”ಆಸ್ಟ್ರೇಲಿಯಾದ ಮಕ್ಕಳಿಗೆ ಇಷ್ಟವಾದ, ಪ್ರಸಿದ್ಧವಾದ, ಅವರ ಹಿರಿಯರೂ ಮೆಚ್ಚುವ ಕೆಲ ಮಕ್ಕಳ ಕತೆಗಳೇ ಹಾಗಿವೆ. ಪುಸ್ತಕ ಅನ್ನುವುದಕ್ಕಿಂತಲೂ ಅವನ್ನು ಚಿಕ್ಕಚಿಕ್ಕ ಕತೆಗಳು ಅಂತ ಕರೆದರೇನೇ ಅವಕ್ಕೆ ಶೋಭೆ ಅನ್ನಿಸುತ್ತೆ. ಕತೆಗಳ ಜೊತೆ ಚಿತ್ರಗಳನ್ನೂ ಸೇರಿಸಿರುವುದರಿಂದ ಅವು ಚಿತ್ರಕಥೆಗಳು ಎಂದೂ ಪ್ರಸಿದ್ಧಿ. ಆಸ್ಟ್ರೇಲಿಯದಾದ್ಯಂತ ಮಕ್ಕಳ ಪಾಲನಾಕೇಂದ್ರಗಳಲ್ಲಿ, ಪ್ರೈಮರಿ ಶಾಲೆಗಳಲ್ಲಿ ಈ ಚಿತ್ರಕತೆಗಳನ್ನು ಬಳಸುತ್ತಾರೆ.ಓದಿ ಮುಗಿಸಿದಾಗ ನಮ್ಮ ಮುಖದ ಮೇಲೆ ಮುಗುಳ್ನಗೆಯೋ, ಇನ್ನಾವುದೋ ಸವಿಭಾವವೋ ಕಾಣುತ್ತದೆ.”
ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಇಲ್ಲಿ ರಾಜಕುಮಾರಿಯನ್ನು ರಕ್ಷಿಸಲು ಬರುವ ರಾಜಕುಮಾರನಿಲ್ಲ. ರಾಜ-ರಾಣಿಯರು, ಅರಮನೆ, ಸ್ಪರ್ಧೆ, ಸ್ವಪ್ನಲೋಕವಿಲ್ಲ. ವೀರಾವೇಶವಿಲ್ಲ. ಸಂಕೀರ್ಣತೆಯಿಲ್ಲ. ಕ್ಲಿಷ್ಟಭಾಷೆಯಿಲ್ಲ. ನೇರವಾದ ಸಂದೇಶವಿಲ್ಲ. ಇಲ್ಲಿ ಚೇಷ್ಟೆಯಿದೆ, ಕುತಂತ್ರವಿಲ್ಲ. ಈ ಕತೆಗಳಲ್ಲಿ ನವಿರಾದ ಮೃದು ಭಾವನೆಗಳಿವೆ. ಸೂಚ್ಯವಾದ ತತ್ವಜ್ಞಾನವಿದೆ. ಮುಖಕ್ಕೆ ಬಡಿಯುವಂತೆ ಇದು ಹೀಗೇ, ಅದು ಹಾಗೇ ಇರಬೇಕು, ಎಂಬ ಹಠವಿಲ್ಲ. ಹೀಗೂ ಇದ್ದರೆ ಚೆನ್ನ ಎಂಬ ಸೂಕ್ಷ್ಮತೆಯಿದೆ. ಇಲ್ಲಿನ ಕತೆಗಳಲ್ಲಿ ಇಳಿದು, ಕಳೆದು ಹೋಗುವಷ್ಟು ಆಳವಿದೆ. ಮೆಟ್ಟಿಲುಗಳನ್ನು ಹತ್ತಿಯೇ ಮೇಲಕ್ಕೇರಬೇಕೆಂಬ ನಿಯಮಗಳಿಲ್ಲ. ಸರಳ ಸುಂದರ ಭಾಷೆಯಲ್ಲಿ ನಮ್ಮ ಸಾಧಾರಣ ಅನುಭವವನ್ನು ಹಿಡಿದಿಡುವ ಪರಿ ಓದುಗರನ್ನು ಕಟ್ಟಿಹಾಕುತ್ತದೆ. ಕತೆ ಹೇಳುತ್ತಾ ನಡೆಯುವ ದಾರಿಯಲ್ಲಿ ಕತೆಗಾರರ ಜೊತೆ ನಮಗೆ ಗೊತ್ತಿಲ್ಲದೇ ನಾವೂ ಹೆಜ್ಜೆಹಾಕುತ್ತೀವಿ. ಓದಿ ಮುಗಿಸಿದಾಗ ನಮ್ಮ ಮುಖದ ಮೇಲೆ ಮುಗುಳ್ನಗೆಯೋ, ಇನ್ನಾವುದೋ ಸವಿಭಾವವೋ ಕಾಣುತ್ತದೆ. ಕತೆ ಕೇಳಿದ ಮಕ್ಕಳ ನಗು, ಕಿಲಕಿಲ ಕಲರವ, ಅವರ ಹೊಳೆಯುವ ಕಂಗಳ ಫಳಫಳ ಎಷ್ಟು ಚೆನ್ನ! ಈ ಕತೆಗಳ ಸಾರ್ಥಕತೆ ಆ ಕ್ಷಣದಲ್ಲಿದೆ.

