ಅದಕ್ಕೊಂದು ದುಬಾರಿ ಬೆಲೆಯ ಹರಳು.

‘ಈ ಹೊತ್ತಿನಲ್ಲಿ ನಿನ್ನ ಬಗ್ಗೇನೂ ತಲೆ ಕೆಡಿಸಿಕೊಳ್ಳಬೇಕಾ ನಾನು?’ ರಾಸ್ಕೋಲ್ನಿಕೋವ್ ತಟಕ್ಕನೆ ಕೇಳಿದ. ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು. ಯಾರಿಗಾದರೂ ತೊಂದರೆ ಕೊಡಬೇಕು ಅಂತ ನೀನು ಮನಸು ಮಾಡಿಕೊಂಡರೆ ನಿನ್ನಂಥ ಅಪಾಯದ ಮನುಷ್ಯ ಯಾರೂ ಇಲ್ಲ. ಇನ್ನು ತಲೆಕೆಡಿಸಿಕೊಳ್ಳುವುದಕ್ಕೆ ರೆಡಿ ಇಲ್ಲ ನಾನು. ನಿನಗೆ ಗೊತ್ತಿಲ್ಲ, ನನ್ನ ಬಗ್ಗೆ ಕೂಡ ನಾನು ಕೇರ್ ಮಾಡಲ್ಲ. ನೇರಾ ನೇರಾ ನಿನಗೊಂದು ಮಾತು ಹೇಳಿ ಹೋಗುವುದಕ್ಕೆ ಬಂದಿದೇನೆ. ನನ್ನ ತಂಗಿಯ ಬಗ್ಗೆ ನಿನಗೆ ಮೊದಲು ಇದ್ದಂಥ ಕೆಟ್ಟ ಯೋಚನೆ ಇದ್ದರೆ, ಇತ್ತೀಚೆಗೆ ನಿನಗೆ ಗೊತ್ತಾದ ಗುಟ್ಟನ್ನು ಬಳಸಿಕೊಂಡು ಏನಾದರೂ ಹುನ್ನಾರ ಮಾಡಿದರೆ, ನಾನು ಜೈಲಿಗೆ ಹೋಗುವ ಮೊದಲು ನಿನ್ನ ಕೊಂದು ಬಿಡತೇನೆ. ಇದು ಬರೀ ಮಾತಲ್ಲ. ನಾನು ಕೊಲ್ಲಬಲ್ಲೆ ಅನ್ನುವುದು ನಿನಗೆ ಗೊತ್ತಿದೆ. ಎರಡನೆಯ ವಿಷಯ: ನೀನು ನನಗೇನಾದರೂ ಹೇಳುವುದಿದ್ದರೆ, (ನನಗೇನೋ ಹೇಳಬೇಕು ಅಂತ ಇದೀಯ ಅನ್ನುವುದು ಗೊತ್ತು) ಬೇಗ ಹೇಳು ಅದನ್ನ. ಸ್ವಲ್ಪ ತಡಮಾಡಿದರೂ ಹೊತ್ತು ಮೀರಿ ಹೋಗತ್ತೆ.’

‘ಇಷ್ಟು ಬೇಗ ಎಲ್ಲಿಗೆ ಹೊರಟೆ?’ ರಾಸ್ಕೋಲ್ನಿಕೋವನನ್ನೇ ಗಮನಿಸುತ್ತ ಕೇಳಿದ.

‘ಅವರವರ ದಾರಿ ಅವರವರಿಗೆ,’ ರಾಸ್ಕೋಲ್ನಿಕೋವ್ ಬಾಡಿದ ಮುಖಲ್ಲಿ ಅಸಹನೆಯಿಂದ ಹೇಳಿದ.

