ಸ್ವರ್ಗದ ಹಕ್ಕಿಯಾದ ನವಿಲು ತನ್ನ ಒಂದು ಸಣ್ಣತಪ್ಪಿನಿಂದ ಅಲ್ಲಾನ ಶಾಪಕ್ಕೆ ಗುರಿಯಾಗಿ ಭೂಮಿಗೆ ಬಂದರೂ ಅವುಗಳು ನೆಲೆಸಿರುವಲ್ಲಿ ಶಾಂತಿ ಸಮಾಧಾನ ನೆಲೆಯೂರುತ್ತದೆ. ಭಾರತ ಮೊದಲನೆಯ ಅಣುಬಾಂಬಿನ ಪರೀಕ್ಷೆಯನ್ನು ಪ್ರೋಖರಾನಿನಲ್ಲಿ ನಡೆಸಿದಾಗ ಅವುಗಳೆಲ್ಲವೂ ಬೆಚ್ಚಿಬೀಳುತ್ತವೆ. ಅಲ್ಲಿ ಅವುಗಳು ಕಾಣಸಿಗುವುದಿಲ್ಲ. ಕಾಣೆಯಾಗಿರುವ ನವಿಲುಗಳಿಗಾಗಿ ನಾಟಕಕಾರ ಪತ್ರಿಕೆಯಲ್ಲಿ ಬರೆದು ಜಾಗೃತಿ ಮೂಡಿಸುವ ಪ್ರಯತ್ನಮಾಡಿತ್ತಾನೆ. ಶಾಂತಿನೆಲೆಸುವುದು ಆತನ ಹಂಬಲ. ಅದಕ್ಕೆ ಆತ ಇಷ್ಟಕ್ಕೇ ಸುಮ್ಮನಾಗದೇ ಆತ ನವಿಲಿಗಾಗಿ, ಈ ನವಿಲು ಭೂಲೋಕಕ್ಕೆ ಬಂದ ಕಾಲದಿಂದಲೂ ಇಲ್ಲಿಯ ತನಕದ ನಡೆಗಾಗಿ ಕಾಲಕೋಶದೊಳಗೆ ಹೋಗುತ್ತಾನೆ.
ಪ್ರೊ. ಕೆ. ಇ. ರಾಧಾಕೃಷ್ಣ ಅನುವಾದಿತ ಸುರೇಶ ಆನಗಳ್ಳಿ ನಿರ್ದೇಶನದ “ನವಿಲು ಪುರಾಣ” ನಾಟಕದ ಕುರಿತು ನಾರಾಯಣ ಯಾಜಿ ಬರಹ

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಅನೇಕ ರಂಗತಂಡ ಬೆಂಗಳೂರು ಇವರು ಪ್ರಸ್ತುತ ಪಡಿಸಿದ ನಾಟಕ “ನವಿಲು ಪುರಾಣ” ಗಮನ ಸೆಳೆಯಲು ಅನೇಕ ಕಾರಣಗಳು ಇವೆ. ಮೊದಲನೆಯದು ಮೂಲವಸ್ತು. ಇಂತಿಜಾರ್ ಹುಸ್ಸೈನ್ ಅವರ Chronicle of the Peacocks ಅವರ ಉರ್ದು ನಾಟಕವನ್ನು ಪ್ರೊ. ಕೆ. ಇ. ರಾಧಾಕೃಷ್ಣ ಅವರು ಕನ್ನಡಕ್ಕೆ ರೂಪಾಂತರಗೊಳಿಸಿದ್ದಾರೆ. ಇಂತಿಜಾರ್ ಹುಸ್ಸೈನ್ ಅವರ ಉರ್ದುಶೈಲಿಯ ಇಂಗ್ಲೀಷ್‌ ಭಾಷೆ ವಿಮರ್ಶಕರ ಗಮನವನ್ನು ಸೆಳೆದಿರುವುದು ಲೇಖಕರು ಆರಿಸಿರುವ ವಸ್ತು ಮತ್ತು ಅದನ್ನು ಪ್ರಸ್ತುತಪಡಿಸುವ ರೀತಿಗಾಗಿ. ಇಲ್ಲಿ ಪ್ರೋ. ರಾಧಾಕೃಷ್ಣ ಅವರು ಅದನ್ನು ಯಥಾವತ್ತಾಗಿ ಅನುವಾದ ಮಾಡಿಲ್ಲ. ಅದನ್ನು ರೂಪಾಂತರಗೊಳಿಸಿದ್ದಾರೆ. ರೂಪಾಂತರ ಎನ್ನುವ ಕ್ರಿಯೆಯಲ್ಲಿ ಅವರು ಈಗ ಸುಮಾರು ಐವತ್ತು ವರ್ಷಗಳಷ್ಟು ಹಿಂದಿನ ಬರಹಗಳನ್ನು ಅನುವಾದ ಮಾಡುವಾಗ ಅದನ್ನು ಆ ಕಾಲದ ಜೊತೆಗೆ ವರ್ತಮಾನವನ್ನು ಹಿಡಿದಿಟ್ಟಿದ್ದಾರೆ. ಇದನ್ನು ರಂಗಭಾಷೆಗೆ ಅಳವಡಿಸುವುದರಲ್ಲಿ ಸ್ವತಃ ರಂಗಕರ್ಮಿ ಮತು ನಟರಾದ ಲೇಖಕರ ಅನುಭವವೂ ನೆರವಾಗಿವೆ.

