ಅರುಂಧತಿ ಐದು ಕವನ ಸಂಕಲನಗಳ ಲೇಖಕಿ. ತೀರಾ ಇತ್ತೀಚೆಗೆ ಬಂದವು ‘ಲವ್ ವಿಥೌಟ್ ಎ ಸ್ಟೋರಿ (ವೆಸ್ಟ್ಲ್ಯಾಂಡ್, ನವದೆಹಲಿ, 2019), ವೆನ್ ಗಾಡ್ ಈಸ್ ಎ ಟ್ರಾವೆಲರ್ (ಹಾರ್ಪರ್ಕಾಲಿನ್ಸ್ ಇಂಡಿಯಾ, ನವದೆಹಲಿ, 2014 ಮತ್ತು ಬ್ಲಡಾಕ್ಸ್ ಬುಕ್ಸ್, ನ್ಯೂಕ್ಯಾಸಲ್, 2014). ಗದ್ಯ ಬರಹಗಾರರಾಗಿ, ಅವರ ಪುಸ್ತಕಗಳಲ್ಲಿ ದಿ ಬುಕ್ ಆಫ್ ಬುದ್ಧ, ಕಾಂಟೆಂಪೊರರಿ ಮಿಸ್ಟಿಕ್ಸ್, ಸದ್ಗುರು: ಮೋರ್ ದ್ಯಾನ್ ಎ ಲೈಫ್ ಮತ್ತು ಇತ್ತೀಚೆಗೆ, ಅದಿಯೋಗಿ: ದಿ ಸೋರ್ಸ್ ಆಫ್ ಯೋಗ (ಸದ್ಗುರು ಜೊತೆ ಸಹ-ಲೇಖಕರು) ಸಂಪಾದಕರಾಗಿ, ಅವರ ಇತ್ತೀಚಿನ ಪುಸ್ತಕವೆಂದರೆ ಭಕ್ತಿ ಕಾವ್ಯದ ಪೆಂಗ್ವಿನ್ ಸಂಕಲನ, ಈಟಿಂಗ್ ಗಾಡ್. ಅವರು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆಯೂ ವ್ಯಾಪಕವಾಗಿ ಬರೆದಿದ್ದಾರೆ.

ಭಾರತ ಉಪಖಂಡದಲ್ಲಿ ಬದುಕುತ್ತಿರುವ ನಾವು ಈ ನೆಲದ ಆಧ್ಯಾತ್ಮಿಕ ಸಾಹಿತ್ಯದ ನಂಬಲಾಗದ ಪರಂಪರೆಗೆ ಉತ್ತರಾಧಿಕಾರಿ ಎಂದು ಆಕೆ ಭಾವಿಸುತ್ತಾರೆ. ಈ ಸಾಹಿತ್ಯ passionate, profound, provocative – ಭಾವೋನ್ಮತ್ತ, ಗಂಭೀರ, ಉತ್ಪ್ರೇರಕ ಎನ್ನುವ ಅರುಂಧತಿ ಅದನ್ನು ನಿರ್ಲಕ್ಷಿಸುವುದು, ಕಡೆಗಣಿಸುವುದು ಅಥವಾ ತುಚ್ಛೀಕರಿಸುವುದು ದೊಡ್ಡ ದುರಂತ ಎನ್ನುತ್ತಾರೆ.

ಈ ಕವಿತೆಗಳನ್ನು ಸ್ವತಃ ಅರುಂಧತಿಯವರೇ ಆಯ್ದುಕೊಟ್ಟಿದ್ದು. ಇವು ಲವ್ ವಿಥೌಟ್ ಎ ಸ್ಟೋರಿ ಸಂಕಲನದಿಂದ ಆಯ್ದವು. ನೀವೇ ಓದಿ ನಿಮ್ಮಲ್ಲಿ ರೆಸೊನೇಟ್ ಆಗುವ ಕವಿತೆಗಳನ್ನು ಆಯ್ದುಕೊಂಡರೆ ಚೆನ್ನ ಅಂದರು. ಬಳಿಕ ಕವಿತೆಗಳನ್ನು ಆಯ್ದುಕೊಟ್ಟರು.

