ನಮ್ಮ ಸಮಾಜದ ಮೂಲ ಘಟಕಗಳಾದ ಹೆಣ್ಣು ಮತ್ತು ಗಂಡು, ಮತ್ತವರ ನಡುವಿನ ಆರೋಪ ಪ್ರತ್ಯಾರೋಪ ಇಂದಿಗೂ ಹೊಸತಲ್ಲ. ಈ ಎರೆಡು ಅನನ್ಯ ಭಿನ್ನ ಎಂಟಿಟಿಗಳ ನಡುವೆ ಹೋಲಿಕೆ ವ್ಯತ್ಯಾಸವೇ ಅಸಂಗತ. ಅದಾಗ್ಯೂ ಅದು ನಡೆಯುತ್ತಲೇ ಹೋಗುತ್ತದೆ. ಹೆಣ್ಣು ಹೆಣ್ಣಿನ ನಡುವಿನ ಹೋಲಿಕೆಯೂ ಕೆಲವೊಮ್ಮೆ ಸಮಂಜಸವೆನಿಸುವುದಿಲ್ಲ. ಜೈವಿಕ ಹೆಣ್ಣಿನೊಳಗೆ ಹಲವು ಪಾತ್ರಗಳಿವೆ. ಆ ಪ್ರತಿಯೊಂದು ಪಾತ್ರವೂ ತನ್ನ ವಿಭಿನ್ನ ಶೈಲಿಯಲ್ಲಿಯೇ ಪಾತ್ರಪೋಷಣೆಯಲ್ಲಿ ತೊಡಗಿರುತ್ತದೆ. ಆ ಪಾತ್ರಗಳನ್ನೆ ಒಂದನ್ನೊಂದು ಹೋಲಿಸಲಿಕ್ಕಾಗದು. ಗಂಡಾದವನು ಬಹಳ ಸುಲಭವಾಗಿ ತಾಯಿ ಮತ್ತು ಹೆಂಡತಿಯ ತುಲನೆಗೆ ತೊಡಗಬಹುದು. ಮತ್ತು ತಾಯಿಯೇ ಶ್ರೇಷ್ಠ ಎನ್ನುವ ತೀರ್ಮಾನಕ್ಕೂ ಬಂದುಬಿಡಬಹುದು.
ಆಶಾ ಜಗದೀಶ್ ಅಂಕಣ

 

ಹೆಣ್ಣು ತನ್ನ ಅಸ್ತಿತ್ವದ ವಿಚಾರಕ್ಕೆ ಬಂದಾಗ ಕುಟುಂಬದ ಒಳಗಾಗಲಿ ಹೊರಗಾಗಲಿ ತನ್ನನ್ನು ತಾನು ಗುರುತಿಸಿಕೊಳ್ಳಲಿಕ್ಕೆ ಅಥವಾ ತನ್ನದೆನ್ನುವ ಅಸ್ತಿತ್ವದ ಗುರುತನ್ನು ಇದು ಎಂದು ಸ್ಥೈರ್ಯದಿಂದ ಹೇಳಿಕೊಳ್ಳಲಿಕ್ಕೆ ಪ್ರಬಲ ರೋಧ ಉಂಟಾಗುತ್ತದೆ. ಅದಕ್ಕೆ ಕಾರಣ ಯಾರು ಹಾಗಾದರೆ?! ಇದನ್ನು ಸ್ಪಷ್ಟಪಡಿಸುವುದು ಕಷ್ಟ. ಭಿನ್ನ ನೆಲೆಗಳಲ್ಲಿ ವಿಭಿನ್ನ ಉತ್ತರ ಸಿಗುತ್ತವೆ ನಮಗೆ. ಎಲ್ಲರ ಮೂಗಿನ ನೇರವೂ ಒಂದು ಜಾಗದಲ್ಲಿ ಸೇರಬೇಕೆಂಬ ಯಾವ ನಿಯತಿ ಇಲ್ಲ. ಆದರೆ ಅವಳ ವಿಷಯಕ್ಕೆ ಬಂದಾಗ ಅವಳ ಸ್ವಾತಂತ್ರ್ಯವನ್ನು ಅವಳು ತೆಗೆದುಕೊಳ್ಳಲಿಕ್ಕೂ ದೊಣ್ಣೆ ನಾಯಕನ ಅಪ್ಪಣೆ ಪಡೆಯಬೇಕಾಗಿ ಬರುವುದು ದುಃಖದ ಪರಿಸ್ಥಿತಿ.