(ಪ್ರೊ. ಕೆ. ಇ. ರಾಧಾಕೃಷ್ಣ)

ಕನ್ನಡ ಭಾಷೆಯಲ್ಲಿ ನಾಟಕವನ್ನು ಅನುವಾದಿಸುವಾಗ ಉರ್ದುವಿನ ಸುಂದರ ಶಾಯರಿಯ ಲಯದಲ್ಲಿ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಅದನ್ನು ಸುರೇಶ ಆನಗಳ್ಳಿಯವರು ತಮ್ಮ ನಟರ ಮೂಲಕ ಅಭಿವ್ಯಕ್ತಿಸಿದ್ದಾರೆ. ಪ್ರತಿಮೆ, ದೃಶ್ಯ, ರಂಗಚಲನೆ ಇವೆಲ್ಲವೂ ಒಂದಕ್ಕೊಂದು ಪೂರಕವಾಗಿದೆ. ಇಡೀ ನಾಟಕ ರಂಗದಲ್ಲಿ ನಡೆಯುವುದಕ್ಕಿಂತ ಆಚೆ ದಾಟಿ ಪ್ರೇಕ್ಷಕರ ಮನದೊಳಗೆ ಮೂಡಿ ಅವರ ಎದುರು ಕುಣಿದಂತೆ, ಅನುಭವಿಸುವಂತೆ, ಭವಿಷ್ಯದ ಕುರಿತು ಸ್ವಲ್ಪ ಕಣ್ಣುಬಿಟ್ಟು ಚಿಂತಿಸುವಂತೆ ಮಾಡುತ್ತದೆ. ನಾಟಕದ ಮೂಲ ಉದ್ದೇಶ ರಸೋತ್ಪತ್ತಿಯಾದರೂ ಆಧುನಿಕ ಚಿಂತಕರು ರಸದ ಆನಂದಕ್ಕಿಂತ ನಾಟಕವು ವರ್ತಮಾನದ ಕನ್ನಡಿಯೂ ಆಗಬೇಕು ಎನ್ನುವುದನ್ನು ಒತ್ತಿಹೇಳುತ್ತಾರೆ. ನವಿಲು ಪುರಾಣ ಈ ದಿಸೆಯತ್ತ ತನ್ನ ಒತ್ತುಕೊಟ್ಟು ಸಾಗಿರುವುದನ್ನು ನಾಟಕದ ಪ್ರಾರಂಭದಿಂದಲೇ ಗಮನಿಸಬಹುದಾಗಿದೆ.