‘ನೇರಾ ನೇರಾ ಮಾತಾಡು ಅಂತ ಈಗ ತಾನೇ ನೀನೇ ಹೇಳಿದೆ, ಈಗ ನೀನೇ ನನ್ನ ಮೊದಲ ಪ್ರಶ್ನೆಗೇನೇ ಉತ್ತರ ಹೇಳತಿಲ್ಲ,’ ಅನ್ನುತ್ತ ಸ್ವಿದ್ರಿಗೈಲೋವ್ ನಕ್ಕ. ‘ನನಗೇನೋ ಕೆಟ್ಟ ಉದ್ದೇಶ ಇದೆ ಅಂದುಕೊಂಡಿದೀಯ, ಅದಕ್ಕೇ ಅನುಮಾನದಿಂದ ನೋಡತೀಯ. ನಿನ್ನ ಪರಿಸ್ಥಿತಿಯಲ್ಲಿ ಹಾಗೆ ಯಾಕೆ ಮಾಡತೀಯ ಅನ್ನೋದು ಅರ್ಥ ಆಗತ್ತೆ. ನಿನಗೆ ಹತ್ತಿರವಾಗಬೇಕು ಅನ್ನುವ ಆಸೆ ನನಗೇನೋ ಇದೆ. ಆದರೂ ನಿನ್ನ ಸಂಶಯ ಸರಿ ಅಲ್ಲ ಅಂತ ಒಪ್ಪಿಸುವುದಕ್ಕೆ ಕಷ್ಟಪಡಲ್ಲ ನಾನು. ಈ ಆಟಕ್ಕೆ ಕವಡೆ ಕಿಮ್ಮತ್ತಿಲ್ಲ. ಅಲ್ಲದೆ, ನಿನ್ನ ಜೊತೆ ವಿಶೇಷವಾಗಿ ಮಾತಾಡುವಂಥಾದ್ದು ಏನೂ ಇಲ್ಲ.’

‘ಹಾಗಾದರೆ ಗೋಗರೆಯುತ್ತ ನನ್ನ ಸುತ್ತ ಸುತ್ತಾಡತಿರುವುದು ಯಾಕೆ?’

‘ನಿನ್ನ ಗಮನಿಸುತ್ತಾ ಇದ್ದರೆ ಕುತೂಹಲ ಹುಟ್ಟತ್ತೆ. ನಿನ್ನ ಅದ್ಭುತವಾದ ಪರಿಸ್ಥಿತಿ ಇಷ್ಟವಾಯಿತು-ಅದಕ್ಕೆ! ಎರಡನೆಯದಾಗಿ, ನಾನು ಬಹಳ ಇಷ್ಟಪಡುವ ವ್ಯಕ್ತಿಯ ಅಣ್ಣ ನೀನು. ಕೊನೆಯದಾಗಿ, ನಾನು ಇಷ್ಟಪಡುವ ವ್ಯಕ್ತಿ ನಿನ್ನ ಬಗ್ಗೆ ಬಹಳ ಬಹಳ ಮಾತಾಡಿದಳು. ಆಕೆಯ ಮೇಲೆ ನಿನ್ನ ಪ್ರಭಾವ ತುಂಬ ಇದೆ ಅನಿಸಿತು. ಇಷ್ಟು ಕಾರಣ ಸಾಕಲ್ಲ? ಹ್ಹೆ ಹ್ಹೆ! ಆದರೂ ನಿನ್ನ ಪ್ರಶ್ನೆ ನನಗೆ ಅರ್ಥವಾಗದಷ್ಟು ಸಿಕ್ಕುಸಿಕ್ಕಾಗಿದೆ, ಉತ್ತರ ಹೇಳುವುದು ಕಷ್ಟ. ಉದಾಹರಣೆ ಕೊಡತೀನಿ, ನೋಡು. ನೀನು ನನ್ನ ಹತ್ತಿರ ಏನೋ ಕೆಲಸದ ಮೇಲೆ ಬಂದಿದೀಯ, ಅದು ಹೊಸ ವ್ಯವಹಾರ. ಸರೀನಾ? ನಾ ಹೇಳಿದ್ದು ಸರೀನಾ?’ ಸ್ವಿದ್ರಿಗೈಲೋವ್ ತುಂಟ ನಗು ನಗುತ್ತ ಉತ್ತರಕ್ಕೆ ಒತ್ತಾಯ ಮಾಡುತಿದ್ದ. ನಾನು ಇನ್ನೂ ಪೀಟರ್ಸ್‍ಬರ್ಗ್‍ಗೆ ಬರುತಾ ಇರುವಾಗಲೇ ರೈಲಿನಲ್ಲೇ ನೀನು ನನಗೇನೋ ಹೇಳತೀಯ ಅಂತ ಲೆಕ್ಕ ಹಾಕತಾ ಇದ್ದೆ. ಹೊಸಾ ವಿಚಾರ ಹೇಳತೀಯ ಅಂತ! ನಿನ್ನಿಂದ ಹತ್ತಿರ ಸಾಲ ಸಿಗತ್ತೆ ಅಂತ! ನೋಡು, ನಾವೆಷ್ಟು ಶ್ರೀಮಂತರು!’

‘ನನ್ನಿಂದ ನಿನಗೇನು ಸಿಕ್ಕೀತು?’

‘ಯಾರಿಗೆ ಗೊತ್ತು? ಏನು ಅಂತ ನನಗೇನು ಗೊತ್ತು? ನಾನು ಎಂಥಾ ಗಬ್ಬು ಜಾಗದಲ್ಲಿ ಕೂತು ಕಾಲ ಕಳೀತಿದೇನೆ ನೋಡು. ಇಲ್ಲಿ ನನಗೆ ಖುಷಿ ಸಿಗತ್ತೆ. ಅಥವಾ ಖುಷಿ ಇಲ್ಲ, ಬೇರೆ ಎಲ್ಲೂ ಜಾಗ ಇಲ್ಲ ಅಂತ ಇಲ್ಲಿ ಕೂತಿದ್ದೇನೆ. ಈ ಹುಡುಗಿ ಕಾತ್ಯಾನೇ ನೋಡು—ನೋಡಿದೆಯಾ ಅವಳನ್ನ? ನಾನು ಶ್ರೀಮಂತರ ಕ್ಲಬ್ಬಿನ ಊಟದ ರಸಿಕನೇ ಇರಬಹುದು, ಸಿಕ್ಕಿದ್ದು ಮುಕ್ಕುವವನೇ ಆಗಿರಬಹುದು, ಇಲ್ಲಿನ ನನ್ನ ಊಟ ನೋಡು!’ (ಮೂಲೆಯತ್ತ ಬೆರಳು ತೋರಿದ. ಅಲ್ಲಿ ತಂಗಳು ಬೀಫ್ ಸ್ಟೀಕ್, ಬೇಯಿಸಿದ ಆಲೂಗಡ್ಡೆಗಳನ್ನು ತಗಡಿನ ತಟ್ಟೆಯ ಮೇಲೆ ಇಟ್ಟಿದ್ದರು. ‘ಅಂದ ಹಾಗೆ ನಿನ್ನ ಊಟ ಆಯಿತಾ? ನಾನೊಂದಷ್ಟು ತಿಂದೆ. ಇನ್ನೇನೂ ಬೇಡ. ವೈನ್ ಕೂಡ. ನಾನು ವೈನ್ ಕುಡಿಯಲ್ಲ. ಕುಡಿಯೋದೇ ಇಲ್ಲ. ಕುಡಿದರೆ ಶಾಂಪೇನ್ ಮಾತ್ರ. ಅದೂ ಒಂದೇ ಗ್ಲಾಸು. ಅಷ್ಟಕ್ಕೇ ತಲೆ ನೋವು ಬರತ್ತೆ. ಒಂದು ಸ್ವಲ್ಪ ಜೋಶ್ ಬರಲಿ ಅಂತ ಈಗ ವೈನು ತರಿಸಿದೆ. ಯಾಕೇಂದರೆ ಈಗ ಎಲ್ಲಿಗೋ ಹೋಗತಾ ಇದೇನೆ. ಹಾಗಾಗಿ ನನ್ನ ಮನಸು ವಿಚಿತ್ರವಾದ ಸ್ಥಿತಿಯಲ್ಲಿರುವಾಗ ನನ್ನ ನೋಡತಾ ಇದೀಯ. ಅದಕ್ಕೇ ಸ್ಕೂಲು ಹುಡುಗನ ಥರ ಬಚ್ಚಿಟ್ಟುಕೊಳ್ಳಕ್ಕೆ ನೋಡಿದೆ. ನೀನು ನನಗೆ ಅಡ್ಡಿ ಮಾಡತೀಯ ಅಂದುಕೊಂಡೆ. ಆದರೂ (ಗಡಿಯಾರ ತೆಗೆದು ನೋಡಿದ) ನಿನ್ನ ಜೊತೆ ಒಂದು ಗಂಟೆ ಕಳೆಯಬಹುದು. ಈಗ ನಾಲ್ಕೂವರೆ. ನಾನು ಏನಾದರೂ ಆಗಿದ್ದಿದ್ದರೆ, ಜಮೀನ್ದಾರ, ಪಾದ್ರಿ, ಉಲ್ಹನ್ ಯೋಧ, ಫೋಟೋಗ್ರಾಫರ್, ಪತ್ರಕರ್ತ ಏನಾದರೂ ಸರಿ, ಚೆನ್ನಾಗಿರತಿತ್ತು. ನನಗೆ ಕೆಲಸ ಇಲ್ಲ! ಒಂದೊಂದು ಸಲ ನನಗೂ ಬೋರಾಗತ್ತೆ. ನೀನು ನನಗೆ ಹೊಸದೇನಾರೂ ಹೇಳತೀಯ ಅಂದುಕೊಂಡಿದ್ದೆ, ನಿಜವಾಗಲೂ.’