ಗಂಡಿಗೆ ಅಪ್ರಯತ್ನಾಪೂರ್ವಕವಾಗಿ ಸಿಗುವ ಕನಿಷ್ಟ ಮನ್ನಣೆಯಷ್ಟನ್ನು ಪಡೆಯಲಿಕ್ಕೂ ಹೆಣ್ಣಿಗೆ ಹೋರಾಟ ಮಾಡಬೇಕಾಗಿ ಬರುವುದು ಸಮಾಜ ಯಾವ ದಿಕ್ಕಿನಿಂದ ಬೆಳೆದು ಬರುತ್ತಿದೆ ಎನ್ನುವುದಕ್ಕೆ ನಿದರ್ಶನ. ಇದು ಬದಲಾಗಬೇಕು ಎನ್ನುವುದು ಆಶಯ. ಅದರೆ ಆ ನಿಟ್ಟಿನಲ್ಲಿ ಸಮಾಜದ ಪ್ರಯತ್ನವೇಕೆ ಶೂನ್ಯ….? ಅದಕ್ಕೆ ತುಳಿಯಲು ಯಾರಾದರೂ ಬೇಕು. ಉಳಿವಿಗಾಗಿ ಹೋರಾಡುವ ಹೋರಾಟದಲ್ಲಿ ಒಬ್ಬರು ಸತ್ತರೇ ಇನ್ನೊಬ್ಬರು ಉಳಿಯಲು ಸಾಧ್ಯ ಎನ್ನುವ ಅರಣ್ಯ ನ್ಯಾಯ ನಾಗರೀಕ ಮಾನವ ಪ್ರಪಂಚವನ್ನೂ ಆಳುತ್ತಿರುವುದು ನೋವಿನ ಸಂಗತಿ. ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ ಬದುಕುವುದು ಯಾರಿಗೆ ತಾನೆ ಬಯಸಿದ ಆಯ್ಕೆಯಾಗಿರಲು ಸಾಧ್ಯ?! ಅವಳಿಗೆ ಸಹಜವಾಗಿ ಸಿಗಬೇಕಾದದ್ದನ್ನು ಅವಳಿಂದ ಕಿತ್ತುಕೊಂಡು ಔದಾರ್ಯದ ಸೋಗಿನಲ್ಲಿ ಭಿಕ್ಷೆಯಂತೆ ನೀಡುವುದು ಯಾವ ಕೋನದಿಂದ ಸರಿ… ಗಡಸು ದನಿಯ ಹಿಂದೆ ಅವಳ ಕೀರಲು ದನಿ ಹೋರಾಟ ನಡೆಸಿ ಸೋಲುತ್ತದೆ. ಇಲ್ಲಿನ ಹೋರಾಟವೇ ಅನೈತಿಕ. ಇದು ಕಟು ವಾಸ್ತವ. ಮತ್ತು ಈ ಮನೋಭಾವವನ್ನು ರೂಢಿಸುತ್ತಿರುವುದು ಸಮಾಜ.

ಸರಿ ಹೋರಟವಿರಲಿ. ಹೋರಾಡೋಣ. ಆದರೆ ಯಾರೊಂದಿಗೆ?! ಯಾರನ್ನು ನಮ್ಮ ಜೀವದ ಒಂದು ತುಣುಕು ಎಂದು ಭಾವಿಸಿರುತ್ತೇವೋ ಅವರೊಂದಿಗೆ?! ಇದೇ ವ್ಯಂಗ್ಯ. ಅವಳು ಬೇಕಾಗೇ ಸೋಲುತ್ತಾಳೆ. ಅವಳಿಗೆ ಗೊತ್ತು ಗೆಲುವಿಗಿಂತಲೂ ತನ್ನ ಜೀವದ ಜೀವವೇ ಮುಖ್ಯ. ಕಾರಣ ಅವರಿಲ್ಲದೆ ಅವಳಿಲ್ಲ. ಗೆಲುವಿಗಿಂತಲೂ ಹೆಚ್ಚಿನ ಸಂಭ್ರಮ ಅವರು ಅವಳೊಂದಿಗೆ ಇರುವುದರಲ್ಲಿದೆ. ಅವರನ್ನೇ ಅವಳು ತನ್ನ ಮೊದಲ ಆದ್ಯತೆಯನ್ನಾಗಿಸಿಕೊಳ್ಳುತ್ತಾಳೆ. ಸೋಲು ಅವಳ ಪಾಲಿಗೆ ಸೋಲೇ ಅಲ್ಲ. ಅದು ಅವಳಿಗೆ ಅತಿ ಕ್ಷುಲ್ಲಕ. ಹಾಗಾಗಿ ಅಷ್ಟು ಸುಲಭವಾಗಿ ಸೋಲನ್ನು ಆಯ್ದುಕೊಳ್ಳುತ್ತಾಳೆ. ಮತ್ತೆ ಅವರ ಅಹಂ ಅನ್ನು ತಣಿಸುತ್ತಾಳೆ. (ತಣ್ಣಗೆ ಮಣಿಸುತ್ತಾಳೆ ಆಥವಾ ಅದೇ ಮಣಿಯುತ್ತದೆ ಎನ್ನಬಹುದೂ ಸಹ…)

ಆದರೆ ನಮ್ಮ ಸಮಾಜದ ಮೂಲ ಘಟಕಗಳಾದ ಹೆಣ್ಣು ಮತ್ತು ಗಂಡು, ಮತ್ತವರ ನಡುವಿನ ಆರೋಪ ಪ್ರತ್ಯಾರೋಪ ಇಂದಿಗೂ ಹೊಸತಲ್ಲ. ಈ ಎರೆಡು ಅನನ್ಯ ಭಿನ್ನ ಎಂಟಿಟಿಗಳ ನಡುವೆ ಹೋಲಿಕೆ ವ್ಯತ್ಯಾಸವೇ ಅಸಂಗತ. ಅದಾಗ್ಯೂ ಅದು ನಡೆಯುತ್ತಲೇ ಹೋಗುತ್ತದೆ. ಹೆಣ್ಣು ಹೆಣ್ಣಿನ ನಡುವಿನ ಹೋಲಿಕೆಯೂ ಕೆಲವೊಮ್ಮೆ ಸಮಂಜಸವೆನಿಸುವುದಿಲ್ಲ. ಜೈವಿಕ ಹೆಣ್ಣಿನೊಳಗೆ ಹಲವು ಪಾತ್ರಗಳಿವೆ. ಆ ಪ್ರತಿಯೊಂದು ಪಾತ್ರವೂ ತನ್ನ ವಿಭಿನ್ನ ಶೈಲಿಯಲ್ಲಿಯೇ ಪಾತ್ರಪೋಷಣೆಯಲ್ಲಿ ತೊಡಗಿರುತ್ತದೆ. ಆ ಪಾತ್ರಗಳನ್ನೆ ಒಂದನ್ನೊಂದು ಹೋಲಿಸಲಿಕ್ಕಾಗದು. ಗಂಡಾದವನು ಬಹಳ ಸುಲಭವಾಗಿ ತಾಯಿ ಮತ್ತು ಹೆಂಡತಿಯ ತುಲನೆಗೆ ತೊಡಗಬಹುದು. ಮತ್ತು ತಾಯಿಯೇ ಶ್ರೇಷ್ಠ ಎನ್ನುವ ತೀರ್ಮಾನಕ್ಕೂ ಬಂದುಬಿಡಬಹುದು. ಆದರೆ ಹೆಣ್ಣು?! ಹೆಂಡತಿಯಾಗಿ ಕಡೆಗಣಿಸಲ್ಪಡುವ ಹೊತ್ತಿನಲ್ಲೇ ಅವಳು ತಾಯಿಯೂ ಸಹ. ಮತ್ತು ಆ ಎರೆಡರಲ್ಲೂ ಅವಳ ಆಂತರ್ಯದ ನಿರೀಕ್ಷೆಯೂ ಬೇರೆ ಇದೆ. ಜೊತೆಗೆ ಅವಳು ಹುಟ್ಟಾ ತಾಯಿ ಎಂದೂ ಸಾಬೀತಾಗುತ್ತಾಳೆ.