ನಾಟಕ ಪ್ರಾರಂಭವಾಗುವುದು ಅಮೇರಿಕಾ ಜಪಾನಿನ ಮೇಲೆ ಹಾಕಿದ ಅಣುಬಾಂಬಿನ ದುರಂತದ ಕ್ಲಿಪ್ಪಿಂಗಿನಿಂದ. ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರು ಅಣುಬಾಂಬಿನ ದುರಂತವನ್ನು ವಿವರಿಸಿ ಹೇಳುವ ಮೂಲಕ ಕಥೆಯೊಳಗೆ ನಮ್ಮನ್ನು ಕರೆದೊಯ್ಯುತ್ತಾರೆ. ಇಂದು ಮಕ್ಕಳಿಗೆ ಈ ದುರಂತವನ್ನು ಹೇಳುವ ಅಗತ್ಯವಿದೆ. ಮುಗ್ಧ ಮನಸ್ಸಿನ ಅವರ ತಲೆಯಲ್ಲಿ ಶಾಂತಿಯ ಪರಿಕಲ್ಪನೆಯ ಬೀಜವನ್ನು ಬಿತ್ತುವ ಮೂಲಕ ಮುಂದಾಗಬಹುದಾದ ದುರಂತವನ್ನು ತಪ್ಪಿಸುವ ಒಂದು ಹೊಸತಲೆಮಾರನ್ನು ಸಿದ್ಧಪಡಿಸಬೇಕೆನ್ನುವದು ನಿರ್ದೇಶಕರ ಆಶಯ.

ನಾಟಕದ ಮೂಲ ಉದ್ದೇಶ ರಸೋತ್ಪತ್ತಿಯಾದರೂ ಆಧುನಿಕ ಚಿಂತಕರು ರಸದ ಆನಂದಕ್ಕಿಂತ ನಾಟಕವು ವರ್ತಮಾನದ ಕನ್ನಡಿಯೂ ಆಗಬೇಕು ಎನ್ನುವುದನ್ನು ಒತ್ತಿಹೇಳುತ್ತಾರೆ. ನವಿಲು ಪುರಾಣ ಈ ದಿಸೆಯತ್ತ ತನ್ನ ಒತ್ತುಕೊಟ್ಟು ಸಾಗಿರುವುದನ್ನು ನಾಟಕದ ಪ್ರಾರಂಭದಿಂದಲೇ ಗಮನಿಸಬಹುದಾಗಿದೆ.

ಸ್ವರ್ಗದ ಹಕ್ಕಿಯಾದ ನವಿಲು ತನ್ನ ಒಂದು ಸಣ್ಣತಪ್ಪಿನಿಂದ ಅಲ್ಲಾನ ಶಾಪಕ್ಕೆ ಗುರಿಯಾಗಿ ಭೂಮಿಗೆ ಬಂದರೂ ಅವುಗಳು ನೆಲೆಸಿರುವಲ್ಲಿ ಶಾಂತಿ ಸಮಾಧಾನ ನೆಲೆಯೂರುತ್ತದೆ. ಭಾರತ ಮೊದಲನೆಯ ಅಣುಬಾಂಬಿನ ಪರೀಕ್ಷೆಯನ್ನು ಪ್ರೋಖರಾನಿನಲ್ಲಿ ನಡೆಸಿದಾಗ ಅವುಗಳೆಲ್ಲವೂ ಬೆಚ್ಚಿಬೀಳುತ್ತವೆ. ಅಲ್ಲಿ ಅವುಗಳು ಕಾಣಸಿಗುವುದಿಲ್ಲ. ಕಾಣೆಯಾಗಿರುವ ನವಿಲುಗಳಿಗಾಗಿ ನಾಟಕಕಾರ ಪತ್ರಿಕೆಯಲ್ಲಿ ಬರೆದು ಜಾಗೃತಿ ಮೂಡಿಸುವ ಪ್ರಯತ್ನಮಾಡಿತ್ತಾನೆ. ಶಾಂತಿನೆಲೆಸುವುದು ಆತನ ಹಂಬಲ. ಅದಕ್ಕೆ ಆತ ಇಷ್ಟಕ್ಕೇ ಸುಮ್ಮನಾಗದೇ ಆತ ನವಿಲಿಗಾಗಿ, ಈ ನವಿಲು ಭೂಲೋಕಕ್ಕೆ ಬಂದ ಕಾಲದಿಂದಲೂ ಇಲ್ಲಿಯ ತನಕದ ನಡೆಗಾಗಿ ಕಾಲಕೋಶದೊಳಗೆ ಹೋಗುತ್ತಾನೆ. ನವಿಲು ಇನ್ನೊಬ್ಬರ ನೋವಿಗೆ ಮಿಡಿವ ಪಕ್ಷಿ. ಸೈತಾನನಾದರೂ ಅವನ ನೋವನ್ನು ನೋಡಲಾರದೇ ತಾನೇ ಅವನಿಗೆ ಉಪಕಾರಮಾಡುವ ಮುಗ್ಧತೆ ಅದಕ್ಕಿದೆ. ಸೈತಾನ ದೇವ ಈ ಇಬ್ಬರಲ್ಲೂ ಶಾಂತಿಯನ್ನು ನವಿಲು ಬಯಸುತ್ತದೆ. ಅದರ ಚರಿತ್ರೆಯನ್ನು ಹುಡುಕಲು ಇತಿಹಾಸದೊಳಕ್ಕೆ ತಾನೇ ಇಳಿಯುತ್ತಾನೆ. ಹೀಗೆ ಇಳಿಯುವಾಗ ಮಹಾಭಾರತ ಯುದ್ಧದಲ್ಲಿ ಅಳಿದುಳಿದ ಜನರನ್ನು ಮತ್ತು ಬ್ರೂಣ ಹತ್ಯೆಯನ್ನು ಮಾಡಿದ ಅಶ್ವತ್ಥಾಮನ ದುರಂತ ಕಾರ್ಯಗಳ ಮೂಲಕ ಅಣುಬಾಂಬಿನ ದುರಂತವನ್ನು ಹೇಳುವ ಕ್ರಿಯೆ ಚನ್ನಾಗಿ ಬಂದಿದೆ.

