ಹಾಗೆ ಬಂದ ರಾತ್ರಿಗಳಲ್ಲಿ ಅವನು ಅಕ್ಕನೊಂದಿಗೆ ಅಮ್ಮನೊಂದಿಗೆ ಜಗಳ ತೆಗೆಯುತ್ತಿದ್ದನು ಎಂಬ ವದಂತಿಯೂ ಇತ್ತು. ತೋರಿಕೆಗೆ ಅವನು ಎಷ್ಟು ಮೃದು ಸ್ವಭಾವದವನೋ ಒಳಗೆ ಅಷ್ಟೇ ಕ್ರೂರಿ ಎಂಬ ಖ್ಯಾತಿ ಇವನದ್ದು. ಎಲ್ಲರಿಗೂ ಅವನ ಕಂಡರೆ ಸಿನೆಮಾದ ಕೇಡಿಯನ್ನು ಕಂಡಂತೆ ಭಾಸವಾಗುತ್ತಿತ್ತು. ಹಾಗಾಗಿ ಮಠದ ಕೇರಿಯಲ್ಲಿ ಇವನ ಸುದ್ದಿಗೆ ನಾವಿಲ್ಲ ಎಂಬಂತೆ ಎಲ್ಲರೂ ತಟಸ್ಥರಾಗಿದ್ದರು. ಹಾಗೊಮ್ಮೆ ಇವನೊಂದಿಗೆ ಮಾತಿಗಿಳಿಯಬೇಕಾಗಿ ಬಂದರೆ ಮನೆಯಿಂದಾಚೆ ನಿಲ್ಲಿಸಿ ಅಲ್ಲೇ ಬಾಯಿ ತುಂಬಾ ನಾಲ್ಕು ಮಾತಾಡಿಸಿ ಬೀಳ್ಕೊಡುತ್ತಿದ್ದರು.
ಮಧುರಾಣಿ ಹೆಚ್. ಎಸ್.‌ ಬರೆಯುವ ‘ಮಠದ ಕೇರಿ’ ಕಥಾನಕ

 

ಆತ್ಮಾರಾಮನಿಗೆ ನಾನು ಕಂಡಾಗ ಮೂವತ್ತೆಂಟು ವರ್ಷ. ಶ್ರೀಧರ ಗುರುಗಳ ಪರಮ ಭಕ್ತನಾಗಿದ್ದ ಬ್ರಹ್ಮಚಾರಿ ಆತ್ಮಾರಾಮ ದಿನಕ್ಕೆ ಮೂರು ಬಾರಿ ಪೂಜೆ ಮಾಡುತ್ತಿದ್ದ. ಧ್ಯಾನಕ್ಕೆ ಕೂತರೆ ಭೂಮಿ ಬುಡ ಮೇಲಾದರೂ ಎದ್ದು ಹೊರಗೆ ಬರುತ್ತಿರಲಿಲ್ಲ. ಒಬ್ಬಳು ಮದುವೆಯಿಲ್ಲದ, ಅಷ್ಟೇನೂ ಸುಂದರಿಯಲ್ಲದ ನಡುವಯಸ್ಕ ಅಕ್ಕ ಹಾಗೂ ಎಂಭತ್ತರ ಆಸುಪಾಸಿನ ವಟಗುಡುವ ತಾಯಿ ಇವನ ಜನ. ಈ ಇಬ್ಬರನ್ನು ಬಿಟ್ಟು ಪ್ರಪಂಚದ ಮೇಲೆ ಅವನಿಗೆ ಸಂಬಂಧಿಸಿದ ಒಂದಿರುವೆಯೂ ಇಲ್ಲವೆಂಬ ನಿರ್ಮಮ ತುಂಬಿದ ಮುಖಭಾವ, ರಕ್ತ ಸಂಬಂಧಗಳ ಮೇಲೆ ಯಾವುದೇ ಮಮಕಾರಗಳೂ ಪ್ರೀತಿ-ವಿಶ್ವಾಸಗಳೂ ಇರದ ಕಾಠಿಣ್ಯ ಎದ್ದು ಕಾಣುವ ಸ್ವಭಾವ!

