”ಅಶೋಕ ಚಕ್ರವರ್ತಿ ಸಾಲು ಮರಗಳನ್ನು ನೆಡಿಸಿದ. ಅಂತೆಯೇ ಶಾಸನಗಳನ್ನು ಕೆತ್ತಿಸಿದ. ಈ ಶಾಸನಗಳೆ ನಮ್ಮ ಭಾಷೆಯ ಮೂಲ ಲಿಪಿಯಾಗಿವೆ’ ಎಂದು ಸಣ್ಣವರಿದ್ದಾಗ ಇತಿಹಾಸ ಓದುತ್ತಿದ್ದ ನೆನಪು. ಇತಿಹಾಸ ಅರಿಯದ ನಮ್ಮ ಹಿಂದಿನ ತಾಯಂದಿರು ಮಕ್ಕಳು ಹುಟ್ಟಿದಾಗ ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು’ ಎಂದು ಕಿವಿಯಲ್ಲಿ ಹೇಳುತ್ತಿದ್ದರಂತೆ. ಇದನ್ನು ಬಗೆದು ನೋಡಿದಾಗ ಕೂಡಿ ಬಾಳುವ ಸೊಗಸನ್ನು ಒಂದು ನೀರಿನ ಸೆಲೆಯಲ್ಲಿ ನಮ್ಮ ಹಿರಿಯರು ಗುರುತಿಸುತ್ತಿದ್ದುದ್ದನ್ನು ನಾವು ನೆನೆಯಬಹುದು”
ಸುಜಾತಾ ತಿರುಗಾಟ ಕಥನ.

 

ಎಲ್ಲಿಂದಲೋ ಹರಿಯುವ ನದಿ ಎಲ್ಲಿಗೋ ತಲುಪುವ ಹಾಗೆ ಮನುಷ್ಯನ ನಡಿಗೆಯಿಂದ ಹೊರಟ ಪಯಣ ನದಿಯ ದಡದಲ್ಲಿ ಸಾಗುತ್ತ ಸಾಗುತ್ತ ನಾಗರೀಕತೆಯ ಎಳೆಯನ್ನು ಹಿಡಿಯುತ್ತ ನೇಯುತ್ತ ನಾಗರೀಕತೆಯ ಸೊಗಸನ್ನು ತನಗೆ ಬೇಕಾದ ಜಾಗದಲ್ಲಿ ಊರುತ್ತ ಸಾಗುತ್ತದೆ. ಅಮೇರಿಕಾ ವಸಾಹತುಗಾರರ ದೇಶ. ಇಲ್ಲಿಗೆ ವಲಸೆ ಬಂದವರೇ ಅಮೇರಿಕಾ ಸಂಯುಕ್ತ ಸಂಸ್ಥಾನವನ್ನು ಕಟ್ಟಿದವರು.

ಇಂತಿಪ್ಪ ೫೦ ರಾಜ್ಯಗಳಿರುವ ಅಮೇರಿಕಾದಲ್ಲಿ ಟೆಕ್ಸಾಸ್ ದೊಡ್ಡ ರಾಜ್ಯ. ಇಲ್ಲಿನ ಮೂಲ ನಿವಾಸಿಗಳು ಆಹಾರಕ್ಕಾಗಿ ದನಗಳನ್ನು ( ಬಫೆಲೋ) ಬೇಟೆಯಾಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ನಂತರ ದನದ ಚರ್ಮ, ಕೋಡು, ಮೂಳೆಗಳನ್ನು ಉಪ ಉತ್ಪನ್ನಗಳಾಗಿ, ಉಡುಗೆ ತೊಡುಗೆಯಾಗಿ ಬಳಸುತ್ತಿದ್ದರು.

ಯೂರೋಪ್ ಹಾಗು ಸ್ಪ್ಯಾನಿಶ್ ಹಾಗೂ ಇತರೆ ವಲಸಿಗರು ಇಲ್ಲಿಗೆ ಬಂದಾಗ ಈ ಪಶು ಸಮೃದ್ಧಿಯನ್ನು ನೋಡಿದ್ದೆ ಆಸೆ ಬಿದ್ದರು. ಇಲ್ಲಿನ ಸಮೃದ್ಧ ಬಫೆಲೋಗಳನ್ನು ಬೇಕಾಬಿಟ್ಟಿ ಬೇಟೆ ಮಾಡತೊಡಗಿದರು. ಇದರಿಂದ ವಾಣಿಜ್ಯ ಉದ್ದೇಶ ಅವರಲ್ಲಿ ಬಲಿಯತೊಡಗಿ, ಟೆಕ್ಸಾಸ್ ನ ಫೋರ್ಟ್ ವರ್ಥ್ ನಲ್ಲಿ ಅವರು ಇಳಿದುಕೊಂಡರು. ಕ್ರಮೇಣ ಅಲ್ಲಿ ಒಂದು ಜಾಗತಿಕ ದನದ ಮಾರುಕಟ್ಟೆಯನ್ನು ಸೃಷ್ಟಿಸಿದರು. ಅದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಜಗತ್ತಿನಲ್ಲೇ ಒಂದು ಚರ್ಮದ ಉತ್ಪನ್ನಗಳ ಹಾಗೂ ಮಾಂಸದ ದೊಡ್ಡ ಉತ್ಪಾದನೆಯ ಕೇಂದ್ರವಾಯಿತು.