ಗಂಡನಿಗೂ ತಾಯಿಯಾದ ಎಷ್ಟೋ ಹೆಣ್ಣುಮಕ್ಕಳಿದ್ದಾರೆ. ಅವರ ಹೇಲು ಉಚ್ಚೆ ಬಳಿದೂ ಹೇಸದ ಅದೆಷ್ಟೋ ಹೆಂಗಸರು ಸಿಗುತ್ತಾರೆ. ಆ ಸಂಖ್ಯೆಗೆ ಹೋಲಿಸಿದರೆ ಹೆಂಡತಿಯ ಸೇವೆ ಮಾಡಿದ ಗಂಡಸರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬೇಕು. ಇಲ್ಲವೇ ಇಲ್ಲ ಎಂದಲ್ಲ. ಹಾಗಾದರೆ ಪ್ರತಿ ಹೆಣ್ಣೂ ತನ್ನ ಅಪ್ಪನಂತೆ ಗಂಡ ಇಲ್ಲ ಎಂದು ಹಲುಬುತ್ತಾ ಕೂತರೆ ಏನಾಗಬಹುದು?! ಆದರೆ ಅವಳೊಳಗಿನ ತಾಯಿ ಯಾವತ್ತೂ ಹಾಗೆ ಮಾಡಲಾರಳು. ಮಡಿಲಲ್ಲಿ ತಲೆ ಇಟ್ಟು ಮಲಗುವ ಗಂಡನನ್ನೂ ತಾಯಂತೆ ಲಾಲಿಸುತ್ತಾಳೆ. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಕೂಸಿನಂತೇ ಕಾಣುತ್ತಾಳೆ. ಗಂಡನನ್ನು ಅವನೆಲ್ಲ ಓರೆಕೋರೆಗಳೊಂದಿಗೇ ಮನಃಪೂರ್ತಿ ಸ್ವೀಕರಿಸುತ್ತಾಳೆ. ಹಾಗಾಗಿ ಅವಳಿಗೆ ಅವನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳು ಮಾಡುವುದು ಸಾಧ್ಯವಿಲ್ಲ. ಅದು ಅವನು, ಅವನಿರುವುದೇ ಹಾಗೆ, ಎಲ್ಲಕ್ಕಿಂತ ಮುಖ್ಯವಾಗಿ ಅವನು ನನ್ನವನು ಎನ್ನುವ ಭಾವ ಅವಳದು. ಅಷ್ಟಕ್ಕೂ ಅವನು ಬದಲಾಗಬೇಕಾದರೂ ಏಕೆ… ತನ್ನ ಪ್ರೀತಿ ಅರ್ಥವಾದ ದಿನ ಅವನು ಅವಳ ಮೌನಕ್ಕೂ ಸ್ಪಂದಿಸುತ್ತಾನೆ ಎನ್ನುವ ನಿರೀಕ್ಷೆ ಅವಳದು. ಆ ದಿನಕ್ಕಾಗಿ ತಾಳ್ಮೆಯಿಂದ ಕಾಯುತ್ತಾಳೆ ಸಹ.

ದೀರ್ಘ ದಾಂಪತ್ಯದ ಸಹಜೀವನ ನಡೆಸಿದ ಯಾವುದೇ ಗಂಡಿರಲಿ ಅವಳ ಅನುಪಸ್ಥಿತಿಯಲ್ಲಿ ಅಕ್ಷರಶಃ ತಾಯಿಯನ್ನು ಕಳೆದುಕೊಂಡ ತಬ್ಬಲಿಯಂತಾಗಿಬಿಡುತ್ತಾನೆ. ಹಾಗಾದರೆ ಅವನಿಗೆ ಮನೆಗೆಲಸ ಬರುವುದಿಲ್ಲವಾ… ಬರುತ್ತದೆ, ಅಡುಗೆ ಮಾಡಿಕೊಳ್ಳಲಾರನಾ… ಅದೂ ಬರುತ್ತದೆ. ಆದರೆ ಅವಳ ಇರುವಿಕೆಯಿಂದ ಮಾತ್ರ ಆ ಕೆಲಸಗಳಿಗೂ ಜೀವ ಬರುವುದು ಮತ್ತು ಆ ಜೀವದ ಇರುವಿಕೆ, ಇಲ್ಲದಿರುವಿಕೆಯ ತೆಳು ವ್ಯತ್ಯಾಸವೂ ಅವನೊಬ್ಬನಿಗೇ ಗೊತ್ತು. ಆದರೆ ಗಂಡಿನಾಸರೆಯ ಕೊರತೆ ಕಾಡಿದರೂ ಹೆಣ್ಣು ಬಹಳ ಮಟ್ಟಿಗೆ ತನ್ನನ್ನು ತಾನು ಒಬ್ಬಂಟಿಯಾಗಿ ನಿಲ್ಲಿಸಿಕೊಳ್ಳಬಲ್ಲಳು, ನಿಗ್ರಹಿಸಿಕೊಳ್ಳಬಲ್ಲಳು.

