ಅದು ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ‘ಆಲ್ ಈಸ್ ಬ್ರೈಟ್’ ಎನ್ನುವ ಪದಗಳಿಗೆ ಹೊಸ ಅರ್ಥ ಹೊಳೆಯುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡಿತೇನೊ ಎನ್ನುವ ನಂಬಿಕೆ ಹುಟ್ಟುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನು ರೋಮನ್ನರು ಆರಿಸಿಕೊಂಡರು ಎಂಬ ವಾದವೂ ಇದೆ.
‘ಆಸ್ಟ್ರೇಲಿಯಾ ಪತ್ರ’ದಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆಯ ಪೂರ್ವಾಪರಗಳ ಕುರಿತು ಬರೆದಿದ್ದಾರೆ ಡಾ. ವಿನತೆ ಶರ್ಮಾ
ಕ್ರಿಸ್ಮಸ್ ಹಬ್ಬ ಬಂದಿದೆ. ಬಹುಶಃ ಅನೇಕ ದೇಶಗಳಲ್ಲಿ ಮಕ್ಕಳು, ತಮ್ಮ ಜನ್ಮ ದಿನವಲ್ಲದ ಮತ್ತೊಂದು ದಿನಕ್ಕೆ ಕಾದು ಎದುರು ನೋಡುವ ದಿನ ಈ ಕ್ರಿಸ್ಮಸ್ ಹಬ್ಬ. ಮಕ್ಕಳಷ್ಟೇ ಅಲ್ಲ, ಅವರ ಹಿರಿಯರಿಗೂ ಕ್ರಿಸ್ಮಸ್ ಹಬ್ಬದ ಜೊತೆಗಿನ ನಂಟು ದೂರದ ನೆಂಟನಿಗಿಂತಲೂ ಒಂದು ಕೈ ಜಾಸ್ತಿ!
ಕ್ರಿಸ್ಮಸ್ ಹಬ್ಬಕ್ಕೆ ಧಾರ್ಮಿಕವಾಗಿ ಇರುವ ವೈವಿಧ್ಯಮಯ ಹಿನ್ನೆಲೆ ಎಷ್ಟು ಕುತೂಹಲವಾದದ್ದೋ, ಅದು ಸಾಂಸ್ಕೃತಿಕವಾಗಿ ಮತ್ತು ಸಮುದಾಯ ಹಬ್ಬವಾಗಿ ಭೂಗೋಳವನ್ನು ಆವರಿಸಿದ್ದು ಹೇಗೆಂಬುದು ಚಿಂತನಾರ್ಹವಾದುದು. ರಾಜಕೀಯದೊಡನೆ ಧರ್ಮವನ್ನು ಬೆರೆಸುವುದು ಕೂಡ ಒಂದು ಕಲೆ. ಕೆಲವೊಂದು ದೇಶಗಳಲ್ಲಿ ವಸಾಹತುಶಾಹಿಗಳ ಬಲವಂತದಿಂದ ಕ್ರಿಶ್ಚಿಯಾನಿಟಿ ತಳವೂರಿತು. ಉದಾಹರಣೆಗೆ, ನಮ್ಮ ಆಸ್ಟ್ರೇಲಿಯ. ಮತ್ತೊಂದೆಡೆ ನೋಡಿದರೆ ಇಲ್ಲಿ ಇಡೀ ದೇಶವನ್ನು ಸರ್ವವ್ಯಾಪಿಯಾಗಿ ಆವರಿಸದೆ, ಕೆಲಭಾಗಗಳಲ್ಲಿ ಮಾತ್ರ ಕ್ರೈಸ್ತ ಧರ್ಮ ನೆಲೆಯೂರಿದೆ. ಹೆಚ್ಚಿನ ಕಾರಣ ಮಿಷನರಿಗಳ ಪ್ರಭಾವ. ಉದಾಹರಣೆಗೆ ದಕ್ಷಿಣ ಅಮೇರಿಕ ಖಂಡ.
