ಚೆಕಾವ್ ಕಟ್ಟಿಕೊಡುವ ಭಾವನಾ ಪ್ರಪಂಚ ಪ್ರತಿಮೆಗಳಿಂದ ತುಂಬಿ ಹೋಗಿದೆ. ಸೀಗಲ್ ಇಲ್ಲಿ ರೂಪಾಂತರದಲ್ಲಿ ಬೆಳ್ಳಕ್ಕಿ ಆಗಿದೆ. ಇದು ಪ್ರತಿಮೆ. ಇದರ ಸುತ್ತ ಚೆಕಾವ್ ಕಟ್ಟುವ ಆವರಣವನ್ನ ನಿಲುಕಿಸಿಕೊಳ್ಳುವುದು ಕಷ್ಟದ ಕೆಲಸ. ನಾಟಕ ಮುಂಚೆಯೇ ಓದಿಕೊಂಡು ಬಂದು ಕೂತು ನೋಡಿದರೆ ಚೂರುಪಾರು ದಕ್ಕುತ್ತದೆ. ಬರಿದೇ ಹೋಗಿ ಕೂತರೆ ಆ ಪ್ರತಿಮೆಗಳು ದಕ್ಕುವುದು ಕಷ್ಟ. ಪ್ರೇಮ, ಹತಾಶೆ, ಮನುಷ್ಯರಿಗಿರುವ ಕೀರ್ತಿಯ ಕುರಿತ ಅಭೀಪ್ಸೆ, ಜೊತೆಗೆ ಚಂಚಲತೆ ಇವು ಹಲವು ಬಗೆಯಲ್ಲಿ ನಾಟಕದಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತವೆ.
ಎನ್.ಸಿ.ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

 

‘ಆ್ಯಂಟನ್ ಚೆಕಾವ್ ನ ‘ ಸೀಗಲ್’ ನಾಟಕ ಮಾಡ್ತಿದ್ದೇವೆ ಬನ್ನಿ ಸರ್..’ ಎಂದು ಕರೆದರು ಆಕೆ. ಹೆಸರು ಅಪೂರ್ವ. ನಮ್ಮ ತಂಡಕ್ಕೆ ಆಗಾಗ ಭೇಟಿಕೊಟ್ಟು ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಆಕೆ ಕಾಲೇಜಿನಲ್ಲಿ ನಾಟಕವನ್ನ ಅಕಡಮಿಕ್ ಶಿಸ್ತಾಗಿ ಕಲಿಯುತ್ತಿದ್ದಾರೆ.

ನಾವು ‘ಇಂದು ತಾಲೀಮಿಗೆ ಯಾರು ಬರುತ್ತಿಲ್ಲ.. ಗ್ರೂಪ್ನಲ್ಲಿ ಏನು ಕಾರಣ ಕೊಟ್ಟಿದ್ದಾರೆ..?’ ಎಂದು ನಿತ್ಯ ಯೋಚಿಸುತ್ತಿದ್ದರೆ ಅಪೂರ್ವ ನಮ್ಮ ತಂಡದ ತಾಲೀಮುಗಳಿಗೆ ಬಂದಾಗಲೆಲ್ಲ ಚೂರುಪಾರು ಮೆಥೆಡ್ ಆ್ಯಕ್ಟಿಂಗ್ ಬಗ್ಗೆ ಮಾತಾಡಿ ನಾನು ಹುಬ್ಬೇರಿಸುವಂತೆ ಮಾಡುತ್ತಿದ್ದರು. ಅದೇ ವೇಳೆ ನಾನು ನಮ್ಮ ನಟರನ್ನ ತಾಲೀಮಿಗೆ ಕರೆಸಲು ಯಾವುದಾದರೂ ಮೆಥೆಡ್ ಇದೆಯೇ ಎಂದು ಯೋಚಿಸಿ ನಗುತ್ತಿದ್ದೆ. ಈ ನಗು ಯಾರಿಗೂ ಕಾಣುತ್ತಿರಲಿಲ್ಲ ಅಷ್ಟೇ.

ಇಂಥ ಅಪೂರ್ವ ‘ಬೆಂಗಳೂರು ಪ್ಲೇಯರ್ಸ್’ ರಂಗತಂಡದಲ್ಲಿ ಚೆಕಾವ್ ನ ‘ಸೀಗಲ್’ ನಾಟಕದಲ್ಲಿ ತಾನು ನಟಿಸುತ್ತಿದ್ದೇನೆ ಎಂದಾಗ ನನಗೆ ಆಶ್ಚರ್ಯವಾಗಲಿಲ್ಲ. ಕಾಲೇಜಿನಲ್ಲಿ ನಾಟಕದ ತರಬೇತಿ, ಅಭಿನಯದ ಸಾಧ್ಯತೆಗಳು ಹೇಗಿರುತ್ತವೆ ಎಂದು ಸಮಯ ಸಿಕ್ಕಾಗಲೆಲ್ಲ ಹೇಳುತ್ತಿದ್ದರು. ಜೊತೆಗೆ ಬ್ರೆಕ್ಟು, ಬೆಕೆಟು ಅಂತೆಲ್ಲ ನಾನು ಮತ್ತು ಆಕೆ ಒಂದಿಷ್ಟು ಮಾತಾಡುತ್ತಿದ್ದೆವು. ಈ ಪರಿ ಮಾತಾಡುವ ಅವರು ಚೆಕಾವ್ ನಾಟಕದಲ್ಲಿ ಅಭಿನಯಿಸುತ್ತಿರುವುದು ನನಗೆ ಖುಷಿ ತರಿಸಿತ್ತು.

ಚೆಕಾವ್ ಎಂಬುದು ಪದೇಪದೇ ನನ್ನ ಕಿವಿಗೆ ಅಪ್ಪಳಿಸಿದ ಹೆಸರು. ಅನೇಕರು ಈ ರೈಟರ್ ನ ಹೆಸರು ನನ್ನ ಕಿವಿ ಹೊಗುವಂತೆ ಮಾಡಿದ್ದಾರೆ. ಒಂದು ಕಥೆ ಬರೆದು ತೋರಿಸಲು ಹೋದಾಗ ಅದನ್ನ ಓದಿದ ಹಿರಿಯರೊಬ್ಬರು ನನಗೆ ‘ನೀನು ಚೆಕಾವ್ ನ ಓದಬೇಕು’ ಎಂದು ತಾಕೀತು ಮಾಡಿದ್ದರು. ಒಬ್ಬರಲ್ಲ… ಬಹಳಷ್ಟು ಮಂದಿ ಚೆಕಾವ್ ಹೆಸರು ಪ್ರಸ್ತಾಪಿಸಿದ್ದರು. ನಾಟಕ ಬರೆಯಲು ಪ್ರಯತ್ನಿಸಿದಾಗಲೂ ಅಷ್ಟೇ ‘ನೀನು ಚೆಕಾವ್ ನಾಟಕಗಳನ್ನ ನೋಡಬೇಕು. ಅವನ ರಿಯಲಿಸಂ ಪರಿಕಲ್ಪನೆಯನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು’ ಅಂದಿದ್ದರು.

ಹಾಗಾಗಿ ಚೆಕಾವ್ ಮೊದಲಿನಿಂದಲೂ ನನ್ನಲ್ಲಿ ಒಂದು ಬಗೆಯ ಬೆರಗಿನಿಂತೆ ಅರಳಿಕೊಳ್ಳಲು ಆರಂಭಿಸಿದ ರೈಟರ್. ಇವನ ‘ದಿ ಬೆಟ್’ ಕಥೆಯನ್ನ ನಾನು ಮೊದಲ ಬಾರಿಗೆ ರೂಪಾಂತರದಲ್ಲಿ ಓದಿದಾಗ ಬೆರಗಾಗಿದ್ದೆ. ನಂತರ ಇದೇ ಕಥೆಯ ರಂಗರೂಪಗಳನ್ನ ನೋಡಿದ್ದೆ. ನಂತರ ಚೆಕಾವ್ ನ ಬೇರೆಬೇರೆ ಕಥೆಗಳನ್ನ ಓದುತ್ತ ಅವನ ಲೋಕದಲ್ಲಿ ಕಳೆದುಹೋಗುತ್ತಿದ್ದೆ.

ಅಪೂರ್ವ ‘ಸೀಗಲ್’ ಬಗ್ಗೆ ಹೇಳಿದಾಗ ನನ್ನ ನೆನಪುಗಳು ಹಿಂದಕ್ಕೆ ಸರಿದವು. ಹಿಂದೆ ಮೈಸೂರು ರಂಗಾಯಣ ಚೆಕಾವ್ ನ ‘ಸೀಗಲ್’ ನಾಟಕವನ್ನ ಬೆಂಗಳೂರಿನಲ್ಲಿ ಪ್ರದರ್ಶಿಸಿತ್ತು. ಮೂರುವರೆ ತಾಸಿನ ನಾಟಕ. ನಾನು ಯಾವತ್ತೂ ಪ್ರೀತಿಸುವ ನಟ ಪ್ರಶಾಂತ್ ಹಿರೇಮಠ್ ಸರ್ ಅವರು ಅಂದಿನ ಪ್ರದರ್ಶನದಲ್ಲಿ ನಟಿಸಿದ್ದರು. ನಾಟಕ ನೋಡಿ ಮನೆಗೆ ಮರಳಿದಾಗ ತಡರಾತ್ರಿ. ನನಗೆ ಪೂಜೆ ಪುನಸ್ಕಾರಗಳು ಸಾಂಗವಾಗಿ ಆದವು. ನಾಟಕ ನೋಡಿದಾಗ ಇದ್ದ ಎಫೆಕ್ಟ್ ಎಲ್ಲವೂ ನಡೆದ ಪೂಜೆಯಿಂದ ಒಮ್ಮೆಗೇ ಮಾಯವಾಗಿ ನಾಟಕ ಕಟ್ಟಿಕೊಟ್ಟ ಚಿತ್ರಗಳೇ ಮರೆತುಹೋಗಿದ್ದವು. ಇವೆಲ್ಲ ಆಗಿ ಕಾಲ ಆಗಿತ್ತು.