ಅಲ್ಲಿವರೆಗೂ ರೆಡ್ ಇಂಡಿಯನ್ಸ್ ಸಾಕುತಿದ್ದ ಪಶು ಸಂಗೋಪನೆಯ ಮೇಲೆ ಬ್ರಿಟಿಷರ ಅಧಿಕಾರ ಸ್ಥಾಪನೆಯಾಯಿತು. ಸಾಗಣೆಗೆ ರೈಲು ಹಳಿಗಳು ಬಂದು ಹರಿದವು. ಅಲ್ಲಿನ ಕೆಂಪು ನದಿ ಮಾರ್ಗಗಳಲ್ಲಿ ಸಂಚಾರ ಶುರುವಾಯಿತು. ಬೇರೆ ಬೇರೆ ದೇಶದ ತಳಿಗಳನ್ನು ತಂದು ಹೊಸ ಹೊಸ ಭಾರೀ ಗಾತ್ರದ ದನಗಳು ಸೃಷ್ಟಿಯಾದವು. ಈಗಿರುವ ಬ್ರಾಹ್ಮಿನ್ ತಳಿಯೂ ನಮ್ಮ ಏಷ್ಯಾದಿಂದ ಕೊಂಡು ಹೋಗಿ ಮಾಡಿದ ಮಿಶ್ರ ತಳಿ. ಆರ್ಯನ್ ರದ್ದು ಇರಬಹುದೋ ಏನೋ? ಹೆಸರು ನೋಡಿದಾಗ ನಮಗೆ ಹಾಗನ್ನಿಸಿತು. ಇದನ್ನು ಅಮೇರಿಕಾ ನಿವಾಸಿಯಾದ ನಮ್ಮ ಸ್ನೇಹಿತ ರೆಡ್ಡಿಯವರು ನಿಜವೆಂದು ಅದರ ವಿವರಣೆ ಹೇಳಿದರು.

ಹೀಗೆ ಮೂಲ ಕಾಡು ನಿವಾಸಿಗಳ ಹಸಿವು ನೀಗಿಸುತ್ತಿದ್ದ ಈ ಬಫೆಲೋಗಳು ನಾಗರೀಕರ ಕೈ ಹಿಡಿತಕ್ಕೆ ಬಂದು ದೇಹದ ಆವಯವಗಳು ಬೇರೆ ಬೇರೆಯಾಗಿ, ಚರ್ಮ, ರಿಬ್ಸ್, ಮಾಂಸ, ಹೀಗೆ ಮಾರುಕಟ್ಟೆ ಸೃಷ್ಟಿಸಿಕೊಂಡವು. ಚರ್ಮದ ನಾನಾ ಜೀನುಗಳು, ಚೀಲಗಳು, ಉಡುಗೆಗಳು, ದೋಣಿ ಕಟ್ಟುಗಳು, ಕುದುರೆ ಜೀನುಗಳು ವೈವಿಧ್ಯಮಯ ಸೃಷ್ಟಿಯನ್ನು ಪಡೆದವು. ಹೀಗೆ ಈ ವೈವಿಧ್ಯಮಯ ದೇಹದ ಅಂಗಗಳು ಫೋರ್ಟ್ ವರ್ಥ್ ನಿಂದ ಕೆಂಪು ನದಿಯನ್ನು ದಾಟಿಸಿ 1866 ರಿಂದ 1890 ರವರೆಗೆ 40 ಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಶೋಕಿಯ ಜನರ ಬಂಡವಾಳವನ್ನಾಗಿ ಸಾಗಿಸಲಾಯ್ತು ಎಂಬ ದಾಖಲಾತಿಯಿದೆ. 1876 ರ ರೈಲು ಸಂಪರ್ಕವಾದ ಮೇಲೆ ಇದು ಬಹು ಮುಖ್ಯ ವಾಣಿಜ್ಯ ಕೇಂದ್ರವಾಗಿತ್ತು.