ಪುಸ್ತಕದ ಜಾಕೆಟ್ ಇಲ್ಲಿನ ಕವಿತೆಗಳಿಗೆ ಪ್ರವೇಶ ನೀಡುವ ಟಿಪ್ಪಣಿಯೊಂದನ್ನು ಹೊತ್ತಿದೆ. ಅದರ ಅನುವಾದ ಇಲ್ಲಿದೆ:

“ಇಲ್ಲಿನ ಕವಿತೆಗಳು ರಾಗ ಮತ್ತು ಕೆಳೆತನ, ಮಾತು ಮತ್ತು ಭಿನ್ನತೆ, ಮಿಥಿಕಲ್ ಶೋಧ ಮತ್ತು ಆಧುನಿಕ ಕಾಲದ ಹಂಬಲಗಳು – ಇವುಗಳನ್ನು ಜೀವಂತ ಜಗತ್ತಿನ ವಿಭ್ರಮೆ ಮತ್ತು ಮೌನಗಳ ವಸ್ತುವಿನ ಆವರಣದಲ್ಲಿ ಸಂಭ್ರಮಿಸುತ್ತವೆ, ಆ ಅನ್ಯೋನ್ಯತೆ ಮತ್ತು ಸಮಯಗಳ ಆವರಣದಲ್ಲಿ ಸುತ್ತುತ್ತಲೇ ಅವು ನಮ್ಮ ಜಗತ್ತನ್ನು ವಿಭಜಿಸುವ ದುರ್ಬಲ ಸೇತುವೆಯ ಹೆಪ್ಪುಗಟ್ಟಿದ ನಿಲುವಿನ ಜೊತೆ ಸಂವಾದದ ತುರ್ತುಗಳಿಗೆ ಮರಳುತ್ತವೆ.

“ಈ ಸಂಗ್ರಹದ ಎದೆಯಾಳದಲ್ಲಿ ಆಳವಾದ ನೈಜ ಆಸಕ್ತಿ ಒಂದಿದೆ, ಮಾನವರು ದೇವರುಗಳೊಂದಿಗೆ ನಡೆಯಬಹುದಾದ ಅಸ್ಪಷ್ಟ ಎಡೆಗಳಲ್ಲಿ, ಭೌತಿಕವು ಅಭೌತಿಕವನ್ನು ಮುಟ್ಟಬಹುದಾದ ಎಡೆಯಲ್ಲಿ, ಸಂಮೋಹಿತರು ಅನಾಯಾಸವಾಗಿ ಅನುದಿನದ ಜೊತೆ ಅನುಸಂಧಾನಗೈಯಬಹುದಾದ ಎಡೆಯಲ್ಲಿ ಅದು ನಿಕ್ಷಿಪ್ತವಾಗಿದೆ. ಕವಿಯು ಸರಳವಾಗಿ ‘ಕಥೆಯಿಲ್ಲದ ಪ್ರೀತಿ’ ಎಂದು ಕರೆಯುವ ಆ ಎಡೆಯಲ್ಲಿ ಸಹೃದಯನು ಕಳೆದುಹೋಗುತ್ತಾನೆ.”
ಆ ಕವಿತೆಗಳ ಅನುವಾದ ಇಲ್ಲಿದೆ.

***

ನಾನು ಕವಿಗಳ ಕಾಲಮಾನದಲ್ಲಿ ಬೆಳೆದೆ
(ಕವಿತೆಗಳಲ್ಲಿ ಭೇಟಿಯಾಗುವುದು ಬಹಳ ಒಳ್ಳೆಯದು- ಯೂನಿಸ್ ಡಿ ಸೌಝಾ)

