ಜನ ಲಾಭದ ಆಸೆಗೆ ಬಿದ್ದ ನಂತರ ಸುಣ್ಣದ ಬೆಟ್ಟವನ್ನೇ ಬೇಕಾಬಿಟ್ಟಿ ಅಗೆದು ಲೋಡುಗಟ್ಟಲೆ ತುಂಬಿಸಿ ಪೇಂಟ್ ಕಾರಖಾನೆಗೆ ಸಾಗಿಸಿ ನಂತರ ಕೈಸುಟ್ಟುಕೊಂಡಿದ್ದೂ ಅಲ್ಲದೇ, ಸರಕಾರಿ ಬೆಟ್ಟವನ್ನು ಅಗೆದದ್ದಕ್ಕಾಗಿ ಕೇಸನ್ನೂ ಎದುರಿಸಬೇಕಾಗುತ್ತದೆ. ಕೊನೆಗೆ ಎಲೆ ಅಡಿಕೆಗೆ ಹಾಕಿಕೊಳ್ಳುವ ಸುಣ್ಣಕ್ಕೂ ಪರದಾಡುವ ಸ್ಥಿತಿ ಬಂದು ಬಿಡುವುದು ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ ಕರಿನೀರು ಕಥೆಯಲ್ಲಿ ಕಟಮಳ್ಳಿಗೆ ಬಂದ ಹೈಸ್ಕೂಲು ಮೇಲು ಕೀಳು ಭಾವನೆಯನ್ನು, ಸ್ಪರ್ಶ- ಅಸ್ಪೃಶ್ಯ ಎಂಬ ಸಾಮಾಜಿಕ ಕಟ್ಟುಪಾಡನ್ನು ಮೀರುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. ಹೊಸದಾಗಿ ಸಿಕ್ಕ ಸ್ವಾತಂತ್ರ್ಯದಲ್ಲಿ ಅಸ್ಪೃಶ್ಯ ಹುಡುಗನೊಂದಿಗೆ ಕೆರೆಗೆ ಹೋದ ಮೇಲ್ಜಾತಿಯ ಹುಡುಗಿಯನ್ನು ಕಂಡ ಊರು ಧಗಧಗನೆ ಹೊತ್ತುರಿದು ಅವರೆಲ್ಲ ಊರು ಬಿಡುವಂತಾಗುತ್ತದೆ.
ಆನಂದ ಬೋವಿಯವರ ಕಥಾಸಂಕಲನ ‘ಕೆಂಪು ಹಾಳೆಯ ಹೂವು’ ಕುರಿತು ಶ್ರೀದೇವಿ ಕೆರೆಮನೆ ಬರಹ
ನಾವು ಸ್ವಚ್ಛ ಭಾರತದ ಅಭಿಯಾನಕ್ಕೆ ಎಷ್ಟೊಂದು ಹಣವನ್ನು ಪೋಲು ಮಾಡುತ್ತಿದ್ದೇವೆಂದರೆ ಅದರ ಜಾಹಿರಾತಿಗಾಗಿ ಮಾಡಿದ ಖರ್ಚಿನಲ್ಲಿ ಇಡೀ ದೇಶವನ್ನು ಸ್ವಚ್ಛಗೊಳಿಸಬಹುದಿತ್ತು ಎನ್ನುವ ಮಾತಿದೆ. ಅದರ ಹಿಂದೆಯೇ ಸ್ವಚ್ಛ ಭಾರತ ಅಭಿಯಾನದ ಹಿಂದೆಯೇ ತಮಗೆ ಆಗದವರನ್ನು ಹಣಿಯುವ ಹಿಕಮತ್ತನ್ನೂ ಕಾಣಬಹುದು. ಇಂತಹುದ್ದೊಂದು ಹಿನ್ನಲೆಯನ್ನು ಇಟ್ಟುಕೊಂಡು ಬರೆದ ಓದುತ್ತಲೇ ಮನಸ್ಸನ್ನು ಆಕ್ರಮಿಸಿಕೊಳ್ಳುವಂತೆ ಮಾಡುವ ಸಾಂವಕ್ಕನ ತಿಪ್ಪಿ ಎನ್ನುವ ಕಥೆ ಇರುವುದು ಶ್ರೀ ಆನಂದ ಬೋವಿಯವರು ಬರೆದ ಕೆಂಪು ಹಾಳೆಯ ಹೂವು ಎನ್ನುವ ಸಂಕಲನದಲ್ಲಿ.