ಆಸ್ಟ್ರೇಲಿಯಾದ ಮಕ್ಕಳಿಗೆ ಇಷ್ಟವಾದ, ಪ್ರಸಿದ್ಧವಾದ, ಅವರ ಹಿರಿಯರೂ ಮೆಚ್ಚುವ ಕೆಲ ಮಕ್ಕಳ ಕತೆಗಳೇ ಹಾಗಿವೆ. ಪುಸ್ತಕ ಅನ್ನುವುದಕ್ಕಿಂತಲೂ ಅವನ್ನು ಚಿಕ್ಕಚಿಕ್ಕ ಕತೆಗಳು ಅಂತ ಕರೆದರೇನೇ ಅವಕ್ಕೆ ಶೋಭೆ ಅನ್ನಿಸುತ್ತೆ. ಕತೆಗಳ ಜೊತೆ ಚಿತ್ರಗಳನ್ನೂ ಸೇರಿಸಿರುವುದರಿಂದ ಅವು ಚಿತ್ರಕಥೆಗಳು ಎಂದೂ ಪ್ರಸಿದ್ಧಿ. ಆಸ್ಟ್ರೇಲಿಯದಾದ್ಯಂತ ಮಕ್ಕಳ ಪಾಲನಾಕೇಂದ್ರಗಳಲ್ಲಿ, ಪ್ರೈಮರಿ ಶಾಲೆಗಳಲ್ಲಿ ಈ ಚಿತ್ರಕತೆಗಳನ್ನು ಬಳಸುತ್ತಾರೆ.

ಈ ಚಿತ್ರಕತೆಗಳ ಪ್ರಪಂಚ ನಮ್ಮ ಬದುಕಿನಲ್ಲಿ ಉದ್ಭವವಾಗಿದ್ದು ನಮ್ಮ ಮೊದಲ ಮಗುವಿನ ಹುಟ್ಟಿನಿಂದ. ಆನಂತರದಲ್ಲಿ ಚಿಕ್ಕಮಕ್ಕಳಿರುವ ಸ್ನೇಹಿತರು ನಮ್ಮ ಬಳಗದಲ್ಲಿ ಹೆಚ್ಚಿದರು. ಅವರ ಮೂಲಕ ಸಾರ್ವಜನಿಕ ಗ್ರಂಥಾಲಯಗಳಲ್ಲಿ, ನಗರ ಕೇಂದ್ರಗಳಲ್ಲಿರುವ ಮ್ಯೂಸಿಯಂಗಳಲ್ಲಿ ಮಕ್ಕಳ ಕತೆಗಳನ್ನು, ಹಿರಿದಾಕಾರದ ಚಿತ್ರಕತೆಗಳ ‘ಬಿಗ್ ಬುಕ್’ ಗಳನ್ನೂ ಸ್ವಯಂಸೇವಕರು ಪ್ರತಿದಿನವೂ ಬಂದು ಓದುತ್ತಾರೆ ಎಂದು ತಿಳಿಯಿತು. ಆಗ ಬಹುಪ್ರಯೋಜನಕ್ಕೆ ಬಂದದ್ದು ನನ್ನ ಬಳಿ ಇದ್ದ ನಮ್ಮ ಕನ್ನಡದ ಲೇಖಕಿ ಅನುಪಮಾ ನಿರಂಜನ ಬರೆದ ‘ದಿನಕ್ಕೊಂದು ಕಥೆ’, ಬೊಳುವಾರು ಮಹಮದ್ ಕುಂಞಿ ಸಂಗ್ರಹಿಸಿ, ಸಂಪಾದಿಸಿದ ‘ತಟ್ಟು ಚಪ್ಪಾಳೆ ಪುಟ್ಟಮಗು – ಮಕ್ಕಳು ಆಯ್ದ ನೂರಾರು ಪದ್ಯಗಳು’. ಜೊತೆಗೆ ಸದಾ ಓದುತ್ತಿದ್ದ ಚಂದಮಾಮ, ಬಾಲಮಿತ್ರ, ಅಮರ ಚಿತ್ರಕಥೆಗಳು, ಪಂಚತಂತ್ರ, ಹಿತೋಪದೇಶ, ಈಸೋಪನ ಕಥೆಗಳು ಮುಂತಾದವನ್ನು ನೆನಪಿಸಿಕೊಳ್ಳುವ, ಮತ್ತೆ ಅವನ್ನು ಹುಡುಕುವ, ಓದುವ, ಸಂಗ್ರಹಿಸುವ ಅನನ್ಯ ಅವಕಾಶ ಲಭಿಸಿತು. ಆಹಾ, ತಾಯ್ತನದ ಈ ಸೌಭಾಗ್ಯವೇ ಅನ್ನಿಸಿ ಸಂತೋಷಿಸಿದೆ.

(ಮೆಮ್ ಫಾಕ್ಸ್)

ಸಾರ್ವಜನಿಕ ಗ್ರಂಥಾಲಯಗಳಲ್ಲಿ, ನಗರ ಕೇಂದ್ರಗಳಲ್ಲಿರುವ ಮ್ಯೂಸಿಯಂಗಳಲ್ಲಿ ಮಕ್ಕಳ ಕತೆಗಳನ್ನು, ಹಿರಿದಾಕಾರದ ಚಿತ್ರಕತೆಗಳ ‘ಬಿಗ್ ಬುಕ್’ ಗಳನ್ನೂ ಸ್ವಯಂಸೇವಕರು ಪ್ರತಿದಿನವೂ ಬಂದು ಓದುತ್ತಾರೆ ಎಂದು ತಿಳಿಯಿತು. ಆಗ ಬಹುಪ್ರಯೋಜನಕ್ಕೆ ಬಂದದ್ದು ನನ್ನ ಬಳಿ ಇದ್ದ ನಮ್ಮ ಕನ್ನಡದ ಲೇಖಕಿ ಅನುಪಮಾ ನಿರಂಜನ ಬರೆದ ‘ದಿನಕ್ಕೊಂದು ಕಥೆ’, ಬೊಳುವಾರು ಮಹಮದ್ ಕುಂಞಿ ಸಂಗ್ರಹಿಸಿ, ಸಂಪಾದಿಸಿದ ‘ತಟ್ಟು ಚಪ್ಪಾಳೆ ಪುಟ್ಟಮಗು – ಮಕ್ಕಳು ಆಯ್ದ ನೂರಾರು ಪದ್ಯಗಳು’. ಜೊತೆಗೆ ಸದಾ ಓದುತ್ತಿದ್ದ ಚಂದಮಾಮ, ಬಾಲಮಿತ್ರ, ಅಮರ ಚಿತ್ರಕಥೆಗಳು, ಪಂಚತಂತ್ರ, ಹಿತೋಪದೇಶ, ಈಸೋಪನ ಕಥೆಗಳು ಮುಂತಾದವನ್ನು ನೆನಪಿಸಿಕೊಳ್ಳುವ, ಮತ್ತೆ ಅವನ್ನು ಹುಡುಕುವ, ಓದುವ, ಸಂಗ್ರಹಿಸುವ ಅನನ್ಯ ಅವಕಾಶ ಲಭಿಸಿತು.

ಆಯ್ದ ಕೆಲ ಆಸ್ಟ್ರೇಲಿಯನ್ ಮಕ್ಕಳಕತೆಗಳ ಪರಿಚಯ ಇಲ್ಲಿದೆ.

ಎಲ್ಲರ ಅಚ್ಚುಮೆಚ್ಚಿನ ಮಕ್ಕಳ ಕತೆಗಾರ್ತಿ ಮೆಮ್ ಫಾಕ್ಸ್(Mem Fox) ಬರೆದಿರುವ ‘ಪಾಸ್ಸಮ್ ಮ್ಯಾಜಿಕ್’  (Possum Magic) ಓದಿದರೆ ಕತೆಯ ಎಳೆಗಿಂತಲೂ ಅದರ ಸರಳತೆಗೇ ನಾವು ಕ್ಲೀನ್ ಬೌಲ್ಡ್ ಆಗುತ್ತೇವೆ! ಅಜ್ಜಿ ಪೋಸ್ ಮತ್ತು ಮೊಮ್ಮಗಳು ಹಶ್. ಅಜ್ಜಿ ಯಾವುದ್ಯಾವುದೋ ಕಾಡಿನ ಮದ್ದು ತಯಾರಿಸಿ ಮಾಡುವ ಮ್ಯಾಜಿಕ್ ನ ಕಥೆಯದು. ವೊಂಬಾಟ್ (Wombat) ಗಳನ್ನ ನೀಲಿಬಣ್ಣಕ್ಕೆ ತಿರುಗಿಸಿ, ಕುಕಬರ್ರಾ ಹಕ್ಕಿಗಳನ್ನ ಗುಲಾಬಿ ರಂಗಿಗೆ ತಿರುಗಿಸುತ್ತಾಳೆ ಈ ಜಾಣಜ್ಜಿ. ಒಮ್ಮೆ ಹಶ್ ಳನ್ನು ಮಾಯ ಮಾಡುವ ಮ್ಯಾಜಿಕ್ ಮಾಡುತ್ತಾಳೆ. ಹಶ್ ಗೋ ಬಲುಮಜ. ಕಾಡಿನ ಯಾವ ಪ್ರಾಣಿಗೂ ಅವಳು ಕಾಣುವುದಿಲ್ಲ. ಆಗವಳು ಕಾಂಗರೂ ಬೆನ್ನನೇರಿ ಬಾಲವನ್ನು ಜಾರುಬಂಡೆಮಾಡಿ ಜಾರುತ್ತಾಳೆ, ವಿಷಹಾವುಗಳಿಗೆ ಡೋಂಟ್ ಕೇರ್ ಅನ್ನುತ್ತಾಳೆ, ಕೋಲಾದ ಪಾದದಡಿ ನುಸುಳುತ್ತಾಳೆ. ಇಷ್ಟೆಲ್ಲಾ ಕುಣಿದು-ಸಂಭ್ರಮಿಸಿದ ನಂತರ ವಾಪಸ್ ತನ್ನನ್ನು ಯಥಾ ಸ್ಥಿತಿಗೆ ತಗೊಂಡು ಬಾ ಎಂದು ಅಜ್ಜಿಗೆ ಹೇಳಿದರೆ, ಅಷ್ಟರಲ್ಲಿ ಅಜ್ಜಿಗೆ ಆ ಮ್ಯಾಜಿಕ್ ಮದ್ದಿನ ರೆಸಿಪಿ ಮರೆತೇ ಹೋಗಿರತ್ತೆ. ಕಡೆಗೂ ಅಜ್ಜಿಗೆ ಹೊಳೆಯುತ್ತದೆ, ಆ ಮದ್ದಿನ ರೆಸಿಪಿ ಮನುಷ್ಯರ ಆಹಾರಕ್ಕೆ ಸಂಬಂಧಪಟ್ಟದ್ದು ಅಂತ. ಅದನ್ನು ಹುಡುಕುತ್ತಾ ಆಸ್ಟ್ರೇಲಿಯಾದ ಉದ್ದಗಲ ಹಶ್ ಮತ್ತು ಅಜ್ಜಿ ಸುತ್ತುತ್ತಾರೆ. ಅಡೆಲೈಡ್ನಲ್ಲಿ ಆಂಝಕ್ ಬಿಸ್ಕತ್ತು, ಮೆಲ್ಬರ್ನ್ ನಲ್ಲಿ ಮಿಂಟಿ ಮತ್ತು ಮೊರ್ನೆ, ಸಿಡ್ನಿಯಲ್ಲಿ ಸ್ಟೇಕ್ ಮತ್ತು ಸಾಲಡ್, ಬ್ರಿಸ್ಬನ್ ನಲ್ಲಿ ಕುಂಬಳಕಾಯಿಸ್ಕಾನ್! ಕಡೆಗೂ, ಡಾರ್ವಿನ್ ನಲ್ಲಿ ವೆಜೆಮೈಟ್ ಸ್ಯಾಂಡ್ವಿಚ್ ತಿನ್ನುತ್ತಿದ್ದಾಗ ಹಶ್ ನ ಬಾಲ ಕಾಣಿಸಿಕೊಳ್ಳುತ್ತದೆ. ಪರ್ತ್ ನಲ್ಲಿ ಪಾವ್ಲೊವ ತಿನ್ನುತ್ತಿದ್ದಾಗ ಕಾಲ್ಗಳು ಮತ್ತು ದೇಹ ಕಂಡುಬಿಡುತ್ತದೆ. ತಸ್ಮಾನಿಯಾಗೆ ಹೋಗಿ ಲಾಮಿಂಗ್ಟೊನ್ ತಿಂದಾಗ ಹಶ್ ನ ಇಡೀರೂಪ ಕಾಣಿಸೇಬಿಡುತ್ತದೆ. ಅಜ್ಜಿ-ಮೊಮ್ಮಗಳು ಹಾಡುತ್ತಾ ಕುಣಿದಾಡುತ್ತಾರೆ. ಅಲ್ಲಿಂದಾಚೆಗೆ ಹಶ್ ಮತ್ತು ಅಜ್ಜಿ ಪೋಸ್ ಹಶ್ ನ ಪ್ರತಿ ವರ್ಷದ ಹುಟ್ಟುಹಬ್ಬದ ದಿನ ವೆಜೆಮೈಟ್ ಸ್ಯಾಂಡ್ವಿಚ್, ಪಾವ್ಲೊವ, ಲಾಮಿಂಗ್ಟೊನ ತುಣುಕುಗಳನ್ನ ತಿಂದೇತಿನ್ನುತ್ತಾರೆ.