ನಾನು ಸಂತೋಷವೆಂದರೆ
ಎಲೆಕೋಸಿಗೆ ಎಂದ

ಕವಿಗಳ ಕಾಲಮಾನದಲ್ಲಿ ಬೆಳೆದೆ
ಎಲ್ಲಿಯವರೆಗೆ ಎಂದರೆ ಅವರ

ಧೂಮಪಾನದ ಕಮಟು ವಾಸನೆಯ ಸಾಮ್ರಾಜ್ಯದ
ಅಡಿಯಲ್ಲಿ ಸಂಶಯದ ಒಂದು ಕಂಪನವನ್ನು

ಕಾಣುವವರೆಗೂ
ಅವರಿಗೋ ಅಚ್ಚರಿ, ನನಗೂ

ಎಲೆಯಾಗಿರುವುದೆಂದರೆ ಹೇಗೆ
ಬಾಡುತ್ತಲೋ ಕೆಲವೊಮ್ಮೆ

ಮರಿಹುಳದ ಬಾಯಿಗೆ ಸಿಕ್ಕಿ
ಹರಿದಂತೆ ಆಗುತ್ತಲೋ

ಇದ್ದರೂ ಅದೆಷ್ಟು ಗಾಢ ಹಸಿರು
ಪ್ರಕ್ಷುಬ್ಧ, ಒದ್ದೊದ್ದೆ, ಕಡುಹರಿದ್ವರ್ಣ

ಈಚೆಗೆ ವಿಸಿಟಿಂಗ್ ಕಾರ್ಡ್ ವಿನಿಮಯ
ಮಾಡಿಕೊಳ್ಳುವ ಕವಿಗಳು ಸಿಗುತ್ತಿರುತ್ತಾರೆ

ಅವರು ದಂತವೈದ್ಯರ ಪ್ರೀತಿಪಾತ್ರ ಗೆಳೆಯರು
ಕಸಿವಿಸಿಯ ತೇವವಷ್ಟನ್ನೂ ನೈರ್ಮಲ್ಯ ಕ್ರಿಯೆಗೆ ಒಳಪಡಿಸಲಾಗಿದೆ

