ಕರ್ನೊ ಕಂಪೆನಿ ಒದಗಿಸಿದ ಅವಕಾಶ ಚಾಪ್ಲಿನ್ ನ ಬದುಕಿಗೆ ದೊಡ್ಡ ತಿರುವು ಆಧಾರ ನೀಡಿತು. ಲಂಡನ್ನಿನ ಲಾಂಬೆತ್ ಪ್ರದೇಶದ “ಗ್ಲೇನ್ ಷಾ ಮ್ಯಾನ್ಷನ್ಸ್” ಎನ್ನುವ ಬಹುಮಹಡಿ ವಸತಿಯ 15 ನೆಯ ನಂಬ್ರದ ಫ್ಲಾಟ್ ಮೊದಲ ಸ್ವಂತದ ಬಿಡಾರವಾಯಿತು. ಚಾರ್ಲಿಯ ತಾಯಿಯ ಮೊದಲ ಸಂಗಾತಿಯ ಮಗ ಸಿಡ್ನಿ ಹಾಗು ಚಾರ್ಲಿ ಇಲ್ಲಿ ಜೊತೆಗೆ ಇರಲಾರಂಭಿಸಿದರು. ಮೂರನೆಯ ಮಹಡಿಯಲ್ಲಿದ್ದ ಈ ಮನೆಯನ್ನು “ಬದುಕಿನುದ್ದಕ್ಕೂ ಮೆಲುಕುಹಾಕುವ ಸ್ವರ್ಗ” ಎಂದು ಚಾರ್ಲಿ ಚಾಪ್ಲಿನ್ ಹೇಳಿಕೊಂಡದ್ದಿದೆ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಚಾರ್ಲಿ ಚಾಪ್ಲಿನ್‌ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಲಂಡನ್ನಿನಲ್ಲಿ ಶತಮಾನಗಳಿಂದ ಸ್ಥಿರಗಂಭೀರ ನಿಲುವಿನಲ್ಲಿ ನಿಂತಿರುವ ಭವ್ಯ ಅರಮನೆಗಳು, ಕೆಂಪುಕಲ್ಲಿನ ಪುರಾತನ ಸೌಧಗಳು, ಥೇಮ್ಸ್ ಹರಿವಿಗೆ ಅಡ್ಡ ಜೀಕಿ ದಾಟುವ ಹಳೆಹಳೆಯ ಸೇತುವೆಗಳು, ಶುಭ್ರ ಸ್ವಚ್ಛ ರಾಜಬೀದಿಗಳು ತಮ್ಮನ್ನು ನೋಡಬರುವವರಿಗೆ, ಚರಿತ್ರೆ ಪ್ರತಿಷ್ಠೆ ಸಿರಿವಂತಿಕೆಗಳ ಕತೆಗಳನ್ನು ಪಿಸುಗುಟ್ಟಿಕೊಂಡು ಖುಷಿಯಾಗಿವೆ. ಪ್ರಸಿದ್ಧ ಪ್ರೇಕ್ಷಣೀಯ ಸ್ಥಳದ ಟೂರ್ ಗೈಡ್ ಆಗಿ ಅದೇ ಅದೇ ಕತೆಗಳನ್ನು ನಿತ್ಯವೂ ಹೇಳಿ ಹೇಳಿ ಸುಖದದಣಿವಿನಲ್ಲಿವೆ. ಹಾಗಂತ ಇತಿಹಾಸ ಸಂಸ್ಕೃತಿ ಸಾಮಾಜಿಕ ವ್ಯವಸ್ಥೆಗಳ ಬಗೆಗಿನ ಪುರಾಣಗಳ ಮಹಾಭಾರದ ಎಡೆಯಲ್ಲಿ ಸೂಕ್ಷ್ಮವಾಗಿ ಹುಡುಕಿದರೆ ಮಾತ್ರ ಇಲ್ಲಿನ ಬೀದಿಬೀದಿಗಳಲ್ಲಿ ಬೀಡುಬಿಟ್ಟಿದ್ದ ಬಡತನದ ಕತೆಗಳು ಕೂಡ ಕಾಲಿಗೆ ತೊಡರಿ ಸಿಕ್ಕಿ ಸುತ್ತಿಕೊಳ್ಳುತ್ತವೆ. ಲಂಡನ್ನಿನಲ್ಲಿ ಇದ್ದು ಹೋದವರ ಕಡುಕಷ್ಟದ ದಿನಗಳನ್ನು, ದಟ್ಟದರಿದ್ರ ಬದುಕನ್ನು ಮತ್ತೆ ಮೆಲುಕು ಹಾಕಿಸಬಲ್ಲ ಹಲವು ಬೀದಿಗಳಲ್ಲಿ ಲಾಂಬೆತ್ ನ ಬ್ರಿಕ್ಸ್ಟನ್ ರಸ್ತೆಯೂ ಒಂದು. ದಕ್ಷಿಣ ಲಂಡನ್ನಿನ ಥೇಮ್ಸ್ ದಡದಲ್ಲಿರುವ ಲಾಂಬೆತ್ ಪ್ರದೇಶಕ್ಕೆ ಪುರಾತನ ಕಾಲದೊಟ್ಟಿಗೆ ಗುರುತು ಸಂಪರ್ಕ ಇದೆ. ಬ್ರಿಕ್ಸ್ಟನ್ ರಸ್ತೆ, ಎರಡು ಸಾವಿರ ವರ್ಷಗಳ ಹಿಂದಿನ ರೋಮನ್ನರ ಕಾಲದಿಂದಲೂ ಉಸಿರಾಡುತ್ತ ಬದುಕಿಕೊಂಡಿರುವ ಹಾದಿ ಬೀದಿ. ಈ ಬೀದಿಯಲ್ಲಿ ಈಗಲೂ ನಿಂತಿರುವ “ಗ್ಲೇನ್ ಷಾ ಮ್ಯಾನ್ಷನ್ಸ್ ” ಎನ್ನುವ ಬಹುಮಹಡಿ ವಾಸ್ತವ್ಯದ 15 ನೆಯ ನಂಬ್ರದ ಫ್ಲಾಟ್ ನ ಕಡೆಗೆ ಕತ್ತೆತ್ತಿ ನೋಡಿದರೆ ಮೂರನೆಯ ಮಾಳಿಗೆಯ ಗೋಡೆಯ ಮೇಲೆ ನೆಟ್ಟಿರುವ ನೀಲಿ ಫಲಕ, ಒಂದು ಬಾಲ್ಯದ ಹೃದಯ ವಿದ್ರಾವಕ ಕತೆಯ ಕಟ್ಟನ್ನು ಮೆತ್ತಗೆ ಮೂಕವಾಗಿ ಬಿಡಿಸಿ ಹರಡುತ್ತದೆ.

