”ಭಗವಂತನ ಸೃಷ್ಟಿಯಲಿ ಅತ್ಯಂತ ಅಪೂರ್ವವಾದದ್ದು ಈ ಕಿನ್ನರಿಗಳದ್ದೇ ಇರಬೇಕು. ಕಿನ್ನರಿಯ ದೇಹದಲ್ಲಿ ಗಂಡಿನ ಕಸುವು, ಹೆಣ್ಣಿನ ಲಾಲಿತ್ಯ ಎರಡೂ ಮೇಳೈಸಿ ಅದು ಸೃಷ್ಟಿಯ ಸೌಂದರ್ಯಕ್ಕೆ ಎಸೆದ ಸವಾಲಾಗಿತ್ತು. ಅದಕ್ಕೇ ಇರಬೇಕು, ಜಗತ್ತು ಅವರ ಪಾಲಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದು! ನಮ್ಮ ಎದುರಾಳಿಯನ್ನು ದೈಹಿಕವಾಗಿ ಸೋಲಿಸುವುದು ಕಷ್ಟವೆನಿಸಿದರೆ ಮೊದಲು ಆತನ ಮನಸನ್ನು ಒಡೆದುಬಿಡಬೇಕು. ಅವನ ಆತ್ಮವನ್ನು ತಾಕಬೇಕು, ಕಲುಷಿತಗೊಳಿಸಬೇಕು; ಹಾಗಾಗಿಬಿಟ್ಟರೆ ಬೇರೇನೂ ಮಾಡದೆಯೇ ಅವನು ಸೋಲುತ್ತಾನೆ.”
ಶಾಂತಿ. ಕೆ.ಅಪ್ಪಣ್ಣ ಬರೆದ ಹೊಸದೊಂದು ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ.

 

‘ತೆಯ್ಯು… ತಾಹಿ , ತೆಯ್ಯು… ತಾಹಿ’  ನಾನು ಹೊರಗೆ ವರಾಂಡದಲ್ಲಿ ಕುಳಿತಿದ್ದಾಗ ಒಳಗೆ ಅವಳ ಕಾಲ್ಗೆಜ್ಜೆ ಸದ್ದು,ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದ ಅವಳ ತಾಳಬದ್ಧ ದನಿ, ಕಿವಿಯನ್ನು ತಾಕುತ್ತಿತ್ತು. ಮುಚ್ಚಿದ್ದ ಬಾಗಿಲಿಗೆ ಅಂಟಿಸಿದ್ದ ಅವಳದೇ ಚಿತ್ರ, ಎಷ್ಟು ಭಾವುಕ ಭಂಗಿ, ಒಂದು ಕೈ ಮೇಲೆತ್ತಿ ಗಗನಕ್ಕೆ ಚಾಚಿ, ಏನನ್ನೋ ಕೇಳುತ್ತಿದೆ, ಹೇಳುತ್ತಿದೆ, ಮತ್ತೊಂದು ಕೈ ಅದಕೆ ತುಸು ಕೆಳಗೆ ಅದೇ ಆಸೆಗೆ ಒತ್ತಾಸೆಯಾಗಿ ನಿಂತ ಹಾಗೆ ಇದೆ. ಕಾಲೊಂದನು ಮಡಚಿ ಭಾವಕ್ಕೆ ತೀವ್ರತೆ ತುಂಬಿದೆ, ಮತ್ತೊಂದು ಕಾಲು ತೀರ ಹೆಬ್ಬೆರಳಿನಾಸರೆಯಲ್ಲಿಯೇ ನಿಂತು ಇಡೀ ಸನ್ನಿವೇಶಕ್ಕೊಂದು ವೇಗ ತಂದಿದೆ. ಅವಳ ಕಣ್ಣುಗಳು ಮುಗಿಲತ್ತ ನೆಟ್ಟು ಏನನ್ನೋ ಧೇನಿಸುತ್ತಿರುವಂತೆ ಕಾಣುತ್ತಿದೆ. ಅವಳನ್ನು ಹಾಗೆ ನೋಡುವಾಗ ಅವಳ ಹೃದಯದೊಳಗೆ ಕಡಲೊಂದನ್ನೇ ಹುಗಿತಿಟ್ಟುಕೊಂಡಿದ್ದಾಳೋ ಏನೋ ಅನಿಸುತ್ತದೆ. ಆಗಸದ ನೀಲಿ ಕರಗಿ ಅವಳ ಕೈಯೊಳಗೆ ಇಳಿದು ಬಿಡುವುದೋ ಎಂದೆನಿಸುತ್ತದೆ. ಕಾಲಡಿಯ ಮಣ್ಣು ಕೊನರಿ ಹೂವಾಗಿಬಿಡುವುದೋ ಎಂದೆನಿಸುತ್ತದೆ, ಅವಳ ಸೊಂಟದ ತಿರುವಿನಲಿ, ಎದೆಯ ಏರಿಳಿತದಲಿ ಬೀಸುಗಾಳಿ ಕೂಡ ತುಸು ನಿಧಾನಿಸಿ ತಂಗಿ ಹೋಗುವುದೋ ಎಂದೆನಿಸುತ್ತದೆ.
ಅನಿಸುತ್ತದೆ ಅಷ್ಟೇ.

ನಿಜದಲ್ಲಿ ಅವಳನ್ನು ಬೆಂಕಿಯ ಕೆನ್ನಾಲಗೆಗಳು ನೆಕ್ಕಿ ಹೋಗುತ್ತಿದ್ದವು. ಹೆಜ್ಜೆಯೂರಿದಲೆಲ್ಲಾ ಕೂರಂಬುಗಳು ಮೊಳೆತು ಅವಳ ಕಾಲಿನ ರಕ್ತದಲಿ ಮೀಯುತ್ತಿದ್ದವು. ಅವಳು ತೀರದ ದಾಹವೊಂದನು ಗಂಟಲಿನಲಿ ಸಿಲುಕಿಸಿಕೊಂಡು ಅನುಕ್ಷಣವೂ ಅದರೊಂದಿಗೆ ಹೋರಾಡುತ್ತಿದ್ದಳು. ಹಗಲಿರುಳೆನ್ನದೆ ನಿತ್ಯವೂ ನೆತ್ತಿ ತೋಯಿಸುವ ಬಿಸಿಲಿನ ಝಳದಲ್ಲಿ ಆಕ್ಷೇಪವನೇ ಎತ್ತದೆ ನಿಂತ ಹೂವಾಗಿದ್ದಳು ಅವಳು. ಅವಳು ಅಭಿರಾಮಿ. ಅವಳು ಅರವಾಣಿ.

ಬಹುಶಃ ಈಗ ಬಾಗಿಲಿಗೆ ಅಂಟಿಸಿರುವ ಚಿತ್ರ ಇತ್ತೀಚಿನದಿರಬೇಕು, ಹೆಚ್ಚೇನೂ ಬದಲಾಗಿಲ್ಲ, ಹಾಗೆಲ್ಲ ಕಾಲದ ಧಾಳಿಗೆ ಸುಲಭದಲಿ ಶರಣಾಗುವ ನಾಜೂಕಿನ ಚೆಲುವಲ್ಲ ಅವಳದ್ದು. ಸರಿದು ಹೋದ ಈ ಮೂರೂ ಚಿಲ್ಲರೆ ವರ್ಷಗಳಲ್ಲಿ ಅಭಿರಾಮಿಯನ್ನು ಒಂದು ದಿನವಾದರೂ ಮರೆತಿರಲಿಕ್ಕಿಲ್ಲ ನಾನು, ನನ್ನ ನೆನಪಿನಲ್ಲಿ ಉಳಿದ ಅದೇ ಅಭಿರಾಮಿ ಅಷ್ಟೂ ಚೆಲುವಿನೊಂದಿಗೆ ಅರಳಿ ನಿಂತಂತೆ ಇತ್ತು. ಅಭಿರಾಮಿಯನ್ನು ನಾನು ಮೊದಲು ಭೇಟಿ ಮಾಡಿದ್ದು ನನ್ನ ಪತ್ರಿಕೆಯ ಮೂಲಕ. ಅವಳ ಕುರಿತು ಒಂದು ಸ್ಟೋರಿ ಮಾಡಬೇಕಿತ್ತು. ಬಹುಶಃ ಅವೊತ್ತು ನಿವೇದ ಡ್ಯೂಟಿಗೆ ಬಂದಿರುತ್ತಿದ್ದರೆ ನಾನಂತೂ ಅಭಿರಾಮಿಯನ್ನು ಯಾವ ಕಾಲಕೂ ಭೇಟಿ ಮಾಡಿರಲಿಕ್ಕಿಲ್ಲವೇನೋ ಆದರೆ ಕೆಲವೊಂದು ಸಂಗತಿಗಳು ನಮಗೆಂದೇ ಯಾರೋ ಮೊದಲೇ ನಿಗದಿ ಪಡಿಸಿಟ್ಟಿರುತ್ತಾರೋ ಎಂಬಂತೆ ಹೂವು ಬಿರಿದಷ್ಟೇ ಸಹಜವಾಗಿ, ಸರಳವಾಗಿ ನಮ್ಮನ್ನು ಅಲ್ಲಿಗೆ ತಲುಪಿಸಿಬಿಡುತ್ತವೆ. ಅಗಮ್ಯ ಗಮ್ಯಕೆ. ಇದೂ ಹಾಗೆಯೇ! ಇಲ್ಲವಾದರೆ ಯಾವತ್ತೂ ಕೈಗೆತ್ತಿಕೊಂಡ ಅಸೈನ್ಮೆಂಟ್ ಪಕ್ಕಾ ಮಾಡಿ ಮುಗಿಸುವ ನಿವೇದ ಕಡೇ ಘಳಿಗೆಯಲಿ ಕೆಲಸಕೆ ಬಾರದೆ ಯಾಕೆ ಉಳಿಯಬೇಕು? ಎಂದೂ ಆಫೀಸಿಗೆ ಟೈಮಿಗೆ ಹೋಗದ ನಾನು ಅಂದೇಕೆ ಟೈಮಿಗೆ ಮೊದಲೇ ಹೋಗಬೇಕು? ಅಷ್ಟು ಜನರಿರುವ ಆಫೀಸಿನಲಿ ಬಾಸ್ ನನಗೇ ಯಾಕೆ ಫೋನ್ ಹಚ್ಚಿ ಈ ಅಸೈನ್ಮೆಂಟ್ ಮುಗಿಸಿಕೊಡೆಂದು ಕೇಳಬೇಕು. ಅವೊತ್ತು ನನಗೂ ಬೇಕಷ್ಟು ಕೆಲಸಗಳಿದ್ದವು ಆದರೂ ನಾನು ನಿವೇದಳ ಕೆಲಸ ಎತ್ತಿಕೊಂಡು ಅಭಿರಾಮಿಯನ್ನು ಭೇಟಿ ಮಾಡಲು ಯಾಕೆ ಹೋಗಬೇಕು? ಹೌದು ಅವೊತ್ತು ಬಾಸ್ ಕೆಲಸ ಹೇಳಿದಾಗ ನಾನು ಮರುಮಾತಾಡದೆ ಒಪ್ಪಿಕೊಂಡು ಹೊರಟಿದ್ದೆ. ಅಭಿರಾಮಿಯೆಂಬ ನೃತ್ಯಗಾತಿಯನು ಸಂದರ್ಶಿಸಲು.

ಮರೀನಾ ಕ್ಯಾಂಪ್, ದೊಡ್ಡದಾದ ಬೋರ್ಡ್ ಹೊತ್ತು ನಿಂತ ಆ ಕ್ಯಾಂಪಸ್ ಸ್ಲಮ್ ಕ್ಲಿಯರೆನ್ಸ್ ಬೋನವರು ಕಟ್ಟಿದ್ದಾಗಿತ್ತು. ಕಡಲತಡಿಗೆ ಮುಖ ಮಾಡಿ ನಿಂತ ಅನೇಕ ಮನೆಗಳ ಅಡುಕುಮಾಡಿಯ ಆ ಕ್ಯಾಂಪಸ್ಸಿನೊಳಗೆ ಕಾಲಿಟ್ಟಾಗ ಎಣ್ಣೆ ಕಾಣದ ಮುಖದ ಅನೇಕ ಸಣ್ಣ ಮಕ್ಕಳು ಬಂದು ಮುತ್ತಿಕೊಂಡಿದ್ದವು. ಯಾರು ಬೇಕು ನಿಮಗೆ? ಯಾಕಿಲ್ಲಿ ಬಂದಿದೀರ, ಏನು ಬೇಕು? ಮೀನು ಬೇಕಾ? ಫ್ರೆಶ್ಶಿದೆ. ಈಗ ಹಿಡಕೊಂಡು ಬಂದದ್ದಷ್ಟೇ, ಒಂದ್ ಹತ್ರುಪಾಯಿ ಕೊಡಿ ಸಾಕು. ಒಳ್ಳೆ ಒಳ್ಳೆ ಕಡೆ ಕೊಡಿಸ್ತೀನಿ. ಇಂಥ ಹಲವು ಒಪ್ಪಂದಗಳನು ಮುಂದಿಡುತ್ತ ಸುತ್ತುವರಿದ ಮಕ್ಕಳನು ‘ಅಭಿರಾಮಿ ಮೇಡಂ ಮನೆ ಎಲ್ಲಿ?’ಎಂದು ಕೇಳಿದರೆ ಅವು ಹೊಟ್ಟೆ ಹಿಡಿದುಕೊಂಡು ನಗತೊಡಗಿದ್ದವು. ಒಬ್ಬ ಹುಡುಗನಂತೂ ವಿಚಿತ್ರ ದನಿಯಲಿ ಕೇಕೆ ಹಾಕಿ, ಮೇಡಮ್ಮಾ??? ಎಂದು ಉರುಳುರುಳಿ ನಕ್ಕಿದ್ದ. ಅವನ ಈ ಚರ್ಯೆ ಉಳಿದ ಹುಡುಗರಲಿ ಮತ್ತಷ್ಟು ನಗೆ ಉಕ್ಕಿಸಿ, ಅವು ನಗುತ್ತ ಚದುರಿ ಹೋಗಿದ್ದವು. ಒಬ್ಬ ಹುಡುಗ ಮಾತ್ರ ಗುಂಪಿನಿಂದ ಮೆಲ್ಲಗೆ ಕಳಚಿಕೊಂಡು ಹೊರಬಂದು “ಯಾಕ್ಸಾರ್ ನೋಡ್ಬೇಕು? ಸರಿ ಹಣ ಕೊಡಿ ತೋರಿಸ್ತೀನಿ” ಎಂದು ಪಿಸುಗುಟ್ಟಿದ್ದ. ಈ ರೀತಿಯ ಸನ್ನಿವೇಶವನು ಊಹಿಸಿಕೊಂಡಿರದೇ ಇದ್ದ ನನಗೆ ಈ ಅಭಿರಾಮಿ ಯಾರಾಗಿರಬಹುದು? ಒಂದು ವೇಳೆ ತಪ್ಪಾದ ಅಡ್ರೆಸ್ಸಿಗೆ ಬಂದುಬಿಟ್ಟೆನೋ ಎಂದು ಒಳಗೊಳಗೆ ಸಣ್ಣಗೆ ದಿಗಿಲಾಗಿತ್ತು. ಇನ್ನೇನು ಬಾಸ್ ಗೆ ಫೋನ್ ಹಚ್ಚಿ ವಿಷಯ ಕನ್ಫರ್ಮ್ ಮಾಡ್ಕೊಳ್ಳುವಾಂತ ಯೋಚಿಸುವಷ್ಟರಲಿ ಪಕ್ಕದಲೇ ಕುಳಿತು ಬೀಡಿ ಸೇದುತ್ತ ನಮ್ಮ ತಮಾಷೆ ನೋಡುತ್ತ ಕುಳಿತಿದ್ದ ವೃದ್ದನೊಬ್ಬ “ಏನಪ್ಪ, ಯಾರು ಬೇಕಿತ್ತು, ಏನು ನಿನ್ನ ಸಮಸ್ಯೆ” ಎಂದು ಕುಳಿತಲ್ಲಿಂದಲೇ ಕೇಳಿದ್ದ. ಅವನ ದನಿ, ಮುಖ ಎರಡೂ ಒರಟಾಗಿತ್ತು. “ಅಯ್ಯ ಅಭಿರಾಮಿ ಅನ್ನೋರನ್ನ ನೋಡಬೇಕಿತ್ತು. ಅವರ ಮನೆ ಎಲ್ಲಿದೆ? ಬಿ ಬ್ಲಾಕ್ ಅಂತ ಹಾಕಿದಾರೆ ಡೋರ್ ನಂ ಹಾಕಿಲ್ಲ,” ನಾನು ಮೆತ್ತಗೆ ಕೇಳಿದ್ದೆ. “ಯಾಕೆ? ಯಾಕೆ ನೋಡ್ಬೇಕು ನೀನು?” ಅವನ ದನಿ ಈಗ ಮೊದಲಿಗಿಂತ ಒರಟಾಗಿತ್ತು. “ಅಯ್ಯ ನಾನು ಕಲೈವಾಣಿ ಪೇಪರಿನಿಂದ ಬಂದಿದೀನಿ, ಅವರ ಮನೆ ಎಲ್ಲಿ ಹೇಳಿ, ನಾನು ಮಾತಾಡ್ಕೊತ್ತೀನಿ”. ನಾನೂ ಈ ಬಾರಿ ತುಸು ಒರಟಾಗಿಯೇ ಹೇಳಿದ್ದೆ. “ಎಂಥದೋ ಮಾಡ್ಕೊಂಡು ಹೋಗಿ, ಮೊದಲೇ ಇಂಥವಕ್ಕೆಲ್ಲ ಕಾಲು ನೆಲದ ಮೇಲಿರೋದಿಲ್ಲ, ನೀವು ಬಂದು ಹಾರಾಡೋಕೆ ರೆಕ್ಕೆನೇ ಕಟ್ಟಿಕೊಟ್ಟು ಬಿಡಿ, ನಮ್ಮ ತಲೆ ಮೇಲೆ ಹಾರಾಡಲಿ, ಎಲ್ಲ ನೋಡಬೇಕಾಗಿರೋದು ನನ್ನ ಕರ್ಮ. ಹೋಗು, ಮೂರನೇ ಫ್ಲೋರು, ಮನೆ ನಂ. ಆರು ಹೋಗಿ ನೋಡೋಗು” ಅಂದಿದ್ದ. ಹಾಗೆ ಹೇಳುವಾಗ ಅವನ ಮುಖದಲ್ಲಿ ಕಾಣುತ್ತಿದ್ದ ಹೇವರಿಕೆಯ ತಾಪ ನನ್ನ ಮುಖಕ್ಕೆ ರಪ್ಪನೆ ರಾಚಿತ್ತು. ಸುಮ್ಮನೆ ಇದರಲ್ಲಿ ಸಿಲುಕಿದೆನಲ್ಲ, ಹಾಳಾದವಳು ನಿವೇದ, ಯಾವಾಗಲೂ ಹೀಗೇ ಏನಾದರೊಂದು ವಿಶೇಷವಾದ್ದನ್ನೇ ಆರಿಸಿಕೊಳ್ತಾಳೆ, ಆರಿಸಿಕೊಂಡೋಳು ತಾನೇ ಮಾಡಿ ಮುಗಿಸೋದು ತಾನೆ? ನನ್ನ ತಲೆಗೆ ತಂದಿಟ್ಟಿದ್ದಾಳೆ.” ಅವಳ ಮೇಲೆ ಒಳಗೊಳಗೇ ಸಿಡುಕುತ್ತ ಹೋಗಿ ಮೆಟ್ಟಿಲೇರಿದವನಿಗೆ ಎರಡನೇ ಫ್ಲೋರು ಏರುವಾಗಲೇ ಸುಸ್ತು ಹೊಡೆದಿತ್ತು. ಇರುಕಾದ ಕಡಿದಾದ ಕಿರಿಯ ಮೆಟ್ಟಿಲುಗಳು. ಗುಡಿಸದೆ ತೊಳೆಯದೆ ಗಲೀಜಾಗಿದ್ದವು. ಒಂದೊಂದು ಮನೆಯನ್ನು ಹಾದುಹೋಗುವಾಗಲೂ ಅದರೊಳಗಿನ ಟಿವಿಯ ಸದ್ದು ಎದುರು ಮನೆಯಲ್ಲಿ ಧ್ವನಿಸುತ್ತಿರುವಂತೆ ಒಟ್ಟು ಎರಡೂ ಕಡೆಯೂ ವಿಪರೀತ ಗದ್ದಲ. ನನ್ನನ್ನು ಸುತ್ತುವರಿದಿದ್ದ ಮಕ್ಕಳ ಗುಂಪು ಈಗ ಮತ್ತೆ ಕೇಕೆ ಹಾಕುತ್ತ ಮೆಟ್ಟಿಲಿನ ಮೇಲೆ ಓಡಿ ಹಿಡಿಯಾಟವಾಡುತ್ತಿದ್ದವು. ಮನೆಯ ಮುಂದಿನ ಕಿರಿದಾದ ಖಾಲಿ ಸ್ಥಳದಲ್ಲಿ ಬಟ್ಟೆ ಒಣಹಾಕಿ ಅದೊಂದು ಬಗೆಯ ಮುಗ್ಗು ವಾಸನೆ ರಾಚುತ್ತಿತ್ತು. ಅಲ್ಲಿದ್ದ ಬಹುತೇಕರ ಮನೆಗೆ ಮೀನು ಹಿಡಿಯುವುದೊಂದು ಮುಖ್ಯ ಕಸುಬಾದ ಕಾರಣ, ಮೀನಿನ ವಾಸನೆ ಎಲ್ಲವನ್ನೂ ಹೀರಿಕೊಳ್ಳುತ್ತ ಬಿರಿಯುತ್ತಿತ್ತು. ನೊಣಗಳು ಜೊಂಪೆಜೊಂಪೆಯಾಗಿ ಹಾರಾಡುತ್ತ ತಾರಾಡುತ್ತ ಬೆಳಗಿನ ಬಿಸಿಲಿಗೆ ಹೊಳೆಯುತ್ತಿದ್ದವು. ಅದೆಲ್ಲದರ ನಡುವೆ ಎಲ್ಲರ ಮನೆಯೊಳಗೂ ಒಂದು ನಗು, ಅಬ್ಬರ, ಜೋರು ಮಾತುಕಥೆ, ಹಾಡು ಕೇಕೆ! ಅವರು ಹೃದಯವನು ಒಳಗೆಲ್ಲೋ ಬೈತಿಟ್ಟಿರಲಿಲ್ಲ, ಬದಲಿಗೆ ಬಾಯಿಗೆ ಕಟ್ಟಿಕೊಂಡಿದ್ದರು. ಯಾವೊಂದು ನಾಜೂಕಿನ ಮುಸುಕನ್ನೂ ಹೊಚ್ಚದೆ, ಬಿಸಿಲು ಮಳೆ ಚಳಿಗೆ ಇರುವಂತೆಯೇ ಒಡ್ಡಿಕೊಂಡಿದ್ದರು, ಥೇಟ್ ಕಡಲಿನಂತೆ. ಅದರ ಮೊರೆತ ಇಳಿತ ಭರತ ಎಲ್ಲವೂ ತನ್ನಿಷ್ಟದಂತೆ. ಮೊದಲಿಗೆ ಬೇಸರ ಹುಟ್ಟಿಸಿದ್ದ ಅದೇ ಸ್ಥಳ ಈಗ ಮೆಲ್ಲಗೆ ಕೌತುಕ ಹುಟ್ಟಿಸುತ್ತ, ಅವರ ಅಪಾರ ಜೀವಂತಿಕೆ ಹೃದಯಕ್ಕೆ ಅಪ್ಯಾಯಮಾನವೆನಿಸತೊಡಗಿತ್ತು. ಎಲ್ಲವನೂ ಕಣ್ಣಮೊನೆಯಲ್ಲೇ ತೂಗುತ್ತ ಮೆಟ್ಟಿಲೇರಿ ಮೂರನೇ ಪ್ಲೋರ್ ತಲುಪಿದಾಗ ನನ್ನ ಹಣೆಯ ಮೇಲೆ ಸಣ್ಣಗೆ ಬೆವರಾಡಿ ಸುಸ್ತು ಕಾಡಿತ್ತು. ಹೇಗೂ ಬಂದಿದ್ದಾಗಿತ್ತು. ಆದಷ್ಟು ಬೇಗ ಕೆಲಸ ಮುಗಿಸಿ ಹೊರಬಿದ್ದರೆ ಸಾಕೆಂದುಕೊಂಡು ಬಾಗಿಲು ಬಡಿದರೆ, ಬಾಗಿಲು ತೆರೆದದ್ದೊಬ್ಬ ದೇವತೆ.

