ಅವರಿಗೆ ಸಮಾಧಾನ ಮಾಡುತ್ತ ನಾನು ಆಕೆಯೊಡನೆ ಸಂಭಾಷಣೆ ನಡೆಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಾ ಆಟವಾಡುತ್ತಿದ್ದ ಮಗು ನಮ್ಮ ಬಳಿ ಬಂತು. ಆಶ್ಚರ್ಯವೆಂಬಂತೆ ತಾಯಿಯ ಕಡೆ ತಿರುಗದೆ ನನ್ನ ಬಳಿ ಬಂದು ತೊಡೆಹತ್ತಿ ಅಪ್ಪಿಕೊಂಡು ಅದರ ಭಾಷೆಯಲ್ಲಿ ಅದೇನನ್ನೋ ಹೇಳಿ ನಕ್ಕಿತು. ದತ್ತು ತಾಯಿಯ ಕಣ್ಣಲ್ಲಿ ನೀರು!! ಇಲ್ಲಿಯವರೆಗೂ ಒಂದು ಬಾರಿಯೂ ಮಗು ತಾನೇ ತಾನಾಗಿ ಬಂದು ಆಕೆಯನ್ನು ಅಪ್ಪಿಕೊಂಡಿಲ್ಲ ಎಂದು ಹೇಳುತ್ತಾ ಆಕೆ ಬೇಸರಿಸಿಕೊಂಡರು. ನೋಡನೋಡುತ್ತಲೇ ಆ ಏಷ್ಯಾ ಖಂಡ ದೇಶದ ಕಂದು ಬಣ್ಣದ ಮಗು ನನ್ನ ಇನ್ನೂ ಕಡು ಕಂದು ಮೈ ಚರ್ಮ ಬಣ್ಣಕ್ಕೆ ಸ್ಪಂದಿಸಿ ನನ್ನನ್ನು ತನ್ನವರು ಎಂದು ಭಾವಿಸಿಬಿಟ್ಟಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಆಸ್ಟ್ರೇಲಿಯ ದೇಶದಲ್ಲಿ ನಡೆಯುವ ಅಮ್ಮನ ದಿನ (Mother’s Day) ಆಚರಣೆ ಕಳೆದ ಹನ್ನೆರಡನೇ ತಾರೀಕಿನಂದು ಮುಗಿಯಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಅಪ್ಪಂದಿರಿಗೆ, ಮಾತೆಯರಿಗೆ ಗೌರವ ಸಲ್ಲಿಸಲು ಪ್ರತ್ಯೇಕ ದಿನವೊಂದನ್ನು ಗೊತ್ತುಮಾಡಿರುವ ಹಿಂದೆ ಹಲವಾರು ಸದುದ್ದೇಶಗಳಿವೆ. ಪ್ರತಿ ವರ್ಷವೂ ಮೇ ತಿಂಗಳ ಎರಡನೇ ಭಾನುವಾರ ಇಲ್ಲಿ Mother’s Day ನಡೆಯುವುದು. ಅಮೇರಿಕ ಮತ್ತು ಬ್ರಿಟನ್ ದೇಶಗಳಲ್ಲಿ ಇರುವಂತೆ ಇಲ್ಲಿಯೂ ಕೂಡ ಅಮ್ಮನ ದಿನದ ಆಚರಣೆಗೆ ಒಳ್ಳೆಯ ಪ್ರಚಾರ ಸಿಗುತ್ತದೆ. ಆದರೆ ಬ್ರಿಟನ್ನಿನಲ್ಲಿ ನಾನು ನೋಡಿರುವುದಕ್ಕೂ ಆಸ್ಟ್ರೇಲಿಯಾದಲ್ಲಿ ನಡೆಯುವ ಆಚರಣೆಗೂ ಸ್ವಲ್ಪ ವ್ಯತ್ಯಾಸವಿದೆ. ಇಲ್ಲಿ ಹೊರಾಂಗಣ ಜೀವನಕ್ಕೆ ಆದ್ಯತೆ ಇರುವುದರಿಂದ ಪಾರ್ಕಿನಲ್ಲಿ BBQ, ಪಿಕ್ನಿಕ್, ಪಾರ್ಟಿ, ಹಾಡುಗಾರಿಕೆ, ದೊಡ್ಡ ಪರದೆ ಮೇಲೆ ತೋರಿಸುವ ಸಿನೆಮಾ, ಆಟೋಟಗಳು ಹೆಚ್ಚು. ಇದನ್ನು ಬಿಟ್ಟರೆ ಮಾಮೂಲಿನಂತೆ ಕೊಳ್ಳುಬಾಕತನದ ಪ್ರದರ್ಶನ, ಮಿತಿಮೀರಿದ ವ್ಯಾಪಾರ ಕಾರುಬಾರು, ಹೆಂಗಸರ ಇಷ್ಟದ ಪದಾರ್ಥಗಳ ಅಧಿಕ ಮಾರಾಟ, ಅಮ್ಮನನ್ನು ಲಾಲಿಸಿ ಪಾಲಿಸುವುದು ನಡೆಯುತ್ತದೆ.