1921ರಲ್ಲಿ ನಿರ್ಮಾಣಗೊಂಡ ಹಾಲಿವುಡ್ ಸಿನೆಮಾ “ದಿ ಕಿಡ್ “ನ ಒಂದು ದೃಶ್ಯ ಲಂಡನ್ನಿನ ಇಂತಹದೇ ಬೀದಿಯ ಕುರಿತಾದದ್ದು. ಐದು ವರ್ಷದ ಅನಾಥ ಬಾಲಕನನ್ನು “ಸಾಂಸ್ಥಿಕ ಕ್ಷೇಮಾಭಿವೃದ್ಧಿ”ಯನ್ನು ಒದಗಿಸುವ ನೆಪದಲ್ಲಿ ಆಕಸ್ಮಿಕವಾಗಿ ಮಗುವಿನ ಪಾಲಕನಾದವನಿಂದ ಬಲವಂತವಾಗಿ ಗಾಡಿಯಲ್ಲಿ ಎಳೆದೊಯ್ಯುವ ಸನ್ನಿವೇಶ, ಅಮೆರಿಕದಲ್ಲಿ ಆ ಚಿತ್ರವನ್ನು ನಿರ್ಮಿಸಿದ ಆದರೆ ತನ್ನ ಬಾಲ್ಯದ ದಿನಗಳನ್ನು ಲಂಡನ್ ನ ಲಾಂಬೆತ್ ಪ್ರದೇಶದಲ್ಲಿ ಕಳೆದ ವ್ಯಕ್ತಿಯ ಜೀವನದಲ್ಲಿ ನಿಜವಾಗಿ ಘಟಿಸಿದ್ದು. ಅದೊಂದು ಮೂಕಚಿತ್ರವಾದರೂ, ಬಾಲಕನನ್ನು ಕ್ಷೇಮಾಭಿವೃದ್ಧಿ ಅಧಿಕಾರಿಗಳು ವಾಹನದಲ್ಲಿ ಒತ್ತಾಯದಲ್ಲಿ ನಿಲ್ಲಿಸಿ ಸೆಳೆದೊಯ್ಯುವ ಚಿತ್ರ ಶಬ್ದರಹಿತವಾಗಿಯೂ ಹಾದಿಯುದ್ದಕ್ಕೂ ಎಳೆಯ ಬಾಯಿಯಿಂದ ಹೊರಡುವ ಹತಾಶ ಆಕ್ರಂದನವನ್ನು ಕಿವಿಯಲ್ಲಿ ತುಂಬಿಸಿ ಮೈಮನಗಳನ್ನು ಕಾಡುತ್ತದೆ. ವಿಚ್ಚೇದಿತ ಹೆತ್ತವರ ಆಶ್ರಯದಿಂದ ವಂಚಿತನಾಗಿ, ಲಂಡನ್ ಬೀದಿಯ ಅನಾಥ ಅಲೆಮಾರಿಯಾಗಿ, ವಿವಿಧ ನಿರಾಶ್ರಿತ ವಸತಿಗಳಿಗೆ ಮತ್ತೆ ಮತ್ತೆ ಎಳೆದೊಯ್ಯಲ್ಪಟ್ಟ ಬಾಲಕ ಚಾರ್ಲಿ ಚಾಪ್ಲಿನ್. ಲಾಂಬೆತ್ ಪ್ರದೇಶದಲ್ಲಿ ಆಗಾಗ ವಾಸ್ತವ್ಯ ಬದಲಿಸಿದ ಚಾಪ್ಲಿನ್ ತುಸು ದೀರ್ಘ ಕಾಲ, ಅಂದರೆ ಮೂರು ವರ್ಷಗಳ ಕಾಲ ತನ್ನ ಸ್ವಂತ ದುಡಿಮೆಯ ಸಾಮರ್ಥ್ಯದಿಂದ ಒಂದೇ ಕಡೆ ನೆಲೆ ನಿಂತ ವಸತಿ “ಗ್ಲೇನ್ ಷಾ ಮ್ಯಾನ್ಷನ್ಸ್”ನ 15 ನೆಯ ನಂಬ್ರದ ಫ್ಲಾಟ್. ಈ ವಸತಿಯ ಮೇಲೆ ತೀರ ಇತ್ತೀಚಿಗೆ ಅಂದರೆ 2017ರಲ್ಲಿ ನೆಡಲಾದ ನೀಲಿ ಫಲಕ 1889ರಲ್ಲಿ ಲಂಡನ್ ಅಲ್ಲಿ ಹುಟ್ಟಿ 1977ರಲ್ಲಿ ಸ್ವಿಟ್ಜರ್ಲ್ಯಾಂಡ್ ಅಲ್ಲಿ ಮಡಿದ ಚಾರ್ಲಿ ಚಾಪ್ಲಿನ್ ನನ್ನು “ನಟ ಹಾಗು ಚಿತ್ರ ನಿರ್ಮಾಪಕ” ಎಂದು ಸಂಬೋಧಿಸುತ್ತದೆ. ಚಾಪ್ಲಿನ್ ನಿರ್ಮಿಸಿದ ಪ್ರತಿ ಚಿತ್ರದಲ್ಲೂ ಕಾಣಿಸುವ ಬಡತನ ಸಂಕಟಗಳ ಅಣಕ ಇಲ್ಲೇ ಆಸುಪಾಸಿನಲ್ಲಿ ಹುಟ್ಟಿದವು ಎಂದು ನೆನಪು ಮಾಡಿಕೊಡುತ್ತದೆ.