87 ರಲ್ಲಿ ‘ಯೂನಿಯನ್ ಸ್ಟಾಕ್ ಯಾರ್ಡ್’ ಎನ್ನುವ ಸ್ಥಳ ಇಲ್ಲಿ ನಿರ್ಮಾಣವಾಯಿತು. ಈ ಕಂಪೆನಿಗೆ ಸಾಕಷ್ಟು ಬಂಡವಾಳದ ಕೊರತೆಯಿದ್ದ ಕಾರಣ ಇಲ್ಲಿನ ಅಧ್ಯಕ್ಷರು ನೆರೆಯ ಬೋಷ್ಟನ್ ರಾಜ್ಯದ ಬಂಡವಾಳಗಾರ ‘ಗ್ರೀನ್ಲೀಪ್ ಸಿಂಪ್ಸನ್’ ನವರನ್ನು ಆಹ್ವಾಸಿದಾಗ 1.33 ಲಕ್ಷ ಡಾಲರ್ ಹೂಡಿಕೆಯಲ್ಲಿ ಅವರು ಇಲ್ಲೇ ಮಾಂಸ ಸಂಸ್ಕರಣಾ ಘಟಕಗಳನ್ನು ಆರಂಭಿಸಿದರು. ಇದಕ್ಕೆ ಬೇರೆ ಬೇರೆ ಕಂಪೆನಿಗಳು ಜೊತೆಯಾದವು. ಮಾಂಸ ಉದ್ಯಮ ಪ್ರವರ್ಧಮಾನಕ್ಕೆ ಬಂತು. ಆ ಕಾಲಕ್ಕೆ ಇದು ‘ವಾಲ್ ಸ್ಟ್ರೀಟ್ ಆಫ್ ದ ವೆಸ್ಟ್’ ಎಂದು ಪ್ರಸಿದ್ಧಿಯಾಗಿತ್ತು.

ಈ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಂದಾಗಿ 1911 ರ ವೇಳೆಗೆ ಇಲ್ಲಿ ‘ನೈಲ್ಸ್ ಸಿಟಿ’ ಎಂಬ ನಗರವೇ ನಿರ್ಮಾಣವಾಯಿತು. ಆ ನಂತರ 44ರ ವೇಳೆಗೆ ಸಣ್ಣ ಉದ್ಯಮದಾರರು ಅವರವರ ಊರುಗಳಲ್ಲೇ ವಾಣಿಜ್ಯ ಕೇಂದ್ರಗಳನ್ನು ತೆಗೆಯಲಾಗಿ ಮಾಂಸೋದ್ಯಮ ನಿಧಾನಗತಿಯಲ್ಲಿ ಇಳಿ ಮುಖವಾಗಿ ಲಾಭವಿಲ್ಲದೆ ತತ್ತರಿಸತೊಡಗಿತು. ಆಗ ಇಲ್ಲಿಯ ಕಂಪೆನಿಗಳು 1960- 70 ರ ವೇಳೆಗೆ ಮುಚ್ಚಿಕೊಂಡವು. ಈ ಉದ್ಯಮದ ಬೆಳವಣಿಗೆ ಹಾಗೂ ಇಳಿಮುಖದ ಹಿನ್ನೆಲೆಯಲ್ಲಿ, ನಾರ್ಥ್ ಫೋರ್ಟ್ ವರ್ಥ್ ನಲ್ಲಿ ಮಾಂಸ ಉದ್ಯಮದ ಉಗಮ ಹಾಗೂ ಹಳೆಯ ಇತಿಹಾಸವನ್ನು ಪರಿಚಯಿಸಲು “ಸ್ಟಾಕ್ ಯಾರ್ಡ್ ಮ್ಯೂಸಿಯ್ಂ” ಸ್ಥಾಪನೆಯಾಯಿತು. ಇದು ಜಗತ್ತಿನ ದನಗಳ ಪರಿಕರಕ್ಕೆ ಸಂಬಂಧಿಸಿದ ಏಕೈಕ ಮ್ಯೂಸಿಯ್ಂ.