ಸುಮಾರು ವರ್ಷ ಕಳೆದ ಮೇಲೆ ಮತ್ತೆ ‘ಸೀಗಲ್’ ಹೆಸರು ಪ್ರಸ್ತಾಪವಾದಾಗ ನಾನು ಕೊಂಚ ಕುತೂಹಲಿಯಾದೆ. ಅದೂ ಅಲ್ಲದೆ ಕೋವಿಡ್ ಒಂದು ವರ್ಷವನ್ನ ನುಂಗಿದಾಗ ಒಂದು ಬಗೆಯ ನಿರ್ವಾತ ಸೃಷ್ಟಿಯಾಗಿತ್ತು. ಈಗ ವರ್ಷದ ಆರಂಭದಲ್ಲಿ- ಅದೂ ಚೆಕಾವ್ ನಾಟಕ ನೋಡುವುದೆಂದರೆ ಹಬ್ಬ ಅಂದುಕೊಂಡೇ ನಾಟಕಕ್ಕೆ ಹೋದೆ. ಕೋವಿಡ್ ಗೈಡ್ ಲೈನ್ಸ್, ಮಾಸ್ಕ್ ಕಡ್ಡಾಯ, ಡಿಸ್ಟನ್ಸ್ ಮೆಂಟೇನ್ ಮಾಡಲೇಬೇಕು ಇತ್ಯಾದಿ ನಿಯಮಗಳಿದ್ದರೂ ನಾಟಕ ಆರಂಭವಾಗುವ ಹೊತ್ತಿಗೆ ರಂಗಮಂದಿರ ತುಂಬಿ ನನ್ನ ಪಕ್ಕದ ಸೀಟು ಖಾಲಿ ಉಳಿಸಿಕೊಂಡಿದ್ದರೂ ಅದನ್ನೂ ಒಬ್ಬರು ಬಂದು ಆಕ್ರಮಿಸಿ ಕೂತರು. ಆ ಟೈಂನಲ್ಲಿ ಸೋಷಿಯಲ್ ಡಿಸ್ಟೆನ್ಸ್ ಅಂತ ಜಗಳ ತೆಗೆಯುವುದು ಹೇಗೆ ಅಂದುಕೊಂಡು ಸುಮ್ಮನೆ ಕೂತೆ.

ನಾನು ಹಿಂದೆ ಮೈಸೂರು ರಂಗಾಯಣದ ಪ್ರೊಡಕ್ಷನ್ ನಲ್ಲಿ ನೋಡಿದದ್ದು ಸೀಗಲ್ ನ ನೇರಾನೇರಾ ಅನುವಾದಿತ ನಾಟಕ. ಈ ಹೊತ್ತು ಬೆಂಗಳೂರು ಪ್ಲೇಯರ್ಸ್ ತಂಡ ಆರಿಸಿಕೊಂಡಿದದ್ದು ಪರ್ವತವಾಣಿಯವರು ಚೆಕಾವ್ ನ ‘ ಸೀಗಲ್’ ನ್ನು ‘ ಬೆಳ್ಳಕ್ಕಿ’ ಎಂದು ರೂಪಾಂತರಿಸಿದ್ದ ನಾಟಕ.

ಹೇಳಿಕೇಳಿ ಇದು ಇನ್ಟೆನ್ಸ್ ಡ್ರಾಮಾ. ನೇರ ಅನುವಾದವಾದರೆ ಅದು ಬೇರೆ. ಇದು ರೂಪಾಂತರ. ಹಿಂದೆ ನೋಡಿದ್ದು ಮರೆತು ಹೋಗಿದೆ. ಹಾಗಾಗಿ ನಾಟಕದ ಕುರಿತು ಪೂರ್ವಭಾವಿಯಾಗಿ ಒಂದಿಷ್ಟು ಓದಿಕೊಂಡು ನಡೆದರೆ ಸರಿಯಾದೀತು ಅನಿಸಿ ಚೂರು ಬ್ರೌಸ್ ಮಾಡಿದೆ.

