ಸುಂದರವಾದ ಇಂಟೀರಿಯರ್ ಡೆಕೊರೇಶನ್ ಮಾಡಿದ ಅಡುಗೆ ಮನೆಯಲ್ಲಿ ದಿನಸಿ ಸಾಮಾನು ತುಂಬಿಡಲು ಎಷ್ಟೊಂದು ಚಂದದ ಡಬ್ಬಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಅತ್ತ ಸುರಿಯುತ್ತಿರುವ ಭಾರೀ ಮಳೆಯೂ, ಕೃಷಿ ಕ್ಷೇತ್ರದ ಕುರಿತು ನಡೆಯುತ್ತಿರುವ ಚರ್ಚೆಗಳು, ಏರುಪೇರಾದ ಹವಾಮಾನದ ಆತಂಕಗಳು ಯಾಕೋ ಕಂಗಾಲು ಮಾಡುತ್ತಿವೆ. ಅಂತಹುದೇ ಆತಂಕಗಳನ್ನು ನಮ್ಮ ನಡುವಿನ ಕತೆ, ಕಾದಂಬರಿಗಳೂ ಬಿಂಬಿಸಿವೆಯಲ್ಲ! ಆಹಾರದ ಬಟ್ಟಲಿನ ಸುತ್ತ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿ, ತಮ್ಮ ಬರಹವನ್ನು ಸಿದ್ಧಪಡಿಸಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

 

ಮಂಗಳೂರಿನಿಂದ ಗೋವಾಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭಟ್ಕಳ, ಹೊನ್ನಾವರ, ಕುಮಟಾ ರಸ್ತೆಯಂಚಿನ ಉದ್ದಕ್ಕೂ ಬಾರೀ ವಾಹನಗಳು ಸಾಲುಗಟ್ಟಿ ಯಾವುದೋ ಉದ್ದೇಶದಿಂದ ನಿಂತಂತೆ ಭಾಸವಾಗುತ್ತಿತ್ತು. ಅವು ಟ್ರಕ್ಕು ಲಾರಿಗಳಲ್ಲ, ನಿಲ್ಲಿಸಿದ ಬಸ್ಸುಗಳಲ್ಲ, ಕ್ರೇನು, ಜೆಸಿಬಿ ಅಥವಾ ಕಾರುಗಳೂ ಅಲ್ಲ. ಭತ್ತದ ಕಟಾವಿಗೆಂದು ಬಂದ ಯಂತ್ರಗಳು, ನೀರು ತುಂಬಿದ ಭತ್ತದ ಗದ್ದೆಯೊಳಗೆ ಇಳಿಯಲಾರದೇ ತಬ್ಬಿಬ್ಬಾಗಿ ರಸ್ತೆಯಲ್ಲಿಯೇ ಸಾಲಾಗಿ ಸುಮ್ಮನೇ ನಿಂತುಬಿಟ್ಟಿದ್ದವು. ಅತ್ತ ತೆನೆತುಂಬಿ ಬಾಗಿರುವ ಗಿಡಗಳು ಮಳೆಯ ಹೊಡೆತಕ್ಕೆ ನೆಲಕಚ್ಚಿ ಹೋಗಿದ್ದವು. ಮಳೆ ನೀರೋ ಗದ್ದೆಗಳ ಮೇಲೆಯೇ ತೆನೆಗಳ ಸಮೇತ ಪ್ರವಾಹವಾಗಿ ಕೊಚ್ಚಿ ಹೋಗುತ್ತಿತ್ತು.