ಅವರ ಕವಿತೆಗಳು ಪ್ರಶಾಂತ ಸಾಗರಚಿಪ್ಪುಗಳು
ಅವರ ನಗೆ ನುಚ್ಚುನೂರಾದ ಮೊಟ್ಟೆಯ ಸಿಪ್ಪೆಗಳು

ಎಲೆಕೋಸಿನ ಬಗ್ಗೆ
ಎಂದೂ ಚಿಂತಿಸದಿರುವ ಕವಿಗಳು ಅವರು

ಕವಿತೆಗಳಲ್ಲಿ ಭೆಟ್ಟಿಯಾಗಲು ಬಹಳ ಲಾಯಖ್ ಆದವರು

***

ಮಿಟ್ಟಿ

ಮಗುವಾಗಿದ್ದಾಗ
ನಾನು ಮಣ್ಣು ತಿಂದಿದ್ದೆ

ಅದು ನೊರಜು ಅಗಿದಂತೆ
ಕಳಿತ ಗೊಬ್ಬರದಂತೆ, ಒರಟಾಗಿ ಕಡೆದಂತೆ

ಅದೇನೋ ಒಂದು. ನನಗಂತೂ
ಅದರ ಹೆಸರು ಸಿಗಲೇ ಇಲ್ಲ

ಆ ನಂತರ ನಾನು
ಎವೆಯಿಕ್ಕದೆ ಚಂದ್ರನನ್ನು ನೋಡುವವಳಾದೆ

ಕಿಟಕಿಯ ಮೂಲಕ
ಕಣ್ಣು ಕಿರಿದು ಮಾಡಿ ನೋಡುತ್ತಾ

ಸ್ವಾತಂತ್ರವು ಅತೀಂದ್ರಿಯ
ವೆಂದು ನಂಬುತ್ತಾ –

ಚಂದ್ರ ಮಣ್ಣ ನೋಡುವವನಿರಬೇಕೆಂದು
ನಾನು ಕಂಡುಕೊಳ್ಳುವವರೆಗೂ

ಗುರುತ್ವದ ಮಂದ ಕೆಸರನ್ನು
ತೀವ್ರವಾಗಿ ಬಯಸುತ್ತಾ

ಸ್ಪರ್ಶದ ಹೊಲಸು ಪ್ರೊಮಿಸ್ಕಸ್
ರೋಮಾಂಚನಕ್ಕಾಗಿ ಹಂಬಲಿಸುತ್ತಾ

ಸೃಜಿಸಲು, ಒಡೆಯಲು
ಪುನರ್ ಸೃಷ್ಟಿಸಲು ಪರವಾನಗಿ ಹೊಂದಿದ

ಕವಿಗಳ ಪುರಾತನ
ಪಾತ್ರಗಳನ್ನು ಹೀಗೆ ಅನಾವರಣಗೊಳಿಸಿಬಿಟ್ಟೆ

ಅವರು ಚಂದಿರನ ಮತ್ತು ರಾಡಿ ಕೆಸರಿನ ನಡುವೆ
ಸಂದೇಶವಾಹಕರು

ನಾನು ಈ ನೆಲದ ಭಾಷೆಗಳನೇಕವನ್ನು
ಕಲಿಯಲು ಮೊದಲಿಟ್ಟೆ

ಅವಕ್ಕೆ ರಾಷ್ಟ್ರಗಳ, ಭೂಪಟಗಳ
ಕುರಿತು ಮಾಡಲೇನಿರಲಿಲ್ಲ

ಇದ್ದುದೆಲ್ಲವೂ
ಮಾರ್ಗಗಳ ಬಗ್ಗೆ

ಕಿವಿಯೋಲೆಗಳು
ಬೇರುಗಳ ಪವಿತ್ರಯಾತ್ರೆಯ ಗುರುತುಗಳು

ತಬ್ಬಲು, ಅಪ್ಪುಗೆಯಲಿ ಹಿಡಿಯಲು
ಬದುಕಿನನಂತ, ಅದಮ್ಯ ಬಯಕೆ

ನಿಗ್ರಹಕ್ಕೆ ಸಿಗದ ಹೆಸರಿಡುವ
ಮಾನವ ಪ್ರೀತಿ

ಸ್ರಾವ, ಗೊಬ್ಬರ, ಕೆಸರು
ಕಳಿತ ಎರೆ, ಹೊಲಸು, ಹೂಳು
ಪಾಚಿ, ಕೆಬ್ಬೆ, ಮಣ್ಣು, ಬುರುದೆ, ಜೇಡಿಮಣ್ಣು, ಪಾಯಖಾನೆ
ನೆಲದೆಲ್ಲ ಭಾಷೆಗಳಲ್ಲಿ ಮಣ್ಣು, ಶೋಕ