ಅವಳ ಕುರಿತು ಒಂದು ಸ್ಟೋರಿ ಮಾಡಬೇಕಿತ್ತು. ಬಹುಶಃ ಅವೊತ್ತು ನಿವೇದ ಡ್ಯೂಟಿಗೆ ಬಂದಿರುತ್ತಿದ್ದರೆ ನಾನಂತೂ ಅಭಿರಾಮಿಯನ್ನು ಯಾವ ಕಾಲಕೂ ಭೇಟಿ ಮಾಡಿರಲಿಕ್ಕಿಲ್ಲವೇನೋ ಆದರೆ ಕೆಲವೊಂದು ಸಂಗತಿಗಳು ನಮಗೆಂದೇ ಯಾರೋ ಮೊದಲೇ ನಿಗದಿ ಪಡಿಸಿಟ್ಟಿರುತ್ತಾರೋ ಎಂಬಂತೆ ಹೂವು ಬಿರಿದಷ್ಟೇ ಸಹಜವಾಗಿ, ಸರಳವಾಗಿ ನಮ್ಮನ್ನು ಅಲ್ಲಿಗೆ ತಲುಪಿಸಿಬಿಡುತ್ತವೆ. ಅಗಮ್ಯ ಗಮ್ಯಕೆ. ಇದೂ ಹಾಗೆಯೇ! ಇಲ್ಲವಾದರೆ ಯಾವತ್ತೂ ಕೈಗೆತ್ತಿಕೊಂಡ ಅಸೈನ್ಮೆಂಟ್ ಪಕ್ಕಾ ಮಾಡಿ ಮುಗಿಸುವ ನಿವೇದ ಕಡೇ ಘಳಿಗೆಯಲಿ ಕೆಲಸಕೆ ಬಾರದೆ ಯಾಕೆ ಉಳಿಯಬೇಕು? ಎಂದೂ ಆಫೀಸಿಗೆ ಟೈಮಿಗೆ ಹೋಗದ ನಾನು ಅಂದೇಕೆ ಟೈಮಿಗೆ ಮೊದಲೇ ಹೋಗಬೇಕು? ಅಷ್ಟು ಜನರಿರುವ ಆಫೀಸಿನಲಿ ಬಾಸ್ ನನಗೇ ಯಾಕೆ ಫೋನ್ ಹಚ್ಚಿ ಈ ಅಸೈನ್ಮೆಂಟ್ ಮುಗಿಸಿಕೊಡೆಂದು ಕೇಳಬೇಕು. ಅವೊತ್ತು ನನಗೂ ಬೇಕಷ್ಟು ಕೆಲಸಗಳಿದ್ದವು ಆದರೂ ನಾನು ನಿವೇದಳ ಕೆಲಸ ಎತ್ತಿಕೊಂಡು ಅಭಿರಾಮಿಯನ್ನು ಭೇಟಿ ಮಾಡಲು ಯಾಕೆ ಹೋಗಬೇಕು? ಹೌದು ಅವೊತ್ತು ಬಾಸ್ ಕೆಲಸ ಹೇಳಿದಾಗ ನಾನು ಮರುಮಾತಾಡದೆ ಒಪ್ಪಿಕೊಂಡು ಹೊರಟಿದ್ದೆ.

ಅವಳ ದುಂಬಿಗಳಂಥ ಕಪ್ಪು ಕಂಗಳು ನನ್ನನ್ನು ಸುಳಿಯಂತೆ ಸರಕ್ಕನೆ ಸೆಳೆದು ಬಂಧಿಯಾಗಿಸಿದವು. ನಾನೊಂದು ಚೆಲುವಿನ ಕಡಲೊಳಗೆ ಮುಳುಗುತ್ತಿರುವಂತೆ ಭ್ರಾಂತ ನಗುವಿನೊಂದಿಗೆ ಅವಳ ಮನೆಯನ್ನು ಹೊಕ್ಕೆ. ಬಹುಶಃ ಅದಾಗಲೇ ನಿವೇದ ಫೋನಿಸಿ ನಾನು ಬರುತ್ತಿರುವ ವಿಚಾರ ಹೇಳಿದ್ದಿರಬೇಕು. ಅವಳು ಯಾವ ಪ್ರಶ್ನೆಯನ್ನೂ ಹಾಕದೆ ವಿಶಾಲ ನಗುವಿನೊಂದಿಗೆ ನನ್ನನ್ನು ಬರಮಾಡಿಕೊಂಡಿದ್ದಳು. ಅವಳ ಸಿಂಗಲ್ ಬೆಡ್ರೂಮಿನ ಆ ಸಣ್ಣ ಫ್ಲ್ಯಾಟು ಅವಳ ಹಾಗೆಯೇ ತಿದ್ದಿ ತೀಡಿದಂತೆ ಅಚ್ಚುಕಟ್ಟಾಗಿತ್ತು. ಕಡಲಿಗೆ ತೆರೆದುಕೊಂಡ ಅವಳ ಮನೆಯ ಕಿಟಕಿಗಳಿಂದ ಕಡಲಮೇಲಿನ ಗಾಳಿ ಬಿಸಿಲ ಕೋಲುಗಳೊಂದಿಗೆ ಧಾರಾಳವಾಗಿ ಒಳನುಗ್ಗುತ್ತಿತ್ತು. ಕಿಟಕಿಯಿಂದ ಸ್ವಲ್ಪ ಮುಂದೆ ಬಿಸಿಲು ಬೀಳುವ ಸ್ಥಳದಲ್ಲಿ ಸಣ್ಣದೊಂದು ತುಳಸಿಯ ಬೃಂದಾವನ ಇಟ್ಟು, ಮಲ್ಲಿಗೆಯ ದಂಡೆಯಿಂದ ಸಿಂಗರಿಸಿ, ಅದರ ಗೂಡಿನಲಿ ದೀಪ ಮುಟ್ಟಿಸಿ, ಅಗರಬತ್ತಿ ಹಚ್ಚಿದ್ದಳು. ಬೃಂದಾವನದ ಮುಂದೆ ನಾಲ್ಕೆಳೆಯ ರಂಗೋಲಿ. ರಂಗವಲ್ಲಿಯ ಅಳತೆ ಮೀರದ ಎಳೆಗಳು ಅವಳ ಯೋಚನೆಯ ನಿಖರತೆಗೆ ಸಾಕ್ಷಿಯಂತಿದ್ದವು. ಅದಷ್ಟೇ ಅಲ್ಲ, ಅವಳ ಮನೆಯ ಅಚ್ಚುಕಟ್ಟುತನ, ಹೊರಗಿನ ಅಷ್ಟೂ ಗದ್ದಲಗಳನು ದಾಟಿಯೂ ಉಳಿಸಿಕೊಂಡಿರುವ ಮೌನ, ಮನೆಯ ಗೋಡೆಗಳಲಿ ತೂಗಿದ್ದ ಅಪರೂಪದ ಪೇಂಟಿಂಗ್ ಗಳು… ಗೋಡೆಯ ಬದಿಯಲ್ಲಿ ಸಣ್ಣ ಟೇಬಲಿನ ಮೇಲೆ ಜೋಡಿಸಿದ್ದ ನಟರಾಜ ಪ್ರತಿಮೆ, ಅದರ ಬದಿಗೆ ಪೇರಿಸಿಟ್ಟ ಕಾಲ್ಗೆಜ್ಜೆ, ತಾಳ, ತಬಲ, ಕೊಳಲು, ಒಂದಷ್ಟು ಪುಸ್ತಕಗಳು, ಧ್ಯಾನಸ್ಥ ಬುದ್ಧನ ಮಣ್ಣಿನ ಪ್ರತಿಮೆ.. ಎಲ್ಲವೂ ಅವಳ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಿದ್ದವು. ಅವಳ ಪರಿಚಯವಾಗಿದ್ದು ಹಾಗೆ.

