1

ಪಾದಕ್ಕೊಂದೊಂದು ಪದ
ಅಭಾವಕ್ಕೂ ಭಾವ ಕಾರಣ
ಹಾಗೆ
ಅಭಾವವೂ ಭಾವ

ತಲೆ ಮೇಲೆತ್ತಿ ನೋಡಿದರೆ
ಅಹಾ! ಚಿಟ್ಟೆಯ ರೆಕ್ಕೆ
ಪಟಪಟಪಟ ಬಡಿದಂತೆ
ಹಳೆಯ ನೆನಪು

2

ದೂರದಲಿ ಕಂಡಾಗ
ಸಣ್ಣದಾಗಿ ಕಾಣುವ ಇರುವೆ

ಕಣ್ಣಿಗೆ ಮುತ್ತಿಟ್ಟಾಗ ಆನೆ

ನೀನು ಹಾಗೆ

3

ಮಾತಲ್ಲೆಲ್ಲ ಗಂಗಾಜಲ
ತಲೆಯಲ್ಲೆಲ್ಲ ಅಮೇಧ್ಯ

ಹೊರಗೆ
ಸಾಕ್ಷಾತ್ ಶ್ರೀರಾಮಚಂದ್ರ
ಒಳಗೊಳಗೆ
ರಾಸನೃತ್ಯ

ಮನುಷ್ಯರು ನಾವು
ಪರಂಧಾಮದ ಬಾಗಿಲಲಿ ನಿಂತವರು

4

ಕಣ್ಣು ಮುಚ್ಚಿದಾಗ
ಗೂಡಿಂದ ಹೊರಬಂದಂತೆ
ಇರುವೆಗಳ ಸಾಲು ಸಾಲು

ನಿನ್ನ ನೆನಪು

5

ಅವನದೊಂದು ಸಾಲು
ನನ್ನದೊಂದು ಸಾಲು

ಉಲ್ಟಾ ಸೀದ
ಸೀದಾ ಉಲ್ಟಾ
ಮಾಡುವೆ

ನಾನು
ಕವಿ

6

ಮನೆಯ ಮುಂದಿನ ಗರಿಕೆ
ಅಲ್ಲೆಲ್ಲೋ ಆಲದ ಬಿಳಲು

ನಿನ್ನ ನರಿಗೆಯಂಚಿನ ಕೊನೆ
ಕಂಡಾಗ

ನಾನು
ಧ್ಯಾನಸ್ಥ

7

ಧ್ಯಾನಕ್ಕೆ ಕೂತವನಿಗೆ
ಕಟ್ಟಿರುವೆ ಸಾಲು ಕಚ್ಚಿದಂತೆ

ನಿನ್ನ
ನೆನಪು