ಭಾಷೆಗಳಿಗಿರುವ ಸ್ವಾತಂತ್ರ್ಯದಲ್ಲಿ
ಎಲ್ಲಕ್ಕೂ ಎಡೆಯಿದೆ, ನಾನು ಕಂಡುಕೊಂಡೆ

ಯಾವುದೂ ಶ್ರೇಷ್ಟವಲ್ಲ
ಭಾಷಾಂತರಿಸಲಾಗದದು ಯಾವುದೂ ಇಲ್ಲ

ಎಲ್ಲವೂ ಸ್ತುತಿಯ
ನೆನಪಿನೋಲೆಗಳು

ನಮ್ಮನ್ನು ಮಾಡಲಾಗಿರುವ
ಗೊಬ್ಬರದ ಸ್ತುತಿ

ಜೂನ್ ತಿಂಗಳ ಮುಗಿಲು
ಅರೇಬಿಯನ್ ಸಮುದ್ರದ ಮೇಲೆ ಕವಿದುಬಿದ್ದಾಗ ಹೊರತು

ಆ ನಿದ್ರಿಸುವ ನಗರ
ಅಷ್ಟು ಅನನ್ಯವಾದ ನೋವಿಗೆಚ್ಚರಗೊಳ್ಳುವಾಗ

ಕ್ಷಣಕ್ಕೆ ಮಾತ್ರ
ಅದಕ್ಕೊಂದು ಹೆಸರಿರಲು ಸಾಧ್ಯವಿಲ್ಲ

ಅದರ ಹೊರತು
ಸದ್ದು ಸುಗಂಧವ ಬೆರೆಯುವಲ್ಲಿ

ಚೆಲ್ಲಿದ ವಸ್ತು
ಹುಚ್ಚೆದ್ದ ನುಣುಪು ತೇವವನ್ನು ಬೆರೆಯುವಲ್ಲಿ

ಮಣ್ಣು ಮಿಟ್ಟಿ

ಅದಷ್ಟೇ. ಬೇರೆ ಯಾವುದೂ ಬೇಡ


ಪ್ರೀತಿಯ ಬಗ್ಗೆ ವಿಚಿತ್ರ ವಿಷಯವೇನೆಂದರೆ

ಪ್ರೀತಿಯ ಬಗ್ಗೆ ವಿಚಿತ್ರ ವಿಷಯವೇನೆಂದರೆ
ಅದು ನಿಮ್ಮನ್ನು
ಮತ್ತೆಂದೂ ನಿಮ್ಮದೇ ವಿಷಯದಲ್ಲೂ
ವೃತ್ತಿಪರರಾಗದಂತೆ
ಹವ್ಯಾಸಿಯಾಗಿ ಕರಗಿಸಿ
ಎರಕ ಹೊಯ್ದುಬಿಡುತ್ತದೆ

ಪ್ರೀತಿಯ ಬಗ್ಗೆ ವಿಚಿತ್ರ ವಿಷಯವೇನೆಂದರೆ
ಮೊದಲಿಗೆ ನೀವು ಸಮ್ಮತಿಸುವುದಿಲ್ಲ
ತುಂಬ ಒರಟಾಗಿ ಅಸಮ್ಮತಿ ತೋರುತ್ತೀರಿ
ಬಳಿಕ ಕಂಡುಕೊಳ್ಳುತ್ತೀರಿ
ನರ್ತಿಸುವುದು ಜಾಣತನವೆಂದು

ಪ್ರೀತಿಯ ಬಗ್ಗೆ ವಿಚಿತ್ರ ವಿಷಯವೇನೆಂದರೆ
ಅದು ನಿಮ್ಮನ್ನು
ನೀವು ಮನೆಯೆಂದು ಭಾವಿಸಿದ್ದ
ಮರುಧ್ವನಿಯ ನೆಲ*ದಿಂದ
ಒಕ್ಕಲೆಬ್ಬಿಸುತ್ತದೆ

ನಿಮ್ಮನ್ನು
ತಾರೆಗಳ ಕೆಳಗೆ
ಕುಳಿತಿರುವ
ಗೆಳೆಯರ ಬಳಿಗೆ
ಒಯ್ಯುತ್ತದೆ

ಪುರಾತನ
ವಿಸ್ಮಯದಲ್ಲಿ
Land of echoes

ಮತ್ತೆ ಮೊದಲ ಮುಂಗಾರು (ಮುಂಬಯಿ ಜುಲೈ 2016)