ಊರು ತುಂಬಾ ಓಡಾಡಿ ದನದ ಸಗಣಿ ಸಂಗ್ರಹಿಸುವ ಸಾಂವಕ್ಕನಿಗೆ ತಿಪ್ಪಿ ಗುಂಡಿಯೇ ವರ್ಷಕ್ಕೆ ನಲವತ್ತರಿಂದ ಐವತ್ತು ಸಾವಿರ ಉತ್ಪನ್ನ ತಂದುಕೊಡುತ್ತಿತ್ತು. ಸಗಣಿಯ ಜೊತೆ ಜೊತೆಗೇ ಅವರಿವರ ಮನೆಯ ಹಳಸುಪಳಸಿದ ಅಡಿಗೆಯನ್ನೂ ತಂದು ಅದಕ್ಕೆ ಸುರಿಯುತ್ತಿದ್ದ ಸಾಂವಕ್ಕನದು ಒಂದು ರೀತಿಯಲ್ಲಿ ಕುಲ ಕಸುಬು. ಅವಳ ತಂದೆ ತಾಯಿ ಕೂಡ ಅದೇ ರೀತಿ ತಿಪ್ಪಿ ಸಂಗ್ರಹದಿಂದಲೇ ಬದುಕಿದವರು. ಊರು ಬೆಳೆದಂತೆ ಎಲ್ಲಾ ತಿಪ್ಪಿಗಳೂ ಮಣ್ಣು ಸುರಿದುಕೊಂಡು ಬಹುಮಹಡಿ ಕಟ್ಟಡಗಳಾದರೆ ಸಾಂವಕ್ಕನ ತಿಪ್ಪಿ ಹಾಗೆಯೇ ಉಳಿದು ಊರ ಜನರ ಕಣ್ಣಿನ ಉರಿಗೆ ಕಾರಣವಾಗುವುದು ಹಾಗೂ ತಿಪ್ಪಿಯ ವಾಸನೆಗೆ ಊರವರೆಲ್ಲ ಅದನ್ನು ತೆಗೆಸಲು ಪಂಚಾಯತ್ ಗೆ ಅರ್ಜಿ ಬರೆಯುವುದೂ, ವೈಯಕ್ತಿಕ ದ್ವೇಷವನ್ನಿಟ್ಟುಕೊಂಡ ಪಂಚಾಯತ್ ಅಧ್ಯಕ್ಷ ಅದನ್ನು ತೆಗೆಸಲು ಮುಂದಾದಾಗ ಸಾವಕ್ಕನಿಂದ ಅವಮಾನಕ್ಕೀಡಾಗುವುದೂ, ನಂತರ ಬಂದ ಸ್ವಚ್ಛ ಭಾರತ ಅಭಿಯಾನದಡಿ ಅದನ್ನು ತೆಗೆಸಲೆಂದೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಯಿಸಿ ಸಾಂವಕ್ಕನ ತಿಪ್ಪೆಯ ಕಡೆ ಹೊರಟಾಗ ಆಕೆ ತೆಗೆದುಕೊಳ್ಳುವ ತೀರ್ಮಾನವನ್ನು ಓದಿಯೇ ತಿಳಿಯಬೇಕು. ಸಂಕಲನದ ಗಟ್ಟಿ ಕಥೆಗಳಲ್ಲಿ ಇದೂ ಒಂದು. ಕಟಮಳ್ಳಿ ಎನ್ನುವ ಊರಲ್ಲಿ ನಡೆಯುವ ವಿವಿಧ ಘಟನೆಗಳೇ ಕಥೆಗಳಾಗಿವೆ ಎಂಬ ಭಾವನೆಯನ್ನು ಹುಟ್ಟಿಸುವ ಸಂಕಲನ ಇದು.