ಆ ನಾಟಕದ ಪ್ರೊಡಕ್ಷನ್ ಗಳು, ಅವುಗಳ ಪೂರ್ವಾಪರ ಇತ್ಯಾದಿ ಓದುವ ಹೊತ್ತಿಗೆ ಯಾಕೊ ದಣಿವಾಯಿತು. ನಾಟಕ ಮುಖ್ಯವಾಗಿ ಹೇಳಲು ಹೊರಟಿರುವುದು ಏನನ್ನು ಎಂದು ಹುಡುಕಿ ಓದುವಷ್ಟರಲ್ಲಿ ಮತ್ತೂ ದಣಿವಾಯಿತು. ಆಮೇಲೆ ಅಂದುಕೊಂಡೆ – ಇಷ್ಟೆಲ್ಲ ಕಷ್ಟ ಯಾಕೆ ಪಡಬೇಕು? ನಾಟಕ ಹೇಗೆ ಮಾಡುತ್ತಾರೆ ನೋಡೋಣ. ಕಡೆಗೆ ಅದು ನನಗೆ ಹೇಗೆ ನಿಲುಕುತ್ತದೆ ಎಂಬುದಷ್ಟೇ ಮುಖ್ಯ… ಇತ್ಯಾದಿ ನಾನೇ ತರ್ಕ ಹುಟ್ಟುಹಾಕಿಕೊಂಡೆ.

ನಾಟಕ ಆರಂಭವಾಯಿತು. ಅದರ ಎಳೆ ನಿಲುಕುತ್ತಿದೆ ಅನಿಸುವ ಹೊತ್ತಿಗೆ ಕಂಪ್ಯಾರಿಷನ್ ಆರಂಭವಾಯಿತು. ತುಂಬ ಹಿಂದೆ ನೋಡಿದ್ದ ಸೀಗಲ್ ನಾಟಕದ ಮರೆತ ದೃಶ್ಯಗಳೂ ನೆನಪಾಗಲು ಆರಂಭಿಸಿದವು. ಅಲ್ಲಿನ ಒಳತೋಟಿ, ಸಂಘರ್ಷ, ದೃಶ್ಯ ಸಂಯೋಜನೆ ಈಗ ನಾನು ಸದ್ಯ ನೋಡುತ್ತಿದ್ದ ಬೆಳ್ಳಕ್ಕಿ ರೂಪಾಂತರದ ಮೇಲೆ ತನ್ನ ನೆರಳು ಚೆಲ್ಲಲು ಆರಂಭಿಸಿದವು. ಇದು ಒಂದು ರೀತಿ ಡಿಸ್ಟರ್ಬೆನ್ಸ್. ಹಿಂದೆ ನೋಡಿದ ಮತ್ತು ಈಗ ನೋಡುತ್ತಿರುವ ನಾಟಕ ಎರಡು ಹಳಿಗಳಂತೆ ಮೈಚಾಚಿ ಸಾಗುವುದನ್ನ ಬೇರ್ಪಡಿಸಿ ನೋಡುವುದು ಕಷ್ಟದ ಸಂಗತಿ ಅನಿಸಿತು. ಅದೂ ಅಲ್ಲದೆ ನನ್ನ ಪಕ್ಕದಲ್ಲಿ ಕೂತಿದ್ದ ವ್ಯಕ್ತಿ ಘನಗಂಭೀರ ನಾಟಕವನ್ನ ಗ್ರಹಿಸುವುದು ಬಿಟ್ಟು ನಾಟಕವನ್ನು ಮೊಬೈಲ್ ನಲ್ಲಿ ವಿಡಿಯೋ ಆಗಿ ಸೆರೆ ಹಿಡಿಯುವ ಡಿಓಪಿ ಆಗಿದ್ದರು. ಆಗಾಗ ನನ್ನ ಕಣ್ಣುಗಳು ವಿಡಿಯೋ ಕಡೆಗೆ ಸಾಗುತ್ತಿತ್ತು. ಅದು ಬಿಟ್ಟರೆ ಮನಸ್ಸಿನಲ್ಲಿ ಎರಡು ನಾಟಕಗಳ ಜಡೆಗಳ ಹೆಣಿಗೆ. ನಾನು ಜಡೆಯ ಹೆಣಿಗೆ ಬಿಚ್ಚುತ್ತ ಕೂತಿದ್ದೆ.

‘ಓ ಈ ಪಾತ್ರವನ್ನ ಪರ್ವತವಾಣಿಯರು ಹೀಗೆ ರೂಪಾಂತರಿಸಿಕೊಂಡಿದ್ದಾರೆ… ಇದು ಹೀಗಾಗಿದೆ..’ ಎಂಬ ಲೆಕ್ಕಾಚಾರಗಳೇ ಮನಸ್ಸಿನ ತುಂಬ. ರಂಗಾಯಣದ ಸೀಗಲ್ ನಲ್ಲಿ ಒಂದು ದೃಶ್ಯದ ಪಾತ್ರ ಸನ್ನಿವೇಶ ಹೇಗೆ ಇನ್ಟೆನ್ಸ್ ಆಗಿ ಕಾಣಿಸಿಕೊಂಡಿತು… ಮತ್ತು ಬೆಳ್ಳಕ್ಕಿಯಲ್ಲಿ ಯಾಕೆ ಇಷ್ಟು ಸರಳಮಾಡಿಕೊಂಡಿದ್ದಾರೆ ಎಂದು ಮನಸ್ಸು ತಾಳೆಹಾಕಲು ಶುರುಮಾಡಿತ್ತು. ಹಿಂದೆ ನೋಡಿದ ಅನುವಾದಿತ ಚಿತ್ರ ಚೆಂದವೊ ಅಥವಾ ಈ ರೂಪಾಂತರವೋ ಎಂದು ತುಲನಾತ್ಮಕವಾಗಿ ಕೇಳಿಕೊಳ್ಳುತ್ತಲೇ ನಾಟಕ ನೋಡುವ ಇಕ್ಕಟ್ಟು ಸೃಷ್ಟಿಯಾಯಿತು.

ಕೆಲವು ಕಡೆ ರಂಗಾಯಣದ ಸೀಗಲ್ ಚೆಂದ; ಮತ್ತೆ ಕೆಲವು ಕಡೆ ‘ಬೆಳ್ಳಕ್ಕಿ’ ಚೆಂದ ಅನಿಸಲಿಕ್ಕೆ ಶುರುವಾಯಿತು. ಹಾಗೇ ನಾಟಕ ನೋಡುತ್ತಾ ನೋಡುತ್ತಾ ಅನುವಾದಿತ ಮತ್ತು ರೂಪಾಂತರದ ಜಡೆಯ ಹೆಣಿಗೆ ಮಾಯವಾಗಿ ಬರವಣಿಗೆಗೆ ಸಂಬಂಧಿಸಿದಂತೆ ಚೆಕಾವ್ ಚಿತ್ರಿಸಿರುವ ತೊಳಲಾಟ ಅವನ ಕಾಲದ್ದಾದರೂ ಅದು ಇಂದಿಗೂ ಹೇಗೆ ಜೀವಂತವಾಗಿದೆ ಎಂದು ಕಂಡುಕೊಳ್ಳಲು ನೆರವಾಗುವಂತೆ ಕಾಣಲು ಶುರುವಾಯಿತು.

ಚೆಕಾವ್ ಮೊದಲಿನಿಂದಲೂ ನನ್ನಲ್ಲಿ ಒಂದು ಬಗೆಯ ಬೆರಗಿನಿಂತೆ ಅರಳಿಕೊಳ್ಳಲು ಆರಂಭಿಸಿದ ರೈಟರ್. ಇವನ ‘ದಿ ಬೆಟ್’ ಕಥೆಯನ್ನ ನಾನು ಮೊದಲ ಬಾರಿಗೆ ರೂಪಾಂತರದಲ್ಲಿ ಓದಿದಾಗ ಬೆರಗಾಗಿದ್ದೆ.

ನಾಟಕದ ರಚನೆಗಳಿಗೆ ಸಂಬಂಧಿಸಿದಂತೆ ಜನಪ್ರಿಯ ಮತ್ತು ಅಭಿಜಾತ ಶೈಲಿಗಳ ಬಗ್ಗೆ ಚೆಕಾವ್ ಜಿಜ್ಞಾಸೆಯ ರೀತಿಯಲ್ಲಿ ಬರೆದಿರುವ ಮಾತುಗಳು ಚಿಂತನೆಗೆ ಹಚ್ಚಲು ಆರಂಭಿಸಿದವು. ತಾಯಿ ನಾಟಕದ ನಟಿ; ಜನಪ್ರಿಯ ನಾಟಕಗಳ ನಟಿ. ಅವಳಿಗೆ ಆ ಕಲಾಪ್ರಪಂಚ ಚೆಂದ. ಆದರೆ ಅದೇ ತಾಯಿಯ ಮಗನೂ ಬರವಣಿಯ ಬಗೆಗೆ ಮಹತ್ವಾಕಾಂಕ್ಷೆ ಇರಿಸಿಕೊಂಡು ನಾಟಕ ರಚಿಸುತ್ತಿರುವವನು. ಪ್ರವರ್ಧಮಾನಕ್ಕೆ ಬರಬೇಕೆಂದು ತುಡಿಯುತ್ತಿರುವವನು. ಜನಪ್ರಿಯ ಶೈಲಿಯ ಬಗ್ಗೆ ಅವನಲ್ಲಿ ತಿರಸ್ಕಾರ ಇದೆ. ಜೊತೆಗೆ ಅಮ್ಮನ ಬಗ್ಗೆ ಬೇಸರವೂ ಇದೆ. ತಾಯಿ ಮತ್ತು ಮಗನ ವಾಗ್ವಾದ ಮತ್ತು ಸಂಘರ್ಷ ಮೊದಲು ಬರವಣಿಗೆಗೆ ಸಂಬಂಧಿಸಿದಂತೆ ಆರಂಭವಾದದ್ದು ನಂತರ ಪ್ರೇಮ, ಹತಾಶೆಗಳಿಗೆ ಹೇಗೆ ವಿಸ್ತರಿಸಿಕೊಂಡು ಹೊಸ ಆಯಾಮ ಪಡೆದುಕೊಳ್ಳುತ್ತದೆ ಎಂಬುದನ್ನು ನಾಟಕ ಕಟ್ಟಿಕೊಡುತ್ತದೆ.