ಈ ಕತೆಯ ಮೂಲಕ ನಮಗೆ ಆಸ್ಟ್ರೇಲಿಯನ್ ನಗರಗಳು, Out Back, ಪ್ರಾಣಿ-ಪಕ್ಷಿಸಂಪತ್ತು, ಜನಪ್ರಿಯ ತಿಂಡಿ-ತಿನಿಸು, ಸಂಸ್ಕೃತಿಯ ಪರಿಚಯವಾಗುತ್ತದೆ. ಪದಸಂಪತ್ತನ್ನ ಬೆಳೆಸಲು ಶಾಲೆಗಳಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಅದನ್ನೇ ಆಟವಾಗಿಸುತ್ತಾರೆ. ಹಾಡುಕಟ್ಟಿ ನೃತ್ಯ ಮಾಡಿ ನಲಿಯುತ್ತಾರೆ. ಕತೆಗೆ ಚಿತ್ರರೂಪವನ್ನ ಕೊಟ್ಟಿರುವ ಜೂಲಿ ವೈವಾಸ್ಕಲೆ ಆಕರ್ಷಣೀಯ, ಅಚ್ಚುಕಟ್ಟಾಗಿ ಹೊಂದುತ್ತದೆ. ಮಕ್ಕಳು ತರಗತಿಗಳಲ್ಲಿ ಕತೆಗೆ ಚಿತ್ರರೂಪ ಕೊಡುವ ಅಭ್ಯಾಸವನ್ನೂ ಮಾಡುತ್ತಾರೆ. ಪುಟಗಟ್ಟಲೆ ಬರೆದಿದ್ದ ಮೂಲಕತೆಯನ್ನ ಮೆಮ್ ಫಾಕ್ಸ್ ತಿಂಗಳಾನುಗಟ್ಟಲೆ ಯೋಚಿಸಿ ಕೆಲ ಸಾಲುಗಳಿಗೆ ಮಾತ್ರ ಒಪ್ಪುವಂತೆ ಒಗ್ಗಿಸಿದ್ದಾರೆ. ಆದ್ದರಿಂದಲೇ ಅದು ಇವತ್ತಿಗೂ ಮ್ಯಾಜಿಕ್ ಕತೆ ಎಂದು ಪ್ರಸಿದ್ಧಿಯಂತೆ.

ಪಮೇಲಾ ಅಲೆನ್ (Pamela Allen) ನ್ಯೂಝಿಲ್ಯಾಂಡ್ ದೇಶದವರಾದರೂ ಹಲವಾರು ದಶಕಗಳು ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದವರು. ಪ್ರಶಸ್ತಿ ವಿಜೇತ ಮಕ್ಕಳ ಕತೆಗಳನ್ನು ಬರೆದವರು. ಭಾಷಾ ಕೌಶಲ, ಪಾತ್ರಗಳ ನಾಟಕೀಯತೆಯಿಂದ ಅವರ ಕತೆಗಳನ್ನು ನಾಟಕ ರೂಪವಾಗಿ, ಪ್ರದರ್ಶನವಾಗಿ ಬಹಳ ಜನರು ಅಳವಡಿಸಿಕೊಂಡಿದ್ದಾರೆ. ನಾವೂ ಕೂಡ ಮಕ್ಕಳೊಂದಿಗೆ ಜೋರಾಗಿ ಹಾಡುತ್ತಾ ಕತೆಗಳಿಗೆ ಜೀವ ಕೊಡಬಹುದು!