ಸಂಕಲನದ ಮೊದಲ ಕಥೆ ಸುಣ್ಣ ಹಾಗು ಕರಿನೀರು ಮತ್ತು ತನುವೆಂಬ ಏರಿಗೆ ಮನವೆಂಬ ಕಟ್ಟೆ ನೋಡಲು ಬೇರೆ ಬೇರೆ ವಸ್ತು ವಿಷಯವನ್ನು ಹೊಂದಿರುವ ಕಥೆ ಎನ್ನಿಸಿದರೂ ಆಳದಲ್ಲಿ ಒಂದೇ ವಿಷಯ ಹೇಳಲು ಹೊರಟಂತೆ ಭಾಸವಾಗುತ್ತದೆ. ವ್ಯಾಪಾರಿಕರಣದಲ್ಲಿ ಹೇಗೆ ಹಳ್ಳಿಗಳು ನಲುಗುತ್ತವೆ ಎಂಬುದನ್ನು ಈ ಮೂರೂ ಕಥೆಗಳು ಭಿನ್ನ ಭಿನ್ನವಾಗಿ ವಿವರಿಸುತ್ತ ಸಾಗುತ್ತದೆ. ಲಾಭದ ಆಸೆಗೆ ಹೇಗೆ ಹಳ್ಳಿಯ ಮುಗ್ಧ ಜನ ತಮ್ಮದೆಲ್ಲವನ್ನೂ ಕಳೆದುಕೊಂಡು ನಂತರ ಬೀದಿಗೆ ಬಂದು ನಿಲ್ಲುತ್ತಾರೆ ಎಂಬುದನ್ನು ಇವು ಮನೋಜ್ಞವಾಗಿ ವಿವರಿಸುತ್ತದೆ. ಸುಣ್ಣ ಕಥೆಯಲ್ಲಿ ಬೇಕಾದಷ್ಟೇ ಸುಣ್ಣದ ಕಲ್ಲನ್ನು ತಂದು ಸುಟ್ಟು ಜರಡಿ ಹಿಡಿದು ಮಾರುವಾಗ ತಮಗೆ ಬೇಕಾದಂತೆ ಬೆಟ್ಟವನ್ನು ಅಗೆದು ಪ್ರಕೃತಿಯ ವಿರುದ್ಧ ಹೋಗಬಾರದೆನ್ನುವ ವಿವೇಚನೆಯನ್ನು ಹಳ್ಳಿಯ ಮುಗ್ಧ ಜನರಲ್ಲಿ ಕಾಣಬಹುದು.
ಆದರೆ ಅದೇ ಜನ ಲಾಭದ ಆಸೆಗೆ ಬಿದ್ದ ನಂತರ ಸುಣ್ಣದ ಬೆಟ್ಟವನ್ನೇ ಬೇಕಾಬಿಟ್ಟಿ ಅಗೆದು ಲೋಡುಗಟ್ಟಲೆ ತುಂಬಿಸಿ ಪೇಂಟ್ ಕಾರಖಾನೆಗೆ ಸಾಗಿಸಿ ನಂತರ ಕೈಸುಟ್ಟುಕೊಂಡಿದ್ದೂ ಅಲ್ಲದೇ, ಸರಕಾರಿ ಬೆಟ್ಟವನ್ನು ಅಗೆದದ್ದಕ್ಕಾಗಿ ಕೇಸನ್ನೂ ಎದುರಿಸಬೇಕಾಗುತ್ತದೆ. ಕೊನೆಗೆ ಎಲೆ ಅಡಿಕೆಗೆ ಹಾಕಿಕೊಳ್ಳುವ ಸುಣ್ಣಕ್ಕೂ ಪರದಾಡುವ ಸ್ಥಿತಿ ಬಂದು ಬಿಡುವುದು ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ ಕರಿನೀರು ಕಥೆಯಲ್ಲಿ ಕಟಮಳ್ಳಿಗೆ ಬಂದ ಹೈಸ್ಕೂಲು ಮೇಲು ಕೀಳು ಭಾವನೆಯನ್ನು, ಸ್ಪರ್ಶ- ಅಸ್ಪೃಶ್ಯ ಎಂಬ ಸಾಮಾಜಿಕ ಕಟ್ಟುಪಾಡನ್ನು ಮೀರುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. ಹೊಸದಾಗಿ ಸಿಕ್ಕ ಸ್ವಾತಂತ್ರ್ಯದಲ್ಲಿ ಅಸ್ಪೃಶ್ಯ ಹುಡುಗನೊಂದಿಗೆ ಕೆರೆಗೆ ಹೋದ ಮೇಲ್ಜಾತಿಯ ಹುಡುಗಿಯನ್ನು ಕಂಡ ಊರು ಧಗಧಗನೆ ಹೊತ್ತುರಿದು ಅವರೆಲ್ಲ ಊರು ಬಿಡುವಂತಾಗುತ್ತದೆ. ಆದರೆ ಎಷ್ಟೋ ವರ್ಷಗಳ ನಂತರ ಕಟಮಳ್ಳಿಯ ಗುಡ್ಡದ ಆಕಡೆಗೆ ಇರುವ ಹಳ್ಳದ ನೀರನ್ನು ಊರಿಗೆ ಬಿಡದೇ ಊರು ಹಾಹಾಕಾರದಲ್ಲಿದ್ದಾಗ ಅಂದು ಮೇಲ್ಜಾತಿಯ ಹುಡುಗಿಯ ಜೊತೆ ಹಳ್ಳಕ್ಕೆ ಹೋದ ದುಗ್ರ್ಯಾ ಕಂಪನಿ ನೀರನ್ನು ತಂದು ಮಾರುತ್ತ ಲಾಭಗಳಿಸಿಕೊಳ್ಳುತ್ತಾನೆ.
ತನುವೆಂಬ ಏರಿಗೆ ಮನವೆಂಬ ಕಟ್ಟೆಯಲ್ಲಿಯೂ ಹೊಸ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮಾತನಾಡುತ್ತ ಇದ್ದ ಆಸ್ತಿಯನ್ನೆಲ್ಲ ಕರಗಿಸಿ ಯಾವುದಕ್ಕೂ ಬೇಡದವ ಶಂಕರ ಗೌಡ ದನದ ಸಗಣಿಯಿಂದ ಸೋಪು ತಯಾರಿಸುವ ಕಂಪನಿ ಮಾಡಿ ಲಾಭಗಳಿಸುತ್ತ, ನಂತರ ಶುದ್ಧ ಹಸುವಿನ ಸಗಣಿಗೆ ಬದಲಾಗಿ ಎಮ್ಮೆ, ಮೇಕೆಗಳ ಸಗಣಿಯನ್ನೂ ಸೇರಿಸುತ್ತ ಕಟಮಳ್ಳಿ ಸೋಪು ತಯಾರಿಕಾ ಕೈಗಾರಿಕೆಯನ್ನು ಪ್ರಸಿದ್ಧಗೊಳಿಸಿ ಊರನ್ನು ಉದ್ಧಾರ ಮಾಡಿದ ಎಂಬ ಹೊತ್ತಿನಲ್ಲಿಯೇ ಊರ ಜನ ಎಲ್ಲ ಬೆಳೆ ಬೆಳೆಯುವುದನ್ನು ಬಿಟ್ಟು ಕೇವಲ ಹಸುವಿನ ಹುಲ್ಲು ಬೆಳೆಯುತ್ತ ದನದ ಹಿಂಬಾಗಕ್ಕೆ ಬುಟ್ಟಿ ಹಿಡಿದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾದ ನಂತರ ಮುಂಬೈ ಸೇರಿದ ಗೌಡರು ತಮ್ಮ ಕಂಪನಿ ದಿವಾಳಿ ಆಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕಟಮಳ್ಳಿಯ ಜನತೆ ಬೀದಿಗೆ ಬಿದ್ದಿದ್ದನ್ನು ಹೇಳುತ್ತದೆ. ಆದರೆ ಇಲ್ಲಿ ಬೀದಿಗೆ ಬಿದ್ದದು ಕೇವಲ ಕಟಮಳ್ಳಿಯವರು ಮಾತ್ರವಲ್ಲ. ಇಡೀ ದೇಶಕ್ಕೆ ದೇಶವೇ ಈಗ ದನದ ಗಂಜಲದ, ಸಗಣಿಯ ಹಿಂದೆ ಬಿದ್ದು ಒದ್ದಾಡುತ್ತ ಕೊನೆಗೆ ತಳ ಕಾಣುವ ಸ್ಥಿತಿಯನ್ನು ವಿಡಂಬನಾತ್ಮಕವಾಗಿ ಹೇಳುತ್ತದೆ.