ನಾನು ನಾಟಕ ನೋಡುತ್ತ ನೋಡುತ್ತ ಜನಪ್ರಿಯ ಮತ್ತು ಅಭಿಜಾತ ಶೈಲಿಗಳಿಗೆ ಸಂಬಂಧಿಸಿದಂತೆ ಮಗ ಮತ್ತು ತಾಯಿಯ ಸಂಘರ್ಷವನ್ನ ನಮ್ಮ ಇಂದಿನ ಕಾಲದಲ್ಲಿನ ರಂಗಭೂಮಿಯ ಡಿಬೇಟ್ ಗೆ ಹೋಲಿಸಿಕೊಳ್ಳಲು ಆರಂಭಿಸಿದೆ. ಇಂದಿಗೂ ಸೀಗಲ್ ಅಥವಾ ಬೆಳ್ಳಕ್ಕಿ ನಾಟಕದಲ್ಲಿನ ಮಗ ಮತ್ತು ತಾಯಿ ಬೇರೆಬೇರೆ ರೂಪದಲ್ಲಿ ಇದ್ದಾರೆ; ಜೋರು ವಾಗ್ವಾದ, ಅಸಡ್ಡೆ ಮತ್ತು ಚರ್ಚೆಗಳು ಇಂದಿಗೂ ನಡೆದೇ ಇವೆ. ಕೆಲವು ವ್ಯಂಗ್ಯದ ರೂಪದಲ್ಲಿದ್ದರೆ ಮಿಕ್ಕವು ಮುಸುಕಿನ ಗುದ್ದಾಟದ ರೂಪದಲ್ಲಿವೆ.

ಇಲ್ಲಿ ತಾಯಿ ಯಾರು..? ಇಂದು ಯಾರ್ಯಾರು ಕಾಮಿಡಿ ನಾಟಕಗಳನ್ನ ಮಾಡುತ್ತಿದ್ದಾರೋ ಅವರು ತಾಯಿಯನ್ನ ಸಂಕೇತಿಸುತ್ತಾರೆ. ಯಾಕೆಂದರೆ ಕಾಮಿಡಿಗಳೆಂದರೆ ಬಹುತೇಕರಿಗೆ ಮಿಯರ್ ‘ಜನಪ್ರಿಯ’. ಕೇವಲ ಚಪ್ಪಾಳೆಗೆ ಸೃಷ್ಟಿಸಿಕೊಳ್ಳುವ ಸರಕು. ಇದು ಮಗನಿಗೆ ಹಿಡಿಸುವುದಿಲ್ಲ.

ಹೋಗಲಿ ಈ ಮಗ ಯಾರು ಹಾಗಿದ್ದರೆ..? ಇಂದು ಯಾರ್ಯಾರು ಘನ ಗಂಭೀರ ನಾಟಕಗಳನ್ನ ಮಾಡುತ್ತಿದ್ದಾರೋ ಅವರುಗಳು ಮಗನನ್ನು ಸಂಕೇತಿಸುತ್ತಾರೆ. ಈಗ ಮಗ ಬಾಯಿಬಿಟ್ಟರೆ ಜನಪ್ರಿಯವನ್ನ ತೆಗಳುತ್ತಾನೆ. ತನ್ನ ಗಂಭೀರ ಸಾಹಿತ್ಯದ ಬಗ್ಗೆ ಅವನಲ್ಲಿ ಮೆಚ್ಚುಗೆ ಇದೆ. ಆದರೆ ಮನ್ನಣೆ ಇಲ್ಲ ಎಂಬುದು ಅಮ್ಮನನ್ನು ನೋಡುತ್ತ ಕೊರಗುತ್ತಾನೆ.