ರೆಡ್ ಇಂಡಿಯನ್ಸ್ ಸಾಕುತಿದ್ದ ಪಶು ಸಂಗೋಪನೆಯ ಮೇಲೆ ಬ್ರಿಟಿಷರ ಅಧಿಕಾರ ಸ್ಥಾಪನೆಯಾಯಿತು. ಸಾಗಣೆಗೆ ರೈಲು ಹಳಿಗಳು ಬಂದು ಹರಿದವು. ಅಲ್ಲಿನ ಕೆಂಪು ನದಿ ಮಾರ್ಗಗಳಲ್ಲಿ ಸಂಚಾರ ಶುರುವಾಯಿತು. ಬೇರೆ ಬೇರೆ ದೇಶದ ತಳಿಗಳನ್ನು ತಂದು ಹೊಸ ಹೊಸ ಭಾರೀ ಗಾತ್ರದ ದನಗಳು ಸೃಷ್ಟಿಯಾದವು. ಈಗಿರುವ ಬ್ರಾಹ್ಮಿನ್ ತಳಿಯೂ ನಮ್ಮ ಏಷ್ಯಾದಿಂದ ಕೊಂಡು ಹೋಗಿ ಮಾಡಿದ ಮಿಶ್ರ ತಳಿ.

ಇಲ್ಲಿ ಹಾಲಿನ ಹಾಗೂ ಮಾಂಸದ ತೂಕದ ಅಳತೆಯ ಮಾಪನಗಳಿಂದ ಹಿಡಿದು, ದನದ ಚಾಟಿ, ಕೌಬಾಯ್ ಗಳ ವೇಷಭೂಷಣ ತಲೆಯ ಟೊಪ್ಪಿಯವರೆಗೂ…. ಆಗ ಬಳಕೆಯಾದ ನಾಣ್ಯ ಚಲಾವಣೆ, ಅದನ್ನು ಠಂಕಿಸುತ್ತಿದ್ದ ಕಬ್ಬಿಣದ ಅಚ್ಚೊತ್ತುಗಳು, ಚರ್ಮ ಹಾಗೂ ಕಾಗದದ ವಿನಿಮಯದ ವೈವಿಧ್ಯಗಳು, ಈ ಉದ್ಯಮದ ಜೊತೆ ಸಂಬಂಧಿಸಿದ ಹಣಕಾಸು ವಹಿವಾಟಿನ ಸಣ್ಣ ಸಣ್ಣ ಯಂತ್ರಗಳು, ಚಿತ್ರಗಳು, ಫೋಟೋಗಳು, ಬುಡಕಟ್ಟಿನ ಉಡುಗೆಗಳು, ವೇಷಾಭರಣಗಳು, ಹೊರಗಿನ ಜನದ ವೇಷಭೂಷಣಗಳು, ಹಗ್ಗಗಳು, ಸರಪಳಿಗಳು, ಚರ್ಮದ ವಿವಿಧ ದನಕಟ್ಟುಗಳು, ಎಲ್ಲವನ್ನೂ ಇಲ್ಲಿ ಜೋಪಾನ ಮಾಡಿ ಇಟ್ಟಿದ್ದಾರೆ. ಇದು ಹೊರಗಿನಿಂದ ಹರಿದು ಬಂದ ಒಂದು ನಾಗರೀಕತೆಯನ್ನು ಅಂತೆಯೇ ನಶಿಸಿಹೋದ ಸ್ಥಳ ಪುರಾಣವನ್ನು ಸಾರುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಫೋರ್ಟ್ ವರ್ಥ್ ಈಗ ಒಂದು ಖ್ಯಾತ ಪ್ರವಾಸಿಕೇಂದ್ರ. ಬರುವ ಪ್ರವಾಸಿಗರಿಗಾಗಿಯೇ ಇಲ್ಲಿ ಬೆಳಿಗ್ಗೆ ಸಂಜೆ ಕೌಬಾಯ್ ಗಳು ಹಳೆಯಕಾಲದ ದಿರಿಸು ತೊಟ್ಟು ಈಗಲೂ ದನಗಳನ್ನು ಹೊಡೆದುಕೊಂಡು ಮೆರವಣಿಗೆ ಬರುತ್ತಾರೆ. ಅಲ್ಲಿ ಒಂದು ಕೊಟ್ಟಿಗೆಯೂ ಇದೆ. ಐವತ್ತು ಅರವತ್ತು ಭಾರೀ ಸೈಜಿನ ಬಫೆಲೋಗಳು ದಿನವೂ ಕುದುರೆ ಸವಾರರೊಂದಿಗೆ ನಡೆದು ಬರುತ್ತವೆ. ತಮ್ಮ ಮಕ್ಕಳನ್ನು ಇಲ್ಲಿಯ ಜನ ಕರೆತಂದು ತಮ್ಮೂರಿನ ಹಳೆಯ ಲೋಕವೊಂದನ್ನು ತೋರಿಸಿಕೊಂಡು ಹೋಗುತ್ತಾರೆ. ಇದನ್ನ ಆಧರಿಸಿ ಸ್ಥಳೀಯವಾಗಿ ರೆಸ್ಟೋರೆಂಟ್ ಗಳು, ಬುಲ್ ಫೈಟ್ ಕೂಡ ನಡೆಯುತ್ತವೆ. ಇದು ನಮ್ಮೂರ ಜಾತ್ರೆಗೆ ಬರುತ್ತಿದ್ದ ಹಳೆ ಸರ್ಕಸ್ ಕಂಪೆನಿಯಂತೆ ಕಾಣಿಸುತ್ತದೆ. ಅಲ್ಲದೆ ಇದೇ ಅಲ್ಲಿನ ದೊಡ್ಡ ಆಕರ್ಷಣೆಯೂ ಆಗಿದೆ.