ಯಾವತ್ತಿಗೂ ಅಧಿಕಾರ ಮತ್ತು ದರ್ಪ ಇವೆರಡಕ್ಕೂ ಮುಖವಾಡಗಳಿವೆ. ಏಕೆಂದರೆ ಅಧಿಕಾರದ ಹೆಸರಿನಲ್ಲಿ ತಾವು ಮಾಡುವ ಹಿಂಸೆಯನ್ನು ಮತ್ತು ಅದರ ಪರಿಣಾಮವನ್ನು ನೋಡುವ ಧೈರ್ಯ ಮತ್ತು ಮನಸ್ಸು ಆ ಅಂತಹ ವ್ಯಕ್ತಿಗಳಲ್ಲಿರುವುದಿಲ್ಲ. ಇದರ ಸಂಕೇತವಾಗಿ ಮುಖವಾಡಗಳ ಮೂಲಕ ಅಶ್ವತ್ಥಾಮ, ಸದ್ದಾಂ ಹುಸೇನ್, ರೇಗನ್ ಮುಂತಾದವರನ್ನು ತೋರಿಸುತ್ತಲೇ ಹಿಂಸೆಯ ಕರಾಳ ಮುಖಗಳನ್ನು ಅನಾವರಣ ಮಾಡುತ್ತಾ ಹೋಗುತ್ತಾರೆ.

ಸದ್ದಾಂ ಸಮುದ್ರಕ್ಕೆ ಕಚ್ಚಾ ತೈಲವನ್ನು ಸುರಿಯುವ ಮೂಲಕ ರಾಜಹಂಸಗಳ ಬದುಕಿಗೆ ಕುತ್ತುತರುವ ಪ್ರಯತ್ನ ಚನ್ನಾಗಿ ಮೂಡಿದೆ. ಇಲ್ಲಿ ನವಿಲು ಸಂತೋಷದ ಪ್ರತೀಕವಾದರೆ ಹಂಸ ನಮ್ಮ ಶ್ವಾಶೋಚ್ಛಾಸದ ಪ್ರತೀಕ. ಕುರಾನ್‌ ಮತ್ತು ಭಾರತೀಯ ನಂಬಿಕೆಗಳಲ್ಲು ನವಿಲು ಮತ್ತು ರಾಜಹಂಸಗಳು ಮನಸ್ಸಿನ ಆಹ್ಲಾದದ ಮತ್ತು ಪ್ರಾಣವಾಯುವಿನ ಪ್ರತೀಕಗಳಾಗಿ ಇರುವುದನ್ನು ಪ್ರತಿಮೆಗಳ ಮೂಲಕ ಹೇಳುತ್ತಾ ಅನುವಾದಕರಾದ ಪ್ರೊ. ಕೆ. ಇ. ರಾಧಾಕೃಷ್ಣರು ಹಣೆದ ಪರಿಕಲ್ಪನೆ ಮೂಲಕ್ಕಿಂತಲೂ ಚನ್ನಾಗಿದೆ. ಖಾಂಡವ ದಹನವನ್ನು ಮಾಡಲುಹೊರಟ ಪಾಂಡವರಿಗೆ ಇಂದ್ರ ನಾಗಗಳೊಂದಿಗೆ ಸೌಹಾರ್ಧಯುತವಾಗಿ ಬಾಳಲು ಸಲಹೆಯನ್ನು ಕೊಡುತ್ತಾನೆ. ಸಾತ್ವಿಕ ಪಾತ್ರಗಳನ್ನು ಕೃಷ್ಣನ ಸಹಿತ ಸಹಜವಾಗಿ ತೋರಿಸುತ್ತಾ, ತಾಮಸೀ ಪ್ರವೃತ್ತಿಯವರನ್ನು ಮುಖವಾಡಗಳೊಂದಿಗೆ ತೋರಿಸುವ ನಿರ್ದೇಶಕರು ರಂಗದಲ್ಲಿ ಕಥನವನ್ನು ಕಟ್ಟುವ ತಂತ್ರ ಮನಮುಟ್ಟುತ್ತದೆ.