ಬೆಂಗಳೂರಿನಲ್ಲಿ ಕೆಲಕಾಲ ನಾವಿದ್ದ ಮನೆಯ ಪಕ್ಕದವರು ಕ್ರೈಸ್ತ ಧರ್ಮ ಪಾಲಕರು. ಅವರಿಂದ ಕ್ರಿಸ್ಮಸ್ ಹಬ್ಬದ ಪರಿಚಯವಾಗಿತ್ತು. ಅವರ ಹಬ್ಬವನ್ನು ಆಗಿನ ದಿನಗಳಲ್ಲಿ ನಮ್ಮ ಹತ್ತು ದಿನಗಳ ದಸರಾ ಹಬ್ಬಕ್ಕೆ ಹೋಲಿಸುತ್ತಿದ್ದೆವು. ಅಲಂಕಾರ, ತಿಂಡಿತಿನಿಸುಗಳು, ಬಣ್ಣಬಣ್ಣದ ದೀಪಗಳು.
ಮನೆ ಬದಲಿಸಿದ ನಂತರ ಕಾಲಕ್ರಮೇಣ ಕ್ರಿಸ್ಮಸ್ ಹಬ್ಬವು ತೆರೆಯ ಮರೆಗೆ ಸೇರಿತ್ತು. ಮುಂದೆ ಆಸ್ಟ್ರೇಲಿಯಾದ ಕಡು ಬೇಸಗೆಯಲ್ಲಿ ಬರುವ ಕ್ರಿಸ್ಮಸ್ ತನ್ನ ವೈವಿಧ್ಯತೆಯ ಬೇರೆ ಮುಖವನ್ನು ಪರಿಚಯಿಸಿತ್ತು. ಇದಲ್ಲದೆ ನಾವು ಕೆಲಕಾಲ ವಾಸವಿದ್ದ ಇಂಗ್ಲೆಂಡಿನಲ್ಲಿ ನಿಜವಾದ, ಹಿಮಬೀಳುವ, ಮೈಕೊರೆಯುವ ಚಳಿಯಲ್ಲಿ ‘ಬಿಳಿ ಕ್ರಿಸ್ಮಸ್ʼ ಹಬ್ಬದ ಠಾಕುಠೀಕು ನೋಡಿ ಮನಸೋತಿತ್ತು.
ಪಾಶ್ಚಾತ್ಯ ದೇಶಗಳಲ್ಲಿ ಧಾರ್ಮಿಕ ಪದ್ಧತಿಯಂತೆ ಕ್ರಿಸ್ಮಸ್ ಹಬ್ಬದ ಮಾಸವನ್ನು ಹಲವಾರು ಸಂಕೇತಗಳಿಂದ ಬರಮಾಡಿಕೊಳ್ಳುತ್ತಾರೆ. ‘ಅಡ್ವೆಂಟ್’ ಕ್ಯಾಲೆಂಡರ್ ಪ್ರಕಾರ ದಿನಗಳನ್ನೆಣಿಸಿ, ಕ್ರಿಸ್ತ ಹುಟ್ಟುವ ಕಾಲಕ್ಕೆಂದು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಹಬ್ಬದ ಮುನ್ನಿನ ಕಡೆಯ ಹನ್ನೆರಡು ದಿನಗಳ ಅವಧಿಯ ಪ್ರತಿ ದಿನವನ್ನೂ ಬೇರೆಬೇರೆ ರೀತಿಯಲ್ಲಿ ಆಚರಿಸುತ್ತ ಹನ್ನೆರಡನೆ ಮಧ್ಯರಾತ್ರಿ ಮಗು ಜೀಸಸ್ ಜನನ ಕಾಲವನ್ನು ಆಚರಿಸುವ ನಿಷ್ಠೆ, ನಮಗೆ ಶ್ರೀಕೃಷ್ಣಜಯಂತಿಯನ್ನು ನೆನಪಿಸುತ್ತದೆ. ಆ ಮಧ್ಯರಾತ್ರಿಯ ಪವಾಡವನ್ನು ಅನುಭಾವಕ್ಕೆ ತಂದುಕೊಡುವ ‘ಸೈಲೆಂಟ್ ನೈಟ್’ ಹಾಡನ್ನು ಅನೇಕ ಪ್ರಸಿದ್ಧ ಹಾಡುಗಾರರು ಹಾಡಿದ್ದಾರೆ. ಇಂಗ್ಲೆಂಡಿನ ‘ಬಿಳಿ ಕ್ರಿಸ್ಮಸ್ʼ ಆಚರಣೆಯ ದಿನಗಳಲ್ಲಿ ಅದನ್ನು ಕೇಳಿದಾಗ ಮತ್ತೆ ಮತ್ತೆ ಕೇಳಬೇಕಿನಿಸಿತ್ತು. ಆ ಹಾಡಿನಲ್ಲಿ ಬರುವ ‘ಆಲ್ ಈಸ್ ಕಾಮ್’ ಎನ್ನುವುದು ಸದಾ ಸತ್ಯವಾಗಲಿ ಎನ್ನುವ ಆಶಯ ಇವತ್ತಿಗೂ ಮನದಲ್ಲಿದೆ.
