ಇಳಿದು ಬಾರೇ…

ಅವಳಿಲ್ಲೆಲ್ಲೋ ಪ್ರವೇಶಿಸಿದ್ದಾಳೆ
ಎದೆಯಲೆಲ್ಲಾ ಆವರಿಸಿ
ಮೈಯಲ್ಲೆಲ್ಲಾ ಹರಿದಾಡುತ್ತ
ಕೈ ಮೂಲಕ ಇಳಿಯುತ್ತಿದ್ದಾಳೆ
ಕಣ್ಣ ಕಣದಲ್ಲಿ ಪ್ರವೇಶ ಪಡೆದು
ಕಣ ನಾಳ ನರ ರಕುತ ಮಾಂಸ
ಬುದ್ದಿ ಮನಸ್ಸು ದೇಹ ತರಹ ಆವರಿಸಿ

ಬ್ರಹ್ಮಾಂಡ ಖಗೋಳ ಭೂಗೋಳಾದಿ
ಹರಿಹರಿದಾಡಿ ನಲಿನಲಿದಾಡಿ
ಕುಣಿತಕ್ಕೊಳಗಾಗಿ ಧೂಮುಕಿ ಧೂಳಾಡಿ
ದೇಹಾತ್ಮಗಳೂಳಗೆ ನೆನಹು ಕುರುಹಾಗಿ
ಬದುಕಾಗಿ ಬಾಗಿ ಬೀಗಿ ನೆಲೆ ನಿಂತಿದ್ದಾಳೆ

ಉಸಿರ ಬಿಸಿ ಬಸೆದು ತಂಪಾಗಿದ್ದಾಳೆ
ಧರೆಗೆ ಧಾರೆಯಾಗಿ ಜಿನುಗಲು
ಭೂವಿಗೆ ಹಸಿರಾಗೊಡೆಯಲೂ
ಕಲರವಾಗಿ ತಣಿಸಲು
ಮುಂದಾಗಿದ್ದಾಳೆ
ಅವಳೇ ನನ್ನೊಳಗಿನವಳು
ನನ್ನ ಬೆಳಗಿನವಳು

ಭೂವಿಯೊಳಗೂ ಒಡಲದೊಳಗೂ
ಕಣದೊಳಗೂ ಹೃನ್ಮನದಾಳದೊಳಗೂ
ವಿಶ್ವಾತ್ಮದೊಳಗೂ
ಎಲ್ಲರೊಳಗೊಂದು ಜೀವ ಕಣದವಳು
ಕಣ್ಮಿಂಚಿನೊಳಗೂ
ಜೀವಜಾಲವಾಗಿ
ಶೂನ್ಯದಲ್ಲಿ ಶೂನ್ಯವಾಗಿ
ಎಲ್ಲೆಲ್ಲೂ ಇದ್ದಾಳೆ
ಕಂಡವರಿಗೆ ಕಾಣದವರಿಗೆ
ಅರಿತವರಿಗೆ ಅರಿಯದವರಿಗೆ
ಅವಳು ಅವಳಾಗಿಯೇ ಇದ್ದಾಳೆ

ಜನ್ಮಗಳಿಲ್ಲ
ಯುಗಾಂತರಗಳಿಲ್ಲ
ಸಾವಿಲ್ಲ ನೋವಿಲ್ಲ
ನಷ್ಟವಿಲ್ಲ ಲಾಭವಿಲ್ಲ
ಕಷ್ಟವಿಲ್ಲಾ ಸುಖಗಳಿಲ್ಲ
ಭಾವಿಸಿದವರಿಗಷ್ಟೇ
ಹುಟ್ಟುತ್ತಲೇ ಇರುತ್ತಾಳೇ
ಅವರವರೊಳಗೆ

ಆಕೆಗೆ ಆಕೆ ಯಾಕೆ ಅನ್ನಬೇಕು
ಅವಳಿಗೆ ಅವಳೇ ಯಾಕೆ ಅನ್ನಬೇಕು
ಬಾರೇ ಹೋಗೆ ಯಾಕೆ ಅನ್ನಬೇಕೂ
ಗೊತ್ತಿಲ್ಲ ಪ್ರಶ್ನೆ ಅಷ್ಟೇ
ಅವಳನ್ನ ಅವಳಾಗಿ ನೋಡಲು
ಇಷ್ಟೇ ಸಾಕೇ.. ಗೊತ್ತಿಲ್ಲ
ಹರಿದಷ್ಟೂ ಹರಿಯುವಳೂ
ಬರೆದಷ್ಟೂ ಬರುವವಳೂ……

ವಿರಾಮಗಳಿಲ್ಲದವಳು

ಅಜೀತ ಪಾತ್ರೋಟ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದವರು.
ಸಧ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ(phd) ಮಾಡುತ್ತಿದ್ದಾರೆ