ಹಾಸನ ಜಿಲ್ಲೆಯ ಬಾಣಾವರದಿಂದ ಜಾವಗಲ್ಲಿಗೆ ಹೋಗುವ ದಾರಿಯಲ್ಲಿ ಅರಕೆರೆ ಗ್ರಾಮ ಸಿಗುತ್ತದೆ. ಪೂರ್ವದಲ್ಲಿ ಇದಕ್ಕೆ ಸರ್ವಜ್ಞಪುರವೆಂಬ ಹೆಸರಿದ್ದಿತು. ವಿಷ್ಣುಭಕ್ತನಾದ ದಾಮೋದರ ಸೆಟ್ಟಿಯು ಈ ಊರಿನಲ್ಲಿ ತ್ರಿಕೂಟಾಚಲ ದೇಗುಲವೊಂದನ್ನು ನಿರ್ಮಿಸಿದ. ಹೊಯ್ಸಳ ಅರಸ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಕೇಶವನೂ, ಉಳಿದೆರಡು ಕಡೆಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ಮೂರ್ತಿಗಳೂ ಇವೆ. ಶ್ರೀಮಂತನಾದ ಸೆಟ್ಟಿಯು ಗುಡಿಯ ನಿರ್ಮಾಣ ಮಾಡಿದುದಲ್ಲದೆ, ನಿತ್ಯಪೂಜೆ, ನಂದಾದೀಪ, ಪರಿಚಾರಿಕೆ, ನೈವೇದ್ಯಗಳ ವೆಚ್ಚಕ್ಕೆ ಅನುಕೂಲವಾಗುವಂತೆ ಸಾಕಷ್ಟು ಉಂಬಳಿ ಭೂಮಿಯನ್ನು ದಾನವಾಗಿ ನೀಡಿದುದರ ಬಗೆಗೂ ಶಾಸನದ ಉಲ್ಲೇಖವಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತೊಂಭತ್ತನೆಯ ಕಂತು

 

ಹೊಯ್ಸಳ ಸಾಮ್ರಾಜ್ಯದ ಕೀರ್ತಿಪ್ರತಿಷ್ಠೆಗಳಿಂದ ಆಕರ್ಷಿತರಾಗಿ ಹೊರಗಿನ ಅನೇಕ ಸಂಸ್ಥಾನಗಳಿಂದ ಇಲ್ಲಿಗೆ ಬಂದು ನೆಲೆನಿಂತವರಲ್ಲಿ ಅನೇಕ ಶ್ರೀಮಂತರೂ ವ್ಯಾಪಾರಿಗಳೂ ಇದ್ದರು . ಹೀಗೆ ಬಂದು ನೆಲೆಸಿದವರಲ್ಲಿ ಹಲವರು ತಮ್ಮ ಶ್ರೀಮಂತಿಕೆಗಿಂತ ಮಿಗಿಲಾಗಿ ನಿಷ್ಠೆ ಸೇವಾಮನೋಭಾವಗಳಿಂದ ರಾಜನ ವಿಶ್ವಾಸಕ್ಕೂ ಸ್ಥಳೀಯರ ಅಭಿಮಾನಕ್ಕೂ ಪಾತ್ರರಾಗಿದ್ದರು. ಇಂಥವರಲ್ಲಿ ಕೇರಳದವನಾದ ಕುಂಜಸೆಟ್ಟಿ ಎಂಬ ಶ್ರೀಮಂತವ್ಯಾಪಾರಿ ಕ್ರಿ.ಶ. ಹದಿಮೂರನೆಯ ಶತಮಾನದ ಇಮ್ಮಡಿ ಬಲ್ಲಾಳನ ಆಳ್ವಿಕೆಯ ಕಾಲದಲ್ಲಿ ದಂಡನಾಯಕನ ಪದವಿಗೂ ಏರಿದನಲ್ಲದೆ ಚೋಳರ ವಶದಲ್ಲಿದ್ದ ಉಚ್ಚಂಗಿದುರ್ಗವನ್ನೂ ಹೊಯ್ಸಳರಿಗೆ ಗೆದ್ದುಕೊಟ್ಟನು.

ಈ ಕುಂಜಸೆಟ್ಟಿಯ ಅಳಿಯ ಕೊಂಡನಂಬಿಯೂ ಅವನ ಸೋದರ ದಾಮೋದರನೂ ಹೆಸರಾಂತ ವ್ಯಾಪಾರಿಗಳಾಗಿದ್ದು ದಾನಧರ್ಮಗಳಿಂದ ಸಮಾಜದ ಮನ್ನಣೆಗೆ ಪಾತ್ರರಾದರು. ಹೊಯ್ಸಳ ಅರಸರ ಆದರ್ಶವನ್ನು ಅನುಸರಿಸಿ ದಾಮೋದರ ಸೆಟ್ಟಿಯೂ ತಾನು ನೆಲೆಸಿದ ಅರಕೆರೆ ಗ್ರಾಮದಲ್ಲಿಯೇ ಕೇಶವ ದೇವಾಲಯವೊಂದನ್ನು ನಿರ್ಮಿಸಿದನು.

ಹಾಸನ ಜಿಲ್ಲೆಯ ಬಾಣಾವರದಿಂದ ಜಾವಗಲ್ಲಿಗೆ ಹೋಗುವ ದಾರಿಯಲ್ಲಿ ಅರಕೆರೆ ಗ್ರಾಮ ಸಿಗುತ್ತದೆ. ಪೂರ್ವದಲ್ಲಿ ಇದಕ್ಕೆ ಸರ್ವಜ್ಞಪುರವೆಂಬ ಹೆಸರಿದ್ದಿತು. ವಿಷ್ಣುಭಕ್ತನಾದ ದಾಮೋದರ ಸೆಟ್ಟಿಯು ಈ ಊರಿನಲ್ಲಿ ತ್ರಿಕೂಟಾಚಲ (ಮೂರು ಶಿಖರ/ ಗರ್ಭಗುಡಿಗಳನ್ನೊಳಗೊಂಡಂತಹ) ದೇಗುಲವೊಂದನ್ನು ನಿರ್ಮಿಸಿದ. ಹೊಯ್ಸಳ ಅರಸ ಎರಡನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ. 1220) ನಿರ್ಮಾಣವಾದ ಈ ದೇವಸ್ಥಾನದ ಮುಖ್ಯ ಗರ್ಭಗುಡಿಯಲ್ಲಿ ಕೇಶವನೂ, ಉಳಿದೆರಡು ಕಡೆಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ಮೂರ್ತಿಗಳೂ ಇವೆ. ಶ್ರೀಮಂತನಾದ ಸೆಟ್ಟಿಯು ಗುಡಿಯ ನಿರ್ಮಾಣ ಮಾಡಿದುದಲ್ಲದೆ, ನಿತ್ಯಪೂಜೆ, ನಂದಾದೀಪ, ಪರಿಚಾರಿಕೆ, ನೈವೇದ್ಯಗಳ ವೆಚ್ಚಕ್ಕೆ ಅನುಕೂಲವಾಗುವಂತೆ ಸಾಕಷ್ಟು ಉಂಬಳಿ ಭೂಮಿಯನ್ನು ದಾನವಾಗಿ ನೀಡಿದುದರ ಬಗೆಗೂ ಶಾಸನದ ಉಲ್ಲೇಖವಿದೆ.

ಪುರಾತತ್ತ್ವ ಇಲಾಖೆಯಿಂದ ಜೀರ್ಣೋದ್ಧಾರಗೊಂಡಿರುವ ಅರಕೆರೆ ದೇವಾಲಯ ಬೇಲೂರು ಹಳೇಬೀಡುಗಳ ಅದ್ಭುತ ಸೌಂದರ್ಯವನ್ನೇನೂ ಹೊಂದಿಲ್ಲವಾದರೂ ಆ ಕಾಲದ ಶಿಲ್ಪಕಲೆಯ ಪರಿಣತಿಯನ್ನೂ ಸಾಂಸ್ಕೃತಿಕ ಕಾಳಜಿಯನ್ನೂ ತಕ್ಕಮಟ್ಟಿಗೆ ವ್ಯಕ್ತಪಡಿಸುತ್ತದೆ. ದೇವಾಲಯದ ಹೊರಗೋಡೆಯ ಮೇಲೆ ಉದ್ದಕ್ಕೂ ಕಂಬಗಳನ್ನು ರಚಿಸಿದ್ದು ಎರಡೆರಡು ಕಂಬಗಳ ನಡುವೆ ಒಂದೊಂದು ಶಿಲ್ಪವಿರುವಂತೆ ವಿನ್ಯಾಸಗೊಳಿಸಿದೆ. ಈ ಶಿಲ್ಪಗಳಲ್ಲಿ ವಿಷ್ಣುವಿನ ದಶಾವತಾರಗಳೂ, ಮಾಧವ, ಕೇಶವ ಮೊದಲಾದ ಇಪ್ಪತ್ನಾಲ್ಕು ರೂಪಗಳೂ ದಿಕ್ಪಾಲಕರ ಶಿಲ್ಪಗಳೂ ಸೇರಿವೆ.

