ಇಷಿತಾ ತಮ್ಮ ನಿಲುವುಗಳನುಸಾರ ಶಕುಂತಲೆಯ ಪಾತ್ರವನ್ನ ಇಂದಿನ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಬಹುದಾದರೆ ನಾನ್ಯಾಕೆ ನನ್ನ ಕಣ್ಣೆದುರಿನ ಶಕುಂತಲೆಯ ವಿವರಗಳ ಬಗ್ಗೆ ಹುಡುಗನಲ್ಲಿ ಚರ್ಚಿಸಬಾರದು ಅನಿಸಿತು. ‘ಅಂದಿನ ಶಕುಂತಲೆಗೆ ಆ ಸ್ಥಿತಿ ಒದಗಲಿಕ್ಕೆ ಆಕೆಯ ಮೈಮರೆವು ಹಾಗೂ ದೂರ್ವಾಸರ ಶಾಪ ಕಾರಣ. ದುಷ್ಯಂತ ನೆಪ ಅಷ್ಟೇ. ಈಗ ನೀನು ಹೇಳಿದ್ಯಲ್ಲ… ಆ ಶಾಕುಂತಲೆಯ ಬದುಕು ಕೊಂಚ ಭಿನ್ನ ಕಣಪ್ಪ. ಪಾಪ… ದುಷ್ಯಂತ ಇಲ್ಲಿ ಕನ್ ಫ್ಯೂಸ್ಡ್.’
ಎನ್. ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

ಸಿನಿಮಾದಲ್ಲಿ ತಾನು ಗಟ್ಟಿ ನೆಲೆ ಕಂಡುಕೊಳ್ಳಬೇಕೆಂಬುದಷ್ಟೇ ಅವನ ಹಂಬಲ. ಇನ್ನೂ ಹದಿಹರೆಯ. ಅಥವಾ ಕುದಿಹರೆಯ ಅಂತಂದರೂ ಸರಿ. ಎಲ್ಲಕ್ಕೂ ಮಿಗಿಲಾಗಿ ಅವನು ಡಿಬಾಸ್ ಫ್ಯಾನ್. ಕೆಮರಾ ಮುಂದೆ ನಿಂತು ನಟಿಸಬೇಕೆಂಬ ಆಸೆ. ಆದರೆ ನಿಂತಾಗ ಅಭಿನಯ ಅಷ್ಟು ಸರಾಗವಾಗಿ ಒಡಮೂಡುವಂಥದ್ದಲ್ಲ ಎಂದು ಸ್ವತಃ ಅವನಿಗೇ ಅನಿಸಿದೆ. ಡಿಬಾಸ್ ರ ಹಿನ್ನೆಲೆ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಕೆಮರಾ ಮುಂದೆ ದೃಢವಾಗಿ ಮತ್ತು ವಿಶ್ವಾಸದಲ್ಲಿ ನಿಲ್ಲಲು ನಾಟಕಗಳಲ್ಲಿ ಒಂದಿಷ್ಟು ಅಭಿನಯಿಸಿ ಗೊತ್ತಿದ್ದರೆ ಉತ್ತಮ ಎಂದು ಹಲವು ನಿರ್ದೇಶಕರು ಹೇಳಿರುವುದನ್ನ ಕೇಳಿಸಿಕೊಂಡಿದ್ದಾನೆ. ಅಲ್ಲದೆ ತನ್ನ ಆರಾಧ್ಯ ದೈವ ಡಿಬಾಸ್ ಕೂಡ ಹಿಂದೆ ನೀಸಾನಂನಲ್ಲಿ ಕಲಿತವರು ಎಂಬುದನ್ನೂ ಅವನು ತಿಳಿದುಕೊಂಡಿದ್ದಾನೆ. ಸರಿ ಎಂದು ತಾನೂ ನೀನಾಸಂಗೆ ಅರ್ಜಿ ಹಾಕಿದ್ದಾನೆ. ಆದರೆ ಆಯ್ಕೆ ಆಗಿಲ್ಲ. ನಿರಾಶನಾಗದ ಆತ ನೀನಾಸಂನಲ್ಲಿ ಕಲಿತವರ ಜೊತೆ ಒಂದಷ್ಟು ಕಾಲ ಕಳೆಯುತ್ತ ರಂಗದ ಬಗ್ಗೆ, ಅಭಿನಯದ ಕ್ರಮಗಳ ಬಗ್ಗೆ ಚರ್ಚಿಸಿದ್ದಾನೆ.

ಅವರು ಡಿಬಾಸ್ ಫ್ಯಾನ್ ಗೆ ಅಭಿನಯ ಕಲಿಯುವ ಪೂರ್ವದಲ್ಲಿ ಮೂಲಭೂತವಾಗಿ ನಾಟಕ ಅಂದರೆ ಏನು ಅಂತ ‘ಟೈಂ ಅಂಡ್ ಸ್ಪೇಸ್ʼ ಬಗ್ಗೆ ಪಾಠ ಆರಂಭಿಸಿ ಒಂದಷ್ಟು ರೆಫರೆನ್ಸ್ ಬುಕ್ಸ್ ತಿಳಿಸಿ ಕಣ್ಮರೆಯಾಗಿದ್ದಾರೆ. ಇವನು ಅವರು ಹೇಳಿದ ಕೆಲವು ಪುಸ್ತಕಗಳನ್ನ ಹುಡುಕಿ ಹೆಕ್ಕಿ, ಕೆಲವನ್ನ ಕೊಂಡುಕೊಂಡು ಓದಲು ಆರಂಭಿಸಿದ್ದಾನೆ. ಎಷ್ಟು ಅರ್ಥವಾಯಿತೊ, ಏನು ಅರ್ಥವಾಯಿತೊ ಗೊತ್ತಿಲ್ಲ. ಪುಸ್ತಕ ಎದೆಗವಚಿಕೊಂಡು ನನ್ನ ಬಳಿ ಬಂದು ‘ನಂ ತಾಯಾಣೆ ಈ ‘ಟೈಂ ಅಂಡ್ ಸ್ಪೇಸ್’ ಬಗ್ಗೆ ಅರ್ಥವಾಗ್ತಿಲ್ಲ’ ಅಂದ. ಕಣ್ಣುಗಳಲ್ಲಿ ವಿಷಾದವಿತ್ತು. ಅಭಿನಯ ಕಲಿಯಲಿಕ್ಕೆ ಹೋಗಿ ಏನೇನೊ ತಲೆ ಹೊಗುತ್ತಿದೆಯಲ್ಲ ಎಂಬ ಗೊಂದಲಗಳೂ ಇದ್ದವು. ಅವನು ನನ್ನ ಬಳಿ ಯಾಕೆ ಬಂದನೋ ಗೊತ್ತಿಲ್ಲ. ನಾನು ನಕ್ಕು ‘ದಯವಿಟ್ಟು ಆ ಪುಸ್ತಕ ತೆರೆದು ನನಗೆ ತೋರಿಸಲಿಕ್ಕೆ ಬರಬೇಡ. ಅಲ್ಲಿನ ಥಿಯರಿ ಬಿಟ್ಟಾಕು. ನಾವೇ ಒಂಚೂರು ಯೋಚನೆ ಮಾಡೋಣ’ ಅಂದೆ.