ನಾಟಕದಲ್ಲಿ ಅಮ್ಮ ಮತ್ತು ಮಗನಿಗೆ ನಾನು ಮೇಲೆ ಕಲ್ಪಿಸಿದ ಅರ್ಥಗಳಿಲ್ಲ. ಅಥವಾ ಇದ್ದರೂ ಇರಬಹುದು. ಆದರೆ ನನಗೆ ಬೆಳ್ಳಕ್ಕಿಯನ್ನ ರಿಲೇಟ್ ಮಾಡಿಕೊಂಡು ನೋಡಲು ಸಾಧ್ಯವಾದದ್ದು ಹೀಗೆ. ಇದು ತಪ್ಪೂ ಇರಬಹುದು, ಸರಿಯೂ ಇರಬಹುದು. ಒಟ್ಟಿನಲ್ಲಿ ಇದು ಇದೆ. ಅಮ್ಮ ಮತ್ತು ಮಗನ ತಾತ್ವಿಕ ಜಗಳ ನಾಟಕದ ಪಾತ್ರ ಸನ್ನಿವೇಶ ಬಿಟ್ಟು ಬೇರೆ ರೂಪದಲ್ಲಿ ಧ್ವನಿತವಾಗುತ್ತದೆ.

ಇದರ ಆಚೆಗೆ ಚೆಕಾವ್ ಕಟ್ಟಿಕೊಡುವ ಭಾವನಾ ಪ್ರಪಂಚ ಪ್ರತಿಮೆಗಳಿಂದ ತುಂಬಿ ಹೋಗಿದೆ. ಸೀಗಲ್ ಇಲ್ಲಿ ರೂಪಾಂತರದಲ್ಲಿ ಬೆಳ್ಳಕ್ಕಿ ಆಗಿದೆ. ಇದು ಪ್ರತಿಮೆ. ಇದರ ಸುತ್ತ ಚೆಕಾವ್ ಕಟ್ಟುವ ಆವರಣವನ್ನ ನಿಲುಕಿಸಿಕೊಳ್ಳುವುದು ಕಷ್ಟದ ಕೆಲಸ. ನಾಟಕ ಮುಂಚೆಯೇ ಓದಿಕೊಂಡು ಬಂದು ಕೂತು ನೋಡಿದರೆ ಚೂರುಪಾರು ದಕ್ಕುತ್ತದೆ. ಬರಿದೇ ಹೋಗಿ ಕೂತರೆ ಆ ಪ್ರತಿಮೆಗಳು ದಕ್ಕುವುದು ಕಷ್ಟ. ಪ್ರೇಮ, ಹತಾಶೆ, ಮನುಷ್ಯರಿಗಿರುವ ಕೀರ್ತಿಯ ಕುರಿತ ಅಭೀಪ್ಸೆ, ಜೊತೆಗೆ ಚಂಚಲತೆ ಇವು ಹಲವು ಬಗೆಯಲ್ಲಿ ನಾಟಕದಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತವೆ. ನಾಟಕದಲ್ಲಿ ನೋಡುವಾಗ ಅವೆಲ್ಲ ಚೆಕಾವ್ ಕಂಡು ಅನುಭವಿಸಿದ ಯಾತನೆಯಂತೆ ಕಂಡರೂ ಆ ಎಲ್ಲವೂ ಸಾರ್ವತ್ರಿಕವಾಗುತ್ತ ನೋಡುಗರ ಆಂತರ್ಯದಲ್ಲಿ ಸುಳಿಗಳನ್ನ ಎಬ್ಬಿಸುವಷ್ಟು ಶಕ್ತವಾಗಿರುವುದರಿಂದಲೇ ಸೀಗಲ್ ನಲ್ಲಿರುವ ತೊಳಲಾಟ ಸದಾ ಜೀವಂತ.

ಈ ಅಂಶ ನನಗೆ ಮೆಚ್ಚುಗೆಯಾಗುತ್ತ ನನ್ನ ಬದುಕಿನೊಂದಿಗೆ ಮಗನ ಮತ್ತು ತಾಯಿಯ ಮಾತುಗಳನ್ನು ರಿಲೇಟ್ ಮಾಡಿಕೊಳ್ಳುತ್ತಾ ಕೂತೆ. ಒಟ್ಟು ಎರಡೂವರೆ ತಾಸಿನ ನಾಟಕ. ನಡುಮಧ್ಯೆ ಸಾಕಷ್ಟು ಕಂಪ್ಯಾರಿಷನ್ ತೊಳಲಾಟ, ವಿಡಿಯೊ ಮಾಡುತ್ತಿದ್ದ ಡಿಓಪಿಗೆ ನಾಟಕ ಬೇಕಾಗಿಲ್ಲವೆ ಎಂಬ ಪ್ರಶ್ನೆ ಎದುರಿಸುತ್ತಲೇ ನಾಟಕ ನೋಡಿ ಮುಗಿಸಿದೆ.