(ಸ್ಮಿತ ಅಮೃತರಾಜ್)

ಇದನ್ನೆಲ್ಲ ಹೇಳುತ್ತಿರುವುದು ಅವಳೊಳಗಿನ ಅವಳ ಹುಡುಕಾಟದ ಒಂದು ಭಾಗವಾಗಿ ಮಾತ್ರ. ಯಾರನ್ನೂ ಮೇಲು ಕೀಳು ಮಾಡಲಿಕ್ಕಲ್ಲ. ಇದೇ ಹುಡುಕಾಟದ ಮುಂದುವರಿದ ಭಾಗವಾಗಿ ನಮ್ಮ ಅದೆಷ್ಟೋ ಕವಯಿತ್ರಿಯರ ಕವಿತೆಗಳು ಜಡ್ಡುಗಟ್ಟಿದ ವ್ಯವಸ್ಥೆಯನ್ನು ಉಜ್ಜುವ ಕೆಲಸಕ್ಕೆ ಅನಾಯಾಚಿತವಾಗಿ ತೊಡಗಿಕೊಳ್ಳುತ್ತಿವೆ ಒಂದು ಮಟ್ಟಿಗಿನ ನಿರ್ಭಿಡೆಯಿಂದಲೇ…

ಕೊಡಗಿನ ಸಂಪಾಜೆಯವರಾದ ಸ್ಮಿತ ಅಮೃತರಾಜ್ ರವರು ಸ್ನಾತಕೋತ್ತರ ಪದವಿ ಓದಿ, ಕೃಷಿಯಲ್ಲಿ ತೊಡಗಿರುವ ಅಪ್ಪಟ ಗೃಹಿಣಿ. ಅಂಗಳದಂಚಿನ ಕನವರಿಕೆಗಳು ಇವರ ಪ್ರಬಂಧ ಸಂಕಲನ. ಪ್ರಬಂಧ ಮತ್ತು ಕವಿತೆಗಳಿಗಾಗಿ ಹಲವಾರು ಬಹುಮಾನಗಳನ್ನೂ ಪಡೆದಿರುವವರು. ಅವರ ಕವಿತೆಗಳು ವಸಂತ ಕಾಲದ ಕೋಗಿಲೆಯ ಉಲಿಯಂತೆ ಶಬ್ದಿಸುತ್ತವೆಯಾದರೂ ಅವು ಹುಡುಕುವ ಮತ್ತು ಹುಡುಕಿಕೊಳ್ಳುವ ದಿಕ್ಕು ನೆಲೆ ಮಾತ್ರ ಓದುಗರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಇಲ್ಲಿ ಅವರದೊಂದು ಮೆಲುಮಾತಿನ ಕವಿತೆಯೊಂದನ್ನು ಕೊಡುತ್ತೇನೆ ನೋಡಿ…

ಮೂಗುತಿ ಸುಂದರಿ

ಮೂಗುತಿ ಎಂದರೆ
ಮೂಗು ಮುರಿಯುತ್ತಿದ್ದವಳು
ಪರಮಾಶ್ಚರ್ಯವೆಂಬಂತೆ ಇತ್ತೀಚೆಗೆ
ಮೂಗು ಚುಚ್ಚಿಸಿಕೊಂಡಳು
ಕಣ್ಣರಳಿಸಿದ್ದಕ್ಕೆ ಬದುಕು ಶುರುವಾಗುವುದೇ
ನಡುಹರೆಯದಲ್ಲಿ ಕಣೇ ಅಂತ
ಹಗುರಾಗಿ ನಕ್ಕಿದ್ದಳು

ಮೊನ್ನೆ ಮೊನ್ನೆ ನಡುರಾತ್ರಿಯಲ್ಲಿ
ಫೋನಾಯಿಸಿ ಮೂಗು ವಿಪರೀತ ನೋವು
ತಡೆಯೋಕಾಗಲ್ವೇ ಎಂದು ಕಣ್ಣೀರಾಗಿದ್ದಕ್ಕೆ
ಯಾಕೆ ತ್ರಾಸ ತೆಗೆದು ಬಿಡು ಎಂದಿದ್ದೆ
ಕಲೆ ಉಳಿಯಬಾರದಲ್ಲವಲ್ಲ ಕನಲಿದ್ದಳು

ಮೊನ್ನೆ ಬಸ್ಸಿನಲ್ಲಿ ಸಿಕ್ಕವಳು
ಮೂಗುತಿಯಲ್ಲಿ ಚಂದಕೆ ಕಂಡಿದ್ದಳು
ನಾನೂ ಚುಚ್ಚಿಸಿಕೊಳ್ಳಲಾ…
ಮೂಗು ಸವರಿಕೊಂಡೆ

ಎದೆಯೊಳಗೊಂದು ಚುಚ್ಚುವ ನೋವಿದ್ದರೆ
ಮೂಗು ಚುಚ್ಚಿಸಿಕೋ…
ಎಂದಿನಂತೆ ನಕ್ಕಳು
ಈಗ ಮೂಗಿನ ಕಡೆಗೇ ನನ್ನ ಗಮನ
ಸ್ವಗತಕ್ಕೆಂಬಂತೆ ನುಡಿದಳು
(ಸ್ಮಿತ)