ಡಿಬಾಸ್ ಫ್ಯಾನ್ ಮುಖದಲ್ಲಿ ಕೊಂಚ ಗೆಲುವು ಕಂಡಿತು. ‘ನಿನಗೆ ಟೈಂ ಅಂಡ್ ಸ್ಪೇಸ್ ಅರ್ಥವಾಗಬೇಕು ಅಂದರೆ ನಮ್ಮ ಬಸವಣ್ಣನವರ ವಚನದ ಒಂದು ಸಾಲು ಅರ್ಥವಾಗಬೇಕು ನೋಡು. ಅದು- ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ. ಸ್ಥಾವರವಾದದ್ದು ಕಾಲಾನುಕ್ರಮದಲ್ಲಿ ಅಳಿಸಿಹೋಗುತ್ತದೆ. ಜಂಗಮ ಹಾಗಲ್ಲ. ಅದು ಸದಾ ಜೀವಂತ. ಅದು ಟೈಂ ಹಾಗೂ ಸ್ಪೇಸ್ ಜೊತೆಗೇ ನಿತ್ಯ ಪಯಣಿಸುತ್ತಿರುತ್ತದೆ…’ ಅಂದೆ.

ಅವನು ಸಹಜವಾಗಿ ‘ಹೇಗೆ..?’ ಅಂದ.

(ಇಷಿತಾ ಗಂಗೂಲಿ)

ಯಾವ ಉದಾಹರಣೆ ಕೊಡಲಿ ಎಂದು ನಾನು ಯೋಚಿಸುತ್ತಿದ್ದಾಗ ನನಗೆ ನೆನಪಾದ ಹೆಸರು ಇಷಿತಾ ಗಂಗೂಲಿ. ನಾಟಕಕಾರ್ತಿ ಹಾಗೂ ನಿರ್ದೇಶಕಿಯಾಗಿರುವ ಇಷಿತಾ ತಮ್ಮ ಈಚಿನ ಒಂದು ನಾಟಕ ಜಾಗತಿಕ ಮಟ್ಟದಲ್ಲಿ ಆನ್ ಲೈನ್ ನಲ್ಲಿ ತುಂಬ ಡಿಮ್ಯಾಂಡ್ ಸೃಷ್ಟಿಸಿರುವ ವಿಡಿಯೊ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ನಾಟಕದ ಹೆಸರು ‘Shankantula Awaits’. ಇದು ಶಕುಂತಲೆ ಹಾಗೂ ದುಷ್ಯಂತನ ಕಥೆಯ ಪರಿಷ್ಕೃತ ರೂಪ. ಆಧುನಿಕ ಸಂವೇದನೆಗೆ ಅನುಗುಣವಾಗಿ ಅಳವಡಿಸಿಕೊಂಡಿರುವ ಕಥನ. ಇದು ಜೆಂಡರ್ ಹಾಗೂ ಸಾಮಾಜಿಕ ನಿರೀಕ್ಷಣೆಗಳ ಬಗ್ಗೆ ಕೆಲವು ಮಹತ್ವದ ಪ್ರಶ್ನೆಗಳನ್ನ ಎತ್ತುತ್ತದೆ ಎಂದು ಓದಿದ್ದ ಸಂಗತಿ ನೆನಪಾಯಿತು.

ಇದು ನೆನಪಿಗೆ ನಿಲುಕುತ್ತಿದ್ದಂತೆ ಅದರ ವಿವರಗಳೂ ನಿಚ್ಚಳವಾಗಿ ನೆನಪಾದವು. ದುಷ್ಯಂತ ಮತ್ತು ಶಕುಂತಲೆ ಹೆಸರುಗಳಷ್ಟೇ ಅಂದಿನ ಕಾಲದ್ದು. ಆದರೆ ಕಥಾಹಂದರ ಹೆಣೆದಿರುವುದೆಲ್ಲ ಇಂದಿನ ಜೀವನಗತಿ ಆಧರಿಸಿಯೇ. ಹಾಗಾಗಿ ಈ ಜೋಡಿ ಮುಂಬೈನ ಒಂದು ಪುಸ್ತಕದ ಅಂಗಡಿಯಲ್ಲಿ ಭೇಟಿಯಾಗುತ್ತಾರೆ. ಹುಡುಗಿ ಡಾಕ್ಟರ್; ಹುಡುಗ ಹಾರ್ವರ್ಡ್ ನಲ್ಲಿ ಪ್ರೊಫೆಸರ್. ಇದು ಅವರ ನಡುವಿನ ಕಥೆ ಹಾಗೂ ಅವರ ನಡುವೆ ಉಂಟಾಗಿರುವ ಪ್ರತಿಸ್ಪಂದನದ ಬಗ್ಗೆ ಇರುವ ನಾಟಕ ಎಂದು ಕೇಳಿದ್ದೆ.

ಇದನ್ನೇ ಡಿಬಾಸ್ ಫ್ಯಾನ್ ಗೂ ಹೇಳಿದೆ. ಆತನ ಕಣ್ಣುಗಳಲ್ಲಿ ಚೂರೂ ಅಚ್ಚರಿ ಕಾಣಲಿಲ್ಲ. ಎಲ್ಲ ಸಹಜವಾಗೇ ಇದೆಯಲ್ಲಾ ಎಂಬ ಭಾವ ಇಣುಕುತ್ತಿತ್ತು. ನನಗೆ ಅನುಮಾನವಾಗಿ ಕಾಳಿದಾಸನ ಬಗ್ಗೆ ಕೇಳಿದೆ. ಅವನಿಗೆ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕದ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ದುಷ್ಯಂತ ಹಾಗೂ ಶಕುಂತಲೆ ಆಧುನಿಕ ಸಂವೇದನೆಗೆ ಹೇಗೆ ನಾಟಕದಲ್ಲಿ ತೆರೆದುಕೊಂಡಿದ್ದಾರೆ ಎಂಬುದರ ಅಂದಾಜೂ ಅವನಲ್ಲಿ ಇರಲಿಲ್ಲ.