ಒಮ್ಮೆ ಹಶ್ ಳನ್ನು ಮಾಯ ಮಾಡುವ ಮ್ಯಾಜಿಕ್ ಮಾಡುತ್ತಾಳೆ. ಹಶ್ ಗೋ ಬಲುಮಜ. ಕಾಡಿನ ಯಾವ ಪ್ರಾಣಿಗೂ ಅವಳು ಕಾಣುವುದಿಲ್ಲ. ಆಗವಳು ಕಾಂಗರೂ ಬೆನ್ನನೇರಿ ಬಾಲವನ್ನು ಜಾರುಬಂಡೆಮಾಡಿ ಜಾರುತ್ತಾಳೆ, ವಿಷಹಾವುಗಳಿಗೆ ಡೋಂಟ್ ಕೇರ್ ಅನ್ನುತ್ತಾಳೆ, ಕೋಲಾದ ಪಾದದಡಿ ನುಸುಳುತ್ತಾಳೆ. ಇಷ್ಟೆಲ್ಲಾ ಕುಣಿದು-ಸಂಭ್ರಮಿಸಿದ ನಂತರ ವಾಪಸ್ ತನ್ನನ್ನು ಯಥಾ ಸ್ಥಿತಿಗೆ ತಗೊಂಡು ಬಾ ಎಂದು ಅಜ್ಜಿಗೆ ಹೇಳಿದರೆ, ಅಷ್ಟರಲ್ಲಿ ಅಜ್ಜಿಗೆ ಆ ಮ್ಯಾಜಿಕ್ ಮದ್ದಿನ ರೆಸಿಪಿ ಮರೆತೇ ಹೋಗಿರತ್ತೆ. ಕಡೆಗೂ ಅಜ್ಜಿಗೆ ಹೊಳೆಯುತ್ತದೆ, ಆ ಮದ್ದಿನ ರೆಸಿಪಿ ಮನುಷ್ಯರ ಆಹಾರಕ್ಕೆ ಸಂಬಂಧಪಟ್ಟದ್ದು ಅಂತ. ಅದನ್ನು ಹುಡುಕುತ್ತಾ ಆಸ್ಟ್ರೇಲಿಯಾದ ಉದ್ದಗಲ ಹಶ್ ಮತ್ತು ಅಜ್ಜಿ ಸುತ್ತುತ್ತಾರೆ. ಅಡೆಲೈಡ್ನಲ್ಲಿ ಆಂಝಕ್ ಬಿಸ್ಕತ್ತು, ಮೆಲ್ಬರ್ನ್ ನಲ್ಲಿ ಮಿಂಟಿ ಮತ್ತು ಮೊರ್ನೆ, ಸಿಡ್ನಿಯಲ್ಲಿ ಸ್ಟೇಕ್ ಮತ್ತು ಸಾಲಡ್, ಬ್ರಿಸ್ಬನ್ ನಲ್ಲಿ ಕುಂಬಳಕಾಯಿಸ್ಕಾನ್! ಕಡೆಗೂ, ಡಾರ್ವಿನ್ ನಲ್ಲಿ ವೆಜೆಮೈಟ್ ಸ್ಯಾಂಡ್ವಿಚ್ ತಿನ್ನುತ್ತಿದ್ದಾಗ ಹಶ್ ನ ಬಾಲ ಕಾಣಿಸಿಕೊಳ್ಳುತ್ತದೆ. ಪರ್ತ್ ನಲ್ಲಿ ಪಾವ್ಲೊವ ತಿನ್ನುತ್ತಿದ್ದಾಗ ಕಾಲ್ಗಳು ಮತ್ತು ದೇಹ ಕಂಡುಬಿಡುತ್ತದೆ.

ಅವರ  ಬರ್ಟೀ ಅಂಡ್ ಬೇರ್ (Bertie and the Bear)  ಹಿಹಿಹಿ ಎಂದು ನಗಿಸುವ ಸರಳ ಕತೆ. ಕರಡಿಯೊಂದು ಬರ್ಟಿಯನ್ನ ಅಟ್ಟಿಸಿಕೊಂಡು ಹೋಗುತ್ತಿದೆ ಅಂದುಕೊಂಡ ರಾಜ-ರಾಣಿ, ಸೇನಾಪತಿ, ಕ್ಯಾಪ್ಟನ್, ಜನರಲ್, ಕಡೆಗೆ ಚಿಕ್ಕನಾಯಿ ಕೂಡ ಒಬ್ಬರೊನ್ನೊಬ್ಬರು ಹಿಂಬಾಲಿಸುತ್ತಾ ತರಾವರಿ ಶಬ್ದಮಾಡುತ್ತಾ ಓಡುತ್ತಾರೆ. ಅಷ್ಟೆಲ್ಲಾ ಕೋಲಾಹಲ ಕೇಳಿದ ಕರಡಿ ನಿಂತು ಹಿಂದೆ ನೋಡುತ್ತದೆ. ಅಯ್ಯೋ ಇಷ್ಟೆಲ್ಲಾ ನನಗಾಗೇ?! ಎಂದು ನಡುಬಗ್ಗಿಸಿ ಥಾಂಕ್ಯೂ ಹೇಳಿ ಆನಂದದಿಂದ ಲಾಗಹಾಕಿ ಕುಣಿಯುತ್ತದೆ. ಕರಡಿ ಕುಣಿತ ನೋಡಿ ಬರ್ಟಿ ಕುಣಿಯುತ್ತಾನೆ. ಅವನ ಹಿಂದೆ ಇದ್ದವರೆಲ್ಲಾ ಕುಣಿಯುತ್ತಾ ಸಾಗುವ ಚಿತ್ರವನ್ನು ನೋಡಿ ಮಕ್ಕಳೂ, ನಾವು ಅದನ್ನು ಅನುಕರಿಸುವುದಂತೂ ನಿಶ್ಚಿತ! ಕತೆಗೆ ಎಳ್ಳಷ್ಟೂ ಸಂಬಂಧವಿರದಿದ್ದರೂ ಆ ಕುಣಿಯುತ್ತಾ ಸಾಗುವ ಚಿತ್ರ ನೋಡಿದಾಗ ನನಗೆ ನೆನಪಾಗುವುದು ನಮ್ಮ ಕುವೆಂಪುರವರ ಕೃತಿ ಬೊಮ್ಮನಹಳ್ಳಿಯ ಕಿಂದರಿಜೋಗಿ ನೃತ್ಯರೂಪಕ. ಇಲ್ಲಿ ಹೆಸರಿಸಲೇಬೇಕಾದ ಇನ್ನೊಂದು ಚಿತ್ರಕತೆ ಹೇರಿ ಮ್ಯಾಕ್ಲೇರಿ (Hairy Maclary) ಮತ್ತು ಅವನ ಸಂಗಡಿಗರ ಕತೆಗಳ ಗುಚ್ಛ (Lynley Dodd). ನ್ಯೂಝಿಲ್ಯಾಂಡ್ ದೇಶದಲ್ಲಿ ಹುಟ್ಟಿದ ಕತೆಯಾದರೂ ಅದು ಬೆಳೆದದ್ದು ಆಸ್ಟ್ರೇಲಿಯಾದಲ್ಲಿ! ಇಂದಿಗೂ ಇದರ ಡಿವಿಡಿಗಳನ್ನು ದೊಡ್ಡವರು ಇಷ್ಟಪಡುತ್ತಾರೆ.