ಸಾಮಾನ್ಯವಾಗಿ ಭತ್ತದ ಗದ್ದೆಗಳೇ ಹೆಚ್ಚಾಗಿರುವ ಈ ಹಾದಿಯ ಇಕ್ಕೆಲಗಳ ಊರುಗಳು, ಮಳೆಗಾಲ ಮುಗಿಯುತ್ತಿದ್ದಂತೆಯೇ, ಹಸಿರಾಗಿ, ಇನ್ನೇನು ಕೊಯ್ಲಿನ ಸಮಯ ಬಂತೆಂದರೆ ಮೈತುಂಬ ಆಭರಣ ಧರಿಸಿದ ಮದುವಣಗಿತ್ತಿಯಂತೆ ಹೊಂಬಣ್ಣ ಹೊದ್ದು ನಗುತ್ತಿದ್ದವು. ಈಗ ನೋಡಿದರೆ ಊರಿಗೆ ಊರೇ ಪ್ರವಾಹ ತುಂಬಿದ ಅಥವಾ ಕೊಳೆತ ಬೈಹುಲ್ಲಿನ ವಾಸನೆ ತುಂಬಿದ ಮೌನ ಬಯಲುಗಳಂತೆ ಕಾಣುತ್ತಿವೆ. ಕಟಾವಿಗೆಂದು ಯಂತ್ರಗಳನ್ನು ಬಾಡಿಗೆಗೆ ತರಿಸಿದ್ದ ರೈತ, ಹೊನ್ನಾವರದ ಧನಂಜಯ ನಾಯಕ್, ಯಂತ್ರದ ಮಾಲೀಕರನ್ನು, ‘ದಯವಿಟ್ಟು ಮನೆಯ ಹತ್ರ ಬರಬೇಡಿ. ಬಸ್ ಸ್ಟಾಂಡ್ ಹತ್ತಿರದ ಚಹಾದಂಗಡಿಗೆ ಬನ್ನಿ, ಎಲ್ಲ ಅಲ್ಲಿಯೇ ಮಾತನಾಡೋಣ’ ಎಂದು ಫೋನಿನಲ್ಲಿ ಗೋಗರೆಯುತ್ತಿದ್ದರು. ಕರ್ಕಿಯ ಸಮೀಪವಿರುವ ತಮ್ಮ ಮನೆಯಿಂದ ಅವರು ಪೇಟೆಗೆ ಬರಲು ತುಸು ನಡೆಯಬೇಕು. ನಡೆಯುವ ಹಾದಿಯಲ್ಲಿ ಭತ್ತದ ಗಿಡಗಳು ನೆಲಕಚ್ಚಿವೆ. ಮೊಳಕೆ ಬಂದ ಭತ್ತದ ಕಾಳುಗಳನ್ನು ತಿನ್ನುತ್ತಿರುವ ಹಕ್ಕಿಗಳು, ಅವರ ನಡಿಗೆಯ ಸದ್ದು ಕೇಳಿ ಪುರ್ರನೆ ಹಾರಿ ಹೋದವು.

