”ಆಷಾಢ ಶುಕ್ರವಾರದಂದು ನಮ್ಮ ತಂದೆ ನಮಗಿಂತ ಬೇಗ ಎದ್ದು ಹಂಡೆಯಲ್ಲಿ ನೀರುತುಂಬಿ ಸೌದೆಒಲೆ ಉರಿಸಿರುತ್ತಿದ್ದರು. ನಮ್ಮನ್ನು ನಾಲ್ಕುಘಂಟೆಗೇ ಎಬ್ಬಿಸಿ ಬಿಸಿಬಿಸಿ ಫಿಲ್ಟರ್ ಕಾಫಿ ಕೊಟ್ಟ ಕೂಡಲೆ ನಮ್ಮ ಎಂಜಿನ್ ಶುರು ಆಗುತ್ತಿತ್ತು. ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಮನೆಯಿಂದ ನಾಲ್ಕುವರೆ ಘಂಟೆಗೆ ಸೈಕಲ್ ಏರಿದೆವೆಂದರೆ ಬೆಟ್ಟದ ಕಡೆಗೆ ನಮ್ಮ ಪಯಣ. ಇಬ್ಬರೂ ಹಣೆಯಲ್ಲಿ ಮೂರು ಪಟ್ಟೆಯ ವಿಭೂತಿಯನ್ನು ಧರಿಸಿ ಎರಡು ಹುಬ್ಬಿನ ಮಧ್ಯೆ ಕುಂಕುಮವನಿಟ್ಟುಕೊಂಡು ಪಂಚೆಯನ್ನುಟ್ಟು ಸೈಕಲ್ ಏರಿ ಹೊರಟರೆ ಆ ಸಮಯದಲ್ಲಿ ವಾಯುವಿಹಾರ ಮಾಡುತ್ತಿದ್ದ ಮೈಸೂರಿಗರು ನಮ್ಮನ್ನು ಯಾವುದೋ ದೇವಸ್ಥಾನದ ಪುಟ್ಟ ಅರ್ಚಕರೇನೋ ಎಂದು ಭಾವಿಸಿ ನಮಗೆ ನಮಸ್ಕರಿಸುತ್ತಿದ್ದರು. ನಾವು ಸುಮ್ಮನೇ ಮುಗುಳ್ನಕ್ಕು ಮುಂದೆ ಸಾಗುತ್ತಿದ್ದೆವು”
ಏರೋಸ್ಪೇಸ್ ಉದ್ಯೋಗಿ ವೆಂಕಟರಂಗ ಬರೆದ ಮೈಸೂರಿನ ಆಷಾಢ ಶುಕ್ರವಾರವೊಂದರ ದಿನಚರಿ.

 

ನಮ್ಮದು ಸಂಪ್ರದಾಯಸ್ಥ ಕುಟುಂಬ. ನಾವು ಇದ್ದದ್ದು ಮೈಸೂರಿನ ಗೀತಾ ರಸ್ತೆಯ ಸ್ವಂತ ಮನೆಯಲ್ಲಿ. ಎರಡು ಹೆಜ್ಜೆ ಮನೆಯಿಂದೀಚೆ ಬಂದರೆ ಸಿಗುತ್ತಿದ್ದಿದುದೇ ಕಾಂತರಾಜರಸ್ತೆ. ನನ್ನ ಕಸಿನ್ ಚಂದು ಮನೆ ಅದೇ ಕಾಂತರಾಜ ರಸ್ತೆಯಲ್ಲೇ ಇತ್ತು. ನಾನು ಮತ್ತು ಚಂದು ಆಷಾಢ ಮಾಸ ಬಂತೆಂದರೆ ಶುಕ್ರವಾರ ಬರುವುದಕ್ಕೆ ಕಾಯುತ್ತಾ ಕುಳಿತಿರುತ್ತಿದ್ದೆವು. ಏಕೆಂದರೆ ಪ್ರತಿ ಆಷಾಢ ಶುಕ್ರವಾರ ನಾವು ಚಾಮುಂಡಿ ಬೆಟ್ಟಕ್ಕೆ ಹೋಗುವ ಪರಿಪಾಠವಿತ್ತು. ಆಗ ನಾವು ಹೈಸ್ಕೂಲ್ ನಲ್ಲಿ ಓದುತ್ತಿದ್ದೆವು. ನಮ್ಮ ಅದೃಷ್ಟಕ್ಕೆ ಸ್ಕೂಲು ಶುರುವಾಗುತ್ತಿದ್ದದ್ದು ಸುಮಾರು ಹತ್ತೂ ಮೂವತ್ತರಿಂದ ಹನ್ನೊಂದು ಘಂಟೆಸಮಯಕ್ಕೆ. ಚಾಮುಂಡಿ ಬೆಟ್ಟಕ್ಕೆ ಹೋಗಲು ಆಷಾಢ ಶುಕ್ರವಾರ ಒಂದೇ ಕಾರಣವಲ್ಲ. ಚಾಮುಂಡಿಪುರದ ಚಂಚಲ, ಕೃಷ್ಣಮೂರ್ತಿಪುರದ ಕಲ್ಯಾಣಿ, ಅಗ್ರಹಾರದ ಅನನ್ಯ, ಚಾಮರಾಜಪುರದ ಚಂದನ ಹೀಗೆ ಹೆಣ್ಣುಮಕ್ಕಳ ದಂಡೇ ನಮಗೆ ಚಾಮುಂಡಿ ಬೆಟ್ಟಕ್ಕೆ ಹೋಗಲು ಮತ್ತೊಂದು ಆಕರ್ಷಣೆ ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಅಂದಹಾಗೆ ಈ ಹೆಸರುಗಳೆಲ್ಲ ಹೇಗೆ ಈಗಲೂ ನನ್ನ ನೆನಪಿನಲ್ಲಿವೆ ಅಂತ ಅಂದುಕೊಳ್ಳುತ್ತಿದ್ದೀರಾ! ಅವರೆಲ್ಲಾ ನಮ್ಮ ಕ್ರಶ್ ಗಳು ಕಣ್ರೀ… ಹಾಗಾಗಿ.

ಆಷಾಢ ಶುಕ್ರವಾರದಂದು ನಮ್ಮ ತಂದೆ ನಮಗಿಂತ ಬೇಗ ಎದ್ದು ಹಂಡೆಯಲ್ಲಿ ನೀರುತುಂಬಿ ಸೌದೆಒಲೆ ಉರಿಸಿರುತ್ತಿದ್ದರು. ಅಲ್ಲದೆ ನಮ್ಮನ್ನು ನಾಲ್ಕುಘಂಟೆಗೆ ಎಬ್ಬಿಸಿ ಬಿಸಿಬಿಸಿ ಫಿಲ್ಟರ್ ಕಾಫಿ ಕೊಟ್ಟ ಕೂಡಲೆ ನಮ್ಮ ಎಂಜಿನ್ ಶುರು ಆಗುತ್ತಿತ್ತು. ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಮನೆಯಿಂದ ನಾಲ್ಕುವರೆ ಘಂಟೆಗೆ ಸೈಕಲ್ ಏರಿದೆವೆಂದರೆ ಬೆಟ್ಟದ ಕಡೆಗೆ ನಮ್ಮ ಪಯಣ. ಇಬ್ಬರೂ ಹಣೆಯಲ್ಲಿ ವಿಭೂತಿಯನ್ನು ಧರಿಸಿ (ಮೂರುಪಟ್ಟೆ), ಎರಡು ಹುಬ್ಬಿನ ಮಧ್ಯೆ ಕುಂಕುಮವನಿಟ್ಟುಕೊಂಡು ಪಂಚೆಯನ್ನುಟ್ಟು ಸೈಕಲ್ ಏರಿ ಹೊರಟರೆ ಆ ಸಮಯದಲ್ಲಿ ವಾಯುವಿಹಾರ ಮಾಡುತ್ತಿದ್ದ ಮೈಸೂರಿಗರು ನಮ್ಮನ್ನು ಯಾವುದೋ ದೇವಸ್ಥಾನದ ಪುಟ್ಟ ಅರ್ಚಕರೇನೋ ಎಂದು ಭಾವಿಸಿ ನಮಗೆ ನಮಸ್ಕರಿಸುತ್ತಿದ್ದರು. ನಾವು ಸುಮ್ಮನೇ ಮುಗುಳ್ನಕ್ಕು ಮುಂದೆ ಸಾಗುತ್ತಿದ್ದೆವು.