ತಾನು ಎಲ್ಲದನ್ನೂ ತೊರೆದ ವಿರಾಗಿಯಾಗಿಯೂ ಪಾಮರರ ನಡುವೆ ಬದುಕುತ್ತಿದ್ದೇನೆ ಎಂಬಂತೆ ಆಕಾಶ ನೋಡುತ್ತಾ ನಡೆದಾಡುತ್ತಿದ್ದ ಇವನು ತಾನು ಊರ್ಧ್ವಜನಪ್ರಿಯನೆಂದು ತನಗೆ ತಾನೇ ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದನು. ಅನ್ವರ್ಥವಾಗಿ ಆತ್ಮಾರಾಮನೆಂದು ಇವನನ್ನು ಕರೆದರೋ ಅಥವಾ ಹುಟ್ಟಿದಾಗ ಇಟ್ಟ ಹೆಸರಿನ ಅಡ್ಡ ಪರಿಣಾಮದಿಂದಾಗಿ ಹೀಗಾದನೋ ಎಂಬ ಬಗ್ಗೆ ನಮ್ಮಮ್ಮನ ಬಳಿ ದೊಡ್ಡ ಸಿದ್ಧಾಂತವೇ ಇತ್ತು..! ಆದರೆ ಕೇರಿಯ ಜನರಲ್ಲಿ ಬೇರೆಯದೇ ಚಿತ್ರಣವಿತ್ತು. ನೆಂಟರಿಷ್ಟರೂ ಕೇರಿಗರೂ ಇವನೊಬ್ಬ ಬೇಜವಾಬ್ದಾರಿಯ ಅಯೋಗ್ಯನೆಂದು ತೆಗಳುತ್ತಿದ್ದರು. ಇವನ ಸಹವಾಸಕ್ಕೆ ಬಿದ್ದರೆ ಕೇರಿಯ ಹುಡುಗರು ಕೆಟ್ಟು ನಾರುವರೆಂಬ ಪ್ರತೀತಿ ಇತ್ತು. ಇದಕ್ಕೆ ಕಾರಣವೂ ಇತ್ತು.

ಅವನ ಅಪಾರ ಸ್ನೇಹ ಬಳಗ ಕೇರಿಗೆ ದಾಳಿಯಿಟ್ಟು ಹಾವಳಿ ಮಾಡುತ್ತಿತ್ತು. ಇವನಿಗೆ ಹಿಂದಿನ ಬೀದಿಯ ಸಾಬರ ಹುಡುಗರ ಜೊತೆ ಕೂಡಾ ಗಾಢವಾದ ಸ್ನೇಹವಿತ್ತು. ಅವರು ಹೊತ್ತುಗೊತ್ತೆನ್ನದೇ ಅವನ ಮನೆಗೆ ನುಗ್ಗುತ್ತಿದ್ದರು. ಮಾಂಸಾಹಾರದ ಮಾತುಕತೆ ಪಡಸಾಲೆಯ ಮೇಲೆಯೇ ಎಗ್ಗಿಲ್ಲದೇ ಸಾಗುತ್ತಿತ್ತು. ಅವರೆಲ್ಲಾ ಒಟ್ಟಿಗೇ ಕೂತು ಜರ್ದಾ ಹಾಕಿ ಉಗಿಯುವಾಗ ಮುಕುಂದರಾಯರೋ ಗುರುರಾಜರೋ ಪ್ರಹ್ಲಾದ ಜೋಶಿಗಳ ಮನೆಯೋ ಒಂದೂ ನೋಡದೇ ಗೋಡೆಗಳಿಗೆ ಉಗಿದು ಬಣ್ಣ ಹಾಕುತ್ತಿದ್ದರು. ಕಾಲಕಾಲಕ್ಕೆ ಸಾಬರ ಕೇರಿಗೆ ಹೋಗಿ ಅವರ ಮನೆ ಕಟ್ಟೆಗಳ ಮೇಲೆ ಕೂತು ಇವನು ಬೀಡಿ ಸೇದುತ್ತಿದ್ದನು. ಸಾಬರ ಹುಡುಗರ ತಾಯಿಯಂದಿರು ಇವನನ್ನು “ಕ್ಯಾ ರೇ ಬೇಟೇ.. ಕೈಸೇ ಹೋ ಬಚ್ಚೀ..” ಅಂತ ಆತ್ಮೀಯವಾಗಿ ಮಮತೆಯಿಂದ ಮಾತಾಡಿಸಿ ಟೀ ಮಾಡಿಕೊಡುತ್ತಿದ್ದರು.