ಅಂದು ಜಾನುವಾರುಗಳ ಮಾರಾಟ, ಮಾಂಸದ ಉದ್ಯಮ ಆಧರಿಸಿದ್ದ ಸ್ಟಾಕ್ ಯಾರ್ಡ್ ವಹಿವಾಟಿನ ಮಾದರಿ ಎಂಬುದು ಇಂದಿನ ಹಣಕಾಸು ವಹಿವಾಟಿನ ಸ್ಟಾಕ್ ಎಕ್ಸ್ ಛೇಂಜ್ ನ ಮೂಲ ಅಡಿಪಾಯವಾಗಿ ಈಗ ಬೆಳೆದು ನಿಂತಿದೆ. ಅಂದಿನ ಹಳೆಯ ಪರಿಕಲ್ಪನೆಯೇ ಇಂದು ‘ಸ್ಟಾಕ್ ಎಕ್ಸ್ಚೇಂಜ್’ ಆಗಿ ನ್ಯೂಯಾರ್ಕ್ ನ ವಾಣಿಜ್ಯ ವಹಿವಾಟಿನ ಜಗತ್ತಿನ ಬಂಡವಾಳದ ಕೇಂದ್ರ ಬಿಂದುವಾಗಿದೆ.

ಜಗತ್ತಿನ ಪಶು ಕ್ರೋಢೀಕರಣವೊಂದು ನದಿ ಮೂಲದಂತೆ ಸಂಪತ್ತಿನ ಕ್ರೋಢೀಕರಣದ ಮೂಲ ನೆಲೆಯಾಗಿ ಇಂದು ಇಲ್ಲಿಯವರೆಗೂ ಹರಿದು ಬಂದು ಜಾಗತಿಕ ಜಗತ್ತಿನ ಹಣದ ಏಳುಬೀಳುಗಳ ಮಾರುಕಟ್ಟೆಯಾಗಿದೆ. ಇದಕ್ಕೆ ಸಾಕ್ಷಿಯಾಗಿ ನ್ಯೂಯಾರ್ಕ್ ನಲ್ಲಿ ಸ್ಟಾಕ್ ಎಕ್ಸ್ ಛೆಂಜ್ ಕಛೇರಿಯ ಮುಂದೆ ಸ್ಟಾಕ್ ಯಾರ್ಡ್ ಉದ್ಯಮದ ಮೂಲವಾದ ‘ಬಫೆಲ್ಲೋ’ ವಿಗ್ರಹವೊಂದು ಇದ್ದು, ಅದರ ಸುತ್ತ ಪ್ರವಾಸಿಗರು ಮುಗಿಬಿದ್ದು ಫೋಟೋ ತೆಗೆದುಕೊಳ್ಳುತ್ತಾರೆ.

ಈ ಜಾಗವೂ ಕೂಡ ಅಮೇರಿಕಾ ಮೂಲ ನಿವಾಸಿ ಇಂಡಿಯನ್ ಒಬ್ಬರು ಅಗ್ಗದ ದುಡ್ಡಿಗೆ ಆ ಕಾಲದಲ್ಲಿ ಮಾರಿಹೋದ ಜಾಗವಾಗಿದೆ. ಅಲ್ಲಿ ಅದರ ದಾಖಲೆಯೂ ಇದೆ. ಸ್ಟಾಕ್ ಎಕ್ಸ್ಚೇಂಜ್ ನ ಜಾಗ ಹಾಗೂ ಅಲ್ಲಿನ ಸುತ್ತಮುತ್ತಲಿನ ಜಾಗ ಈಗ ಜಗತ್ತಿನ ಅತಿ ಹೆಚ್ಚು ಬೆಲೆ ಬಾಳುವ ಪ್ರದೇಶವಾಗಿದೆ. ಆಗ ಬಿಸಿಲಲ್ಲಿ ಥಳಗುಡುತ್ತ ಬಫೆಲೋ ಮೇಯುತ್ತಿದ್ದ ಬಯಲೀಗ ಗಗನಚುಂಬಿ ಕಟ್ಟಡಗಳ ನಡುವೆ ಇಂದು ಬಿಸಿಲೇ ಬೀಳದ ಎತ್ತರೆತ್ತರದ ಕಟ್ಟಡಗಳು ಕೆಡವುವ ನೆರಳಿನ ಜಾಗವಾಗಿದೆ. ಹಾಗೇ ಬಂದೋಬಸ್ತಿನ ಕಟ್ಟಡಗಳ ವಾಣಿಜ್ಯೋದ್ಯಮದ ನೆಲೆಯಾಗಿದೆ.