(ಸುರೇಶ ಆನಗಳ್ಳಿ)

ಪ್ರೊ. ಕೆ. ಇ. ರಾಧಾಕೃಷ್ಣ ಅವರು ಕನ್ನಡದ ಸ್ವಂತ ಕೃತಿಯೆನ್ನುವಷ್ಟರ ಮಟ್ಟಿಗೆ ನಾಟಕವನ್ನು ರೂಪಾಂತರಗೊಳಿಸಿದ್ದಾರೆ. ಪರಿಣಾಮಕಾರಿ ಭಾಷೆ ಮತ್ತು ಸರಳಗನ್ನಡದ ಈ ನಾಟಕ ಕನ್ನಡದ ಪ್ರಮುಖ ನಾಟಕವನ್ನಾಗಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ನಟರೆಲ್ಲರೂ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ಶಾಂತಿಯೆನ್ನುವುದು ಎಲ್ಲೂ ಇಲ್ಲದ ವಸ್ತುವಲ್ಲ, ಅದು ಮಾನವನ ಕೈಯಲ್ಲಿಯೇ ಇದೆ ಎನ್ನುವುದನ್ನು ಸಾರುವ ಈ ಕೃತಿ ನಾಟಕ ಮುಗಿದಮೇಲೂ ಸಹ ಪ್ರೇಕ್ಷಕ ತನ್ನ ಆಸನದಿಂದ ಏಳದೇ ಕ್ಷಣ ಹೊತ್ತು ಕುಳಿತು ಆಲೋಚಿಸುವಂತೆ ಮಾಡುತ್ತದೆ. ಪ್ರಕೃತಿಯನ್ನು ಪ್ರೀತಿಸುವುದು ನವಿಲಿನ ಸ್ವಭಾವ. ಅದಕ್ಕೆ ಪ್ರೀತಿ ಬೇಕಾಗಿದೆ. ಸೈತಾನನಾದರೂ ಸರಿ; ಸಹಾಯ ಮಾಡಬೇಕೆನ್ನುವುದು ಅದರ ಜನ್ಮತಃ ಸ್ವಭಾವ. ಆ ಕಾರಣಕ್ಕಾಗಿ ಶಾಪ ಬಿದ್ದರೂ ಅದಕ್ಕೆ ದುಃಖಿಸದೇ ಪ್ರಶಾಂತವಾಗಿರುವ ವಾತಾವರಣದಲ್ಲಿ ವರ್ತಮಾನಕ್ಕೆ ಹೊಂದಿಕೊಂಡು ಇದ್ದುಬಿಡುತ್ತದೆ. ಮಳೆ ಬಂದರೆ ಹಿಗ್ಗು, ಆ ನಲಿವನ್ನು ತನ್ನ ರಚ್ಚೆಬಿಚ್ಚಿ ನರ್ತಿಸಿ ಲೋಕಕ್ಕೆ ಹಂಚುವುದು ನವಿಲಿನ ಸ್ವಭಾವ. ಹೀಗೆ ಒಂದು ನವಿಲಿನ ಮಾಧ್ಯಮದಲ್ಲಿ ಹಿಂಸೆಗೆ ಪ್ರತ್ಯಸ್ತ್ರವನ್ನು ಹೇಳುತ್ತಲೇ ಹೋಗುತ್ತದೆ.