ಸುಣ್ಣ ಕಥೆಯಲ್ಲಿ ಬೇಕಾದಷ್ಟೇ ಸುಣ್ಣದ ಕಲ್ಲನ್ನು ತಂದು ಸುಟ್ಟು ಜರಡಿ ಹಿಡಿದು ಮಾರುವಾಗ ತಮಗೆ ಬೇಕಾದಂತೆ ಬೆಟ್ಟವನ್ನು ಅಗೆದು ಪ್ರಕೃತಿಯ ವಿರುದ್ಧ ಹೋಗಬಾರದೆನ್ನುವ ವಿವೇಚನೆಯನ್ನು ಹಳ್ಳಿಯ ಮುಗ್ಧ ಜನರಲ್ಲಿ ಕಾಣಬಹುದು.
‘ಬಿಳಿಜೋಳದ ರೊಟ್ಟಿ’ ಮತ್ತು ‘ಹಾಸಿಗೆಯ ಹಂಗ್ಯಾಕ’ ಇವೆರಡೂ ಒಂದೇ ಗುಂಪಿಗೆ ಸೇರುವ ಕಥೆಗಳು. ಬಡತನ ನಮ್ಮ ಬದುಕಿನಲ್ಲಿ ಆಟ ಆಡುವ ರೀತಿಯನ್ನು ಹೇಳುತ್ತಲೇ ಜೀವನದ ಸೂಕ್ಷ್ಮ ದರ್ಶನ ಮಾಡಿಸುತ್ತದೆ. ಬರಗಾಲ ಎಂದು ಗುಳೆ ಎದ್ದು ಮಂಗಳೂರು ಕಡೆ ಹೊರಟರೆ ಅಷ್ಟು ದಿನಗಳವರೆಗೆ ಒಂದೇ ಸಮನೆ ಬರಲು ವರಾತೆ ಹಚ್ಚಿದ್ದ ಸಾಹುಕಾರ ಈಗ ಮಂಗಳೂರು ತಲುಪಿದ ಮೇಲೆ ‘ಮಳೆ ಬಿದ್ದು ಕೆಲಸ ನಿಂತಿದೆ ಎಂದು ಸಾಗ ಹಾಕಲು ನೋಡುತ್ತಾನೆ. ಮನೆಯಲ್ಲಿ ಇದ್ದ ಬಿದ್ದ ಜೋಳವನ್ನೆಲ್ಲ ಸೇರಿಸಿ ಹಿಟ್ಟು ಮಾಡಿಸಿಕೊಂಡು ಖಡಕ್ ರೊಟ್ಟಿ ಮಾಡಿಕೊಂಡು ಹೊರಟ ಮಡಿವಾಳಿ ಮತ್ತು ಪಾರವ್ವನ ಸಂಸಾರ ಕಂಗಾಲಾಗುವ ಹೊತ್ತಿನಲ್ಲಿಯೇ ಊರಲ್ಲಿ ಮಳೆ ಬಂದು ಹೊಲಕ್ಕೆ ರೆಂಟಿ ಹೊಡೆಯಲು ದೌಡು ಬನ್ನಿ ಎಂದು ಕರೆಯುತ್ತಿದ್ದ ದೊಡ್ಡಪ್ಪನ ಮಗನ ಮಾತು ಜೀವನದಲ್ಲಿ ಆಸೆಯನ್ನು ಚಿಗುರಿಸುತ್ತದೆ. ಇತ್ತ ಹಾಸಿಗೆಯ ಹಂಗ್ಯಾಕ ಕಥೆಯೂ ಬಡತನವನ್ನು ಹೇಳುತ್ತಲೇ ಕೌದಿ ಹೊಲಿಯುತ್ತಿದ್ದ ಬಸವ್ವನ ಮಗ ಕಥಾ ನಾಯಕ ಹಾಸಿಗೆ ಮಾರುವ ಉದ್ಯೋಗ ಮಾಡುತ್ತಿದ್ದವನಿಗೆ ಕೊನೆಗೆ ತಾನೇ ಹೊಲಿದ ಕೌದಿಯೊಳಗೆ ಮಲಗಿದ ಅಮ್ಮನನ್ನು ನೋಡಿ ದುಃಖ ಉಕ್ಕೇರಿ ಬರುತ್ತದೆ. ಒಂದು ಸುಖಾಂತವೆನಿಸಿದರೆ ಇನ್ನೊಂದು ತೀರಾ ನೋವು ನೀಡುವ ಅಂತ್ಯ.