ಭತ್ತವನ್ನು ಬಿತ್ತನೆ ಮಾಡುವ ಮುನ್ನ ಬೀಜವನ್ನು ಆರೈಕೆ ಮಾಡುವುದು ಎಷ್ಟೊಂದು ಶ್ರದ್ಧೆಯ ಕೆಲಸ. ಬಲಿತ ಬೀಜವನ್ನು ಆಯ್ಕೆ ಮಾಡಿ, ನೀರಲ್ಲಿ ನೆನೆಯಿಟ್ಟು, ಸೆಗಣಿಯನ್ನು ಪೂಸಿ ಆರೈಕೆ ಮಾಡಿ ಮುಚ್ಚಿಡುತ್ತಿದ್ದರು. ಅದರ ಸುತ್ತ ಅಮ್ಮ ರಂಗೋಲಿ ಹಾಕಿ, ದೀಪಗಳೆರಡನ್ನು ಬೆಳಗಿದ ಬಳಿಕ ಮನೆಯವರೆಲ್ಲರೂ ಬೀಜದ ರಾಶಿಗೆ ಅಡ್ಡಬಿದ್ದು ನಮಸ್ಕಾರ ಮಾಡುತ್ತಿದ್ದರು. ಇಷ್ಟೊಂದು ಭಕ್ತಿಯ ಆರೈಕೆ ಮಾಡುವ ವಾಡಿಕೆ ಈಗಿಲ್ಲವಾದರೂ ಬೀಜವನ್ನು ಆರೈಕೆ ಮಾಡಿದ ಬಳಿಕವೇ ಬಿತ್ತನೆಗೆ ಹೊರಡುತ್ತಿದ್ದರು. ಈಗ ನೋಡಿದರೆ, ಹೊಲದಲ್ಲಿ ನೆಲಕಚ್ಚಿದ ಭತ್ತದ ಕೊಳೆತ ಗಿಡಗಳ ನಡುವೆಯೇ ಊದ್ದುದ್ದನೆಯ ಮೊಳಕೆಗಳು, ಪೂಜೆಯೂ ಇಲ್ಲದೆ ಪ್ರೀತಿಯೂ ಇಲ್ಲದೆ ಹಕ್ಕಿಗಳಿಗೆ ಆಹಾರ ರೂಪದಲ್ಲಿ ಗೋಚರಿಸುತ್ತಿವೆ. ಬೆಳ್ಳನೆಯ ಮೊಳಕೆಯು ತನ್ನ ಹೊಟ್ಟೆಯನ್ನೇ ಇರಿಯುತ್ತಿರುವಂತೆ ನೋವಾಗಿ ಧನಂಜಯ್ ಬೀಸ ಬೀಸ ಹೆಜ್ಜೆ ಹಾಕಲಾರಂಭಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊನ್ನಾವರದಲ್ಲಿಯೇ ಅತೀ ಹೆಚ್ಚು 653 ಹೆಕ್ಟೇರ್ ವ್ಯಾಪ್ತಿಯ ಭತ್ತ ಹಾನಿಯಾಗಿರುವುದನ್ನು ಟೀವಿಯಲ್ಲಿ ಹೇಳುತ್ತಿದ್ದರು. ಯಾವ ಜಿಲ್ಲೆಯಲ್ಲಿ ಎಷ್ಟು ವ್ಯಾಪ್ತಿಯಲ್ಲಿ ಬೆಳೆಗಳು ನಾಶಗೊಂಡಿವೆ ಎಂಬ ಲೆಕ್ಕಾಚಾರ ಪಕ್ಕಕ್ಕಿರಲಿ. ಸುಂದರವಾಗಿ ಇಂಟೀರಿಯರ್ ಡೆಕೋರೇಟ್ ಮಾಡಿಸಿ, ಹೊಳಪೇರಿದ ಅಡುಗೆ ಮನೆಯಲ್ಲಿ ಆಕರ್ಷಕ ಡಬ್ಬಿಗಳಲ್ಲಿ ತುಂಬಿಡುವ ಎಲ್ಲ ದಿನಸಿ ಬೆಳೆಗಳು ಮಳೆಯ ಹೊಡೆತಕ್ಕೆ ನೆಲಕಚ್ಚಿ ಹೋಗಿವೆ. ಈ ಹಿಂದೆ ವ್ಯವಸ್ಥೆಯ ಹೊಡೆತಕ್ಕೆ ನಲುಗಿದ್ದ ಕೃಷಿಕರು, ಸುಧಾರಿಸಿಕೊಳ್ಳಬೇಕು, ಸರೀಕರ ಮುಂದೆ ತಲೆಯೆತ್ತಿ ನಿಲ್ಲಬೇಕು ಎಂದು ಪ್ರಯತ್ನಿಸುತ್ತಿದ್ದರು. ಈಗ ನೋಡಿದರೆ, ಈ ಅಕಾಲಿಕ ಮಳೆಯ ಹೊಡೆತಕ್ಕೆ ಪೂರಾ ತತ್ತರಿಸಿದ್ದಾರೆ.

ಕೃಷಿಯನ್ನು ನಂಬಿದವರು ಆರ್ಥಿಕತೆಯನ್ನು ಕೇಂದ್ರೀಕರಿಸಿದ ಸಮಾಜದಲ್ಲಿ ಹೇಗೆ ಬಡವರಾಗಿಬಿಡುತ್ತಾರೆ ಎಂಬುದನ್ನು ಹಿರಿಯ ಲೇಖಕ ಅಮರೇಶ ನುಗಡೋಣಿ ಅವರು ಇತ್ತೀಚಿನ ತಮ್ಮ ‘ಗೌರಿಯರು’ ಕಾದಂಬರಿಯಲ್ಲಿ ಚಿತ್ರಿಸಿದ್ದು ನೆನಪಾಗುತ್ತಿದೆ. ಕಥಾನಾಯಕನ ತಮ್ಮ ‘ಶಿವಲಿಂಗಪ್ಪ’ ಹೇಳುತ್ತಾನೆ. ‘ಗದ್ದೆಯಲ್ಲಿ ಭತ್ತ ಬೆಳಿಲಿಕ್ಕೆ ಈಗ ಖರ್ಚು ಭಾಳ ಮಾಡ್ಬೇಕಾಗ್ತದಣ್ಣ. ಭತ್ತದ ರಾಶಿಯಾದ ವ್ಯಾಳ್ಯಾಕ್ಕೆ ರೇಟೇ ಇರದಿಲ್ಲ. ಬ್ಯಾಂಕ್ ಸಾಲ ಬೆಳೆಗೆ ಸಾಕಾಗದಿಲ್ಲ. ಖಾಸಗಿ ಸಾಲ ತಂದಿರ್ತಿವಲ್ಲ, ಅವರ ತಗಾದಿ ಜಾಸ್ತಿಯಾಗಿ, ಭತ್ತ ಮಾರಿದ್ರೆ, ಒಂದು ವರ್ಷ ಅದರದು, ಅದಕ್ಕ ಸರಿ ಹೋಗ್ತದ. ವರ್ಷ ಸಾಲ ಮ್ಯಾಲೆ ಬೀಳ್ತದ. ಇದರಿಂದ ಒಕ್ಕಲುತನ ಬ್ಯಾಡನಿಸ್ತದ’’ ಎನ್ನುವ ಶಿವಲಿಂಗಪ್ಪನಿಗೆ ಕೃಷಿ ಎನ್ನುವುದು ಉಸಿರಿನಷ್ಟು ಪ್ರೀತಿಯ ವಿಷಯ.