ಯಕ್ಷಗಾನದ ಪ್ರಥಮ ಮಹಿಳಾ ಕವಿಯತ್ರಿ ಕಿಬ್ಬಚ್ಚಲ ಮಂಜಮ್ಮ ಎನ್ನುವ ಅನರಕ್ಷರಸ್ಥೆ “ಜೀವ ಪರಮರ ಕಲ್ಯಾಣ” ಎನ್ನುವ ಹಾಡುಗಬ್ಬವನ್ನು ರಚಿಸಿದ್ದಾಳೆ. ಅದರಲ್ಲಿ ದುಷ್ಟಮತಿ ಮತ್ತು ಶಾಂತಮತಿ ಎನ್ನುವ ರಾಜರುಗಳ ನಡುವೆ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ದುಷ್ಟಮತಿ ಎನ್ನುವ ರಾಜ ಬಿಡುವ ಬಾಣಗಳು ಕಾಮದಸ್ತ್ರ, ಮೋಹದಸ್ತ್ರ, ಮತ್ಸರಾಸ್ತ್ರ, ಲೋಭಾಸ್ತ್ರ, ಮಹಾಕ್ರೋಧಾಸ್ತ್ರವನ್ನು ಬಿಡುತ್ತಾನೆ. ಅದನ್ನು ಶಾಂತಮತಿ ಎದುರಿಸುವುದು ಶಾಂತ ಅಸ್ತ್ರ, ದಮಾಸ್ತ್ರ, ಉಲ್ಲಸಿತಾಸ್ತ್ರ, ವಿವೇಕಾಸ್ತ್ರ, ಸುಧರ್ಮಾಸ್ತ್ರ ಮತ್ತು ಮಹಾಕ್ರೋಧಾಸ್ತ್ರಕ್ಕೆ ಮಹಾಮೌನಾಸ್ತ್ರವನ್ನು ಬಿಟ್ಟು ಅವನನ್ನು ಸೋಲಿಸಿದನಂತೆ. ಒಂದು ಅದ್ಭುತ ವಸ್ತುಗಳನ್ನು ಒಳಗೊಂಡ ಈ ಲೇಖಕಿ ಕಾಲಗರ್ಭದಲ್ಲಿ ಹೂತೇ ಹೋಗಿದ್ದಳು. (ವೇದಾಂತತತ್ತ್ವ ಸಾರ ಕಿಬ್ಬಚ್ಚಲು ಮಂಜಮ್ಮ: ಯಕ್ಷಗಾನದ ಆದ್ಯಪ್ರಸಂಗಕರ್ತೆ; ಲೇ. ನಾರಾಯಣ ಯಾಜಿ) ಅವಳನ್ನು ಹುಡುಕಿ ಸಾರಸ್ವತ ಲೋಕಕ್ಕೆ ತೋರಿದ್ದೆ. ಇಲ್ಲಿ ನವಿಲಿನ ಪುರಾಣವನ್ನು ಹೇಳುವ ಮೂಲಕ ಲೋಕಕ್ಕೆ ಬೇಕಾದ ಶಾಂತಿಗೆ ನಮ್ಮ ಕೊಡುಗೆ ಏನಿರಬೇಕು ಎನ್ನುವುದನ್ನು ನಾಟಕದಾಚೆಗೂ ಯೋಚಿಸುತ್ತಾ ಪ್ರೇಕ್ಷಕ ಹೋಗುವಂತೆ ಮಾಡಿದ ಒಂದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಕೃತಿಯಾಗಿ ಮೂಡಿಬಂತು. ಪ್ರೊ. ಕೆ. ಇ. ರಾಧಾಕೃಷ್ಣರು ಮತ್ತು ಸುರೇಶ ಆನಗಳ್ಳಿಯವರು ಇಬ್ಬರೂ ಅಭಿನಂದನಾರ್ಹರು.