“ನಿಮ್ಮ ಪರಿಚಯ ಹೇಳಿಕೊಳ್ಳಿ, ಬಾಲ್ಯ ಬದುಕು…” ನಾನು ಮಾತು ಶುರು ಮಾಡಿದ್ದೆ. ಹೆಚ್ಚೇನೂ ಹಿಂಜರಿಯದೆ, ದೀರ್ಘಾಲೋಚನೆಯಲ್ಲಿ ಬೀಳದೆ ಏರುಪೇರುಗಳಿಲ್ಲದ ಮೆಲು ದನಿಯಲ್ಲಿ ಅಭಿರಾಮಿ ಮಾತು ಶುರು ಮಾಡಿದ್ದಳು. “ನಮ್ಮಪ್ಪ ಅಮ್ಮನಿಗೆ ನಾನೊಂದೇ ಮಗು ಸರ್. ನಾನು ಹುಟ್ಟಿ ಕೆಲವು ವರ್ಷಗಳಲ್ಲಿ ಅಪ್ಪ ಕಡಲಿಗೆ ಹೋದವನು ಮರಳಿ ಬಾರದೇ ಹೋಗಿದ್ದ. ಇನ್ನು ಅಮ್ಮ, ನಾನು. ಅಪ್ಪ ಇಲ್ಲದೆ ನಾನು ಎಲ್ಲ ಅಪ್ಪನಿಲ್ಲದ ಮಕ್ಕಳ ಹಾಗೆ ಕಷ್ಟ ಪಟ್ಟೆ. ಅದು ದೊಡ್ಡ ವಿಷಯವಲ್ಲ; ಯಾಕೆಂದರೆ ನನ್ನ ಬದುಕಿನ ಮೊದಲ ಹದಿನೈದು ವರ್ಷಗಳಲ್ಲಿ ನಾನು ಪಡೆದುಕೊಂಡಿದ್ದು ಅಪಾರ. ಮುಖ್ಯವಾಗಿ ಅಮ್ಮನ ಅಕ್ಕರೆ ಮತ್ತು ಪ್ರೀತಿ. ಅವಳಿಗೆ ಅದಿನ್ನೇನೋ ತನ್ನ ಮಗು ಎಲ್ಲವನ್ನೂ ಕಲಿಯಬೇಕು ಅನ್ನುವ ಆಸೆ. ಅಪ್ಪ ಇಲ್ಲದ ಮಗು, ಮುಂದೆ ಇದರಲ್ಲಿ ಯಾವುದಾದರೂ ಒಂದು ಉಪಯೋಗಕ್ಕೆ ಬರುತ್ತೆ ಅಂದುಕೊಂಡಳೋ, ಇಲ್ಲ, ಅವಳು ಬಹುಬೇಗ ನನ್ನನ್ನು ಬಿಟ್ಟುಹೋಗಿಬಿಡುತ್ತಾಳೆಂದು ಗಣಿಸಿ ಇಟ್ಟಿದ್ದಳೋ… ಅವಳಿಗೇ ಗೊತ್ತು. ಅಂತೂ ಅವಳು ಸಣ್ಣದಿರುವಾಗಲೇ ಅಮ್ಮ ನನ್ನನ್ನು ವೆಸ್ಟ್ರನ್ ಡ್ಯಾನ್ಸ್ ಕಲಿಯಲು ಕಳಿಸಿದ್ದಳು. ಆದರೆ ನಂಗೆ ಭರತ ನಾಟ್ಯವೇ ಇಷ್ಟವಾಗ್ತಿತ್ತು. ಅಮ್ಮನ ಬಳಿ ಹೇಳದೆ, ವೆಸ್ಟ್ರನ್ ಬದಲು ಭರತನಾಟ್ಯ ಕಲಿತೆ. ಮನೆಯ ಪಕ್ಕದಲ್ಲೆ ಚರ್ಚ್ ಇತ್ತು. ಅದರ ವಿಶಾಲ ಅಂಗಳದಲಿ ಆಡುವುದೊಂದು ಖುಷಿಯಿತ್ತು, ಅಲ್ಲಿ ಹಾಡುತ್ತಿದ್ದ ಏಸುವಿನ ಹಾಡುಗಳ ಮೇಲೆ ಪ್ರೀತಿಯಿತ್ತು. ಹಾಗೇ ಹಾಡ್ತಾ ಹಾಡ್ತಾ ರಾಗ ಕೂಡಿತು. ಪಕ್ಕದ ಮನೆಯ ಅಣ್ಣ ಪೇಂಟಿಂಗ್ ಮಾಡುತ್ತಿದ್ದರು. ಕಾಂಪೋಂಡ್ ವಾಲ್ ಗಳ ಮೇಲೆ ಚಿತ್ರ ಬರೆಯೋದು, ಬೋರ್ಡ್ ಬರೆಯೋದು, ನಾಟಕದ ಪರದೆ ಬರೆಯುವುದು ಹೀಗೆ ಏನೇನೋ ಮಾಡೋರು. ಅವರ ಜೊತೆ ಸೇರಿ ನಾನೂ ಪೇಂಟಿಂಗ್ ಕಲಿತೆ. ಅವರ ಬಳಿ ಆಟೋ ಇತ್ತು, ಹಾಗಾಗಿ ಆಟೋ ಓಡಿಸಲು ಕಲಿತೆ. ನಾನು ಕಲಿಯುತ್ತಿದ್ದೆನೋ ಇಲ್ಲವೋ ಅಮ್ಮ ಯಾವಾಗಲೂ ಅದು ಇದು ಕಲಿ ಎಂದು ದುಂಬಾಲು ಬೀಳುತ್ತಲೇ ಇರುತ್ತಿದ್ದಳು. ಅವಳು ಯಾವತ್ತಿಗೂ ನನ್ನನ್ನು ಬೈದ ನೆನಪೇ ಆಗುವುದಿಲ್ಲ. ಅಂಥ ಅಮ್ಮ, ನಾನು ಹತ್ತನೇ ಕ್ಲಾಸು ಎಕ್ಸಾಂ ಮುಗಿಸಿ ರಜೆಯಲ್ಲಿ ತುಂಬ ಸಂತೊಷವಾಗಿದ್ದಾಗ, ಹೀಗೇ ಚರ್ಚಿನಲ್ಲಿ ಆಟವಾಡುತ್ತ ಇದ್ದ ಒಂದು ಸಂಜೆ ಅಮ್ಮ ಇದ್ದಕ್ಕಿದ್ದಂತೆ ಸತ್ತು ಹೋಗಿದ್ದಳು. ಅವಳಿಗೆ ಮೂರ್ನಾಲ್ಕು ದಿನಗಳಿಂದಲೇ ಜ್ವರವಿತ್ತು, ಆದರೂ ಕೆಲಸಕ್ಕೆ ಹೋಗಿದ್ದಳು. ಅಮ್ಮನಿಗೆ ಆಗಾಗ ಜ್ವರ ಬರುವುದು ಹೋಗುವುದು ಹೊಸದಂತೂ ಆಗಿರಲಿಲ್ಲ, ಆದರೆ ಆ ಸಾವು ನಾನು ಎಂದೂ ಊಹಿಸಿಯೇ ಇರದ ಒಂದಾಗಿತ್ತು. ಅಮ್ಮ ಸತ್ತ ಮೇಲೆ ನನಗೆ ಯಾರಿದ್ದರು? ಆಮೇಲೆಯೇ ನನ್ನ ಅತ್ಯಂತ ಕಷ್ಟದ ದಿನಗಳು ಶುರುವಾದದ್ದು. ಅಮ್ಮ ಸತ್ತ ಮೇಲೆ ನಾನು ಒಂಟಿಯಾದೆ, ಅಕ್ಷರಶಃ ಒಂಟಿ. ಆಗೆಲ್ಲ ಅಮ್ಮನ ನೆನಪಿನಲಿ ಅಮ್ಮನ ಸೀರೆಯನು ಹೊದ್ದು ಮಲಗುತ್ತಿದ್ದೆ. ಆಮೇಲೆ ಅದನ್ನು ಉಟ್ಟೆ ಕಳ್ಳತನದಿಂದ. ನಿಧಾನಕೆ ತಿಳಿಯಿತು. ಒಳಗೆ ಅಭಿರಾಮಿ ಅಡಗಿದ್ದಳು. ಸಣ್ಣ ವಯಸಿನಿಂದಲೇ ನನ್ನ ಬಿಳೀ ಮುಖ, ಕಪ್ಪು ಕಣ್ಣು, ಮಾತುಮಾತಿಗೆ ನಾಚುವುದನ್ನೆಲ್ಲ ನೋಡಿ ಓರಗೆಯ ಮಕ್ಕಳು ಹೆಣ್ಣಪ್ಪಿ ಎಂದು ರೇಗಿಸುತ್ತಿದ್ದುದ್ದಕ್ಕೆ ಹೊಸ ಅರ್ಥ ಸಿಕ್ಕಂತೆ ಬದುಕಿನ ದಿಕ್ಕು ಬದಲಾಗಿ ಬಿಟ್ಟಿತ್ತು. ಆಮೇಲಿನಿಂದ ಪಟ್ಟಿದ್ದು ಅಲ್ಪಸ್ವಲ್ಪ ಕಷ್ಟವಲ್ಲ ಸರ್, ನನಗೊಬ್ಬ ಮಾವನಿದ್ದ. ಅಮ್ಮನ ಅಣ್ಣ. ಅವನು ಮೊದಲೆಲ್ಲ ನಮ್ಮನ್ನು ಏನು ಅಂತಲೂ ಕೇಳದವನು, ಅಮ್ಮ ಸತ್ತ ಕೆಲದಿನಗಳ ಮೇಲೆ ಬಂದು ನನ್ನ ಜೊತೆ ಸೇರಿಕೊಂಡಿದ್ದ. ನನ್ನನ್ನು ಬಲಾತ್ಕಾರ ಮಾಡಿದ ಮೊದಲ ವ್ಯಕ್ತಿ ಅವನೇ. ಅದೂ ಸಾಲದೆಂಬಂತೆ ಆಗಾಗ ಅವನ ಗೆಳೆಯರನ್ನೂ ಮನೆಗೆ ಕರೆತಂದು ಬಿಡುತ್ತಿದ್ದ. ಅವನಿಂದಾಗಿ ನಾನು ಬಹಳವೇ ಕಷ್ಟ ಪಟ್ಟೆ, ಅವನಿಂದಾಗಿ ಆದ ಒಂದೇ ಒಂದು ಉಪಯೋಗವೆಂದರೆ, ಸರಕಾರ ನಾವಿದ್ದ ಗುಡಿಸಲುಗಳನ್ನ ಕೆಡವಿದಾಗ ಅವನ ಹೆಸರಿನಲ್ಲಿ ಹೊಸ ಮನೆ ಕಟ್ಟಿಕೊಟ್ಟರು, ಹೊಸಮನೆಯಲ್ಲಿ ಮೂರು ದಿನ ಕೂಡ ಅವನು ಉಳಿಯಲಿಲ್ಲ. ಹಾಗಾಗಿ ಮನೆ ನನ್ನ ಪಾಲಿಗೆ ಬಂತು. ಒಂದುವೇಳೆ ಮನೆಯೊಂದು ಇಲ್ಲದೆ ಇದ್ದರೆ ನನಗೆ ಬಹಳ ಕಷ್ಟವಾಗಿರೋದು. ಈವಾಗ ನಾನು ಬೆಳಗ್ಗೆ ಪಾರ್ಥಸಾರಥಿ ದೇವಸ್ಥಾನದ ಬಳಿ ಹೂ ಮಾರುತ್ತೇನೆ. ನಾಟಕದ ಪರದೆ ಬರೆವ ಕೆಲಸವೋ, ಬೋರ್ಡ್ ಬರೆವ ಕೆಲಸವೋ ಸಿಕ್ಕಿದರೆ ತೆಗೆದುಕೊಳ್ತೇನೆ. ಆಗೀಗ ಮೀನೂ ಮಾರುತ್ತೇನೆ. ಇನ್ನು ಮನೆಯಲ್ಲಿ ಒಬ್ಬಳೇ ಇರುತ್ತೀನಲ್ಲ ಆಗ, ಬೇಸರಾದಾಗ ನರ್ತಿಸುತ್ತೇನೆ. ಮೊದಲು ಕೆಲವು ಮಕ್ಕಳಿಗೆ ಇಲ್ಲೇ ಡ್ಯಾನ್ಸ್ ಹೇಳಿಕೊಡಲು ಟ್ರೈ ಮಾಡಿದೆ. ಆದರೆ ಎಲ್ಲಿ ಸರ್, ನಮ್ಮ ಹತ್ರ ಎಲ್ಲ ಕಳಿಸೋಕೆ ಜನ ಹಿಂದೆಮುಂದೆ ನೋಡ್ತಾರೆ ಅದೇ ಕಷ್ಟ. ಆದ್ರೂ ಕೆಲವು ಮಕ್ಕಳು ಬರ್ತಾರೆ ಆಗೀಗ ಅಷ್ಟೇ. ನಂದು ಅಭಿಪ್ರಾಯ ಇಷ್ಟೇ, ನಮ್ಮನ್ನು ಕೂಡ ಈ ಸಮಾಜ, ನಿಜವಾದ ನಾಗರಿಕ ಮನಸ್ಥಿತಿಯಿಂದ ನಾವಿರುವಂತೆ ಒಪ್ಪಿಕೊಳ್ಳಬೇಕು.” ಅಂದಿದ್ದಳು…

ಅವಳು ಮಾಡಿಕೊಟ್ಟ ಕಾಫಿ ಗುಟುಕರಿಸುತ್ತಾ ಅವಳ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತ ಅವಳು ಕೈಯ್ಯಾಡಿಸುತ್ತ ಕಣ್ಣರಳಿಸುತ್ತ ಮಾತಾಡುವುದನ್ನು ಕಣ್ತುಂಬಿಕೊಳ್ಳುತ್ತ ಅವಳಿಗೆ ನಿಧಾನವಾಗಿ ಶರಣಾಗತೊಡಗಿದ್ದೆ. ಅವಳು ಕಿಟಕಿಯ ಪಕ್ಕ ಕುಳಿತಿದ್ದಳು. ಅದೇ ಮಿಂದು ಬಂದ ಅವಳ ಕೂದಲು ಇನ್ನೂ ಒದ್ದೆಯಾಗಿತ್ತು. ಬಿಸಿಲು ಅವಳ ಕೆನ್ನೆಯ ಪಾರ್ಶ್ವವನ್ನು ಬೆಳಗಿಸಿತ್ತು. ಕೊನೆಯ ಮಾತುಗಳನ್ನು ಹೇಳುವಾಗ ಅವಳ ಕೈಗಳು ಕಿಟಕಿಯ ಸರಳುಗಳನು ಬಿಗಿದವು. ನಾನು ಒಡನೇ ಕ್ಯಾಮೆರಾ ಕ್ಲಿಕ್ಕಿಸಿದ್ದೆ. ನಂತರ ಕೆಲವು ನೃತ್ಯದ ಭಂಗಿಗಳಲ್ಲಿ ನಿಲ್ಲಿಸಿ ಹಲವು ಕೋನಗಳಲ್ಲಿ ಫೋಟೋಗಳನ್ನು ತೆಗೆದುಕೊಂಡು ಹೊರಟವನಿಗೆ ದಾರಿಯುದ್ದಕ್ಕೂ ಅವಳದ್ದೇ ನೆನಪು ಕಾಡಿತ್ತು. ಅವಳ ನಸುನಗು, ದನಿಯನ್ನು ಆದಷ್ಟೂ ತಗ್ಗಿಸಿ ಮಾತಾಡುವ ಪರಿ, ಮಾತಾಡುತ್ತ ಕೈಬೆರಳುಗಳನ್ನು ಮಾಟವಾಗಿ ತಿರುಗಿಸುತ್ತಿದ್ದ ರೀತಿ, ಅವಳು ಕತ್ತು ಕೊಂಕಿಸಿದಾಗೆಲ್ಲ ಅಲ್ಲಾಡುತ್ತ ಶೃದ್ಧೆ ಕೆಡಿಸುತ್ತಿದ್ದ ಅವಳ ಕಿವಿಯ ಝುಮುಕಿ, ಮುಖಕ್ಕೆ ಮುತ್ತುತ್ತಿದ್ದ ಒದ್ದೆ ಮುಂಗುರುಳು… ಅವಳ ಕುರಿತು ಬರೆಯುತ್ತ ಕೂತಾಗ, ಅವಳೇ ಎದುರು ಬಂದು ಕೂತಂತೆ ಅನಿಸಿತ್ತು. ಅಕ್ಕರೆಯಿಂದ ಆಸ್ಥೆಯಿಂದ ಬರೆದ ಲೇಖನ, ನಿಜಕ್ಕೂ ಸದ್ದು ಮಾಡಿತ್ತು. ನಡು ನಡುವೆ ಅದೂ ಇದು ಸಂದೇಹ ಕೇಳಲೆಂಬಂತೆ ಅವಳಿಗೆ ಕರೆ ಮಾಡುತ್ತ, ಕಡೆಗೆ ಲೇಖನ ಪ್ರಕಟವಾದುದರ ಕುರಿತು ಹಂಚಿಕೊಳ್ಳುತ್ತ ಅವಳಿಗೆ ಹತ್ತಿರವಾಗುವ ಒಂದೇ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಂಡಿದ್ದೆ. ನಾನು ಮೊದಲಿಗೆ ಅಭಿರಾಮಿಯ ಚೆಲುವಿಗೆ ಬೆರಗಾಗಿದ್ದೆ, ಆಮೇಲೆ ನಿಧಾನಕೆ ಕರಗತೊಡಗಿದ್ದೆ, ಆದರೆ ಅವಳ ಮಾತು ನಡೆ ನುಡಿ ನಗು ಮತ್ತು ಪ್ರೇಮಮಯ ಹೃದಯಕ್ಕೆ ಸೋತು ಶರಣಾಗತೊಡಗಿದ್ದೆ. ಲೇಖನ ಪ್ರಕಟವಾದ ಮೇಲೆ ಅವಳ ಕುರಿತಾಗಿ ವಿಚಾರಿಸಿ ಅನೇಕ ಫೋನುಗಳು ಬಂದಿದ್ದವು, ಕೆಲವರು ತಮ್ಮ ಮಕ್ಕಳನ್ನು ಅವಳ ಬಳಿ ನೃತ್ಯ ಕಲಿಕೆಗೆ ಕಳಿಸಲು ಮುಂದೆ ಬಂದಿದ್ದರು. ಅದಕ್ಕಾಗಿ ನಾನೇ ಮುಂದೆ ನಿಂತು ಸ್ಥಳವೊಂದನ್ನು ಗೊತ್ತು ಮಾಡಿಕೊಟ್ಟಿದ್ದೆ. ಅದರ ಜೊತೆಗೆ ಶ್ರೀಕೃಷ್ಣ ದೇವಸ್ಥಾನದ ರಥೋತ್ಸವದಂದು ದೇವಸ್ಥಾನದಲ್ಲಿ ಬಂದು ನರ್ತಿಸುವಂತೆ ಅವಳಿಗೊಂದು ಸದಾವಕಾಶವೂ ಒದಗಿಬಂದಿತ್ತು. ಅಭಿರಾಮಿಯ ಬದುಕು ಸಣ್ಣಗೆ ಕವಲೊಡೆದು ಕುಡಿಯೊಡೆಯತೊಡಗಿತ್ತು. ಜೊತೆಗೆ ನಾನೂ.

ಅಭಿರಾಮಿ, ಎಂದೂ ಯಾವುದಕ್ಕೂ ನನ್ನನ್ನು ಆಗ್ರಹಿಸಲೇ ಇಲ್ಲ. ತನಗಾಗಿ ಏನನ್ನೂ ಕೇಳಲಿಲ್ಲ. ಅವಳ ಆಸೆಗಳಾದರೂ ಅದೆಷ್ಟು ಸಣ್ಣವಿದ್ದವು. ಆದರೆ ಅದನ್ನು ಪೂರೈಸಲಿಕ್ಕೂ ನನಗೆ ಬಹಳಷ್ಟು ಬಾರಿ ಹಿಂಜರಿಕೆ ಕಾಡುತ್ತಿತ್ತು. ಮೊದಲನೇ ತಡೆ ಆಫೀಸಿನಿಂದಲೇ ಶುರುವಾಗಿತ್ತು. “ಏನಪ್ಪ, ಇತ್ತೀಚೆಗೆ ಒಂದೇ ಏರಿಯಾನ ಜಾಸ್ತಿ ಕವರ್ ಮಾಡ್ತಾ ಇರೋ ಹಾಗಿದೆ” ಎಂದು ಸಣ್ಣ ರೇಗಿಸುವಿಕೆಯೊಂದಿಗೆ ಶುರು ಮಾಡಿದ ಗೆಳೆಯರು, “ಏನೋ ಇದು ಎಲ್ಲ ಬಿಟ್ಟು? ಆರ್ ಯು…..” ಎಂದು ರಾಗವೆಳೆದಿದ್ದರು. “ಎ ಜಸ್ಟ್ ಫ್ರೆಂಡ್ ಕಣೋ, ಯಾಕೆ ಹಾಗಿರಬಾರ್ದೇನು?” ರೇಗಿದ್ದೆ ನಾನು. ಆದರೆ ನನ್ನ ಬೆನ್ನ ಹಿಂದೆ ಶುರುವಾದ ಗುಸುಗುಸು ಮಾತುಗಳೂ, ಎದುರೆದುರೇ ನಿಲ್ಲಿಸಿ ಪ್ರಶ್ನೆ ಕೇಳತೊಡಗಿದ ಗೆಳೆಯರು, ಸುಮ್ಮನೆ ಕುತೂಹಲದ ನೋಟವೊಂದನ್ನು ನನ್ನೆಡೆಗೆ ಹಾಯಿಸುತ್ತಿದ್ದ ಇನ್ನೂ ಕೆಲವರು… ಅಂತೂ ಇವ್ಯಾವುವೂ ನನ್ನನ್ನು ಅಭಿರಾಮಿಯ ಮೇಲಿನ ಸೆಳೆತದಿಂದ ಹಿಂತರಲಾರದೇ ಉಳಿದಿದ್ದವು. ಆದರೆ ಅವಳು ಆಸೆ ಪಟ್ಟಂತೆ ಬೀಚಿನಲ್ಲಿ ಕೈ ಹಿಡಿದು ನಡೆಯುವುದು, ಬೈಕಿನಲಿ ಬೆನ್ನು ತಬ್ಬಿ ಕೂತು ನಿರಾಳವಾಗಿ ಎಲ್ಲ ಪ್ರೇಮಿಗಳಂತೆ ಸುತ್ತುವುದು, ಸಿನಿಮಾಕೆ ಒಟ್ಟಿಗೇ ಹೋಗುವುದು… ಉಹೂಂ ಇದ್ಯಾವುದನ್ನೂ ನನ್ನಿಂದ ನೆರವೇರಿಸಲಾಗಲೇ ಇಲ್ಲ. ಅಪರೂಪಕ್ಕೊಮ್ಮೆ ಅವಳನ್ನು ಡ್ಯಾನ್ಸ್ ಸ್ಕೂಲಿನ ತನಕ ಡ್ರಾಪ್ ಮಾಡುವುದು ಬಿಟ್ಟರೆ ನಾವು ಒಟ್ಟಿಗೆ ಒಂದೇ ಬೈಕಿನಲಿ ಸುತ್ತುತ್ತಲೇ ಇರಲಿಲ್ಲ. ಯಾವಾಗಾದರೊಮ್ಮೆ ಮುಸ್ಸಂಜೆ ದಾಟಿ ಬೀಚಿಗೆ ಹೋಗಿ ಅಲ್ಲಿನ ಒದ್ದೆ ಮರಳಿನ ಮೇಲೆ ಕುಳಿತು ಕತ್ತಲಾಗುವುದನ್ನು ಕಾಯುತ್ತ ಕೂರುವುದು, ಕತ್ತಲಿನ ಮೌನದಲಿ ಕಡಲ ಅಲೆಗಳ ಮೊರೆತವನ್ನು ಕೇಳುತ್ತ ಸುಮ್ಮನೆ ಕೂರುವುದು ಅಭಿರಾಮಿಗೆ ತುಂಬ ಇಷ್ಟವಾಗುತ್ತಿತ್ತು. ಅದೇ ರೀತಿ ಕೂತಿದ್ದ ಒಂದು ರಾತ್ರಿ ಯಾರೋ ಒಬ್ಬಾತ, “ದೊರೆ, ನಿಂದಾದ ಮೇಲೆ ಕಳಿಸ್ತೀಯಪ್ಪ ನಮ್ಕಡೆ” ಎಂದು ವಿಕೃತ ನಗೆಯೊಂದಿಗೆ ಕೇಳಿದ್ದ. ಅದೇ ಆಗಿನ್ನೂ ಕಾಲುತೋಯಿಸಿದ ಕಡಲ ತೆರೆಗಳನ್ನು ನೋಡಿ, “ಈ ದಡದ ಮೇಲೆ ಎಷ್ಟು ಪ್ರೀತಿಯಿರಬೇಕು ಇವಕ್ಕೆ, ಮತ್ತೆ ಮತ್ತೆ ಬರ್ತಾನೇ ಇವೆ ನೋಡು” ಎಂದು ಉದ್ಗರಿಸಿ ಕುಳಿತಿದ್ದ ಅಭಿರಾಮಿ ಅವನ ಮಾತಿಗೆ ಮುಖ ಸಣ್ಣದು ಮಾಡಿಕೊಂಡು, “ಆದರೆ ಇದೇ ನೋಡು ನಮ್ಮ ಜಗತ್ತು” ಎಂದು ಸಣ್ಣಗೆ ಭಾರವಾದ ದನಿಯಲ್ಲಿ ಹೇಳಿದ್ದಳು. ಆದರೆ ಆ ಅವನನ್ನು ಎದ್ದು ಬಯ್ಯಲೋ ಅಥವಾ ಮತ್ತೇನೋ ಅನ್ನಲೋ ನಾನೇಕೆ ಮುಂದಾಗಲಿಲ್ಲವೆಂದು ಇವತ್ತಿಗೂ ನನಗೆ ತಿಳಿಯುವುದಿಲ್ಲ. ಬದಲಾಗಿ ನಾನು “ನಡಿ ಅಭಿರಾಮಿ, ಅದಕ್ಕೇ ಹೇಳೋದು ನಿಂಗೆ ಇಲ್ಲೆಲ್ಲ ಸೇಫಾದ ಸ್ಥಳ ಅಲ್ಲ ಅಂತ” ಎಂದು ಎದ್ದು ಹೊರಡಿಸಿದ್ದೆ. ಅಭಿರಾಮಿ ಮಾತಾಡಿರಲಿಲ್ಲ. ಇನ್ನು ಅವಳ ಮನೆಗೂ ಹೋಗುವಂತಿರಲಿಲ್ಲ. ನಮಗೆ ಒಟ್ಟಿಗೇ ಕೂತು ಕಳೆಯಲೊಂದಿಷ್ಟು ಸ್ವಂತ ಸಮಯವೆಂಬುವುದು ದೊಡ್ಡ ಸವಾಲಿನ ವಿಷಯವಾಗಿತ್ತು. ನಮಗಿದ್ದ ಒಂದೇ ಆಸರೆ ಫೋನ್. ಕೆಲಸದ ನಡುವಿನ ಬಿಡುವಿನ ವೇಳೆ ಅವಳ ಜೊತೆ ಮಾತಾಡಬಹುದಿತ್ತು. ಉಳಿದಂತೆ ಅವಳು ನನಗೆ ದಂಡಿ ದಂಡಿ ಮೆಸೇಜು ಕಳಿಸುತ್ತಿದ್ದಳು. ಜೋಪಾನ, ಹೊರಗೆ ಬಿಸಿಲು, ನೀರು ಕುಡಿ, ಜ್ಯೂಸ್ ಕುಡಿ, ಹೆಲ್ಮೆಟ್ ಹಾಕ್ಕೋ, ಗಾಡೀಲಿ ಜೋಪಾನ… ಇಂಥವೇ ತಾಯ್ಗರುಳಿನ ಮೆಸೇಜುಗಳು. ತನಗಾಗಿ ಅವಳು ಕೇಳಿದ್ದೆಂದರೆ ನನ್ನದೊಂದಿಷ್ಟು ಸಮಯ ಮಾತ್ರವೇ. ಆದರೆ ಅದುವೇ ದುಬಾರಿಯೆನಿಸುತ್ತಿತ್ತು. ನಮ್ಮ ಭೇಟಿಯಾಗಿ ಅದಾಗಲೇ ಮೂರ್ನಾಲ್ಕು ತಿಂಗಳುಗಳಾಗಿದ್ದವು. ಅಷ್ಟರಲ್ಲಾಗಲೇ ನಾವಿಬ್ಬರೂ ಬೆಂಕಿಯಂತೆಯೂ, ಗಾಳಿಯಂತೆಯೂ ಒಬ್ಬರಿಗಾಗೊಬ್ಬರು ತುಡಿಯುತ್ತಿದ್ದೆವು. ಆಗ ಬಂದಿತ್ತು ಚಿತ್ರಾಪೌರ್ಣಮಿಯ ಕೂವಗಂಜಾತ್ರೆ.