ಶಾಲೆಗೆ ಹೋಗುತ್ತಿದ್ದ ಹುಡುಗ, ಈ ಕೃಷಿ ಮೇಲಿನ ಪ್ರೀತಿಯಿಂದ ಕ್ಲಾಸು ತಪ್ಪಿಸಿ ಗದ್ದೆ ಕೆಲಸ ಮಾಡುತ್ತಿದ್ದವ. ಮಣ್ಣಿಂದ ಮೊಳಕೆಯೊಡೆದು, ಜೀವವೊಂದು ಉದಿಸುವುದನ್ನು ಕಣ್ತುಂಬ ಕಾಣುವುದಕ್ಕೆ ಅವಕಾಶ ಸಿಗುವ ಈ ಬೇಸಾಯ ಅವನ ರಕ್ತದ ಗುಣವೇನೋ ಎಂಬಷ್ಟು ಹಚ್ಚಿಕೊಂಡಿದ್ದ. ಆದರೆ ಕೃಷಿಪ್ರೀತಿಗೆ ಸುತ್ತಲಿನ ಪರಿಸ್ಥಿತಿ ಪೂರಕವಾಗಿರಲಿಲ್ಲ. ಬದುಕಿನಲ್ಲಿ ಸೋತೆ ಎಂಬ ಭಾವದಿಂದ ಅವನು ಪ್ರೀತಿಯ ಅಣ್ಣ ಸದಾಶಿವಪ್ಪನೊಡನೆ ತನ್ನ ಪಡಿಪಾಡಲು ಹೇಳಿಕೊಳ್ಳುತ್ತಾನೆ.

“ಜೀವನದಲ್ಲಿ ಯಾವುದು ನಿಮ್ಮ ಆಸಕ್ತಿಯ ಕ್ಷೇತ್ರವೋ, ಅದರಲ್ಲಿಯೇ ನಿಮ್ಮ ಕೆರಿಯರ್ ಮುಂದುವರೆಸಿ’’ ಎಂಬುದಾಗಿ ಪರ್ಸನಾಲಿಟಿ ಡೆವಲಪ್ ಮೆಂಟ್ ಶಿಬಿರಗಳಲ್ಲಿ ಹೇಳುವ ಮಾತುಗಳು ಬಹುಶಃ ಕೃಷಿಗೆ ಅನ್ವಯವಾಗುವುದಿಲ್ಲವೆನಿಸುತ್ತದೆ.
‘ಅನ್ವಯವಾಗುವುದಿಲ್ಲ’ ಎನ್ನುವುದನ್ನು ಶಿವಲಿಂಗಪ್ಪನ ಮಾತುಗಳೇ ಪ್ರತಿಧ್ವನಿಸುತ್ತವೆ: ‘ಈ ವರ್ಷ ಮ್ಯಾಗಡೆ ಮಳೆ ಜಾಸ್ತಿ ಆಗ್ಯಾದ. ಡ್ಯಾಮಿಗೆ ಹೆಚ್ಚೇ ನೀರು ಬಂದವು. ಆದ್ರೇನು, ಕಾಲುವೆಗೆ ಬಂದಾಗ ಗ್ಯಾರಂಟಿ. ಹತ್ತು ವರ್ಸದ ಳಗ ಐದಾರು ಬೆಳೆಗಳು ಬೆಳೆದದ್ದು ಒಂದೊಂದೇ ಬೆಳೆ. ಮಳಿಗಾಲದ ಬೆಳೆ ಖಾತ್ರಿ. ಬೇಸಿಗೆ ಬೆಳೆನೇ ಇರ್ಲಿಲ್ಲ. ಹಂಗ ನೋಡಿದ್ರ ರೈತರು ಒಂದೇ ಬೆಳೆ ಬೆಳಕಂಡು ಮನ್ಯಾಗ ಕುಂದ್ರದು ಬೇಶ್’.