ಸರಿ ನಾನು ಮೇಷ್ಟ್ರಾಗಿರುವುದೇ ಉಂಟಂತೆ ಎಂದುಕೊಂಡು ಕಾಳಿದಾಸನ ಶಾಕುಂತಲ ನಾಟಕದ ಹಿರಿಮೆ ಗರಿಮೆ ಬಗ್ಗೆ ಕೊಂಚ ಪರಿಚಯಿಸಿದೆ. ಅದೇ ಜೋಡಿ ಕಾಲಾನುಕ್ರಮದಲ್ಲಿ ಜೀವನಕ್ರಮದ ವಿಧಾನದಲ್ಲಿ ಮಾಗುತ್ತ ಮುಂಬೈನಲ್ಲಿರುವ ಒಂದು ಪುಸ್ತಕದಂಗಡಿಯಲ್ಲಿ ಭೇಟಿಯಾಗುತ್ತಾರೆ ಎನ್ನುವವರೆಗೆ ಸಾಗಿ ಬಂದಿದೆ. ಇದೇ ನೋಡು ‘ಟೈಂ ಅಂಡ್ ಸ್ಪೇಸ್ ಅಂದರೆ..’ ಅಂದೆ.

ಕಾಳಿದಾಸನ ಶಾಕುಂತಲ ನಾಟಕದ ವಿವರಗಳನ್ನ ಹೇಳುವಾಗ ಹುಡುಗ ಕಣ್ಣುಗಳನ್ನ ಅರಳಿಸುತ್ತಿದ್ದ. ಅವನ ಮನಸ್ಸನ್ನ ಕಾಳಿದಾಸ ಮೊದಲಿಗೇ ವಿವರಿಸಿರುವ ಜಿಂಕೆಯ ಕುರಿತ ಉಪಮೆಗಳು ಅವನಿಗೆ ತುಂಬ ಹಿಡಿಸಿದ್ದವು. ಆದರೆ ನಾನು ವಿವರಿಸಬೇಕಿರುವುದು ಯಾವುದನ್ನು? ಕಾಲದ ಜೊತೆ ಕೇವಲ ರೂಪಾಂತರವಾಗಿರುವ ಇಷಿತಾ ಗಂಗೂಲಿ ಅವರ ‘ಶಾಕುಂತಲಾ ಅವೈಟ್ಸ್’ ಪ್ರಯೋಗದ ಬಗ್ಗೆ ಎಂದು ನನಗೆ ಮನವರಿಕೆ ಆಯಿತು. ಕಾಳಿದಾಸ ತನ್ನ ಮಹೋನ್ನತ ನಾಟಕ ‘ಅಭಿಜ್ಞಾನ ಶಾಕುಂತಲ’ ದಲ್ಲಿ ಕಾಣಿಸಿರುವ ಸಂಘರ್ಷದ ಸ್ವರೂಪ ಬೇರೆ. ಇಷಿತಾ ಗಂಗೂಲಿ ಅವರು ಕಟ್ಟುತ್ತಿರುವ ಸಂಘರ್ಷ ಬೇರೆ ಇತ್ತು. ‘ಸಮಾಜದಲ್ಲಿ ಚರ್ಚೆಗೆ ಮತ್ತು ವಿಸ್ತರಣೆಗೆ ಒಳಗಾಗಬೇಕಿರುವ ಕೆಲವು ಸಂಗತಿಗಳಿವೆ. ಅದರ ಕುರಿತು ಮಾತಾಡಿದ್ದೇನೆ’ ಎಂದು ಇಷಿತಾ ಹೇಳಿಕೊಂಡಿರುವುದನ್ನ ಓದಿದ್ದೆ. ಅದನ್ನ ಹೇಳೋಣವೆಂದರೆ ಹುಡುಗನಿಗೆ ಯಾಕೋ ಆಸಕ್ತಿ ಇದ್ದಂತೆ ಇರಲಿಲ್ಲ. ಅಥವಾ ಅವನು ಕಾಲದ ಸಂದಿಗ್ಧಗಳ ಬಗ್ಗೆ ಆಸ್ಥೆ ವಹಿಸಿರಲಿಲ್ಲವೋ ಏನೋ. ಅವನನ್ನು ಏನಾದರೂ ಮಾಡಿ ನನ್ನ ಮಾತುಗಳಿಗೆ ಕಿವಿಗೊಡುವಂತೆ ಮಾಡಿಕೊಳ್ಳಬೇಕು ಅನಿಸಿ ಹೇಳಿದೆ- ‘ನೋಡು… ಇಷಿತಾ ಗಂಗೂಲಿ ಈ ನಾಟಕದಲ್ಲಿ ಅಂದಿನ ಶಕುಂತಲೆ ಹಾಗೂ ದುಷ್ಯಂತನ ಪಾತ್ರಗಳ ಮೂಲಕವೇ ‘ ಪ್ರೆಗ್ನೆನ್ಸಿ’ ಬಗ್ಗೆ ಮಾತಾಡಿದ್ದಾರೆ…’ ಅಂದೆ.

ಹುಡುಗನ ಕಿವಿಗಳು ಚುರುಕಾದವು. ‘ಏನೇನು..?’ ಎಂದು ನನ್ನ ಕಡೆಗೆ ತಿರುಗಿದ. ‘ಹೌದು ಆಕೆ ಹೇಳಿರುವ ಮಾತುಗಳನ್ನ ಗಮನಕೊಟ್ಟು ಕೇಳಿಸಿಕೊ- ‘ಸಮಾಜವು ಜನ್ಮ ಕೊಡುವ ಹಕ್ಕುಗಳ ಬಗ್ಗೆ ಮಾತಾಡುತ್ತೆ. ಇದರ ಅರ್ಥ ನಾವು ‘ಸಿಂಗಲ್ ವುಮನ್’ ಗೆ ಇರುವ ಹಕ್ಕುಗಳು ಮತ್ತು ಆಕೆ ಮಗುವನ್ನ ತಾನೇ ಬೆಳೆಸುವ ಬಗ್ಗೆಯೂ ಹಕ್ಕುಗಳನ್ನ ಹೊಂದಿದ್ದಾಳೆ ಎಂದು ಅರ್ಥ ಬರುತ್ತದೆ ಅಲ್ಲವೆ? ಆದರೆ ಇದು ಸಮಾಜದಲ್ಲಿ ನಿಷಿದ್ಧವಾಗೇ ಇದೆ…’ ಅಂದಿದ್ದಾರೆ ನೋಡಪ್ಪ ಅಂದೆ.