ಮತ್ಸ್ಯ, ಕೂರ್ಮ ಅವತಾರಗಳ ಚಿತ್ರಣವನ್ನು ಕ್ರಮವಾಗಿ ದೊಡ್ಡದೊಂದು ಮೀನು, ಆಮೆಗಳ ರೂಪದಲ್ಲೇ ಕೆತ್ತಿರುವುದು ಇಲ್ಲಿಯ ಶಿಲ್ಪಗಳ ಸರಳತೆಗೆ ನಿದರ್ಶನ. ದೇವಾಲಯದ ಬಾಗಿಲಲ್ಲೇ ಇರಿಸಿರುವ ದೊಡ್ಡ ಶಾಸನ ಆಕರ್ಷಕವಾಗಿದೆ. ಶಾಸನದ ಮೇಲುಭಾಗದಲ್ಲಿ ಚತುರ್ಭುಜ ವಿಷ್ಣುವಿನ ರೂಪವನ್ನು ಕೆತ್ತಲಾಗಿದ್ದು, ಅದರ ಎಡಭಾಗದಲ್ಲಿ ಗರುಡ ಹಾಗೂ ಬಲಗಡೆ ಕರುವಿಗೆ ಹಾಲುಣಿಸುತ್ತಿರುವ ಕಾಮಧೇನುವನ್ನು ಚಿತ್ರಿಸಿದೆ. ಸುತ್ತುಗೋಡೆಯ ಮೇಲಿನ ಶಿಲ್ಪಗಳ ಅಂಗಾಂಗಗಳು ಸುಸ್ಪಷ್ಟವಾಗಿ ಕಾಣುವಂತಿದ್ದರೂ ಈ ಎಲ್ಲ ಪ್ರತಿಮೆಗಳ ಮುಖಭಾಗ ಹವೆಯ ವೈಪರೀತ್ಯಕ್ಕೂ ಕಿಡಿಗೇಡಿಗಳ ಚೇಷ್ಟೆಗೂ ಗುರಿಯಾಗಿ ಸವೆದುಹೋಗಿರುವುದು ಬೇಸರದ ವಿಷಯ.

ನಾಟ್ಯಸರಸ್ವತಿ, ವೇಣುಗೋಪಾಲ, ಗರುಡ, ಗಣಪತಿ, ಪರವಾಸುದೇವ, ಲಕ್ಷ್ಮೀನಾರಾಯಣ, ನರಸಿಂಹ ಮೊದಲಾದ ಶಿಲ್ಪರೂಪಗಳನ್ನು ಈ ಆವರಣದಲ್ಲಿ ನೀವು ಕಾಣಬಹುದು. ಅರಕೆರೆ ದೇವಾಲಯದ ವೈಶಿಷ್ಟ್ಯವೇನೆಂದರೆ ದೇವಾನುದೇವತೆಗಳಿಗೆ ಕಲ್ಪಿಸಿರುವ ಸ್ಥಾನಕ್ಕೆ ಸಮಾನವಾಗಿ ಯುದ್ಧವೀರರನ್ನು ಚಿತ್ರಿಸಿರುವುದು. ದೊಡ್ಡ ಕತ್ತಿಗುರಾಣಿ ಹಿಡಿದ ಯೋಧ, ವಿವಿಧ ಆಯುಧಗಳನ್ನು ಹಿಡಿದ ಪಡೆಯಾಳುಗಳು, ಶತ್ರುವಿನ ತಲೆ ತರಿದು ತಂದ ಧೀರ, ಚಾಮರಧಾರಿಣಿ, ಶಿಲಾಸುಂದರಿ ಮೊದಲಾದವರು ಈ ಗೋಡೆಗಳನ್ನು ಅಲಂಕರಿಸಿದ್ದಾರೆ. ವಿಷಕನ್ಯೆ, ಲಜ್ಜಾಗೌರಿಯರೂ ಇಲ್ಲಿ ಸ್ಥಾನ ಪಡೆದಿದ್ದಾರೆ. ಹೊರಗೋಡೆಗಳ ಶಿಲ್ಪಗಳು ಸವೆದಿದ್ದರೂ ಒಳಗುಡಿಯ ಪೂಜಾಮೂರ್ತಿಗಳು ಸುರಕ್ಷಿತವಾಗಿವೆ. ಹೊಯ್ಸಳ ಶಿಲ್ಪಕಲೆಯ ಹಿರಿಮೆಯ ಸಾಕ್ಷಿಯಾಗಿಯೂ ಕಣ್ತುಂಬುವಂತಿವೆ.

ಒಂದು ಕಾಲದ ಜನಜೀವನ, ಜೀವನೋತ್ಸಾಹ, ಸಾಂಸ್ಕೃತಿಕ ಶ್ರದ್ಧೆಗಳಿಗೆ ದಾಖಲೆಯಂತಿರುವ ಈ ದೇಗುಲವನ್ನು ನೋಡಲು ಅರಕೆರೆಗೆ ಒಮ್ಮೆ ಹೋಗಿ ಬನ್ನಿ. ಮುಂದೆ ಅನತಿದೂರದಲ್ಲೇ ಇರುವ ಜಾವಗಲ್, ಬೆಳವಾಡಿಗಳಿಗೂ ಭೇಟಿನೀಡಲು ಮರೆಯದಿರಿ.