ಹಾಗೆ ಹೋಗಿ ಕೂರುವವನು ಅವರ ಮನೆಗಳಲ್ಲಿ ಮಾಂಸ-ಮಡ್ಡಿಗಳನ್ನು ತಿನ್ನದೇ ಇರುತ್ತಾನೆಯೇ ಎಂಬ ಗುಮಾನಿಯೊಂದು ಸದಾಕಾಲಕ್ಕೂ ಇವನ ಬೆನ್ನ ಹಿಂದೆ ಇದ್ದೇ ಇರುತ್ತಿತ್ತು. ಇದಿನ್ನೂ ಮುಂದುವರೆದು ಆ ಕೇರಿಯಲ್ಲಿ ಇವನಿಗೆ ಕಳ್ಳ ಸಂಬಂಧವಿದೆ ಎಂಬಲ್ಲಿಗೆ ಬಂದು ನಿಂತು ಮಠದ ಕೇರಿ ಜನತೆಯ ಬಾಯಿ ತುರಿಕೆ ತೀರುತ್ತಿತ್ತು. ಉರ್ದು ಮಾತಾಡುವಾಗಲೂ ಅವನು ಹುಟ್ಟಾ ಸಾಬರ ಹುಡುಗರಂತೆ ಮಾತಾಡುತ್ತಿದ್ದನು. ಇವರೆಲ್ಲಾ ಊರು ತಿರುಗಲು ಹೊರಟರೆಂದರೆ ಹಗಲು ರಾತ್ರಿಗಳ ಪರಿವೆಯೆ ಇಲ್ಲದೆ ತಿರುಗಾಡುತ್ತಿದ್ದರು. ಅವನು ಸರಿರಾತ್ರಿಯಲ್ಲಿ ಮನೆಗೆ ಬಂದಾಗ ಅವನ ಬಾಯಿಂದ ವಿಚಿತ್ರ ದ್ರವ್ಯದ ವಾಸನೆಯೊಂದು ಖಚಿತವಾಗಿ ಬರುತ್ತಿತ್ತೆಂದು ಅವರ ಮನೆಯನ್ನು ಹತ್ತಿರದಿಂದ ಬಲ್ಲ ನೆಂಟರಿಷ್ಟರು ಮಾತಾಡಿಕೊಳ್ಳುತ್ತಿದ್ದರು.

ಹಾಗೆ ಬಂದ ರಾತ್ರಿಗಳಲ್ಲಿ ಅವನು ಅಕ್ಕನೊಂದಿಗೆ ಅಮ್ಮನೊಂದಿಗೆ ಜಗಳ ತೆಗೆಯುತ್ತಿದ್ದನು ಎಂಬ ವದಂತಿಯೂ ಇತ್ತು. ತೋರಿಕೆಗೆ ಅವನು ಎಷ್ಟು ಮೃದು ಸ್ವಭಾವದವನೋ ಒಳಗೆ ಅಷ್ಟೇ ಕ್ರೂರಿ ಎಂಬ ಖ್ಯಾತಿ ಇವನದ್ದು. ಎಲ್ಲರಿಗೂ ಅವನ ಕಂಡರೆ ಸಿನೆಮಾದ ಕೇಡಿಯನ್ನು ಕಂಡಂತೆ ಭಾಸವಾಗುತ್ತಿತ್ತು. ಹಾಗಾಗಿ ಮಠದ ಕೇರಿಯಲ್ಲಿ ಇವನ ಸುದ್ದಿಗೆ ನಾವಿಲ್ಲ ಎಂಬಂತೆ ಎಲ್ಲರೂ ತಟಸ್ಥರಾಗಿದ್ದರು. ಹಾಗೊಮ್ಮೆ ಇವನೊಂದಿಗೆ ಮಾತಿಗಿಳಿಯಬೇಕಾಗಿ ಬಂದರೆ ಮನೆಯಿಂದಾಚೆ ನಿಲ್ಲಿಸಿ ಅಲ್ಲೇ ಬಾಯಿ ತುಂಬಾ ನಾಲ್ಕು ಮಾತಾಡಿಸಿ ಬೀಳ್ಕೊಡುತ್ತಿದ್ದರು.

ಮಕ್ಕಳಾಗಿದ್ದ ನಮಗೆ ಆರಡಿ ಎತ್ತರದ ಗುಂಗುರು ಕೂದಲಿನ ಗರಿಗರಿ ಇಸ್ತ್ರೀ ಬಟ್ಟೆಗಳನ್ನು ತೊಟ್ಟು ಕೆಂದುಟಿಯ ಮೇಲೊಂದು ಕಿರುನಗೆಯನ್ನು ಸದಾಕಾಲ ಅಂಟಿಸಿಕೊಂಡು ಓಡಾಡುತ್ತಿದ್ದ ಆತ್ಮಾರಾಮನೆಂಬುದು ಒಂದು ಸೋಜಿಗ. ಅವನ ಮಾತು ನಡೆನುಡಿಗಳು ಹಾವಭಾವ ನಮ್ಮನ್ನು ಬಹುವಾಗಿ ಆಕರ್ಷಿಸುತ್ತಿದ್ದವು. ಹದಿನೈದರ ಪೋರಿ ಆಗ ನಾನು, ರಾಮಣ್ಣನಂಥಾ ಗಂಡು ಹುಡುಕಿದರೆ ಮಾತ್ರ ನಾನು ಮದುವೆಗೆ ಒಪ್ಪೋದು ಅಂದು ಮನೆಯವರಿಂದ ಬೈಸಿಕೊಂಡಿದ್ದೆ. ಅವನು ಕೇರಿಗೆ ಕಾಲಿಟ್ಟಕೂಡಲೇ ನಾವು ಮಕ್ಕಳೆಲ್ಲಾ ಕೇಕೆ ಹಾಕುತ್ತಾ ಅವನನ್ನು ಸುತ್ತುವರಿಯುತ್ತಿದ್ದೆವು. ಹೊಸ ಕಥೆಯನ್ನೋ ವಿಚಾರವನ್ನೋ ಹೇಳಬೇಕೆಂದು ಎಡೆಬಿಡದೆ ಪೀಡಿಸುತ್ತಿದ್ದೆವು. ಆಗೆಲ್ಲ ಅವನು ಸ್ವಲ್ಪ ಬೇಸರಿಸದೇ ಹೊಸ ಕಥೆಯೊಂದನ್ನು ಹೊಸೆಯುತ್ತಾ ನಮ್ಮ ಹುಬ್ಬು ಆಕಾಶ ತಲುಪುವಂತಹ ವಿಚಾರಗಳನ್ನು ಹೇಳುವನು. ನಾವು ಮೈಯೆಲ್ಲಾ ಕಣ್ಣಾಗಿ ಅವನ ಕಣ್ಣುಗಳಲ್ಲಿ ದೃಷ್ಟಿ ನೆಟ್ಟು ಅವನ ಮಾಯೆಗೆ ಸಿಲುಕಿದವರಂತೆ ಎಲ್ಲವನ್ನೂ ಆಲಿಸುತ್ತಿದ್ದೆವು.