(ಬನೀಪ್ ಆಫ್ ಬರ್ಕಲೀಸ್ ಕ್ರೀಕ್)

ಐ ಕುಡ್ ಬಿ ಅ ಸೂಪರ್ ಹೀರೋ (I Could Be a Superhero: Chris Hornsey) ಮತ್ತು ದ ವೋಂಕಿ ಡಾಂಕಿ (The Wonky Donkey: Craig Smith) – ಈ ಪುಸ್ತಕಗಳು ಮಕ್ಕಳಿಗೆ ಇಷ್ಟವಾಗುವುದು ವಿಭಿನ್ನ ಕಾರಣಕ್ಕಾಗಿ. “ದೊಡ್ಡವಳಾದ/ನಾದ ಮೇಲೆ ಏನಾಗಬೇಕೆಂದು ನಿನ್ನ ಆಸೆ?” ಬಹುಶಃ ಎಲ್ಲಾ ಮಕ್ಕಳೂ ಎದುರಿಸುವ ಪ್ರಶ್ನೆ ಇದು. ಮುದ್ದು ಮರ್ಫಿಗೆ ಕೂಡ ಅಂಥದ್ದೇ ಗೊಂದಲದ ಪ್ರಶ್ನೆ ಬಂದುಬಿಡುತ್ತದೆ. “ನಾನು ದೊಡ್ಡವನಾದ ಮೇಲೆ ಟೆನ್ನಿಸ್ ಆಟಗಾರನೋ, ಟೀಚರೋ, ಪಾಪ್ಪ್ ಸ್ಟಾರೋ, ಆಸ್ಟ್ರೋನಾಟ್, ಇಲ್ಲಾ ಮ್ಯಾಜಿಶಿಯನ್, ಇಲ್ಲಾ ಸೂಪರ್ ಹೀರೋ ಆಗಬಹುದು”ಅಂತೆಲ್ಲಾ ಮರ್ಫಿ ಆಲೋಚಿಸುತ್ತಾನೆ. ಅವನ ಸ್ನೇಹಿತೆ ಹೌದುಹೌದು ಎಂದೆಲ್ಲಾ ತಲೆ ಅಲ್ಲಾಡಿಸುತ್ತಾಳೆ. ಆದರೂ ಮರ್ಫಿಗೆ ಮತ್ತದೇ ಪ್ರಶ್ನೆ! ಕಡೆಗೆ ಆ ಸ್ನೇಹಿತೆ ಹೇಳುತ್ತಾಳೆ– “ನೀನೊಂದು ಅದ್ಭುತ ನಾಯಿಯಾಗಿಯೂ ಇರಬಹುದು ಮರ್ಫಿ, ಈ ಜಗತ್ತಿನಲ್ಲಿ ನಿನ್ನ ಹಾಗೆ ಮತ್ತಿನ್ಯಾರೂ ಇರಲು ಸಾಧ್ಯವಿಲ್ಲ” (You could be my marvellous dog, Murphy. No one else in the world can be you). ಮತ್ತದೇ ಕಡೆಯ ಪುಟದ ಚಿತ್ರ ಅತ್ಯಂತ ಮನೋಜ್ಞವಾಗಿದೆ. ಪುಟ್ಟನಾಯಿಮರಿ ಮರ್ಫಿಯ ಒಡತಿ ಒಬ್ಬ ಚಿಕ್ಕ ಹುಡುಗಿ. ಅವಳು ತೋಳುಗಳಲ್ಲಿ ಅಪ್ಪಿಹಿಡಿದ ಮರ್ಫಿಯ ಮುಖದಲ್ಲಿ ಅದೆಷ್ಟು ಶಾಂತಭಾವ!

ಪುಟ್ಟಮಕ್ಕಳಿಗೆ ಬೇಕಿರುವುದು ಈ ನೆಮ್ಮದಿಯ ಭಾವವಲ್ಲವೇ? ನಮ್ಮನ್ನು, ನಮ್ಮ ಆಶ್ವಾಸನೆಯ ಮಾತನ್ನು ಅವರು ಅದೆಷ್ಟು ನೈಜಭಾವದಿಂದ, ಮುಗ್ಧತೆಯಿಂದ ನಂಬುತ್ತಾರೆ! ಕತೆ ಓದುತ್ತಾ ಇರುವಾಗ ಮಕ್ಕಳು ನಾನೂ ಕೂಡ ಇದಾಗುತ್ತೇನೆ, ಅದಾಗುತ್ತೇನೆ ಎಂಬ ಊಹಾಲೋಕಕ್ಕೆ ಜಾರಿದರೂ, “ನೀನು ನೀನಾಗೇ ಇರು, ಅದೇ ಬಲುಚೆನ್ನ” ಎಂದು ಒಬ್ಬರು ಹೇಳಿದರೆ ಅದೆಂಥ ದೊಡ್ಡ ಆತ್ಮವಿಶ್ವಾಸದ ಮಾತು! ಮಕ್ಕಳ ನಲಿವಿನ ಅರಳುಮುಖ ಕೋಟಿದೀಪಗಳ ಪ್ರತಿಫಲನ!