ಸಂಗೀತಾಭಿನಯ ಕಲಾವಿದರಾಗಿದ್ದ, ಸೀನಿಯರ್ ಚಾರ್ಲಿ ಚಾಪ್ಲಿನ್ ಹಾಗು ಹೆನಾ ಎಂಬವರ ಮಗನಾಗಿ 1889ರಲ್ಲಿ ಲಂಡನ್ ಅಲ್ಲಿ ಜನಿಸಿದ “ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್” ಅಥವಾ ಜೂನಿಯರ್ ಚಾಪ್ಲಿನ್ ನ ಮೊದಲ ಮೊದಲ ಮೂರು ವರ್ಷಗಳು ಹೆತ್ತವರ ಪ್ರೀತಿ ಆರೈಕೆಯಲ್ಲಿ ನಿರಾತಂಕವಾಗಿ ನೆಮ್ಮದಿಯಲ್ಲಿ ಕಳೆದವು. ಪ್ರೇಮ ಕಾಮ ಪ್ರಣಯವಂಚನೆಗಳು ಸಂಬಂಧದಲ್ಲಿ ತರುವ ತಿರುವುಗಳಲ್ಲಿ ತಂದೆ ತಾಯಿಯರು ಬೇರ್ಪಟ್ಟ ಮೇಲೆ ಜೂನಿಯರ್ ಚಾಪ್ಲಿನ್ ನ ಕಷ್ಟದ ದಿನಗಳು ಶುರು ಆದವು. ಅಂದಿನ ಲಂಡನ್ ನ ಬಡತನದ ಎಲ್ಲ ಅಳತೆ ಹೋಲಿಕೆಗಳಲ್ಲೂ ಚಾರ್ಲಿ ಚಾಪ್ಲಿನ್ ನದು ಅತಿ ಬಡತನದ ಬದುಕಾಗಿತ್ತು. ತಾಯಿ ಹೆನಾ, ನಿತ್ಯವೂ ಗಂಟಲು ಸೋಲುವವರೆಗೆ ಹಾಡಿದರೆ ಮಾತ್ರ ಊಟಕ್ಕಾಗುವ ಸಂಪಾದನೆ ಆಗುತ್ತಿತ್ತು. ಒಂದು ದಿನ “ಆಲ್ಡರ್ ಶಾಟ್ ಕ್ಯಾಂಟೀನ್” ಅಲ್ಲಿ ಹಾಡಿನ ನಡುವೆ ಆಕೆಯ ಸ್ವರ ಸಂಪೂರ್ಣ ಒಡೆದು ಹಾಡುವುದೇ ಕಷ್ಟ ಆಯಿತು.

ಪುಂಡರ, ರೌಡಿ ಪ್ರೇಕ್ಷಕರ ಸಿಗರೇಟಿನ ದಟ್ಟ ಧೂಮ, ಆಲ್ಕೋಹಾಲಿನ ಘಮಲು, ಕೇಕೆ, ಅಟ್ಟಹಾಸಗಳೇ ತುಂಬಿದ್ದ ಸಭೆಯಲ್ಲಿ ಕ್ಷೀಣಿಸುತ್ತಿರುವ ಕಂಠದ ಹಾಡು ಅಪಹಾಸ್ಯದ, ಕ್ರೂರ ರಂಜನೆಯ ವಸ್ತುವಾಯಿತು. ಅವಾಚ್ಯ ಶಬ್ದಗಳನ್ನು ಕೂಗುವುದು, ಕೈಗೆ ಸಿಕ್ಕ ವಸ್ತುಗಳನ್ನು ವೇದಿಕೆಗೆ ಎಸೆಯುವುದು ಶುರು ಆಯಿತು. ಆ ಕಾಲದ ಸಂಗೀತ ಸಭೆಗಳಲ್ಲಿ ವೀಕ್ಷಕರ ಈ ಬಗೆಯ ವರ್ತನೆಗಳು ಮಾಮೂಲಿಯಾಗಿದ್ದವು. ಹಾಡು ಮುಂದುವರಿಸಲಾಗದೆ ಹೆನಾ ನೇಪಥ್ಯಕ್ಕೆ ನಡೆದು ಹೋದಾಗ ಕಾರ್ಯಕ್ರಮ ಆಯೋಜಿಸಿದ್ದ ಮ್ಯಾನೇಜರ್, ವೇದಿಕೆಯ ಮರೆಯಲ್ಲಿ ಇದ್ದು ಎಲ್ಲವನ್ನು ನೋಡುತ್ತಿದ್ದ ಐದು ವರ್ಷದ ಬಾಲಕ ಜೂನಿಯರ್ ಚಾಪ್ಲಿನ್ ನನ್ನು ಹಾಡುವಂತೆ ಆದೇಶಿಸಿದ. ಚಾಪ್ಲಿನ್ ಬಾಲಗೆಳೆಯರ ನಡುವೆ ಹಾಡಿ ರಂಜಿಸುವುದನ್ನು ಮೊದಲೆಲ್ಲ ನೋಡಿದ್ದ ಮ್ಯಾನೇಜರ್, ಎದುರಿಗಿದ್ದ ಪ್ರಕ್ಷುಬ್ದ ಪ್ರೇಕ್ಷಕರನ್ನು ಸೆಳೆಯಲು ಬಾಲಕನ ಪ್ರದರ್ಶನ ಸಹಾಯ ಮಾಡೀತು ಎಂದು ಆಶಿಸಿದ್ದ. ವೇದಿಕೆಗೆ ಬಂದ ಚಾಪ್ಲಿನ್ ಆ ಕಾಲದ ಜನಪ್ರಿಯ ಗೀತೆಯನ್ನು ಸಂಗೀತ ಮೇಳಕ್ಕೆ ದನಿಗೂಡಿಸಿ ಹಾಡಿದ. ಗದ್ದಲದ ನಡುವೆಯೇ ಆರಂಭವಾದ ಹಾಡು, ಅಲ್ಲಿಯ ತನಕ ಕೋಲಾಹಲ ಎಬ್ಬಿಸಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟುವಂತೆ ಮಾಡಿತು.