ಅವಳು ಯಾವ ಪ್ರಶ್ನೆಯನ್ನೂ ಹಾಕದೆ ವಿಶಾಲ ನಗುವಿನೊಂದಿಗೆ ನನ್ನನ್ನು ಬರಮಾಡಿಕೊಂಡಿದ್ದಳು. ಅವಳ ಸಿಂಗಲ್ ಬೆಡ್ರೂಮಿನ ಆ ಸಣ್ಣ ಫ್ಲ್ಯಾಟು ಅವಳ ಹಾಗೆಯೇ ತಿದ್ದಿ ತೀಡಿದಂತೆ ಅಚ್ಚುಕಟ್ಟಾಗಿತ್ತು. ಕಡಲಿಗೆ ತೆರೆದುಕೊಂಡ ಅವಳ ಮನೆಯ ಕಿಟಕಿಗಳಿಂದ ಕಡಲಮೇಲಿನ ಗಾಳಿ ಬಿಸಿಲ ಕೋಲುಗಳೊಂದಿಗೆ ಧಾರಾಳವಾಗಿ ಒಳನುಗ್ಗುತ್ತಿತ್ತು. ಕಿಟಕಿಯಿಂದ ಸ್ವಲ್ಪ ಮುಂದೆ ಬಿಸಿಲು ಬೀಳುವ ಸ್ಥಳದಲ್ಲಿ ಸಣ್ಣದೊಂದು ತುಳಸಿಯ ಬೃಂದಾವನ ಇಟ್ಟು, ಮಲ್ಲಿಗೆಯ ದಂಡೆಯಿಂದ ಸಿಂಗರಿಸಿ, ಅದರ ಗೂಡಿನಲಿ ದೀಪ ಮುಟ್ಟಿಸಿ, ಅಗರಬತ್ತಿ ಹಚ್ಚಿದ್ದಳು. ಬೃಂದಾವನದ ಮುಂದೆ ನಾಲ್ಕೆಳೆಯ ರಂಗೋಲಿ. ರಂಗವಲ್ಲಿಯ ಅಳತೆ ಮೀರದ ಎಳೆಗಳು ಅವಳ ಯೋಚನೆಯ ನಿಖರತೆಗೆ ಸಾಕ್ಷಿಯಂತಿದ್ದವು.

“ಅಭಿರಾಮಿ, ನಾವು ಕೂವಗಂ ಫೆಸ್ಟ್ ನೋಡಲು ಹೋಗೋಣವೇ?” ನಾನು ಅವಳನ್ನು ಡ್ಯಾನ್ಸ್ ಕ್ಲಾಸಿನಲ್ಲಿ ಭೇಟಿಯಾಗಿ ಕೇಳಿದ್ದೆ. ಅದನ್ನು ಕೇಳಿದ್ದೇ ಅವಳ ಕಾಲುಗಳಿಗೆ ಎಲ್ಲಿಲ್ಲದ ಹುರುಪು ತುಂಬಿ ಆಕೆಯ ನಡೆಯೇ ನೃತ್ಯದ ಲಾಘವ ಪಡೆದಿತ್ತು. ಕೆನ್ನೆಗಳು ಕೆಂಪಡರಿ, ಕಂಗಳು ಬೆಳಗಿದ್ದವು. ಅವಳ ಆ ಸಂಭ್ರಮವನ್ನು ಮನಸಾ ಸಂಭ್ರಮಿಸಿದ್ದೆ. ನಾನು ಮೊದಲೇ ನಿರ್ಧರಿಸಿಯೇ ಬಂದಿದ್ದೆ. ನನಗೆ ಅವಳೊಡನೆ ಯಾವ ತಕರಾರಿಲ್ಲದೆ ಸಮಯ ಕಳೆಯಬಹುದಿತ್ತು ಮತ್ತು ನನಗೂ ಕೂವಗಂ ಫೆಸ್ಟಿವಲ್ ನ ಬಗೆ ಒಂದೊಳ್ಳೆ ಸ್ಟೋರಿ ಮಾಡಬಹುದಿತ್ತು. ಹಾಗೆ ನಾವಿಬ್ಬರೂ ಪಾಂಡಿಚೆರಿಯ ಕಡೆ ಹೊರಟಾಗ ಅಭಿರಾಮಿ ಮತ್ತಷ್ಟು ಸಂಭ್ರಮಿಸಿದ್ದಳು. ಅದೂ ಶುದ್ಧ ಮಗು ಸಂಭ್ರಮ. ಅವಳ ಒಂದೊಂದು ಚಲನೆಯಲ್ಲೂ ಅದು ಢಾಳಾಗಿ ವ್ಯಕ್ತವಾಗುತ್ತಿತ್ತು. ಯಾಕೆಂದರೆ ಅದು ನಾವು ಕೈಗೊಂಡ ಮೊದಲನೇ ದೂರ ಪ್ರಯಾಣವಾಗಿತ್ತು. ಅವಳಿಗೆ ಕೂವಗಂ ಜಾತ್ರೆಗೆ ಹೋಗಬೇಕೆಂಬ ಆಸೆಯೇನೂ ಇರಲಿಲ್ಲ, ಆದರೆ ಅದು ಕೂವಗಂ ಅಲ್ಲ, ಬೇರೆಲ್ಲಿಗೇ ಆಗಿದ್ದರೂ, ಕಡೆಗೆ ಸಾಯಲಿಕ್ಕೇ ಆಗಿದ್ದರೂ ಅಭಿರಾಮಿ ಇಷ್ಟೇ ಸಂಭ್ರಮದಿಂದ ನನ್ನೊಡನೆ ಬರುತ್ತಿದ್ದಳೆಂಬುವುದರಲ್ಲಿ ಸಂದೇಹವಿರಲಿಲ್ಲ. ಅವಳ ಬಹುದೊಡ್ಡ ಆಸೆಯಾಗಿತ್ತದು. ಹೀಗೆ ನನ್ನೊಡನೆ ಕೇಳುವವರ ಹಂಗಿಲ್ಲದೆ, ಕೆಲವು ಸಮಯ ಯಾವ ಗಡಿಬಿಡಿಯಿಲ್ಲದೆ ಅವಳಷ್ಟಕೆ ಅವಳಾಗಿ ಇರುವ ಸಮಯ. ಅದಕ್ಕಾಗಿ ಅಭಿರಾಮಿ ಹಂಬಲಿಸಿ ಕಾದಿದ್ದಳು, ಹಾಗಾಗಿ ಈ ಸಣ್ಣದೊಂದು ದೂರ ಪ್ರಯಾಣಕ್ಕೆ ಅಷ್ಟೊಂದು ಬೆಲೆಯಿತ್ತು. ಅದೇ ಮೊದಲ ಬಾರಿ ಅಭಿರಾಮಿ ನನ್ನನ್ನು ಒತ್ತಿದಂತೆ ಹಿಡಿದು ಕುಳಿತುಕೊಂಡಿದ್ದಳು. ಅವಳ ತಲೆ ಸಣ್ಣಗೆ ವಾಲಿ ನನ್ನ ತೋಳಿನ ಮೇಲೆ ಒರಗಿದ ಹಾಗೆ ಇತ್ತು. “ರಾಸ, ಈ ಪ್ರಯಾಣ ಮುಗಿಯಲೇಬಾರದೆಂದು ನನಗೆ ಅನಿಸುತ್ತಿದೆ. ನನ್ನ ಬಹು ದಿನಗಳ ಆಸೆ ಇದು, ಹೀಗೆ ನಿನ್ನೊಂದಿಗೆ ನಿನ್ನ ರಾಸಾತಿಯಾಗಿ ಹೀಗೊಂದು ಪ್ರಯಾಣ ಮಾಡುವುದು. ನಿಜಕ್ಕೂ ನಾ ಅಂದುಕೊಂಡೇ ಇರಲಿಲ್ಲ, ನೀ ನನ್ನ ಹೀಗೆ ಕರಕೊಂಡು ಬರಬಹುದು ಅಂತ. ತುಂಬ ಥ್ಯಾಂಕ್ಸ್ ರಾಸ, ಇದಕ್ಕೆ ಮತ್ತು ಎಲ್ಲದಿಕ್ಕೂ….” ಅಭಿರಾಮಿ ಹೀಗನ್ನುವಾಗ ಅವಳ ದನಿ ಕಟ್ಟಿ ಗೊಗ್ಗರಾಯ್ತು. ಮೊದಲಬಾರಿ ಹೀಗೆ ಒಮ್ಮೆ ಥ್ಯಾಂಕ್ಸ್ ಹೇಳಿದಾಗ ಇದ್ದ ಅದೇ ತೀವ್ರತೆ ಬಹುಶಃ ಅದಕ್ಕೂ ಹೆಚ್ಚಿನದೆನ್ನಬೇಕು ಈಗಲೂ ಇತ್ತು. ಅವಳಿಗೆ ನನ್ನ ಮೇಲೆ ಪ್ರೇಮದಷ್ಟೇ ನನ್ನಿಯಿತ್ತು. ಅಭಿರಾಮಿ ನನ್ನನ್ನು ಪ್ರೇಮದಿಂದ ರಾಸ ಅನ್ನುತ್ತಿದ್ದಳು. ಅಭಿರಾಮಿ ಹಾಗನ್ನುವಾಗ ನಾನು ನನ್ನ ಭುಜಕ್ಕೆ ವಾಲಿಕೊಂಡಿದ್ದ ಅವಳ ತಲೆಯನ್ನು ನೇವರಿಸಿದ್ದೆ. ಅವಳು ಅತೀವ ತೀವ್ರತೆಯೊಂದಿಗೆ ನನ್ನ ತೋಳನ್ನು ಒತ್ತಿದ್ದಳು. ಆಗ ಅವಳ ಕಂಗಳು ಆದ್ರವಾಗಿದ್ದವು. ಈ ನಾಲ್ಕು ತಿಂಗಳಲ್ಲಿ ನಾವು ಆಗೀಗ ಕೆಲವು ಸಂಜೆಗಳನ್ನು ಒಟ್ಟಿಗೆ ಕಳೆಯುತ್ತ, ಫೋನಿನಲ್ಲಿ ಮಾತಾಡುತ್ತ, ಮೆಸೇಜು ಮಾಡುತ್ತ, ಪರಸ್ಪರ ನೆನಪಿನಲಿ ಕಳೆದುಹೋಗುತ್ತ ಮೊದಲೇ ಅದು ಅಲ್ಲಿ ಇತ್ತು, ನಮ್ಮ ನಡುವೆ ಯಾವಾಗಲೋ ಇತ್ತು ಎಂಬಂತೆ ಪ್ರೇಮದ ತೆರೆಯೊಳಗೆ ಮರೆಯಾಗುತ್ತ ಸಾಗಿದ್ದೆವು. ಇನ್ನು ಅವಳೋ… ಅವಳ ಬದುಕಿನಲ್ಲಿ ಖರ್ಚಾಗದೇ ಉಳಿದ ಅಷ್ಟೂ ಪ್ರೇಮ ನನ್ನೆಡೆಗೆ ಸ್ಪುರಿಸಿ ಅದು ಅವಳ ಹೃದಯದಲಿ ಜಮೆಗೊಳ್ಳುತ್ತ, ಜಮೆಗೊಳ್ಳುತ್ತ, ಅವಳ ಪ್ರತಿಯೊಂದು ಮಾತಿನಲಿ, ಮೌನದಲಿ, ಅವಳ ಪ್ರತಿ ಚಲನೆಯಲ್ಲೂ ಪ್ರಕಟಗೊಳ್ಳುತ್ತ ಅಭಿರಾಮಿ ನನ್ನನ್ನು ಜೀವದಂತೆ ಅಥವಾ ಜೀವಕ್ಕೂ ಮಿಗಿಲಾಗಿ ಪ್ರೀತಿಸತೊಡಗಿದ್ದಳು. ಅವಳು ನನ್ನನ್ನು ಉಸಿರಿನಲಿ ಹೊಸೆದುಕೊಂಡು ಬಿಟ್ಟಿದ್ದಳು. ಅವಳ ಸುತ್ತಲಿನ ಜಗತ್ತೆಲ್ಲ ಅವಳ ಕಂಗಳಿಂದ ಮರೆಯಾಗಿ ಅವಳು ಒಂದು ವೃತ್ತದೊಳಗೆ ಬಯಸಿ ಬಯಸಿ ಬಂಧಿಯಾಗಿದ್ದಳು. ಅವಳ ಮನಸು ಹೃದಯ ಬದುಕು ಎಲ್ಲವೂ ನನ್ನ ಸುತ್ತಲೇ ಸುತ್ತತೊಡಗಿತ್ತು. ‘ನೀ ನನ್ನ ಉಸಿರಂತೆ ರಾಸ’ ಎಂದು ಅವಳು ಹೇಳುವಾಗೆಲ್ಲ ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣುತ್ತಿರಲಿಲ್ಲ. ಬಹುಶಃ ಇದಕ್ಕೇ ನನಗೆ ಭಯವಾಗುತ್ತಿತ್ತು.