ಈ ಕವಿತೆ ಹಲವಾರು ವಿಷಯಗಳನ್ನು ತಾಕುತ್ತಾ ಗಾಢ ವಿಷಾದವೊಂದನ್ನು ಉಳಿಸಿಬಿಡುತ್ತದೆ. ಹೆಣ್ಣು ಧರಿಸುವ ಮೂಗುಬೊಟ್ಟು ಮುತ್ತೈದೆಯರ ಐದು ಮುತ್ತುಗಳಲ್ಲಿ ಒಂದು. ಅದನ್ನು ಧರಿಸುವ ಪದ್ಧತಿ ಕೆಲವರಲ್ಲಿ ಇಲ್ಲ, ಇನ್ನು ಕೆಲವರು ಎರೆಡೂ ಕಡೆ ಧರಿಸುತ್ತಾರೆ, ಮತ್ತೆ ಕೆಲವರು ಎಡಭಾಗದಲ್ಲಿ ಧರಿಸಿದರೆ ಮತ್ತೆ ಕೆಲವರು ಬಲ ಭಾಗದಲ್ಲಿ ಧರಿಸುತ್ತಾರೆ. ಆದರೆ ಸಾಮಾನ್ಯವಾಗಿ ಎಲ್ಲರೂ ಈ ಆಭರಣವನ್ನು ಧರಿಸುತ್ತಾರೆ. ಯಾರಾದರೂ ಚಿಕ್ಕಂದಲ್ಲಿ ಮೂಗು ಚುಚ್ಚಿಸಿಕೊಂಡಿಲ್ಲ ಎಂದರೆ ಮದುವೆಯ ವೇಳೆಯಲ್ಲಾದರೂ ಚುಚ್ಚಿಸಿಯೇ ಚುಚ್ಚಿಸುತ್ತಾರೆ.

ಮೂಗು ಚುಚ್ಚಿಸಿಕೊಳ್ಳುವುದೊಂದು ಕತೆ. ಹಳ್ಳಿಗಳ ಕಡೆ ಈಗಲೂ ಮುಳ್ಳುಗಳಿಂದ ಮೂಗು ಚುಚ್ಚಿದರೆ ಪಟ್ಟಣಗಳಲ್ಲಿ ಸೊನಗಾರರ ಬಳಿ ಬಂಗಾರದ ಕಡ್ಡಿಯಿಂದಲೋ, ಆಸ್ಪತ್ರೆಯಲ್ಲಿ ಸೂಜಿಯಿಂದಲೋ ಚುಚ್ಚಿಸಿಕೊಳ್ಳುವುದುಂಟು. ಕೆಲವರು ತೀರಾ ಸಣ್ಣ ವಯಸ್ಸಿಗೇ ಬಲವಂತ ಮಾಡಿ ಚುಚ್ಚಿಸಿಬಿಡುತ್ತಾರೆ. ಇನ್ನು ಮನೆಯಲ್ಲಿ ಅಜ್ಜಿಯಂದಿರಿದ್ದರೆ ಮುಗೀತು… ಆದರೆ ನನ್ನ ಮನೆಯಲ್ಲಿ ಮೂಗು ಚುಚ್ಚಿಸುವ ಆಲೋಚನೆ ಮಾಡುವ ಮೊದಲೇ ನಾನೇ ದುಂಬಾಲು ಬಿದ್ದು ಚುಚ್ಚಿಸಿಕೊಂಡಿದ್ದೆ.

ಅಂದು ಸೊನಗಾರರ ಬಳಿಗೆ ಹೋಗುವಾಗ ಅದೆಷ್ಟು ಖುಷಿ. ಆದರೆ ಬಂಗಾರದ ಕಡ್ಡಿಯನ್ನು ಕಳಕ್ ಅಂತ ಒಂದೇ ಸಾರಿಗೆ ಒತ್ತಿ ಏನಾಗುತ್ತಿದೆ ಅನ್ನುವಷ್ಟರಲ್ಲೇ ಸೊನಗಾರ ಮೂಗಿನ ಹೊಳ್ಳೆ ಎತ್ತಿ ಕಡ್ಡಿಯ ಚೂಪು ತುದಿಯನ್ನು ಮಡಚಿ ಸುತ್ತಿ ತನ್ನ ಕೆಲಸ ಮುಗಿಸಿದ್ದ. ಆದರೆ ನನಗೆ ಒಂದೇ ಕಣ್ಣಲ್ಲಿ ಅದು ನೋವು ಎಂದು ಅರಿವಿಗೆ ಬರುವ ಮುಂಚೆಯೇ ಕಣ್ಣೀರು ಅಯೋಮಯವಾಗಿ ಸುರಿದಿತ್ತು. ನಂತರದ ಒಂದೆರೆಡು ದಿನಗಳಲ್ಲಿ ಮೂಗಿನ ಒಳಭಾಗದಲ್ಲಿ ಸಣ್ಣದಾಗಿ ಮತ್ತಿನಲ್ಲಿ ತಿರುಪಿನ ಸುತ್ತಲೂ ಅದಕ್ಕೆ ಅಂಟಿಕೊಂಡಂತೆ ಹುತ್ತಬೆಳೆಯಿತು(ಅದು ಮಾಂಸವೇ). ಗೊಟ್ಟ ಸರಿದಾಡುತ್ತಿರಲಿಲ್ಲ. ಸೀಮೆಎಣ್ಣೆ ಗಾಯ ಬೇಗ ಗುಣವಾಗುತ್ತದೆಂದು ಹೇಳಿ ಅಮ್ಮ ಒಂದೊಂದೇ ಹನಿ ಸೀಮೆಎಣ್ಣೆ ಬಿಡುತ್ತಿದ್ದಳು. ಮೂಗಂತೂ ವಾರದವರೆವಿಗೂ ಮುಟ್ಟಲೂ ಸಾಧ್ಯವಾಗದಷ್ಟು ನೋವು. ಎಲ್ಲ ಸರಿಹೋಯ್ತು ಅಂದುಕೊಳ್ಳಲಿಕ್ಕೆ ಒಂದು ತಿಂಗಳು… ನನಗಂತೂ ಆ ಹುತ್ತ ಮಾಯಲು ಬಹಳಷ್ಟು ತಿಂಗಳುಗಳೇ ತೆಗೆದುಕೊಂಡಿತ್ತು.