ಅಷ್ಟೊತ್ತು ಕೈಗೆ ಸಿಕ್ಕಿದ ವಸ್ತುಗಳನ್ನು ಬಿಸಾಡುತ್ತಿದ್ದವರು ಈಗ ಖುಷಿಯಲ್ಲಿ ಹಣ ಎಸೆಯಲು ಆರಂಭಿಸಿದ್ದರು. ಸ್ಟೇಜ್ ಮೇಲೆ ನಾಣ್ಯಗಳು ಬಂದು ಬಂದು ಬೀಳುತ್ತಿರುವುದನ್ನು ನೋಡಿದ ಹುಡುಗ ಹಾಡು ನಿಲ್ಲಿಸಿದ. ಮೊದಲು ಹಣ ಹೆಕ್ಕಿಕೊಳ್ಳುವೆ ನಂತರ ಹಾಡು ಮುಂದುವರಿಸುವೆ ಎಂದು ಮೈಕ್ ಅಲ್ಲಿ ಹೇಳಿ ಹಣ ಒಟ್ಟುಮಾಡಲು ತೊಡಗಿದ. ಸಹಾಯಕ್ಕೆ ಮ್ಯಾನೇಜರ್ ನೂ ಓಡಿ ಬಂದು ತನ್ನ ಕರ್ಚೀಪ್ ಅಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ನಾಣ್ಯಗಳನ್ನು ಸಂಗ್ರಹಿಸಲು ಶುರು ಮಾಡಿದ. ಮ್ಯಾನೇಜರ್ ನಾಣ್ಯದ ಗಂಟು ಹಿಡಿದು ನೇಪಥ್ಯಕ್ಕೆ ಹೋದಾಗ ಬಾಲಕನೂ ಆತನ ಹಿಂದೆ ಓಡಿ ಕೂಡಲೇ ಹಣವನ್ನು ತನಗೆ ಕೊಡುವಂತೆ ಕೇಳಲಾರಂಭಿಸಿದ. ಇಡೀ ಘಟನೆ ಪ್ರೇಕ್ಷಕರಿಗೆ ರಂಜನೆ ನೀಡುತ್ತಿತ್ತು. ಪ್ರದರ್ಶನದ ಕೊನೆಯಲ್ಲಿ ಹೆನಾ ವೇದಿಕೆಗೆ ಬಂದು ಕರತಾಡನದ ನಡುವೆ ಮಗನನ್ನು ಎತ್ತಿಕೊಂಡು ಹೋದಳು. ಇದು ಚಾರ್ಲಿ ಚಾಪ್ಲಿನ್ ನ ಯ ಮೊತ್ತಮೊದಲ ಮತ್ತೆ ತಾಯಿಯ ಕಟ್ಟಕಡೆಯ ಪ್ರದರ್ಶನವಾಗಿತ್ತು. ಬಡತನ ಹುಟ್ಟಿಸುವ ಹಾಸ್ಯದ ಅನುಭವ ಚಾಪ್ಲಿನ್ ನ ಮನಸ್ಸಿನಲ್ಲಿ ಚಿತ್ರ ಬಿಡಿಸುತ್ತಿತ್ತು.

ಈ ಬೀದಿಯಲ್ಲಿ ಈಗಲೂ ನಿಂತಿರುವ “ಗ್ಲೇನ್ ಷಾ ಮ್ಯಾನ್ಷನ್ಸ್ ” ಎನ್ನುವ ಬಹುಮಹಡಿ ವಾಸ್ತವ್ಯದ 15 ನೆಯ ನಂಬ್ರದ ಫ್ಲಾಟ್ ನ ಕಡೆಗೆ ಕತ್ತೆತ್ತಿ ನೋಡಿದರೆ ಮೂರನೆಯ ಮಾಳಿಗೆಯ ಗೋಡೆಯ ಮೇಲೆ ನೆಟ್ಟಿರುವ ನೀಲಿ ಫಲಕ, ಒಂದು ಬಾಲ್ಯದ ಹೃದಯ ವಿದ್ರಾವಕ ಕತೆಯ ಕಟ್ಟನ್ನು ಮೆತ್ತಗೆ ಮೂಕವಾಗಿ ಬಿಡಿಸಿ ಹರಡುತ್ತದೆ.