‘ಸರಿ, ನೀನು ಯಾರು, ಇಲ್ಲಿಗೆ ಯಾಕೆ ಬಂದೆ?’

‘ನಾನು ಯಾರಾ? ಓಹ್ ನಿನಗೆ ಗೊತ್ತು—ನಾನು ಘನವಂತ ಎರಡು ವರ್ಷ ಅಶ್ವದಳದಲ್ಲಿ ಕೆಲಸ ಮಾಡಿದೆ. ಆಮೇಲೆ ಈ ಊರಲ್ಲಿ ಠಳಾಯಿಸಿದೆ. ಮಾರ್ಫಾ ಪೆಟ್ರೋವ್ನಾಳನ್ನ ಮದುವೆಯಾದೆ. ಎಸ್ಟೇಟಿನಲ್ಲಿ ವಾಸ ಮಾಡಿದೆ. ಇದು ನನ್ನ ಜೀವನ ಚರಿತ್ರೆ.’

‘ಜೂಜಾಡತೀಯ, ಅಲ್ಲವಾ?’

‘ಇಲ್ಲ. ಶಾರ್ಪರ್‍ ಜೂಜಾಡಲ್ಲ.’

‘ಹಾಗಾದರೆ ನೀನು ಶಾರ್ಪರ್?ʼ

‘ಹೌದು, ಶಾರ್ಪರ್ ಆಗಿದ್ದೆ.’

‘ಯಾವತ್ತಾದರೂ ಸೋತಿದೀಯಾ?’

‘ಹ್ಞೂಂ, ಅದಕ್ಕೇನೀಗ?’

‘ಹಾಗಿದ್ದರೆ ನಿನ್ನ ಡ್ಯೂಯೆಲ್‍ಗೆ ಚಾಲೆಂಜ್ ಮಾಡಬಹುದು…ಮಜಾ ಬರತ್ತೆ.’