ಇತ್ತೀಚೆಗೆ ಯಾವಾಗಲೋ ಉದುರಿ ಹೋಗಿದ್ದ ಮೂಗುಬೊಟ್ಟನ್ನು ಇಟ್ಟುಕೊಳ್ಳಲು ಮರೆತು ತೂತೇ ಮುಚ್ಚಿಹೋದಂತಾಗಿತ್ತು. ಕೊನೆಗೆ ನತ್ತನ್ನು ಇಟ್ಟಕೊಳ್ಳಲಾಗದೆ ಸೊನಗಾರನ ಬಳಿಗೆ ಹೋಗಿದ್ದೆ. ಅವ ವರಟಾಗಿ ಮೂಗನ್ನು ಎಳೆದಾಡಿ ಅಂತೂ ನತ್ತನ್ನು ಇಟ್ಟಿದ್ದ. ನೋವಿಂದ ಒಂದೇ ಕಣ್ಣಲ್ಲಿ ನೀರು… ಒಂದು ವಾರ ಮೂಗು ಊದಿಕೊಂಡು ಗಡುಸಾಗಿಬಿಟ್ಟಿತ್ತು. ಆದರೂ ನತ್ತು ಯಾಕೆ ಬೇಕು… ಹೆಣ್ಣು ಆಭರಣ ಪ್ರಿಯೆ ನಿಜ. ಆದರೆ ಸಂಪ್ರದಾಯ ಕೊಡುವ ಕಾರಣ ಅವಳ ಸ್ವತಂತ್ರವನ್ನು ಸಮರ್ಥಿಸುವುದಿಲ್ಲ. ಅವಳ ಪಾಡೊಂದನ್ನೂ ಲೆಕ್ಕವಿಡದ ಸಂಪ್ರದಾಯಕ್ಕೆ ಅವಳ ನೋವನ್ನು ಲೆಕ್ಕವಿಡುವ ದರ್ದಿಲ್ಲ. ಅದರ ಪಾಲನೆ ಆದರೆ ಅದಕ್ಕಷ್ಟೇ ಸಾಕು.

ಆದರೆ ಸ್ಮಿತಾರ ಈ ಕವಿತೆಯಲ್ಲಿ ಮೂಗು ಚುಚ್ಚುವಿಕೆ ಸಂಪ್ರದಾಯದ ಹೇರಿಕೆ ಅಲ್ಲ. ಅವಳೇ ಇಷ್ಟಪಟ್ಟದ್ದು. ಇಷ್ಟಪಟ್ಟು ಚುಚ್ಚಿಸಿಕೊಂಡ ಗೆಳತಿ ಇವಳಲ್ಲಿಯೂ ಆಸೆ ಹುಟ್ಟಿಸುತ್ತಾಳೆ. ಆದರೆ ಕೊನೆಯಲ್ಲಿ “ಎದೆಯೊಳಗೊಂದು ಚುಚ್ಚುವ ನೋವಿದ್ದರೆ ಮೂಗು ಚುಚ್ಚಿಸಿಕೋ…” ಎಂದು ಹೇಳುವ ಗೆಳತಿಯ ಮಾತು ಮಾರ್ಮಿಕವಾಗಿದೆ. ಈಗ ಈ ಗೆಳತಿ ತಬ್ಬಿಬ್ಬು! ಗೊಂದಲಕ್ಕೆ ಉತ್ತರವಿಲ್ಲ. ಈ ಕವಿತೆಯನ್ನು ಸ್ಮಿತ ಅವರು ನಿರ್ವಹಿಸಿರುವ ರೀತಿ ಬಹಳ ಚಂದ ಇದೆ.

ಸರಿ ಹೋರಟವಿರಲಿ. ಹೋರಾಡೋಣ. ಆದರೆ ಯಾರೊಂದಿಗೆ?! ಯಾರನ್ನು ನಮ್ಮ ಜೀವದ ಒಂದು ತುಣುಕು ಎಂದು ಭಾವಿಸಿರುತ್ತೇವೋ ಅವರೊಂದಿಗೆ?! ಇದೇ ವ್ಯಂಗ್ಯ. ಅವಳು ಬೇಕಾಗೇ ಸೋಲುತ್ತಾಳೆ. ಅವಳಿಗೆ ಗೊತ್ತು ಗೆಲುವಿಗಿಂತಲೂ ತನ್ನ ಜೀವದ ಜೀವವೇ ಮುಖ್ಯ. ಕಾರಣ ಅವರಿಲ್ಲದೆ ಅವಳಿಲ್ಲ. ಗೆಲುವಿಗಿಂತಲೂ ಹೆಚ್ಚಿನ ಸಂಭ್ರಮ ಅವರು ಅವಳೊಂದಿಗೆ ಇರುವುದರಲ್ಲಿದೆ.

ಕಾಲಲ್ಲಿ ಮುರ್ಕೊಂಡ ಸೀಮೆಜಾಲಿ ಮುಳ್ಳಿನಂತೆ ಎದೆಯೊಳಗೊಂದು ನೋವನ್ನು ಇಟ್ಟುಕೊಳ್ಳುವ ಅವಳು ಮೂಗು ಚುಚ್ಚಿಸಿಕೊಳ್ಳುವುದೂ ನ್ಯಾಯವೇ..!?