ಮೊದಲಿಗೆ
ಅದು ಹಳವಂಡ

ಅಳುವ ಕೊಡೆಯ ಅಡಿ
ಮುತ್ತುಗಳ ಸುರಿಮಳೆ

ಗುಲ್ಮೊಹರಿನೊಂದು
ಸುಖಭಾವ

ಶುಂಠಿ ಚಹಾದ ಅನುಭೂತಿಯ
ಅನಂತತೆ

ಪ್ರತಿ ಕ್ಷಣವೂ
ಹಳೆಯದೊಂದರ ನೆನಪು

ಆಗಸಕ್ಕೆ ಹುಚ್ಚೇರಿದಾಗ
ಪ್ರೀತಿ ಪರಿಶುದ್ಧ
ಬದುಕು ಸರಳಾತಿ ಸರಳ

ಹೃದಯ ಮಲಬಾರ್ ಆದರೆ
ಚೇತನ ಅರೇಬಿಯನ್

ಬಯಕೆ ಕೋರಮಂಡಲ್
ನಗೆ ನರ್ತಕಿ ಜೀನ್ ಕೆಲ್ಲಿ

ಮಾತುಗಳೋ ಮಳೆ, ಬಾರಿಶ್
ಮತ್ತು ಮಳೈ

ಅವು ಬಲು ಮಾದಕ
ಸತ್ಯ, ಖಚಿತ

ಮೊದಲ ಮಳೆಗಳು
ಯಾವಾಗಲೂ
ಈ ಹಂಬಲಿಕೆಯ ಕೃತಿಚೌರ್ಯ

ಪ್ರತಿಕ್ಷಣವೂ
ಇನ್ನೊಂದರ ಮರುಧ್ವನಿ

ನಿಷಿದ್ಧ ದೇವನೊಬ್ಬನ
ಘರ್ಜನೆಯ ಮೊರೆತ

ಅವನ ಜಟೆ ನೊರೆಗರೆವ ಹಸಿರು ಹೊಳೆ
ಅವುಗಳ ಮೂಲಕ ಸಮುದ್ರ ಕುದುರೆ

ಹೊಳೆಮೀನು ಬಾಣದಂತೆ ಸೀಳಿ
ಸುತ್ತುತ್ತವೆ ಕೋಡುಚಂದಿರನ ಸುತ್ತ
ಪ್ರತಿ ಕಾರ್ಮುಗಿಲು ಒಬ್ಬ ಅಂಚೆಯವ
ಭೂತ-ಅನಂತದೊಂದಿಗೆ

ಹಂಬಲಿಸಿ ಕೂರುವುದೆಂದರೆ
ಏರುತ್ತಿರುವ ಮಗ್ಗದ ಜ್ವರ

ಹಾಗೆಯೇ ಆ ನೀಲಿಬೂದಿ ಮತ್ತು ಓಟ್ಮೀಲಿನ ಧ್ವನಿಯ
ಮನುಷ್ಯನಿಗೆ ಅದು ದಾಹ ಮತ್ತು ತೇವ

ಓ ಮಂಗಳವಾರದ ಹನ್ನೊಂದು ಘಂಟೆಯ ಸ್ಥಿತಿಗೆ
ತಲುಪಲು ಬಹಳ ಸಮಯ ಹಿಡಿಯುತ್ತದೆ

ನಾವು ಕಿಟಕಿಗಳನ್ನ ತೆರೆದಾಗ
ಹೊರಗಿನ ಸ್ಥಂಭನಕ್ಕೆ
ಅಸಾಧ್ಯ ತತ್ಕ್ಷಣತೆ

ನೀಳ ಉಚ್ಛ್ವಾಸ
ಕಪಾಟಿನಲ್ಲಿ ಕಾಲುಚೀಲ
ಉಲ್ಬಣಿಸುತ್ತಿರುವ ಮನೋವಿಕಾರ
ಹಿಂದೆಂದೂ ಇರಲಿಲ್ಲವೆಂಬ ಲಜ್ಜೆಗೇಡಿ ಭಾವ

ಆ ಮಾತು ಹೇಳು

ನಮ್ಮ ಕೊರಳು ಕೆಳಗಿಳಿಯುತ್ತದೆ
ರಕ್ಷಕರಿಲ್ಲದ ಅಚ್ಚರಿಯ ಜೊತೆ

ಅಲ್ಲದೆ ಒಂದು ಬಗೆಯ
ಪರಿಶುದ್ಧ ಭೀತಿ

‘ಮುಂಗಾರು’.

ಪೇರೆಂಟ್ಸ್
ಅವರು ತಾವು ಕಂಡಷ್ಟೇ ಬೇಗನೆ
ಕಾಣದಾಗುತ್ತಾರೆ

ನಿನ್ನ ಸ್ಕೂಲಿಗೆ ಸಾಗಹಾಕಿದಾಗ
ಚಕ್ಕರ್ ಹೊಡೆಯುವ ಕಲೆಯ
ಅವಿರತ
ಕರತಲಾಮಲಕಗೊಳಿಸಿಕೊಳ್ಳುತ್ತಲಿರುವಾಗ