ಹಿಮಾಲಯದ ಸಾಧುಗಳ ಬಗೆಗೂ, ನೇಪಾಳದ ಸೆರಗಿನ ದೇವಸ್ಥಾನಗಳ ಬಗೆಗೂ, ಮರಳುಗಾಡಿನ ಮಧ್ಯ ದೊರಕಿದ ನೀರಿನ ಬಗೆಗೂ ಹಾವುಗಳನ್ನು ಮಕ್ಕಳಂತೆ ಆಟ ಆಡಿಸುವ 128 ವರ್ಷದ ಮುದುಕಿಯ ಬಗೆಗೂ ಅವನು ದಿನಕ್ಕೊಂದು ಚಿತ್ರ-ವಿಚಿತ್ರ ಕಥೆಗಳನ್ನು ಹೇಳುತ್ತಿದ್ದ.

ಇಂತಿಪ್ಪ ಅವನು ಒಂದು ಸಂಜೆ ಹಠಾತ್ತನೆ ಪ್ರತ್ಯಕ್ಷನಾಗಿ ನಮ್ಮ ಮನೆಯ ಜಗಲಿಕಟ್ಟೆಯನ್ನು ಅಲಂಕರಿಸಿದನು. ಅಂದು ಎಂದಿಗಿಂತ ಹೆಚ್ಚು ಸುಪ್ರಸನ್ನ ಚಿತ್ತನಾಗಿದ್ದ ಆತ್ಮಾರಾಮನನ್ನು ಕಂಡು ನಾವು ಹಿರಿಹಿರಿ ಹಿಗ್ಗಿದೆವು. ರಾಮಣ್ಣ ಇವತ್ತು ಯಾವ ಕತೆ ಹೇಳುವೆ ಎಂದು ಕೇಳುತ್ತಲೇ ಅಮ್ಮ ಕೊಟ್ಟ ಕಾಫಿಯನ್ನು ತಂದು ಅವನ ಕೈಗಿತ್ತೆನು. ಅವನು ಹೊರಬರುತ್ತಲೇ ಸುತ್ತಲೂ ನಾಲ್ಕಾರು ಚಿಣ್ಣರು ಕ್ಷಣಮಾತ್ರದಲ್ಲಿ ಸೇರಿದರು. ನಾವೆಲ್ಲರೂ ಅವನ ಸುತ್ತಲೂ ಜಮಾಯಿಸಿ ಸೋಜಿಗದ ಕಣ್ಗಳಿಂದ ಅವನನ್ನು ನೋಡತೊಡಗಿದ್ದೆವು. “ಕಥೇನಾ ಯಾವ ಮುಂಡೇಮಗ ಯಾರಿಗೆ ಯಾವಾಗ ಬೇಕಾದರೂ ಹೇಳಬಹುದು, ಮಕ್ಕಳಾ, ಇವತ್ತು ನಿಮಗೊಂದು ಹೊಸ ವಿಚಾರ ಹೇಳ್ತೀನಿ. ಇನ್ನು ಜೀವನಪೂರ್ತಿ ನೀವು ಈ ರಾಮಣ್ಣನನ್ನ ಮರೆಯೋ ಹಾಗಿಲ್ಲ. ಅಂಥಾ ಒಂದು ಅದ್ಭುತ ವಿಚಾರ ಇದೆ. ಧ್ಯಾನ ಅನ್ನೋ ಪದ ಕೇಳಿದರೇನೋ ಮಂಕು ಮುಂಡೇವಾ..?” ಅಂದ. ರಾಮಣ್ಣನ ಮುಖದ ಮೇಲೆ ಒಬ್ಬ ಪರ ತತ್ವಜ್ಞಾನಿಯ ನಗೆಯನ್ನು ತಂದುಕೊಂಡು ಒಮ್ಮೆ ಗಂಟಲು ಸರಿಪಡಿಸಿಕೊಂಡು ಶುರು ಮಾಡಿದ.