‘ರೊಕ್ಕ’ ಮತ್ತು ‘ದೇವರು ಉಟ್ಟ ಸೀರೆ’ ಮೂಢ ನಂಬಿಕೆಗಳು ನಮ್ಮನ್ನು ಆಳುವ ಮನಸ್ಥಿತಿಯನ್ನು ಹೇಳುತ್ತದೆ. ದೇವರ ಹೆಸರಿನಲ್ಲಿ ನಾವು ಆಚರಿಸುವ ಮೂಢನಂಬಿಕೆಗಳು ನಮ್ಮ ಬದುಕನ್ನೇ ಬದಲಿಸಿ ಬಿಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ರೊಕ್ಕ ಕಥೆಯಲ್ಲಿ ಬಡತನದ ಕಾರಣದಿಂದ ಶಾಲೆಯಲ್ಲಿನ ನಾಟಕದ ಪಾತ್ರಕ್ಕೆ ಬೇಕಾದ ಕಿರೀಟ ಹೊಂದಿಸಲಾಗದ ಪಕ್ಯಾ ಕೊನೆಗೆ ಜಾತ್ರೆಯಲ್ಲಿ ಪೂಜಾರಪ್ಪನ ಕೈ ಬೀಳಿಸಿ ನೂರು ರೂಪಾಯಿ ತೆಗೆದುಕೊಂಡು, ನಿಂಗ್ಯಾಕೆ ದುಡ್ಡು ಎಂದು ದೇವರನ್ನೇ ಕೇಳುವ ಮುಗ್ಧತೆ ಕಾಣಿಸಿದರೆ ದೇವರು ಉಟ್ಟ ಸೀರೆಯಲ್ಲಿ ಜಾತ್ರೆಗೆ ಉಡಿ ತುಂಬಿದ ಸೀರೆಯನ್ನು ಕೊಂಡುಕೊಂಡು ಉಟ್ಟ ಶೇಖವ್ವನ ಸಣ್ಣ ಸೊಸೆ ತುಂಬು ಗರ್ಭಿಣಿಯಾಗಿರುವಾಗಲೇ ಅದೇ ಸೀರೆಯಿಂದ ನೇಣು ಹಾಕಿಕೊಂಡು ಕೊನೆಗೆ ದೇವಿಗೆ ಸೀರೆ ನೇಯ್ದುಕೊಡುವ ಸಿದ್ದಪ್ಪನ ಮಗಳು ಪುನಃ ದೇವಿ ಸೀರೆಗೆ ಪೂಜಾರಪ್ಪನ ಹೆಂಡತಿ ಮಹಾದೇವಿಯ ಬಳಿ ಹೋಗುವುದರೊಂದಿಗೆ ದೇವಿಯ ಅಪಶಕುನದ ಅಪಮಾನ ಕೊನೆಯಾಗುವ ಸೂಚನೆ ನೀಡುತ್ತದೆ.