ಯಾಕೊ ಹುಡುಗನಿಗೆ ಇಷಿತಾರ ವಿಚಾರಗಳಿಗಿಂತ ಕಾಳಿದಾಸನ ಉಪಮೆಗಳೇ ಚೆಂದ ಕಂಡವೇನೊ ಎಂಬ ಅನುಮಾನ ನನಗೆ ಬರತೊಡಗಿತು. ಆದರೆ ನಾನು ಅವನಿಗೆ ‘ಟೈಂ ಅಂಡ್ ಸ್ಪೇಸ್’ ಬಗ್ಗೆ ಸರಿಯಾಗಿ ಅರ್ಥ ಮಾಡಿಸಬೇಕಾದರೆ ಇಷಿತಾ ಮಂಡಿಸಿರುವ ವಿಚಾರಗಳ ಬಗ್ಗೆ ಪ್ರಸ್ತಾಪಿಸಲೇಬೇಕಿತ್ತು.

ಯಾಕೆಂದರೆ ಇಷಿತಾರಿಗೆ ಈ ವರ್ಷ 2021ವಾದರೂ ಹೆಣ್ಣು ಇನ್ನೂ ಹಲವಾರು ಸಾಮಾಜಿಕ ಸಂಗತಿಗಳಲ್ಲಿ ಭಾಗಿಯಾಗುವಂತಿಲ್ಲ ಎಂಬುದು ಅವರ ವಾದ. ಮತ್ತು ಈ ಸಮಾಜದಲ್ಲಿ ಕೆಲವು ಸಾಂಪ್ರದಾಯಿಕವಾದ ಮತ್ತು ಕೆಲವು ನಿರ್ದಿಷ್ಟ ನಿರೀಕ್ಷೆಗಳನ್ನ ತುಂಬಿಸಲಾಗಿದೆ. ಅಂದಿನ ಶಾಕುಂತಲೆಯ ಕಥೆಯಲ್ಲಿ ಕೂಡ ಹೆಣ್ಣು ವಿವಾಹಪೂರ್ವದಲ್ಲಿ ಮಗುವಿಗೆ ಜನ್ಮ ನೀಡುವುದು ನಿಷಿದ್ಧವಾ
ಗಿತ್ತು ಮತ್ತು ಇಂದಿಗೂ ಅದು ವಾಸ್ತವ ಸತ್ಯವಾಗೇ ಉಳಿದುಕೊಂಡಿದೆ.. ಎನ್ನುವ ಅವರು ತಮ್ಮ ನಾಟಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಅವನು ನಿರ್ದಾಕ್ಷಿಣ್ಯವಾಗಿ ‘ಏ ಅದೆಂಥದು ತೆಗೀರಿ ಗುರುವೇ..’ ಅಂದ. ನಾನು ನಕ್ಕು ‘ಫೆಮಿನಿಸ್ಟ್ ಗಳ ಎದುರು ಹೀಗೆ ಅಂದೀಯಾ ಮಾರಾಯಾ..’ ಎಂದು ನಕ್ಕೆ. ಅದೂ ಅವನಿಗೆ ಅರ್ಥವಾಗಲಿಲ್ಲ.

ವಿಚಾರ ಏನೇ ಇರಲಿ, ಇಷಿತಾ ಗಂಗೂಲಿ ತಮ್ಮ ನಾಟಕದ ತಾಲೀಮು ನಡೆಸಿದ ಬಗೆಯೇ ಒಂದು ಬಗೆಯ ಅಚ್ಚರಿಯ ಸಂಗತಿ. ಈ ನಾಟಕದ ತಾಲೀಮು ಶುರುವಾದದ್ದು ಕೋವಿಡ್ ಸೋಂಕು ಹೆಚ್ಚಾಗಿದ್ದ ಸಮಯದಲ್ಲಿ. ಮತ್ತು ಇಷಿತಾ ತಮ್ಮ ನಾಟಕಕ್ಕೆ ನಿಗದಿ ಮಾಡಿದ್ದ ನಟ ನಟಿ ಬೇರೆಬೇರೆ ಖಂಡಗಳಲ್ಲಿ ವಾಸವಾಗಿದ್ದರು. ಪುರ್ವ ಬೇಡಿ ಹಾಗೂ ಸಮರ್ಥ್ ಚಕ್ರವರ್ತಿ ದುಷ್ಯಂತ ಹಾಗೂ ಶಕುಂತಲೆ ಪಾತ್ರಗಳನ್ನ ನಿರ್ವಹಿಸಬೇಕಿದ್ದ ನಟ ಹಾಗೂ ನಟಿ. ಈ ಇಬ್ಬರಿಗೂ ತಾಲೀಮಿಗೆ ಬೆಳಗ್ಗೆ ಪ್ರಶಸ್ತವಾದ ಸಮಯ ಅನಿಸಿದ್ದರಿಂದ ಇಷಿತಾ ಬೆಳಗಿನ ಜಾವ ನಾಲ್ಕಕ್ಕೆ ಎದ್ದು ತಾಲೀಮಿಗೆ ಸಿದ್ಧಮಾಡಿಕೊಂಡ ನಾಟಕ ಇದು. ಮತ್ತು ತಾಲೀಮು ಕೂಡ ವಿಡಿಯೋ ಕಾಲ್ ನಲ್ಲೇ ನಡೆದಿದೆ ಎಂದು ಅವನಿಗೆ ವಿವರಿಸುತ್ತಿದ್ದೆ. ಆದರೂ ಇಂದಿನ ಸಂವೇದನೆಯ ಯಾವ ವಿವರಗಳೂ ಅವನನ್ನ ಅಷ್ಟು ಸೆಳೆದಂತೆ ನನಗೆ ಅನಿಸಲೇ ಇಲ್ಲ.

ನಾನು ಇದು ಒಳ್ಳೆ ಕಷ್ಟಕ್ಕೆ ಬಂತಲ್ಲ ಎಂದು ಒಳಗೊಳಗೇ ಪೇಚಾಡಿಕೊಳ್ಳುತ್ತಿರುವಾಗಲೇ ಅವನೇ ಮತ್ತೆ ‘ಇಷಿತಾ ಹೇಳ್ತಿದ್ದಾರಲ್ಲ.. ನಾನೂ ಆ ತರಹದ ಶಾಕುಂತಲೆಯನ್ನ ನೋಡಿದ್ದೇನೆ. ಆದರೆ ಅವರು ಡಾಕ್ಟರ್ ಅಲ್ಲ ಅಷ್ಟೇ..’ ಅಂದ.

ನನಗೆ ಕುತೂಹಲವಾಯಿತು. ‘ಡಾಕ್ಟ್ರೇ ಆಗಿರಬೇಕು ಅಂತೇನಿಲ್ಲ.