ನೆಂಟರಿಷ್ಟರೂ ಕೇರಿಗರೂ ಇವನೊಬ್ಬ ಬೇಜವಾಬ್ದಾರಿಯ ಅಯೋಗ್ಯನೆಂದು ತೆಗಳುತ್ತಿದ್ದರು. ಇವನ ಸಹವಾಸಕ್ಕೆ ಬಿದ್ದರೆ ಕೇರಿಯ ಹುಡುಗರು ಕೆಟ್ಟು ನಾರುವರೆಂಬ ಪ್ರತೀತಿ ಇತ್ತು.

ಅವರು ಧ್ಯಾನ ಎಂದ ಕೂಡಲೇ ನಮ್ಮ ಗಂಟಲು ಕಟ್ಟಿ ಕಣ್ಣುಗಳು ಅಗಲಕ್ಕೆ ತೆರೆದುಕೊಂಡವು. ನಾವೆಲ್ಲಾ ಪಿಳಿಪಿಳಿ ಕಣ್ಣುಬಿಡುತ್ತಾ ಮುಂದೆ ಏನಾಗಬಹುದೆಂದು ಭಯೋನ್ಮಾದದಲ್ಲಿ ತೊಡಗಿದ್ದರೆ, ಆಚೆ ಮನೆ ಪ್ರಹ್ಲಾದನು “ಕಣ್ಮುಚ್ಕೊಂಡು ಗಂಟೆಗಟ್ಟಲೆ ಕೂರ್ತಾರಲ್ಲ, ಅದೇನಾ ರಾಮಣ್ಣ? ನಮ್ಮಜ್ಜಿ ಹಾಗೆ ಕೂತಾಗ ಗೊರಕೆ ಹೊಡೀತಾರೆ.” ಎಂದು ಅಲಕ್ಷ್ಯದಿಂದ ಕೇಳಿದನು. ರಾಮಣ್ಣನ ಪಿತ್ತ ನೆತ್ತಿಗೇರಿ “ಗಂಟೆಗಟ್ಟಲೆ ಸುಮ್ಮನೆ ಕಣ್ಣುಮುಚ್ಚಿ ಕೂರೋದಲ್ಲವೋ ಮಂಕೇ… ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದರೆ ಸಾಕ್ಷಾತ್ ಭಗವಂತನೇ ಭೂಮಿಗೆ ಇಳಿಯಬೇಕು ಅಷ್ಟು ಶಕ್ತಿ ಧ್ಯಾನಾಸಕ್ತನಿಗೆ ಇರಬೇಕು. ಧ್ಯಾನ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡ ಎಷ್ಟೋ ಜನ ಪುಣ್ಯಾತ್ಮರಿದ್ದಾರೆ ಗೊತ್ತೇ.. ಅವರೆಲ್ಲಾ ಧ್ಯಾನದ ಮುಖಾಂತರವೇ ಮೋಕ್ಷ ಪಡೆದವರು ಕಂಡ್ರೋ ಮಂಕುದಿಣ್ಣೆಗಳೇ. ನಿಮ್ಮಜ್ಜಿಯ ಮುಂಡಾ ಮೋಚ್ತು ಸುಮ್ನಿರೋ..” ಎಂದನು.

ವಾಚಾಮಗೋಚರ ನಿರರ್ಗಳ ಬೈಗುಳ ರಾಮಣ್ಣನ ಸ್ಪೆಷಾಲಿಟಿಗಳಲ್ಲಿ ಒಂದು. ಇನ್ನು ಗಲಾಟೆ ತರವಲ್ಲವೆಂದು ಎಲ್ಲರೂ ಕೈಕಟ್ಟಿ ಕುಳಿತೆವು. “ಹೇಳು ರಾಮಣ್ಣ ಅದೇನು ಹೇಳು ನಾವು ನೀನು ಏನು ಹೇಳಿದರೂ ಮಾಡಲು ತಯಾರು ಹೇಳು ರಾಮಣ್ಣ ಎಂದು ದುಂಬಾಲು ಬಿದ್ದೆವು. ಸುಪ್ರಸನ್ನನಾದ ಅವನು “ಹಾಗಾದರೆ ಎಲ್ಲರೂ ಮೊದಲು ಕಣ್ಣುಮುಚ್ಚಿ, ಹಾಗಂತ ನಿದ್ದೆ ಮಾಡಬೇಡಿರೋ ಹುಚ್ಚುಮುಂಡೆವೇ.. ನಾನು ಹೇಳೋದನ್ನ ಗಮನಕೊಟ್ಟು ಕೇಳಿ, ನಿಧಾನವಾಗಿ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ಒಳಗೆಳೆದುಕೊಳ್ಳಿ. ಮೆಲ್ಲನೆ ಉಸಿರು ಬಿಡುತ್ತಾ ನಿಮ್ಮ ಕಣ್ಣು ಮುಂದೆ ಏನು ಬರುವುದು ಹೇಳಿ.” ಅಂದನು. ನಾವು ಅವನು ಹೇಳಿದ ಹಾಗೇ ಮಾಡುತ್ತಾ “ರಾಮಣ್ಣಾ… ಕಪ್ಪು ಬಣ್ಣ ಬಂದಿತು ಕಣೋ, ಒಂಥರಾ ತಂಪಾಗಿದೆ.” ಎಂದೆವು. ಮುಂದೆ ಇನ್ನೂ ಕಣ್ಣು ಮುಚ್ಚಿ ಆ ಕಪ್ಪನ್ನು ಬಿಳುಪಾಗಿಸಿ ಆಮೇಲೆ ಕೆಂಪಾಗಿಸಿ ಆಮೇಲೆ ಬೇಕಾದ ಬಣ್ಣಕ್ಕೆ ತಿರುಗಿಸುವ ಕಸರತ್ತು ನಡೆಯಿತು. ನಾವೂ ಭರದಿಂದ ನಮ್ಮ ಕಣ್ಣೆದುರಿನ ಖಾಲಿತನಕ್ಕೆ ಬೇಕಾದ ಬಣ್ಣ ಹಾಕಿ ನಲಿದೆವು. ಅದಾಗಲೇ ಧ್ಯಾನದಲ್ಲಿ ಒಂದು ಮೆಟ್ಟಿಲೇರಿದ ಖುಷಿ ನಮಗೆ! ರಾಮಣ್ಣಾ.. ಕಪ್ಪಾಯಿತು. ರಾಮಣ್ಣಾ ನೀಲಿಯಾಯಿತು, ಕೆಂಪಗಾಯಿತು ಅನ್ನುತ್ತಾ ನಲಿದೆವು. ಬಣ್ಣಗಳು ಬದಲಾಗುತ್ತಿದ್ದಂತೇ ರಾಮಣ್ಣನು ಇನ್ನು ಈ ಆಟ ಸಾಕೆಂಬಂತೆ, “ಸರಿ ಇನ್ನು ಮುಂದಿನ ಹಾದಿ ನೋಡುವ, ಆ ಬಣ್ಣದ ಮಧ್ಯೆ ಏನು ಕಾಣ್ತಿದೇ..?” ಅಂದನು. ನಾವು ತಬ್ಬಿಬ್ಬಾಗಿ ಮಿಕಿಮಿಕಿ ನೋಡಿದೆವು. ಆಗಿನ್ನೋ ಏನೋ ದೊಡ್ಡದು ಸಾಧಿಸಿದೆವೆಂದು ಖುಷಿಯಲ್ಲಿದ್ದವರಿಗೆ ಧ್ಯಾನ ಮುಗಿದಿಲ್ಲವೆಂದು ಭಯಂಕರ ಬೇಸರವಾಯ್ತು.

ರಾಮಣ್ಣನು ಈ ಬಾರಿ ಬಣ್ಣಗಳ ನಡುವಿನ ಗೆರೆಗಳ ಬಗ್ಗೆ ಹೇಳಿದನು. ಅಲ್ಲಿ ಮಳೆಹನಿಗಳಂತೆ ಸುಯ್ಯೋ ಎಂದು ಮೇಲಿಂದ ಕೆಳಗೆ ಹರಿಯುವ ಗೆರೆಗಳನ್ನು ಥಟ್ಟನೆ ಹಿಡಿದು ನಿಲ್ಲಿಸಿ ಅಂದನು. ಹಾಗೆ ನಿಂತವನ್ನು ಪುನಃ ಓಡಿಸಿ ಅಂದನು. ಗೆರೆಗಳನ್ನು ಅಳಿಸಿ, ಬರೆದು, ಬೆಳೆಸಿ, ತಳುಕು ಹಾಕಿಸಿ… ಬೇಕೆಂದ ಹಾಗೆ ಆಟವಾಡಿಸಿ ಅಂದನು. ಶ್ರೀಶನು ಗೆರೆಗಳನ್ನು ಹೀಗೆ ಬೇಕಾದ ಹಾಗೆ ಆಡಿಸಲು ಮುಚ್ಚಿದ ಕಣ್ಣುಗಳ ಜೊತೆಗೇ ತಲೆಯನ್ನು ಸಿಕ್ಕಸಿಕ್ಕ ದಿಕ್ಕಿಗೆ ತಿರುಗಿಸತೊಡಗಿದನು. ಅಕ್ಕಪಕ್ಕ ಇದ್ದವರಿಗೆ ಗೂಳಿಯ ಹಾಗೆ ಗುಮ್ಮಲು ಶುರುವಿಟ್ಟನು. ನಾವೆಲ್ಲಾ ಧ್ಯಾನ ಬಿಟ್ಟು ಗುದ್ದು ತಪ್ಪಿಸಿಕೊಳ್ಳಲು ಹೊರಳಾಡತೊಡಗಿದೆವು.