ನನ್ನ ಒಂದಿಬ್ಬರು ಗೆಳತಿಯರು ಗೊಣಗುತ್ತಾರೆ – “ಈ ಸರ್ವಿಂಗ್ ಅಂಡ್ ಕೇರಿಂಗ್ ಇಮೇಜ್ ಪಕ್ಕಕ್ಕಿಟ್ಟು ಅಮ್ಮನನ್ನು ಗಟ್ಟಿಗಾರ್ತಿಯಾಗಿ, ಸ್ವಂತಿಕೆಯಿರುವ ಸಮರ್ಥ ವ್ಯಕ್ತಿಯಾಗಿ, ದೃಢತೆ ಮತ್ತು ಘನತೆಯಿರುವ ವ್ಯಕ್ತಿಯಾಗಿ ತೋರುವುದು ಯಾವಾಗ?” ಅಂತ. ಖಂಡಿತವಾಗಲೂ ನಾವು ಪದೇ ಪದೇ ಕೇಳಬೇಕಾದ ಪ್ರಶ್ನೆ ಅದು. ಈ ಹಿನ್ನೆಲೆಯಲ್ಲಿ ಕೆಲವೊಂದು ವಿಶೇಷ ತಾಯಂದಿರ ಬಗ್ಗೆ ಗೌರವಪೂರ್ವಕವಾಗಿ ಬರೆಯುತ್ತಿದ್ದೀನಿ. ಅವರೆಲ್ಲರೂ ನನ್ನ ಪರಿಚಯಸ್ಥರೇ.

ಒಂದೊಮ್ಮೆ ಪ್ರೈಮರಿ ಶಾಲೆಯಲ್ಲಿ ಅವಳಿಜವಳಿ ಗಂಡುಮಕ್ಕಳ ತಾಯಿಯೊಬ್ಬರು ಪರಿಚಯವಾಗಿದ್ದರು. ಆದರೆ ಬಾಯಿಬಿಟ್ಟು ಹೇಳುವತನಕ ಅವರಿಬ್ಬರೂ ಅಣ್ಣತಮ್ಮ ಎಂದು ಜೊತೆಗಿರಿಸಲಾಗದಷ್ಟು ವ್ಯತ್ಯಾಸಗಳಿತ್ತು. ಇಬ್ಬರು ಮಕ್ಕಳೂ ದಷ್ಟಪುಷ್ಟವಾಗಿದ್ದು ಅವರಲ್ಲಿ ಒಬ್ಬ ನಮ್ಮ ಸ್ನೇಹಿತನಾದ. ಆಗೊಮ್ಮೆ, ಸಂದರ್ಭಾನುಸಾರ, ಹುಡುಗ ಭಾರಿ ಗಾತ್ರ ಇದ್ದಾನೆ ಎಂದೆ. ಅವರಮ್ಮ ಬಹುಶಃ ಅವನು ಅಪ್ಪನಂತೆ ಇರಬಹುದು ಅಂದರು. ನಂತರ ತನ್ನಿಬ್ಬರು ಗಂಡುಮಕ್ಕಳು IVF ಪದ್ಧತಿ ಮೂಲಕ ಹುಟ್ಟಿದ್ದು, ಎಂದರು. ಮಾತು ಶುರುವಾಗಿ ಕತೆ ಬಿಚ್ಚಿಕೊಂಡಿತ್ತು. ಆಕೆಗೆ ತಕ್ಕ ಜೊತೆಗಾರ ಸಿಕ್ಕದೆ, ಸರಿಯಾದ ಗಂಡಿನೊಡನಾಟದ ನಿಕಟ ಸಂಬಂಧವಿಲ್ಲದೆ, ಇಗೋ ಇವನಿಂದಲೇ ನನಗೆ ಮಗುವಾದರೆ ಚೆನ್ನಿರುತ್ತದೆ ಎಂಬ ಅವಕಾಶ ಸಿಕ್ಕದೆ ಹೋಗಿ, ಹಾಗೇ ಮೂವತ್ತೈದು ವರ್ಷ ವಯಸ್ಸು ದಾಟಿತ್ತು. ತಾಯಿಯಾಗುವ ಬಯಕೆ ಇನ್ನೂ ಜೀವಂತವಾಗಿತ್ತು. ಇನ್ನು ಸಹಜವಾಗಿ ತಾನು ಬಸುರಿಯಾಗಲಾರೆ ಎಂದು ನಿಶ್ಚಿತವಾದಾಗ ಡೋನರ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಎರಡು ಬಾರಿ ಕೃತಕವಾಗಿ ಗರ್ಭಧಾರಣೆಯಾದರೂ ಕೂಡ ಗರ್ಭ ನಿಲ್ಲಲಿಲ್ಲ. ಸಾಕಷ್ಟು ಹಣ ಖರ್ಚಾಗಿತ್ತು. ಪದೇ ಪದೇ ಚುಚ್ಚಿಸಿಕೊಂಡು ದೇಹ ಜರ್ಜರವಾಗಿತ್ತು. ಮನಸ್ಸು ಮುರಿದಿತ್ತು. ನಲವತ್ತನೇ ವರ್ಷ ಕಣ್ಬಿಟ್ಟಿತ್ತು.