(ಕಾವ್ಯ ಮನಮನೆ)

ಪ್ರಜಾವಾಣಿಯ ದೀಪಾವಳಿ ಕವನ ಸ್ಪರ್ಧೆಯ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದಿದ್ದ ಪ್ರತಿಭಾವಂತ ಕವಯಿತ್ರಿ ಕಾವ್ಯ ಮನಮನೆ. ಅವರ ಕವಿತೆಗಳು ಜೀವಂತಿಕೆಯ ಮಿಡಿತದಂತೆ ತಟ್ಟುತ್ತವೆ. ಇಲ್ಲೊಂದು ಕವಿತೆ ಇದೆ ನೋಡಿ…

ಹಿಂದಿನಂತಿಲ್ಲ ಹೂಮನೆ

ಸೇವಂತಿಗೆ ಇರುವಂತಿಗೆ ಕನಕಾಂಬರ
ಮೊಲ್ಲೆ ಕರವೀರ
ತೀರಾ ಇತ್ತೀಚಿನ ಜರ್ಬೇರಾ
ಎಲ್ಲವೂ ಇದೆ
ಮೊನ್ನೆ ಊಟಿಯಿಂದ ಅಪ್ಪನ ಜೊತೆ
ಹೊಸತೊಂದು ಬಂತು
ಕಾಶೀಯಾತ್ರೆಯಿಂದ ಅಜ್ಜ ತಂದಿದ್ದಕ್ಕೆ
ಎಲೆಗಳೇ ಇಲ್ಲ
ಬಳ್ಳಿಗೆ ಹೂಭಾರವಿಲ್ಲ

ತೇರ್ಗಡೆ ಕಲೆಕ್ಷನ್ ತುಂಬಾ ಚೆನ್ನಾಗಿದೆ
ಅಮ್ಮನೆದೆಯಲ್ಲಿ ನೂರು ಹೂಗಳ ಪರಿಷೆ
ಪೇಪರಿನ ಮರೆಯಲ್ಲಿ ತುಳುಕಿದ್ದು
ಅಪ್ಪನ ಮೀಸೆ
ನಾನೂ ಅಷ್ಟೇ ಮೋಟುದ್ದ ಜಡೆಗೆ
ಮಾರುದ್ದ ಮಾಲೆ ಮುಡಿದು
ನೆಲ ಗುಡಿಸಿದ್ದ ನೆನಪು

ಸೆಂಟಿಮೆಂಟಲ್ ಅಜ್ಜಿಯುಸಿರು
ಬಾಗಿಲೆದುರಿನ ಪಾರಿಜಾತ ಗಿಡದಲ್ಲಿ
ಪುಷ್ಪಾರ್ಚನೆಯಿಂದಲೇ ಆಕೆ
ಮೊಳಕೆಯೊಡದಿದ್ದಂತೆ
ಆಷಾಢದ ಮಳೆಯಲ್ಲೂ
ಬೆಚ್ಚಗೆ ಮಲಗಿದ್ದೆ
ಹೂಮನೆಯ ಮಾಳಿಗೆ ಮೇಲೆ
ಜಡಿಗಾಳಿ ಜಿನುಗು ಝರಿಗಳ್ಯಾವುವೂ
ಎನ್ನೊಳಗಲ್ಲ ಹರಿಯೇ!
ರಾತ್ರೋ ರಾತ್ರಿ ಅಚ್ಚ ಬಿಳಿ ಫ್ರಾಕಿನ ತುಂಬ
ಕೆಂಪು ಹೂವರಳಿ ನಿಂತಿದ್ದವು
ಅಷ್ಟೆ

ನೋಡಲಾಗದು ಗೆಳತಿ
ಹೂಮನೆಯ ಮಂದಿಯ
ನಗೆ ಮಾಸಿದ ಮುಖ
ನೀನೇನೆ ಅನ್ನು
ನಾಲ್ದೆಸೆಯ ಬೀಸುಗಾಳಿಗೆ
ಮುಂದಣ ಜಗುಲಿ ಹೇಳಿ ಮಾಡಿಸಿದ್ದಲ್ಲ
(ಕಾವ್ಯ ಮನಮನೆ)

ತೀರಾ ಇತ್ತೀಚೆಗೆ ಶಾಲೆಗೆ ಒಬ್ಬ ತಾಯಿ ಬಂದಳು. ಅವಳು ಬಂದದ್ದು ಮಗಳ ಟಿ.ಸಿ. ಕೇಳಲಿಕ್ಕೆ. ಯಾಕೆ ಏನು ಅಂತ ವಿಚಾರಿಸುವಾಗ ತನ್ನ ಕತೆ ಬಿಚ್ಚಿಟ್ಟಳು. ಮಗಳು ಏಳನೇ ತರಗತಿಯಲ್ಲಿ ಓದುವಾಗ ಋತುಮತಿಯಾದಳಂತೆ. ಅಂತಹ ಸಮಯದಲ್ಲಿ ಅವರ ಮನೆಗಳಲ್ಲಿ ಹೆಣ್ಣುಮಕ್ಕಳನ್ನು ಮೂರ್ನಾಲ್ಕು ತಿಂಗಳು ಎಲ್ಲಿಯೂ ಹೊರಗೆ ಕಳಿಸುವುದಿಲ್ಲವಂತೆ. ಹಾಗೆ ಹೇಳಿ ಪಾಪ ಆ ಶಾಲೆಗೆ ಬರುತ್ತಿದ್ದ ಮಗುವನ್ನು ಮನೆಯಲ್ಲಿಯೇ ಕೊಳೆ ಹಾಕಿಕೊಂಡರಂತೆ. ಪರೀಕ್ಷೆಗೂ ಕಳಿಸಲಿಲ್ಲವಂತೆ. ಹೇಗೋ ತಡವಾಗಿ ಎಕ್ಸ್ಯಾಮ್ ಬರೆದು ಪಾಸ್ ಆದಳಂತೆ. ಈಗ ಮುಂದಿನ ತರಗತಿಗೆ ಸೇರಿಸಿಕೊಳ್ಳಲು ಅಲ್ಲಿನ ಶಿಕ್ಷಕರು ಒಪ್ಪುತ್ತಿಲ್ಲ, ಹಾಗೆ ಹೀಗೆ ಏನೇನೋ ಹೇಳಿದಳು. ನನಗೆ ಪಾಪ ಆ ಮಗುವಿನ ಭವಿಷ್ಯವನ್ನ ತನ್ನ ಮೂಢನಂಬಿಕೆಯಿಂದಲೇ ಹಾಳುಮಾಡಿದಳಲ್ಲ ಈ ತಾಯಿ ಅನಿಸಿ ಖೇದವೆನಿಸಿತು.