ನಿನಗೂ ಆಕೆಯ ಬದುಕಿನಲ್ಲಿ ಶಕುಂತಲೆ ಕಾಣ್ತಿದ್ದಾಳೆ ಅಂದರೆ ಈ ಟೈಂ ಅಂಡ್ ಸ್ಪೇಸ್ ಟ್ರಾವಲ್ ಮಾಡುವ ಬಗೆ ಕೂಡ ಈಗೀಗ ಅರ್ಥವಾಗ್ತಿದೆ ಅಂತಾಯ್ತು’ ಅಂದೆ.

ಈ ನನ್ನ ಮಾತೂ ಅವನನ್ನ ತಾಕಿದಂತೆ ಅನಿಸಲಿಲ್ಲ. ಅವನಿಗೆ ಕಾಲದ ಗತಿಯಲ್ಲಿ ಪಾತ್ರ ಸನ್ನಿವೇಶವನ್ನ ಅನಲೈಸ್ ಮಾಡಿ ನೋಡುವ ಬಗ್ಗೆ ಅಷ್ಟು ಆಸಕ್ತಿ ಇದ್ದಂತೆ ಇರಲಿಲ್ಲ. ಆದರೆ ಇಷಿತಾ ಕಟ್ಟಿಕೊಟ್ಟ ವಿವರಗಳಂತಿದ್ದ ಶಕುಂತಲೆಯನ್ನ ಬೇರೆ ಪ್ರೊಫೆಷನ್ ನಲ್ಲಿ ನೋಡಿದ್ದ ಅಷ್ಟೇ..

ಸರಿ ಸುಮ್ಮನೆ ಈ ರೂಪಾಂತರ ಪ್ರಕ್ರಿಯೆ ಬಗ್ಗೆ ಅವನ ತಲೆ ಕೊರೆಯುವುದು ಬೇಡ ಅನಿಸಿ ಅವನ ದಾರಿಗೇ ನಡೆದು ‘ಯಾರಪ್ಪ ಆ ಶಕುಂತಲೆ..?’ ಅಂತಂದೆ.

ಅವನು ಥಿಯೇಟರ್ ಸರ್ಕಲ್ ನಲ್ಲಿ ಬಹಳ ಕಾಲದಿಂದ ಇಲ್ಲದಿದ್ದರೂ ಅವನು ಶಕುಂತಲೆ ಎಂದು ಹೇಳಿದ ಹೆಣ್ಣಿನ ಹೆಸರು ಕೇಳಿ ನಾನು ಶಾಕ್ ಆದೆ. ಯಾಕೆಂದರೆ ಆಕೆ ನನಗೂ ಪರಿಚಯವಿದ್ದರು. ‘ಓ ಆಕೆನಾ.. ಬಿಡುಬಿಡು…’ ಅನ್ನುತ್ತಿರುವಾಗಲೇ ಅವನು ಸೂಚಿಸಿದ ಆ ಶಕುಂತಲೆಯ ಖಾಸಗಿ ಬದುಕಿನ ವಿವರಗಳು ನನ್ನ ಕಣ್ಣ ಮುಂದೆ ತೆರೆದುಕೊಳ್ಳಲು ಆರಂಭಿಸಿದವು. ಎಲ್ಲವೂ ನಾನು ಕೇಳಿದ್ದ ಸಂಗತಿಗಳೇ ಹೊರತು ಕಂಡಂಥವು ಅಲ್ಲ. ಆಕೆ ಇವನಿಗೆ ಶಕುಂತಲೆಯ ಹಾಗೆ ಹೇಗೆ ಕಂಡಳು ಎಂದು ಯೋಚಿಸುತ್ತಾ ಕೂತೆ. ಅಂದಿನ ಮತ್ತು ಇಂದಿನ ಶಕುಂತಲೆಯರ ಬದುಕಿನ ಸಮೀಕರಣ ಹಾಗೂ ವಿವರಗಳು ಹೇಗೆ ಸಮಾನವಾಗಿವೆ ಎಂದು ಹುಡುಕಲು ಆರಂಭಿಸಿದೆ.

ಅಚ್ಚರಿಯ ಸಂಗತಿ ಅಂದರೆ ಆತ ಸೂಚಿಸಿದ ಮತ್ತೊಬ್ಬ ಶಕುಂತಲೆಯ ಬದುಕೂ ಥೇಟ್ ಅದೇ ರೀತಿಯಲ್ಲಿತ್ತು. ಆದರೆ ಆತನಿಗಿಂತ ಆ ಶಕುಂತಲೆಯ ಬಗ್ಗೆ ಚೆನ್ನಾಗಿ ತಿಳಿದಿದ್ದ ನಾನು ಅಲ್ಲೀವರೆಗೆ ಕೇವಲ ಕಾಳಿದಾಸನ ಶಕುಂತಲೆಯ ಚಿತ್ರಣದಲ್ಲೇ ಮುಳುಗಿದ್ದೆ. ಅವನು ಹೇಳಿದ್ದು ಕೇಳಿಸಿಕೊಂಡು ‘ಪರವಾಗಿಲ್ಲವೇ ಹುಡುಗ ನನಗಿಂತ ವಾಸಿ’ ಅನಿಸತೊಡಗಿತು.

(ಕಲಾಕೃತಿ: ರಾಜಾ ರವಿವರ್ಮ)

ನಿನಗೆ ಟೈಂ ಅಂಡ್ ಸ್ಪೇಸ್ ಅರ್ಥವಾಗಬೇಕು ಅಂದರೆ ನಮ್ಮ ಬಸವಣ್ಣನವರ ವಚನದ ಒಂದು ಸಾಲು ಅರ್ಥವಾಗಬೇಕು ನೋಡು. ಅದು- ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ. ಸ್ಥಾವರವಾದದ್ದು ಕಾಲಾನುಕ್ರಮದಲ್ಲಿ ಅಳಿಸಿಹೋಗುತ್ತದೆ. ಜಂಗಮ ಹಾಗಲ್ಲ. ಅದು ಸದಾ ಜೀವಂತ.

ಆದರೂ ನನಗೆ ಏನೂ ಗೊತ್ತಿಲ್ಲವೆಂಬಂತೆ ನಟಿಸುತ್ತ ‘ಅವರ ಬದುಕು ಹೇಗೆ ಶಕುಂತಲೆ ತರ ಕಾಣ್ತು ನಿನಗೆ..?’ ಎಂದು ಕೇಳಿದೆ. ನನಗೆ ಗೊತ್ತಿಲ್ಲದ ಸಂಗತಿಗಳನ್ನ ಅವನು ತಿಳಿದಿರಬಹುದು ಎಂಬುದು ನನ್ನ ನಿರೀಕ್ಷೆ ಆಗಿತ್ತು.