ಕಡೆಯ ಬಾರಿ ಇದು, ಒಂದಲ್ಲ ಎರಡು ಮಕ್ಕಳಾಗುವಂತೆ ಇರಲಿ, ಕಳೆದುಕೊಳ್ಳುವುದೇನಿದೆ ಎಂದು ಮತ್ತೊಮ್ಮೆ ಪ್ರಯತ್ನಿಸಿದರು. ಅದು ಫಲಿಸಿಯೇಬಿಟ್ಟಿತು. ವೀರ್ಯದಾನಿಯ ಬಗ್ಗೆ ವಿವರಗಳನ್ನು ಕೇಳಿದರೆ ಆತ ಒಬ್ಬ ದೊಡ್ಡ ದೇಹಗಾತ್ರವಿರುವ ಸುರದ್ರೂಪಿ ಯುವಕನಾಗಿದ್ದ ಎಂದಷ್ಟೇ ತಿಳಿಯಿತು. ಮಕ್ಕಳಿಗೂ ಕೂಡ ಅದೇ ಮಾತನ್ನ ಹೇಳಿದ್ದಾರೆ. ನಲವತ್ತು ದಾಟಿದ ನಂತರ ಇಬ್ಬರು ಆರೋಗ್ಯವಂತ ಮಕ್ಕಳನ್ನು ಪಡೆದ ತಾಯ್ತನದ ಸಂತೋಷ ಯಾವತ್ತೂ ಇದೆ, ಅವರಿಗೆ ಅರ್ಥಪೂರ್ಣವಾದ ಬಾಲ್ಯ, ಜೀವನ ಮತ್ತು ಅವಕಾಶಗಳನ್ನು ಕೊಡುವ ಹೊಣೆಯನ್ನು ಎಚ್ಚರದಿಂದ ನಿರ್ವಹಿಸುತ್ತಿದ್ದೀನಿ, ಅಂದರು. ಅದು ಅವರ ಮಕ್ಕಳ ಪುಣ್ಯವಲ್ಲವೇ.

ಇದಕ್ಕೆ ಸ್ವಲ್ಪ ಭಿನ್ನವಾದದ್ದು ಒಂದು ಜೋಡಿ. ಗಂಡ-ಹೆಂಡತಿ ಇಬ್ಬರೂ ಪ್ರಯತ್ನಿಸಿದ್ದು. ಇಬ್ಬರ ದೇಹಗಳೂ ಗರ್ಭ ಧರಿಸಲು ಸಮರ್ಥವಾದವು, ಆದರೂ ಪುಟ್ಟ ಕಂದಮ್ಮ ಮೊಳಕೆ ಒಡೆಯಲಿಲ್ಲ. ನಂತರ ಗಂಡನ ವೀರ್ಯವನ್ನೇ ಬಳಸಿ ಕೃತಕವಾಗಿ ಗರ್ಭಧಾರಣೆ ಮಾಡಿದಾಗ ಗಂಡು ಮಗು ಹುಟ್ಟಿತ್ತು. ಅಮ್ಮ, ಅಪ್ಪ ಇಬ್ಬರನ್ನೂ ಅಷ್ಟಾಗಿ ಹೋಲುತ್ತಿರಲಿಲ್ಲ, ಅವರಿಬ್ಬರ ಆ ಮುದ್ದಿನ ಕಣ್ಮಣಿ. ಅವನಿಗೆ ಎರಡು ವರ್ಷ ತುಂಬಿದ ಮೇಲೆ ಯಾವುದೇ ಸೂಚನೆಯಿಲ್ಲದೆ, ನಿರಾಯಾಸವಾಗಿ, ಆರಾಮಾಗಿ ಮತ್ತೊಂದು ಗಂಡುಮಗು ಸಹಜವಾಗಿಯೇ ಹುಟ್ಟಿತು. ಅದು ಸಂಪೂರ್ಣ ಅಪ್ಪನ ರೂಪವನ್ನೇ ಹೋಲುತ್ತಿತ್ತು.

