ರೂಪಾಂತರ

ಏನು ಬರೆಯಲಿ
ಆಷಾಢಕ್ಕೆ ಉಡುಗೊರೆಯಾಗಿ..!?
ಆ ಮೊದಲ ವರುಷದ ಹಸಿ ವಿರಹವು
ಮರೆತೇ ಹೋಗಿ ನಿರುಮ್ಮಳವಾಗಿದ್ದೇನೆ
ಮೂಗಿನ ಮೇಲೆ ಕೂತ ಚಿಟ್ಟೆಯೊಂದು
ಎದೆಗೆ ಬಣ್ಣ ಅಂಟಿಸಿ ಹೋದ ಕಾಲ ಅದು,
ಈಗ ಕಣ್ಣೊಳಗೆ ತೇವವಿಲ್ಲ
ನೀನು ಬರದೇ ಹೋದರೆ..?? ಎಂಬ ಭಯವಿಲ್ಲ
ಬರದಿದ್ದರೆ ಸಾಕು, ನಿದ್ದೆ ಮಾಡಬಹುದೆಂದು
ಯೋಚಿಸಿ ದುಷ್ಟಳೂ ಭ್ರಷ್ಟಳೂ ಆಗುತ್ತೇನೆ
ಈ ಸುದೀರ್ಘ ಹಗಲಿನಲ್ಲಿ ಕಡು ಕಿರಾತಕಿಯಾಗಿ
ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ
ಒಬ್ಬಳೇ…

*

ಭರ್ರೋ ಎಂದು ಯಮಗಾಳಿ ಬೀಸಿ
ಎಲೆಗಳು ಉದುರಿದರೆ ಅದೇನೋ
ಅವ್ಯಕ್ತ ಕೇಡಿ ಹಿತ!
ಸಂಜೆಗಳೀಗ ಶುಭ್ರ ನಿಸ್ಸಾರ ಶುಷ್ಕ… ಆಹಾ..
ಕಾಫಿ ಕಪ್ಪಿನ ಮೇಲೆ ಮೂಡಿರಬಹುದಾದ
ಲಿಪ್ ಗ್ಲಾಸಿನ ಗುರುತುಗಳು ಒಣಗಿ
ಚರ್ಮ ಕಿತ್ತು ಗಾಯವಾದ ಬಯಕೆಗಳಂತೆ ಮ್ಲಾನ…
ಪ್ರೇಮಕಾವ್ಯದ ಆಯಸ್ಸು ಕಡಿಮೆ
ಈಗ ಆಷಾಢಕ್ಕಾಗಿ ಪದ ಹೆಕ್ಕುವಾಗ ಖುಷಿ!
ಒಣಗುವುದೂ, ಅಂಡಲೆಯುವುದೂ
ಮಾಗಿದ ಸಂಕೇತವೆಂದು ಅವನು
ಕೂಡಿದಾಗಲೆಲ್ಲಾ ಹೇಳುತ್ತಲೇ ಇದ್ದ.
ಜಂಗಮವೇ ಶಾಶ್ವತ,
ಗಾಳಿಗೆ ತೂರುವ ಎಲೆಯ ಹಾಗೆ…
ನಿರ್ಭಯದಿಂದ ವಿನೀತ ಮಗುವಿನಂತೆ
ಈ ಎಳೆ ಮಾಗಿಯ ಗಾಳಿಗೆ ಮೈಯೊಡ್ಡುತ್ತೇನೆ..
ಜಾರುತ್ತಿರುವ ಸೌಂದರ್ಯಕ್ಕೆ ಈಗ ನಾನು ಹೆದರುವುದಿಲ್ಲ.

*
ತುಟಿಯ ಚರ್ಮದಿಂದ ಹಿಮ್ಮಡಿಯವರೆಗೂ ಒಡೆದ ರಾತ್ರಿಗಳಲ್ಲಿ
ಉಸಿರುಗಟ್ಟಿಸುವ ವಿದ್ರೋಹಿ ಹೃದಯ
ಬರೀ ಕಳೆಯುವುದನ್ನೇ ಪದೇಪದೇ ಲೆಕ್ಕ ಮಾಡಿ
‘ಕಳೆದದ್ದೇ ನಿನ್ನದು..!’ ಖಚಿತ ತೀರ್ಪಿತ್ತು,
ಇದೇ ಗಾಳಿಯಲ್ಲಿ, ಹೊಸ ಸಖಿಯೊಂದಿಗೆ
ತೂರಿ ಹೋದ ಅರೆ-ನೆರೆತ ಎಲೆಯಂತಹ ನಿನ್ನನ್ನು
ನನ್ನವನೆಂದೇ ಮಾರ್ಪಡಿಸುತ್ತದೆ.
ನಾನು ಒಪ್ಪದೇ
ನಿನ್ನಿಂದ ಬೇರ್ಪಡುವ ಧಾವಂತದಲ್ಲಿ, ಬಟ್ಟೆ ಕಳಚಿ
ಗಾಳಿಗೆ ಸಿಲುಕಿ, ಚರ್ಮ ಸಿಡಿಯಲೆಂದೇ
ಧಪಧಪನೆ ಓಡುತ್ತಾ…
ಮುಂಬರುವ ಶ್ರಾವಣವನ್ನು ಧಿಕ್ಕರಿಸುತ್ತಾ…
ತಬ್ಬಿ ಮುದ್ದಾಡುವ ಹೊಸಾ ಪ್ರೇಮಿಗಳಿಗೆ
“ಹುಚ್ಚಪ್ಪಗಳಿರಾ.. ಇದು ನಶ್ವರ!
ಮಾಗಿಯ ತೆಕ್ಕೆಗೆ ಬನ್ನಿ” ರೆಂದು ಕೂಗುತ್ತಾ…
ತರಗೆಲೆಗಳ ಜೊತೆ ಶಾಪ ವಿಮೋಚಿತಳಾಗಿ
ಮೊಲೆ ತೊಟ್ಟುಗಳ ಕತ್ತರಿಸಿ ಎಸೆದು
ಇಹ ಬಂಧನಗಳ‌ ತೊರೆದು
ಒಡೆದ ಚರ್ಮ ಸುಲಿದುಕೊಂಡು
ಚಿಟ್ಟೆಯಾಗಿ ಮಾರ್ಪಟ್ಟು ಹಾರುತ್ತೇನೆ…