ಚಾರ್ಲಿ ಚಾಪ್ಲಿನ್ ನ ನೆರೆಯಲ್ಲಿ ವಾಸಿಸುತ್ತಿದ್ದ ರಮ್ಮಿ ಬಿಂಕ್ಸ್ ಎನ್ನುವ ಗಿಡ್ಡ ದೇಹದ ವ್ಯಕ್ತಿ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದವನು. ದೊಗಳೆ ಪ್ಯಾಂಟ್, ಸೊಟ್ಟೆ ನಡಿಗೆಯಾತ, ಒಂದು ಪೆನ್ನಿ (ಸುಮಾರು ಒಂದು ರೂಪಾಯಿ) ಹಣಕ್ಕೆ ಬೀದಿ ಬದಿಯಲ್ಲಿ ನಿಂತ ಯಾತ್ರಿಗಳಿಗೆ ಬಾಡಿಗೆ ಕುದುರೆಗಾಡಿ ಹಿಡಿದು ಕೊಡುವ ಕೆಲಸ ಮಾಡುತ್ತಿದ್ದ. ರಮ್ಮಿಯ ನಡಿಗೆಯನ್ನು ಗಮನಿಸುತ್ತಿದ್ದ ಚಾಪ್ಲಿನ್ ಅನುಕರಿಸಲು ಆರಂಭಿಸಿದ. ಬೇರೆ ನೆರೆಹೊರೆಯವರ ನಡಿಗೆ ಹಾವಭಾವಗಳ ಮಿಮಿಕ್ರಿಯನ್ನೂ ಮಾಡಲು ಶುರು ಮಾಡಿದ. ಅನುಕರಣಾ ಕಲೆ ಚಾಪ್ಲಿನ್ ನಿಗೆ ಹೊಸ ಸ್ನೇಹಿತರನ್ನೂ ಶತ್ರುಗಳನ್ನೂ ಸಂಪಾದಿಸಿ ಕೊಟ್ಟಿತು. ರಮ್ಮಿಯ ನಡಿಗೆಯ ಅನುಕರಣೆಯನ್ನು ಮೊದಲ ಬಾರಿ ನೋಡಿದಾಗ ತಾಯಿ ಹೆನಾ ತಡೆಯಲಾರದೆ ಬಿದ್ದು ಬಿದ್ದು ನಕ್ಕಿದ್ದಳು. ಆದರೂ, ಆ ದೌರ್ಭಾಗ್ಯ ರಮ್ಮಿಯನ್ನು ಅನುಕರಿಸುವುದು ಕ್ರೌರ್ಯ ಎಂದೂ ಹೇಳಿದ್ದಳು. ಚಾಪ್ಲಿನ್ ನ ಸಿನೆಮಾಗಳ ಶೋಷಣೆ ದಾರಿದ್ಯ್ರದ ಕತೆಗಳಲ್ಲಿ ನಗುತ್ತಲೇ ಅಳು ಹಂಚುವ ದೊಗಳೆ ಪ್ಯಾಂಟಿನ ಬೆಚ್ಚಿದ ಮುಖಮುದ್ರೆಯ ವಿಚಿತ್ರ ನಡಿಗೆಯ ಅಲೆಮಾರಿ ಕುಳ್ಳ ಹುಟ್ಟಿದ್ದು ಲಂಡನ್ ನ ಬೀದಿಯಿಂದ. ತನ್ನ ಹಾಗು ನೆರೆಹೊರೆಯವರ ನೋವು ಸಂಕಟಗಳಿಂದ.

ವಿಚ್ಛೇದನದ ನಂತರ, ಹಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿದ್ದ ಹೆನಾ ಸ್ವಾಸ್ಥ್ಯ ಕೇಂದ್ರದಲ್ಲಿ ವಾಸಿಸುವುದು ಮತ್ತೆ ಮನೆಗೆ ಮರಳುವುದು, ಪರಿಸ್ಥಿತಿ ಹದಗೆಟ್ಟಾಗ ನಿರಾಶ್ರಿತ ಕೇಂದ್ರದಲ್ಲಿ ಇರಬೇಕಾಗಿ ಬರುವುದು ನಡೆಯುತ್ತಿತ್ತು. ಆಗ ಚಾರ್ಲಿ ಚಾಪ್ಲಿನ್ ತಂದೆಯ ಜೊತೆಗೆ ಇರಲಾರಂಭಿಸಿದ. ಒಮ್ಮೆ ತಂದೆ ಬೇರೆ ಊರಿನಲ್ಲಿ ಕಾರ್ಯಕ್ರಮ ನೀಡಲು ಹೋಗಿದ್ದಾಗ ಒಂಭತ್ತು ವರ್ಷದವನಾಗಿದ್ದ ಚಾಪ್ಲಿನ್ ಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಆಕಸ್ಮಿಕ ಅವಕಾಶ ಒದಗಿಬಂತು. “ಲ್ಯಾಂಕಾಶೈರ್ ಲ್ಯಾಡ್ಸ್” ಎನ್ನುವ ಎಂಟು ಜನರ ನೃತ್ಯ ತಂಡದ ಕಾರ್ಯಕ್ರಮದಲ್ಲಿ ಕಲಾವಿದನೊಬ್ಬ ಲಭ್ಯ ಇಲ್ಲದ ಕಾರಣ ಬದಲಿ ಕಲಾವಿದ ಬೇಕಾಗಿತ್ತು. ಮರದ ಬೂಟು ಧರಿಸಿ ನೃತ್ಯ ಮಾಡುವ ಆ ತಂಡಕ್ಕೆ ಎಂಟನೆಯವನಾಗಿ ಬಾಲಕ ಚಾಪ್ಲಿನ್ ಆಯ್ಕೆಯಾದ. ಮುಂದೆ ಅದೇ ತಂಡದೊಟ್ಟಿಗೆ ದೇಶದಾದ್ಯಂತ ತಿರುಗಾಟವನ್ನೂ ಮಾಡಿದ. 1901ರಲ್ಲಿ ಒಂದು ದಿನ ಕೆನ್ನಿಂಗ್ಟನ ರಸ್ತೆಯಲ್ಲಿ ನಡೆಯುತ್ತಿದ್ದಾಗ, ಪಬ್ ಒಂದರ ಕಿಟಕಿ ಬಳಿಯ ಟೇಬಲ್ ಅಲ್ಲಿ ತಂದೆ ಕುಳಿತಿರುವುದು ಕಾಣಿಸಿತು. ಒಂದು ಕಾಲದಲ್ಲಿ ಸ್ಪುರದ್ರೂಪಿ ಕಲಾವಿದನಾಗಿದ್ದ ತಂದೆ, ಆಗ ಕೊನೆಯ ಹಂತದ ಲಿವರ್ ಸಮಸ್ಯೆಯಿಂದ ಗುರುತಿಸಲಾಗದಷ್ಟು ಅಸ್ವಸ್ಥನಾಗಿದ್ದ. ವಿಚ್ಛೇದನದ ನಂತರ ತೀರ ಕುಡಿಯುತ್ತಿದ್ದ ತಂದೆಯ ದೇಹವೆಲ್ಲ ಊದಿಕೊಂಡಿತ್ತು. ಅದೇ ವರ್ಷದ ಏಪ್ರಿಲ್ ಅಲ್ಲಿ ಆಸ್ಪತ್ರೆ ಸೇರಿದ ಸೀನಿಯರ್ ಚಾಪ್ಲಿನ್ ಮೇ ತಿಂಗಳಲ್ಲಿ ತೀರಿಕೊಂಡ.