ಅವನು ತುಂಬ ಉತ್ಸಾಹಿತನಾಗಿ ಆ ಮತ್ತೊಬ್ಬ ಶಕುಂತಲೆಯ ವಿವರಗಳನ್ನು ಆರಂಭಿಸಿದ. ಆರಂಭದ ವಿವರಗಳು ನನಗೆ ತಿಳಿದೇ ಇದ್ದವು. ಆದರೆ ನಂತರದ ಅವನ ವಿವರಗಳು ನನ್ನನ್ನು ದಂಗುಬಡಿಸಿದವು. ಅವುಗಳಿಗೆ ಪ್ರತಿಕ್ರಿಯೆ ತೋರಲೋ ಬೇಡವೋ ಎಂದು ನಾನು ಅಳುಕುತ್ತಲೇ ಅವನ ವಿವರಗಳಿಗೆ ಕಿವಿಯಾಗುತ್ತಾ ಕೂತೆ.

ಇಷಿತಾ ತಮ್ಮ ನಾಟಕದಲ್ಲಿ ‘ಪ್ರೆಗ್ನೆನ್ಸಿ..’ ಬಗ್ಗೆ ಚರ್ಚಿಸಿದ್ದರೆ ಆ ಹುಡುಗನ ವಿವರಗಳಲ್ಲಿದ್ದ ಶಕುಂತಲೆಗೆ ಆಗಲೇ ಮಗು ಇತ್ತು. ದುಷ್ಯಂತ ದೂರವಾಗಿದ್ದ. ಆದರೆ ಯಾರ ಶಾಪದಿಂದಲೂ ಅಲ್ಲ. ಬೇರೆಬೇರೆ ಕಾರಣಗಳಿಂದಾಗಿ ಅಷ್ಟೇ. ಆ ಕಾರಣಗಳು ನನಗೆ ಸ್ಪಷ್ಟವಾಗಿ ತಿಳಿದಿದ್ದವು. ಆದರೆ ಅವನಲ್ಲಿ ಅವುಗಳ ಬಗ್ಗೆ ಚರ್ಚಿಸಲು ಮುಂದಾಗಲಿಲ್ಲ. ನನಗೆ ಗೊತ್ತಿದ್ದ ವಿವರಗಳಲ್ಲಿ ಆಕೆ ಶಕುಂತಲೆ ಆಗಿರುವ ಬಗೆಗೂ ಆತ ಕಟ್ಟಿಕೊಡುತ್ತಿರುವ ವಿವರಗಳಲ್ಲಿ ಶಕುಂತಲೆ ಆಗಿರುವ ಬಗೆಗೂ ತುಂಬ ವ್ಯತ್ಯಾಸಗಳಿದ್ದವು. ಮಹಾಭಾರತದಿಂದ ಹೆಕ್ಕಿ ತೆಗೆದು ಕಡೆದ ಪಾತ್ರವೊಂದು ಹೇಗೆ ಕಾಲಾನುಕ್ರಮದಲ್ಲಿ ಬೇರೆಬೇರೆ ಬಗೆಯಲ್ಲಿ ಪಯಣ ಆರಂಭಿಸಿ ಹಲವು ಬಗೆಗಳಲ್ಲಿ ತನ್ನ ಅಸ್ತಿತ್ವ ಕಂಡುಕೊಂಡು ಬರುತ್ತಿದೆ ಎಂದು ಯೋಚಿಸುತ್ತಾ ಕೂತೆ. ಈ ಬಗೆಯಲ್ಲಿ ಯೋಚಿಸುವುದು ಹುಡುಗನಿಗೆ ಅಷ್ಟು ಒಗ್ಗಿರಲಿಲ್ಲವಾದ್ದರಿಂದ ನಾನು ಹೆಚ್ಚು ವಿವರಿಸಲಿಕ್ಕೆ ಹೋಗಲಿಲ್ಲ. ಅವನು ಕೇಳುವಂತೆಯೂ ಕಾಣಲಿಲ್ಲ. ಆದರೆ ಕಣ್ಣೆದುರಿನ ಒಂದು ಆಕೃತಿ ಶಕುಂತಲೆಯಾಗಿ ಕಾಣುವ ಬಗೆಯೇ ಕಾಲದ ವಿಚಿತ್ರವನ್ನು ಸೂಚಿಸಿದಂತೆ ನನಗೆ ಅನಿಸಿತು.

ಇಷಿತಾ ತಮ್ಮ ನಿಲುವುಗಳನುಸಾರ ಶಕುಂತಲೆಯ ಪಾತ್ರವನ್ನ ಇಂದಿನ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಬಹುದಾದರೆ ನಾನ್ಯಾಕೆ ನನ್ನ ಕಣ್ಣೆದುರಿನ ಶಕುಂತಲೆಯ ವಿವರಗಳ ಬಗ್ಗೆ ಹುಡುಗನಲ್ಲಿ ಚರ್ಚಿಸಬಾರದು ಅನಿಸಿತು. ‘ಅಂದಿನ ಶಕುಂತಲೆಗೆ ಆ ಸ್ಥಿತಿ ಒದಗಲಿಕ್ಕೆ ಆಕೆಯ ಮೈಮರೆವು ಹಾಗೂ ದೂರ್ವಾಸರ ಶಾಪ ಕಾರಣ. ದುಷ್ಯಂತ ನೆಪ ಅಷ್ಟೇ. ಈಗ ನೀನು ಹೇಳಿದ್ಯಲ್ಲ… ಆ ಶಾಕುಂತಲೆಯ ಬದುಕು ಕೊಂಚ ಭಿನ್ನ ಕಣಪ್ಪ. ಪಾಪ… ದುಷ್ಯಂತ ಇಲ್ಲಿ ಕನ್ ಫ್ಯೂಸ್ಡ್. ಜೊತೆಗೆ ಪುವರ್ ಫೆಲೊ. ಮತ್ತು ಶಕುಂತಲೆಗೆ ಇಲ್ಲಿ ಯಾರ ಶಾಪವೂ ಇಲ್ಲ. ಆಕೆಗೆ ದುಷ್ಯಂತನನ್ನ ಶಪಿಸುವುದೇ ಕೆಲಸ. ಅವಳ ಶಾಪಗಳಿಂದ ಬೇಸತ್ತು ಅವನು ದೂರವಾಗಿದ್ದಾನೆ. ಆದರೆ ಇಂದಿನ ಶಕುಂತಲೆ ಮಿಡುಕುತ್ತಾ ತನ್ನ ಬದುಕಿನ ಸಂಗತಿಗಳನ್ನ ಡಿಕನ್ಸ್ಟ್ರಕ್ಟ್ ಮಾಡಿಕೊಳ್ಳುತ್ತ ಕುದಿಯುತ್ತಿದ್ದಾಳೆ…’ ಅಂದೆ.