ಅವಳು ತನ್ನ ಹೃದಯದೊಳಗೆ ಅದಿನ್ನೆಷ್ಟು ಕನಸುಗಳನ್ನು ಹುಗಿದಿರಿಸಿದ್ದಳೋ ಏನೋ, ನಾನು ತಿಳಿದೋ ತಿಳಿಯದೆಯೋ ಅವಳ ಕನಸಿನ ತಿಜೋರಿಗೆ ಕೈಯಿಟ್ಟಿದ್ದೆ. ಅವಳು ಗಂಧರ್ವಲೋಕದ ಶಾಪಗ್ರಸ್ಥ ಅಪ್ಸರೆಯಂತೆ ಎಲ್ಲಿಗೂ ಸಲ್ಲದವಳಾಗಿ, ಒಂದು ಸಾಮಾನ್ಯ ಬದುಕಿನ ಕನಸೇ ಒಂದು ಅಸಾಮಾನ್ಯ ಕೈಗೆಟುಕಲಾರದ ಕನಸಾಗಿ ಬಿಟ್ಟ ದುರಂತವನ್ನು ಎದೆಯೊಳಗೆ ಬೈತಿರಿಸಿಕೊಂಡು ಸುಮ್ಮನೆ ಬದುಕುತ್ತಿದ್ದವಳ ಹೃದಯದ ಬಾಗಿಲನು ತಟ್ಟುವುದು ಮತ್ತು ಅಲ್ಲಿ ಬೆಳಕು ಹಚ್ಚುವ ಮಾತಾಡುವುದು ಎರಡೂ ಅವಳ ಪಾಲಿಗೆ ಅಪಾರವಾದದ್ದು. ನನ್ನಪಾಲಿಗೂ ಸಹಾ. ಅಭಿರಾಮಿಯನ್ನು ನಾನು ಪ್ರೀತಿಸಬಾರದಿತ್ತು. ತನ್ನ ಏಕಾಂತದೊಡನೆ ರಾಜಿಮಾಡಿಕೊಂಡಿದ್ದವಳ ಮೌನ ಮುರಿದವನು ನಾನು. ಈಗ ಅವಳ ಸಣ್ಣ ಪುಟ್ಟ ಕನಸುಗಳನ್ನೂ ಈಡೇರಿಸಲಾರದೇ ತಪ್ಪಿಸಿಕೊಳ್ಳುವುದು ಎಂಥ ದೊಡ್ಡ ಅಪರಾಧ. ಅವಳ ಬದುಕಿನ ಎಲ್ಲ ದುರಂತಗಳಿಗಿಂತ ದೊಡ್ಡ ದುರಂತ ಇದೇ ಇರಬೇಕು. “ರಾಸ, ನನಗೆ ಏನು ಆಸೆ ಗೊತ್ತಾ, ನಮ್ಮನ್ನು ಕೇಳುವವರಿಲ್ಲದೆ ನಾವು ಒಬ್ಬರ ಕೈಯೊಬ್ಬರು ಹಿಡಿದುಕೊಂಡು ಬೀಚಿನಲ್ಲಿ ಸುತ್ತಾಡಬೇಕು. ನಿನ್ನ ಜೊತೆ ಒಟ್ಟಿಗೆ ಬೈಕಿನಲಿ ತೋಳು ಬಳಸಿ ಹಿಡಿದು ಕೂತು ಲಾಂಗ್ ರೈಡ್ ಹೋಗಬೇಕು, ನಿನ್ನ ತೋಳು ತಬ್ಬಿಕೊಂಡು ಬಾಕ್ಸಿನೊಳಗೆ ಕುಳಿತು ಸಿನಿಮಾ ನೋಡಬೇಕು, ಮ್… ಮತ್ತೇ, ನೀನು ಕೆಲಸ ಮುಗಿಸಿ ಮನೆಗೆ ಬರುವಾಗ ನಾನು ನಿಂಗೋಸ್ಕರ ಕಾಯ್ತಾ ಇರಬೇಕು, ನಿನ್ನ ಆಫೀಸಿಗೆ ಕಳಿಸೋಕೆ ನಿನ್ನ ಡ್ರೆಸ್ ಎಲ್ಲ ನಾನೇ ರೆಡಿ ಮಾಡಿ ಕೊಡ್ಬೇಕು, ಮ್…. ರಾತ್ರಿ ನಿನ್ನ ಕೆಲಸದ ದಣಿವೆಲ್ಲ ನೀಗೋ ಹಾಗೆ ಕೈಕಾಲೆಲ್ಲ ಒತ್ತಿ, ಆಮೇಲೆ… ಅವಳು ಹಾಗೇ ಮಾತಾಡುತ್ತ ಮಾತಾಡುತ್ತ ಉದ್ವೇಗಕ್ಕೊಳಗಾಗುತ್ತಿದ್ದಳು. “ರಾಸ, ನಿಂಗೆ ಹೀಗೆಲ್ಲ ಆಸೆಯಿಲ್ಲ? “ಮಾತಿನ ನಡುವೆಯೇ ಅವಳು ನನ್ನತ್ತ ತಿರುಗುತ್ತಿದ್ದಳು. “ನಂಗೂ ಇಷ್ಟ ರಾಸಾತಿ”. ನಾನು ಅವಳ ಮಾತಿಗೆ ಸಣ್ಣಗೆ ನಗುತ್ತಿದ್ದೆ. “ಮ್..ಮತ್ತೆ?” ಅವಳು ತುಂಟ ನಗುವಿನೊಂದಿಗೆ ಕಣ್ಣರಳಿಸುತ್ತಿದ್ದಳು. “ಲವ್ ಯು” ನಾನನ್ನುತ್ತಿದ್ದೆ. “ತ್ತುಂಬ್ಬ” ಅವಳು ತೋಳುಚಾಚಿ ಆಗಸವನ್ನೇ ತುಂಬಿಕೊಳ್ಳುವಂತೆ ಹಿಂದಕ್ಕೆ ವಾಲಿ ಕಣ್ಣು ಮುಚ್ಚಿ ತುಟಿಯುಬ್ಬಿಸುತ್ತಿದ್ದಳು. “ಭಗವಂತ ಎಷ್ಟು ಚೆಲುವೆ! “ಚೆಲುವೆ!” ನಾನು ಅವಳನ್ನು ನೋಡುತ್ತ ಉದ್ಗರಿಸುತ್ತಿದ್ದೆ. ಅವಳು ಒಡನೇ “ಸುಳ್ಳ ನೀನು” ಎಂದು ನಿರಾಕರಿಸುತ್ತಿದ್ದಳು. ಅಭಿರಾಮಿಯ ಆಸೆಗಳು ಎಷ್ಟು ಸಣ್ಣವಿದ್ದವು, ಒಬ್ಬ ಹೆಂಡತಿ ತನ್ನ ಗಂಡನಿಗೆ ಮಾಡಬಹುದಾದ ದಿನನಿತ್ಯದ ಕೆಲಸಗಳು. ಕಾಲಾಂತರದಲಿ ರೇಜಿಗೆಯೆನಿಸಿಬಿಡಬಹುದಾದ ಅವವೇ ನಿತ್ಯಕರ್ಮಗಳು! ಅವನ್ನೇ ಅಷ್ಟು ಅಮೂಲ್ಯವೆಂಬಂತೆ ಉದ್ಗರಿಸಿ ಉಚ್ಚರಿಸುತ್ತಾಳೆ. ಅವಳ ಅಸೀಮ ಪ್ರೇಮಕೆ ಬದಲಾಗಿ ನನ್ನಿಂದ ಏನನ್ನಾದರೂ ತಿರುಗಿ ಕೊಡಲಾದೀತೆ ಅಂದರೆ ಏನನ್ನು? ಅಭಿರಾಮಿಯ ಮೇಲೆ ನನಗೂ ಪ್ರೇಮವಿತ್ತು, ಅವಳಷ್ಟೇ ಪ್ರೇಮವಿತ್ತು. ಆದರೆ ನನ್ನ ಜಗತ್ತು ಬೇರೆಯದೇ ಇತ್ತಲ್ಲ. ಅವಳ ಪ್ರೇಮದ ಮಾತುಗಳಿಗೆ, ಅವಳ ಪುಟ್ಟ ಪುಟ್ಟ ಕನಸುಗಳಿಗೆ, ಅವಳ ಮಕ್ಕಳಂಥ ಸರಾಸರಿ ಬೇಡಿಕೆಗಳಿಗೆ ನಾನು ಅವಳು ಬಯಸಿದಂತೆ ಎಂದೂ ಸ್ಪಂದಿಸಲು ಎಂದಿಗೂ ಆಗಿರಲಿಲ್ಲ. ಅವಳು ಧಾರಾಳಿ, ಅವಳು ನನ್ನ ಮೇಲಿನ ಪ್ರೀತಿಯನ್ನು ಕವಿತೆಯಾಗಿಸುತ್ತಿದ್ದಳು, ಹಾಡಾಗಿ ಹರಿಸುತ್ತಿದ್ದಳು, ಚಿಕ್ಕ ಚಿಕ್ಕ ವಿಷಯಗಳಲ್ಲೂ ಅಪಾರ ಕಾಳಜಿ ತೋರುತ್ತಿದ್ದಳು. ಅವಳ ಈ ಎಲ್ಲ ಧಾರಾಳತೆಗೂ ಒಂದೇ ಉತ್ತರವೆಂಬಂತೆ ನಾನು “ಲವ್ಯೂ… ರಾಸಾತಿ” ಅನ್ನುತ್ತಿದ್ದೆ. ಹೆಚ್ಚೆಂದರೆ ಒಮ್ಮೊಮ್ಮೆ ಅವಳ ಹಾಗೇ ಆಗಸಕೆ ಕೈ ಚಾಚಿ “ತ್ತುಂಬ್ಬ” ಅನ್ನುತ್ತಿದ್ದೆ. ನಂತರದ ದಾರಿಯಲ್ಲಿ ಅಭಿರಾಮಿ ಹೆಚ್ಚು ಮಾತಾಡಿರಲಿಲ್ಲ. ಅವಳ ಮನಸು ಕಾರಿನ ವೇಗದ ಏರಿಳಿತದಂತೆ ಏರಿಳಿಯುತ್ತಿದ್ದಿರಬೇಕು. ಅವಳ ಅರೆ ಮುಚ್ಚಿದ ಕಣ್ಣುಗಳು ವಾಸ್ತವವನ್ನು ಅರಗಿಸಿಕೊಳ್ಳುವ ಯತ್ನದಲ್ಲಿದ್ದಿರಬೇಕು. ನನ್ನ ಭುಜದ ಮೇಲೆ ಒರಗಿದ ಅವಳ ತಲೆ ದಶಕಗಳ ಭಾರವನು ಇಳಿಸಿಟ್ಟಿರಬೇಕು. ನನ್ನ ತೋಳನ್ನು ಹಿಡಿದುಕೊಂಡಿದ್ದ ಅವಳ ಕೈಗಳು, ಕನಸನ್ನು ನಿರಂತರವಾಗಿ ತನ್ನೊಂದಿಗೇ ಉಳಿಸಿಕೊಳ್ಳುವ ಧಾವಂತದಲಿ ಪರಿತಪಿಸುತ್ತಿದ್ದಿರಬೇಕು. ಅಭಿರಾಮಿ ಮೌನವಾಗಿದ್ದಳು, ನಾವು ಹೋಟೆಲ್ ತಲುಪುವವರೆಗೂ.

“ಏ ರಾಸ, ಎಷ್ಟು ಚೆಂದ ಇದೆ, ಕಿಟಕಿ ತೆರೆದರೆ ಸಮುದ್ರ ಕಾಣಿಸುತ್ತೆ, ರಾತ್ರಿಯಲ್ಲಿ ಸಮುದ್ರ ತುಂಬ ಚೆಲುವಾಗಿರುತ್ತೆ. ಏ, ಇವೊತ್ತು ರಾತ್ರಿ ಅಲ್ಲಿಗೆ ಹೋಗೋಣ್ವಾ” ಹೋಟೆಲ್ ನಲ್ಲಿ ರೂಂ ಸೇರಿದೊಡನೇ ಅಭಿರಾಮಿ ಹತ್ತಿರ ಬಂದು ಅನುನಯಿಸುವಂತೆ ಕೇಳಿದ್ದಳು. ಅವಳ ಉಸಿರಿನ ಕಾವು ಕೆನ್ನೆಗೆ ತಲುಪಿ ಕಿವಿ ಬೆಚ್ಚಗಾಗಿತ್ತು. “ನನ್ನ ಅಭಿರಾಮಿ, ಹೇಗೆ ಹೇಳಿದರೆ ಹಾಗೆ” ನಾನು ಅವಳ ಕಿವಿಯಲ್ಲಿ ಪಿಸುಗುಟ್ಟಿದಂತೆ ಹೇಳಿದ್ದೆ. ನನ್ನ ಕೈಗಳನು ಹಿಡಿದಿದ್ದ ಕೈಗಳು ಒಡನೇ ಬಿಗಿಯಾಗಿದ್ದವು. ಅವಳ ತಲೆ ತಗ್ಗಿ, ಅವಳ ಕಂಗಳು ನೆಲಕ್ಕೆ ಬಾಗಿದ್ದವು. “ರಾಸಾತಿ, ಲವ್ ಯು..” ನಾನು ಮತ್ತೆ ಪಿಸುಗುಟ್ಟಿದ್ದೆ. ಅಭಿರಾಮಿ ಅಪ್ಸರೆಯಾಗಿದ್ದಳು. ಭಗವಂತನ ಸೃಷ್ಟಿಯಲಿ ಅತ್ಯಂತ ಅಪೂರ್ವವಾದದ್ದು ಈ ಕಿನ್ನರಿಗಳದ್ದೇ ಇರಬೇಕು. ಕಿನ್ನರಿಯ ದೇಹದಲ್ಲಿ ಗಂಡಿನ ಕಸುವು, ಹೆಣ್ಣಿನ ಲಾಲಿತ್ಯ ಎರಡೂ ಮೇಳೈಸಿ ಅದು ಸೃಷ್ಟಿಯ ಸೌಂದರ್ಯಕೆ ಎಸೆದ ಸವಾಲಾಗಿತ್ತು. ಅದಕ್ಕೇ ಇರಬೇಕು, ಜಗತ್ತು ಅವರ ಪಾಲಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದು! ನಮ್ಮ ಎದುರಾಳಿಯನ್ನು ದೈಹಿಕವಾಗಿ ಸೋಲಿಸುವುದು ಕಷ್ಟವೆನಿಸಿದರೆ ಮೊದಲು ಆತನ ಮನಸನ್ನು ಒಡೆದುಬಿಡಬೇಕು. ಅವನ ಆತ್ಮವನ್ನು ತಾಕಬೇಕು, ಕಲುಷಿತಗೊಳಿಸಬೇಕು; ಹಾಗಾಗಿಬಿಟ್ಟರೆ ಬೇರೇನೂ ಮಾಡದೆಯೇ ಅವನು ಸೋಲುತ್ತಾನೆ. ನನ್ನ ಅಭಿರಾಮಿಯ ಸ್ಪರ್ಶದಲ್ಲಿ ಅದೆಷ್ಟು ಪ್ರೇಮವಿತ್ತು. ಅವಳು ಒಲಿಯುತ್ತ ಒಲಿಸುತ್ತ, ಮಣಿಸುತ್ತ ಮಣಿಯುತ್ತ ನನ್ನನ್ನು ಅಪರೂಪದ ಲೋಕಕ್ಕೆ ಸೆಳೆದೊಯ್ದಳು. ನನ್ನ ತೆಕ್ಕೆಯಲಿ ಶರಣಾಗಿ ಕಣ್ಣೀರಾದಳು. “ಇದು ನಿಜವೇ? ಹೀಗೆ ಇಷ್ಟು ಪ್ರೇಮದಿಂದ ನನ್ನನ್ನು ಮುಟ್ಟಿದ ಒಂದು ಕೈಯನ್ನೂ ನಾನರಿಯೆ, ನನ್ನನ್ನು ಬಲತ್ಕಾರಿಸಿದ ಯಾರಿಗೂ ನನ್ನಲ್ಲಿ ಒಂದು ಆತ್ಮ ಇರುವುದು ಕಂಡಂತಿಲ್ಲ. ನಾನು ಕೂಡ ಒಮ್ಮೆಯೂ ಯಾರ ಕೈಯೊಳಗೂ ಹೀಗೆ ಅರಳಿಯೇ ಇಲ್ಲ. ನಾನು ಎಂದಿಗೂ ಅರಳಲಾರದವಳೆಂದೇ ಬಗೆದಿದ್ದೆ. ಹಾಗೆ ನನ್ನ ಮೇಲೆ ಬಲಾತ್ಕಾರಗಳು ನಡೆದಾಗ ನನ್ನ ಆತ್ಮ ಎಲ್ಲೋ ಮರಕೆ ಜೋತುಬಿದ್ದು ಪ್ರಜ್ಞಾಹೀನವಾಗುತ್ತಿತ್ತೇ ಹೊರತು ಒಮ್ಮೆಯೂ ಎಲ್ಲೂ ಸ್ಪಂದಿಸಲೇ ಇಲ್ಲ. ಇದು ನನ್ನ ಮೊದಲರಾತ್ರಿ. ಇದು ನನ್ನ ಬದುಕು, ಇದು ನನ್ನ ಜಗತ್ತು, ನಾ ಎಷ್ಟೊಂದು ಸಂತೋಷವಾಗಿದೀನಿ, ಅದು ನಿಂಗೆ ಗೊತ್ತಾಗ್ತಾ ಇದೆಯಾ..? ನಂಡ್ರಿ ರಾಸ ನಂಡ್ರಿ” ಅವಳು ಹಾಗನ್ನುತ್ತ ಬಿಕ್ಕಿಬಿಕ್ಕಿ ಅತ್ತಿದ್ದಳು. ನಾನು ಅವಳ ಕೂದಲು ನೇವರಿಸುತ್ತ ಅವಳ ನೆತ್ತಿಯನು ಚುಂಬಿಸಿದ್ದೆ. ಅವಳ ಕಣ್ಣೀರನ್ನು ತುಟಿಗಳಲಿ ಹೀರಿ ಕುಡಿದಿದ್ದೆ. ನನ್ನ ಎದೆಯ ಮೇಲೆ ತಲೆಯಿರಿಸಿ ಅನನ್ಯ ತೃಪ್ತಿಯೊಡನೆ ಮಲಗಿದವಳು ಸ್ವಲ್ಪೇ ಹೊತ್ತಿಗೆ ನಿದ್ದೆಗೆ ಜಾರಿದ್ದಳು. ಅವಳ ತುಟಿಗಳು ನಸುವೇ ಬಿರಿದು, ಯಾವುದೋ ಮಾಯಕದ ರಾಗಕ್ಕೆ ದನಿಗೂಡಿಸುತ್ತಿರುವಂತೆ ಕಾಣುತ್ತಿತ್ತು. ಅವಳ ಆ ನಸುನಗುವ ತುಟಿಗಳನು ಮತ್ತೆ ಮತ್ತೆ ಉನ್ಮತ್ತನಂತೆ ಚುಂಬಿಸಿದ್ದೆ. ಆದರೆ ಪ್ರೇಮಕ್ಕಾಗಿ ಹಂಬಲಿಸಿ ನವೆದಿದ್ದ ಆ ಜೀವವನ್ನು ನಾನು ಅಷ್ಟೊಂದು ಪ್ರೀತಿಸಬಾರದಾಗಿತ್ತು.

ಅಭಿರಾಮಿ, ಎಂದೂ ಯಾವುದಕ್ಕೂ ನನ್ನನ್ನು ಆಗ್ರಹಿಸಲೇ ಇಲ್ಲ. ತನಗಾಗಿ ಏನನ್ನೂ ಕೇಳಲಿಲ್ಲ. ಅವಳ ಆಸೆಗಳಾದರೂ ಅದೆಷ್ಟು ಸಣ್ಣವಿದ್ದವು. ಆದರೆ ಅದನ್ನು ಪೂರೈಸಲಿಕ್ಕೂ ನನಗೆ ಬಹಳಷ್ಟು ಬಾರಿ ಹಿಂಜರಿಕೆ ಕಾಡುತ್ತಿತ್ತು. ಮೊದಲನೇ ತಡೆ ಆಫೀಸಿನಿಂದಲೇ ಶುರುವಾಗಿತ್ತು. “ಏನಪ್ಪ, ಇತ್ತೀಚೆಗೆ ಒಂದೇ ಏರಿಯಾನ ಜಾಸ್ತಿ ಕವರ್ ಮಾಡ್ತಾ ಇರೋ ಹಾಗಿದೆ” ಎಂದು ಸಣ್ಣ ರೇಗಿಸುವಿಕೆಯೊಂದಿಗೆ ಶುರು ಮಾಡಿದ ಗೆಳೆಯರು, “ಏನೋ ಇದು ಎಲ್ಲ ಬಿಟ್ಟು? ಆರ್ ಯು…..” ಎಂದು ರಾಗವೆಳೆದಿದ್ದರು. “ಎ ಜಸ್ಟ್ ಫ್ರೆಂಡ್ ಕಣೋ, ಯಾಕೆ ಹಾಗಿರಬಾರ್ದೇನು?” ರೇಗಿದ್ದೆ ನಾನು. ಆದರೆ ನನ್ನ ಬೆನ್ನ ಹಿಂದೆ ಶುರುವಾದ ಗುಸುಗುಸು ಮಾತುಗಳೂ, ಎದುರೆದುರೇ ನಿಲ್ಲಿಸಿ ಪ್ರಶ್ನೆ ಕೇಳತೊಡಗಿದ ಗೆಳೆಯರು, ಸುಮ್ಮನೆ ಕುತೂಹಲದ ನೋಟವೊಂದನ್ನು ನನ್ನೆಡೆಗೆ ಹಾಯಿಸುತ್ತಿದ್ದ ಇನ್ನೂ ಕೆಲವರು… ಅಂತೂ ಇವ್ಯಾವುವೂ ನನ್ನನ್ನು ಅಭಿರಾಮಿಯ ಮೇಲಿನ ಸೆಳೆತದಿಂದ ಹಿಂತರಲಾರದೇ ಉಳಿದಿದ್ದವು.