ತಂದೆಯ ಮರಣಾನಂತರ ಖರ್ಚುವೆಚ್ಚವನ್ನು ನೀಗಿಸಲು ಚಾಪ್ಲಿನ್ ಸಿಕ್ಕಿದ ಕೆಲಸ ಮಾಡುತ್ತಿದ್ದ. ದೀಪದ ಎಣ್ಣೆ ಮಾರುವ ಅಂಗಡಿ, ಕ್ಷೌರದ ಅಂಗಡಿ, ಮುದ್ರಣಾಲಯ, ಗಾಜು ತಯಾರಿಗಳಲ್ಲಿ ಸಹಾಯಕನಾಗಿ ದುಡಿದ. ಕ್ಲಾಪನ್ ಹ್ಯಾಮ್ ರೈಲು ನಿಲ್ದಾಣದ ಹೊರಗೆ ಸುದ್ದಿಪತ್ರಿಕೆಗಳನ್ನು ಮಾರಿದ. 1903ರಲ್ಲಿ ನಾಟಕವೊಂದರಲ್ಲಿ ನ್ಯೂಸ್ ಪೇಪರ್ ಮಾರುವ ಹುಡುಗನ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. “ಟೈಮ್ಸ್”ಪತ್ರಿಕೆಯಲ್ಲಿ ಅನಾಮಿಕ ಬೀದಿಬಾಲಕನ ನಟನೆಯ ಬಗ್ಗೆ ಪ್ರಶಂಸೆಯ ನುಡಿಗಳು ಬಂದವು. ಬೇರೆ ನಾಟಕಗಳಲ್ಲಿ ಅಭಿನಯಿಸುವ ಅವಕಾಶವೂ ಸಿಗತೊಡಗಿತು. 1908ರಲ್ಲಿ ಪ್ರಸಿದ್ಧ “ಫ್ರೆಡ್ ಕರ್ನೊ” ನಾಟಕ ತಂಡವನ್ನು ಸೇರುವ ಅವಕಾಶ ಸಿಕ್ಕಿತು. ಆ ಕಾಲದಲ್ಲಿ ಸಂಭಾಷಣೆಗಳನ್ನು ನಾಟಕಗಳಿಂದ ನಿರ್ಬಂಧಿಸಲಾಗಿತ್ತು. ಹಾಗಾಗಿ ಕರ್ನೊ ತಂಡದಲ್ಲಿ ಮೂಕ ನಟನೆಯಿಂದಲೇ ಪಾತ್ರ ಚಿತ್ರಣ ಮಾಡಲಾಗುತ್ತಿತ್ತು. ಸಂಜ್ಞೆ ಆಧಾರಿತ ಮೂಕ ನಟನೆಯೇ ಮುಂದೆ ಚಾಪ್ಲಿನ್ ನ ಚಿತ್ರಗಳ ಜೀವಾಳವಾಯಿತು. ಸಿನೆಮಾಗಳಲ್ಲಿ ಮಾತು ಧ್ವನಿಗಳ ಬಳಕೆ ಆರಂಭ ಆದ ಮೇಲೂ ಚಾರ್ಲಿ ಚಾಪ್ಲಿನ್ ನ ಸಿನೆಮಾಗಳಲ್ಲಿ ಲೋಕವಿಖ್ಯಾತಿಯನ್ನೂ ಅತಿ ಹೆಚ್ಚು ಸಂಭಾವನೆಯನ್ನೂ ಗಳಿಸಿಕೊಟ್ಟ “ಲಿಟಲ್ ಟ್ರಾಂಪ್” (ಗಿಡ್ಡ ಅಲೆಮಾರಿ) ಪಾತ್ರ ನಿರ್ವಹಿಸಿದಾಗ (1940ರ “ದಿ ಗ್ರೇಟ್ ಡಿಕ್ಟೇಟರ್” ತನಕದ ಚಿತ್ರಗಳು) ಧ್ವನಿಪೂರ್ಣ ಸಂಭಾಷಣೆಗಳನ್ನು ಬಳಸಲಿಲ್ಲ. ಮೂಕ ನಟನೆಯಿಂದಲೇ ವಿಶ್ವಪ್ರಸಿದ್ಧಿ ಪಡೆದ “ಅಲೆಮಾರಿ ಕುಳ್ಳ”ನ ಪಾತ್ರಕ್ಕೆ ಒಂದೊಮ್ಮೆ ಧ್ವನಿ ನೀಡುವುದಿದ್ದರೂ ಯಾರ ಎಂತಹ ಧ್ವನಿ ನೀಡಬಹುದು ಎಂದು ನಿರ್ಧರಿಸಲಾಗದೆ ಮೂಕಾಭಿನಯವನ್ನೇ ಮುಂದುವರಿಸಿದ.