ಅದೇ ಕಾರಣಕ್ಕೆ The Wonky Donkey ಕತೆ ಕೂಡ ಮಕ್ಕಳ ಮನಸ್ಸಿನಲ್ಲಿ ಗೆದ್ದುಬಿಡುತ್ತದೆ. ಕತ್ತೆಗೆ ಮೂರೇ ಕಾಲಿರುವುದು, ಒಕ್ಕಣ್ಣ, ಅವನು ಬಲು ಉದ್ದ, ಥೂ ವಾಸನೆಯವನು, ಕಂಟ್ರಿ ಮ್ಯೂಸಿಕ್ ಕೇಳ್ತಾನೆ, ಸಿಡುಕ, ಚೇಷ್ಟೆಯವ… ಆದರೂ ಅವನು ಚಂದನೆ ಕಾಣ್ತಾನೆ! ಹೇಗೆ ಇರ್ಲಿ, ಒಬ್ಬರಲ್ಲಿ ಸಮಾಜ ಹೆಸರಿಸುವಂಥಾ ನ್ಯೂನತೆಗಳಿದ್ದರೂ ಅವನ್ನು ಪಕ್ಕಕ್ಕಿಟ್ಟು ಅರೆ ಇವನು ಬಲುಚೆನ್ನ ಕಾಣುವವ ಅನ್ನುವುದನ್ನು ನಾವು ಕೂಡ ಕಾಣಬೇಕಿದೆ ಎನ್ನುವುದು ನಿತ್ಯಸತ್ಯ!

ಈ ಪುಸ್ತಕಗಳು ಮಕ್ಕಳಿಗೆ ಇಷ್ಟವಾಗುವುದು ವಿಭಿನ್ನ ಕಾರಣಕ್ಕಾಗಿ. “ದೊಡ್ಡವಳಾದ/ನಾದ ಮೇಲೆ ಏನಾಗಬೇಕೆಂದು ನಿನ್ನ ಆಸೆ?” ಬಹುಶಃ ಎಲ್ಲಾ ಮಕ್ಕಳೂ ಎದುರಿಸುವ ಪ್ರಶ್ನೆ ಇದು. ಮುದ್ದು ಮರ್ಫಿಗೆ ಕೂಡ ಅಂಥದ್ದೇ ಗೊಂದಲದ ಪ್ರಶ್ನೆ ಬಂದುಬಿಡುತ್ತದೆ. “ನಾನು ದೊಡ್ಡವನಾದ ಮೇಲೆ ಟೆನ್ನಿಸ್ ಆಟಗಾರನೋ, ಟೀಚರೋ, ಪಾಪ್ಪ್ ಸ್ಟಾರೋ, ಆಸ್ಟ್ರೋನಾಟ್, ಇಲ್ಲಾ ಮ್ಯಾಜಿಶಿಯನ್, ಇಲ್ಲಾ ಸೂಪರ್ ಹೀರೋ ಆಗಬಹುದು”ಅಂತೆಲ್ಲಾ ಮರ್ಫಿ ಆಲೋಚಿಸುತ್ತಾನೆ. ಅವನ ಸ್ನೇಹಿತೆ ಹೌದುಹೌದು ಎಂದೆಲ್ಲಾ ತಲೆ ಅಲ್ಲಾಡಿಸುತ್ತಾಳೆ. ಆದರೂ ಮರ್ಫಿಗೆ ಮತ್ತದೇ ಪ್ರಶ್ನೆ! ಕಡೆಗೆ ಆ ಸ್ನೇಹಿತೆ ಹೇಳುತ್ತಾಳೆ– “ನೀನೊಂದು ಅದ್ಭುತ ನಾಯಿಯಾಗಿಯೂ ಇರಬಹುದು ಮರ್ಫಿ, ಈ ಜಗತ್ತಿನಲ್ಲಿ ನಿನ್ನ ಹಾಗೆ ಮತ್ತಿನ್ಯಾರೂ ಇರಲು ಸಾಧ್ಯವಿಲ್ಲ” . ಮತ್ತದೇ ಕಡೆಯ ಪುಟದ ಚಿತ್ರ ಅತ್ಯಂತ ಮನೋಜ್ಞವಾಗಿದೆ. ಪುಟ್ಟನಾಯಿಮರಿ ಮರ್ಫಿಯ ಒಡತಿ ಒಬ್ಬ ಚಿಕ್ಕ ಹುಡುಗಿ. ಅವಳು ತೋಳುಗಳಲ್ಲಿ ಅಪ್ಪಿಹಿಡಿದ ಮರ್ಫಿಯ ಮುಖದಲ್ಲಿ ಅದೆಷ್ಟು ಶಾಂತಭಾವ!

(ಪಮೇಲಾ ಅಲೆನ್)