ನಮ್ಮೂರ ಸಾಲು ಮರದ ತಿಮ್ಮಕ್ಕ ಹಾಗೂ ಕುರಿ ಕಾಮೇಗೌಡರು

‘ಅಶೋಕ ಚಕ್ರವರ್ತಿ ಸಾಲು ಮರಗಳನ್ನು ನೆಡಿಸಿದ. ಅಂತೆಯೇ ಶಾಸನಗಳನ್ನು ಕೆತ್ತಿಸಿದ. ಈ ಶಾಸನಗಳೆ ನಮ್ಮ ಭಾಷೆಯ ಮೂಲ ಲಿಪಿಯಾಗಿವೆ’ ಎಂದು ಸಣ್ಣವರಿದ್ದಾಗ ಇತಿಹಾಸ ಓದುತ್ತಿದ್ದ ನೆನಪು. ಇತಿಹಾಸ ಅರಿಯದ ನಮ್ಮ ಹಿಂದಿನ ತಾಯಂದಿರು ಮಕ್ಕಳು ಹುಟ್ಟಿದಾಗ ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು’ ಎಂದು ಕಿವಿಯಲ್ಲಿ ಹೇಳುತ್ತಿದ್ದರಂತೆ. ಇದನ್ನು ಬಗೆದು ನೋಡಿದಾಗ ಕೂಡಿ ಬಾಳುವ ಸೊಗಸನ್ನು ಒಂದು ನೀರಿನ ಸೆಲೆಯಲ್ಲಿ ನಮ್ಮ ಹಿರಿಯರು ಗುರುತಿಸುತ್ತಿದ್ದುದ್ದನ್ನು ನಾವು ನೆನೆಯಬಹುದು. ಒಂದು ನೀರಿನ ಸೆಲೆಯಿದ್ದಲ್ಲಿ ಜೀವಾತಿಜೀವದ ಸೂಕ್ಷ್ಮ ಜೀವಜಾಲವೇ ಹರಿದುಬಿಡುತ್ತದೆ. ನೀರಿನ ಸುತ್ತ ಇರುವೆ, ಕಪ್ಪೆ, ಎರೆಹುಳು, ಜೇನಿನಿಂದ ಪಶು ಪಕ್ಷಿ ಮಾನವನವರೆಗೂ ಜೀವಗಳು ಬಂದು ನಿಲ್ಲುತ್ತವೆ.

ಪ್ರವಾಸಿಗರಿಗಾಗಿಯೇ ಇಲ್ಲಿ ಬೆಳಿಗ್ಗೆ ಸಂಜೆ ಕೌಬಾಯ್ ಗಳು ಹಳೆಯಕಾಲದ ದಿರಿಸು ತೊಟ್ಟು ಈಗಲೂ ದನಗಳನ್ನು ಹೊಡೆದುಕೊಂಡು ಮೆರವಣಿಗೆ ಬರುತ್ತಾರೆ. ಅಲ್ಲಿ ಒಂದು ಕೊಟ್ಟಿಗೆಯೂ ಇದೆ. ಐವತ್ತು ಅರವತ್ತು ಭಾರೀ ಸೈಜಿನ ಬಫೆಲೋಗಳು ದಿನವೂ ಕುದುರೆ ಸವಾರರೊಂದಿಗೆ ನಡೆದು ಬರುತ್ತವೆ. ತಮ್ಮ ಮಕ್ಕಳನ್ನು ಇಲ್ಲಿಯ ಜನ ಕರೆತಂದು ತಮ್ಮೂರಿನ ಹಳೆಯ ಲೋಕವೊಂದನ್ನು ತೋರಿಸಿಕೊಂಡು ಹೋಗುತ್ತಾರೆ. ಇದನ್ನ ಆಧರಿಸಿ ಸ್ಥಳೀಯವಾಗಿ ರೆಸ್ಟೋರೆಂಟ್ ಗಳು, ಬುಲ್ ಫೈಟ್ ಕೂಡ ನಡೆಯುತ್ತವೆ.