‘ಸರ್ ಹೇಗಿತ್ತು ನಾಟಕ..?’ ಕೇಳಿದರು ಅಪೂರ್ವ. ನಾಟಕ ಆಗಷ್ಟೇ ನೋಡಿದ್ದೆ. ಅದು ಮನಸ್ಸಿನಲ್ಲಿ ಪೂರ್ಣ ಸಿಂಕ್ ಆಗುವವರೆಗೆ ಕಾದು ನಂತರ ಪ್ರತಿಕ್ರಿಯೆ ಕೊಟ್ಟರೆ ಸೂಕ್ತ ಅಂದುಕೊಂಡಿದ್ದವನು ನಾನು. ಅದನ್ನೇ ಅಪೂರ್ವಾಗೆ ಹೇಳಿದೆ. ಆಕೆಗೂ ಅದು ಸರಿ ಅನಿಸಿತು.

ನಂತರ ತಾಯಿ ಮತ್ತು ಮಗನ ಕುರಿತ ನನ್ನ ಕಂಟೆಂಪರರಿ ಕಂಪ್ಯಾರಿಷನ್ ಗಳನ್ನ ಬದಿಗಿರಿಸಿ ನಾಟಕದ ಪ್ರಯೋಗ ಎದುರಿಸಿದ ಸಮಸ್ಯೆಗಳ ಬಗ್ಗೆ ಅವರಿಗೆ ಬರೆದು ಕಳಿಸಿದೆ. ಮೊದಲ ಪ್ರಯೋಗವಾದ್ದರಿಂದ ಸಾಕಷ್ಟು ತಾಂತ್ರಿಕ ತೊಡಕುಗಳಿದ್ದವು. ಆದರೆ ಅವುಗಳನ್ನ ಅಷ್ಟೊಂದು ಹೈಲೈಟ್ ಮಾಡುವ ಅಗತ್ಯವಿರಲಿಲ್ಲ. ಯಾಕೆಂದರೆ ಮೊದಲ ಪ್ರಯೋಗದಲ್ಲಿ ಇವೆಲ್ಲ ಮಾಮೂಲಿ ಎಂಬುದು ನನಗೆ ಗೊತ್ತಿತ್ತು. ಆದರೆ ಕರೆಕ್ಷನ್ಸ್ ದೃಷ್ಟಿಯಿಂದ ಸಾಕಷ್ಟು ಅಂಶಗಳನ್ನ ತಿಳಿಸಿ ಹೇಳಿದೆ.

ಆನಂತರ ನಗುತ್ತಾ ಕೂತೆ. ನಮ್ಮ ತಂಡ ಕೂಡ ಬೆಳ್ಳಕ್ಕಿ ನಾಟಕದಲ್ಲಿನ ತಾಯಿಯ ಆಶಯದಂತೆ ಕಾಮಿಡಿ ನಾಟಕಗಳನ್ನ ಮಾಡುತ್ತ ಜನಪ್ರಿಯತೆಯ ಲೇಬಲ್ ಹಚ್ಚಿಸಿಕೊಂಡು ಇರುವ ಬಗೆ ಕಣ್ಣೆದುರು ತಂದುಕೊಂಡೆ. ಜೊತೆಗೆ ಮಗನಾಗಿ ಉಳಿದ ತಂಡಗಳು ನಮ್ಮ ತಂಡದ ಜನಪ್ರಿಯ ಕಾಮಿಡಿ ನಾಟಕಗಳನ್ನ ಪರೋಕ್ಷದಲ್ಲಿ ಹೇಗೆ ಗೇಲಿ ಮಾಡಿದ್ದಾರೆ ಎಂಬ ಮಾಹಿತಿಯೂ ಇದ್ದದ್ದರಿಂದ ಅವುಗಳನ್ನ ನೆನೆಸುತ್ತ ಕೂತೆ.

ಈ ಸಂಘರ್ಷ ಚೆಕಾವ್ ಬರೆವ ಕಾಲಕ್ಕೂ ಇತ್ತು. ಈಗಲೂ ಇದೆ. ಬಹುಶಃ ಮುಂದಕ್ಕೂ ಇರುತ್ತದೆ. ತಾಯಿಯಾಗಿ ಉಳಿಯುವುದು ಅಥವಾ ಮಗನಾಗಿ ಮಿಡುಕುವುದು ಅವರವರಿಗೆ ಬಿಟ್ಟದ್ದು. ಬೆಳ್ಳಕ್ಕಿಯಲ್ಲಿ ಇದಕ್ಕಿಂತ ಹೆಚ್ಚಿಗೆ ಏನನ್ನೂ ನನಗೆ ಈ ಬಾರಿ ಗ್ರಹಿಸಲಾಗಲಿಲ್ಲ. ಮುಂದೊಮ್ಮೆ ನೋಡಿದಾಗ ಯಾವ ಅಂಶ ಪ್ರಧಾನವಾಗಿ ಕಾಡುತ್ತದೆ ಎಂಬ ಸಣ್ಣ ಕುತೂಹಲವೂ ನನ್ನಲ್ಲಿ ಇದೆ.