ಮಾರನೆಯ ಬೆಳಿಗ್ಗೆ ನಾವು ಕೂವಗಂ ಗೆ ಹೋಗುವಾಗ ಅಭಿರಾಮಿ ಎಷ್ಟು ಚೆಂದಗೆ ಸಿಂಗರಿಸಿಕೊಂಡಿದ್ದಳೆಂದರೆ ನಾನು ಅವಳಿಂದ ಕಣ್ತೆಗೆಯದಾದೆ. ‘ಅಬ್ಬ ಅಭಿರಾಮಿ, ನಿನ್ನಷ್ಟು ಚೆಲುವೆ ಮತ್ತೊಬ್ಬಳು ಖಂಡಿತ ಇರಲಿಕ್ಕಿಲ್ಲ” ನಾನು ಕಾರು ಓಡಿಸುತ್ತ ಅವಳ ಕಡೆ ತಿರುಗದೆಯೇ ಹೇಳಿದ್ದೆ. “ನೀನು ನಿಜವಾಗಲೂ ಸುಳ್ಳಪ್ಪಿ” ಅವಳು ಹುಸಿಮುನಿಸು ತೋರಿಸಿ ನಕ್ಕಿದ್ದಳು. ಅದರಂತೆಯೇ ಕೂವಗಂ ತಲುಪಿದಮೇಲೆ ನನ್ನ ಎಲ್ಲ ಎಣಿಕೆಗಳೂ ತಲೆಕೆಳಗಾಗಿ ಮಕಾಡೆ ಮಲಗಿದವು. ನಿಜಕ್ಕೂ ಅದೊಂದು ಕಿನ್ನರ ಲೋಕವೇ ಆಗಿತ್ತು. ಬಲು ಸೊಗಸಾಗಿ ಸಿಂಗರಿಸಿಕೊಂಡಿದ್ದ, ಮಹಾ ಸುಂದರಿಯರಾದ ಸಾವಿರ ಸಾವಿರ ಕಿನ್ನರಿಗಳನ್ನು ಒಟ್ಟಿಗೇ ಕಂಡು ನಾನು ದಂಗಾಗಿದ್ದೆ. ಅದು ಈ ಪ್ರಪಂಚಕ್ಕೆ ಸಂಬಂಧಿಸದ ವಿಶೇಷ ವಿಶಿಷ್ಟ ಹೊಸತೊಂದು ಜಗತ್ತಾಗಿತ್ತು. ಅಲ್ಲಿಗೆ ಇಡೀ ದೇಶದ ನಾನಾ ಕಡೆಗಳಿಂದ ಕಿನ್ನರಿಗಳು ಬಂದಿದ್ದರು, ಹೊರದೇಶದಿಂದ ಬಂದವರೂ ಇದ್ದರು. ಈ ಜಾತ್ರೆಯ ವಿಶೇಷಗಳನು ವರದಿ ಮಾಡಲು,ಬರಿದೇ ನೋಡಲು, ಇಲ್ಲ ಸಲೀಸಾಗಿ ಯಾರಾದರೂ ಕಿನ್ನರಿ ರಾತ್ರಿಗಳ ಮಟ್ಟಿಗೆ ಒಲಿದುಬಿಡಬಹುದೆಂಬ ಆಸೆಯಿಟ್ಟು ಬಂದ ವಿಟರು, ಕಿನ್ನರಿಗಳಿಂದ ಆರ್ಶೀವಾದ ಪಡೆದರೆ ಒಳಿತಾಗುವುದೆಂಬ ನಂಬಿಕೆಯೊಂದಿಗೆ ಅವರಿಗೆ ಬಾಗಿನ ಕೊಡಬಂದವರು…. ನಾನು ಈ ಜಾತ್ರೆ ಇಷ್ಟು ದೊಡ್ಡದಿರಬಹುದೆಂದು ಖಂಡಿತಾ ಅಂದುಕೊಂಡಿರಲಿಲ್ಲ. “ರಾಸಾತಿ, ಏನಿದೆಲ್ಲ?” ನಾನು ಅಚ್ಚರಿಯಿಂದ ಕೇಳಿದ್ದೆ “ಇನ್ನೇನು? ಇದೇ ಕೂವಗಂ ಫೆಸ್ಟ್, ಇವತ್ತು ಚಿತ್ರಾ ಪೌರ್ಣಮಿ ಬೇರೆ. ಇದೇ ತುಂಬ ವಿಶೇಷ ದಿನ. ಇವೊತ್ತು ಇಲ್ಲೊಂದು ಬಹುದೊಡ್ಡ ರಿಚ್ಯುಅಲ್ ನಡೆಯುತ್ತೆ, ಮಹಾಭಾರತದ ಒಂದು ಕಥೆಯನ್ನು ಆಧರಿಸಿ ನಡೆಸುವ ಸಂಪ್ರದಾಯ ಇದು. ಒಮ್ಮೆ ಕೌರವ ಪಾಂಡವರ ಯುದ್ಧದ ಸಮಯದಲ್ಲಿ ಕೃಷ್ಣನಿಗೆ ಯುದ್ಧದ ಕುರಿತಾಗಿ ಭವಿಷ್ಯ ಕೇಳುವ ಮನಸ್ಸಾಯಿತಂತೆ. ಅವನು ಪಾಂಡವರ ಪರ, ಅವನಿಗೆ ಧರ್ಮ ಸಂರಕ್ಷಕ. ಹಾಗಾಗಿ ಅವನು ಪಕ್ಕಾ ಭವಿಷ್ಯ ನುಡಿವ ಸಹದೇವನಲ್ಲಿಗೆ ಹೋಗಿ ಈ ಕುರಿತು ವಿಚಾರಿಸಿದನಂತೆ, ನೋಡಿದರೆ ಅದೇ ಸಮಯಕೆ ಸರಿಯಾಗಿ ಸುಯೋಧನನೂ ಭವಿಷ್ಯ ಕೇಳಲು ಅಲ್ಲಿಗೆ ಬಂದಿದ್ದನಂತೆ. ಕವಡೆ ಉರುಳಿಸಿ ಗಣಿಸಿದ ಸಹದೇವ, ಇಬ್ಬರಿಗೂ ಗೆಲುವಿನ ಹಾದಿಗಳು ಹೆಚ್ಚುಕಮ್ಮಿ ಒಂದೇ ಮಟ್ಟಲ್ಲಿವೆ; ಹಾಗಾಗಿ ಯಾರು ಮೊದಲು ನಿಮ್ಮಲ್ಲಿ ಅತ್ಯಂತ ಶಕ್ತಿಯೂ, ತೇಜಸ್ಸೂ ಉಳ್ಳ, ಸಕಲ ವಿದ್ಯಾ ಶ್ರೇಷ್ಠ, ಯುದ್ಧ ವೀರನನ್ನು ಮಹಾಕಾಳಿಗೆ ಬಲಿ ಕೊಡುತ್ತೀರೋ ಅವರಿಗೆ ಮಹಾಕಾಳಿಯ ಒಲವಿನಿಂದಾಗಿ ಗೆಲುವು ಸಿಕ್ಕುವುದು ಅಂದನಂತೆ. ಆ ಕ್ಷಣವೇ ಕೃಷ್ಣ ಚಿಂತೆಗೆ ಬಿದ್ದನಂತೆ. ಅವನ ಮನಪಟಲದಲ್ಲಿ ಆ ಸರ್ವಗುಣ ಸಂಪನ್ನ ಒಂದೋ ಅರ್ಜುನ, ಇಲ್ಲ ಸ್ವತಃ ತಾನೇ ಎಂಬ ಸತ್ಯ ಹೊಳೆದು ಏನು ಮಾಡುವುದೆಂಬ ಗೊಂದಲದಲ್ಲಿ ಬಿದ್ದನಂತೆ. ಹಾಗೂ ಕಡೆಗೆ ಪಾಂಡವರನ್ನೆಲ್ಲ ಕರೆದು ಈ ಕುರಿತಾಗಿ ಅಭಿಪ್ರಾಯ ಕೇಳಲಾಗಿ ಯಾರೊಬ್ಬರೂ ಏನೂ ಮಾತಾಡಲಿಲ್ಲವಂತೆ. ಆಗ ಒಬ್ಬ ತೇಜಸ್ಸುಳ್ಳ ಸುಂದರ ಯುವಕ ಮುಂದೆ ಬಂದು ತಾನು ಈ ಶುಭ ಕಾರ್ಯಕೆ ಸಲ್ಲುವೆನೆ? ಎಂದು ಕೇಳಿದನಂತೆ. ಅವನ ಪೂರ್ವಾಪರ ವಿಚಾರಿಸಲಾಗಿ, ಅವನು ಅರ್ಜುನನಿಗೂ, ನಾಗಕನ್ಯೆ ಉಲೂಪಿಗೂ ಜನಿಸಿದ ಮಗ, ಅರವಾಣನೆಂದು ತಿಳಿಯ ಬರುತ್ತದೆ. ಅವನು ಒಬ್ಬ ಶಕ್ತಿಶಾಲಿ ವೀರನೆಂಬುದೂ, ಸಹದೇವ ಸೂಚಿಸಿದ ಗುಣಾತಿಶಯಗಳನ್ನು ಹೊಂದಿದವನೆಂದೂ ಕೃಷ್ಣ ಮನಗಂಡು ಅವನನ್ನೇ ಬಲಿ ಕೊಡಲು ನಿರ್ಧರಿಸುತ್ತಾನಂತೆ. ಹಾಗೆ ಅರವಾಣನನ್ನು ಬಲಿಕೊಡಲು ನಿಶ್ಚಯಿಸಿದ ದಿನವೇ ಚಿತ್ರಾ ಪೂರ್ಣಿಮೆ. ಆ ಸಮಯದಲಿ ಕೃಷ್ಣ ತನ್ನ ಧರ್ಮಬುದ್ದಿಯಿಂದ, ಅರಾವಣನ ಕಡೆಯಾಸೆ ಏನೆಂದು ಕೇಳಲು, ಅವನು ಸಾಯುವ ಮುನ್ನ ಮದುವೆಯಾಗಿ ಹೆಣ್ಣಿನೊಡನೆ ಕೆಲ ಘಂಟೆಗಳನು ಆನಂದದಿಂದ ಕಳೆಯಬೇಕೆಂದು ಬಯಸಿದನಂತೆ. ಆಗ ಕೃಷ್ಣ ಮೋಹಿನೀ ಅವತಾರವೆತ್ತಿ ಅರವಾಣನನ್ನು ಮದುವೆಯಾಗಿ ಆತನ ಕೊನೆಯಾಸೆ ನೆರವೇರಿಸಿದನಂತೆ. ಅದರ ನಂತರ ಅರವಾಣನನ್ನು ದೇವಿಗೆ ಬಲಿಕೊಡಲಾಯಿತಂತೆ. ಅದೇ ನೆನಪಿಗೆ, ಅಂಥದ್ದೇ ಬದುಕನ್ನು ಹೊಂದಿರುವ ಕಿನ್ನರಿಗಳು ಈ ಚಿತ್ರಾಪೌರ್ಣಮಿಯಂದು ಸರ್ವಾಲಂಕಾರ ಭೂಷಿತರಾಗಿ ಅರವಾಣನನ್ನು ಮದುವೆಯಾಗಿ ಮರುದಿನ ಅವನು ಸತ್ತ ಸೂತಕ ಆಚರಿಸುತ್ತಾರೆ. ಇಲ್ಲಿ ಅದರ ಪ್ರತೀಕವಾಗಿ ದೇಗುಲದ ಅರ್ಚಕನಿಂದ ತಾಳಿ ಕಟ್ಟಿಸಿಕೊಳ್ತಾರೆ. ಮರುದಿನ ಅರ್ಚಕರು ಕಿನ್ನರಿಗಳ ತಾಳಿ ಕಳೆದು ಬಳೆ ಒಡೆದು ವಿಧವೆಯಾಗಿಸುತ್ತಾರೆ. ಆಮೇಲೆ ಅವರು ಒಪ್ಪಾರಿಯಿಟ್ಟು ಅತ್ತು ದುಃಖ ಹಂಚಿಕೊಳ್ಳುತ್ತಾರೆ, ಇದು ಸಂಪ್ರದಾಯ. ಆದರೆ ನಾನಂತೂ ಒಮ್ಮೆಯೂ ಈ ಕೆಲಸ ಮಾಡಿಲ್ಲ. ಇಲ್ಲೀತನಕ ಮೂರು ಸಲ ಬಂದಿದ್ದೇನೆ, ಒಮ್ಮೆಯೂ ನನಗೆ ಇದನ್ನು ಮಾಡಬೇಕೆಂದು ಅನಿಸಿಲ್ಲ. ಅಭಿರಾಮಿ ನಕ್ಕಿದ್ದಳು.

ನಂಗೇನು ಗೊತ್ತಾ, ನಂಗೆ ನಿಜಾ ಮದುವೆ ಆಗ್ಬೇಕು… ಆಮೇಲೆ ಸಂಸಾರ ನಡೆಸ್ಬೇಕು. ಎಲ್ಲರ ಹಾಗೆ” ಅಭಿರಾಮಿ ಕಥೆಹೇಳಿ ಮುಗಿಸಿ ಕೊನೆಯಲ್ಲಿ ಇದನ್ನೂ ಸೇರಿಸಿ ನಕ್ಕಿದ್ದಳು. ‘ಎಷ್ಟು ದುಬಾರಿ ಆಸೆ ಅಲ್ವಾ ನಂದು, ಎಷ್ಟು ಸೊಕ್ಕಿರಬೇಕು ನನಗೆ’ ಹಾಗನ್ನುತ್ತ ನಕ್ಕುನಕ್ಕು ಅವಳ ಕಂಗಳಲಿ ನೀರಾಡಿದವು. “ಸುಮ್ನೆ ಏನಾದರೂ ಹೇಳುವುದು ತಮಾಷೆಗೆ” ಅವಳು ಮಾತು ಮುಗಿಸಿದ್ದಳು. ಇದೇ ಅಲ್ಲದೆ ಅಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಒಂದೆಡೆ ಕಿನ್ನರಿಯರು ಗುಂಪುಗುಂಪಾಗಿ ಕಲೆತು ನರ್ತಿಸುತ್ತಿದ್ದರೆ, ಮತ್ತೊಂದೆಡೆ ಸ್ವಲ್ಪ ಹೆಚ್ಚು ವಯಸ್ಸಾದವರು ಯಾವುದೇ ಭಿಡೆಯಿಲ್ಲದೆ ಗಟ್ಟಿಯಾಗಿ ನಗುತ್ತ, ತಮ್ಮೊಳಗೇ ಏನೋ ತಮಾಶೆ ಮಾಡಿಕೊಂಡು ರೇಗುತ್ತ, ರೇಗಿಸುತ್ತ ಕುಳಿತಿದ್ದರು. ಇನ್ನೊಂದು ಗುಂಪು ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೆ, ಮತ್ತೊಂದೆಡೆ ಕಿನ್ನರಿಯರ ಫ್ಯಾಶನ್ ಶೋ ಮತ್ತು ಸೌಂದರ್ಯ ಸ್ಪರ್ಧೆ ನಡೆದಿತ್ತು. ಅಂತೂ ನಾನು ಎಂದೂ ಕಂಡಿರದ ಕಲ್ಪಿಸಿರದ ಅತಿ ರಮ್ಯ ಲೋಕವನು ಕ್ಯಾಮೆರಾದಲ್ಲಿ ದಾಖಲಿಸುತ್ತ ಅದರೊಳಗೆ ಕಳೆದುಹೋಗತೊಡಗಿದ್ದೆ. ಇದನ್ನೆಲ್ಲ ನೋಡುತ್ತಿದ್ದರೆ, ತಮ್ಮ ಜನ್ಮದತ್ತ ಪಕೃತಿಯನ್ನು ಬೇರೇನೂ ಮಾಡಲಾಗದೆ, ಇರುವುದರಲಿ ನಗಲು ಕಲಿತ ಈ ಪ್ರೇಮಮಯ ಜೀವಗಳನು ನಾವುಗಳೆಲ್ಲ ತುಳಿತುಳಿದು ಶಾಪಗ್ರಸ್ತ ಜೀವಗಳಾಗಿಸಿ ಬಿಟ್ಟಿದ್ದೇವೆನ್ನದೆ ಬೇರೆ ಏನೆನ್ನಬೇಕು?ಇವರಿಗೆ ಒಂದು ಕನಿಷ್ಟ ಬೆಲೆಯನ್ನೂ ಕೊಡದೆ ನಿಕೃಷ್ಟವಾಗಿ ಕಾಣಬೇಕೆಂದು ಕಲಿತದ್ದಾದರೂ ಹೇಗೆ ನಾವು? ಅವರ ಪರಿತ್ಯಕ್ತ ಹೃದಯ ಅದೆಷ್ಟು ನೊಂದಿರಬಾರದು? ಆ ನೋವೇ ಅವರನ್ನು ಹೀಗೆ ಕಲ್ಲಾಗಿಸಿತೇ? ನೋವಿನ ಮೇಲೆ ನೋವನ್ನು ಸುರಿದು ನಾವು ಅವರನ್ನು ಮರಗಟ್ಟಿಸಿ ಹರಳಾಗಿಸಿಬಿಟ್ಟೆವೆ? ಪ್ರೇಮದ ಒಂದು ಸಣ್ಣ ಬಿಸುಪಿಗೆ ಅಭಿರಾಮಿ ಅದೆಷ್ಟು ಕರಗಿಹೋದಳು. ಅವಳ ಹೃದಯದಲಿ ಹಿಮಗಟ್ಟಿ ಇರಿಯುತ್ತಿದ್ದ ನೋವೆಲ್ಲ ಹರಿದು ಉಕ್ಕಿತ್ತು. ಇಲ್ಲಿರುವ ಅಷ್ಟೂ ಕಿನ್ನರಿಗಳ ಎದೆಯಲ್ಲೂ ಅಂಥ ಹಿಮಗಲ್ಲುಗಳ ತಾಣವಾಗಿರಬೇಕು, ಸಣ್ಣದೊಂದು ಒಲವ ಬಿಸುಪಿಗಾಗಿ ತುಡಿಯುತ್ತಿರುವ ಅವರ ಕಲ್ಲೆದೆಯೊಳಗೆ ತುಯ್ಯುವ ಕಡಲಿರಬೇಕು. ದೇವರೇ ನಿನ್ನ ಯಾವ ವಿಲಾಸದ ಘಳಿಗೆಯಲಿ ಹೀಗೊಂದು ಆಟವಾಡುವ ಮನಸು ಮಾಡಿದೆ ನೀನು? ಅಥವಾ ನಿನ್ನ ಅಸೀಮವೆನಿಸುವ ಸೃಷ್ಟಿಯನು ನಾವೇ ತುಳಿದು ನೆಲಕಚ್ಚಿಸಲು ನಿಂತಿದ್ದೇವೆಯೆ? ನಾನು ನನ್ನೊಳಗೇ ಕಂಪಿಸಿದ್ದೆ.

ಅಲ್ಲಿ ನಮಗೆ ಅಭಿರಾಮಿಯ ಹಳೆಯ ಗೆಳತಿ ನೀಲಿಮಾ ಭೇಟಿಯಾಗಿದ್ದಳು. ಅವಳು ಸಣ್ಣ ವಯಸ್ಸಿನಲ್ಲೇ ಅಪ್ಪ ಅಮ್ಮನಿಂದ ಪರಿತ್ಯಜಿಸಲ್ಪಟ್ಟು ಬೀದಿಗೆ ಬಿದ್ದಿದ್ದಳು. ಅವಳ ಬದುಕಿನ ಬಹುಭಾಗ ಮುಂಬೈನ ಕಾಮಾಟಿಪುರದಲ್ಲಿ ಕಳೆದಿತ್ತು. ಅವಳ ಎಳೆಯ ವಯಸ್ಸಿನಿಂದಲೇ ಅವಳು ಲೈಂಗಿಕ ಶೋಷಣೆಯನ್ನು ಅನುಭವಿಸಿದ್ದಳು. ನನ್ನೊಂದಿಗೆ ಮಾತಾಡುತ್ತಾ ಅವಳು “ನಾನು ನನ್ನ ಬದುಕಿನಲಿ ಕಳೆದ ಒಂದೊಂದು ದಿನವೂ ನರಕಸ್ವರೂಪವಾಗಿತ್ತು. ಅಷ್ಟಾದರೂ ನನಗೊಂದು ಆಸೆ, ಈ ಕಷ್ಟದ ದಿನಗಳು ಮುಗಿದು ಏನೋ ಒಂದು ಒಳ್ಳೆಯದು ನನಗೂ ನಡೆಯುವುದೆಂದು! ನನ್ನ ನಂತರ ನನಗೆ ಒಬ್ಬ ತಮ್ಮ ಹುಟ್ಟಿದ್ದ, ಎಷ್ಟು ಕೆಂಪಗೆ ಎಷ್ಟು ಚೆಂದವಿದ್ದ. ಅಮ್ಮನಿಗಂತೂ ಅವನೆಂದರೆ ಉಸಿರು. ಆದರೆ ಅಚಾನಕನೆ ಅವನಿಗೊಂದು ಸಣ್ಣ ಜ್ವರ ಬಂದು ತೀರಿಹೋದ. ಅಷ್ಟು ಚಂದದ ಮಗುವನ್ನು, ಅಮ್ಮ ಅಪ್ಪನ ಪ್ರೇಮವನ್ನು ಪಡೆದ ಮಗುವನ್ನು ದೇವರು ವಾಪಸ್ ಕರಕೊಂಡು ನನ್ನನ್ನು ಉಳಿಸಿದ ಅಂದರೆ ಒಂದು ಕಾರಣವಂತೂ ಇದ್ದಿರಬೇಕಲ್ವಾ? ನನಗೆ ಯಾರೂ ದಿಕ್ಕಿಲ್ಲದಂತೆ ಮಾಡಿದ, ಯಾಕೆ? ಬಹುಶಃ ನನ್ನಂಥ ಹಲವಾರು ದಿಕ್ಕಿಲ್ಲದವರನ್ನು ನಾನು ನೋಡಬೇಕೆಂದು ದೇವರು ಬಯಸಿರಬೇಕಲ್ವಾ? ಹ್ಹಹ್ಹ .. ಎಲ್ಲ ನಂದೇ ಯೋಚನೆಗಳು, ಅಂತೂ ಇವು ನನ್ನನ್ನು ಸಾಯದಂತೆ ಕಾಯ್ದ ಆಲೋಚನೆಗಳು. ಇವತ್ತು ನಾ ಮುಂಬೈಯಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಅನ್ನೋ ಸಂಸ್ಥೆ ನಡೆಸ್ತೀನಿ. ಕಾಮಾಟಿಪುರದ ಎಷ್ಟೋ ಮಕ್ಕಳು ನನ್ನಲ್ಲಿ ಆಶ್ರಯ ಪಡೆದಿವೆ. ಅವರ ಓದು ಬರಹ ಎಲ್ಲ ಸಂಸ್ಥೆಯದ್ದೇ ಹೊಣೆ. ಬಹಳ ಜನ ಕೈಗೂಡಿಸಿದ್ದಾರೆ ಅಂತೂ.. ಈಗ ಬದುಕು ಬದಲಾಗ್ತಾ ಇದೆ” ಅಂದಿದ್ದಳು.

ಅವಳು ತನ್ನ ಹೃದಯದೊಳಗೆ ಅದಿನ್ನೆಷ್ಟು ಕನಸುಗಳನ್ನು ಹುಗಿದಿರಿಸಿದ್ದಳೋ ಏನೋ, ನಾನು ತಿಳಿದೋ ತಿಳಿಯದೆಯೋ ಅವಳ ಕನಸಿನ ತಿಜೋರಿಗೆ ಕೈಯಿಟ್ಟಿದ್ದೆ. ಅವಳು ಗಂಧರ್ವಲೋಕದ ಶಾಪಗ್ರಸ್ಥ ಅಪ್ಸರೆಯಂತೆ ಎಲ್ಲಿಗೂ ಸಲ್ಲದವಳಾಗಿ, ಒಂದು ಸಾಮಾನ್ಯ ಬದುಕಿನ ಕನಸೇ ಒಂದು ಅಸಾಮಾನ್ಯ ಕೈಗೆಟುಕಲಾರದ ಕನಸಾಗಿ ಬಿಟ್ಟ ದುರಂತವನ್ನು ಎದೆಯೊಳಗೆ ಬೈತಿರಿಸಿಕೊಂಡು ಸುಮ್ಮನೆ ಬದುಕುತ್ತಿದ್ದವಳ ಹೃದಯದ ಬಾಗಿಲನು ತಟ್ಟುವುದು ಮತ್ತು ಅಲ್ಲಿ ಬೆಳಕು ಹಚ್ಚುವ ಮಾತಾಡುವುದು ಎರಡೂ ಅವಳ ಪಾಲಿಗೆ ಅಪಾರವಾದದ್ದು. ನನ್ನಪಾಲಿಗೂ ಸಹಾ. ಅಭಿರಾಮಿಯನ್ನು ನಾನು ಪ್ರೀತಿಸಬಾರದಿತ್ತು. ತನ್ನ ಏಕಾಂತದೊಡನೆ ರಾಜಿಮಾಡಿಕೊಂಡಿದ್ದವಳ ಮೌನ ಮುರಿದವನು ನಾನು. ಈಗ ಅವಳ ಸಣ್ಣ ಪುಟ್ಟ ಕನಸುಗಳನ್ನೂ ಈಡೇರಿಸಲಾರದೇ ತಪ್ಪಿಸಿಕೊಳ್ಳುವುದು ಎಂಥ ದೊಡ್ಡ ಅಪರಾಧ. ಅವಳ ಬದುಕಿನ ಎಲ್ಲ ದುರಂತಗಳಿಗಿಂತ ದೊಡ್ಡ ದುರಂತ ಇದೇ ಇರಬೇಕು.

“ರಾಸ ನಾವು ರಾತ್ರಿಯೇ ಹೊರಟು ಬಿಡೋಣ, ನಾಳೆ ಬೆಳಗೆ ತಾಳಿ ಕೀಳುವುದು, ಬಳೆ ಒಡೆಯುವುದು, ಒಪ್ಪಾರಿಯಿಟ್ಟು ಅಳುವುದು, ನಾನಂತೂ ನೋಡಲಾರೆ, ಇವೊತ್ತೇ ಹೊರಟುಬಿಡುವ ಸರಿಯಾ?” ಮದುಮಗಳಂತೆ ಸಿಂಗರಿಸಿಕೊಂಡ ಅನೇಕಾನೇಕ ಕಿನ್ನರಿಯರು ಅರ್ಚಕನಿಂದ ತಾಳಿಕಟ್ಟಿಸಿಕೊಳ್ಳುವುದನ್ನೂ, ಸಂತೋಷದಿಂದ ನರ್ತಿಸುವುದನ್ನೂ ನೋಡುತ್ತಿದ್ದವನ ತೋಳು ಹಿಡಿದು ಕೇಳಿದ್ದಳು ಅಭಿರಾಮಿ. ಅವಳ ಮಾತಿಗೆ ನನ್ನದೂ ಒಪ್ಪಿಗೆಯಿತ್ತು. ನಾವು ಅವೊತ್ತೇ ರಾತ್ರಿ ಹೊರಟು ಪಾಂಡಿಚೆರಿಗೆ ಮರಳಿದ್ದೆವು. ರಾತ್ರಿ ಪಾಂಡಿಚೆರಿಗೆ ಮರಳಿದ ಮೇಲೆ ನಾನು ಅಭಿರಾಮಿಯನ್ನು ಅತೀವ ಮೋಹದಿಂದ ಮೋಹಿಸಿದೆ, ಪ್ರೇಮಿಸಿದೆ, ರಮಿಸಿ, ಲಾಲಿಸಿದೆ. ಅಂಥ ಪ್ರೇಮದ ಒಂದು ನಿರ್ಜರ ಘಳಿಗೆಯಲ್ಲಿ ಅಭಿರಾಮಿ ಕೇಳಿದಳು. “ನನ್ನನ್ನು ನೀನು ಮದುವೆ ಮಾಡಿಕೊಳ್ತೀಯ ರಾಸ?” ಆ ಘಳಿಗೆ ಹಾಗೇ ಅಲ್ಲೇ ಸ್ತಬ್ಧಗೊಂಡಿತು ನನ್ನ ಹೃದಯ ಮಿಡಿತದ ಜೊತೆಗೆ. ಆಕ್ಷಣ ಎಲ್ಲ ಸದ್ದುಗಳು ಮೌನದೊಳಗೆ ಮುಳುಗಿ ನಾನು ನಿರ್ವಾತವೊಂದರಲ್ಲಿ ಮುಳುಗಲಾರದೆ ತೇಲಲಾರದೆ ಸಿಲುಕಿರುವಂತೆ ತೋರಿತು. ಅಭಿರಾಮಿ ಹೃದಯವನ್ನು ಓದಬಲ್ಲವಳು. ಅವಳು ಹಠಾತ್ತನೆ ನಕ್ಕಳು. ನನ್ನ ಕೂದಲನ್ನು ಕೆದರಿ ನೆತ್ತಿಗೆ ಮುತ್ತಿಟ್ಟು ಕಿವಿಯಲ್ಲಿ ಉಸುರಿದಳು. “ಸುಮ್ನೆ ತಮಾಷೆಗೆ ಕೇಳಿದೆ ಅಷ್ಟೇ.” ಅವಳ ದನಿ ಭಾರದಲಿ ತೊಯ್ದಿತ್ತು. ಅವಳ ಕಂಗಳಿಂದ ಎರಡು ಬೆಚ್ಚನೆಯ ಹನಿಗಳು ನನ್ನ ಕಿವಿಯಂಚಿಗೆ ಇಳಿದು ಕೆನ್ನೆಯ ಮೇಲೆ ಹರಿದವು. ನನ್ನ ಕೆನ್ನೆ ಹೊಡೆಸಿಕೊಂಡಂತೆ ಉರಿಯಿತು. ನಾನು ಮಾತಾಡಲಾರದೆ ಅವಳನ್ನು ಸೆಳೆದು ತಬ್ಬಿದೆ. ಅವಳು ಲವ್ಯು ಅಂದಳು. ನಾನು “ತ್ತುಂಬ್ಬ” ಅಂದೆ. ಅಭಿರಾಮಿ ಕಣ್ಮುಚ್ಚಿ, ತುಟಿ ಬಿಗಿದು ದುಃಖ ನುಂಗಿದಳು. ನಾನು ಕಣ್ಣುಮುಚ್ಚಿ ಏನನ್ನೂ ನೋಡದೇ ಉಳಿದೆ. ಅಭಿರಾಮಿ ಏನಂದರೂ ಒಪ್ಪಬಹುದಿತ್ತು, ಆದರೆ ಮದುವೆ? ಅಭಿರಾಮಿಯ ಮೇಲೆ ನನಗೆ ಅಪಾರ ಪ್ರೀತಿಯಿತ್ತು. ಆದರೆ ಮನೆಯಲ್ಲಿ ಅಮ್ಮ, ಅಪ್ಪ, ತಂಗಿ ನಮ್ಮ ಅತಿ ದೊಡ್ಡ ಕುಟುಂಬ! ಹೇಗಾದರೂ ಒಪ್ಪಿಸುವುದು? ಯಾರಾದರೂ ಒಪ್ಪುತ್ತಾರೆಯೇ? ಅಕ್ಕನ ಗಂಡ ಏನಂದಾನು? ತಂಗಿ? ಅವಳ ಮದುವೆಯ ಪಾಡೇನು? ಹೇಗೇ ಯೋಚಿಸಿದರೂ ಇದು ಯಾವ ಕಾರಣಕೂ ಎಂದಿಗೂ ನಡೆಯಲಾರದ ಒಂದು ವಿಷಯವೆಂಬುವುದಷ್ಟೇ ನನ್ನ ಅರಿವಿಗೆ ಬರುತ್ತಿತ್ತು. ಅಭಿರಾಮಿಯ ತೋಳಿನಲ್ಲಿ ತಲೆಯಿಟ್ಟು ಮಲಗಿ ಸೂರು ನೋಡುತ್ತ ಉಳಿದವನಿಗೆ ನಿದ್ರೆಯೇ ಬಂದಿರಲಿಲ್ಲ. ಆ ಹೊಯ್ದಾಟದಲ್ಲಿ ಅದಿನ್ಯಾವಾಗ ನಿದ್ರೆ ಬಂತೋ, ಅಂತೂ ನಾ ಎಚ್ಚರಗೊಂಡಾಗ ಅಭಿರಾಮಿ ಅದಾಗಲೇ ಎದ್ದು ಸ್ನಾನ ಮಾಡಿ, ತೊಯ್ದಕೂದಲನು ಟವೆಲಿನಲಿ ಬಿಗಿದುಕೊಂಡು, ತಿಳಿಗುಲಾಬಿ ಬಣ್ಣದ ನೂಲಿನ ಸೀರೆಯುಟ್ಟು ನಿಂತಿದ್ದಳು. ಹೆಣ್ಣುಮಕ್ಕಳು ಮದುವೆಯ ಧಾರೆಯ ಸಮಯದಲಿ ತೊಡುವ ಅದೇ ನೂಲಿನಸೀರೆ! ಅವಳನ್ನು ಹಾಗೆ ಕಂಡು ನಾನು ಅವಾಕ್ಕಾಗಿದ್ದೆ. ಅವಳು ನನಗಾಗಿ ಬಹುನಿರೀಕ್ಷೆಯಿಂದ ಕಾದವಳಂತೆ ನಾನು ಎದ್ದದ್ದೇ ಎದೆಗೆ ಜೋತು ಕಡಲಾಗಿದ್ದಳು. ಮತ್ತೆ ಅಂತದ್ದೇ ಉನ್ಮತ್ತ ಘಳಿಗೆಯಲ್ಲಿ ನನ್ನ ತಲೆಗೂದಲಿನೊಳಗೆ ಬೆರಳು ನುಗ್ಗಿಸಿ ಬಿಗಿದು ಎದೆಗೆ ಸೆಳೆದುಕೊಂಡು ಕಿವಿಯ ಬಳಿ “ನನ್ನ ಮದುವೆ ಮಾಡಿಕೊಳ್ತೀಯ ಪ್ಲೀಸ್ ” ಎಂದು ಪಿಸುಗುಟ್ಟಿದ್ದಳು. ಅವಳ ದನಿ ಕಣ್ಣೀರಿನಲಿ ತೊಯ್ದಂತೆ ಆರ್ದವಾಗಿತ್ತು.
ಅವಳ ಮಾತಿಗೆ ನಾನು ಸುಮ್ಮನೆ “ಮ್ ” ಅಂದಿದ್ದೆ.
“ಯಾವಾಗ?” ಅವಳು ಮುಖವನ್ನು ಕೆಂದಾವರೆಯಾಗಿಸಿಕೊಂಡು ಕಾತುರದಿಂದ ಮುಖ ಅರಳಿಸಿ ನನ್ನ ಮುಖವನ್ನೇ ನೇರ ನೋಡುತ್ತ ಕೇಳಿದ್ದಳು.
“ಬೇಗ” ನಾನು ಮೆಲುವಾಗಿ ಹೇಳಿದ್ದೆ. ನನ್ನ ದನಿಯ ಭಾರ ಅವಳನ್ನು ತಾಕಿರಬೇಕು. ಅವಳು ನನ್ನನ್ನು ಹತ್ತಿರ ಸೆಳೆದು ಮುದ್ದಿಸುತ್ತ, ಮುದ್ದಿಸುತ್ತ ಮತ್ತೆ ಕಿವಿಯ ಬಳಿ ಪಿಸುಗುಟ್ಟಿದ್ದಳು. “ಸುಮ್ಮನೆ ಕೇಳಿದೆ, ತಮಾಷೆಗೆ ಅಷ್ಟೇ” ಹಾಗನ್ನುವಾಗ ಅವಳ ದನಿಯ ಭಾರ ನನ್ನೆದೆಯ ಮೇಲೆ ಕಲ್ಲುಗಳನ್ನು ಹೇರಿದಂತೆ ಕೂತಿತ್ತು.

ಅವಳ ಒದ್ದೆ ಕಂಗಳ ತೇವ ನನ್ನ ಕೆನ್ನೆಗಿಳಿದು ದಾಡಿಯೊಳಗೆ ಇಂಗಿತ್ತು. ಪತರಗುಟ್ಟುವ ಅವಳ ಪುಟ್ಟ ಎದೆಯ ಮಿಡಿತ ಜೀವಕ್ಕೆ ಹೋರಾಡುವ ಪತಂಗದ ರೆಕ್ಕೆಗಳಂತೆ ಫಡಫಡಿಸಿ ಮಿಡಿಯುತ್ತಿತ್ತು. ನಾನು ಅವಳನ್ನು ಪದಗಳಿಂದ ಸಮಾಧಾನಿಸಲಾರದೆ ನನ್ನೊಳಗೆ ಸೋಲುತ್ತಿದ್ದೆ. ಕಷ್ಟ ನಷ್ಟ ಅವಮಾನಗಳನ್ನು ಸಹಿಸಿದ್ದ ಹೃದಯ, ಪ್ರೇಮದ ಮೃದು ಸ್ಪರ್ಶಕೆ ಎಷ್ಟೊಂದು ದುರ್ಬಲಗೊಂಡಿತ್ತು! ಯಾವತ್ತೂ ನಗುನಗುತ್ತಲೇ ಇರುತ್ತಿದ್ದ ಅಭಿರಾಮಿ ಈಗ ಎಷ್ಟು ಬೇಗನೆ ಕಣ್ಣೀರಾಗುತ್ತಿದ್ದಳು! “ನೀನಿಲ್ಲದೆ ಬದುಕಿರಲಾರೆ ರಾಸ” ಅನ್ನುವ ಅಭಿರಾಮಿಯ ಬಗೆ ನನಗೆ ಭಯವಿತ್ತು, ನಾನು ಬೇರೆ ಯಾರನ್ನಾದರೂ ಮದುವೆಯಾದರೆ ಅಭಿರಾಮಿ ಉಳಿಯುವಳೇ ಜೀವಂತ ಎಂಬ ಭಯ. ನನ್ನ ಮೇಲಿನ ಪ್ರೀತಿಯಿಂದ ಅಭಿರಾಮಿ ಸಾಯದೇ ಉಳಿಯಬಹುದಿತ್ತು, ನನ್ನ ಮೇಲಿನ ಪ್ರೀತಿಯಿಂದಲೇ, ನನ್ನಿಂದ ದೂರ ಇರುವ ಸಂಕಟ ತಾಳಲಾರದೆ ಅಭಿರಾಮಿ ಸಾಯಲೂಬಹುದಿತ್ತು. ಅದೇ ಭಯದಲ್ಲಿ ನಾನು ಅಭಿರಾಮಿಯ ನುಣುಪು ಕತ್ತನ್ನು ನೇವರಿಸುತ್ತ ಮೆಲ್ಲಗೆ ಹೇಳಿದ್ದೆ “ಏನೇ ಆದರೂ ನಾನು ನಿನ್ನನ್ನು ದೂರ ಮಾಡುವುದಿಲ್ಲ ಅಭಿರಾಮಿ” “ಏನೇ ಆದರೂ ಅಂದರೆ? ನಾಳೆ ನಿನ್ನ ಮದುವೆಯಾದರೂ ಅಂತಲಾ?” ಅಭಿರಾಮಿ ನಕ್ಕಿದ್ದಳು. ಅವಳ ಕಂಗಳಲ್ಲಿ ಇಣುಕಿದ ನೀರು ಬೆಳಕಿಗೆ ಹೊಳೆದಿತ್ತು. ನಾನು ಉತ್ತರಿಸಲಾದರೆ ತಡವರಿಸಿದ್ದೆ. “ಹಾಗೆಲ್ಲ ಏನೂ ಬೇಡಪ್ಪಾ, ಇನ್ನೂ ಏನೂ ಅಲ್ಲದ ನಮ್ಮ ಈ ಸಂಬಂಧದಲ್ಲೇ ನನ್ನಿಂದ ನಿನ್ನನ್ನು ಬೇರೆ ಯಾರೊಂದಿಗೂ ಊಹಿಸಿಕೂಡ ನೋಡಲಾರದಷ್ಟು ಪೊಸೆಸಿವ್ನೆಸ್ ಕಾಡುತ್ತೆ. ನನಗೇ ಹಾಗಿರುವಾಗ,ನಾಳೆ ನಿನ್ನನ್ನು ಮದುವೆಯಾಗುವ ಹುಡುಗಿಗೆ ನಿನ್ನ ಜೊತೆ ನನ್ನ ಸಂಬಂಧ ತಿಳಿದರೆ ಎಷ್ಟು ನೋವಾಗಲಿಕ್ಕಿಲ್ಲ? ನನ್ನ ರಾಜ ನೀನು, ಯಾರೆದುರೂ ತಲೆ ತಗ್ಗಿಸಿ ನಿಲ್ಲಬಾರದು ನೀನು, ನನ್ನದೇನಿದೆ ಹೆಚ್ಚೆಂದರೆ ಈ ಸಣ್ಣಪುಟ್ಟ ಆಸೆಗಳ ಹೊರತಾಗಿ? ನಮ್ಮದೂ ಅಂತ ಒಂದು ಮಗುವನ್ನು ಕೂಡ ಹೆರಲಾರದವಳು ನಾನು. ಆದರೆ ನಂಗೂ ಏನೇನೋ ಕನಸುಗಳು, ಅದು ಪರವಾಗಿಲ್ಲ, ನಿಧಾನಕೆ ಸರಿಯಾಗಬಹುದು, ಇಟ್ಸ್ ಒಕೆ” ಅಂದಿದ್ದಳು. ನನ್ನ ಅಭಿರಾಮಿ. ದೇವರೇ, ನಾನೆಷ್ಟು ಅಸಹಾಯಕನಾಗಿದ್ದೆ.