ಅವನು ಭಾರಿ ಕಿಲಾಡಿ, ಚುರುಕಿನ ಹುಡುಗ. ಒಮ್ಮೆ ಪಾರ್ಕಿನಲ್ಲಿ ಎಲ್ಲರೂ ಆಟವಾಗುತ್ತಿದ್ದಾಗ ತನ್ನ ಇಬ್ಬರು ಮಕ್ಕಳನ್ನು ನೋಡಿ ಅವರ ವಿಭಿನ್ನ ವ್ಯಕ್ತಿತ್ವಗಳನ್ನು ಗಮನಿಸುತ್ತಾ ಅವರಮ್ಮ ನಗಾಡುತ್ತಿದ್ದಳು – ತನ್ನ ಮತ್ತು ಗಂಡನ ಹಾಸ್ಯಪ್ರಜ್ಞೆ ಮತ್ತು ಕಿಲಾಡಿತನ ಯಾಕೋ ಈ ನಮ್ಮ ದೊಡ್ಡ ಹುಡುಗನಿಗೆ ಬರಲಿಲ್ಲ. ಅದೇನು ಮೃದು ಈ ಮಗು, ಇದೆಲ್ಲಿಂದ ಬಂತಪ್ಪಾ ಈ ನಾಜೂಕು ಸ್ವಭಾವ, ಮಿತವಾಗಿ ಮಾತನಾಡುವುದು, ಗಲಾಟೆಯೇ ಇಲ್ಲ, ಎಂಥಾ ಒಳ್ಳೆ ಮಗು, ಎನ್ನುತ್ತಾ ಹಾಸ್ಯ ಚಟಾಕಿ ಹಾರಿಸುತ್ತಿದ್ದಳು. ನಮ್ಮನ್ನ ನಿಯಂತ್ರಿಸಲೇನೋ ಎಂಬಂತೆ ಇಂಥಾ ಸೌಮ್ಯ ಸ್ವಭಾವದ ಆತ್ಮವನ್ನು ನಮ್ಮನೆಗೆ ಕಳಿಸಿದ ಆ ಅಗೋಚರ ಶಕ್ತಿಗೆ ಪ್ರತಿದಿನವೂ ತಾನು ವಂದಿಸುತ್ತೇನೆ. ಮಕ್ಕಳಾಗದೇ ಇದ್ದ ಆ ವರ್ಷಗಳ ನೋವು ನೆನೆದರೆ … ಎನ್ನುತ್ತಲೇ ಅವಳ ಕಂಠ ಬಿಗಿದುಬಂತು. ಹಾಗೇ ಕುಲು ಕುಲು ನಗುತ್ತಿದ್ದವಳು, ನಗಿಸುತ್ತಿದ್ದ ಅವಳ ಕಣ್ಣಿಂದ ನಗು, ಅಳು, ದುಃಖ ಎಲ್ಲಾ ಸೇರಿ ನೀರಾಗಿ ಜಾರಿ ಕೆನ್ನೆಗಳ ಮೇಲೆ ಹರಿದಿತ್ತು. ಅಲ್ಲಿಯವರೆಗೆ ಆಕೆ ಮಾಡುತ್ತಿದ್ದ ತಮಾಷೆಗೆ ಗೊಳ್ಳೆಂದು ನಗುತ್ತಿದ್ದ ನಾವೆಲ್ಲಾ ಅಮ್ಮಂದಿರು ಇದ್ದಕ್ಕಿದ್ದಂತೆ ಮಾತನ್ನೇ ಕಳೆದುಕೊಂಡು ಕಣ್ತುಂಬಿಕೊಂಡಿದ್ದೆವು.