ಇಂತಹ ಅದೆಷ್ಟೋ ಮೊಗ್ಗುಗಳು ಹೂವಾಗಿ ಅರಳಿದ ತಪ್ಪಿಗೆ (ತಪ್ಪಾ?!) ಬಾಡುವ ಶಿಕ್ಷೆಗೊಳಗಾಗುವುದನ್ನು ನೋಡುವಾಗಲೂ ಹೀಗೇ ಅನಿಸುತ್ತದೆ.

ಕಾವ್ಯಾರ ಇಲ್ಲಿನ ಕವಿತೆಯನ್ನೇ ನೋಡಿ, ಮನೆ ಮುಂದಿನ ಕೈತೋಟ ಹೂತುಂಬಿ ಮೈನೆರೆತು ನಿಲ್ಲಲಿ ಎಂದು ಆಶಿಸುವ ತಂದೆ ತಾಯಿಯರು ತಮ್ಮ ಮಗಳ ಬಿಳಿ ಲಂಗದ ಮೇಲೆ ಕೆಂಪು ಹೂಗಳು ಅರಳಿ ನಿಂತಾಗ ಮಾತ್ರ ವ್ಯತಿರಿಕ್ತವಾಗಿ ವರ್ತಿಸಿಬಿಡುತ್ತಾರೆ. ಅದಕ್ಕೆ ಹಲವಾರು ಕಾರಣಗಳು. ಆದರೆ ಏನೇ ಕಾರಣವಿರಲಿ ಅವಳ ಸಹಜ ಬದಲಾವಣೆಯನ್ನು ಒಪ್ಪಿಕೊಳ್ಳಲಾದ ಮತ್ತು ಪರಿಸ್ಥಿತಿಯನ್ನು ಎದುರಿಸಲಾಗದ ತಮ್ಮ ಬಲಹೀನತೆಯನ್ನು ಅವಳಿಗೆ ನೋವಾಗುವಂತೆಯೇ ವರ್ತಿಸಿ ತೋರಿಸಿಬಿಡುವುದು ವಿವೇಚನೆ ತೋರದ ಕ್ಷುಲ್ಲಕ ನಡವಳಿಕೆ ಅನಿಸಿಬಿಡುತ್ತದೆ. ಏನೇ ಇರಲಿ ಅವಳು ತಮ್ಮ ಮಗಳು ಮತ್ತು ಅವಳಿಗೆ ನಾವಿದ್ದೇವೆ ಎಂದು ಹೇಳಲೇಬೇಕಾದ ಸಂದರ್ಭದಲ್ಲಿ ಅವಳನ್ನು ಅಧೀರಳನ್ನಾಗಿಸಿಬಿಡುವುದು ಎಷ್ಟು ಸರಿ….

ಇದನ್ನು ಅನುಭವಿಸಿರದ ಯಾರಾದರು ಹೆಣ್ಣುಮಕ್ಕಳು ಇದ್ದಾರಾ ಅನುಮಾನ… ಇದು ನನ್ನದೂ ಅನುಭವವಾಗಿತ್ತು. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾದಂತೆ ಕಂಡುಬಂದರೂ ಪ್ರಕೃತಿ ಇನ್ನೊಂದು ರೀತಿಯಲ್ಲಿ ಆಘಾತಕಾರಿಯಾಗಿದೆ. ಮೊದಲೆಲ್ಲಾ12-14 ರ ನಡುವೆ ಋತುಮತಿಯರಾಗುತ್ತಿದ್ದ ಹೆಣ್ಣುಮಕ್ಕಳು ಇತ್ತೀಚೆಗೆ 8-9 ರ ಪ್ರಾಯದಲ್ಲಿಯೇ ಋತುಮತಿಯಾಗುತ್ತಿರುವುದು ಮತ್ತೊಂದೇ ರೀತಿಯ ಸಂಕಟ. ಏನೊಂದೂ ತಿಳುವಳಿಕೆ ಇಲ್ಲದ ಮುಗ್ಧ ಮಗುವಿಗೆ ಋತುಚಕ್ರ, ಸ್ರಾವ, ಅದರ ನಿರ್ವಹಣೆ ಎಂದೆಲ್ಲ ಕಲಿಸುವುದು ತಿಳಿಸುವುದು ಎಷ್ಟು ಕಷ್ಟ… ತಂದೆ ತಾಯಂದಿರ ಸಂಕಟವೂ ತಪ್ಪಿಲ್ಲ…

ಕಾವ್ಯಾರ ಈ ಕವಿತೆಯನ್ನು ಮೊದಲ ಬಾರಿ ಓದಿದಾಗಲೇ ಇಂತಹ ಒಂದು ವಿಷಯವನ್ನು ಅದೆಷ್ಟು ಚಂದ ನಿರ್ವಹಿಸಿದ್ದಾರೆ ಎಂದು ಅಚ್ಚರಿ ಮತ್ತು ಮೆಚ್ಚುಗೆಯಾಗಿತ್ತು… ಅವರ ಮತ್ತಷ್ಟು ಕವಿತೆಗಳೂ ನನ್ನನ್ನು ನಿರಾಸೆಗೊಳಿಸಲಿಲ್ಲ.

ಇಂತಹ ಇನ್ನೂ ಹಲವಾರು ಕವಯಿತ್ರಿಯರು ಕನ್ನಡ ಸಾಹಿತ್ಯದ ಇಂದಿನ ಪರಿಸ್ಥಿತಿಯಲ್ಲಿ ಬರೆಯುತ್ತಿದ್ದಾರೆ. ಅವರೆಲ್ಲರೆಡೆಗೂ ಬೆರಗಿನ ಒಂದು ದೃಷ್ಟಿಯನ್ನು ಇಟ್ಟುಕೊಂಡೇ ನಡೆಯಬೇಕಿದೆ….