ಕರ್ನೊ ಕಂಪೆನಿ ಒದಗಿಸಿದ ಅವಕಾಶ ಚಾಪ್ಲಿನ್ ನ ಬದುಕಿಗೆ ದೊಡ್ಡ ತಿರುವು ಆಧಾರ ನೀಡಿತು. ಲಂಡನ್ನಿನ ಲಾಂಬೆತ್ ಪ್ರದೇಶದ “ಗ್ಲೇನ್ ಷಾ ಮ್ಯಾನ್ಷನ್ಸ್” ಎನ್ನುವ ಬಹುಮಹಡಿ ವಸತಿಯ 15 ನೆಯ ನಂಬ್ರದ ಫ್ಲಾಟ್ ಮೊದಲ ಸ್ವಂತದ ಬಿಡಾರವಾಯಿತು. ಚಾರ್ಲಿಯ ತಾಯಿಯ ಮೊದಲ ಸಂಗಾತಿಯ ಮಗ ಸಿಡ್ನಿ ಹಾಗು ಚಾರ್ಲಿ ಇಲ್ಲಿ ಜೊತೆಗೆ ಇರಲಾರಂಭಿಸಿದರು. ಮೂರನೆಯ ಮಹಡಿಯಲ್ಲಿದ್ದ ಈ ಮನೆಯನ್ನು “ಬದುಕಿನುದ್ದಕ್ಕೂ ಮೆಲುಕುಹಾಕುವ ಸ್ವರ್ಗ” ಎಂದು ಚಾರ್ಲಿ ಚಾಪ್ಲಿನ್ ಹೇಳಿಕೊಂಡದ್ದಿದೆ. ಮುಂದಿನ ಕೋಣೆಗೆ ಕಾರ್ಪೆಟ್ ಹಾಕಿಸಿ, ಬಾಕಿ ಕೋಣೆಗಳ ನೆಲಕ್ಕೆ ವಿನೈಲ್ ಹಾಸಿ, ನಾಲ್ಕು ಸಾವಿರ ರೂಪಾಯಿ ಮೌಲ್ಯದ ಸೆಕೆಂಡ್ ಹ್ಯಾಂಡ್ ಪೀಠೋಪಕರಣಗಳನ್ನು ಖರೀದಿಸಿ, ಹಳೆಯ ಸ್ಪ್ಯಾನಿಷ್ ಮಾದರಿಯ ಜಾಲಂಧ್ರ ಪರದೆ, ಒಂದು ಗೋಡೆಯ ಮೇಲೆ ಹಳದಿ ಬೆಳಕು, ಇನ್ನೊಂದು ಗೋಡೆಯಲ್ಲಿ ತೂಗು ಹಾಕಿದ್ದ ನಗ್ನ ಹುಡುಗಿಯ ಕಲಾತ್ಮಕ ಚಿತ್ರ ಎಲ್ಲವೂ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದ್ದವು. ತನ್ನ ಮನೆ ” ಹದಿಮೂರು ಹದಿನಾಲ್ಕನೆಯ ಶತಮಾನದ ಸ್ಪೇನ್ ನ ಸಿಗರೇಟ್ ಶಾಪಿನ ವಾಸ್ತು ಶೈಲಿ ಮತ್ತು ಫ್ರಾನ್ಸ್ ನ ವೇಶ್ಯಾಗೃಹ, ಎರಡರ ಸಂಯೋಗದ ಅನುಭವ ನೀಡುತ್ತಿತ್ತು, ಆದರೆ ನಮಗೆ ಪ್ರಿಯವಾಗಿತ್ತು” ಎಂದು ಚಾಪ್ಲಿನ್ ಬರೆದಿದ್ದಾನೆ.

ಮೊಟ್ಟಮೊದಲ ಮತ್ತು ಬರೇ ಹನ್ನೊಂದು ದಿನಗಳ ಪ್ರೇಯಸಿ, ಹೆಟ್ಟಿ ಕೆಲ್ಲಿಯನ್ನು ಭೇಟಿಯಾಗಿದ್ದು ಈ ವಸತಿಯಲ್ಲಿ ಇರುವಾಗಲೇ. ೧೯೧೦ರಲ್ಲಿ ಕರ್ನೊ ಕಂಪೆನಿಯ ಜೊತೆ ಅಮೆರಿಕ ಪ್ರವಾಸಕ್ಕೆ ಹೋಗುವಾಗ ಸಹೋದರ ಸಿಡ್ನಿ, “ಮರ್ಚಂಟ್‌ ನೇವಿ” ಕೆಲಸದಲ್ಲಿದ್ದ. ಆತನಿಗೆ ವಿದಾಯ ಪತ್ರ ಬರೆದಿಟ್ಟು ಚಾಪ್ಲಿನ್ ಅಮೆರಿಕಕ್ಕೆ ಪ್ರಯಾಣ ಮಾಡಿದ. ಅಮೆರಿಕ ಪ್ರವಾಸ ಮುಗಿಸಿ 1912ರಲ್ಲಿ ಮರಳಿದಾಗ ಸಿಡ್ನಿ ಮದುವೆಯಾಗಿ ಇವರ ಅತಿ ಆಪ್ತ ಜಂಟಿ ಫ್ಲಾಟ್ ಅನ್ನು ಬಿಟ್ಟು ಬೇರೆ ಕಡೆ ವಾಸಿಸುತ್ತಿದ್ದ. ಚಾಪ್ಲಿನ್ ತನ್ನ ಕನಸಿನ ವಾಸ್ತವ್ಯವನ್ನು ಅನಿರೀಕ್ಷಿತವಾಗಿ ಕಳೆದುಕೊಂಡು ನಿರಾಶನಾದರೂ ಅದೇ ರಸ್ತೆಯಲ್ಲಿ ಬಾಡಿಗೆ ಕೋಣೆ ಹಿಡಿದು ಇರಲಾರಂಭಿಸಿದ. ಚಾಪ್ಲಿನ್ ಹೇಳುವಂತೆ “ಒಂದು ವೇಳೆ 15 ನೇ ನಂಬ್ರದ ಕನಸಿನ ಫ್ಲಾಟ್‌ಗೆ ನಾನು ಮರಳಿದ್ದರೆ ಬಹುಷಃ ಬದುಕಿನ ಹೆಜ್ಜೆಗಳು ಬೇರೆಯೇ ಆಗಿರುತ್ತಿದ್ದವು”. 1912ರ ಅಕ್ಟೋಬರ್ ಅಲ್ಲಿ ಎರಡನೆಯ ಬಾರಿಗೆ ಅಮೆರಿಕ ತಿರುಗಾಟಕ್ಕೆ ಹೋದಮೇಲೆ ನಟನೆಯ ಮೂಲಕ ಜನಪ್ರಿಯನಾಗಿ ವಿವಿಧ ನಿರ್ಮಾಪಕರ ಸಿನೆಮಾಗಳಲ್ಲಿ ನಟಿಸುತ್ತ, ಮುಂದೆ ತನ್ನದೇ ನಿರ್ಮಾಣದ ಸಿನೆಮಾಗಳ ಮೂಲಕ ಅಪ್ರತಿಮ ನಟ ನಿರ್ಮಾಪಕ ಸಂಗೀತ ನಿರ್ದೇಶಕ ಎನಿಸಿದ, ನಾಲ್ಕು ದಶಕಗಳ ಕಾಲ ಅಮೆರಿಕದ ಹಾಲಿವುಡ್ ಅನ್ನು ನೆಲೆಯಾಗಿಸಿಕೊಂಡ.