ಕ್ರೈಸ್ತ ಧರ್ಮದಲ್ಲೂ ಇರುವ ಪಂಗಡಗಳು ಕ್ರಿಸ್ಮಸ್ ಆಚರಣೆಯಲ್ಲಿ ತಮ್ಮದೇ ಆದ ವಿವಿಧ ಛಾಪನ್ನು ಹೊಂದಿವೆ. ಅದಕ್ಕೆ ಅನುಗುಣವಾಗಿ ಜೆರುಸಲೆಮ್ ನಲ್ಲಿ ಆಚರಿಸುವ ಕೆಲ ಪದ್ಧತಿಗಳು ಇಂಗ್ಲೆಂಡ್ ನಲ್ಲಿ ಬೇರೆ ರೂಪಗಳನ್ನು ತಾಳಬಹುದು. ರಷ್ಯಾ ದೇಶದ ಕೆಲ ಭಾಗಗಳಲ್ಲಿ ಈಗಲೂ ಜನವರಿ ೬ ಅಥವಾ ೭ ರಂದು ಕ್ರಿಸ್ಮಸ್ ಆಚರಿಸುತ್ತಾರೆ. ಆ ದಿನ ‘Three Kings ಬಂದರು’ ಎಂಬ ನಂಬಿಕೆಯನ್ನಾಧರಿಸಿ, ಅವರವರ ಭಕುತಿಗೆ ಅವರವರ ಆಚರಣೆ ಎನ್ನಬಹುದೇನೋ!
ಮಗು ಕ್ರಿಸ್ತನ ಜನ್ಮದಿನಾಂಕ ಖಚಿತವಾಗಿ ಯಾರಿಗೂ ತಿಳಿದಿಲ್ಲದಿದ್ದರೂ ಸುಮಾರು ನಾಲ್ಕನೇ ಶತಮಾನದಲ್ಲಿ ರೋಮನ್ನರು ಡಿಸೆಂಬರ್ ೨೫ ಕ್ರಿಸ್ಮಸ್ ಹಬ್ಬ ಎಂದು ಘೋಷಿಸಿದರು ಎಂದು ನಂಬಿಕೆ. ಈ ನಂಬಿಕೆಯ ಬುನಾದಿ ಎಂದರೆ ಡಿಸೆಂಬರ್ ೨೫ ರಂದು ಪಶ್ಚಿಮ ದೇಶಗಳ ಹವಾಮಾನದ ಪ್ರಕಾರ ಅತಿ ಕಡಿಮೆ ಬೆಳಕಿರುವ ದಿನ (ಆಗಿನ ರೋಮನ್ನರ ನಂಬಿಕೆಯಾಗಿದ್ದಿರಬಹುದು). ಒಟ್ಟಾರೆ ಅದು ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ‘ಆಲ್ ಈಸ್ ಬ್ರೈಟ್’ ಎನ್ನುವ ಪದಗಳಿಗೆ ಹೊಸ ಅರ್ಥ ಹೊಳೆಯುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡಿತೇನೊ ಎನ್ನುವ ನಂಬಿಕೆ ಹುಟ್ಟುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ (ಪ್ರಕೃತಿ ಶಕ್ತಿಗಳನ್ನು ಪೂಜಿಸುವ ಸಮುದಾಯಗಳು) ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನು ರೋಮನ್ನರು ಆರಿಸಿಕೊಂಡರು ಎಂಬ ವಾದವೂ ಇದೆ. ಆ ಮೂಲಕ ದೈವಿಕ ಶಕ್ತಿಯನ್ನು ಮಾನವರೂಪದಲ್ಲಿ ನೋಡುವ ಪದ್ಧತಿಯನ್ನು ಹುಟ್ಟುಹಾಕಿದರೆಂಬ ವಾದವೂ ಇದೆ. ಅದೇನೇ ಇರಲಿ, ಪೇಗನ್ನರು ಪ್ರಕೃತಿ ಆರಾಧಕರು. ಅವರು ಚಳಿಗಾಲದ ಅತಿ ಕಡಿಮೆ ಸೂರ್ಯನ ಬೆಳಕಿರುವ ಸಂಕ್ರಮಣದ ದಿನವನ್ನು Winter Solstice ಎಂದು ಆಚರಿಸುತ್ತಿದ್ದರು. Holy, Ivy ಮತ್ತು ವಿವಿಧ ಫರ್ನ್ ಮರಗಳನ್ನು ಬಳಸಿ ಅಲಂಕಾರ ಮಾಡುತ್ತಿದ್ದರು. ಈ ಆಚರಣೆಗಳ ಪದ್ಧತಿಗಳಿಗೆ ಉತ್ತರ ಯುರೋಪ್ ಕಡೆಯಿಂದಲೂ ಬಹಳಷ್ಟು ಪ್ರಭಾವವಿದೆ.
ಪಾಶ್ಚಾತ್ಯ ದೇಶಗಳಲ್ಲಿ ಧಾರ್ಮಿಕ ಪದ್ಧತಿಯಂತೆ ಕ್ರಿಸ್ಮಸ್ ಹಬ್ಬದ ಮಾಸವನ್ನು ಹಲವಾರು ಸಂಕೇತಗಳಿಂದ ಬರಮಾಡಿಕೊಳ್ಳುತ್ತಾರೆ. ‘ಅಡ್ವೆಂಟ್’ ಕ್ಯಾಲೆಂಡರ್ ಪ್ರಕಾರ ದಿನಗಳನ್ನೆಣಿಸಿ, ಕ್ರಿಸ್ತ ಹುಟ್ಟುವ ಕಾಲಕ್ಕೆಂದು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ.
ಅಂತಹ ಭಿನ್ನಾಭಿಪ್ರಾಯಗಳು ಏನೇ ಆಗಿದ್ದರೂ, ಕಾಲ ಸರಿದಂತೆ ಸಾಂಪ್ರದಾಯಿಕ ಕ್ರಿಸ್ಮಸ್ ಹಬ್ಬಕ್ಕೆ ಹಲವಾರು ಸೇರ್ಪಡೆಗಳಾಗಿವೆ. ಅವಲ್ಲಿ ಗುರುತರವಾದವು ಎಂದರೆ Advent ಕ್ಯಾಲೆಂಡರ್ ಪ್ರಕಾರ ದಿನ ಎಣಿಸಿ ನೇಮ ಪಾಲಿಸುವುದು, ಮನೆಮುಂದೆ ಅಡ್ವೆಂಟ್ ಹಾರವನ್ನು ಪ್ರದರ್ಶಿಸುವುದು, ಸಾಂಘಿಕ ಜೀವನದ ಎಲ್ಲೆಡೆ (ಮನೆಗಳಲ್ಲಿ, ಪಟ್ಟಣ/ನಗರಗಳ ಮಧ್ಯೆ ಇತ್ಯಾದಿ) ಕ್ರಿಸ್ಮಸ್ ಮರವನ್ನಿಟ್ಟು ವಿವಿಧ ರೀತಿಯಲ್ಲಿ ಅಲಂಕರಿಸಿ, ಬಣ್ಣಗಳನ್ನು ತುಂಬಿ, ಝಗಮಗ ಲೈಟುಗಳನ್ನು ಹಾಕುವುದು, ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದು, ಮತ್ತು ಕ್ರಿಸ್ತ ಹುಟ್ಟಿದ ಸನ್ನಿವೇಶವನ್ನು (ನೇಟಿವಿಟಿ ಶೋ) ಮರುಸೃಷ್ಟಿಸುವುದು, ಕುತೂಹಲವನ್ನುಂಟು ಮಾಡುತ್ತದೆ. ಈ ಕುತೂಹಲಕ್ಕೆ ಧರ್ಮಕ್ಕಿಂತಲೂ ಸಾಂಘಿಕಭಾವದ ಪ್ರಭಾವ ಇದೆ. ಉದಾಹರಣೆಗೆ ಕ್ರಿಸ್ಮಸ್ ಕ್ಯಾರೋಲ್ ಹಾಡುಗಾರಿಕೆ, ವಾದ್ಯಗಳ ಸಂಗೀತ, ಸಾಂಟಾ ಕ್ಲಾಸ್-ಧಾರಿಗಳು ಬಂದು ಶುಭಹಾರೈಕೆ ಹೇಳುವುದು, ಮತ್ತು ಮಕ್ಕಳಿಗೆ ವಿಶೇಷವಾಗಿ ಹರಸುವುದು ಕೂಡ ಬಲು ಚೆಂದ. ಬೀದಿಗಳಲ್ಲಿ ಸಾಂಟಾನ ಹಾಡುವ ಗಾಡಿ ಬಂತೆಂದರೆ ಮಕ್ಕಳು, ದೊಡ್ಡವರಿಗೂ ಏನೋ ಉಲ್ಲಾಸ. ನಾವುಗಳು ಈಗಲೂ ಪ್ರತಿವರ್ಷ ಕ್ರಿಸ್ಮಸ್ ದೀಪಾಲಂಕಾರಗಳನ್ನು ನೋಡಲು ಬಡಾವಣೆಗಳನ್ನು ಸುತ್ತುತ್ತೀವಿ. ಈ ಪದ್ಧತಿಗಳಲ್ಲೆವೂ ಬೇರೆಬೇರೆ ದೇಶಗಳಿಂದ, ಸಮಾಜ-ಸಂಸ್ಕೃತಿಯಿಂದ ಪರಸ್ಪರ ವಿನಿಮಯಗೊಂಡು ಕ್ರಿಸ್ಮಸ್ ಹಬ್ಬ ಎಂದರೆ ಈಗ ಕಲಸುಮೇಲೋಗರವಾಗಿದೆ. ಆದರೂ ಸಾಂಪ್ರದಾಯಿಕ ಕೆಲ ಪದ್ಧತಿಗಳು (ಉದಾಹರಣೆಗೆ ನೇಟಿವಿಟಿ ಶೋ) ಪ್ರತಿಯೊಂದು ದೇಶದಲ್ಲೂ ಹಾಗೆ ಉಳಿದುಕೊಂಡಿವೆ.
ಉತ್ತರ ಖಂಡಗಳಲ್ಲಿ ವಿಪರೀತವಿರುವ ಚಳಿ ಮತ್ತು ಕತ್ತಲನ್ನು ಕಳೆದು ಸೂರ್ಯ ತರುವ ಬೆಳಕು, ಶಾಖದ ದಿನಗಳಿಗಾಗಿ ಎಲ್ಲರೂ ಎದುರುನೋಡುತ್ತಾರೆ. ಆ ಕಾಯುವಿಕೆಯಲ್ಲಿ ಆಶಾದಾಯಕ ಅರ್ಥವಿದೆ. ಚಳಿಗಾಲದ ಹಿಮ ವಾತಾವರಣ “ವೈಟ್ ಕ್ರಿಸ್ಮಸ್” ಉಂಟುಮಾಡಿದೆ. ಮುಡಿಯಿಂದ ಅಡಿಯವರಗೆ ಪೂರ್ತಿ ಬಟ್ಟೆಗಳ ಪದರುಗಳನ್ನು ಧರಿಸಿಯೇ ಚಳಿದೇಶಗಳಲ್ಲಿ ಕ್ರಿಸ್ಮಸ್ ಸಂಭ್ರಮ. ಮನೆಯೊಳಗೆ ಸೆಂಟ್ರಲ್ ಹೀಟಿಂಗ್ ಇಟ್ಟುಕೊಂಡು, ಒವೆನ್ನಿನಲ್ಲಿ ಗಂಟೆಗಟ್ಟಲೆ ಬೇಯಿಸಿದ ಬಿಸಿಬಿಸಿ ಟರ್ಕಿ ಕೋಳಿಯ ಜೊತೆ ಬೇಯಿಸಿದ ಆಲೂಗಡ್ಡೆ, ತರಕಾರಿಗಳು, ಗ್ರೇವಿ, ಪುಡ್ಡಿಂಗ್ ಮುಂತಾದ ಭರ್ಜರಿ ಊಟ.