ಅಲ್ಲಿ ಹಸಿರು ನೆರಳಾಗುತ್ತದೆ. ಹೂವಾಗುತ್ತದೆ. ಹಣ್ಣಾಗುತ್ತದೆ. ನೆರಳಿಗೆ ಹಕ್ಕಿಗಳು ಬಂದು ಚಿಲಿಗರೆಯುತ್ತವೆ. ಮಕ್ಕಳು ಮಣ್ಣಿನಲ್ಲೇ ಮನೆ ಕಟ್ಟುತ್ತವೆ. ಮದುವೆ ಮಾಡಿಕೊಳ್ಳುತ್ತವೆ. ಹೂ-ಹೂವಿಗೆ ದುಂಬಿ ಮುಕ್ಕುರಿಯುತ್ತವೆ. ಚಿಟ್ಟೆ ಬಣ್ಣದ ರೆಕ್ಕೆ ಕಟ್ಟುತ್ತವೆ. ಮಕ್ಕಳು ಚಿಟ್ಟೆಯ ಬೆನ್ನುಬಿದ್ದು ಹಿಡಿಯಲು ಹಾರಾಡಿದರೆ, ಮುಳ್ಳು ಮಕ್ಕಳ ಕಾಲು ಚುಚ್ಚಿ ಪ್ರಕೃತಿಯನ್ನು ಹಿಡಿಯಲಾಗದು ಎಂದು ಎಚ್ಚರಿಸುತ್ತದೆ. ಮರ ಹತ್ತಿ ಹಣ್ಣು ಕುಯ್ದು, ಹೂವು ಕುಯ್ದು ಮಾರಿ ನಾಕು ಕಾಸು ಮಾಡಿಕೊಳ್ಳುವ ಆಸೆಯಿಂದ ಮರ ಹತ್ತಿದ ಬಡವ ಆಗ ತಟ್ಟನೆ ಎಚ್ಚೆತ್ತು ಸರಸರನೆ ಮರ ಇಳಿದು ಸಿಕ್ಕಿದ್ದು ಸಾಕೆಂದು ದಾರಿಹೋಕನಿಗೆ ಕೊಟ್ಟು ನಾಕು ಕಾಸು ಪಡೆದು ನೆರಳಲ್ಲಿ ಕುಳಿತು ಮುಖ ಒರೆಸಿಕೊಳ್ಳುವಾಗ ಮುಳ್ಳು ಚುಚ್ಚಿ ಅತ್ತ ಮಕ್ಕಳು ಅದನ್ನು ಮರೆತು ನೇರಳೆ ಹಣ್ಣು ತಿಂದು ನಾಲಿಗೆ ಬಣ್ಣ ತೋರಿ ನಗುತ್ತವೆ. ಇದು ನಾನು ಚಿಕ್ಕವಳಿದ್ದಾಗ ನೋಡಿದ ಹಳ್ಳಿಯ ಒಂದು ಸಮೂಹ ಗಾನ.

ಇದನ್ನು ಇಂದಿಗೂ ಜೀವಂತವಾಗಿಟ್ಟವರು ‘ಅಕ್ಷರದ ಅರಿವಿಲ್ಲದ, ಅರಿವೇ ಗುರುವೆಂದುಕೊಂಡು ಬೆಳೆದ’ ನಮ್ಮ ಸಾಲು ಮರದ ತಿಮ್ಮಕ್ಕ. ಮಕ್ಕಳಿಲ್ಲದ ಕೊರತೆಯನ್ನು ನೀರುಹೊತ್ತು ನೂರಾರು ಮರಗಳನ್ನು ಮಕ್ಕಳಂತೆ ಬೆಳೆಸಿದ ಮುಗ್ಧೆ. ಈಗಲೂ ತಮ್ಮವರಿಗೆ ಒಂದು ಆಸ್ಪತ್ರೆ ಕಟ್ಟಿಸುವ ಆಸೆ ಹೊತ್ತೇ ಸಭೆ ಸಮಾರಂಭಗಳಿಗೆ ಬರುತ್ತಾರೆ. ಈಗೆರಡು ವರುಷಗಳ ಹಿಂದೆ, ಶ್ರೀರಂಗಪಟ್ಟಣದ ಕರಿಘಟ್ಟದಲ್ಲಿ ಮೂವತ್ತರ ವಯಸ್ಸಿನವರು ನೂರಾರು ಸಸಿಗಳಿಗೆ ನೀರು ಹೊತ್ತು ಹುಯ್ಯುತ್ತಿದ್ದನ್ನು ಕಂಡೆ. ಆಗ ಅವರು ಐದಾರು ವರುಷದಿಂದ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುನ್ನ ತನ್ನ ಪತ್ನಿಯೊಡನೆ ಎರಡು ಗಂಟೆ ಈ ಕೆಲಸ ಮಾಡುತ್ತೇನೆಂದರು. ಗಿಡಗಳ ಬುಡದಲ್ಲಿ ತೂತು ಕೊರೆದ ಎರಡು ಲೀಟರ್ ನ ಬಿಸ್ಲೇರಿ ನೀರಿನ ಬಾಟಲ್ ನೆಟ್ಟಿತ್ತು. ಅದರಲ್ಲಿ ನೀರು ತುಂಬಿತ್ತು. ನೇರ ಬೇರಿಗೇ ನೀರುಣಿಸುವ ಹುನ್ನಾರವಿತ್ತು.