‘ಇಲ್ಲ ಅನ್ನಲ್ಲ. ನನಗೆ ಫಿಲಾಸಫಿ ಹೇಳಕ್ಕೆ ಬರಲ್ಲ. ನಾನು ಹೆಣ್ಣಿನ ವಿಚಾರಕ್ಕೆ ಬಂದಿದ್ದು ಇಲ್ಲಿಗೆ.’

‘ಮಾರ್ಫಾ ಪೆಟ್ರೋವ ಸತ್ತ ತಕ್ಷಣ?’

‘ಹ್ಞೂಂ. ಯಾಕೆ?’ ಎಂಥವರನ್ನೂ ಗೆಲ್ಲುವಂಥ ಪ್ರಾಮಾಣಿಕ ನಗೆಯನ್ನು ಬೀರಿದಿ. ‘ಅದಕ್ಕೇನು? ಹೆಂಗಸರ ಬಗ್ಗೆ ಹಾಗೆ ಮಾತಾಡುವುದು ತಪ್ಪು ಅನ್ನುತೀಯೇನು?’ ಅಂದ.

‘ಲಂಪಟತನವನ್ನ ಒಪ್ಪುತ್ತೇನೋ ಇಲ್ಲವೋ ಅಂತಲಾ ನೀನು ಕೇಳಿದ್ದು?’

‘ಲಂಪಟತನ! ಕೇಳಿರಪ್ಪ! ಇರಲಿ. ಹೆಂಗಸರ ಬಗ್ಗೆ ನೀನು ಕೇಳಿದ ಮೊದಲ ಪ್ರಶ್ನೆಗೆ ಉತ್ತರ ಕೊಡತೇನೆ. ನೋಡು, ನನಗೆ ಮಾತು ಹೆಚ್ಚು. ಹೇಳು. ನಾನು ಯಾಕೆ ಹೆಂಗಸರ ಹಿಂದೆ ಹೋಗದೆ ಹಾಗೇ ಇರಬೇಕು? ನನಗೆ ಹೆಂಗಸರು ಅಷ್ಟೊಂದು ಇಷ್ಟ ಇರುವಾಗ ಹೆಂಗಸರ ಸುಖ ಯಾಕೆ ಬಿಡಬೇಕು. ಕೊನೇ ಪಕ್ಷ ಅದೊಂದು ಉದ್ಯೋಗ.’

‘ಹಾಗಾದರೆ ಲಂಪಟತನಕ್ಕೆ ಅವಕಾಶ ಸಿಗತ್ತೆ ಇಲ್ಲಿ ಅಂತ ಬಂದಿದೀಯ?’

‘ಸರಿ, ನಿನಗೆ ಬೇಕಾದರೆ ಲಂಪಟತನ ಅಂತಲೇ ಕರಿ! ನೀನು ನಿನ್ನ ಲಂಪಟತನ! ಕೊನೆಯ ಪಕ್ಷ ಇದು ನೇರವಾದ ಪ್ರಶ್ನೆ. ಈ ಲಂಪಟತದಲ್ಲಿ ಚಿರಂತನವಾದದ್ದು ಏನೋ ಇದೆ. ನಿಸರ್ಗಕ್ಕೆ ಸಂಬಂಧಪಟ್ಟಿದ್ದು. ಹಾಗಾಗಿ ಭ್ರಮೆಯಲ್ಲದ್ದು. ಶಾಶ್ವತವಾಗಿ ಉರಿಯುವ ಕೆಂಡದ ಹಾಗೆ ರಕ್ತವನ್ನು ದೀರ್ಘಕಾಲ ಕುದಿಸುತ್ತಲೇ ಇರುತ್ತದೆ. ವಯಸ್ಸಾದರೂ ಆ ಬೆಂಕಿಯನ್ನ ಆರಿಸುವುದು ಸುಲಭವಲ್ಲ. ಇದೊಂದು ಥರ ಉದ್ಯೋಗ ಅಂತ ನಿನಗೆ ಅನ್ನಿಸಲ್ಲವಾ?’