ಇದರಂತೆಯೇ ದ ಬನೀಪ್ ಆಫ್ ಬರ್ಕಲೀಸ್ ಕ್ರೀಕ್ (The Bunyip of Berkeley’s Creek) ಕತೆಯೂ ಬಹುಪ್ರಸಿದ್ಧಿ. ಆಸ್ಟ್ರೇಲಿಯನ್ ಅಬ್ ಒರಿಜಿನಲ್ ಕತೆಗಳಲ್ಲಿ ಬರುವ bunyip ಎಂಬ ಕಲ್ಪನಾ ಪ್ರಾಣಿಯ ಬಗ್ಗೆ. ಇದರ ಕರ್ತೃ ಜೆನ್ನಿ ವಾಜ್ನೆರ್ (Jenny Wagner); ಚಿತ್ರಗಳನ್ನು ಬರೆದವರು ರಾನ್ ಬ್ರೂಕ್ಸ್ (Ron Brooks). ಆಸ್ಟ್ರೇಲಿಯನ್ Out Back ಜಗತ್ತಿನಲ್ಲಿ ಸ್ಥಳಕ್ಕೆ ಸಂಬಂಧ ಪಟ್ಟ ಅಸ್ಮಿತೆ ಎಂಬುದು ಬಹುದೊಡ್ಡ ವಿಷಯ. ಆ ಜಗತ್ತಿನಲ್ಲಿ ಯಾವುದೇ ಗುರುತು ಇಲ್ಲದ ಬನೀಪ್(Bunyip) ನಾನ್ಯಾರು ಎಂಬ ಪ್ರಶ್ನೆಯನ್ನು ಕೇಳುತ್ತಾ ಹೋಗುತ್ತದೆ. ನೀನೊಬ್ಬ ಬನೀಪ್ ಎಂಬ ಉತ್ತರ ಸಿಕ್ಕಿದರೂ, ಬನೀಪ್ ನಂಥ ದಡ್ಡ, ಕೊಳಕ, ಯಾರಿಗೂ ಬೇಕಿಲ್ಲದ, ಕುರೂಪ ಪ್ರಾಣಿ ಈ ಪ್ರಪಂಚದಲ್ಲಿ ಇಲ್ಲ, ಇದ್ದರೂ ಅವು ಇಲ್ಲವೆಂಬಂತೆ ಇರಬೇಕು ಎನ್ನುವ ಮಾತನ್ನು ನಮ್ಮ ಬನೀಪ್ ಕೇಳಬೇಕಾಗುತ್ತದೆ. ಸಹಾಯಕ್ಕೆ ಯಾರೂ ಇಲ್ಲ, ಸ್ನೇಹಬಯಸಿ ಯಾರೂ ಬರುವುದಿಲ್ಲ. ಅವನ ಪರಿಚಯ ಯಾರಿಗೂ ಬೇಕಿಲ್ಲ. ಅಂಥ ಲೋಕದಲ್ಲಿ ಕಳೆದುಹೋಗುವ ಬದಲು ಮೊದಲು ತನಗೆ ಗೊತ್ತಿದ್ದ, ಮಣ್ಣಿನಡಿ ಇರುವ ತನ್ನ ಪರಿಚಯದ ಜಾಗಕ್ಕೆ ಬನೀಪ್ ಮರಳುತ್ತಾನೆ. ಮರೆಯಾಗುತ್ತಾನೆ. ಒಂದುದಿನ ಮತ್ತೊಂದು ಬನೀಪ್ ಮಣ್ಣನ್ನು ಸವರುತ್ತಾ ನಾನ್ಯಾರು ಎಂದು ಕೇಳಿದಾಗ ಇವನಿಗೆ ಉತ್ತರ ಗೊತ್ತಿರುತ್ತದೆ. ” ನೀನು ಬನೀಪ್, ನನ್ನಂತೆಯೇ ಕಾಣುತ್ತೀಯ” ಎಂದು ಆ ಹೆಣ್ಣು ಬನೀಪ್ ಗೆ ಹೇಳುತ್ತಾನೆ. ಈ ಕತೆಯನ್ನು ಹೇಳುವ, ಓದುವ, ಬಳಸುವ, ಜಾಣ್ಮೆ ದೊಡ್ಡವರಿಗೆ ಬಿಟ್ಟದ್ದು. ಯಕಶ್ಚಿತ್ ಜೀವವೊಂದು ಬಲಾಡ್ಯರುಗಳ ಪ್ರಪಂಚದಲ್ಲಿ ಹೇಗೆ ಅಧೈರ್ಯದಿಂದ ಕಳೆದುಹೋಗಬಹುದು, ಆದರೂ ಆ ಜೀವಕ್ಕೆ ಒಂದು ನೆಲೆಯಿದೆ, ಅಸ್ಮಿತೆಯಿದೆ. ಈ ಚಿತ್ರಕತೆ ಅದೆಷ್ಟು ಸುಪ್ರಸಿದ್ಧವಾದದ್ದು ಎಂದರೆ ಮೆಲ್ಬೋರ್ನ್ ರಾಜ್ಯ ಗ್ರಂಥಾಲಯದ ಮುಂದೆ ಬನೀಪ್ ನ ಪ್ರತಿಮೆಯಿದೆ.

ಇಂತಹ ಬಹುಸಾಮಾನ್ಯ ಕತೆಗಳನ್ನು ಆತಂಕ-ನಿವಾರಣೆಯ ಥೆರಪಿ ತರಹ ಮತ್ತು’ಟೀಮ್ ವರ್ಕ್’ ಸಾಧನವಾಗಿ ದೊಡ್ಡದೊಡ್ಡ ಮ್ಯಾನೇಜ್ಮೆಂಟ್ ಕಂಪೆನಿಗಳಲ್ಲಿ ಬಳಸಲಾರಂಭಿಸಿದ್ದಾರೆ!

ಈ ಕತೆಗಳನ್ನು ಮಕ್ಕಳಿಗೆ ಜೋರಾಗಿ ಓದಿಹೇಳಬೇಕಾದ ಸಂದರ್ಭಗಳಲ್ಲಿ ನಾವು ಜಾಗರೂಕರಾಗಿರಬೇಕು. ಓದುವ ದನಿಯಲ್ಲಿ ನಮ್ಮ ಅಭಿಪ್ರಾಯಗಳನ್ನು, ನಂಬಿಕೆಗಳನ್ನು ಸೂಚಿಸಿದರೆ ಮಕ್ಕಳು ಅವನ್ನು ಪಟಕ್ಕೆಂದು ಹೆಕ್ಕಿಕೊಳ್ಳುತ್ತಾರೆ. ಕತೆಕೇಳುವ ಮಕ್ಕಳೇ ಅವನ್ನುಚ ರ್ಚಿಸಿದಾಗ ಈ ಕತೆಗಳಿಗೆ ಸಲ್ಲಬೇಕಾದ ಗೌರವ, ಬೆಲೆಸಿಗುತ್ತದೆ. “ತಟ್ಟುಚಪ್ಪಾಳೆ ಪುಟ್ಟಮಗು” ಸಂಕಲನದಲ್ಲಿ ಶಿವರಾಮ ಕಾರಂತರು ಸೂಚಿಸಿರುವಂತೆ ಮಕ್ಕಳಿಗೆ ಸಂತೋಷಕೊಡುವ ವಿಚಿತ್ರ, ಅಸಂಬದ್ಧ, ಅದ್ಭುತ, ಚಕಿತತೆ, ಕುತೂಹಲ, ಪ್ರಶ್ನೆಹುಟ್ಟಿಸುವ ಕಥಾವಸ್ತು ಅಜರಾಮರ.