(ಕಾಳಿದಾಸ ಕವಿ)

‘ನಿನಗೆ ಯಾರಿಷ್ಟ..? ಕಾಳಿದಾಸ ಕಟ್ಟಿಕೊಟ್ಟ ಶಕುಂತಲೆಯೋ ಅಥವಾ ಮಾತೆತ್ತಿದರೆ ಶಾಪ ಹಾಕಿ ಬದುಕ್ತಿರೋ ನಮ್ಮ ಕಣ್ಣೆದುರಿನ ಶಕುಂತಲೆಯೋ..?’ ಅಂತ ಕೇಳಿದ.

ನಾನು ನಕ್ಕು ‘ನನಗೆ ಕಾಳಿದಾಸನ ಶಾಕುಂತಲ ನಾಟಕ ಕೃತಿ ಇಷ್ಟ ನೋಡು..’ ಅಂದೆ. ಕೆಲಕ್ಷಣ ಬಿಟ್ಟು ಬಿಯಾಂಡ್ ಎವೆರಿಥಿಂಗ್ ನನಗೆ ಕಾಳಿದಾಸನ ಉಪಮೆಗಳು ವಿಪರೀತ ಇಷ್ಟ..’ ಅಂದೆ.

‘ಎಲ್ಲಿ ಒಂದು ಸಾಲು ಅಂಗನ್ನು ಗುರುವೆ..’ ಅಂದ ಅವನು.

ಉತ್ತೇಜಿತನಾದ ನಾನು ಕಾಳಿದಾಸನ ‘ಋತುಸಂಹಾರ’ ಖಂಡಕಾವ್ಯದಲ್ಲಿನ ಒಂದು ಸಾಲು ನೆನಪಿಸಿಕೊಂಡೆ. ಮೊದಲನೇ ಸರ್ಗದ ಮೂರನೇ ಶ್ಲೋಕವನ್ನು ಅನ್ವಯದಲ್ಲಿ ಹೀಗೆ ಓದಿಕೊಬೇಕು ಎಂದು ಹೇಳಿದೆ-

‘ಕಾಮಿನಃ ಶುಚೌ ನಿಶೀಥೇ ಸುವಾಸಿತಂ ಮನೋಹರಂ ಹರ್ಮ್ಯತಲಂ
ಪ್ರಿಯಾ ಮುಖೋಚ್ಛ್ವಾಸ ವಿಕಂಪಿತಂ ಮಧು ಮದನಸ್ಯ ದೀಪನಂ
ಸುತಂತ್ರೀಗೀತಂ ಅನುಭವಂತಿ’

ಈ ಸಾಲುಗಳ ಅರ್ಥ ಗೊತ್ತಿಲ್ಲದ ಆತ ‘ಆಹ್..!’ ಅಂದ.

ನಾನು ನಕ್ಕೆ. ಕಾಳಿದಾಸನ ಈ ಖಂಡಕಾವ್ಯದ ಹಿನ್ನೆಲೆ ಬಗ್ಗೆ ಅವನಲ್ಲಿ ಚೂರೂ ಮಾಹಿತಿ ಇರಲಿಲ್ಲ. ಋತುಗಳ ಬಗ್ಗೆ ಕಾಳಿದಾಸ ಕಟ್ಟಿಕೊಡುವ ವಿವರಣೆಗಳ ಬಗ್ಗೆಯೂ ಚುಟುಕಾಗಿಯೂ ಅವನು ತಿಳಿದಿರಲಿಲ್ಲ. ಹಾಗಾಗಿ ಕೊಂಚ ಹಿನ್ನೆಲೆ ಮತ್ತು ಅದರ ಮಹತ್ವದ ಬಗ್ಗೆ ಹೇಳದೆ ನನಗೆ ಇಷ್ಟವಾದ ಶ್ಲೋಕದ ಬಗ್ಗೆ ಹೇಗೆ ಹೇಳುವುದು ಎಂದು ಯೋಚಿಸಿ ಚುಟುಕಾಗಿ ವಿವರಿಸಿದೆ. ಮತ್ತು ನಾನು ತುಂಬ ಇಷ್ಟಪಡುವ ‘ಪ್ರಿಯಾ ಮುಖೋಚ್ಛಾಸ ವಿಕಂಪಿತಂ..’ ಅಂದರೆ ಏನು ಅಂತ ಹೇಳಲು ಆರಂಭಿಸಿದೆ.

‘ನೋಡು ಗುರುವೇ… ನಮಗೆ ಬೇಸಿಗೆ ಕಾಲ ಅಂದರೆ ಆ ವಿಪರೀತ ತಾಪ ಸಹಿಸಲು ಬಾರದ ಒಂದು ಕಾಲಘಟ್ಟ ಅಷ್ಟೆ. ಕೆಲವರು ಎ.ಸಿ. ಹಾಕಿಕೊಂಡು ಸುಮ್ಮನಾಗುತ್ತಾರೆ. ಕೆಲವರು ಫ್ಯಾನ್ ಸ್ವಿಚ್ ಒತ್ತಿ ಅದರ ಕೆಳಗೆ ಮಲಗುವವರು ಗೊಣಗುತ್ತಲೇ ಇರುತ್ತಾರೆ. ಕಾಳಿದಾಸ ಹಾಗಲ್ಲ. ಬೇಸಿಗೆಯನ್ನ ಎಂಜಾಯ್ ಮಾಡುವ ಬಗೆ ಕಲಿಸಿದ್ದಾನೆ ನೋಡು. ಆ ಶ್ಲೋಕದ ಅರ್ಥ ಏನು ಅಂದರೆ- ‘ಗ್ರೀಷ್ಮ ಋತುವಿನ ರಾತ್ರಿ ಸಮಯದಲ್ಲಿ ವಿಲಾಸಿ ಜನರು ಸುಗಂಧ ದ್ರವ್ಯವನ್ನು ಸಿಂಪಡಿಸಿದ ಮನೋಹರವಾದ ಪ್ರಾಸಾದದ ಮೇಲ್ಛಾವಣಿಗಳಲ್ಲಿ ತಮ್ಮ ಪ್ರಿಯತಮೆಯರ ಮುಖದ ಶ್ವಾಸದಿಂದ ಕಂಪಿತವಾದ ಮದ್ಯವನ್ನು ಆಸ್ವಾದಿಸುತ್ತ ಕಾಮೋದ್ದೀಪಕವಾದ ವೀಣಾವಾದನಯುಕ್ತವಾದ ಸಂಗೀತ ಸುಖವನ್ನನುಭವಿಸುತ್ತಾನೆ..’