‘ಅದೇನು ಅಷ್ಟು ಖುಷಿಯಾಗಿ ಹೇಳತೀಯ? ಅದು ರೋಗ. ಅಪಾಯ ತರುವ ರೋಗ.’

‘ಹಾಗನ್ನುತ್ತೀಯಾ? ಸರಿ, ಒಪ್ಪಿದೆ ನಿನ್ನ ಮಾತು. ಅದು ರೋಗ-ಮಿತಿ ಮೀರಿದರೆ ಎಲ್ಲಾನೂ ರೋಗಾನೇ ಅನ್ನತಾರಲ್ಲ ಹಾಗೆ ಇದೂ ಮಿತಿ ಮೀರಿದರೆ ರೋಗ. ಆದರೆ ಲಂಪಟತನ ಅಂದರೆ ಮಿತಿ ಮೀರುವುದೇ ಅಂತ ಅರ್ಥ ಅಲ್ಲವಾ? ಮಿತಿ ಅನ್ನುವುದು ಒಬ್ಬೊಬ್ಬ ಮನುಷ್ಯನಿಗೂ ಬೇರೆ ಬೇರೆಯೇ ಅಲ್ಲವಾ? ಕೆಟ್ಟದ್ದರಲ್ಲೂ ಒಂದು ಮಿತಿ ಅಂತ ಇರಬೇಕು ಅನ್ನುವುದು ಸರಿ, ಏನು ಮಾಡಕ್ಕಾಗತ್ತೆ? ಲಂಪಟತನ ಇರದಿದ್ದರೆ ಶೂಟ್ ಮಾಡಿಕೊಂಡು ಸಾಯಬೇಕಾಗತ್ತೆ. ಮರ್ಯಾದಸ್ಥರಾದವರು ಮಾತ್ರ ಬೋರ್ ಆಗುವಂಥ ಬದುಕನ್ನ ಸಹಿಸಿಕೊಂಡು ಬದುಕಬೇಕು ಅನ್ನುವುದು ಸರಿ. ಆದರೂ ನೋಡು…

‘ನಿನ್ನ ನೀನೇ ಶೂಟ್ ಮಾಡಿಕೊಳ್ಳಕ್ಕೆ ಆಗತ್ತಾ?’

‘ಒಂದು ಉಪಕಾರ ಮಾಡತೀಯಾ?’ ಅಸಹ್ಯಪಡುವವನ ಹಾಗೆ ಕೇಳಿದ ಸ್ವಿದ್ರಿಗೈಲೋವ್. ‘ಈ ಸಾವಿನ ವಿಚಾರ ಮಾತಾಡಬೇಡ. ಸ್ವಲ್ಪ ಹೊತ್ತಿಗೆ ಮೊದಲು ಆಡಿದ ಮಾತುಗಳಲ್ಲಿದ್ದ ಜಂಬದ ದನಿ ಮಾಯವಾಗಿತ್ತು, ಅವನ ಮುಖವೂ ಬದಲಾಗಿತ್ತು. ‘ನನ್ನ ಹಣೆಬರಹ. ಏನು ಮಾಡಲಿ? ಸಾವು ಅಂದರೆ ಭಯ. ಸಾವಿನ ಮಾತು ಕೂಡ ಕೇಳಲಾರೆ!
ಗೊತ್ತಲ್ಲ, ನಾನೊಂದು ಥರ ಅನುಭಾವಿ.’

‘ಆಹಾ! ಮಾರ್ಫಿಯ ಪೆಟ್ರೋವಳ ದೆವ್ವ! ಈಗಲೂ ಕಾಣತ್ತಾ?’

‘ಆ ವಿಚಾರ ಎತ್ತಬೇಡ. ಕೊನೆಯ ಪಕ್ಷ ಪೀಟರ್ಸ್‍ಬರ್ಗಿನಲ್ಲಿ.’ ಕಿರಿಕಿರಿಯ ನೋಟ ಬೀರಿದ. ‘ಬೇರೆ ವಿಷಯ ಮಾತಾಡಣ…ಹ್ಞಂ! ಸಮಯ ಇಲ್ಲ! ಬಹಳ ಹೊತ್ತು ಇರಕ್ಕಾಗಲ್ಲ. ನಿನಗೆ ಏನೋ ಹೇಳಬೇಕು.’