ಅವಳ ಒದ್ದೆ ಕಂಗಳ ತೇವ ನನ್ನ ಕೆನ್ನೆಗಿಳಿದು ದಾಡಿಯೊಳಗೆ ಇಂಗಿತ್ತು. ಪತರಗುಟ್ಟುವ ಅವಳ ಪುಟ್ಟ ಎದೆಯ ಮಿಡಿತ ಜೀವಕ್ಕೆ ಹೋರಾಡುವ ಪತಂಗದ ರೆಕ್ಕೆಗಳಂತೆ ಫಡಫಡಿಸಿ ಮಿಡಿಯುತ್ತಿತ್ತು. ನಾನು ಅವಳನ್ನು ಪದಗಳಿಂದ ಸಮಾಧಾನಿಸಲಾರದೆ ನನ್ನೊಳಗೆ ಸೋಲುತ್ತಿದ್ದೆ. ಕಷ್ಟ ನಷ್ಟ ಅವಮಾನಗಳನ್ನು ಸಹಿಸಿದ್ದ ಹೃದಯ, ಪ್ರೇಮದ ಮೃದು ಸ್ಪರ್ಶಕೆ ಎಷ್ಟೊಂದು ದುರ್ಬಲಗೊಂಡಿತ್ತು! ಯಾವತ್ತೂ ನಗುನಗುತ್ತಲೇ ಇರುತ್ತಿದ್ದ ಅಭಿರಾಮಿ ಈಗ ಎಷ್ಟು ಬೇಗನೆ ಕಣ್ಣೀರಾಗುತ್ತಿದ್ದಳು! “ನೀನಿಲ್ಲದೆ ಬದುಕಿರಲಾರೆ ರಾಸ” ಅನ್ನುವ ಅಭಿರಾಮಿಯ ಬಗೆ ನನಗೆ ಭಯವಿತ್ತು, ನಾನು ಬೇರೆ ಯಾರನ್ನಾದರೂ ಮದುವೆಯಾದರೆ ಅಭಿರಾಮಿ ಉಳಿಯುವಳೇ ಜೀವಂತ ಎಂಬ ಭಯ. ನನ್ನ ಮೇಲಿನ ಪ್ರೀತಿಯಿಂದ ಅಭಿರಾಮಿ ಸಾಯದೇ ಉಳಿಯಬಹುದಿತ್ತು, ನನ್ನ ಮೇಲಿನ ಪ್ರೀತಿಯಿಂದಲೇ, ನನ್ನಿಂದ ದೂರ ಇರುವ ಸಂಕಟ ತಾಳಲಾರದೆ ಅಭಿರಾಮಿ ಸಾಯಲೂಬಹುದಿತ್ತು.

ಅದೇ ಕೊನೆ; ಮತ್ತೆಂದೂ ಅಭಿರಾಮಿ ಮದುವೆಯ ಮಾತನ್ನೇ ಎತ್ತಿರಲಿಲ್ಲ. ನಾವು ಚೆನ್ನೈಗೆ ಮರಳಿದ ಮೇಲೆ ಮತ್ತೆ ಮತ್ತೆ ಏನಾದರೂ ನೆಪಹೂಡಿ ಪಾಂಡಿಚೆರಿಗೆ ಹೋಗುವುದು ತಂಗುವುದು ನಮಗೆ ವಾಡಿಕೆಯಾಗಿ ಹೋಗಿತ್ತು. ಇತ್ತ ಇಬ್ಬರ ನಡುವಿನ ಪ್ರೇಮ ಬೆಳೆಯುತ್ತ ಸಾಗಿದ್ದರೆ ಅತ್ತ ಮನೆಯಲ್ಲಿ ಮದುವೆಯ ಒತ್ತಡವೂ ಹೆಚ್ಚತೊಡಗಿತ್ತು. ಅಭಿರಾಮಿಯೇನೋ ಮದುವೆಯ ಕುರಿತಾಗಿ ನನ್ನಲ್ಲಿ ಏನನ್ನೂ ಕೇಳದೆ, ಏನೂ ಹೇಳದೆ ಉಳಿದ್ದಿದ್ದಳೇನೋ ನಿಜವೇ. ಆದರೆ ಅವಳೊಳಗಿನ ಕನಸುಗಳನ್ನೂ ಆಸೆಗಳನ್ನೂ ತನ್ನೊಳಗೇ ಜೀವಂತ ಹುಗಿತು ಗೋರಿಕಟ್ಟಲಾರದೆ ಅವಳು ತಲ್ಲಣಿಸುತ್ತಿರುವುದು ನನಗೆ ಅರಿವಾಗುತ್ತಿತ್ತು. ನಾನಾದರೂ ಅವಳನ್ನು ಕುರಿತು ಪರಿತಪಿಸದ ಹಗಲು ರಾತ್ರಿಗಳೇ ಇರಲಿಲ್ಲ. ‘ಏನು ಮಾಡುವುದು, ಅಭಿರಾಮಿಯನ್ನು ಮದುವೆಯಾಗಲು ಮನೆಯಲ್ಲಿ ಒಪ್ಪುವರೆ? ಏನಾದೀತು ಮುಂದೆ? ಹೇಗೆ ಮುಂದಿನ ನಿರ್ಧಾರವೆಂಬ ಯೋಚನೆಯಲ್ಲಿ ನನ್ನ ರಾತ್ರಿಗಳು ಉರಿದು ಕರಕಲಾಗುತ್ತಿದ್ದವು. ಕೆನ್ನೆ ಒಳಕ್ಕಿಳಿದು ಕಣ್ಣ ಸುತ್ತ ಕಪ್ಪು ಸುತ್ತಿ “ರಾಸ, ಯಾಕಿಷ್ಟು ಡಲ್ ಆಗಿದೀಯ? ಏನಾಯ್ತು? ಚೆನ್ನಾಗಿ ಊಟ ಮಾಡ್ತಾ ಇದೀಯ? ನಿದ್ರೆ? ಏನು ಚಿಂತೆ? ಕೆಲಸದ್ದಾ? ನಾನೇನಾದರೂ ಟೆನ್ಶನ್ ಕೊಡ್ತಾ ಇದೀನ? ನನ್ನ ಬಗೆಯೇನಾದರೂ ಯೋಚಿಸ್ತ ಇದೀಯ? “ಅಭಿರಾಮಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಳು. ನಾನು ಹಾರಿಕೆಯ ಉತ್ತರ ಕೊಡುತ್ತಿದ್ದೆ. ಅವಳು ಸೂಕ್ಷ್ಮಮತಿ. ಇಂಥದ್ದೇ ಒಂದು ಇಳಿಸಂಜೆ ಯಾವೊಂದು ಮುನ್ಸೂಚನೆಯೂ ಕೊಡದೆ, ಏನೊಂದನ್ನೂ ಹೇಳದೆ ಮೊಬೈಲ್ ಆಫ್ ಮಾಡಿಕೊಂಡು ಡ್ಯಾನ್ಸ್ ಸ್ಕೂಲ್ ಕ್ಲೋಸ್ಡ್ ಬೋರ್ಡ್ ತಗುಲಿಸಿ, ಮನೆ ಬಾಡಿಗೆಗೆ ಬಿಟ್ಟು ಅಭಿರಾಮಿ ಎದ್ದುಹೋಗಿದ್ದಳು. ಇದೇ ಈಗ ಅಂಗಳದಲ್ಲಿ ಬಾಲ ಕುಣಿಸುತ್ತ, ಕಾಳುಹೆಕ್ಕುತ್ತ, ಕಣ್ಣಹಬ್ಬವಾಗಿದ್ದ ಮುದ್ದುಹಕ್ಕಿ ಸದ್ದು ಮಾಡದೆ ಹಾರಿಹೋದಂತೆ ಹಾರಿಹೋಗಿದ್ದಳು. ಅವಳನ್ನು ಕಾಣದೆ ನಾನು ಪರಿತಪಿಸಿದ್ದೆ ಆದರೆ ಎಲ್ಲೋ ಅಂತರಾಳದಲ್ಲಿ ಸ್ವಲ್ಪ ಹಗೂರೆನಿಸಿತ್ತೆಂಬುವುದನ್ನು ನಾನು ಎಂದಿಗೂ ತಳ್ಳಿಹಾಕಲಾರೆ. ನನಗಿದ್ದ ದೊಡ್ಡ ಭಯ ಅಭಿರಾಮಿ ಜೀವಕ್ಕೇನಾದರೂ ಅಪಾಯ ಮಾಡಿಕೊಂಡಳೇ ಎಂಬುದಾಗಿತ್ತು. ಆದರೆ ಅವಳು ಮನೆ ಬಾಡಿಗೆಗೆ ಬಿಟ್ಟು ಹೋಗಿರುವುದು ಕಂಡರೆ ಆ ಸಾಧ್ಯತೆ ಕಡಿಮೆಯಿತ್ತು. ಆದರೆ ನಾನಿರದೆ ಹೇಗಿರುವಳೋ.. ಎಂಬ ತಪನೆ ಈ ಎಂದಿಗೂ ಇತ್ತು. ಅಭಿರಾಮಿ ಯಾವತ್ತೂ ಹೇಳುತ್ತಿದ್ದಳು. ಮದುವೆಯಾಗುವ ಹುಡುಗಿಯನ್ನು ಒಮ್ಮೆಯೂ ನೋಯಿಸದಂತೆ ನೋಡಿಕೋ ಎಂದು. ಇದು ಅವಳು ನನ್ನನ್ನು ತೊರೆದು ಹೋದುದರ ಆಶಯವಾಗಿತ್ತು. ‘ನೀನು ಮದುವೆಯಾಗುವುದು, ಮತ್ತು ಎಲ್ಲರಂತೆ ಬದುಕುವುದು. ಅದು ನಿನ್ನ ಹಕ್ಕು, ನಿನ್ನ ಮೇಲೆ ನಿನ್ನ ಮನೆಯವರು ಕಟ್ಟಿರುವ ಕನಸುಗಳು ನಿನ್ನ ಜವಾಬ್ದಾರಿ ಅಂದುಕೊ, ನೀನು ಎಲ್ಲರಂತೆ ಮದುವೆಯಾಗಿ ಚೆನ್ನಾಗಿರು, ಒಂದು ವೇಳೆ ದೇವರು ಬಯಸಿದರೆ ನಮಗೂ ಒಂದು ದಾರಿ ಸಿಗುತ್ತದೆ. “ಅಭಿರಾಮಿ ನನ್ನನ್ನು ಎಷ್ಟೋಬಾರಿ ಹೀಗೆ ಸಂತೈಸಿದ್ದಳು. ಕಡೆಗೆ ನನಗಾಗಿಯೇ ನನ್ನನ್ನು ಬಿಟ್ಟು ಹೋಗಿದ್ದಳು. ಹಾಗೆ ಹೋಗಿ ಅವಳು ನನ್ನ ಬದುಕಿನ ಏಕತ್ರ ಧ್ಯಾನವಾದಳು. ನಾನು ನನ್ನ ಬದುಕನ್ನು ನನ್ನ ಕರ್ತವ್ಯದಂತೆ ಜವಾಬ್ದಾರಿಯಂತೆ ನಿಭಾಯಿಸುತ್ತ ನಡೆಯುತ್ತಿದ್ದುದ್ದಕೆ ನನ್ನೊಳಗೆ ಶಕ್ತಿಯಂತೆ ಉಳಿದ್ದಿದ್ದಳು ಅಭಿರಾಮಿ. ಅವಳು ತೊರೆದ ಮೇಲೂ ನಾನು ಪ್ರತಿವರ್ಷವೂ ಕೂವಗಂಜಾತ್ರೆಗೆ ಹೋಗಿಯೇ ತೀರಿದ್ದೆ. ಅಲ್ಲಿ ಅವಳನ್ನು ಕಂಡಿರಲಿಲ್ಲ. ಇದೇ ಈ ವರ್ಷ, ಅವಳ ಗೆಳತಿ ನೀಲಿಮಾ ಸಿಕ್ಕಿದ್ದಳು. ಅವಳು ಕೊಟ್ಟ ಮಾಹಿತಿ ಹಿಡಿದು ಇಂದು ಇಷ್ಟು ದೂರ ಬಂದು ಅಭಿರಾಮಿಯ ಡ್ಯಾನ್ಸ್ ಸ್ಕೂಲಿನ ವೆರಾಂಡದಲ್ಲಿ ಅವಳಿಗಾಗಿ ಕಾಯುತ್ತ ಕುಳಿತಿದ್ದೇನೆಂದರೆ ದೇವರು ನನ್ನನ್ನು ಸೃಷ್ಟಿಸಿದ ಉದ್ದೇಶ ಏನಿರಬೇಕು.

ಅಭಿರಾಮಿ ನನ್ನ ನೆನಪಿಟ್ಟಿದ್ದಳೋ ಇಲ್ಲ ಹೊಸಬದುಕು ಕಟ್ಟಿಕೊಂಡಿದ್ದಾಳೋ.. ಅವಳು ಈಗ ನನ್ನ ಕಂಡರೆ ಹೇಗೆ ಪ್ರತಿಕ್ರಿಯಿಸಬಹುದು. ಅವಳ ನೆಮ್ಮದಿಯ ಗೂಡಿಗೆ ಮತ್ತೆ ಬೆಂಕಿ ಇಡುತ್ತಿದ್ದೀನೋ, ಅಡ್ರೆಸ್ ಸಿಕ್ಕಿದೊಡನೇ ಹೊರಟು ಬಂದೇ ಬಿಟ್ಟಿದ್ದೆ. ದಾರಿಯಲ್ಲಿ ಕಾಡಿದ್ದು ಅವಳನ್ನು ಕಾಣಬೇಕೆನ್ನುವ ಪರಿತಪನೆ. ಈಗ ಇಲ್ಲಿರುವುದು ಎದೆ ಹಿಂಡುತ್ತಿರುವ ಯಾತನೆ. ಅವಳು ಏನ್ನೆನ್ನಬಹುದು ಅನ್ನುವುದಕ್ಕಿಂತ ಈ ಭೇಟಿಯಿಂದ ಅವಳಿಗೆ ಏನಾಗಬಹುದು? ಎಂಬ ಚಿಂತೆ ಕಾಡಿ ಎದೆ ಹಿಂಡತೊಡಗಿತ್ತು. ಭಾವ ತೀವ್ರತೆಗೆ ಸಿಲುಕಿ ಅಭಿರಾಮಿಯನ್ನು ಕಾಣಲೇಬೇಕೆಂದು ನಿಂತ ಕಾಲಿನಲಿ ಹೊರಟು ಬಂದವನಿಗೆ ಈಗ ನೇರಾನೇರ ಅವಳದೇ ಸ್ಥಳದಲ್ಲಿ ನಿಂತಮೇಲೆ ಯಾತರ ಹಿಂಜರಿಕೆಯೋ ತಿಳಿಯದಾಗಿತ್ತು. ನಮ್ಮ ನಡುವೆ ಇದ್ದದ್ದು ಒಂದು ಬಾಗಿಲು ಮಾತ್ರವೇ? ನೂಕಿ ಒಳಹೋಗಲು? ಹಾಗಾದರೆ ಸರಿದ ಮೂರೂವರೆ ವರ್ಷಗಳ ಲೆಕ್ಕವೇನು? ನೋವೆಂಬುದು ಪಡೆದ ಪ್ರೀತಿಗೆ ಕಟ್ಟುವ ಕಂದಾಯವೇ? ಈ ಭೇಟಿ ಅಭಿರಾಮಿಯ ಬದುಕನ್ನು ಮತ್ತೆ ಕಡಲಿಗೆ ಎಳೆತಂದು ಹಾಯಿ ಹರಿದ ದೋಣಿಯಲ್ಲಿ ಕುಳ್ಳಿರಿಸಿ ನೋಡುವ ಸಾಹಸವೇ? ಅವಳದೇ ಗತಿಯಲ್ಲಿ ಹೊಸತೊಂದು ನೆಲೆಯತ್ತ ಹೊರಟಿರುವಂತೆ ಕಾಣುವವವಳ್ನು ಅವಳ ಬದುಕಿನೊಂದಿಗೆ ಹಾಗೆಯೇ ಬಿಟ್ಟು ಹೊರಟು ಬಿಡಲೇ? ಮನಸು ಸಂಘರ್ಷಕೆ ಇಳಿಯಿತು. ಕುಳಿತಲ್ಲಿಂದ ಎದ್ದು ಅವಳ ಚಿತ್ರದ ಮೇಲೆ, ಅವಳ ನವುರಾದ ಕೆನ್ನೆಗಳ ಮೇಲೆ ಕೈಯಾಡಿಸಿದೆ. ಅವಳ ಕಾಲುಗಳ ಗೆಜ್ಜೆಗಳನ್ನು ಸವರಿದೆ, ಆಗ ಕಂಡೆ! ಪಟದ ಕೊನೆಯಲ್ಲಿ ಕೆಳಗೆ ಚಿಕ್ಕದಾಗಿ ಬರೆದ ಅವಳ ಹೆಸರು, ಮತ್ತು
ವಿಳಾಸ.
ಅಭಿರಾಮಿ. ವೈಫ್ ಆಫ್……..
ಅಲ್ಲಿತ್ತು ನನ್ನ ಹೆಸರು.
ನಾನು ಬಾಗಿಲಿನ ಮುಂದೆ ಕೂತು ಬಿಕ್ಕಿಬಿಕ್ಕಿ ಅಳತೊಡಗಿದೆ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)