ಕರ್ಕಿಯ ಸಮೀಪವಿರುವ ತಮ್ಮ ಮನೆಯಿಂದ ಅವರು ಪೇಟೆಗೆ ಬರಲು ತುಸು ನಡೆಯಬೇಕು. ನಡೆಯುವ ಹಾದಿಯಲ್ಲಿ ಭತ್ತದ ಗಿಡಗಳು ನೆಲಕಚ್ಚಿವೆ. ಮೊಳಕೆ ಬಂದ ಭತ್ತದ ಕಾಳುಗಳನ್ನು ತಿನ್ನುತ್ತಿರುವ ಹಕ್ಕಿಗಳು, ಅವರ ನಡಿಗೆಯ ಸದ್ದು ಕೇಳಿ ಪುರ್ರನೆ ಹಾರಿ ಹೋದವು.

ಮಳೆಯಿದ್ದರೆ ಒಂದು ಕತೆ, ಮಳೆಯಿಲ್ಲದಿದ್ದರೆ ಮತ್ತೊಂದು ಕತೆ. ಈ ಸಮತೋಲವನ್ನು ಕಾಯ್ದುಕೊಳ್ಳಲು ಹೋರಾಡುತ್ತಿರುವಾಗ, ಅತ್ತ ಬದುಕಿನ ಸೋಲು ಗೆಲುವನ್ನು ನಿರ್ಧರಿಸುವ ‘ಹಣ’ವೆಂಬ ಲೋಕದೊಡನೆ ನಡೆಸಬೇಕಾದ ಗುದ್ದಾಟವೂ ಅನಿವಾರ್ಯ. ಈ ಎಲ್ಲವನ್ನೂ ಕತೆಯೊಳಗೆ ಹಿಡಿದಿಡಲು ಪ್ರಯತ್ನಿಸುವ ‘ಗೌರಿಯರು’ ಕಾದಂಬರಿಯಲ್ಲಿ ಶಿವಲೀಲಾ, ಅಕ್ಕಮ್ಮ ಮತ್ತು ಶ್ರೀದೇವಿ ಮೂವರು ಹೆಣ್ಣುಮಕ್ಕಳೇ ಕಥಾನಾಯಕಿಯರಂತೆ ಮೊದಲ ಓದಿಗೆ ಕಾಣಿಸುತ್ತಾರೆ. ಆದರೆ ಈ ಮೂವರ ಬದುಕಿನ ಬೇರುಗಳು ಕೃಷಿಯಿಂದಲೇ ಹೊರಟವು. ಎಲ್ಲರ ಬದುಕಿನ ತಾಯಿ ಬೇರೂ ಭೂಮಿತಾಯಮ್ಮನೇ ಆಗಿದ್ದಾಳೆ ಅಲ್ಲಿ. ಶಿವಲಿಂಗಪ್ಪ ತನ್ನ ಪಾಲಿಗೆ ಬಂದ ಬದುಕನ್ನು ಎದುರಿಸಲು ನಿರ್ಧರಿಸಿದರೆ, ಕಷ್ಟಗಳನ್ನು ಎದುರಿಸಲಾರದೇ ಬದುಕನ್ನು ಮುಗಿಸಿಕೊಂಡ ಪಾತ್ರಗಳೂ ಕಾದಂಬರಿಯಲ್ಲಿ ಬರುತ್ತವೆ.

ಇದೇ ರೀತಿಯಲ್ಲಿ ಕೃಷಿ ಕಾಯಕ ಕ್ಷೇತ್ರವೂ ಆಧುನಿಕ ಅರ್ಥಶಾಸ್ತ್ರವೂ ಮುಖಾಮುಖಿಯಾಗುವ ಕತೆಗಳನ್ನು ಕತೆಗಾರ ಮಹಾಂತೇಶ್ ನವಲಕಲ್ ಬರೆದಿದ್ದಾರೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯೆಂಬ ಮಾಯಾ ಲೋಕದಲ್ಲಿ ನಡೆಯುವ ಹಣದ ಲೆಕ್ಕಾಚಾರಗಳು ಮತ್ತು ಅದೇ ಹಣವನ್ನು ಕೇಂದ್ರಬಿಂದುವನ್ನಾಗಿಸಿಕೊಂಡು ‘ಕೃಷಿಕರ ಉದ್ಧಾರಕ್ಕಾಗಿ’ ಎಂಬ ಶೀರ್ಷಿಕೆಯೊಡನೆ ಕಾರ್ಯರೂಪಕ್ಕೆ ಬರುವ ಯೋಜನೆಗಳ ವಾಸ್ತವ ಮುಖವನ್ನು ಸೆರೆಹಿಡಿಯುವ ಕತೆಗಳು ಅವರನ್ನು ಸದಾ ಕಾಡಿವೆ.