‘ಹೆಣ್ಣಿನ ವಿಷಯ?’

‘ಹ್ಞೂಂ, ಹೆಂಗಸು. ಅಕಸ್ಮಾತ್ ಒದಗಿತ್ತು ಸಂದರ್ಭ…ಉಹ್ಞೂಂ. ಅದಲ್ಲ.’

‘ಈ ಲಂಪಟತನದ ಕೊಳಕು, ಅಸಹ್ಯ ನಿನ್ನ ಮನಸಿಗೆ ತಾಕಲ್ಲವಾ? ಇದನ್ನ ನಿಲ್ಲಿಸುವ ಶಕ್ತಿ ಇಲ್ಲವಾ ನಿನಗೆ?’

‘ಓಹೋ, ನೀನೂ ಶಕ್ತಿಯ ಮಾತು ಆಡತೀಯಾ? ಹೆ ಹ್ಹೆ ಹ್ಹೇ! ನನಗೆ ಆಶ್ಚರ್ಯ ಆಗತ್ತೆ. ನೀನು ಹೀಗೇ ಮಾತಾಡತೀಯ ಅಂತ ಮೊದಲೇ ಗೊತ್ತಿದ್ದರೂ. ನೀನು ನನಗೆ ಲಂಪಟತನದ ಬಗ್ಗೆ, ಸೌಂದರ್ಯದ ಬಗ್ಗೆ ಹೇಳತೀಯಾ! ನೀನು—ಶ್ಖಿಲರ್ ವಾದಿ! ನೀನು—ಆದರ್ಶವಾದಿ! ಹೀಗಲ್ಲದೆ ಬೇರೆ ಥರ ಇದ್ದಿದ್ದರೆ ಆಶ್ಚರ್ಯ ಆಗಬೇಕಾಗಿತ್ತು. ಆದರೂ ನಿಜವಾಗಿ ಎದುರಾದಾಗ ಆಶ್ಚರ್ಯ ಆಗತ್ತೆ… ಎಂಥಾ ಕೆಲಸವಾಯಿತು. ಟೈಮಿಲ್ಲವಲ್ಲಾ! ನೀನೇ ಬಹಳ ವಿಚಿತ್ರವಾದ ವಿಷಯ! ಅಂದ ಹಾಗೆ ಶ್ಖಿಲರ್ ನಿನಗೆ ಇಷ್ಟಾನಾ? ನನಗೆ ತುಂಬಾ ಇಷ್ಟ!’

‘ಎಂಥಾ ಜಂಬ!’ ಅಸಹ್ಯಪಡುತ್ತ ಹೇಳಿದ ರಾಸ್ಕೋಲ್ನಿಕೋವ್.

‘ಅಯ್ಯೋ ದೇವರೇ! ಇಲ್ಲಪ್ಪಾ!’ ಸ್ವಿದ್ರಿಗೈಲೋವ್ ಗಹಗಹಿಸಿದ. ‘ಅಲ್ಲ ಅಂತ ನಾನೇನು ವಾದ ಮಾಡಲ್ಲ. ಸ್ವಲ್ಪ ಜಂಬ ಇದ್ದರೇನಂತೆ! ಅದರಿಂದ ಯಾರಿಗೂ ಕೆಟ್ಟದಾಗಲ್ಲ. ಮಾರ್ಫಾ ಜೊತೆಗೆ ಏಳು ವರ್ಷ ಎಸ್ಟೇಟಿನಲ್ಲಿದ್ದೆ. ಈಗ ನಿನ್ನಂಥ ಜಾಣನ ಸಹವಾಸದಲ್ಲಿದ್ದೇನೆ. ಜಾಣ, ಕುತೂಹಲ ಹುಟ್ಟಿಸುವಂಥವನು. ಈ ಪುಟ್ಟ ಹರಟೆ ಸಂತೋಷವಾಯಿತು. ಅಲ್ಲದೆ, ಸ್ವಲ್ಪ ಕುಡಿದಿದೀನಿ ಅರ್ಧ ಗ್ಲಾಸು. ಸ್ವಲ್ಪ ತಲೆಗೇರಿದೆ. ಅಲ್ಲದೆ ಯಾವುದೋ ವಿಚಾರ ಮನಸಿಗೆ ಬಂದುಬಿಟ್ಟಿದೆ. ಅದರ ಬಗ್ಗೆ ಈಗ ಹೇಳಲ್ಲ. ಎಲ್ಲಿಗೆ ಹೋಗತಿದ್ದೀಯ ನೀನು?’ ಸ್ವಿದ್ರಿಗೈಲೋವ್ ತಟಕ್ಕನೆ ಕೇಳಿದ.