ನಮ್ಮ ಆಸ್ಟ್ರೇಲಿಯಾದಲ್ಲಿ ಕಡುಬಿಸಿಲಿನ ಬೇಸಗೆಯಾದ್ದರಿಂದ ಚಡ್ಡಿ, ಟಿ ಶರ್ಟ್, ತಂಪು ಕನ್ನಡಕ, ಒಂದಷ್ಟು ಸನ್ ಸ್ಕ್ರೀನ್ ಬಳಿದುಕೊಂಡು, ಹೊರಗಡೆ Barbeque ಸಮಾರಂಭಗಳು ನಡೆಯುತ್ತವೆ. ಆದರೆ ತಪ್ಪದೆ Pavlova ಎಂಬ ಸಿಹಿ ಇದ್ದೇಇರುತ್ತದೆ. ಕ್ರಿಸ್ಮಸ್ ಹಬ್ಬದ ಹಾಡುಗಳೂ ಬಲು ಮೋಜು. ‘ಸೈಲೆಂಟ್ ನೈಟ್’ ಹಾಡಿಗಿಂತಲೂ ಇಲ್ಲಿ ಪಕ್ಕಾ Ozi ಹಾಡು ‘ಸಿಕ್ಸ್ ವೈಟ್ ಬೂಮರ್ಸ್’ ನಲ್ಲಿ ಕಾಂಗರೂ, ಮರಿ ಕಾಂಗರೂ ಜೋಯಿ, ಬಿಸಿಲು ಎಲ್ಲವೂ ಇದ್ದು ಆಸ್ಟ್ರೇಲಿಯನ್ ಕ್ರಿಸ್ಮಸ್ ಭಾರಿ ಶೋಕಿಯಿಂದ ಕೂಡಿರುತ್ತದೆ.
ಬರುಬರುತ್ತಾ ಕ್ರಿಸ್ಮಸ್ ಹಬ್ಬದ ಸೀಸನ್ ಎಂದರೆ ಮತ್ತಷ್ಟು ಕೊಳ್ಳುವುದು, ಸಂಗ್ರಹಿಸುವುದು, ಆ ಮೂಲಕ ಗ್ರಾಹಕೀಕರಣದಲ್ಲಿ ಪಾಲ್ಗೊಳ್ಳುವುದು ಎಂತಾಗಿದೆ. ವರ್ಷವಿಡೀ ಮುದುಡಿ ಮಲಗಿದ್ದ ಕ್ರಿಸ್ಮಸ್ ಮಾರುಕಟ್ಟೆಗಳು, ಅಂತರ್ಜಾಲ ಅಂಗಡಿಗಳು ಮೈಕೈಕೊಡವಿ, ಅಲಂಕಾರ ಮಾಡಿಕೊಂಡು ನಗುಮುಖ ಧರಿಸಿ ಸಜ್ಜಾಗುತ್ತವೆ. ಜನರು ತಿಂಗಳಾನುಗಟ್ಟಲೆ ತಲೆಕೆಡಿಸಿಕೊಂಡು ಯೋಜನೆಗಳನ್ನ ಮಾಡಿ, ಯಾರಿಗೆ, ಯಾವ ಥರದ್ದು, ಎಲ್ಲಿ ಎಂದು ಜಾಗರೂಕತೆಯಿಂದ ಉಡುಗೊರೆಗಳನ್ನು ಕೊಳ್ಳುತ್ತಾರೆ. ಅವರ ಜೇಬು ಖಾಲಿ, ವ್ಯಾಪಾರಸ್ಥರ ತಿಜೋರಿ ಭರ್ತಿ! ಮತ್ತಷ್ಟು ಸಂಗ್ರಹಣೆ, ಆಡಂಬರ, ದಿವಾಳಿತನ – ಇದರ ಪರಿಣಾಮ ತಿಳಿಯುವುದು ಜನವರಿ ತಿಂಗಳಲ್ಲಿ. ಹಲವರು ಸಾಲಗಾರರಾಗಿರುತ್ತಾರೆ. ಕ್ರಿಸ್ಮಸ್ ಹಬ್ಬದ ನಂತರದ ದಿನಗಳಲ್ಲಿ ಹುಟ್ಟಿಕೊಳ್ಳುವ ಅಗಾಧ ಕಸರಾಶಿಯನ್ನು ಹೆಕ್ಕಲೆಂದೇ ಸ್ಥಳೀಯ ಕೌನ್ಸಿಲ್ ಗಳು ಹೆಚ್ಚುವರಿ ಕಸಸಂಗ್ರಹಣೆಯ ಪಾಳಿಯನ್ನು ಘೋಷಿಸುತ್ತಾರೆ.