ತೋಳ ಬಂತು ತೋಳ
ಅವರು ಅಂಜಿಸುತ್ತಾರೆ ಪದೇ ಪದೇ
ಅದೇ ನೀನೊಂದು ಕ್ಷಣ ಪ್ರತ್ಯಕ್ಷವಾಗಿ ನೋಡು
ಅವರು ಮಾಯವಾಗಿ ಹೋಗುತ್ತಾರೆ
ವೆಲ್ವೆಟ್ ಪಂಜಾ, ದೃಢವಾದ ಹೆಜ್ಜೆಯೂರಿ
ಇರುಳಿನೊಳಕ್ಕೆ

ಭೂದೃಶ್ಯವೊಂದು ಹೆಣ್ಣಾದಾಗ

ಕೀಹೋಲಿನ ಮೂಲಕ ನಾನು ನೋಡಿದಾಗ
ನನಗೆ ಎಂಟರ ವಯಸ್ಸು

ಕಂಡಿದ್ದು ನನ್ನಮ್ಮನನ್ನು, ಡ್ರಾಯಿಂಗ್ ರೂಮಿನಲ್ಲಿ
ಅವಳ ದಾಸವಾಳ ಬಣ್ಣದ ರೇಷ್ಮೆ ಸೀರೆಯಲ್ಲಿ

ಅವಳ ಕೋಮಲ ಬೆರಳುಗಳು
ಹಿಡಿದಿದ್ದು ಐಸ್ ಹಾಕಿದ ಕೋಲಾ ಬಟ್ಟಲು

ನಾಚಿಕೆಯಾಯಿತು ನನಗೆ ಥಟ್ಟನೆ
ಆವರೆಗೆ ಅವಳನ್ನ ನೋಡದೆ ಇದ್ದದ್ದಕ್ಕೆ

ಅವಳನ್ನು ನಾನು ಚೆನ್ನಾಗಿಯೇ ಅರಿತುಕೊಂಡಿದ್ದೆ
ನೀಲಿ ಮಲ್ಮಲ್ಲಿನ ಒಳಗೆ ಗಂಭೀರ ಮೈಮಾಟ
ಮುಂಗೈಲಿ ಮೊಂಡುರಂಪದ ವಿನ್ಯಾಸದ ಚಿನ್ನದ ಬಳೆ
ಬಲತೋಳಿನ ಮೇಲಿನ ತೋಳಬಂಧಿಯ ಕೊಂಕು
ಅವಳ ಕಮಾನು ಕಾಲಿನ ಅಂಗಾಲು –
ನನ್ನ ಕುರಿತು ನಾನು ತಿಳಿದಿದ್ದಕ್ಕಿಂತ ಹೆಚ್ಚು

ಅವಳ ಧ್ವನಿಯು ಹರಿವ ನೀರಂತಿತ್ತು
ಕೋಲಾದಲ್ಲಿ ಹಾಕಿದ ಐಸ್ ಕ್ಯೂಬುಗಳ ಹಾಗೆ
ನಾನು ಅದನ್ನೂ ಅರಿತಿದ್ದೆ

ಆದರೆ ಆ ದೊಡ್ಡವರ ಪಾರ್ಟಿಯಲ್ಲಿ
ಕೀಹೋಲಿನ ಮೂಲಕ ಕಂಡವಳು
ಭೂಗೋಳವಾಗಿರಲಿಲ್ಲ ಇನ್ನೆಂದೂ

ತನ್ನ ಕೊರಳ ಹೇಗೆ ಕೊಂಕಿಸಬೇಕೆಂದು
ತನ್ನ ಬಟ್ಟಲಲ್ಲಿ ತಿರುಗುವ ಪಾನೀಯವನ್ನು
ಹೇಗೆ ತೊಟ್ಟು ತೊಟ್ಟೇ ಹೀರುವುದೆಂದು
ಅವಳಿಗೆ ತಿಳಿದಂತಿತ್ತು
ಅವಳು ಪುರುಷರ ಮಂದ್ರ ಸ್ತರದ ಭಾಷೆಯನ್ನು
ಅಂದಗೊಳಿಸಿದ ನಖಗಳನ್ನು, ತುರ್ತುಪರಿಸ್ಥಿತಿ ಎಂಬ
ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಳು

ಅವಳನ್ನು ರಾತ್ರಿಯಿಡೀ ನೋಡುತ್ತಿರಬೇಕಿತ್ತು

ಅದಂತು ನಾನು ಅರಿತುಕೊಂಡಿದ್ದು
ಕೀಹೋಲುಗಳು ಬಾಗಿಲುಗಳಿಗಿಂತ
ಹೆಚ್ಚಿನದನ್ನು ತೋರಿಸಬಲ್ಲವೆಂದು

ಗೋಡೆಯಲ್ಲಿನ ಸಣ್ಣನೆ ಬಿರುಕು
ಸಾಕು ನಿನಗೆ
ಸಮಾನಾಂತರ ವಿಶ್ವವೊಂದರ ಒಳಕ್ಕೆ
ಮುಗ್ಗರಿಸಿಬಿಡಲು

ತಾಯಂದಿರು ಹೆಣ್ಣುಗಳು

***

 ಸನ್ಯಾಸಿ
(ಹದಿನಾರು ವರ್ಷಗಳ ಕಾಲ
ಮೌನವ್ರತದಲ್ಲಿದ್ದವನು)

ಯಾಕ್ ಟೀ ಸ್ಟಾಲಿನಲ್ಲಿ
ನನಗೊಂದು ಟಿಪ್ಪಣಿ ಬರೆಯುತ್ತಾನೆ

ಬೂದು ಬಿಕ್ಕಳಿಸುವ ಗಾಳಿಯಲ್ಲಿ
ಹರಿದ ಪ್ರಾರ್ಥನೆಯ ಧ್ವಜದ ಅಂಗಿ

ಕೈಲಾಸಪರ್ವತದ ಹಾದಿ
ಅವನ ಮುಖ ಕಂದರದಂತೆ, ಸೀಳಿನಂತೆ

ಹೊಳೆಯುವ ಹಲ್ಲು
ಅವನು ಅನುದಿನ ಕಳೆಯುತ್ತಾನೆ

ತನ್ನ ಮಂದಿರವ ಶುಚಿಗೊಳಿಸುತ್ತ
ನಗುತ್ತಾನೆ ಸಾರ್ಥಕವೆಂದೆನ್ನುತ್ತ

ನಾನು ಮಂದಿರವನ್ನು ಸ್ವಚ್ಛಗೊಳಿಸುತ್ತೇನೆ
ಅದು ನನ್ನನ್ನು

ಅವನ ಕ್ಷೀಣ ನೆನಪಿನಲ್ಲಿ ತಾನು
ಬಿಡಿಭಾಗಗಳ ಮಾರುತ್ತಿದ್ದ ನೆನಪು

ಹಿಮ್ಮುಖ ನಿಂತಂಥ ಯಾವುದೋ
ಕಲ್ಲಿನ ಪರ್ವತವೊಂದು ಭಾಸವಾದುದು
ತನ್ನನ್ನು ದಾಳಕ್ಕೆ ಕೆಡವುವ ಮೊದಲು

ಅವನು ಕಂಡು ಕೇಳಿದ್ದರಲ್ಲೆ
ಅದು ಅತ್ಯಂತ ಆಳವಾದ ಗುಂಡಿ

ಒಲವೆನ್ನಲು
ತುಂಬಾ ಆಳ

ಅದೇ ಅವನನ್ನು ಬಿಡಿಭಾಗವನ್ನಾಗಿಸಿದ್ದು

ನಿಜಕ್ಕೂ ಅನನಿವಾರ್ಯ
ಎಲ್ಲೂ ಬಳಸದೇ ಉಳಿದಿದ್ದು

ಇನ್ನೊಂದು ಬದುಕು ಎಂದೇನಾದರೂ ಇದ್ದರೆ
ಇದನ್ನಷ್ಟೇ ನಾನು ಬೇಡುವುದು ಎನ್ನುತ್ತಾನೆ

(ಈಗವನು ನಗುವುದಿಲ್ಲ)
ಮತ್ತದೇ ಮೌನ, ಅದೇ ಶುದ್ಧೀಕರಣ