ಬಲ್ಲಾಳ್ ಸರ್ಕಲ್ಲಿನಿಂದ ಚಾಮುಂಡಿ ಬೆಟ್ಟದ ಪಾದಕ್ಕೆ ಅಂದಾಜು ೩ ಕಿಲೋಮೀಟರ್ ದೂರವಿವೆ. ಬಲ್ಲಾಳ್ ಸರ್ಕಲ್ ದಾಟಿ ಗಣೇಶ ಟಾಕೀಸ್ ಆದನಂತರ ಬಲಕ್ಕೆ ತಿರುಗಿದರೆ ಅರವಿಂದ ಪರಿಮಳ ವರ್ಕ್ಸ್. ಅದನ್ನು ದಾಟಿ ತುಳಸೀದಾಸ್ ಆಸ್ಪತ್ರೆಯಿಂದ ಮುಂದೆ ಹೋದರೆ ಸಿಗುವುದೇ ಚಾಮುಂಡಿಪುರಂ ಸರ್ಕಲ್. ಇನ್ನು ಮುಂದಕ್ಕೆ ಬಂದರೆ ಎಲೆತೋಟ. ದಾಟಿದರೆ ಊಟಿರಸ್ತೆ. ಅದೇ ರಸ್ತೆಯಲ್ಲಿ ಮುಂದುವರೆದರೆ ಬಲಕ್ಕೆ ಸಿಗುವುದು ಶಿವನ ಆವಾಸಸ್ಥಾನ (ಅದೇರೀ ಸ್ಮಶಾನ). ಸದ್ಯಕ್ಕೆ ಅಲ್ಲಿಗೆ ಹೋಗೋದು ಬೇಡ. ಅದೇ ರಸ್ತೆಯಲ್ಲಿ ಕೊಂಚ ದೂರಹೋದರೆ ಸಾಕು ಚಾಮುಂಡಿ ಬೆಟ್ಟದ ತಪ್ಪಲು. ಅಲ್ಲೊಂದು ಸೈಕಲ್ ಸ್ಟ್ಯಾಂಡ್ ಇತ್ತು (ಈಗಲೂ ಇರಬಹುದೇನೋ). ಅಲ್ಲಿ ಸೈಕಲ್ ನಿಲ್ಲಿಸುವ ಹೊತ್ತಿಗೆ ೫ ಘಂಟೆಯಾಗಿರುತ್ತಿತ್ತು.

ಮೊದಲ ಮೆಟ್ಟಿಲಿಗೆ ನಮಸ್ಕರಿಸಿ, ಮೆಟ್ಟಿಲು ಹತ್ತಲು ಮನದಲ್ಲಿ ದೇವರ ಧ್ಯಾನಮಾಡಿ ಹೊರಟೆವೆಂದರೆ ಯಾಂತ್ರಿಕವಾಗಿ ಝಿಗ್ ಝ್ಯಾಗ್ ಆಗಿ ಹತ್ತುತ್ತಿದ್ದೆವು. ಯಾಕೆಂದರೆ ನಮಗೆ ಯಾರೋ ಹೇಳಿದ್ದರು ಈ ರೀತಿ ಮೆಟ್ಟಿಲುಗಳನ್ನು ಹತ್ತುವುದರಿಂದ ಸುಸ್ತು ಬೇಗ ಆವರಿಸುವುದಿಲ್ಲವೆಂದು. ನೂರುಮೆಟ್ಟಿಲು ಹತ್ತುವಷ್ಟರಲ್ಲಿ ಬೆವರು ಚೆನ್ನಾಗಿಯೇ ಸುರಿಯುತ್ತಿತ್ತು. ಆಷಾಢದ ಗಾಳಿ ರೊಯ್ಯನೆ ಬೀಸುತ್ತಿದ್ದರೆ ಬೆವರಿದ ಮುಖಕ್ಕೆ ಹಿತವೆನಿಸುತ್ತಿತ್ತು. ಅಲ್ಲಲ್ಲಿ ಹೆಣ್ಣುಮಕ್ಕಳು ಮೆಟ್ಟಿಲ ಮೇಲೆ ಕರ್ಪೂರವನ್ನು ಹತ್ತಿಸಿ ಚಾಮುಂಡಿ ತಾಯಿಗೆ ತಮ್ಮ ಮನದಾಳದ ಇಂಗಿತವನ್ನು ತಿಳಿಸಿ ನಮಸ್ಕರಿಸುತ್ತಿದ್ದರು. ಮೇಲುಸಿರು ಪಟ್ಟುಕೊಂಡು ಒಂದೈನೂರು ಮೆಟ್ಟಿಲುಗಳನ್ನು ಹತ್ತಿದರೆ ನಂಜುಂಡೇಶ್ವರನನ್ನು ಧ್ಯಾನ ಮಾಡುತ್ತಾ ನಂಜನಗೂಡಿನ ಕಡೆ ಮುಖಹಾಕಿ ಕುಳಿತುಕೊಂಡಿರುವ ಬೃಹದಾಕಾರದ ನಂದಿ. ಪಕ್ಕದಲ್ಲೇ ಇರುವ ಕಲ್ಲಿನ ಮಂಟಪದಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಾ ಬೆಟ್ಟದಿಂದ ಕಾಣುವ ಚಂದದ ಮೈಸೂರಿನ ವಿಹಂಗಮ ನೋಟ ಮನಸೂರೆಗೊಳ್ಳುತ್ತಿತ್ತು. ಜ್ಯೇಷ್ಠದ ಮಳೆಯಲ್ಲಿ ಮಿಂದೆದ್ದ ಮೈಸೂರು ಹಸಿರಿನಿಂದ ಕಂಗೊಳಿಸಿ ಆಷಾಢದ ಗಾಳಿಗೆ ಹಚ್ಚಹಸಿರ ಜೋಕಾಲಿಯಲ್ಲಿ ತೂಗುತ್ತಿರುವಂತೆ ಕಾಣಿಸುತ್ತಿತ್ತು.

ನಮ್ಮ ದಣಿವಾರಿಸಿಕೊಂಡು ಮತ್ತೆ ಐನೂರು ಮೆಟ್ಟಿಲು ಹತ್ತಿ ದೇವಸ್ಥಾನದ ಪ್ರಾಂಗಣಕ್ಕೆ ಬಂದು ಸರದಿಯಲ್ಲಿ ನಿಲ್ಲುವಹೊತ್ತಿಗೆ ಆರುವರೆ ಘಂಟೆಯಾಗಿರುತ್ತಿತ್ತು. ಚಾಮುಂಡಿ ಅಮ್ಮನವರ ದರ್ಶನ ಮಾಡಿ, ಪ್ರದಕ್ಷಿಣೆ ಹಾಕಿ ಅಲ್ಲಿಂದ ನೇರ ಚಾಮುಂಡಿ ದೇವಸ್ಥಾನದ ಹಿಂದಿರುವ ಮಹಾಬಲೇಶ್ವರನಿಗೆ ನಮಸ್ಕರಿಸಿ, ಅಲ್ಲೇ ಪಕ್ಕದಲ್ಲಿರುವ ನಾರಾಯಣಸ್ವಾಮಿಗೂ ಅಡ್ಡಬಿದ್ದು ಪಕ್ಕದ ಕಾಂಪೌಂಡಿಗೆ ಬಂದರೆ ಕಾಣುವುದೇ ನಮ್ಮ ಅಂದದ ಮೈಸೂರಿನ ಚಂದದ ನೋಟ. ನಾನು ಮತ್ತು ಚಂದು ಅಲ್ಲೇ ಸ್ವಲ್ಪಹೊತ್ತು ನಿಂತುಕೊಂಡು ದೊಡ್ಡ ಕಟ್ಟಡವಾದ ಅಯ್ಯಾ ಟವರ್ ನಿಂದ ಎದುರಿಗೆ ಕಾಣುವ ರಸ್ತೆಯನ್ನು ಹಿಡಿದು, ಎಡಕ್ಕೆ ತಿರುಗಿ ಸ್ವಲ್ಪಮುಂದೆ ಹೋದರೆ ಬಲ್ಲಾಳ್ ವೃತ್ತ. ಅದರಿಂದ ಮುಂದುವರೆದರೆ ಕಾಂತರಾಜ ಅರಸ್ ರಸ್ತೆಯಲ್ಲಿ ಸಿಗುವ ನಮ್ಮ ಮನೆಯನ್ನು ಬೆಟ್ಟದ ಮೇಲಿನಿಂದ ನೋಡಿದಂತೆ ಬಹಳ ಸಂತಸಪಡುತ್ತಿದ್ದೆವು. ಮೈಸೂರು ದರ್ಶನ ಮಾಡುವ ಹೊತ್ತಿಗೆ ಸರಿಸುಮಾರು ಎಂಟುಘಂಟೆ. ಬಹುಶಃ ನನ್ನ ಪ್ರಕಾರ ನಾವು, ಅಂದರೆ ಮೈಸೂರಿಗರು ಸ್ಯಾಟಲೈಟ್ ಕೋಆರ್ಡಿನೇಟ್ಸ್, ಜಿಪಿಎಸ್, ಗೂಗಲ್ ಮ್ಯಾಪ್ ಇಲ್ಲದೇ ಮನೆಯ ಗುರುತು ಹಿಡಿಯುತ್ತಿದ್ದೆವು. (ಕಾಣುವುದೋ ಬಿಡುವುದೋ ಅದು ಬೇರೆ ಪ್ರಶ್ನೆ!).

ಈಗ ಮತ್ತೆ ಮೆಟ್ಟಿಲನ್ನು ಇಳಿಯಬೇಕಲ್ಲ. ಅದಕ್ಕೆ ಶಕ್ತಿ ಬೇಡವೇ. ಮಟ್ಟಿಲು ಇಳಿಯುವ ಜಾಗದಲ್ಲೆ ಒಬ್ಬ ಎಳನೀರು ಮಾರುವವನಿದ್ದ. ಐದು ರುಪಾಯಿ ಕೊಟ್ಟರೆ ಎರಡು ಎಳನೀರು ಸಿಗುತ್ತಿತ್ತು. ಆ ಅಮೃತವನ್ನು ಸವಿಯುವ ಹೊತ್ತಿಗೆ ಅಲ್ಲೆ ಸುಳಿದಾಡುತ್ತಿದ್ದ ಬಿಳಿಸೀರೆ ಉಟ್ಟುಕೊಂಡಿದ್ದವರು ನಮ್ಮ ಬಳಿಬಂದು ನಿಮ್ಮಂತಹ ಮಕ್ಕಳು ನೋಡಲೇಬೇಕಾದದ್ದು ಎಂದು ಬಲವಂತವಾಗಿ ಹತ್ತಿರದಲ್ಲಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ಜೀವನಚಕ್ರದ ಫೋಟೋಗಳನ್ನು ತೋರಿಸುತ್ತಾ ಅದರ ವಿವರಣೆ ಕೊಡುತ್ತಿದ್ದರು. ಅಂದರೆ ಹುಟ್ಟಿನಿಂದ ಹಿಡಿದು ಸಾವಿನತನಕ ಇರುವ ಪಟಗಳು ಅವು. ಒಂದೊಂದು ಪಟದ ಬಳಿಯೂ ನಿಂತು ಇಷ್ಟುದ್ದುದ್ದ ಏನೇನೋ ಹೇಳುತ್ತಿದ್ದರು. ನಮಗೆ ಖಂಡಿತವಾಗಿಯೂ ಅವರ ಯಾವ ಮಾತುಗಳೂ ಅರ್ಥವಾಗುತ್ತಿರಲಿಲ್ಲ. ಅವರ ಮಾತುಗಳು ನಮ್ಮ ಮನಸ್ಸಿಗೆ ಬೀಳುವುದಿರಲಿ, ಕಿವಿಯೊಳಗೆ ಹೋಗಲೂ ಒದ್ದಾಡುತ್ತಿದ್ದವು. ಹಂಗೂ ಹಿಂಗೂ ಅರ್ಧಘಂಟೆ ತಲೆ ತಿನ್ನಿಸಿಕೊಂಡಮೇಲೆ ಆಚೆಬಂದು, ಬದುಕಿದೆಯಾ ಬಡಜೀವವೆ ಅಂತ ಅಲ್ಲಿಂದ ಪೇರಿ ಕಿತ್ತುತ್ತಿದ್ದೆವು. ನಾರಿ ಮುನಿದರೆ ಮಾರಿ ಅದು ಹಳೆಯ ಗಾದೆ. ಆದರೆ ನಮಗೆ ಆ ಆಷಾಢ ಶುಕ್ರವಾರದಂದು ಅನ್ನಿಸ್ಸಿದ್ದು ನಾರಿ ವೇದಾಂತ ಮಾತನಾಡಿದರೆ ಮಕ್ಕಳು ಪರಾರಿ. ಅಷ್ಟೊತ್ತಿಗಾಗಲೇ ಸ್ಕೂಲಿಗೆ ತಡವಾಗುತ್ತದೆನಿಸಿ ಮೆಟ್ಟಿಲುಗಳನ್ನು ಬೇಗಬೇಗ ಇಳಿದು ಸೈಕಲ್ ಸ್ಟ್ಯಾಂಡಿಗೆ ಬರುವ ಹೊತ್ತಿಗೆ ಕಾಲು ಗಡಗಡ ಎನ್ನುತ್ತಿರುತ್ತಿದ್ದವು. ನಿಲ್ಲಲ್ಲಿಕ್ಕೇ ಆಗುವುದಿಲ್ಲವೇನೋ ಎನ್ನಿಸುವಷ್ಟು ಸುಸ್ತು. ಫೌಂಡೇಷನ್ ವೀಕ್, ಬಿಲ್ಡಿಂಗ್ ಸ್ಟ್ರಾಂಗ್ ಅನ್ನುತ್ತಾರಲ್ಲ ಹಾಗೇ ಅನ್ನಿಸುತ್ತಿತ್ತು. ಹಾಗೂ ಹೀಗೂ ಸ್ವಲ್ಪ ಸುಧಾರಿಸಿಕೊಂಡು ಅಲ್ಲಿ ಮಾರುತ್ತಿದ್ದ ಸೌತೆಕಾಯಿಯನ್ನು ತಿಂದು ಸೈಕಲ್ ಏರಿದರೆ ನಮ್ಮ ಮುಂದಿನ ನಿಲ್ದಾಣ ಚಾಮುಂಡಿಪುರಂನ ಗಾಯತ್ರಿ ಟಿಫಿನ್ ರೂಂ (GTR) ಗೆ.

ಪಕ್ಕದಲ್ಲೇ ಇರುವ ಕಲ್ಲಿನ ಮಂಟಪದಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಾ ಬೆಟ್ಟದಿಂದ ಕಾಣುವ ಚಂದದ ಮೈಸೂರಿನ ವಿಹಂಗಮ ನೋಟ ಮನಸೂರೆಗೊಳ್ಳುತ್ತಿತ್ತು. ಜ್ಯೇಷ್ಠದ ಮಳೆಯಲ್ಲಿ ಮಿಂದೆದ್ದ ಮೈಸೂರು ಹಸಿರಿನಿಂದ ಕಂಗೊಳಿಸಿ ಆಷಾಢದ ಗಾಳಿಗೆ ಹಚ್ಚಹಸಿರ ಜೋಕಾಲಿಯಲ್ಲಿ ತೂಗುತ್ತಿರುವಂತೆ ಕಾಣಿಸುತ್ತಿತ್ತು.