ಸ್ವಲ್ಪ ಹೊತ್ತಿನಲ್ಲೇ ದೊಂಬಿ ಶುರುವಾಗಿ ಗಲಾಟೆಯೆದ್ದು ನಮ್ಮ ಧ್ಯಾನದ ಶಿಬಿರವು ಶುರುವಾದ ಒಂದೇ ಗಂಟೆಯೊಳಗೆ ಧ್ವಂಸವಾಯಿತು. ಶ್ರೀಶನ ತಲೆಯಿಂದ ಕಣ್ಣಿಗೆ ಗುದ್ದಿಸಿಕೊಂಡ ಸುಮುಖನು ಜೋರಾಗಿ ಅಳತೊಡಗಿದನು. ಇನ್ನು ಅವರಮ್ಮ ಬಂದು ಬೈಯುವರೆಂಬ ಭಯಕ್ಕೆ ಶ್ರೀಶನು ದಿಕ್ಕಾಪಾಲಾಗಿ ಓಡಿದನು. ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ಗೊಳ್ಳೆಂದು ನಗುತ್ತಾ ಸುಮುಖನ ತಾಯಿಗೆ ಹೇಳಬಹುದಾದ ಕತೆಯನ್ನು ಮನಸಲ್ಲೇ ಹೊಸೆಯತೊಡಗಿದರು. ರಾಮಣ್ಣನು ಕ್ಷಣಾರ್ಧದಲ್ಲಿ ಉಂಟಾದ ಈ ಕ್ರಾಂತಿಯಿಂದಾಗಿ ದಿಕ್ಕೇ ತೋಚದೇ ಕಣ್ಣು ಬಾಯಿ ಬಿಡುತ್ತಾ ಪೆಚ್ಚಾದನು. ಅರೆಗಂಟೆಯೊಳಗೆ ಎಲ್ಲವೂ ಮುಗಿದು ಕೇರಿಯ ಪಡಸಾಲೆಯು ಮೊದಲಿನಂತಾಯಿತು. ರಾಮಣ್ಣನು ಸಾಧ್ಯವಾದಷ್ಟೂ ಕೆಟ್ಟ ಮಾತುಗಳಿಂದ ನಮ್ಮನ್ನೆಲ್ಲಾ ಬೈಯುತ್ತಾ ಥೂಕ್ ಎಂದು ಜರ್ದಾ ಉಗಿಯುತ್ತಾ ಹಿಂದಿನ ಬೀದಿಯ ಜಬೀರನ ಮನೆಯ ಕಡೆಗೆ ನಡೆದನು.

ಹೀಗೆ, ತಾನು ಕಲಿತ ವಿದ್ಯೆಯನ್ನು ನಮಗೆ ಧಾರೆಯೆರೆದು ಭಗವದ್ದರುಶನ ಮಾಡಿಸಿ ನಮ್ಮ ಜನ್ಮ ಪಾವನಗೊಳಿಸಲು ಹೊರಟಿದ್ದ ರಾಮಣ್ಣನ ಪ್ರಯತ್ನವು ನೀರಲ್ಲಿ ಮಾಡಿದ ಹೋಮದಂತಾಗಿ ಅವನು ಅಂದಿನಿಂದ ನಮಗೆ ಕೇವಲ ಮೂರು ಕಾಲಿನ ಬೆಕ್ಕಿನ ಕತೆಯನ್ನು ಮಾತ್ರ ಹೇಳಬೇಕೆಂದು ತೀರ್ಮಾನಿಸಿದನು. ನಂತರ ಚಿಕ್ಕ ವಯಸ್ಸಿಗೇ ಮದುವೆಯಾಗಿ ಕೇರಿ ತೊರೆದ ನಾನು ಬಹಳ ವರ್ಷಗಳವರೆಗೆ ರಾಮಣ್ಣನ ಬಗ್ಗೆ ಮತ್ತೆ ಕೇಳಲೇ ಇಲ್ಲ. ಈಗ್ಗೆ ಕೆಲವೇ ವರ್ಷಗಳ ಕೆಳಗೆ ತನ್ನ ಐವತ್ತರ ಆಸುಪಾಸಿನಲ್ಲಿ ತನ್ನ ತಾಯಿ ತೀರಿಹೋದ ಮೇಲೆ ಅವನ ಅಕ್ಕನು ಯಾರೋ ದೂರದ ಸಂಬಂಧಿ ವಿಧುರನನ್ನು ಮದುವೆಯಾಳೆಂದೂ, ನಂತರ ರಾಮಣ್ಣನು ತಾನೂ ಮದುವೆಯಾದನೆಂದು ಕೇಳ್ಪಟ್ಟೆ. ನಮ್ಮೂರಿನ ಸುಪ್ರಸಿದ್ಧ ವೈದ್ಯರೊಬ್ಬರು ತಮ್ಮ ಸುಪುತ್ರಿಯನ್ನೇ ಆತ್ಮಾರಾಮನಿಗೆ ಧಾರೆಯೆರೆದು ಕೊಟ್ಟರೆಂದು ತಿಳಿದು ಇನ್ನೂ ಆಶ್ಚರ್ಯವಾಯಿತು. ಅಂತೂ ನಾವು ನಂಬಿದಂತೆ ಇವನು ಅಸಾಮಾನ್ಯ ಅವಧೂತನೇ ಇರಬಹುದೇನೋ ಅನಿಸಿತು.