ಅವರು ಬರೆದಿರುವ ‘ಭವ ಬೀಜದ ಹಿಂದೆ’ ಕತೆಯಲ್ಲಿ ಕಥಾನಾಯಕ ಅಮರೇಶ್ ಗೆ ರಾತ್ರಿ ಬೀಳುವ ಕನಸುಗಳ ದೆಸೆಯಿಂದ ನೆಮ್ಮದಿಯ ನಿದ್ದೆ ಸಾಧ್ಯವಾಗುವುದಿಲ್ಲ. ಆರಂಭದಲ್ಲಿ ಇದನ್ನೊಂದು ಸಮಸ್ಯೆಯೆಂದು ಭಾವಿಸದೇ ಇದ್ದರೂ, ದಿನಕಳೆದಂತೆ ಅದು ಬಿಗಡಾಯಿಸುತ್ತಲೇ ಹೋಗುತ್ತದೆ. ಪತ್ನಿಯ ಒತ್ತಾಯಕ್ಕೆ ಮನಶ್ಯಾಸ್ತ್ರಜ್ಞರನ್ನು ಭೇಟಿಯಾಗುವ ಸಂದರ್ಭದಲ್ಲಿ ಕಥಾನಾಯಕ ವೈದ್ಯರೊಡನೆ ತನ್ನ ಹಿನ್ನೆಲೆಯನ್ನು ಹೇಳಿಕೊಳ್ಳುವುದು ಹೀಗೆ: ‘ನಮ್ಮ ತಾತನಿಗೆ ಬೀಜವನ್ನು ರಕ್ಷಿಸುವ, ಇಂತಹ ಅಮೂಲ್ಯವಾದ ಸಂಪತ್ತನ್ನು ಮುಂದಿನ ಕಾಲ ಘಟ್ಟದವರೆಗೆ ಕೊಂಡೊಯ್ಯುವ ಸಮರ್ಥ ವ್ಯಕ್ತಿ- ನಮ್ಮ ತಂದೆಯಲ್ಲಿ ಕಾಣಲಿಲ್ಲ ಸರ್. ತಂದೆಯವರು ಸ್ವಲ್ಪ ಅಶಿಸ್ತು ಮತ್ತು ಕುಡಿತವನ್ನು ಅವಲಂಬಿಸಿರುವ ವ್ಯಕ್ತಿ ಎಂದು, ನಾನು ಪಿಯುಸಿಯಲ್ಲಿ ಚೆನ್ನಾಗಿ ಮಾರ್ಕ್ ತೆಗೆದುಕೊಂಡರೂ, ಎಂಬಿಬಿಎಸ್ ಸೀಟು ದೊರಕಿದರೂ, ನನ್ನ ತಾತ ನನಗೆ ಕೃಷಿ ಓದಿಸಿದರು ಸಾರ್. ಮುಂದೆ ನಾನು ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನಿಯಾಗಿ ಸ್ವಲ್ಪ ದಿನಗಳ ಕಾಲ ಆ ಬೀಜದ ಬ್ಯಾಂಕಿನ ಜವಾಬ್ದಾರಿಯನ್ನು ನೋಡಿಕೊಂಡೆ. ಅಷ್ಟರಲ್ಲಿ ಅಜ್ಜ ತೀರಿಕೊಂಡರು. ಅದನ್ನು ನಿಭಾಯಿಸಲು ನನ್ನಿಂದ ಆಗದೆ, ಒಂದು ಎನ್‌ಜಿಓಗೆ ಹ್ಯಾಂಡ್ ಓವರ್ ಮಾಡಿದೆ . ಆ ಮೇಲೆ ಕೃಷಿ ವಿ.ವಿ. ನೌಕರಿಯನ್ನು ತ್ಯಜಿಸಿ, ಅಮೇರಿಕಾಕ್ಕೆ ಬಂದೆ ಸರ್, ಇದು ನನ್ನ ರೂಟ್ ಮ್ಯಾಪ್ʼ.