ಈ ಇಬ್ಬರು ಮಾತೆಯರ ರೀತಿಯೇ ವರ್ಷಗಳ ಹಿಂದಿನ ನನ್ನ ಇನ್ನೊಬ್ಬ ಪರಿಚಯದವರು ಕೂಡ IVF ವಿಧಾನವನ್ನು ಪ್ರಯತ್ನಿಸಿ ಸೋತಿದ್ದರು. ತಾಯಿಯಾಗುವ ತನ್ನ ಆಸೆ ಪೂರೈಸದೆ ಆಕೆ ಆಗಾಗ ಖಿನ್ನರಾಗುತ್ತಿದ್ದರು. ಅಂಥ ಖಿನ್ನತೆಗೆ ಈಡು ಕೊಡದೆ, ಸೋಲದೆ ಬೇರೊಂದು ದಾರಿಯ ಮೂಲಕ, ಅಂದರೆ ಮಗುವನ್ನು ದತ್ತು ಪಡೆದು ತಾಯಿಯಾದ ಇಬ್ಬರು ಮಹಿಳೆಯರು ಇತ್ತೀಚೆಗೆ ಮಾತಿಗೆ ಸಿಕ್ಕಿದ್ದರು. ಮಕ್ಕಳನ್ನು ದತ್ತು ತೆಗೆದುಕೊಳ್ಳುವ ವಿಷಯದಲ್ಲಿ ಆಸ್ಟ್ರೇಲಿಯನ್ ಸರಕಾರದ ನೀತಿನಿಯಮಗಳು ಅತಿಯಾಗಿ, ಬಿಗಿಯಾಗಿ, ಕಟ್ಟುನಿಟ್ಟಾಗಿವೆ. ಅಂಥಾ ಒಂದು ನಿಯಮದಂತೆ ಸರಕಾರ ಪಟ್ಟಿಮಾಡಿರುವ ಇಂತಿಂಥ ಬೆರಳೆಣಿಕೆ ದೇಶಗಳಿಂದ ಮಾತ್ರ, ಎರಡು ವರ್ಷ ವಯಸ್ಸಿನೊಳಗೆ ಇರುವ ಮಗುವನ್ನು ಮಾತ್ರ ದತ್ತು ತೆಗೆದುಕೊಳ್ಳಲು ಅನುಮತಿ ಇದೆಯಂತೆ.

ದತ್ತು ಪಡೆಯಲು ಅರ್ಜಿ ಸಲ್ಲಿಸಿದ ನಂತರ ನೂರಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಅಧಿಕಾರಿಗಳು ನಡೆಸುವ ಅನೇಕಾನೇಕ ಕ್ರಮಗಳಿಗೆ ಓಗೊಟ್ಟು, ಸರಿಯಾದ ಆಧಾರ ಪತ್ರಗಳನ್ನು ಕೊಟ್ಟು, ಬೇಕಾದಷ್ಟು ಹಣ ಖರ್ಚು ಮಾಡಿ ವರ್ಷಾನುಗಟ್ಟಲೆ ಕಾಯಬೇಕು. ಇಷ್ಟೆಲ್ಲಾ ಆದಮೇಲೂ ಕೆಲವರಿಗೆ ಮಾತ್ರ ದತ್ತು ಮಗು ಸಿಗುತ್ತದೆ.

ನನ್ನ ಒಂದಿಬ್ಬರು ಗೆಳತಿಯರು ಗೊಣಗುತ್ತಾರೆ – “ಈ ಸರ್ವಿಂಗ್ ಅಂಡ್ ಕೇರಿಂಗ್ ಇಮೇಜ್ ಪಕ್ಕಕ್ಕಿಟ್ಟು ಅಮ್ಮನನ್ನು ಗಟ್ಟಿಗಾರ್ತಿಯಾಗಿ, ಸ್ವಂತಿಕೆಯಿರುವ ಸಮರ್ಥ ವ್ಯಕ್ತಿಯಾಗಿ, ದೃಢತೆ ಮತ್ತು ಘನತೆಯಿರುವ ವ್ಯಕ್ತಿಯಾಗಿ ತೋರುವುದು ಯಾವಾಗ?” ಅಂತ. ಖಂಡಿತವಾಗಲೂ ನಾವು ಪದೇ ಪದೇ ಕೇಳಬೇಕಾದ ಪ್ರಶ್ನೆ ಅದು.