ತನ್ನ ಕುರಿ ಕಾಯಕವನ್ನೇ ಬಂಡವಾಳವನ್ನಾಗಿಸಿ ಗುಡ್ಡಬೆಟ್ಟಗಳ ಮಡಿಲಲ್ಲಿ ಕೆರೆ ತೋಡಿಸಿದ ಕಾಮೇಗೌಡರು ಮೂಲತಃ ಹಳ್ಳಿಯ ಮನುಷ್ಯ. ಹತ್ತಾರು ಕೆರೆ ಕಟ್ಟಿಸಿರುವ ಅವರು ಎದುರಿನವರು ಏನಾದರೂ ಪ್ರಶ್ನಿಸಿದರೆ ಖಡಕ್ಕಾಗಿ ಸಿಡುಕಿಯೇ ಉತ್ತರಿಸುತ್ತಾರೆ. ಅಂದರೆ ಅವರ ಪರಿಕಲ್ಪನೆಗೆ ಈ ನಮ್ಮ ನಾಗರೀಕತೆಯ ದೊಡ್ಡ ಗೊಡ್ಡು ಮಾತುಗಳು ವಿಚಿತ್ರವಾಗಿ ತೋರುತ್ತವೆ. ಕಣ್ಣುಮುಚ್ಚಿ ಧ್ಯಾನಸ್ಥರಾಗಿ ಮಾತು ಕೇಳುವ ಅವರು ಕೊಟ್ಟ ಹಣವನ್ನು ಬೇಡವೆನ್ನುವುದಿಲ್ಲ. ಬೇಡುವುದೂ ಇಲ್ಲ. ಆದರೆ ಅದನ್ನು ಸ್ವಂತ ಬಳಕೆಗೆ ಉಪಯೋಗಿಸುವುದಿಲ್ಲ. ಮತ್ತೆ ತಮ್ಮ ಇನ್ನೊಂದು ಕೆರೆ ಕಾಯಕಕ್ಕೆ ಬಳಸುತ್ತಾರೆ. ಎಲ್ಲೆಲ್ಲೂ ಬಿಡದೆ ಗಾಂಧಿಯಂತೆ ತಮ್ಮ ಕೋಲು ಹಿಡಿದೇ ಬರುವ ಅವರ ಉದ್ದೇಶಗಳು ಎಷ್ಟು ಸರಳ.

ಹಣ್ಣು ಹೂವು ಕೀಳಲು ಮರ ಹತ್ತಿದವರನ್ನ ‘ಮರದ ಕೊಂಬೆ ಮುರಿಬೇಡ ಕನ’ ಅಂತ ಬಿಸಿಲಿಗೆ ಕೈ ಅಡ್ಡ ಇಟ್ಟು ಅಲ್ಲೇ ಕಾವಲು ಕಾಯ್ತಿದ್ದ ನನ್ನ ಅಜ್ಜಮ್ಮನ ನೆನಪು ಇದರೊಂದಿಗೆ ಒತ್ತರಿಸಿ ಬರುತ್ತಿದೆ. ಮನೆ ಮನಸ್ಸನ್ನು ಗುಡಿಸಿ ಗುಂಡಾಂತರ ಮಾಡುವ ಎಲ್ಲಿಯ ದುರಾಸೆಯ ಜಾಗತೀಕರಣ? ಎಲ್ಲಿಯ ಹಿಂದಿನ ಹಿರಿಯರ ಎಚ್ಚರಿಕೆಯ ಎಚ್ಚರದ ಸಣ್ಣ ಸಮಾಧಾನದ ದಾರಿಯ ಇಂತಿಷ್ಟೇ ಬದುಕು.

ಬಿರುಗಾಳಿಗೂ ತಂಗಾಳಿಗೂ ತಾಳೆಯುಂಟೇ?