ಹೊಟೆಲ್ಲಿನ ಮುಂದೆ ಸೈಕಲ್ ನಿಲ್ಲಿಸಬೇಕಾದರೇನೆ ಸಾಗು ಮಸಾಲೆ ವಾಸನೆ ಮೂಗಿಗೆ ಘಮ್ಮೆಂದು ಬಡಿಯುತ್ತಿತ್ತು. ಮೊದಲೇ ಬೇಗ ಎದ್ದು, ಮೆಟ್ಟಿಲು ಹತ್ತಿ ಇಳಿದಿರುತ್ತಿದ್ದ ನಮಗೆ ಆ ಸಾಗು ಮಸಾಲೆ ದೋಸೆಯ ವಾಸನೆಯಿಂದ ಹಸಿವು ಹೆಚ್ಚಿ ಹೊಟ್ಟೆ ಚುರುಕ್ ಎನ್ನುತ್ತಿತ್ತು. ಇನ್ನೂ ಬಾಗಿಲ ಒಳಗೆ ಹೋಗಲಿಕ್ಕಿಲ್ಲ ಗಲ್ಲ ಪೆಟ್ಟಿಗೆಯಲ್ಲಿ ಕುಳಿತವ ಟ್ರಿಣ್ (ಸೈಕಲ್ ಬೆಲ್ಲನ್ನು ಇಟ್ಟುಕೊಂಡು ಮಾಣಿಯನ್ನು ಕರೆಯಲು ಉಪಯೋಗಿಸುತ್ತಿದ್ದ) ಎಂದು ಸದ್ದು ಮಾಡುತ್ತ, “ಲೇ ಮಂಜುನಾಥ ಈ ಯಜಮಾನ್ರ ತಿಂಡಿ ಇನ್ನೂ ಕಟ್ಟಿಲ್ಲವೇನೋ? ಬೇಗ ಕಟ್ಟೊ” ಎನ್ನುತ್ತಾ ಕಿರುಚಿಕೊಳ್ಳುತ್ತಿದ್ದ. ನಾವು ಆ ಗಲ್ಲದ ಮುಂದೆ ನಿಂತು ಎರಡು ಸಾಗು ಮಸಾಲೆ, ಜಾಮೂನನ್ನು ಆರ್ಡರ್ ಮಾಡಿ ಕುಳಿತರೆ ಮಾಣಿ ಒಂದೈದು ನಿಮಿಷದಲ್ಲಿ ತನ್ನ ಬೆರಳುಗಳನ್ನದ್ದಿದ್ದ ಲೋಟವನ್ನು ಹಿಡಿದು ನಮ್ಮ ಮುಂದೆ ಕುಕ್ಕಿ ಮತ್ತೆ ಅಡುಗೆ ಮನೆ ಒಳಗೆ ಹೋಗಿ ಎರಡು ಜಾಮೂನನ್ನು ತಂದು ಇಡುತ್ತಿದ್ದ.

ಸಕ್ಕರೆ ಪಾಕದಲ್ಲಿ ಮುಳುಗಿದ್ದ ಬಿಸಿಬಿಸಿ ಜಾಮೂನನ್ನು ಚಪ್ಪರಿಸಿಕೊಂಡು ತಿನ್ನುತ್ತಾ ಆಗಾಗ್ಯೆ ಸಕ್ಕರೆ ಪಾಕವನ್ನು ಚಮಚದಲ್ಲಿ ಸೇವಿಸುತ್ತಿದ್ದರೆ ಪ್ರಪಂಚದಲ್ಲಿ ಸಿಗುವ ಸುಖ ಇದೇ ಏನೋ ಎಂದು ನಮಗೆ ಅನ್ನಿಸುತ್ತಿತ್ತು. ಜಾಮೂನು ತಿಂದುಮುಗಿಸುವ ಹೊತ್ತಿಗೆ ಮಾಣಿ ಹಬೆಯಾಡುತ್ತಿದ್ದ ಸಾಗು ಮಸಾಲೆಯನ್ನು ತಂದಿಡುತ್ತಿದ್ದ. ಆ ದೋಸೆ ನೋಡಲು ಕೆಂಪಗೆ ಗರಿಗರಿಯಾಗಿರುತ್ತಿತ್ತು. ದೋಸೆಯ ಮೇಲೆ ಒಂದು ಚಮಚ ಬೆಣ್ಣೆ. ಅದು ನಿಧಾನವಾಗಿ ಕರಗುತ್ತಲಿರುತ್ತಿತ್ತು. ದೋಸೆಯ ತುದಿಭಾಗವನ್ನು ಮುರಿದರೆ ಮುರಿದ ಬೆರಳುಗಳಿಗೆ ದೋಸೆ ಬೇಯಿಸಲು ಹಾಕಿದ್ದ ಎಣ್ಣೆಯೊ ಅಥವಾ ದೋಸೆ ಮೇಲೆ ಹಾಕಿ ಕರಗುತ್ತಿದ್ದ ಬೆಣ್ಣೆಯೋ ಕೈಗಂಟಿಗೊಳ್ಳುತ್ತಿತ್ತು. ಆ ಮುರಿದ ಭಾಗವನ್ನು ಮೆಲ್ಲಗೆ ಕಾಯಿಚಟ್ನಿಯಲ್ಲಿ ಒಂದು ಸಾರಿ, ಅದೇ ಭಾಗವನ್ನು ಪಕ್ಕದ ಬಟ್ಟಲಿನಲ್ಲಿದ್ದ ಬಿಸಿಬಿಸಿ ಸಣ್ಣ ಈರುಳ್ಳಿ ಸಾಂಬಾರಲ್ಲಿ ಅದ್ದಿ ಬಾಯಿಗಿಟ್ಟರೆ ಆಹಾ! ಸ್ವರ್ಗವೆಂದರೆ ಅದೇ ರೀ! ಕಣ್ಣುಮುಚ್ಚಿಕೊಂಡು ದೋಸೆಯ ಆಸ್ವಾದವನ್ನು ಅನುಭವಿಸುತ್ತಾ ಮಧ್ಯದಿಂದ ದೋಸೆಯನ್ನು ಮುರಿದ ಭಾಗದಲ್ಲಿ ಸಿಕ್ಕ ತರಕಾರಿ ಹಾಕಿದ ಸಾಗು, ಚಟ್ನಿ ಹಾಗು ಸಾಂಬಾರ್ ತಿನ್ನುತ್ತಿದ್ದರೆ….. ಓಹ್ ಆ ರುಚಿಯನ್ನು ನಿಮಗೆ ಪದಗಳಲ್ಲಿ ಯಾವರೀತಿಯಲ್ಲಿ ಹೇಳಲಿ? ಬಿಡಿ.. ಆ ಅನುಭವವನ್ನೆಲ್ಲ ವರ್ಣಿಸಲು ಖಂಡಿತಾ ಸಾಧ್ಯವಿಲ್ಲ. ನೀವೇನಾದರೂ ಹೇಳಿ ಅದು ಕಮಟು ಎಣ್ಣೆಯಲ್ಲಿ ಬೇಯಿಸಿದ ದೋಸೆಯಾದರೂ ಎಂಥಾ ರುಚಿ ಅಂತಿರೀ!

ಇಷ್ಟು ಎಣ್ಣೆ ಇರುವ ದೋಸೆ ತಿಂದಮೇಲೆ ಬಿಸಿಬಿಸಿಯಾಗಿ ಏನಾದರೂ ಕುಡಿಯಬೇಕಲ್ಲವೇ, ಜಿಡ್ಡು ಇಳಿಯಯೋಕೆ. ಹಾಗಾಗಿ ದೋಸೆಯ ನಂತರ ಬಿಸಿಬಿಸಿ ಫಿಲ್ಟರ್ ಕಾಫಿಯನ್ನು ಕುಡಿದು ದುಡ್ಡನ್ನು ಕೊಟ್ಟು, ಸೈಕಲ್ ಏರುವ ಹೊತ್ತಿಗೆ ಹತ್ತುಘಂಟೆ. ಸೀದಾ ಮನೆಗೆ ಬಂದು ಸ್ಕೂಲಿನ ಯೂನಿಫಾರಂ, ಬೂಟುಗಳನ್ನು ಹಾಕಿಕೊಂಡ ಹೊರಡುವ ಹೊತ್ತಿಗೆ ಹತ್ತೂಕಾಲು ಘಂಟೆಯಾಗಿರುತ್ತಿತ್ತು. ಹೀಗೆ ಆಷಾಢ ಶುಕ್ರವಾರದಂದು ದೇವರದರ್ಶನ ಹಾಗು ಹೊಟ್ಟೆಯ ಪೂಜೆ ಎರಡನ್ನೂ ಪಾಂಗತವಾಗಿ ಮುಗಿಸಿದ ಮೇಲೆ ನಮ್ಮ ದೈನಂದಿನ ಚಟುವಟಿಕೆ ಮುಂದುವರೆಯುತ್ತಿತ್ತು.