ಆ ಇಬ್ಬರು ಮಹಿಳೆಯರಲ್ಲಿ ಒಬ್ಬರ ಮನೆಭಾಷೆ ಇಂಗ್ಲಿಷ್ ಅಲ್ಲ. ಇಲ್ಲಿ ಆಸ್ಟ್ರೇಲಿಯಾದಲ್ಲಿ ಅಧಿಕೃತವಾಗಿ ಚಲಾವಣೆಯಲ್ಲಿರುವುದು ಇಂಗ್ಲಿಷ್ ಭಾಷೆ. ಮಗು ಬಂದಿರುವುದೊ ಏಷ್ಯಾ ಖಂಡದ ದೇಶವೊಂದರಿಂದ. ಇನ್ನೇನು ತನ್ನ ಮಾತೃ ಭಾಷೆಯಲ್ಲಿ ಮಾತನಾಡುವ ಸಮಯ ಬಂತು ಅನ್ನುವ ಎರಡು ವರ್ಷ ವಯಸ್ಸಿನ ಸೂಕ್ಷ್ಮ ಘಟ್ಟದಲ್ಲಿ ಮೂರು ತಿಂಗಳ ಹಿಂದೆ ಈ ಪರದೇಶಕ್ಕೆ ಅದು ಕಾಲಿಟ್ಟಿದೆ. ಮಾತೃಭಾಷೆಯಲ್ಲಿ ತೊದಲುತ್ತಿದೆ, ಆದರೆ ದತ್ತು ತಾಯಿಗೆ ಅದು ಅರ್ಥವಾಗುತ್ತಿಲ್ಲ. ಆಕೆ ತನ್ನ ಮಾತೃಭಾಷೆಯ ಅಚ್ಚ ಛಾಯೆಯಿರುವ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ, ಅದು ಆ ಮಗುವಿಗೆ ಅರ್ಥವಾಗುತ್ತಿಲ್ಲ. ಸುತ್ತಮುತ್ತ ಇರುವ ಪರಿಸರದಲ್ಲಿ ಬೇರೆ ರೀತಿಯ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರ ಬೇರೆ. ಮಗುವಿಗೂ, ತಾಯಿಗೂ ಜೀವನವೇ ಅಲ್ಲೋಲಕಲ್ಲೋಲವಾಗಿ, ತಲೆಕೆಳಗಾಗಿ, ಎಲ್ಲವೂ ಕಲಸುಮೇಲೋಗರವಾಗಿಬಿಟ್ಟಿದೆ. ಒಬ್ಬಂಟಿಯಾಗಿ ಆಕೆ ಹೊಸದಾಗಿ ತಾಯ್ತನವನ್ನು ಕಲಿಯುತ್ತಾ, ಈ ಎರಡು ವರ್ಷ ವಯಸ್ಸಿನ ಮಗುವನ್ನು, ಅದರ ಬಾಲ್ಯವನ್ನು, ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿರುವುದು ಸ್ಪಷ್ಟವಾಗಿತ್ತು.

ಅವರ ಕಳವಳವನ್ನು ಕೇಳುತ್ತಾ, ಅವರಿಗೆ ಸಮಾಧಾನ ಮಾಡುತ್ತ ನಾನು ಆಕೆಯೊಡನೆ ಸಂಭಾಷಣೆ ನಡೆಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಾ ಆಟವಾಡುತ್ತಿದ್ದ ಮಗು ನಮ್ಮ ಬಳಿ ಬಂತು. ಆಶ್ಚರ್ಯವೆಂಬಂತೆ ತಾಯಿಯ ಕಡೆ ತಿರುಗದೆ ನನ್ನ ಬಳಿ ಬಂದು ತೊಡೆಹತ್ತಿ ಅಪ್ಪಿಕೊಂಡು ಅದರ ಭಾಷೆಯಲ್ಲಿ ಅದೇನನ್ನೋ ಹೇಳಿ ನಕ್ಕಿತು. ದತ್ತು ತಾಯಿಯ ಕಣ್ಣಲ್ಲಿ ನೀರು!! ಇಲ್ಲಿಯವರೆಗೂ ಒಂದು ಬಾರಿಯೂ ಮಗು ತಾನೇ ತಾನಾಗಿ ಬಂದು ಆಕೆಯನ್ನು ಅಪ್ಪಿಕೊಂಡಿಲ್ಲ ಎಂದು ಹೇಳುತ್ತಾ ಆಕೆ ಬೇಸರಿಸಿಕೊಂಡರು. ನೋಡನೋಡುತ್ತಲೇ ಆ ಏಷ್ಯಾ ಖಂಡ ದೇಶದ ಕಂದು ಬಣ್ಣದ ಮಗು ನನ್ನ ಇನ್ನೂ ಕಡು ಕಂದು ಮೈ ಚರ್ಮ ಬಣ್ಣಕ್ಕೆ ಸ್ಪಂದಿಸಿ ನನ್ನನ್ನು ತನ್ನವರು ಎಂದು ಭಾವಿಸಿಬಿಟ್ಟಿತ್ತು. ಆ ಕ್ಷಣದಲ್ಲಿ ದತ್ತು ತಾಯಿಯ ಅಂತಸ್ತು, ಅವಳ ಬಿಳಿ ಚರ್ಮ, ಭಾಷೆ ಯಾವುದೂ ಗಣನೆಗೆ ಬರಲಿಲ್ಲ. ಎಲಾ ಎಲಾ ಏನೀ ವಿಚಿತ್ರ ಎನ್ನುವಂತಾಗಿತ್ತು.