ಹಿಂದೆ ನಾನು ಓದಿದ್ದ ಕೆ.ನಾರಾಯಣ ಭಟ್ಟರು ಅನುವಾದಿಸಿದ ಸಾಲನ್ನ ಹಾಗೇ ಅವನಿಗೆ ದಾಟಿಸಿ ಮುಖ ನೋಡಿದೆ. ಅವನ ಕಣ್ಣುಗಳು ಹೊಳೆಯುತ್ತಿದ್ದವು. ನನ್ನನ್ನು ‘ಪ್ರಿಯಾ ಮುಖೋಚ್ಛ್ವಾಸ ವಿಕಂಪಿತಂ’ ಅವನನ್ನೂ ಕಲಕಿತ್ತು. ‘ಮದ್ಯ ಪ್ರಿಯತಮೆಯರ ಮುಖದ ಶ್ವಾಸದಿಂದ ವಿಕಂಪಿತ.. ಆಹ್..!’ ಅಂದ. ನಾನು ನಕ್ಕು ‘ಸುಮ್ಮನೆ ಅಲ್ಲ ಕಾಳಿದಾಸ ಅಂದರೆ…’ ಅಂದೆ.

ಅವನು ಉತ್ಸಾಹಿತನಾದ. ‘ಓದು ಗುರುವೇ… ಗುರುವೇ..’ ಎಂದು ಗಂಟುಬಿದ್ದ. ಕಾಳಿದಾಸನನ್ನ ಓದಿ ಹೇಳಲಾರೆ ಎಂದು ಹೇಳುವುದು ಹೇಗೆ? ಸರಿ ಅಂದೆ. ಸಂಸ್ಕೃತದ ಟೆಕ್ಸ್ಟ್ ಹಿಡಿದು ವಾಕ್ಯಾರ್ಥಕ್ಕೆ ಕೂತರೆ ಅವನು ಹೇಗೆ ಸ್ವೀಕರಿಸುತ್ತಾನೋ ಎಂಬ ಅನುಮಾನದಲ್ಲಿ ಮಹಾಬಲ ಸೀತಾಳಭಾವಿ ಅವರು ತುಂಬ ಸರಳ ಮತ್ತು ಸುಂದರವಾಗಿ ಅನುವಾದಿಸಿರುವ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕದ ಪುಸ್ತಕ ಹಿಡಿದು ಕೂತೆ. ಜಿಂಕೆಯ ಬಗ್ಗೆ ಮೊದಲಿಗೇ ಪ್ರಸ್ತಾಪಿಸಿದ್ದೆನಾದ್ದರಿಂದ ಅದರ ಬಗ್ಗೆ ಚುಟುಕಾಗಿ ವಿವರಿಸುತ್ತ ದುಷ್ಯಂತ ರಾಜ ಕಾಮಪೀಡಿತನಾದಾಗ ಹೇಳುವ ಮಾತುಗಳನ್ನ ಓದಲು ಆರಂಭಿಸಿದೆ.

“ತಪಸ್ಸಿನ ಶಕ್ತಿಯೇನೆಂಬುದು ನನಗೆ ಗೊತ್ತು. ಆ ಯುವತಿ ಪರಾಧೀನಳು ಎಂಬುದೂ ನನಗೆ ತಿಳಿದಿದೆ. ಆದರೂ ಅವಳ ಬಳಿಗೆ ಹೋಗಿರುವ ನನ್ನ ಹೃದಯವನ್ನು ಮರಳಿ ಹಿಂಪಡೆಯಲು ಅಸಮರ್ಥನಾಗಿದ್ದೇನೆ. (ಕಾಮಬಾಧೆಯನ್ನು ನಟಿಸಿ) ಭಗವಾನ್ ಕಾಮದೇವ, ವಿಶ್ವಾಸಕ್ಕೆ ಯೋಗ್ಯರಾದ ನೀನು ಮತ್ತು ಚಂದ್ರ ಕೂಡ ಕಾಮಿಜನರಿಗೆ ಮೋಸ ಮಾಡುತ್ತೀರಿ. ಏಕೆಂದರೆ- ನಿನ್ನ ಪುಷ್ಪಬಾಣತ್ವ ಮತ್ತು ಚಂದ್ರನ ಶೀತಕಿರಣತ್ವ ಎರಡೂ ನನ್ನಂಥವರ ಪಾಲಿಗೆ ಸುಳ್ಳು ಎನ್ನಿಸುತ್ತಿದೆ. ಚಂದ್ರನು ತಂಪು ಕಿರಣಗಳಿಂದ ಬೆಂಕಿ ಉಗುಳುತ್ತಾನೆ ಮತ್ತು ನೀನು ಹೂವಿನ ಬಾಣವನ್ನು ವಜ್ರದಷ್ಟು ಕಠಿಣವಾಗಿ ಪ್ರಯೋಗಿಸುತ್ತೀಯೆ.’

ಹುಡುಗ ಥ್ರಿಲ್ ಆಗಿ ‘ಆಹ್ ಆಹ್..’ ಎನ್ನಲು ಆರಂಭಿಸಿದ. ನಾನು ನಕ್ಕೆ. ಅದೇ ಕ್ಷಣ ನನಗೆ ಅನಿಸಿದ್ದೇನೆಂದರೆ ಈ ಕಾಮ ಮುಂದೆ ಲೀಡ್ ಆಗಿ ಅದು ಇಷಿತಾರ ಅಡಾಪ್ಟೇಷನ್ ನಾಟಕದಲ್ಲಿ ‘ಪ್ರೆಗ್ನೆನ್ಸಿ’ವರೆಗೆ ಚರ್ಚೆಗೆ ಒಳಗಾಗಿದೆ…


ಇದನ್ನ ಆ ಹುಡುಗನಿಗೆ ಹೇಳಲು ಮುಂದಾದೆ. ‘ಅದು ಬಿಡು ಗುರುವೇ… ಮುಂದೆ ಓದು..’ ಅಂದ. ಒಂದು ಕಾಲಕ್ಕೆ ತನ್ನನ್ನು ಕಟ್ಟಿಕೊಂಡಂತಿರುವ ಹುಡುಗ ಮತ್ತು ಇಂದಿನ ಸಂವೇದನೆಗೆ ಅನುಗುಣವಾಗಿ ಯೋಚಿಸಿ ನಾಟಕ ಕಟ್ಟಿರುವ ಇಷಿತಾ ಗಂಗೂಲಿ- ಇಬ್ಬರನ್ನೂ ನೆನೆಸಿಕೊಂಡು ನಗುತ್ತ ಶಾಕುಂತಲ ನಾಟಕದ ಓದು ಮುಂದುವರೆಸಿದೆ…