ಮೊಮ್ಮಗ ಬೀಜವನ್ನು ಸಂರಕ್ಷಿಸಿ, ಜಗತ್ತಿನ ಮುಂದಿನ ತಲೆಮಾರಿಗೆ ಅನ್ನಕೊಡುವವನಾಗಲಿ ಎಂಬುದು ಅಜ್ಜನ ಆಶಯವಾಗಿತ್ತು. ಆದರೆ ಅಂತಹ ಆಶಯವನ್ನು ಸಾಕಾರ ಮಾಡಲು ಹೊರಟ ಅಮರೇಶ್ ಗೆ ಒಳ್ಳೆಯದೊಂದು ಪ್ರಾಜೆಕ್ಟ್ ನ ನೇತೃತ್ವ ವಹಿಸುವ ಅವಕಾಶ ಸಿಗುತ್ತದೆ. ಅದು ಬೀಜದಲ್ಲಿರುವ ಅಂಡಾಶಯವನ್ನು ನಾಶ ಮಾಡಿ, ಅದು ಎರಡನೇ ಬೆಳೆಗೆ ಬಾರದಂತೆ ಮಾಡಿ, ಬೀಜವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು. ಅವನಿಗೆ ಪ್ರಾಜೆಕ್ಟ್ ವಹಿಸಿದ ಸೀನಿಯರ್ ಹೇಳುವ ಮಾತುಗಳಿವು: ರೈತನಿಗೆ ನಾವು ತಯ್ಯಾರಿಸಿದ ಬೀಜ ಒಂದೆ ಸಲ ಉಪಯೋಗಕ್ಕೆ ಬರುವದು. ಮರು ಬಿತ್ತಿ ಬೆಳೆಯಲು ಅವಕಾಶವಿಲ್ಲ. ಆದ್ದರಿಂದ ಹೊಸದಾಗಿ ಆತ ಉತ್ತಿ ಬಿತ್ತಿ ಬೆಳೆಯಬೇಕಾದರೆ ಮತ್ತೆ ನಾವು ತಯ್ಯಾರಿಸಿದ ಹೊಸ ಬೀಜವನ್ನೆ ಆಶ್ರಯಿಸಬೇಕು. ಅದು ಅಲ್ಲದೆ ಈ ಬೀಜ ತಾನು ಹಿಂದೆ ಬೆಳೆಯುತ್ತಿದ್ದ ಬೀಜಕ್ಕಿಂತಲೂ ಐದು ಪಟ್ಟು ಇಳುವರಿ ಕೊಡುವುದರಿಂದ ರೈತರು ತಮ್ಮ ಸಾಂಪ್ರದಾಯಿಕ ಬೀಜಗಳನ್ನು ಬಿಟ್ಟು ಇವುಗಳ ಮೇಲೆ ಅವಲಂಬಿಸುತ್ತಾರೆ. ಸಾಂಪ್ರದಾಯಿಕ ಬೀಜಗಳು ಉಪಯೋಗವಿಲ್ಲದೆ ಕ್ರಮೇಣ ನಾಶವಾಗುತ್ತವೆ…’

ಹೌದು.
ಹೆಚ್ಚು ಹೆಚ್ಚು ಬೆಳೆಯುವುದು ಎಷ್ಟೊಂದು ಅನಿವಾರ್ಯವಾಗಿದೆ ಇಂದು! ‘ಹೀಗೇಕೆ’ ಎಂಬುದಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆಯನ್ನು ಯಾವುದೇ ದಿಕ್ಕಿನಿಂದ ಶುರು ಮಾಡಿದರೂ, ಅದು ಕೊನೆಯದಾಗಿ ನಮ್ಮ ಅಂತರಂಗದ ವಿಚಾರಗಳಿಗೇ ಬಂದು ನಿಲ್ಲುತ್ತದೆ. ಬದುಕಿನ ಮೌಲ್ಯಮಾಪನಕ್ಕೆ ಹಣವೇ ತೂಕದ ಕಲ್ಲಾಗಿರುವ ವ್ಯವಸ್ಥೆ ನಿರ್ಮಾಣವಾದ ಮೇಲೆ ರೈತನು ಹೆಚ್ಚು ಬೆಳೆಯದೇ ಮತ್ತೇನು ಮಾಡಬಹುದು?