ಆದರೆ ನೋಡಿ, ಅಲ್ಲೇ ಇದ್ದ ಇನ್ನೊಂದು ದತ್ತು ಮಗು ಕೂಡ ಅದೇ ಏಷ್ಯಾ ಖಂಡ ದೇಶದಿಂದ ಎರಡು ತಿಂಗಳ ಹಿಂದೆಯಷ್ಟೇ ಬಂದಿದ್ದು, ಅದರದ್ದು ಕೂಡ ಅದೇ ಮಾತೃಭಾಷೆ. ಆದರೆ ಅದರ ಚರ್ಯೆ ಭಿನ್ನವಾಗಿತ್ತು. ಇಬ್ಬರು ಮಕ್ಕಳೂ ಜೊತೆಯಾಗಿ ಆಡಲಿಲ್ಲ. ಈ ಎರಡನೇ ಮಗು ಅಲ್ಲಿ ಇಲ್ಲಿ ಓಡಾಡುತ್ತಾ ಬೀಳುತ್ತಾ ಅಳುತ್ತಾ ತನ್ನ ದತ್ತು ತಾಯಿಯನ್ನು ಹುಡುಕುತ್ತಿತ್ತು. ಆದರೆ ಆ ತಾಯಿಯ ಬಿಳಿ ಮುಖದ ಪರಿಚಯ ಮಗುವಿನ ಮನಸ್ಸಿನಲ್ಲಿ ಇನ್ನೂ ಆಳವಾಗಿಲ್ಲದ್ದು ಎಲ್ಲರಿಗೂ ಎದ್ದು ಕಾಣುತಿತ್ತು. ಆಕೆ ಅದಕ್ಕೆ ಬೇಸರಿಸಿಕೊಳ್ಳದೆ, ಅಳಬೇಡ ಮಗುವೇ, ನನ್ನ, ನಿನ್ನ ಜೀವನ ಬಹು ವಿಶಾಲವಾಗಿದೆ, ನಾವಿಬ್ಬರು ಒಬ್ಬರಿಗೊಬ್ಬರು ಇದ್ದೀವಿ, ಎನ್ನುತ್ತಿದ್ದರು. ಜೀವನವೊಂದು ಪಂದ್ಯವಲ್ಲ. ಈ ಭೂಮಿಯ ಎಲ್ಲಾ ಜೀವಚರಗಳಂತೆ ಮನುಷ್ಯರು ನಾವೆಲ್ಲರೂ ನಮ್ಮ ನಮ್ಮ ನೆಲೆಗಳಲ್ಲಿ ಬದುಕುವ ಜೀವಗಳು ಎನ್ನುವುದು ಮನಸ್ಸಿಗೆ ಬರುತ್ತಿತ್ತು.

ಜೀವನಸಾಗರದ ತೆರೆಗಳ ಏರಿಇಳಿತಗಳಲ್ಲಿ ತಮ್ಮದೇ ಯಾನವನ್ನು ಪಯಣಿಸುತ್ತಾ ಸಾಗಿದ, ಆ ಯಾನದಲ್ಲಿ ಮಕ್ಕಳನ್ನು ಹೆರುವುದು ಎಂಬ ವಿಷಯ ಸ್ವಲ್ಪ ಕಾಲ ಗಂಟಾಗಿದ್ದು ನಂತರ ಅದು ಬಿಚ್ಚಿಕೊಂಡು, ಮೂವತ್ತೈದರಿಂದ ನಲವತ್ತು ವರ್ಷ ವಯಸ್ಸಿನ ಹಂತಗಳಲ್ಲಿ ಸಹಜವಾಗಿ ಮಕ್ಕಳನ್ನು ಹಡೆದ ತಾಯಂದಿರ ಖಾಸ್ ಬಾತ್ ಬೇರೆ ಥರ. ಈ ‘ನಡು ವಯಸ್ಸಿನ ತಡ ತಾಯಿ’ ಗಳ ಬಗ್ಗೆ ಆಗಾಗ ಮೂದಲಿಕೆ ಕೇಳಿ ಬರುತ್ತದೆ. ‘ಅಯ್ಯಯ್ಯೋ, ಅಷ್ಟೊಂದು ವಯಸ್ಸಾದ ಮೇಲೆ ಮಕ್ಕಳಾಗಿದ್ದಾ?! ಯಾಕೆ ಬೇಕಿತ್ತು?!’ ಎನ್ನುವ ಅಪಹಾಸ್ಯದ ದನಿ, ಅಣಿಕಿಸುವ ಮುಖಭಾವ ಕೇಳಿ, ಕಾಣಿಸುತ್ತದೆ. ಆಗೆಲ್ಲಾ ನೆನಪಾಗುವುದು ನನ್ನ ಮತ್ತೂಬ್ಬ ಸ್ನೇಹಿತೆ ಹೇಳಿದ್ದ ಮಾತು – ಅವರಿಗೆಲ್ಲಾ ಬೇಕಿತ್ತೋ ಬೇಡವೋ, ಅವರ ಹರೆಯದಲ್ಲೇ ಮಕ್ಕಳಾದವು. ನಮ್ಮಂಥವರಿಗೆ (ನನ್ನ ಸ್ನೇಹಿತೆಗೆ ಅಳವಡಿಸಿಕೊಂಡಂತೆ) ಬೇಕಿದ್ದರೂ ಆಗಲಿಲ್ಲ. ಆಗುವ ಅವಕಾಶ ಸಿಕ್ಕಿದಾಗ ಸಂಕೋಚದಿಂದ, ಮುಜುಗರದಿಂದ, ನಾಚಿಕೆಯಿಂದ, ದುಗುಡದಿಂದ ತಲೆ ತಗ್ಗಿತ್ತು. ನಡು ವಯಸ್ಸಿನಲ್ಲಿ ತಾಯಿಯಾಗುವ ಬಯಕೆಯಿರುವುದು ತಪ್ಪೇ ಅನ್ನುವ ತಪ್ಪಿತಸ್ಥ ಮನೋಭಾವವಿತ್ತು. ಮನಸ್ಸಿನೊಳಗೆ ಅಳುಕು ಮನೆಮಾಡಿ, ಭಯಪಟ್ಟುಕೊಂಡು ನೂರಾರು ಪ್ರಶ್ನೆಗಳನ್ನು ಕೇಳುತ್ತಾ, ಜೊತೆಗಾರನೊಂದಿಗೆ, ನಮ್ಮಲ್ಲಿ ನಾವೇ ಧೈರ್ಯವನ್ನು ತುಂಬಿಸಿಕೊಂಡು, ಸಿಕ್ಕ ಅಪರೂಪದ ಅವಕಾಶಕ್ಕೆ ತಲೆಬಾಗಿ ವಿನಮ್ರರಾಗಿ ತಾಯ್ತನಕ್ಕೆ ಬದ್ಧರಾದೆವು. ಸಾಕಷ್ಟು ತಯ್ಯಾರಿ ನಡೆಸಿಯೇ parenthood ಅನ್ನೋ ಬೃಹತ್ ಲೋಕಕ್ಕೆ ನಮ್ಮನ್ನು ತೆರೆದುಕೊಂಡೆವು.

ಹುಟ್ಟುವ ಮಗು ಆರೋಗ್ಯದಿಂದಿದ್ದರೆ ಸಾಕು ಅಷ್ಟೇ, ಇನ್ನೇನೂ ನಿರೀಕ್ಷೆಗಳಿರಲಿಲ್ಲ. ಮಗು ಆದ ಮೇಲೆ ಅದನ್ನು ನಿಷ್ಠೆಯಿಂದ ಬೆಳೆಸುವುದಕ್ಕೆಂದು ನಮ್ಮ ಜೀವನದಲ್ಲಿ ನಾವು ಮಾಡಿಕೊಂಡ ಮಾರ್ಪಾಡುಗಳು ಎಲ್ಲರಿಗೂ ಅರ್ಥವಾಗುವುದು ಹೇಗೆ? ನಾವು ಅವರನ್ನು ಮೆಚ್ಚಿಸುವ ಅಗತ್ಯವಾದರೂ ಏನಿದೆ? ಆರೋಗ್ಯವಂತ, ಬುದ್ಧಿವಂತ ಮತ್ತು ಉತ್ತಮ ಮೌಲ್ಯಗಳಿರುವ ವ್ಯಕ್ತಿಯನ್ನ ನೋಡಿದಾಗ ಅವರನ್ನು ಹೊತ್ತು, ಹೆತ್ತು, ಬೆಳೆಸಿದ ಆ ತಾಯಿಗೆ ಅದೆಷ್ಟು ತೃಪ್ತಿಯಿರುತ್ತದೆ! ಮಾತೃತ್ವದ ವಯಸ್ಸನ್ನು ಅಳೆದು ತೂಕಕ್ಕೆ ಹಚ್ಚುವ ಬದಲು ಅಂತಹ ಒಬ್ಬ ವ್ಯಕ್ತಿಯ ಹಿಂದೆ ಇರುವ ತಾಯಿ ಘನತೆಯುಳ್ಳ ಸಮರ್ಥ ಹೆಣ್ಣು ಅನ್ನುವುದು ಈ ನಮ್ಮ ಸಮಾಜಕ್ಕೆ ಮುಖ್ಯವಾಗಬೇಕು. ಒಪ್ಪಲೇಬೇಕಾದ ಮಾತಲ್ಲವೇ ಇದು!