ಶೀರ್ಷಿಕೆಯ ಕಥೆ ಕೆಂಪು ಹಾಳೆಯ ಹೂವು ಕಾಲೇಜು ದಿನಗಳ ಪ್ರೇಮಿಯನ್ನು ಹುಡುಕಿ ಹೋಗುವ ಸ್ತ್ರೀಯೊಬ್ಬಳು ಆತ ಹತ್ತಿರ ಇರುವಾಗ ಆತನ ಸೆಳೆತವನ್ನು ನಿರಾಕರಿಸಿ ಹೊರಟು ಹೋಗುವುದನ್ನು ಹೇಳಿದರೆ, ಸುರುಳಿ ಕಥೆಯು ಗಂಡು ಹೆಣ್ಣಿನ ಮಿಲನವನ್ನು ಸಂಭಾಷಣೆಯಲ್ಲೇ ಹೇಳುತ್ತದೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ನಿರೂಪಿತವಾಗುವ ಕಥೆಗಳು ಭಾಷಾ ದೃಷ್ಟಿಯಿಂದ ಸಶಕ್ತವಾಗಿದೆ. ಆದರೆ ಕಟಮಳ್ಳಿ ಎನ್ನುವ ಒಂದೇ ಊರಿನ ಘಟನಾವಳಿಗಳನ್ನು ಇಟ್ಟುಕೊಂಡು ರಚಿತವಾದ ಇಡೀ ಕಥಾ ಸಂಕಲನ ಇದು.
ಸರಿ ಸುಮಾರು ಎಲ್ಲಾ ಕಥೆಗಳೂ ಕಟಮಳ್ಳಿ ಎಂಬ ಊರಿನಲ್ಲಿಯೇ ನಡೆಯುತ್ತವೆಯಾದ್ದರಿಂದ ಇಡೀ ಸಂಕಲನಕ್ಕೆ ಒಂದು ರೀತಿಯ ಏಕರೂಪತೆ ಪ್ರಾಪ್ತವಾಗಿದೆ. ಬಹುಶಃ ಕಥೆಗಳನ್ನು ಮತ್ತೊಂದಿಷ್ಟು ವಿಸ್ತೃತಗೊಳಿಸಿ ಯಾವುದೋ ಎಳೆಯಲ್ಲಿ ಸಂಬಂಧ ಕಲ್ಪಿಸಿದ್ದರೆ ಒಂದು ಕಾದಂಬರಿಯಾಗಿ ಬಿಡುವ ಎಲ್ಲ ಅವಕಾಶಗಳೂ ಇಲ್ಲಿದ್ದವು ಮಾತ್ರವಲ್ಲ ಕಥೆ ಹೇಳುವ ರೀತಿಯಲ್ಲಿ ಸ್ವಲ್ಪ ಎಡವಿದ್ದಕ್ಕೂ ಒಂದು ಘನತೆಯನ್ನು ಕೊಟ್ಟು ಬಿಡಬಹುದಾಗಿತ್ತು ಎಂದೆನಿಸದೇ ಇರದು.
ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.
ನಮ್ಮ ಹಳ್ಳಿಯ ಅಂದು ಇಂದಿನ ಸ್ಥಿತಿಗಳು ಓದುತ್ತ ಮನಃಪಟಲದಲ್ಲಿ ಹರಿದಾಡಿತು. ಪುಸ್ತಕದಲ್ಲಿನ ಕಥೆಗಳು ನಿಮ್ಮ ಬರವಣಿಗೆಯಲ್ಲಿ ಓದದೇ ತುಂಬಾ ದಿನಗಳಾಗಿತ್ತು. ಸೂಪರ್ ಒಂದೊಳ್ಳೆ ಪುಸ್ತಕದ ಪರಿಚಯ ಮಾಡಿಕೊಟ್ಟಿರಿ. ಧನ್ಯವಾದಗಳು ದೇವಿ.
ಅಷ್ಟೇ ಸ್ಪಷ್ಟವಾಗಿ ಬರೆದ ಕೊನೆಯ ಅನಿಸಿಕೆ ನನಗೂ ಹೌದೆಂತೆನಿಸಿತು. ಹಳ್ಳಿಯ ದುಸ್ಥಿತಿಗೆ ಹಿಡಿದ ಕನ್ನಡಿ ಈ ಪುಸ್ತಕ ಅನ್ನಿಸದಿರದು.