ತನ್ನ ಮದುವೆಯ ದಿನವೂ ಬಂದ ಸ್ನೇಹಿತರ ಅಂಗೈ ನೋಡಿ ಭವಿಷ್ಯ ಹೇಳುತ್ತಿದ್ದನೆಂದೂ, ಧಾರೆ ಮುಗಿದು ನಾಗೋಲೆ ಶಾಸ್ತ್ರ ಶುರುವಾಗುವ ಹೊತ್ತಿಗಾಗಲೇ ಬೀಡಿ ಸೇದಲು ಹಸೆಮಣೆ ಬಿಟ್ಟು ಸಾಬರ ಹುಡುಗರೊಂದಿಗೆ ಛತ್ರದ ಪಕ್ಕದ ಟೀ ಅಂಗಡಿಗೆ ಹೋಗಿದ್ದನೆಂದೂ, ಪ್ಯಾಂಟಿನಲ್ಲೇ ನಾಗೋಲೆ ಮಾಡಿಕೊಳ್ಳುತ್ತೇನೆಂದು ಪಟ್ಟು ಹಿಡಿದನೆಂದೂ, ಇದೆಲ್ಲಾ ಕಂಡ ಅವನ ಸೋದರ ಮಾವನು ಹಣೆಹಣೆ ಬಡಿದುಕೊಂಡು ಊಟವನ್ನೂ ಮಾಡದೇ ಸೀದಾ ಮನೆಗೆ ಬಂದುಬಿಟ್ಟರೆಂದೂ ನಮ್ಮ ಚಿಕ್ಕಮ್ಮ ಹೇಳಿದಳು.

ರಾಮಣ್ಣನಿದ್ದ ಕಡೆ ದಂತಕತೆಗಳಿಗೆ ಯಾವ ಕೊರತೆಯೂ ಇರಲಾರದು. ಮದುವೆಯ ನಂತರ ಅವನು ಮಠದ ಕೇರಿ ತೊರೆದು ತನ್ನ ಅತ್ತೆಯ ಮನೆ ಸೇರಿದ ಕಾರಣ ಮತ್ತೆ ಈವರೆಗೆ ನೋಡಲು ಸಿಗಲಿಲ್ಲ. ಶ್ರೀಶ ಸಿಕ್ಕಾಗ ರಾಮಣ್ಣನ ಮದುವೆಯಾದ ಕತೆಯನ್ನು ಇನ್ನೂ ಬಣ್ಣಬಣ್ಣವಾಗಿ ಹೇಳಿದ. ನಂಬಲು ಅಸಾಧ್ಯವಾದ ಇಂತಹ ಹತ್ತು ಹಲವು ಕಪೋಲಕಲ್ಪಿತ ಕತೆಗಳನ್ನು ಅವನಿದ್ದಲ್ಲೆಲ್ಲಾ ಬಿತ್ತುತ್ತಾ ಓಡಾಡುವ ಇವನ ವ್ಯಕ್ತಿತ್ವವೇ ಯಾವತ್ತಿಗೂ ಸೋಜಿಗವೆಂಬಂತೇ ಉಳಿಯಿತು.

ಅವನಿಗೆ ಮಕ್ಕಳಾಗಿರಬಹುದೇ? ಅವರಿಗೆ ಇವನು ಧ್ಯಾನ ಮಾಡುವುದನ್ನೂ ಹಸ್ತ ಸಾಮುದ್ರಿಕೆಯನ್ನೂ ಕಲಿಸುತ್ತಿರಬಹುದೇ? ಅವರು ಉರ್ದುವಿನಲ್ಲಿ ನಿರರ್ಗಳವಾಗಿ ಮಾತಾಡುತ್ತಿರಬಹುದೇ‌ ಅಥವಾ ಅಮರಕೋಶದ ಶ್ಲೋಕಗಳನ್ನು ಪಠಿಸುತ್ತಿರಬಹುದೇ? ಅವನ ನೆನಪಾದಾಗಲೆಲ್ಲಾ ಹೀಗೆ ಹಲವು ಪ್ರಶ್ನೆಗಳು ಈಗಲೂ ಕಾಡುತ್ತವೆ.