ಅವರದ್ದೇ ಮತ್ತೊಂದು ಕತೆ ‘ಬುದ್ಧಗಂಟೆಯ ಸದ್ದು’ ಕೂಡ ಇಂತಹುದೇ ತಳಮಳವನ್ನು ಹೆಣೆದುಕೊಂಡಿದೆ. ಕಥಾನಾಯಕನ ಸ್ವಗತವೊಂದು ಹೀಗಿದೆ: ‘ಅಲ್ಲಿ ಬ್ಯಾಂಕಾಕಿನಲ್ಲಿ ಶಾಂತಿದೇವನ ಮುಂದೆ ಮಂಡಿಯೂರಿ ಪ್ರಾರ್ಥಿಸುವಾಗ ಏನೇನು ಬೇಡಿಕೊಂಡೆ. ನನಗೆ ಒಳ್ಳೆಯ ವ್ಯಾಪಾರವಾಗಲಿ ಎಂದೇ? ವ್ಯಾಪಾರ ಎಂದರೆ ಯಾವುದು? ಇನ್ನೂ ಈ ರೈತರನ್ನು ಸಾಯಿಸುವ ಕ್ರಿಮಿನಾಶಕಗಳು ಹೆಚ್ಚು ಮಾರಾಟವಾಗಬೇಕು ಎಂದು ಅಲ್ಲದೆ ಮತ್ತೇನು? ಬುದ್ಧನ ಮುಂದೆ ಬೇಡಿಕೊಳ್ಳಲೂ ಅಲ್ಲ, ಕುಳಿತುಕೊಳ್ಳಲೂ ಹಕ್ಕಿಲ್ಲ ತನಗೆ ಎಂದುಕೊಂಡ’.

ಮಹಾಂತೇಶ್ ಬರೆದ ‘ಭಾರತ ಭಾಗ್ಯ ವಿಧಾತಾ’ ಕತೆಯಲ್ಲಿಯೂ ಹೀಗೆಯೇ, ರೈತನ ಮಗನೊಬ್ಬನ ಅಂತರಂಗದಲ್ಲಿ ಅಡಗಿದ ಗಾಯವೊಂದು ಹಸಿಹಸಿಯಾಗಿಯೇ ಗೋಚರಿಸುತ್ತದೆ.

ಕಳೆದೊಂದು ತಿಂಗಳಿನಿಂದ, ಪದೇ ಪದೇ ಘೋರವಾಗಿ ಸುರಿಯುತ್ತಾ ಬೆಳೆಗಳನ್ನೆ ನುಂಗುತ್ತಿರುವ ಮಳೆಯೊಂದು ಕಡೆ, ಬಿಸಿಯೇರುತ್ತಿರುವ ಭೂಮಿಯನ್ನು ತಂಪು ಮಾಡಬೇಕು ಎಂದು ಪಣತೊಟ್ಟು ಪ್ರತೀವರ್ಷದಂತೆ ಈ ವರ್ಷ ಲಂಡನ್ ನ ಗ್ಲಾಸ್ಗೋದಲ್ಲಿ ಸಭೆ ಸೇರಿ ಜಾಗತಿಕ ಹವಾಮಾನ ಬದಲಾವಣೆ ಕುರಿತು ಚರ್ಚಿಸುತ್ತಿರುವ ವಿಜ್ಞಾನಿಗಳೊಂದು ಕಡೆ, ಬೆಳೆದ ಬೆಳೆಯನ್ನು ಎಲ್ಲಿ ಮಾರೋಣ, ಕೈಗೆಷ್ಟು ಕಾಸು ಬಂದೀತು ಎಂದು ದಿಕ್ಕುಗಾಣದೇ ಇರುವ ರೈತರು ಇನ್ನೊಂದು ಕಡೆ, ಕಾಯ್ದೆಗಳು ರೈತರಿಗೆ ಪೂರಕವಾಗಿ ಇರಬೇಕೆಂದು ಬೆಂಬಲಕ್ಕೆ ನಿಂತಿರುವವರು ಮಗದೊಂದು ಕಡೆ… ಆಹಾರದ ಬಟ್ಟಲಿನ ಸುತ್ತ ಎಷ್ಟೆಲ್ಲ ಘಟನೆಗಳು ನಡೆಯುತ್ತಿವೆ ಎಂದು ಗಮನಿಸಿ, ಹೊನ್ನಾವರದ ಧನಂಜಯ್ ನಾಯಕರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದೇ ಗೊತ್ತಾಗದಾಗಿದೆ.

ನಿಜಕ್ಕೂ ಇಷ್ಟೆಲ್ಲ ಗದ್ದಲದ ನಡುವೆ ಏನಾದರೂ ಮಾತು ಹೇಗೆ ಕೇಳಿಸಬೇಕು ನೀವೇಹೇಳಿ.