ಕೋವಿಡ್-೧೯ ಇನ್ನೂ ಇರುವ ಈ ವರ್ಷದಲ್ಲಿ ಕ್ರಿಸ್ಮಸ್ ಹಬ್ಬದ ‘ಸ್ಪಿರಿಟ್’ ನೆನಪಿಸಿಕೊಂಡು ದಾನದತ್ತಿಗಳನ್ನು ಮಾಡುವ ಕುರಿತು ಮಾತು ಜಾಸ್ತಿ ಕೇಳಿಬರುತ್ತಿದೆ. ಕ್ರಿಸ್ಮಸ್ ಸಮಯದಲ್ಲಿ ‘ಇಲ್ಲದವರ’ ನೆನಪಿಸಿಕೊಂಡು, ದಾನದತ್ತಿ ನೀಡಿ; ಹಬ್ಬದ ಸಂದರ್ಭದಲ್ಲಿ ಒಳ್ಳೆಯ ಕಾರ್ಯ ನಿಮಿತ್ತ ನಿಮ್ಮ ಹಣ, ಸಮಯ ಮತ್ತು ದೊಡ್ಡ ಮನಸ್ಸನ್ನು ಮುಡಿಪಾಗಿಡಿ ಎಂದು ಸರಕಾರಗಳು, ದೊಡ್ಡ ಚಿಕ್ಕ ಪುಟ್ಟ ಸ್ವಯಂಸೇವಾ ಸಂಸ್ಥೆಗಳು, ಡೊನೇಶನ್ ಮತ್ತು ನಿಧಿಸಂಗ್ರಹಣೆಗಳ ಮೇಲೆ ಅವಲಂಬಿತರಾಗಿರುವ ಸೇವಾನಿರತ ಸಂಸ್ಥೆಗಳು ಹೇಳುತ್ತಿದ್ದಾರೆ. ಕಾರಣ, ಮಾತು, ಉದ್ದೇಶ ಏನೇ ಆಗಿರಲಿ, ಜಾಗತಿಕ ಹಬ್ಬವಾಗಿ ಪರಿವರ್ತನೆ ಹೊಂದಿರುವ ಕ್ರಿಸ್ಮಸ್ ಬಿಸಿ/ಚಳಿ ದೇಶಗಳಲ್ಲಿ ಸಾಂಘಿಕ ಒಗ್ಗಟ್ಟಿನ ಮತ್ತು ಜೀವನದಲ್ಲಿ ಆಶಾಭಾವವನ್ನುಂಟು ಮಾಡುವ ಹಬ್ಬವಾಗಿ ಗುರುತಿಸಲ್ಪಟ್ಟಿದೆ. ಸಹೃದಯ ಓದುಗರೆ, ಅದೇ ಆಶಾಭಾವನೆಯನ್ನೇ ಮುನ್ನೆಲೆಗೆ ತರುತ್ತಾ ಇದೋ ನನ್ನ ಹಾರೈಕೆ – ಎಲ್ಲರಿಗೂ Merry Christmas ಮತ್ತು ಹೊಸ ವರ್ಷ ೨೦೨೨ ಕ್ಕೆ ಶುಭಾಕಾಂಕ್ಷೆಗಳು!
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.