ರಾಸ್ಕೋಲ್ನಿಕೋವ್ ಏಳುತ್ತಿದ್ದ. ಉಸಿರು ಕಟ್ಟುತ್ತಿತ್ತು, ಚಡಪಡಿಕೆಯಾಗುತ್ತಿತ್ತು. ಇಲ್ಲಿಗೆ ಬಂದು ತಪ್ಪು ಮಾಡಿದೆ ಅನ್ನಿಸುತ್ತಿತ್ತು. ಸ್ವಿದ್ರಿಗೈಲೋವ್‌ನಷ್ಟು ಪೊಳ್ಳಾದ, ಕ್ಷುಲ್ಲಕ ದುಷ್ಟ ಇಡೀ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ ಅನ್ನುವುದು ಖಾತ್ರಿಯಾಗಿತ್ತು.

‘ಆಹ್ಞಾ! ಕೂತುಕೋ! ಸ್ವಲ್ಪ ಹೊತ್ತು ಇರು,’ ಸ್ವಿದ್ರಿಗೈಲೋವ್ ಯಾಚಿಸಿದ. ‘ಕೊನೇ ಪಕ್ಷ ಟೀ ಹೇಳು. ನನ್ನ ಬಗ್ಗೆ ಜಂಬ ಕೊಚ್ಚಿಕೊಳ್ಳಲ್ಲ. ನಿನಗೇನೋ ಹೇಳತೇನೆ. ಒಬ್ಬ ಹೆಂಗಸು, ನಿನ್ನ ಮಾತಿನಲ್ಲಿ ಹೇಳಬೇಕು ಅಂದರೆ, ಒಬ್ಬ ಹೆಂಗಸು ಹೇಗೆ ನನ್ನ ‘ರಕ್ಷಿಸತಾ ಇದಾಳೆ’ ಅಂತ ಹೇಳತೇನೆ. ಇದು ನಿನ್ನ ಮೊದಲ ಪ್ರಶ್ನೆಗೂ ಉತ್ತರ. ಯಾಕೆಂದರೆ ಆ ಹೆಂಗಸು ನಿನ್ನ ತಂಗಿ. ಹೇಳಲಾ? ಸ್ವಲ್ಪ ಸಮಯ ಕೊಲ್ಲಬಹುದು?’

‘ಹೇಳು, ಹಾಗಾದರೆ. ಆದರೆ, ನೀನು ಮಾತ್ರ….’

‘ಅಯ್ಯೋ! ಚಿಂತೆ ಮಾಡಬೇಡ! ಅಲ್ಲದೆ, ನನ್ನಂಥ ದುಷ್ಟ ಬಡಾಯಿ ಕೋರನಲ್ಲೂ ಅವದೋತ್ಯ ರೊಮನೋವ್ನ ಗೌರವವಲ್ಲದೆ ಬೇರೆ ಯಾವ ಭಾವವನ್ನೂ ಹುಟ್ಟಿಸುವುದಿಲ್ಲ.’