1931ರಲ್ಲಿ ಲಂಡನ್ ಗೆ ಬಂದಾಗ ಮಹಾತ್ಮಾ ಗಾಂಧಿಯನ್ನು ಭೇಟಿಯಾಗಿದ್ದನ್ನು “ಗಾಂಧಿಯನ್ನು ಸಂಧಿಸಿದ್ದು ಮನುಷ್ಯರ ಮೇಲೆ ಸ್ವಯಂಚಾಲಿತ ಯಂತ್ರಗಳ ದುಷ್ಪರಿಣಾಮದ ಬಗ್ಗೆ ಚಿತ್ರ ಮಾಡುವಂತೆ ಪ್ರೇರೇಪಿಸಿತು” ಎಂದು ಆತ್ಮಕತೆಯಲ್ಲಿ ದಾಖಲಿಸಿದ್ದಾನೆ . 1936ರಲ್ಲಿ ನಿರ್ಮಿಸಿದ “ಮಾಡರ್ನ್ ಟೈಮ್ಸ್” ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಮೇಲೆ ಕೈಗಾರಿಕೀಕರಣದ ಪರಿಣಾಮವನ್ನು ಚಿತ್ರಿಸಿತು. 1952ರಲ್ಲಿ “ಲೈಮಲೈಟ್” ಸಿನೆಮಾದ ಬಿಡುಗಡೆಗೆ ಲಂಡನ್ ಗೆ ಬಂದ ನಂತರ, ಅಮೆರಿಕಕ್ಕೆ ಮರಳುವುದು ಸಾಧ್ಯ ಆಗಲಿಲ್ಲ. ಕಮ್ಯುನಿಸ್ಟ್ ಸಹಾನುಭೂತಿ ಇರುವವನು ಎನ್ನುವ ಕಾರಣಕ್ಕೆ ಆ ಸಮಯದ ಅಮೆರಿಕದ ಆಡಳಿತ ವ್ಯವಸ್ಥೆ ವಾಪಸ್ ದೇಶವನ್ನು ಪ್ರವೇಶಿಸುವ ಅನುಮತಿಯನ್ನು ನಿರಾಕರಿಸಿತು. ಕೊನೆಯ ಎರಡು ಸಿನೆಮಾಗಳನ್ನು ಇಂಗ್ಲೆಂಡ್ ಅಲ್ಲಿಯೇ ನಿರ್ಮಿಸಿದ ಚಾಪ್ಲಿನ್, 1952ರ ನಂತರ ಸ್ವಿಟ್ಜರ್ಲ್ಯಾಂಡ್ ಅಲ್ಲಿ ನೆಲೆಸಿದ.

ಚಾರ್ಲಿ ಚಾಪ್ಲಿನ್ ನ ಸಿನೆಮಾಗಳನ್ನು ನೋಡದವರು ಜಗತ್ತಿನಲ್ಲಿ ಹಲವರು ಇರಬಹುದು ಆದರೆ ಆತನ ಹೆಸರು ಕೇಳದವರು, ಅಥವಾ ಗಿಡ್ಡ ದೇಹದ ಅಲೆಮಾರಿ, ದೊಗಲೆ ಪ್ಯಾಂಟ್, ದೊಡ್ಡ ಶೂ, ಟೂತ್ ಬ್ರಷ್ ಮೀಸೆ, ಬೆದರಿದ ವಿದೂಷಕ ನಡಿಗೆಯ ಪಾತ್ರವನ್ನು ಗುರುತು ಹಿಡಿಯದವರು ವಿರಳ. ಹೊರ ಜಗತ್ತಿನ ಮಟ್ಟಿಗೆ “ಲಂಡನ್ನಿನ ಅತ್ಯಂತ ಪ್ರಖ್ಯಾತ ವ್ಯಕ್ತಿ” ಎಂದೂ ಕರೆಯಲ್ಪಡುವ, ಚಾಪ್ಲಿನ್ ನ ಪ್ರಕಾರ “ಬದುಕು ಹತ್ತಿರದ ಸೂಕ್ಷ್ಮ ನೋಟದಲ್ಲಿ ದುರಂತಮಯ, ದೂರದಿಂದ ನೋಡಿದರೆ ವಿನೋದಪೂರ್ಣ”. ಮೂಕ ಸಿನೆಮಾ ಯುಗದ ಶ್ರೇಷ್ಠ ಕಲಾವಿದ ನಿರ್ಮಾಪಕನ ಸಿನೆಮಾಗಳಲ್ಲಿ ಲಂಡನ್ ಅಲ್ಲಿ ಕಳೆದ ದಾರಿದ್ಯ್ರ ಸಂಕಷ್ಟದ ದಿನಗಳು, “ಕ್ಲೋಸ್ ಅಪ್” ಹಾಗು “ಲಾಂಗ್ ಶಾಟ್” ಗಳಾಗಿ ಪ್ರತಿಫಲಿಸಿವೆ. ಬೀದಿಬದಿಯ ಸಾಮಾನ್ಯರ ನತದೃಷ್ಟರ ಕಡೆಗಣಿಸಲ್ಪಟ್ಟವರ ಕತೆಗಳು ವ್ಯಂಗ್ಯ ಹಾಸ್ಯಗಳಾಗಿ, ಅಂದಿನ ಜ್ವಲಂತ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ, ರಾಷ್ಟ್ರೀಯ ದುರಂತಗಳಿಗೆ ಟಿಪ್ಪಣಿಯಾಗಿ ಜೀವ ಪಡೆದಿವೆ. ಅಳುವ ಕಡಲಿನಲ್ಲಿ ನಗೆಯ ದೋಣಿಯೊಂದು ತೇಲುತ್ತಿದೆ.